ಸುದೀರ್ಘ-ಸಾರ್ಥಕ ಜೀವನ ನಡೆಸಿದ ಕೆ.ಎಂ.ನಂಜಪ್ಪ

Former Bangalore Mayor K.M. Nanjappa (1912-2008)ಶತಕವನ್ನು ಬಾರಿಸದಿದ್ದರೂ, ತೊಂಬತ್ತಾರು ವರ್ಷಗಳ ಸಾರ್ಥಕ ಜೀವನವನ್ನು ನಡೆಸಿ ಮೇ 24, 2008ರಂದು ಕಣ್ಮುಚ್ಚಿದ ಒಬ್ಬ ಬೆಂಗಳೂರಿನ ಹಿರಿಯ ತಲೆ ಎಂದರೆ ಕೆ.ಎಂ. ನಂಜಪ್ಪನವರು. ಬೆಂಗಳೂರಿನ ಮೇಯರಾಗಿ, ಸಮಾಜಸೇವಕರಾಗಿ, ಶಿಕ್ಷಣತಜ್ಞರಾಗಿ ಸಮುದಾಯಕ್ಕೆ ಅವರು ಕೊಟ್ಟ ಕೊಡುಗೆ ಅಪಾರ. ದೀನದಲಿತರ ಬಾಳಿಗೆ ಬೆಳಕಾಗಿದ್ದ ನಂಜಪ್ಪನವರಿಗೆಜಾಲತರಂಗ ಅಂಕಣಕಾರರಅಕ್ಷರನಮನ.

ಅಂಕಣಕಾರ : ಡಾ|| ಮೈ.ಶ್ರೀ. ನಟರಾಜ, ಪೊಟೊಮೆಕ್, ಮೇರೀಲ್ಯಾಂಡ್

"ಲಿವ್ ಲೈಕ್ ಎ ಲಿಲ್ಲಿ, ನಾಟ್ ಲೈಕ್ ಎನ್ ಓಕ್" ಎಂಬೊಂದು ಹೇಳಿಕೆ ಇದೆ. ಅಂದರೆ, 'ಜೀವನದಲ್ಲಿ ಸಾರ್ಥಕತೆಯನ್ನು ಕಾಣಲು ಕೇವಲ ದೀರ್ಘ ಆಯುಷ್ಯ ಒಂದಿದ್ದರೆ ಸಾಲದು' ಎಂಬರ್ಥದಲ್ಲಿ ಈ ಮಾತನ್ನು ಹೇಳಲಾಗಿದೆ. ಆದರೆ, ಅಲ್ಲೊಮ್ಮೆ ಇಲ್ಲೊಮ್ಮೆ ದೀರ್ಘಜೀವನವನ್ನು ಸಾರ್ಥಕವಾಗಿ ನಡೆಸಿದವರ ಹಲವಾರು ಉದಾಹರಣೆಗಳನ್ನು ನಾವು ಕಾಣಬಹುದು. ಸರ್. ಎಮ್. ವಿಶ್ವೇಶ್ವರಯ್ಯ, ಮಾಸ್ತಿ, ಎ.ಎನ್. ಮೂರ್ತಿರಾಯರು, ಇನ್ನೂ ನಮ್ಮೊಂದಿಗಿರುವ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು, ಹೀಗೆ ಇನ್ನೂ ಹಲವು ಶತಾಯುಷಿಗಳ ಉದಾಹರಣೆಯನ್ನು ಕೊಡಬಹುದು. ಶತಕವನ್ನು ಬಾರಿಸದಿದ್ದರೂ, ತೊಂಬತ್ತಾರು ವರ್ಷಗಳ ಸಾರ್ಥಕ ಜೀವನವನ್ನು ನಡೆಸಿ ಇತ್ತೀಚೆಗೆ ಕಣ್ಮುಚ್ಚಿದ ಒಬ್ಬ ಬೆಂಗಳೂರಿನ ಹಿರಿಯ ತಲೆ ಎಂದರೆ ಕೆ.ಎಂ. ನಂಜಪ್ಪನವರು. ನಾನು ಬೆಂಗಳೂರಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಶ್ರೀಯುತರು ಆ ಮಹಾನಗರಪಾಲಿಕೆಯ ಮೇಯರ್ ಆಗಿದ್ದರಾದರೂ ಅವರನ್ನು ನಾನು ನೋಡಿರಲಿಲ್ಲ. ಆದರೂ, ತುಂಬಾ ಪರಿಚಿತರೋ ಅನ್ನುವಷ್ಟು ಅವರ ವಿಷಯವನ್ನು ಕೇಳಿದ್ದೇನೆ. ಅದಕ್ಕೆ ಕಾರಣ ನನ್ನ ಸಹೋದ್ಯೋಗಿಯಾದ ಡಾ|| ಜಗನ್ನಾಥ್ ಅವರ ಅಳಿಯಂದಿರು. ಅವರ ಹಿರಿಯ ಮಗಳು, ಸತ್ಯ ವಿಶ್ವನಾಥ್ ನ್ಯೂಯಾರ್ಕ್ ಕನ್ನಡ ಕೂಟದ ಅಧ್ಯಕ್ಷೆಯಾಗಿ ದುಡಿದು ನ್ಯೂಯಾರ್ಕ್ ಸುತ್ತಮುತ್ತಲ ಪ್ರದೇಶಗಳ ಕನ್ನಡ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. ಅದೇ ರೀತಿ ಅವರ ಕಿರಿಯ ಮಗಳು, ಗಾಯತ್ರಿ ಜಗನ್ನಾಥ್ ಕಾವೇರಿ ಕನ್ನಡ ಸಂಘದ ಅಧ್ಯಕ್ಷೆಯಾಗಿ ದುಡಿದವರು. ತಮ್ಮ ತಂದೆಯವರ ಬಗ್ಗೆ ಅತ್ಯಂತ ಅಭಿಮಾನವುಳ್ಳ ಈ ಸೋದರಿಯರ ಮನೆಗೆ ಭೇಟಿಕೊಟ್ಟವರಿಗೆ ನಂಜಪ್ಪನವರ ಪರಿಚಯ ಪರೋಕ್ಷವಾಗಿಯಾದರೂ ಆಗೇ ಆಗುತ್ತದೆ. ಅವರಲ್ಲಿರುವ ಚಿತ್ರಸಂಪುಟಗಳನ್ನು ನೋಡಿದರೆ ಸಾಕು, ನಂಜಪ್ಪನವರು ವಿಶ್ವದ ನಾನಾಭಾಗಗಳಿಂದ ಬೆಂಗಳೂರಿಗೆ ಭೇಟಿ ಇತ್ತ ಅನೇಕ ಪ್ರಮುಖರೊಂದಿಗೆ ತೆಗೆಸಿಕೊಂಡಿರುವ ಚಿತ್ರಗಳನ್ನು ನೋಡಬಹುದು.

1912ರ ಜನವರಿ 31ರಂದು ಕೋರಮಂಗಲದಲ್ಲಿ ಜನಿಸಿ, ಇದೇ ಕಳೆದ ಮೇ 24, 2008ರಂದು ಕಣ್ಮುಚ್ಚಿದ ಕೆ.ಎಂ. ನಂಜಪ್ಪನವರು ತಮ್ಮ ಜೀವನದ ಕೊನೆಯವರೆಗೂ ಚಟುವಟಿಕೆಯಿಂದಲೇ ಕಳೆದರು. ಸಮಾಜಕ್ಕೆ, ಸಮುದಾಯಕ್ಕೆ ಅವರಿಂದಾದ ಕೊಡುಗೆಯನ್ನು ನೆನೆಸಿಕೊಳ್ಳಲು, ಅವರಿಗೆ ಕೃತಜ್ಞತೆ ಅರ್ಪಿಸಲು ಶ್ರದ್ಧಾಂಜಲಿ ಕಾರ್ಯಕ್ರಮಗಳು ಇನ್ನೂ ನಡೆಯುತ್ತಲೇ ಇವೆ. ಈ ಮಹಾನುಭಾವರು ಅದೆಷ್ಟು ದೀನದಲಿತರ ಬಾಳಿಗೆ ಬೆಳಕಾಗಿದ್ದಾರೋ, ಅದೆಷ್ಟು ಬಡ ವಿದ್ಯಾರ್ಥಿಗಳಿಗೆ ಸಹಾಯಹಸ್ತ ನೀಡಿದ್ದಾರೋ, ಅದೆಷ್ಟು ಸಂಘ-ಸಂಸ್ಥೆಳಿಗೆ ಮಾರ್ಗದರ್ಶನ ಮಾಡಿದ್ದಾರೋ, ಲೆಕ್ಕವಿಟ್ಟವರಿಲ್ಲ. ಅವರ ಕುಟುಂಬದವರಿಗೇ ತಿಳಿಯದಷ್ಟು ವಿಶಾಲ ವ್ಯಾಪ್ತಿ ಅವರ ಜೀವನದ್ದು. ನಂಜಪ್ಪನವರು ಸಕ್ರಿಯವಾಗಿ ಭಾಗವಹಿಸಿದ್ದ ಸಂಘ-ಸಂಸ್ಥೆಗಳ ಪಟ್ಟಿಯನ್ನು ನೋಡಿದರೆ, ಒಬ್ಬ ವ್ಯಕ್ತಿ ತನಗಿರುವ ಮಿತವಾದ ಸಮಯದಲ್ಲಿ ಇಷ್ಟೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವೇ ಎಂಬ ಅಚ್ಚರಿಯುಂಟಾಗುತ್ತದೆ.

1930ರ ದಶಕದಲ್ಲಿ ಬೆಂಗಳೂರಿನ ನರಸಿಂಹರಾಜ ರಸ್ತೆಯಲ್ಲಿ ತಿಂಗಳಿಗೆ 37 ರುಪಾಯಿ ಬಾಡಿಗೆಯಿಂದ ಪ್ರಾರಂಭವಾದ "ಬೆಂಗಳೂರ್ ಸ್ಟೋರ್ಸ್" ಮುಂದೆ ಲಕ್ಷಾಂತರ ರುಪಾಯಿಗಳ ವಹಿವಾಟಾಗಿ ಬೆಳೆಯಲು ಕಾರಣ ನಂಜಪ್ಪನವರ ಶ್ರಮದ ದುಡಿಮೆ. ವಾಣಿಜ್ಯದಲ್ಲಿ ಮುಂದುವರೆದಷ್ಟೂ ಅವರ ಚಟುವಟಿಕೆಯ ಕ್ಷೇತ್ರ ವಿಸ್ತಾರಗೊಳ್ಳುತ್ತಾ ಹೋಯಿತು. ಕೌಟುಂಬಿಕ ತೊಂದರೆಯಿಂದ ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದ ನಂಜಪ್ಪನವರಿಗೆ ವಿದ್ಯಾಭ್ಯಾಸದ ಮಹತ್ವ ಚೆನ್ನಾಗಿ ತಿಳಿದಿತ್ತು. ಐಶ್ವರ್ಯವಂತರಾದ ಮೇಲೆ ಲೆಕ್ಕವಿಲ್ಲದಷ್ಟು ವಿದ್ಯಾರ್ಥಿಗಳಿಗೆ ವಿದ್ಯಾದಾನಮಾಡಬಲ್ಲ ಹಲವಾರು ವಿದ್ಯಾಸಂಸ್ಥೆಗಳಿಗೆ ಅವರು ಆಧಾರಸ್ತಂಭವಾದರು. ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಟ್ರಸ್ಟ್‌ಗೆ ನಲವತ್ತು ವರ್ಷಗಳು ಉಪಾಧ್ಯಕ್ಷರಾಗಿಯೂ, ಶೇಷಾದ್ರಿಪುರಮ್ ಶಿಕ್ಷಣ ಟ್ರಸ್ಟ್‌ಗೆ ನಲವತ್ತು ವರ್ಷಗಳು ಅಧ್ಯಕ್ಷರಾಗಿಯೂ ಮತ್ತು ಆಚಾರ್ಯ ಪಾಠಶಾಲಾ ಟ್ರಸ್ಟ್‌ಗೆ ಇಪ್ಪತ್ತೈದು ವರ್ಷಗಳು ಉಪಾಧ್ಯಕ್ಷರಾಗಿಯೂ ಸೇವೆಸಲ್ಲಿಸಿದರು.

ಒಂಬತ್ತು ವರ್ಷಗಳ ಕಾಲ ಸತತವಾಗಿ ಸದಸ್ಯರಾಗಿ ದುಡಿದು 1963ರಲ್ಲಿ ಬೆಂಗಳೂರು ನಗರಪಾಲಿಕೆಯ ಮೇಯರ್ ಸ್ಥಾನಕ್ಕೆ ಏರಿ ನಗರದ ಕ್ರಮಬದ್ಧ ಬೆಳವಣಿಗೆಗೆ ಕಾರಣರಾದ ನಂಜಪ್ಪನವರು ರಾಜಕೀಯದಲ್ಲಿ ಇನ್ನೂ ಮುಂದುವರೆಯಬಹುದಾಗಿತ್ತೇನೋ. 1977ರಲ್ಲಿ ವಿಧಾನಸಭೆಯ ಚುನಾವಣೆಗೆ ನಿಂತು ಸೋಲನ್ನನುಭವಿಸದೇ ಹೋಗಿದ್ದರೆ, ಇವರು ಪ್ರಾಯಶಃ ಕರ್ನಾಟಕದ ಮಂತ್ರಿಮಂಡಲವನ್ನು ಸೇರುತ್ತಿದ್ದರು. ಆದರೆ, ಇವರು ರಾಜಕೀಯದಿಂದ ದೂರ ಉಳಿದ ಕಾರಣದಿಂದಲೇ ಹಲವಾರು ಸಮಾಜಕಲ್ಯಾಣದ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಸಾಧ್ಯವಾಯಿತು. ಹೀಗಾಗಿ, ಸುಮಾರು ಐವತ್ತು ವರ್ಷಗಳ ಕಾಲ ಇವರು ರೆಡ್ ಕ್ರಾಸ್ ಸಂಸ್ಥೆಯೊಡನೆ ದೀರ್ಘಸಂಪರ್ಕ ಇಟ್ಟುಕೊಳ್ಳುವುದು ಸಾಧ್ಯವಾಯಿತು. ಇವರ ದೀರ್ಘಕಾಲದ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ ಇವರಿಗೆ 1985ರಲ್ಲಿ ರಾಷ್ಟ್ರಪತಿಗಳ ಅಮೃತಹಸ್ತದಿಂದ ಸುವರ್ಣಪದಕವನ್ನು ಕೊಡಿಸಿ ಗೌರವಿಸಿತು.

ನಂಜಪ್ಪನವರ ಧಾರಾಳತನ ಮತ್ತು ಅವರಿಗೆ ಇತರರ ಬಗ್ಗೆ ಇದ್ದ ಅನುಕಂಪದಿಂದಾಗಿ ಅವರನ್ನು ಆಹ್ವಾನಿಸಿ ತಮ್ಮ ಸಮುದಾಯಕ್ಕೆ ಸೇರಿಸಿಕೊಂಡ ಸಂಘಗಳು ಹಲವಾರು. ಇವುಗಳಲ್ಲಿ, ಅಖಿಲ ಕರ್ನಾಟಕ ಮಕ್ಕಳ ಕೂಟ, ಕರ್ನಾಟಕ ಚಿತ್ರಕಲಾ ಪರಿಷತ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸರ್ಪಭೂಷಣ ಮಠ, ನವಜೀವನ ವ್ಯಾಯಾಮ ಶಾಲೆ, ಬಸವ ಸಮಿತಿ, ನೆಹರು ನಗರ ಸಹಕಾರಿ ಬ್ಯಾಂಕು, ಚಾಮರಾಜ ಚಾರಿಟಬಲ್ ಟ್ರಸ್ಟ್, ಎಮ್.ಬಿ. ಆರಾಧ್ಯ ಚಾರಿಟಬಲ್ ಟ್ರಸ್ಟ್, ಮುಂತಾದವು ಸೇರಿವೆ. ಅನೇಕ ಸಾಮಾಜಿಕ ಕ್ಷೇತ್ರಗಳಲ್ಲಿ ದುಡಿದರೂ ಧಾರ್ಮಿಕ ಕ್ಷೇತ್ರವನ್ನು ಇವರು ಕಡೆಗಣಿಸಲಿಲ್ಲ. ಕಾಯಕವೇ ಕೈಲಾಸವೆಂದು ನಂಬಿದ್ದರೂ ದೇವರು ಮತ್ತು ಧರ್ಮದಲ್ಲಿ ಶ್ರದ್ಧೆ-ಭಕ್ತಿವುಳ್ಳವರಾಗಿದ್ದರು. ಮಂಚನಬೆಲೆಯಲ್ಲಿ ಕಲ್ಯಾಣಮಂದಿರ ಮತ್ತು ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಕೊಡುಗೈದಾನ ಮಾಡಿ ಇಹಲೋಕದ ಸಾರ್ಥಕ್ಯದೊಡನೆ ಪರಲೋಕದಲ್ಲೂ ತಮ್ಮ ಸ್ಥಾನವನ್ನು ಕಾಯ್ದುಕೊಳ್ಳಲು ಇವರು ಮರೆಯಲಿಲ್ಲ. ಇವರ ಇಡೀ ಜೀವನದ ಕೈಂಕರ್ಯಕ್ಕೆ ಬೆಂಬಲವಾಗಿ ನಿಂತ ಇವರ ಧರ್ಮಪತ್ನಿ ಮಹದೇವಮ್ಮನವರು, ಹಲವು ವರ್ಷಗಳ ಹಿಂದೆ ಮುತ್ತೈದೆಯಾಗೇ ವಿದಾಯಹೇಳಿಬಿಟ್ಟರು.

ಸದಾ ನಗುತ್ತ ಸಂತೋಷದಿಂದ ಇರುತ್ತಿದ್ದ, ಭೌತಿಕ ಜೀವನದಬಗ್ಗೆಯೂ ಆಸ್ಥೆಯಿಂದ ಇದ್ದು ಆರೋಗ್ಯದಕಡೆಗೂ ಗಮನವಿಟ್ಟುಕೊಂಡಿದ್ದ ನಂಜಪ್ಪನವರ ಜೀವನದ ಸಾರವನ್ನ ಅವರು ಕಿರಿಯರಿಗೆ ಹೇಳಿದ ಕಿವಿಮಾತುಗಳಿಂದ ಗ್ರಹಿಸಬಹುದಾಗಿದೆ.

ನಿಮ್ಮ ಜೀವನದಲ್ಲಿ ನಿಮ್ಮ ಸಾಧನೆ ನಿಮಗೆ ತೃಪ್ತಿ ನೀಡಬೇಕಾದಲ್ಲಿ, ಈ ಕೆಳಗಿನ ಪಂಚಶೀಲಗಳು ನಿಮಗೆ ಮಾರ್ಗದರ್ಶನಮಾಡಲಿ.

* ಒಳ್ಳೆಯವರ ಸಹವಾಸ ಸಂಪಾದಿಸಿಕೊಳ್ಳಿ.
* ಒಳ್ಳೆಯ ಹವ್ಯಾಸ ಬೆಳಿಸಿಕೊಳ್ಳಿ.
* ಸಹಾಯಮನೋಭಾವವನ್ನು ರೂಢಿಸಿಕೊಳ್ಳಿ.
* ಸದಾ ಚಟುವಟಿಕೆಯಿಂದಿರಿ.
* ಮಹತ್ವಾಕಾಂಕ್ಷೆ ಇಟ್ಟುಕೊಳ್ಳಿ.

ನುಡಿದಂತೆ ನಡೆದು ಈ ಪಂಚಶೀಲಗಳನ್ನೇ ಅನುಸರಿಸಿದ ಈ ದೀರ್ಘಾಯುಷಿ ತಮ್ಮ ಮುಂದಿನ ಪೀಳಿಗೆಗೆ ಸಾಕಷ್ಟು ಆದರ್ಶವನ್ನು ಆಸ್ತಿಯನ್ನಾಗಿ ಬಿಟ್ಟಿದ್ದಾರೆ. ಶ್ರೀಯುತರ ಬಗ್ಗೆ ಜಾಲತರಂಗದ ಓದುಗರಿಗೆ ಒಂದಿಷ್ಟು ಮಾಹಿತಿ ಒದಗಿಸಲು ಸಹಾಯಮಾಡಿದ ಗೆಳೆಯ ಡಾ|| ಜಗನ್ನಾಥ್ ಮತ್ತು ಅವರ ಮಡದಿ ಗಾಯತ್ರಿ ಜಗನ್ನಾಥ್ ಅವರಿಗೆ ನಾನು ಋಣಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+