ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಆರೋಗ್ಯಕ್ಕೆ ನಲವತ್ತು ಗುಳಿಗೆಗಳು

By Staff
|
Google Oneindia Kannada News

ವಿ-ಅಂಚೆ ಎಂಬ ಸಂವಹನ ಮಾಧ್ಯಮ ಹುಟ್ಟುವ ಮುನ್ನ ಜನಗಳು ಹೇಗೆ ಕಾಲಕಳೆಯುತ್ತಿದ್ದರೋ, ಆ ದೇವರೇ ಬಲ್ಲ. ನಮಗೆ ಗೊತ್ತಿರುವ ಜನರಿಂದ ಹಲವು ಈ-ಮೆಯಿಲುಗಳು ಬಂದರೆ, ನಮಗೆ ಗೊತ್ತಿಲ್ಲದ ಜನರಿಂದ (ಸಂಘ-ಸಂಸ್ಥೆಗಳಿಂದ) ಹತ್ತಾರು ಅಂಚೆಗಳು ಬಂದು ನಮ್ಮ ಟಪ್ಪಾಲು ಪೆಟ್ಟಿಗೆಯನ್ನು ತುಂಬುತ್ತವೆ. ಅವುಗಳನ್ನು ತೆರೆದು ಓದಿ ಅಥವಾ ಓದದೇ ಕಸದಬುಟ್ಟಿಗೆ ಕಳುಹಿಸುವ ಕೆಲಸ ನಮ್ಮ ನಿತ್ಯಕರ್ಮಗಳಲ್ಲಿ ಒಂದಾಗಿಹೋಗಿದೆ. ದೈವಭಕ್ತರು, ದೇಶಭಕ್ತರು, ವ್ಯಾಪಾರಿಗಳು, ಹೀಗೆ ನಾನಾ ಗುಂಪುಗಳಿಂದ ಪತ್ರಗಳು ಬರುತ್ತಲೇ ಇರುತ್ತವೆ.

ಡಾ.ಮೈ.ಶ್ರೀ.ನಟರಾಜ, ಮೇರೀಲ್ಯಾಂಡ್

ನಮಗೆ ವಯಾಗ್ರಾದ ಅಗತ್ಯ ಇದೆ ಎಂದು ಅವರಿಗೆ ಯಾರು ತಿಳಿಸುತ್ತಾರೋ, ಅಂತೂ ವಯಾಗ್ರಾ ಮಾರಾಟಗಾರರಿಂದ ದಿನಕ್ಕೊಂದಾದರೂ ಪತ್ರ ಬಂದೇ ಬರುತ್ತದೆ. ಇನ್ನು ಕೆಲವು ಅದ್ಯಾವುದೋ ಆಫ್ರಿಕಾದಂಥಾ ಕಗ್ಗತ್ತಲೆಯ ಖಂಡದ ಒಂದಾನೊಂದು ದೇಶದಿಂದಲೋ, ಅಥವಾ ಇಂಗ್ಲೆಂಡ್ ಮುಂತಾದ ಮುಂದುವರೆದ ದೇಶಗಳಿಂದಲೋ ಅತ್ಯಂತ ಆತ್ಮೀಯವಾದ ಅಂಚೆ ಬರುತ್ತದೆ. ಒಬ್ಬಾನೊಬ್ಬ ಅದೃಷ್ಟವಂತ ಬರೆಯುತ್ತಾನೆ . "ಇದೋ ನನ್ನ ಅಜ್ಜ (ಅಥವಾ ದೂರದ ಮಾವನೋ ಚಿಕ್ಕಪ್ಪನೋ ಇರಬಹುದು) ಇದೇ ಸತ್ತು ತನ್ನ ಮಿಲಿಯಗಟ್ಟಲೆ ಪೌಂಡು (ಅಥವಾ ರಿಯಾಲು ಅಥವಾ ದಿನಾರು) ಗಳನ್ನು ಬಿಟ್ಟು ಹೋಗಿದ್ದಾನೆ. ಅವೆಲ್ಲಾ ನನಗೇ ಸೇರುತ್ತವೆ. ಆದರೆ ಒಂದು ಸಣ್ಣ ತೊಂದರೆ ಏನೆಂದರೆ, ಆ ಹಣವನ್ನು ಅಷ್ಟು ಸುಲಭವಾಗಿ ಬ್ಯಾಂಕಿನಲ್ಲಿ ಕ್ಯಾಶ್ ಮಾಡಿಸುವುದು ಸಾಧ್ಯವಿಲ್ಲವಾಗಿದೆ.

ಅದಕ್ಕೆ ನಿಮ್ಮಿಂದ ಒಂದು ಸಣ್ಣ ಉಪಕಾರವಾಗಬೇಕಿದೆ. ದಯವಿಟ್ಟು ನಿಮ್ಮ ಬ್ಯಾಂಕಿನ ಅಕೌಂಟ್ ನಂಬರನ್ನು ಕೂಡಲೇ ಕಳಿಸಿದರೆ ನನ್ನ ಆಸ್ತಿಯನ್ನು ಕ್ಯಾಶ್ ಮಾಡಿಸ್ಕೊಳ್ಳುತ್ತೇನೆ. ನಿಮ್ಮ ಔದಾರ್ಯಕ್ಕೆ ಪ್ರತಿಫಲವಾಗಿ ನಿಮಗೂ ಶೇಖಡಾ ಹತ್ತಿಪ್ಪತ್ತು ಭಾಗ ಇನಾಮು ಕೊಡುತ್ತೇನೆ," ಇತ್ಯಾದಿ, ಇತ್ಯಾದಿ. ಬಲೆಗೆ ಸುಲಭವಾಗಿ ಬೀಳಬಹುದಾದ ಬಕ್ರಾಗಳನ್ನು ಹುಡುಕುತ್ತಾ ಅವ ಬರೆಯುತ್ತಾನೆ. ಇಂಥಾ ಆಮಿಷ ತೋರಿಸುವ ಈ-ಮೆಯಿಲುಗಳನ್ನು ಓದದವರಾರು? ಬಲೆಗೆ ಎಷ್ಟು ಜನ ಬೀಳಬಹುದೋ ಬಲ್ಲವರಾರು?

ಇನ್ನೊಂದು ವರ್ಗದ ಈ ಮೆಯಿಲುಗಳು ಬರುತ್ತವೆ. ಅವುಗಳಲ್ಲಿ ಹಲವರು ದೇವರ ದಿಂಡರ ಮಹಿಮೆಯಬಗ್ಗೆ ಬರೆದರೆ, ಇನ್ನು ಕೆಲವರು ಬಾಬಾಗಳ, ಸ್ವಾಮಿಗಳ ಸಂದೇಶವನ್ನು ಮುಟ್ಟಿಸುತ್ತಾರೆ. ಇದನ್ನು ಓದಿ ಏಳು ಜನರಿಗೆ ಕಳಿಸಿದರೆ ಏಳು ದಿನಗಳಲ್ಲಿ ಏಳು ಕೊಪ್ಪರಿಗೆ ಹಣ ಎಂದೆಲ್ಲ ಆಸೆ ತೋರಿಸುತ್ತಾರೆ. ಹಾಗೆ ಧನವಂತರಾದ ಭಕ್ತರ ಹೆಸರು ವಿಳಾಸಗಳನ್ನೂ ಕೊಟ್ಟು ತಮ್ಮ ಸಂದೇಶವನ್ನು ಸುಲಭವಾಗಿ ತಳ್ಳಿಹಾಕದಂತೆ ಎಚ್ಚರಿಕೆವಹಿಸುತ್ತಾರೆ. ಇನ್ನು ಕೆಲವರು ಕನಿಷ್ಠಪಕ್ಷ ಏಳುಜನರಿಗೆ ಕಳಿಸದಿದ್ದರೆ ಏಳೇ ದಿನಗಳಲ್ಲಿ ತಲೆ ಸಹಸ್ರ ಹೋಳು ಎಂತಲೋ ಏಳು ಹೆಡೆ ಸರ್ಪ ಕಚ್ಚುತ್ತದೆ ಎಂತಲೋ ಹೆದರಿಸುತ್ತಾರೆ.

ಇಂಥಾ ಈ-ಮೆಯಿಲುಗಳ ಮಧ್ಯೆ ಆಗಿಂದಾಗ್ಗೆ ಕೆಲವು ಅರ್ಥಪೂರ್ಣವಾದ ಸುತ್ತೋಲೆಗಳೂ ಬಂದು ಮುಟ್ಟುತ್ತವೆ. ಹಾಗೆ ಉತ್ತಮವಾದ, ಉಪಯುಕ್ತವಾದ ಸುತ್ತೋಲೆಗಳನ್ನು ನನಗೆ ಕಳುಹಿಸುವವರ ಪೈಕಿ ನಮ್ಮ ಹರಿಸರ್ವೋತ್ತಮ ಅತಿ ಮುಖ್ಯನಾದವನು. ಒಳ್ಳೊಳ್ಳೆ ಚಿತ್ರಗಳನ್ನ, ಕಾರ್ಟೂನುಗಳನ್ನ, ಜೋಕುಗಳನ್ನ, ಮತ್ತು ಉಪಯುಕ್ತವಿಚಾರಗಳನ್ನೊಳಗೊಂಡ ಲೇಖನಗಳನ್ನ ಕಳಿಸುತ್ತಲೇ ಇರುತ್ತಾನೆ. ಹಾಗೆ ಇತ್ತೀಚೆಗೆ ಬಂದ ಒಂದು ಸುತ್ತೋಲೆಯಲ್ಲಿ ನಮ್ಮ ಜೀವನವನ್ನು ಸುಂದರವನ್ನಾಗಿಸಲು ಸಹಾಯಕವಾಗುವ ನಲವತ್ತು ಆಣಿಮುತ್ತುಗಳ ಒಂದು ಸರಪಳಿಯೂ ಇತ್ತು. ಏಳು ಜನರಿಗೆ ಕಳುಹಿಸುವ ಬದಲು, ಜಾಲದಮೇಲೆ ಹಾಕಿದರೆ ನೂರಾರು ಜನ ಓದಬಹುದಲ್ಲ ಎಂದು ಚಿಂತಿಸಿ ಜಾಲತರಂಗದಓದುಗರಮುಂದೆ ಒಡ್ಡಿದ್ದೇನೆ.

ಈ ಮುಂದೆ ಕೊಟ್ಟಿರುವ ನಲವತ್ತು ಗುಳಿಗೆಗಳನ್ನು ದಿನಕ್ಕೊಂದರಂತೆ ನುಂಗಿ ಅರಗಿಸಿಕೊಂಡದ್ದೇ ಆದಲ್ಲಿ, ನಿಮ್ಮ ಜೀವನ ಸುಖಮಯವಾಗುವುದರಲ್ಲಿ ಸಂದೇಹವಿಲ್ಲ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ದಿವ್ಯೌಷಧ ಇಲ್ಲಿದೆ. ಇಂಗ್ಲೀಷಿನಲ್ಲಿದ್ದ ಈ ಆಣಿಮುತ್ತುಗಳನ್ನು ಕನ್ನಡಕ್ಕೆ ಇಳಿಸಿದ್ದಷ್ಟೇ ನನ್ನ ಕಾಣಿಕೆ.

1. ದಿನಕ್ಕೆ ಅರ್ಧ ಘಂಟೆ ನಗುನಗುತ್ತ ಗಾಳಿಸಂಚಾರಮಾಡಿ.
2. ನಿತ್ಯ ಹತ್ತು ನಿಮಿಷ ಮೌನವ್ರತ ಆಚರಿಸಿ.
3. ದಿನಕ್ಕೆ ಕನಿಷ್ಠಪಕ್ಷ ಏಳೆಂಟು ಗಂಟೆ ನಿದ್ರೆ ಮಾಡಿ.
4. ಚಟುವಟಿಕೆ, ಉತ್ಸಾಹ ಮತ್ತು ಸಹಾನುಭೂತಿ ಈ ಮೂರು ಸದಾ ನಿಮ್ಮ ಸಂಗಾತಿಗಳಾಗಿರಲಿ.
5. ಒಂದಿಲ್ಲೊಂದು ಕ್ರೀಡೆಯಲ್ಲಿ ಭಾಗವಹಿಸಿ ತಲ್ಲೀನರಾಗಿ.
6. ಹಿಂದಿನವರ್ಷ ಓದಿದ್ದಕ್ಕಿಂತ ಹೆಚ್ಚು ಪುಸ್ತಗಳನ್ನು ಈ ವರ್ಷ ಓದಿ.
7. ಧ್ಯಾನ, ಯೋಗ ಮತ್ತು ಪೂಜೆ ನಿಮ್ಮ ಪ್ರತಿನಿತ್ಯದ ಕರ್ಮಗಳಾಗಿದ್ದಲ್ಲಿ ನಿಮ್ಮ ಬಿಡುವಿಲ್ಲದ ಬಾಳಿನ ರಥಕ್ಕೆ ಬೇರಿನ್ನಾವ ಇಂಧನವೂ ಬೇಕಿಲ್ಲ.
8. ಎಪ್ಪತ್ತು ಮೀರಿದ ವಯಸ್ಸಾದವರೊಂದಿಗೂ ಆರನೇ ವಯಸ್ಸನ್ನು ದಾಟಿರದ ಪುಟ್ಟ ಬಾಲಕ/ಬಾಲಕಿಯರೊಂದಿಗೂ ಆಗಾಗ್ಗೆ ಒಂದಿಷ್ಟು ಸಮಯ ಕಳೆಯುವುದನ್ನು ಕಲಿಯಿರಿ.
9. ಆಗಾಗ್ಗೆ ಹಗಲುಗನಸು ಕಾಣುವುದನ್ನು ಅಭ್ಯಾಸಮಾಡಿಕೊಳ್ಳಿ.
10. ಕಾರ್ಖಾನೆಯಲ್ಲಿ ತಯಾರಾದ ಆಹಾರಪದಾರ್ಥಗಳನ್ನು ಬಿಟ್ಟು ಗಿಡ-ಮರಗಳಲ್ಲಿ ಬೆಳೆಯುವ ಆಹಾರವನ್ನು ತಿಂದು ಜೀರ್ಣಿಸಿಕೊಳ್ಳಿ.
11. ಪ್ರತಿನಿತ್ಯ ಸಮೃದ್ಧವಾಗಿ ನೀರು ಕುಡಿಯಿರಿ.
12. ಪ್ರತಿದಿನ ಕೊನೇಪಕ್ಷ ಮೂರು ಜನರ ನಗುವಿಗೆ ಕಾರಣರಾಗಿ.
13. ಅವರಿವರ ಬಗ್ಗೆ ವದಂತಿ ಹುಟ್ಟಿಸುವ ಕಾಡುಹರಟೆಯಲ್ಲಿ ನಿಮ್ಮ ಸಮಯವನ್ನು ಹಾಳುಮಾಡಿಕೊಳ್ಳಬೇಡಿ.
14. ಹಿಂದಿನ ಕಹಿ ಸಂಗತಿಗಳನ್ನು ಹಿಂದಕ್ಕೇ ಬಿಟ್ಟುಬಿಡಿ. ನಿಮ್ಮ ಸಂಗಾತಿ ಹಿಂದೆಂದೋ ಮಾಡಿದ ತಪ್ಪನ್ನು ಪುನಃಪುನಃ ಕೆದಕಿ ಚರ್ಚಿಸಬೇಡಿ. "ಭೂತ'ದ ಕಹಿ ನಿಮ್ಮ "ವರ್ತಮಾನ"ವನ್ನು ಹಾಳುಮಾಡೀತು.
15. ನಿಮ್ಮ ವಶದಲ್ಲಿಲ್ಲದ ವಿಷಯಗಳಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಋಣಾತ್ಮಕ ಚಿಂತನೆ ಬಿಟ್ಟು ಧನಾತ್ಮಕ ಚಿಂತನೆ ಮಾಡಿ.
16. ಜೀವನವೆಂಬುದು ಒಂದು ಶಾಲೆ ಇದ್ದಂತೆ. ಶಾಲೆಯಲ್ಲಿ ಗಣಿತದಲ್ಲಿ ಹೇಳಿಕೊಟ್ಟ ಲೆಕ್ಕಗಳೆಲ್ಲ ನಿಮ್ಮ ಜೀವನದಲ್ಲಿ ಉಪಯೋಗಕ್ಕೆ ಬಾರದೇ ಇದ್ದರೂ ಅಲ್ಲಿ ನೀವು ಕಲಿತ ಪಾಠ ಇಡೀ ಜೀವನ ನಿಮ್ಮೊಂದಿಗೇ ಇರುವುದು.
17. ಬೆಳಗಿನ ತಿಂಡಿಯನ್ನು ರಾಜನಂತೆ ತಿನ್ನಿ. ಮಧಾಹ್ನದ ಊಟವನ್ನು ರಾಜಕುಮಾರನಂತೆ ಉಣ್ಣಿ. ರಾತ್ರಿಯ ಊಟವನ್ನು ಭಿಕಾರಿಯಂತೆ (ಮಿತವಾಗಿ) ತಿಂದು ಮಲಗಿ.
18.ಸದಾ ನಗೆಮುಖದಿಂದಿರಿ.
19. ಯಾರನ್ನೂ ದ್ವೇಷಿಸಬೇಡಿ. ದ್ವೇಷಿಸಲು ಬೇಕಾಗುವಷ್ಟು ಸಮಯ ಯಾರ ಜೀವನದಲ್ಲೂ ಇರುವುದಿಲ್ಲ.
20. ನಿಮ್ಮನ್ನು ನೀವೇ ತುಂಬಾ ಗಂಭೀರವಾಗಿ ಕಾಣುವುದನ್ನು ಬಿಟ್ಟುಬಿಡಿ. ಬೇರೇ ಯಾರೂ ನಿಮ್ಮನ್ನು ಅಷ್ಟೊಂದು ಗಂಭೀರವಾಗಿ ಗಣನೆಗೆ ತೆಗೆದುಕೊಂಡಿಲ್ಲ ಎಂಬುದನ್ನು ನೆನಪಿನಲ್ಲಿಟ್ಟರೆ ನಿಮ್ಮ ಕೆಲಸ ಸುಲಭವಾಗುವುದು.
21. ಪ್ರತಿಯೊಂದು ವಾದವನ್ನೂ ನೀವು ಗೆಲ್ಲಲೇಬೇಕೆಂಬ ಹಠ ಬೇಡ. ಭಿನ್ನಾಭಿಪ್ರಾಯವಿದ್ದರೆ ಚಿಂತೆಯಿಲ್ಲ, ಅನೇಕ ಅಭಿಪ್ರಾಯಗಳಿಗೆ ಎಡೆಯಿರಲಿ.
22. ಹಿಂದಿನ ಕಹಿಯೊಂದಿಗೆ ಸಂಧಿಮಾಡಿಕೊಳ್ಳಿ, ಇಂದಿನ ಸಿಹಿಗೆ ದಾರಿಮಾಡಿಕೊಳ್ಳಿ.
23. ನಿಮ್ಮ ಜೀವನವನ್ನು ಇತರರ ಜೀವನದೊಂದಿಗೆ ಹೋಲಿಸಿಕೊಳ್ಳಬೇಡಿ. ಅವರ ಬಾಳಿನ ಸಂದಿಗ್ಧಗಳು ಏನೋ ಎಂತೋ ನಿಮಗೇನುತಾನೇ ಗೊತ್ತು?
24. ನಿಮ್ಮ ಸಂಗಾತಿಯನ್ನು ಇತರರ ಸಂಗಾತಿಗಳಿಗೂ ನಿಮ್ಮ ಮಕ್ಕಳನ್ನು ಇತರರ ಮಕ್ಕಳಿಗೂ ಹೋಲಿಸಲೇಬೇಡಿ. ನಿಮ್ಮದು ನಿಮಗೆ, ಅವರದ್ದು ಅವರಿಗೆ.
25. ನೀವು ಸಂತೋಷವಾಗಿರುವುದು ಬಿಡುವುದು ನಿಮ್ಮ ಕೈಯಲ್ಲೇ ಇದೆ.
26. ನಿಮ್ಮ ವಿರೋಧಿಗಳನ್ನು ಕ್ಷಮಿಸಿಬಿಡಿ.
27. ಇತರರು ನಿಮ್ಮಬಗ್ಗೆ ಏನೆಂದುಕೊಳ್ಳುತ್ತಾರೋ ಅದು ನಿಮ್ಮ ಕೈಯ್ಯಲ್ಲಿಲ್ಲ.
28. ಎಲ್ಲ ಘಾಯಗಳನ್ನೂ ವಾಸಿಮಾಡುವ ಧನ್ವಂತ್ರಿ ಎಂದರೆ --ದೇವರು.
29. ಎಂಥಾ ಅದ್ಭುತವಾದ ಕಾಲವೇ ಆಗಲೀ ಎಂಥಾ ಘೋರವಾದ ಕಾಲವೇ ಆಗಲಿ ಬದಲಾವಣೆ ಆಗಿಯೇ ತೀರುತ್ತದೆ.
30. ನೀವು ತೊಂದರೆಗೊಳಗಾದಾಗ, ಖಾಯಿಲೆ ಬಿದ್ದಾಗ, ನಿಮ್ಮ ವೃತ್ತಿ ನಿಮ್ಮ ರಕ್ಷಣೆಗೆ ಬರುವುದಿಲ್ಲ, ನಿಮ್ಮ ಮಿತ್ರರು ನಿಮ್ಮೊಡನಿರುತ್ತಾರೆ. ಮೈತ್ರಿಯನ್ನು ಗಳಿಸಿಕೊಳ್ಳಿ, ಉಳಿಸಿಕೊಳ್ಳಿ.
31. ನಿಮ್ಮ ಉಗ್ರಾಣದಲ್ಲಿ ಶೇಖರವಾದ ಪದಾರ್ಥಗಳಲ್ಲಿ ಉಪಯೋಗಕ್ಕೆ ಬಾರದ, ಸುಂದರವಲ್ಲದ, ಆನಂದದಾಯಕವಲ್ಲದ ಏನಿದ್ದರೂ ಅದನ್ನು ಗುಡಿಸಿ ಆಚೆಗೆ ಹಾಕಿ.
32. ಇತರರನ್ನು ಕಂಡು ಹಲುಬುವುದಕ್ಕಿಂತ ನಿರುಪಯೋಗೀ ಗುಣ ಮತ್ತೊಂದಿಲ್ಲ.
33. ನಿಮ್ಮ ಜೀವನದ ಸುಖದ ಉತ್ತುಂಗ ಇನ್ನೂ ಬಂದಿಲ್ಲ, ಮುಂದೆ ಬರಲಿದೆ ಎಂದೇ ನಂಬಿ.
34. ಎಷ್ಟೇ ನಿರಾಸೆಯ ಅನುಭವವಾಗಿದ್ದರೂ, ಪ್ರತಿ ಬೆಳಿಗ್ಗೆ ಆಶಾವಾದದೊಂದಿಗೆ ಎದ್ದೇಳಿ, ತಯಾರಾಗಿ, ಮುನ್ನುಗ್ಗಿ.
35. ಆತ್ಮಸಾಕ್ಷಿಯಾಗಿ 'ಸರಿ' ಎನಿಸಿದ್ದನ್ನೇ ಮಾಡಿ.
36. ಮನೆಮಂದಿಯೊಂದಿಗೆ ನಿಕಟವಾದ ಸಂಬಂಧ-ಸಂಪರ್ಕ ಇಟ್ಟುಕೊಳ್ಳಿ.
37. ಅಂತರಂಗ ಯಾವಾಗಲೂ ಆನಂದಮಯ, ಅದನ್ನರಿತರೆ, ನೀವು ಸದಾ ಸುಖಿ.
38. ನಿತ್ಯ ಯಾರಿಗಾದರೂ ಒಂದಿಷ್ಟು ಒಳ್ಳಿತನ್ನು ಮಾಡಿ.
39. ಏನನ್ನೂ ಮಿತಿಮೀರಿ ಮಾಡಲು ಹೋಗಬೇಡಿ, ಮಿತಿಯನ್ನರಿತರೆ ಮಿತಿಯನ್ನು ಮೀರಲಾರಿರಿ.
40. ನೀವು ಬೆಳಿಗ್ಗೆ ಎದ್ದರೆ, ಜೀವಂತರಾಗಿದ್ದೀರಿ ಎಂದೇ ಅರ್ಥ. ದೇವರಿಗೆ ಕೃತಜ್ಞತೆಯಿಂದ ಕೈಮುಗಿಯಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X