ಯಾರುಬೇಕಾದರೂ ಆತ್ಮಚರಿತ್ರೆ ಬರೆಯಬಹುದೇ?
ತಮ್ಮ ಕಥೆಯನ್ನು ಇತರರಮೇಲೆ ಹೇರಲು ಯಾರ ಅಪ್ಪಣೆಯನ್ನೂ ಪಡೆಯಬೇಕಿಲ್ಲ. ಬರೆಯುವ ಚಟ, ತಾವು ಬರೆದದ್ದನ್ನು ಪ್ರಕಟಿಸಲು ಸಿದ್ಧವಾಗಿರುವ ಒಬ್ಬ ಪ್ರಕಾಶಕ ಇದ್ದರೆ ಸರಿ. ಪ್ರಕಾಶಕರು ಯಾರೂ ಸಿಗದಿದ್ದರೆ, ತಾವೇ ಪ್ರಕಾಶಕರೂ ಮುದ್ರಕರೂ ಆಗುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಈ ವಿದ್ಯುತ್-ಪ್ರಕಟಣಾಯುಗದಲ್ಲೇನು, ಬೇಕಾದ್ದನ್ನು ಬರೆದು ಆಕಾಶಜಾಲದಲ್ಲಿ ಹರಡಿಬಿಡಬಹುದು. "ಬ್ಲಾಗಿನಲಿ ಬರೆಯಲು ಬೊಮ್ಮನಾಯಕನ ಅಪ್ಪಣೆಯೇ?"
ಅಂಕಣಕಾರ : ಡಾ|| ಮೈ.ಶ್ರೀ. ನಟರಾಜ, ಪೊಟೊಮೆಕ್, ಮೇರೀಲ್ಯಾಂಡ್
ಕೆಲ ದಿನಗಳ ಹಿಂದೆ ಗೆಳೆಯರೊಬ್ಬರು ಅದೇ ತಾನೇ ಪ್ರಕಟವಾದ ತಮ್ಮ ಪುಸ್ತಕವನ್ನು ನನ್ನ ಕೈಯಲ್ಲಿಟ್ಟು, 'ದಯವಿಟ್ಟು ಓದಿ, ಅಭಿಪ್ರಾಯ ತಿಳಿಸಿ' ಎಂದರು. ಒಂದೆರಡು ವರ್ಷಗಳ ಹಿಂದೆ ಇದೇ ಗೆಳೆಯರು ತಾವು ಬರೆಯಬೇಕೆಂದಿರುವ (ಅಥವಾ ಆಗಲೇ ಬರೆಯಲು ಪ್ರಾರಂಭಿಸಿದ್ದ?) ಪುಸ್ತಕದ ಬಗ್ಗೆ ಪ್ರಸ್ತಾಪ ಮಾಡಿದ್ದರು ಎಂಬುದು ನನ್ನ ನೆನಪಿಗೆ ಬಂತು. "ನಾನು ನನ್ನ ಆತ್ಮಚರಿತ್ರೆಯನ್ನು ಬರೆಯಬೇಕೆಂದಿದ್ದೇನೆ, ಇದರಬಗ್ಗೆ ನೀವೇನೆನ್ನುವಿರಿ?" ಎಂಬ ಅವರ ಅಂದಿನ ಪ್ರಶ್ನೆ ನನಗೆ ತೀರ ಅನಿರೀಕ್ಷಿತವಾಗಿತ್ತು. "ಹೌದೇ?" ಎಂದೆ. ಏನು ಹೇಳಬೇಕೋ ತಕ್ಷಣ ತೋಚಿರಲಿಲ್ಲ. "ಏಕೆ ಸುಮ್ಮನಾಗಿಬಿಟ್ಟಿರಿ, ನನ್ನಿಂದ ಯಾವ ಪುಸ್ತಕವನ್ನೂ ನೀವು ನಿರೀಕ್ಷಿಸಿರಲಿಲ್ಲವೇ?" ಎಂದು ಬೇರೆ ಚುಚ್ಚಿದ್ದರು. ಅಷ್ಟೇ ಅಲ್ಲ, "ನೀವೂ ಒಂದೆರಡು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದೀರೆಂದು ಬಲ್ಲೆ, ಆದರೆ ನಿಮ್ಮ ಬರವಣಿಗೆಯೆಲ್ಲಾ ಕನ್ನಡದಲ್ಲಿವೆಯಾದ್ದರಿಂದ, ನನಗೆ ಓದುವ ಅದೃಷ್ಟವಿಲ್ಲ" ಎಂದು ತಮ್ಮ ದುಃಖವನ್ನೂ ತೋಡಿಕೊಂಡಿದ್ದರು. ಈ ನಮ್ಮ ಆಸಾಮಿ ಮಲಯಾಳಿ. "ಈ ಆಸಾಮಿ" ಎನ್ನುವ ಬದಲು 'ಈಸಾಮಿ' ಎನ್ನ ಬೇಕೇ ಎಂಬ ವ್ಯಾಕರಣದ ಪ್ರಶ್ನೆ ನನ್ನನ್ನು ಒಮ್ಮೊಮ್ಮೆ ಕಾಡಿದೆ! ಅದು ಹಾಗಿರಲಿ, ಅವರಿಗೆ ಕನ್ನಡ ಬಾರದು, ಹಾಗಾಗಿ ಅವರಿಗೆ ನನ್ನ ಪುಸ್ತಕಗಳನ್ನು ಓದುವ ಲಭ್ಯವಿಲ್ಲ. "ನಿಜ ಹೇಳಬೇಕೆಂದರೆ, ನೀವು ಪುಸ್ತಕ ಬರೆಯುವ ಜಾಯಮಾನದವರಲ್ಲ ಎಂದುಕೊಂಡಿದ್ದೆ" ಎಂದು ನಿಜಹೇಳಿಬಿಡಲೆ ಎಂದು ಚಿಂತಿಸಿ, ಅದನ್ನೇ ಸ್ವಲ್ಪ ಬದಲಾಯಿಸಿಕೊಂಡು ಮಾತಾಡಿದ್ದೆ. "ನೀವು ನಿಮ್ಮ ವೃತ್ತಿಗೆ ಸಂಬಂಧಪಟ್ಟ ವಿಷಯಗಳಮೇಲೆ ಬರೆಯುತ್ತೀರೇನೋ ಎಂದುಕೊಂಡಿದ್ದೆ, ಆದರೆ, ಆತ್ಮಚರಿತ್ರೆ ---?" ಎಂದು ಅರ್ಧಕ್ಕೇ ತಡೆದಿದ್ದೆ. ಈ ಪ್ರಸಂಗ ನಡೆದು ಒಂದೆರಡು ವರ್ಷಗಳೇ ಆದವು ಎಂದೆನಲ್ಲ?
ಅಂದು ಅವರಿಗೆ ನನ್ನ ಸಂಕಟ ಅರ್ಥವಾಗಿತ್ತು ಎಂದುಕೊಂಡಿದ್ದೇನೆ. "ಏಕೆ, ನಾನು ಆತ್ಮಚರಿತ್ರೆ ಬರೆಯಬಾರದೇ?" ಎಂದು ಕೇಳಿದ್ದರು. ಆತ್ಮಚರಿತ್ರೆ ಬರೆಯುವವರು ಯಾರು, ಎಂಥವರು ಎಂದು ಯೋಚಿಸಿದರೆ ಜವಾಬು ಅಷ್ಟು ಸುಲಭವಾಗಿ ಸಿಕ್ಕುವುದಿಲ್ಲ. ಅಮೇರಿಕದ ಪ್ರತಿಯೊಬ್ಬ ಅಧ್ಯಕ್ಷನೂ ತನ್ನ ಕಥೆಯನ್ನು ತನ್ನ ಮೂಗಿನನೇರಕ್ಕೆ ಬರೆದು ಚರಿತ್ರೆಯಲ್ಲಿ ತನ್ನ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಯತ್ನಿಸುತ್ತಾನೆ ಎಂಬುದನ್ನು ಎಲ್ಲರೂ ಬಲ್ಲರು. ಒಂದೇ ಕಥೆಯನ್ನು ಬೇರೆ ಬೇರೆ ಭಾಗಗಳನ್ನಾಗಿ ಬರೆದು ಹೆಸರನ್ನು ಸ್ಥಾಪಿಸಿಕೊಳ್ಳುವುದೇ ಅಲ್ಲದೇ ಸಾಕಷ್ಟು ಹಣವನ್ನೂ ಸಂಪಾದಿಸುತ್ತಾರೆ ಎಂಬುದೂ ಎಲ್ಲರಿಗೂ ತಿಳಿದದ್ದೇ. ಇನ್ನು ಕೆಲವರು ತಾವು ಬರೆದ ಪುಸ್ತಕದ ಸಹಾಯದಿಂದ ಅಧ್ಯಕ್ಷಸ್ಥಾನವನ್ನು ತಲುಪಲು ಯತ್ನಿಸುತ್ತಾರೆ. ಅದೇ ಸಂದರ್ಭದಲ್ಲಿ, ಅವರ ರಾಜಕೀಯ ವೈರಿಗಳು ಅವರ ವಿರುದ್ಧವಾಗಿ ಪುಸ್ತಕಗಳನ್ನು ಬರೆದು ಅವರಿಗೆ ದೊರಕಬಹುದಾದ ಸ್ಥಾನಮಾನಗಳಿಂದ ಅವರು ವಂಚಿತರಾಗುವಂತೆ ಮಾಡುತ್ತಾರೆ. ಇದು ಮಾತಿನಲ್ಲಿ ಹಾಗೂ ಲೇಖನದಲ್ಲಿ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಂವಿಧಾನ ಕೊಟ್ಟಿರುವ ಸ್ವಾತಂತ್ರ್ಯದ ಫಲಿತಾಂಶವಷ್ಟೆ.
ಪಾಕೀಸ್ತಾನದ ಸರ್ವಾಧಿಕಾರಿ ಮುಷರ್ರಾಫ್ ಕೂಡ ಇತ್ತೀಚೆಗೆ ತನ್ನ ಕಥೆಯನ್ನು ಬರೆದುಕೊಂಡು ಪ್ರಸಿದ್ಧನಾದ. ಗಾಂಧಿ, ನೆಹರು, ಇಂದಿರಾ, ನರಸಿಂಹರಾವ್, ವಾಜಪೇಯಿ, ಅಡ್ವಾಣಿ, ಹೀಗೆ ಅನೇಕ ರಾಜಕಾರಣಿಗಳು, ಮುಖಂಡರು ತಮ್ಮ ಆತ್ಮಚರಿತ್ರೆಗಳನ್ನು ಬರೆದು ಪ್ರಕಟಿಸಿದ್ದಾರೆ. ತಮ್ಮ ಕಥೆಯನ್ನು ಇತರರಮೇಲೆ ಹೇರಲು ಯಾರ ಅಪ್ಪಣೆಯನ್ನೂ ಪಡೆಯಬೇಕಿಲ್ಲ. ಬರೆಯುವ ಚಟ, ತಾವು ಬರೆದದ್ದನ್ನು ಪ್ರಕಟಿಸಲು ಸಿದ್ಧವಾಗಿರುವ ಒಬ್ಬ ಪ್ರಕಾಶಕ ಇದ್ದರೆ ಸರಿ. ಪ್ರಕಾಶಕರು ಯಾರೂ ಸಿಗದಿದ್ದರೆ, ತಾವೇ ಪ್ರಕಾಶಕರೂ ಮುದ್ರಕರೂ ಆಗುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಈ ವಿದ್ಯುತ್-ಪ್ರಕಟಣಾಯುಗದಲ್ಲೇನು, ಬೇಕಾದ್ದನ್ನು ಬರೆದು ಆಕಾಶಜಾಲದಲ್ಲಿ ಹರಡಿಬಿಡಬಹುದು. "ಬ್ಲಾಗಿನಲಿ ಬರೆಯಲು ಬೊಮ್ಮನಾಯಕನ ಅಪ್ಪಣೆಯೇ?" ಎಂಬ ಹೊಚ್ಚ ಹೊಸ ಅಮೆರಿಕನ್ನಡ ಗಾದೆಯನ್ನು ನೀವು ಕೇಳಿರುವುದು ಸಾಧ್ಯವಿಲ್ಲ, ಏಕೆಂದರೆ, ಇದೇ ಮೊದಲು ನಾನು ಅದನ್ನು ಉಪಯೋಗಿಸುತ್ತಿರುವುದು! ಆತ್ಮಚರಿತ್ರೆ ಬರೆಯುವುದು ಸರಿ, ಆದರೆ ನಾವು ಬರೆದು ಪ್ರಕಟಿಸಿದ್ದನ್ನೆಲ್ಲ ಓದುವವರು ಇರಬೇಕು, ಅಷ್ಟೆ! "ಬರೆಯೋರು ಭಂಡರಾದರೆ ಓದೋರು ದಡ್ಡರೇ?" ಎಂಬ ಮತ್ತೊಂದು ಗಾದೆಯನ್ನು ಪೋಣಿಸಬಹುದು!
ಬಿಲ್ ಕ್ಲಿಂಟನ್, ಜಾರ್ಜ್ ಬುಷ್ ಮುಂತಾದ ನಾಯಕರು ತಮ್ಮ ಕಥೆಯನ್ನು ರೋಚಕವಾಗಿ ಹೇಳಿದರೆ ಜೊಲ್ಲು ಸುರಿಸಿಕೊಂಡು ಓದುವವರು ಅನೇಕರು ಇರುತ್ತಾರೆ. ಸ್ವತಃ ಬರೆಯುವ ಪ್ರತಿಭೆಯಿಲ್ಲದವರಿಗೆ ನೆರಳು-ಲೇಖಕ(ಕಿಯ)ರ ಸಹಾಯವಂತೂ ಇದ್ದೇ ಇರುತ್ತದೆ. ಪ್ರಕಾಶಕರೇ ಅಂಥಾ ಸೇವೆಯನ್ನು ಒದಗಿಸುವುದೂ ಉಂಟು. ಇಂಥಾ 'ಛಾಯಾಲೇಖಕ'ರು ಪ್ರೀತಿಯಿಂದಲೋ, ಅಥವಾ ಆದರ್ಶಗಳ (ಅಂದರೆ ಐಡಿಯಾಲಜಿ) ಕಾರಣದಿಂದಲೋ, ತಮ್ಮ ಪ್ರತಿಭೆಯನ್ನು ಎರವಲು ಕೊಡುತ್ತಾರೆ. ಆದರೆ ಬಹುತೇಕ, ಹಣ ಅಥವಾ ಮತ್ಯಾವುದೋ ಪ್ರತಿಫಲದ ಆಸೆಯಿಂದ ತಮ್ಮ ಸೇವೆಯನ್ನು ಒದಗಿಸುವವರೇ ಹೆಚ್ಚು. ಎಲ್ಲರಿಗೂ ನೆಲ್ಸನ್ ಮಂಡೆಲ, ಮಾರ್ಟಿನ್ ಲೂಥರ್ ಕಿಂಗ್ ಇವರುಗಳಂಥಾ ಜೀವನ ಇರುವುದಿಲ್ಲವಲ್ಲ. ಇತರರ ದೃಷ್ಟಿಯಲ್ಲಿ ಅತಿ ಸಾಧಾರಣರಲ್ಲೂ ಸಾಧಾರಣರೆನಿಸಿಕೊಳ್ಳುವವರ ಕಥೆಯನ್ನು ಯಾರು ಓದುತ್ತಾರೆ? ಈ ಪ್ರಶ್ನೆಗೆ ಜವಾಬನ್ನು ಆತ್ಮಚರಿತ್ರೆ ಬರೆಯಲು ಹೊರಟವರೇ ಕಂಡುಕೊಳ್ಳಬೇಕಷ್ಟೆ?
ನಮ್ಮ ಮಲಯಾಳೀ ಆಸಾಮಿಯ ಭೇಟಿಯ ಸಂದರ್ಭದಲ್ಲಿ ನನಗೆ ಪರಿಚಿತನಾದ ಮತ್ತೊಬ್ಬನ ಆತ್ಮಚರಿತ್ರೆ ನೆನಪಾಯಿತು. (ಸಭ್ಯತನದ ದೃಷ್ಟಿಯಿಂದ ಆತನ ಹೆಸರು ಊರು ಎಲ್ಲಾ ಬದಲಿಸಿದ್ದೇನೆ.) ಆತನ ಹೆಸರು ಬೋರಣ್ಣ. ಬೋರಣ್ಣ ಬರೆದು ಪ್ರಕಟಿಸಿದ ಆತ್ಮಕತೆಯ ವಿಚಾರ ಸಂಕ್ಷಿಪ್ತವಾಗಿ ಹೇಳುವುದಾದರೆ, ನಮ್ಮ ಹೀರೋ ಬೋರಣ್ಣ, ಬೀರೂರು ಹತ್ತಿರದಲ್ಲಿರುವ ಬೈಲಹಳ್ಳಿಯಲ್ಲಿ ಹುಟ್ಟಿ, ಬೆಂಗಳೂರಿಗೆ ಬಂದು ಕಷ್ಟಗಳನ್ನೆದುರಿಸಿ ಬೀಎಸ್ಸಿ ಮಾಡುತ್ತಾನೆ, ನಂತರ ಬೆಂಗಳೂರಿನ ಬ್ಯಾಂಬೂ ಬಜಾರಿನಲ್ಲಿ ಒಂದೆರಡು ವರ್ಷ ಹೆಣಗಿ ಬೊಂಬಾಯಿಗೆ ಹೋಗಿ ಭಿಂಡೀ ಬಜಾರಿನಲ್ಲಿ ಮತ್ತಷ್ಟು ಹೆಣಗಾಡುತ್ತಾನೆ. ನಂತರ ಬಿಮಲ್ ಲಾಲ್ ಬಾಟ್ಲೀಬಾಯಿ ಸಂಜೆ ಕಾಲೇಜಿನಲ್ಲಿ ಓದಿ ಬಾಟನಿಯಲ್ಲಿ ಎಮ್ಮೆಸ್ಸಿ ಪದವಿ ಪಡೆಯುತ್ತಾನೆ. ಭಾರತದಲ್ಲಿ ಯಾವ ಕೆಲಸವೂ ಸಿಕ್ಕದೇ, ಬೊಂಬಾಯಿನಿಂದ ಬಹರೇನಿಗೆ ಹಾರುತ್ತಾನೆ. ಅಲ್ಲೊಂದಿಷ್ಟು 'ಉದರನಿಮಿತ್ತಮ್ ಬಹುಕೃತವೇಷಮ್' ಮಾಡಿ ಒಂದಿಷ್ಟು ಹಣ ಗಳಿಸಿ ನಂತರ ಬಾಲ್ಟಿಮೋರಿಗೆ ಬಂದು ಬಯೋಟೆಕ್ನಾಲಜಿಯಲ್ಲಿ ಭಾರೀ ಪಾಂಡಿತ್ಯವನ್ನು ಪಡೆದುಕೊಳ್ಳುತ್ತಾನೆ. ಬಾಲ್ಟಿಮೋರ್ ವಿವಿಯಲ್ಲಿ ಅಧ್ಯಾಪಕವೃತ್ತಿಗೆ ಸೇರಿಕೊಂಡು ಅಮೇರಿಕದಲ್ಲಿ ಬೀಡುಬಿಟ್ಟು ದೀರ್ಘವಾದ 'ಬಿಟ್ಟುಸಿರು' ಬಿಡುತ್ತಾನೆ! ಭವಿಷ್ಯದಲ್ಲಿ ಏನುಮಾಡಬೇಕು ಎಂದು ಚಿಂತಿಸಿ, ಭಾರತಕ್ಕೆ ಹಿಂದಿರುಗಿ ಬಂದವನಾಗಿ, ಈ ನಮ್ಮ ಬೈಲಹಳ್ಳಿಯ ಬೋರಣ್ಣ ಭದ್ರಾವತಿಯ ಭಾಸ್ಕರರಾಯರ ಬಡ ಕುಟುಂಬದಲ್ಲಿ ಜನಿಸಿದ ಬಾಲಾಮಣಿ ಎಂಬ ಕನ್ಯೆಯನ್ನು ಭಾರ್ಯೆಯನ್ನಾಗಿ ಸ್ವೀಕರಿಸುತ್ತಾನೆ. ಬಾಲ್ಟಿಮೋರಿಗೆ ಹಿಂದಿರುಗಿದ ನಂತರ ಬಾಲಾಮಣಿಗೆ ಭಾರತಿ ಮತ್ತು ಭಾರ್ಗವ ಎಂಬ ಇಬ್ಬರು ಮಕ್ಕಳಾಗುತ್ತಾರೆ. ಮಕ್ಕಳನ್ನು ಬೆಳೆಸಿ ಮುಂದೆತಂದು ಮುವ್ವತ್ತು ವರ್ಷ ಅಧ್ಯಾಪಕವೃತ್ತಿಯನ್ನು ಮಾಡಿ ಮುಗಿಸುತ್ತಾನೆ. ಅವನ ವೃತ್ತಿಜೀವನದಲ್ಲಿ, ಅಲ್ಲೊಂದು ಇಲ್ಲೊಂದು ಪೇಪರ್ ಬರೆದು ಸಮ್ಮೇಳನಗಳಲ್ಲಿ ಮಂಡಿಸಿದ್ದನ್ನು ಬಿಟ್ಟರೆ ಅಂಥಾ ಹೇಳಿಕೊಳ್ಳುವ ಯಾವ ಘಟನೆಯೂ ನಡೆಯುವುದಿಲ್ಲ. ಕೊನೆಗೆ ವೃತ್ತಿಯಲ್ಲಿ ಬೋರಾಗಿ, ಬೋರಣ್ಣ ನಿವೃತ್ತಿಯನ್ನು ಪಡೆಯುತ್ತಾನೆ. ಈ ಸ್ಥಿತಿಯನ್ನು ತಲುಪಿದಮೇಲೆ ಬೋರಣ್ಣನಿಗೆ ಜೀವನದಲ್ಲಿ ಮೊಟ್ಟ ಮೊದಲಬಾರಿಗೆ ತನ್ನ ಕಾಲವನ್ನು ಹೇಗೆ ಕಳೆಯಬೇಕೋ ಗೊತ್ತಾಗದೇ ಬೋರ್ ಆಗುತ್ತಾಹೋಗುತ್ತದೆ. ಆಗ, ಅವನಿಗೆ ತನ್ನ ಆತ್ಮಚರಿತ್ರೆಯನ್ನು ಬರೆಯಬೇಕೆನ್ನಿಸುತ್ತದೆ. "ಬೈಲಹಳ್ಳಿಯಿಂದ-ಬೆಂಗಳೂರಿಗೆ," "ಬೆಂಗಳೂರಿನಿಂದ-ಬೊಂಬಾಯಿಗೆ," "ಬೊಂಬಾಯಿನಿಂದ-ಬಹರೇನಿಗೆ" ಮತ್ತು "ಬಹರೇನಿನಿಂದ-ಬಾಲ್ಟಿಮೋರಿಗೆ" ಎಂಬ ನಾಲ್ಕು ಭಾಗಗಳಲ್ಲಿ, ಸುಮಾರು ನಾನೂರು ಪುಟಗಳ ಒಂದು ಬೃಹದ್ಗ್ರಂಥವನ್ನು ಬರೆದು ಪ್ರಕಟಿಸುತ್ತಾನೆ. ಬೋರಣ್ಣನ ನಿಜವಾದ ಜಾಣ್ಮೆ ಎಂದರೆ ನಾನೂರು ಪುಟಗಳ ನಾಲ್ಕು ಭಾಗಗಳ ಕಥೆಯ ಸಾರಾಂಶವನ್ನು ನಾಲ್ಕೇ ಪದಗುಚ್ಛಗಳಲ್ಲಿ ವಿವರಿಸಿರುವ ಮಾದರಿ! (ಇದೇನು, ಎಲ್ಲ "ಬಿ" ಎಂಬ ಅಕ್ಷರದಿಂದಲೇ ಪ್ರಾರಂಭ ಎಂಬುದನ್ನು ನೀವು ಗಮನಿಸಿದ್ದೇ ಆದರೆ, ಅದು ಅವನ ಜೀವನದ ಗ್ರೇಡ್ ಅರ್ಥಾತ್ 'ಸರಾಸರಿ' ಎಂಬರ್ಥದಲ್ಲೂ ತೆಗೆದುಕೊಳ್ಳಬಹುದು.)
ಬೋರಣ್ಣನ ಆತ್ಮಚರಿತ್ರೆಯಲ್ಲಿ ತನ್ನ ಬಾಲ್ಯದಿಂದ ಮೊದಲ್ಗೊಂಡು ನಿವೃತ್ತಿಯ ತನಕ ಆದ ಸುಖ-ದುಃಖ, ಸಿಹಿ-ಕಹಿಗಳನ್ನೆಲ್ಲಾ ಯಾವ ಮುಚ್ಚುಮರೆಯೂ ಇಲ್ಲದೇ ತನಗೆ ತಿಳಿದ ಭಾಷೆಯಲ್ಲಿ ಬರೆದು ಒಪ್ಪಿಸಿದ್ದಾನೆ. ಇದನ್ನು ವ್ಯವಧಾನದಿಂದ ಓದಿದರೆ, ಬೋರಣ್ಣನ ಇಡೀ ಜೀವನ ಕಣ್ಮುಂದೆ ಬರುತ್ತದೆ. ಓದಿದ ಒಂದೆರಡು ದಿನಗಳಲ್ಲೇ ಬೋರಣ್ಣನೂ ಭಾರತದ ಬಿಲಿಯನ್ ಜನಗಳಲ್ಲಿ ಒಬ್ಬನಾಗಿ ಲೀನವಾಗುತ್ತಾನೆ. ಈ ವಿಷಯವನ್ನು ನಾನು ನನ್ನ ಮಲಯಾಳೀ ಮಿತ್ರನಿಗೆ ಹೇಳಬಯಸಿದ್ದೆ. ಆದರೆ, ಬಾಯಿ ಕಟ್ಟಿತ್ತು. ಕಾರಣ, ನನ್ನ ಮಾತಿಗೆ ಆತ ಅಕಸ್ಮಾತ್ ಬೆಲೆಕೊಟ್ಟಿದ್ದಿದ್ದರೆ, ತಮ್ಮ ಆತ್ಮಚರಿತ್ರೆಯನ್ನು ಬರೆಯುತ್ತಿರಲಿಲ್ಲ. ಸಧ್ಯ, ನಾನು ದುಡಿಕಿ ಮಾತಾಡದೇ ಇದ್ದದ್ದು ಒಳ್ಳೆಯದೇ ಆಯಿತು. ಆತ ತಮ್ಮ ಆತ್ಮಚರಿತ್ರೆಯನ್ನು ಬರೆದು ಪ್ರಕಟಿಸಿದರು. ನಾನು ಅವರಿಗೆ ಹಸ್ತಲಾಘವವಿತ್ತು, ಅಭಿನಂದಿಸಿ, ಹದಿನೈದು ಡಾಲರ್ ಕೊಟ್ಟು ಪುಸ್ತಕವನ್ನು ಕೊಂಡುಕೊಂಡೆ. ಅವರು, ಬೇಡವೆಂದು ಹಣವನ್ನು ಹಿಂದಿರುಗಿಸಿದರೂ ಕೇಳಲಿಲ್ಲ. ಪುಸ್ತಕ ಬರೆಯುವ, ಬರೆದಿದ್ದನ್ನು ಪ್ರಕಟಿಸುವ ಮತ್ತು ಪ್ರಕಟಿಸಿದ್ದನ್ನು ಮಾರುವ ಕಷ್ಟ ಅನುಭವಿಸಿದವರಿಗೇ ಗೊತ್ತು! ಆತ, ಸಂಕೋಚದಿಂದ ಹಣ ಪಡೆದು, 'ನನಗೆ ಕನ್ನಡ ಅರ್ಥವಾಗಿದ್ದಿದ್ದರೆ, ನಿಮ್ಮ ಎಲ್ಲ ಪುಸ್ತಕಗಳನ್ನೂ ಖರೀದಿಸುತ್ತಿದ್ದೆ' ಎನ್ನುತ್ತಾ ಹುಳಿನಗೆಯನ್ನು ನಗುತ್ತಾ ನಾನಿತ್ತ ಹಣವನ್ನು ಕಿಸೆಯಲ್ಲಿ ತುರುಕಿಕೊಂಡರು.
ಹಿಂದೊಮ್ಮೆ ನಾನು ಯಾವುದೋ ಕನ್ನಡ ಸಮ್ಮೇಳನದ ಮಳಿಗೆಯಲ್ಲಿ ಪುಸ್ತಕವನ್ನು ಮಾರಲು ಇಟ್ಟುಕೊಂಡಿದ್ದಾಗ ಒಬ್ಬ ಕನ್ನಡಿಗ ಓದುಗ ಮಿತ್ರ(?) ನನ್ನ ಪುಸ್ತಕವನ್ನು (ಕೊಳ್ಳುವಾಗ ಅಲ್ಲ), ತೆಗೆದುಕೊಳ್ಳುವಾಗ ಆಡಿದ ಮಾತು ನೆನಪಾಯಿತು. "ಗೆಳೆಯ ನಿನ್ನ ಪುಸ್ತಕವನ್ನೋದಿ ನಿನಗೆ ಉತ್ತೇಜನಕೊಡುವುದಕ್ಕಾಗಿ ಈ ಪುಸ್ತಕವನ್ನು ತೆಗೆದುಕೊಳ್ಳುತ್ತಿದ್ದೇನೆ ('ಕೊಳ್ಳುತ್ತಿದ್ದೇನೆ' ಅಲ್ಲ!)" ಎನ್ನುತ್ತಾ ಹಣ ಕೊಡದೇ ಮಾಯವಾದದ್ದು ಮತ್ತೆ ಮತ್ತೆ ಕಣ್ಮುಂದೆ ಬಂದು ಕಾಡುತ್ತದೆ. ಈಗ ಅದು ಇದ್ದಕ್ಕಿದ್ದಂತೆ ಯಾಕೆ ನೆನಪಾಯಿತೋ ಕಾಣೆ. ಮಲಯಾಳೀ ಮಿತ್ರರನ್ನು ಕುರಿತು, "ಸ್ವಾಮೀ, ನೀವೇ ಬುದ್ಧಿವಂತರು, ಎಲ್ಲರಿಗೂ ಅರ್ಥವಾಗುವ ಇಂಗ್ಲೀಷಿನಲ್ಲಿ ಬರೆದಿರುವಿರಿ. ನೀವು ಮಲಯಾಳಮ್ ಭಾಷೆಯಲ್ಲಿ ಬರೆದಿದ್ದರೂ ತೊಂದರೆ ಇರುತ್ತಿರಲಿಲ್ಲ, ನಿಮ್ಮ ಭಾಷೆಯಲ್ಲಿ ಓದುಗರ ಸಂಖ್ಯೆ ಹೆಚ್ಚೆಂದು ಕೇಳಿಬಲ್ಲೆ. ಆದರೆ, ಕನ್ನಡದ ವಿಷಯವೇ ಬೇರೆ, ಸಾವಿರ ಜನ ಸೇರುವ ಸಂತೆಯಲ್ಲಿ ಹತ್ತು ಪುಸ್ತಕವನ್ನು ಮಾರುವುದೂ ಕಷ್ಟ" ಎಂದು ವಿಷಾದದಿಂದ ಆತನನ್ನು ಬೀಳ್ಕೊಟ್ಟೆ. ಇನ್ನು ಆತ ಕೊಟ್ಟ ಪುಸ್ತಕವನ್ನು ಓದಿ ಅಭಿಪ್ರಾಯ ತಿಳಿಸದಿದ್ದರೆ, 'ಸುಮ್ಮನೆ ಸ್ನೇಹದ ದಾಕ್ಷಿಣ್ಯದಿಂದ ಕೊಂಡುಕೊಂಡ' ಎಂದು ಬೈದುಕೊಳ್ಳುತ್ತಾರೆ. ದಿನಕ್ಕೆ ಹತ್ತು ಪುಟ ಓದಿದರೂ ಒಂದು ತಿಂಗಳಿನಲ್ಲಿ ಮುಗಿಸಬಹುದು. 'ಯಾರುಬೇಕಾದರೂ ಆತ್ಮಚರಿತ್ರೆ ಬರೆಯಬಹುದೇ?' ಎಂಬ ಪ್ರಶ್ನೆಗೆ ಜವಾಬು ಎಂದುದೊರಕುವುದೋ ನೋಡಬೇಕು!


Click it and Unblock the Notifications
