ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಗಮಾಲಿಕಾ ಸುಂದರಕಾಂಡ ಧ್ವನಿಸಂಪುಟ

By Staff
|
Google Oneindia Kannada News

ಭಾರತದ ಮಹಾಕಾವ್ಯಗಳಲ್ಲಿ ಆಸಕ್ತಿವುಳ್ಳವರು, ವಿಶೇಷವಾಗಿ ರಾಮಾಯಣದ ಸುಂದರಕಾಂಡ ಕಥಾಭಾಗವನ್ನು ಸುಶ್ರಾವ್ಯ ಸಂಗೀತ ಸಂಯೋಜನೆಯಲ್ಲಿ ಆಲಿಸಬಯಸುವವರಿಗೆ ಈ ಮಾಹಿತಿಯನ್ನು ಅರ್ಪಿಸಲಾಗಿದೆ - ದಟ್ಸ್ ಕನ್ನಡ.

*ಡಾ|| ಮೈ.ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್

Sundarakanda Ragamalika team
ಸುಂದರಕಾಂಡ ರಾಗಮಾಲಿಕಾ ತಂಡ
ಸುಂದರಕಾಂಡ, ಶ್ರೀಮದ್ವಾಲ್ಮೀಕಿ ರಾಮಾಯಣದಲ್ಲಿ ಅತಿ ಮುಖ್ಯ ಕಾಂಡಗಳಲ್ಲಿ ಒಂದು. ಇದು ಯಾವ ಕಾರಣದಿಂದ "ಸುಂದರ" ಎಂಬ ವಿಚಾರದಲ್ಲಿ ಹಲವಾರು ವ್ಯಾಖ್ಯಾನಗಳಿವೆ, ಅದು ಒತ್ತಟ್ಟಿಗಿರಲಿ. ದುರುಳ ರಾವಣನು ಸೀತಾದೇವಿಯನ್ನು ಅಪಹರಿಸಿ ತನ್ನ ರಾಜಧಾನಿಯಾದ ಲಂಕಾಪುರಿಯ ಬಳಿ ಇರುವ ಅಶೋಕವನದಲ್ಲಿಟ್ಟಿರುತ್ತಾನೆ. ಅವಳ ಕಾವಲಿಗೆಂದು ಇಟ್ಟಿದ್ದ ರಕ್ಕಸಿಯರಿಂದ ಆವರಿಸಲ್ಪಟ್ಟು, ಆಗಿಂದಾಗ್ಗೆ ಬಂದು ಕಾಡುವ ರಾವಣನ ಉಪಟಳವನ್ನು ಸಹಿಸಲಾಗದೇ, ಶ್ರೀರಾಮನನ್ನು ನೆನೆಯುತ್ತ, ಎಂದಿಗೆ ಈ ತನ್ನ ದುರವಸ್ಥೆ ಕೊನೆಗಾಣುತ್ತದೋ ಎಂದು ದುಃಖಿಸುತ್ತಾ ಸೀತೆ ತನ್ನ ಪ್ರಾಣವನ್ನು ಕಳೆದುಕೊಳ್ಳಲು ಅನುವಾಗುತ್ತಾಳೆ.

ಆ ವೇಳೆಗೆ, ಸಮುದ್ರೋಲ್ಲಂಘನಮಾಡಿ ಆಂಜನೇಯ ಲಂಕೆಯನ್ನು ಸೇರುತ್ತಾನೆ. ರಾವಣನ ಅರಮನೆಯನ್ನು ಪ್ರವೇಶಿಸಿ ಅಲ್ಲಿ ಸೀತೆಯನ್ನು ಕಾಣದೇ ನಿರಾಶನಾದರೂ ರಾವಣನ ಬಲಾಬಲಗಳನ್ನು ಪರೀಕ್ಷಿಸಿ ತನ್ನ ಸ್ವಾಮಿಗೆ ವರದಿ ಒಪ್ಪಿಸುವುದಕ್ಕಾಗಿ ವಿವರಗಳನ್ನು ಮನನಮಾಡಿಕೊಳ್ಳುತ್ತಾನೆ. ಅಲ್ಲಿಂದ ಹೊರಟು ಅಶೋಕವನದಲ್ಲಿ ಬಂದಿಳಿಯುತ್ತಾನೆ. ಶ್ರೀರಾಮನ ಸಂದೇಶವನ್ನು ಸೀತಾದೇವಿಗೆ ಮುಟ್ಟಿಸಿ ಅವನ ಪ್ರೇಮದ ಕುರುಹಾದ ಮುದ್ರೆಯುಂಗುರವನ್ನು ಅವಳಿಗೆ ಕೊಟ್ಟು ಅದಕ್ಕೆ ಪ್ರತಿಯಾಗಿ ಅವಳಿಂದ ಚೂಡಾಮಣಿಯನ್ನು ಪಡೆದು ಶ್ರೀರಾಮನಿಗೆ ಒಪ್ಪಿಸುವವರೆಗೆ ಈ ಕಾಂಡದ ಕತೆ ಸಾಗುತ್ತದೆ.

ಲಂಕೆಯಲ್ಲಿರುವಾಗ ರಾವಣನನ್ನು ಹೇಗಾದರೂ ಭೇಟಿಮಾಡಿ ಎಚ್ಚರಿಕೆ ನೀಡಬೇಕೆಂಬ ಉದ್ದೇಶದಿಂದ, ಅಶೋಕವನವನ್ನು ಹನುಮಂತ ನಾಶಮಾಡುತ್ತಾನೆ. ವನವನ್ನು ಹಾಳುಮಾಡಿ ತಡೆಯಬಂದವರನ್ನೆಲ್ಲ ಸದೆಬಡಿದ, ಸಾಧಾರಣ "ಕಪಿ"ಯಂತೆ ಕಂಡರೂ ಅಸಾಧಾರಣ ವೀರನಾಗಿದ್ದ ಆಂಜನೇಯನ ಬಗ್ಗೆ ವರದಿ ರಾವಣನಿಗೆ ತಲುಪುತ್ತದೆ. ಕೂಡಲೇ ಅವನನ್ನು ಬಂಧಿಸಿ ರಾವಣನ ಸಭೆಯಲ್ಲಿ ತಂದು ನಿಲ್ಲಿಸುತ್ತಾರೆ. ತಾನು ರಾಮದೂತನೆಂದೂ, ಸೀತೆಯನ್ನು ರಾಮನಿಗೆ ತಂದೊಪ್ಪಿಸದಿದ್ದರೆ ಅವಸಾನ ತಪ್ಪದೆಂದೂ ಹನುಮಂತ ರಾವಣನಿಗೆ ಎಚ್ಚರಿಕೆ ನೀಡುತ್ತಾನೆ. ಅವನ ಮಾತಿನಿಂದ ಕುಪಿತನಾಗಿ, ರಾವಣ ಅವನನ್ನು ಕೊಲ್ಲಿಸಬೇಕೆಂದು ಅಪ್ಪಣೆಕೊಡುತ್ತಾನೆ. ಆದರೆ, ವಿಭೀಷಣನ ಬುದ್ಧಿವಾದದಿಂದ ಮರಣದಂಡನೆಯ ಬದಲು ಹನುಮನ ಬಾಲಕ್ಕೆ ಬೆಂಕಿಹಚ್ಚಿಸುತ್ತಾನೆ. ಹನುಮನಾದರೋ, ತನ್ನ ಬಾಲದ ಬೆಂಕಿಯನ್ನೇ ಉಪಯೋಗಿಸಿ ಲಂಕೆಯನ್ನು ಸುಟ್ಟು ಹಿಂದಿರುಗುತ್ತಾನೆ. ಹಿಂದಿರುಗಿದ ಕೂಡಲೇ, ಸೀತೆಯ ಸುದ್ದಿಯನ್ನೂ ರಾವಣನ ರಾಜಧಾನಿಯ ವಿವರಗಳನ್ನೂ ಶ್ರೀರಾಮನಿಗೆ ವರದಿ ಒಪ್ಪಿಸುತ್ತಾನೆ. ರಾಮಾಯಣದ ಈ ಕಥಾಭಾಗವನ್ನು ಅರಿಯದವರಾರು? ರಾಮಾಯಣದ ಈ ಕಾಂಡವನ್ನು ಪಠಿಸಿದರೆ ಸಂಸಾರದಲ್ಲಿ ಸಾಮರಸ್ಯವುಂಟಾಗುವುದೆಂದು ರಾಮಭಕ್ತರಲ್ಲಿ ಗಾಢವಾದ ಒಂದು ನಂಬಿಕೆ ಇದೆ.

ಅದೆಲ್ಲಾ ಸರಿ, ನನಗೂ ಸುಂದರಕಾಂಡಕ್ಕೂ ಏನು ಸಂಬಂಧ? "ಗೋಕುಲಾಷ್ಟಮಿಗೂ ಇಮಾಂ ಸಾಬಿಗೂ ಏನು ಸಂಬಂಧ?" ಎಂದು ಕೇಳಿದಹಾಗೇ ತಾನೆ? ಕೆಲವೊಮ್ಮೆ ಜೀವನದಲ್ಲಿ ನಂಬಲಸಾಧ್ಯವಾದ ಘಟನೆಗಳು ನಡೆಯುತ್ತವೆ. ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ, ಕೇಳಿ. ಸುಮಾರು ಎರಡು ವರ್ಷಗಳಾಗುತ್ತಾ ಬಂತು. ಇದ್ದಕ್ಕಿದ್ದಂತೆ ಒಂದು ದಿನ ನನಗೊಂದು ವಿ-ಅಂಚೆ ಬಂತು. ಅದನ್ನು ಕಳಿಸಿದವರು ನಿರ್ಮಲಾ ರಾವ್, ಅಮೆರಿಕಾ ರಾಜಧಾನಿಯ ಹಿರಿಯ ಕನ್ನಡಿಗರಾದ ಮಾಗಲ್ ರಾವ್ ಅವರ ಧರ್ಮಪತ್ನಿ. ಅವರ ಸಹೋದ್ಯೋಗಿ, ತೆಲುಗು ಮಾತನಾಡುವ ರಾಮಭಕ್ತರೊಬ್ಬರು - ರಾಮ ಶಾಸ್ತ್ರಿ ಎಂದು ಅವರ ಹೆಸರು - ತಾವು ಬರೆದ ತೆಲುಗು ಪದ್ಯವೊಂದನ್ನು ತೋರಿಸಿ ಅದನ್ನು ಕನ್ನಡದಲ್ಲಿ ಅನುವಾದಮಾಡಲು ಕೇಳಿದರಂತೆ. ಅದಕ್ಕವರು, "ನನಗೆ ಇದೆಲ್ಲ ತಿಳಿಯದು, ಬೇಕಾದರೆ ಒಬ್ಬ ಕನ್ನಡ ಮಿತ್ರರ ಪರಿಚಯ ಮಾಡಿಸುತ್ತೇನೆ, ಅವರನ್ನು ಕೇಳಿ, ಅವರು ಮಾಡಿದರೂ ಮಾಡಬಹುದು" ಎಂದು ಹೇಳಿ ನನ್ನ ವಿ-ಅಂಚೆಯ ವಿಳಾಸವನ್ನು ರಾಮಶಾಸ್ತ್ರಿಗಳಿಗೆ ಕೊಟ್ಟು ನಮ್ಮಿಬ್ಬರ ಪರಿಚಯ ಮಾಡಿಸಿದರು. ಹೀಗೆ ಶುರುವಾಯಿತು ನನ್ನ ಮತ್ತು ಸುಂದರಕಾಂಡದ ಸಂಬಂಧ.

ನನಗೆ ತೆಲುಗುಭಾಷೆಯ ಪರಿಚಯವಿಲ್ಲ. ಅಲ್ಲಿ ಇಲ್ಲಿ ತ್ಯಾಗರಾಜರ ಕೃತಿಗಳನ್ನು ಕೇಳಿ ಅವುಗಳ ಅರ್ಥವನ್ನು ಕೆಲವೊಮ್ಮೆ ಓದಿರುವುದನ್ನು ಬಿಟ್ಟರೆ, ಸಹಪಾಠಿಗಳಾಗಿದ್ದ ಕೆಲವು ಶೆಟ್ಟರ ಹುಡುಗರನ್ನು ಛೇಡಿಸುವಾಗ ಉಪಯೋಗಿಸಿದ್ದ ತೆಲುಗನ್ನು ಬಿಟ್ಟು, ಆ ಸುಂದರಭಾಷೆಯ ಪರಿಚಯ ನನಗೆ ಏನೇನೂ ತಿಳಿಯದು. ಹಾಗಿದ್ದರೂ ಅವರು ಕೊಟ್ಟ ಹಲವಾರು ಸಾಲುಗಳ ಪದ್ಯವನ್ನು ಓದಿ ಒಂದಿಷ್ಟು ಅರ್ಥಮಾಡಿಕೊಳ್ಳಲು ಯತ್ನಿಸಿದೆ. ರಾಮಶಾಸ್ತ್ರಿಗಳೇ ಹೇಳಿದ್ದರು, "ನನಗೆ ಸುಂದರಕಾಂಡದ ಬಗ್ಗೆ ತುಂಬಾ ಪ್ರಿತ್ಯಾದರಗಳು ಇರುವುದು ನಿಜವಾದರೂ ನಾನೇನೂ ಉದ್ದಾಮಕವಿ ಅಲ್ಲ!" ಅವರು ಬರೆದ ಕವಿತೆ ಸ್ವಚ್ಛಂದ ಛಂದಸ್ಸಿನ (ಅಂದರೆ "ಫ್ರೀ ಸ್ಟೈಲ್") ಬರಹವಾಗಿತ್ತು, ಹೆಚ್ಚು ಭಾಗ ಗದ್ಯಕ್ಕೆ ಹತ್ತಿರವಾಗಿತ್ತು. ಅವರ ಉದ್ದೇಶ, ತಮ್ಮ ಕವಿತೆಯ ಅನುವಾದ ಹಾಡುವುದಕ್ಕೆ ಅನುಕೂಲವಾಗಿರಬೇಕು ಎಂದು ಅವರೇ ತಿಳಿಸಿದ್ದರಿಂದ, ಅವರ ಆಸೆಯನ್ನು ಪೂರೈಸಲು ಅವರ ಕವನದ ನೇರ ಅನುವಾದ ಅಷ್ಟೇನೂ ಫಲಪ್ರದವಾಗಲಾರದು ಎಂಬ ನಿರ್ಧಾರಕ್ಕೆ ನಾನು ಬರಬೇಕಾಯಿತು.

ಆದರೆ, ಶಾಸ್ತ್ರಿಗಾರು ಸುಲಭವಾಗಿ ನನ್ನನ್ನು ಬಿಡುವವರಾಗಿರಲಿಲ್ಲ! ಒಂದೇ ಪಟ್ಟು ಹಿಡಿದರು. "ನೀವು ಅನುವಾದವನ್ನೇ ಮಾಡಬೇಕೆಂಬ ಹಠ ನನಗಿಲ್ಲ, ಸ್ವತಂತ್ರವಾಗೇ ಬರೆಯಿರಿ ಎಂದು ಪ್ರೇರೇಪಿಸಿದರು. ತಕ್ಷಣ ನನ್ನ ಪುಸ್ತಕಭಂಡಾರದಲ್ಲಿ ಸಿಕ್ಕ ಒಂದೆರಡು ರಾಮಾಯಣ ಪುಸ್ತಕಗಳನ್ನು ಹುಡುಕಿ ತೆಗೆದು "ಸುಂದರಕಾಂಡ"ವನ್ನು ಓದಿಕೊಂಡು ಮರೆತಿದ್ದ ವಿವರಗಳನ್ನು ನೆನಪಿಗೆ ತಂದುಕೊಂಡೆ. ಚಿಟಿಕೆ ಹಾಕಿಕೊಂಡು ಹಾಡಿಕೊಳ್ಳಬಹುದಾದ ಒಂದು ಮಟ್ಟಿನ ಪಲ್ಲವಿಯೊಂದಿಗೆ ಪ್ರಾರಂಭಿಸಿಕೊಂಡೆ. ಒಂದೊಂದೇ ಚರಣಗಳು ಹೊರಬಂದವು, ನನಗೇ ತಿಳಿಯದಂತೆ ಸರಳ ಚೌಪದಿಯಲ್ಲಿ ಕತೆ ಮುಂದುವರೆಯುತ್ತಾ ಹೋಯಿತು.

ಗೇಯತೆಯ ಬಗ್ಗೆ ಹೆಚ್ಚು ಆಸ್ಥೆವಹಿಸಿ ಮಾತ್ರೆಗಳನ್ನು ಲೆಕ್ಕಹಾಕಿಕೊಳ್ಳುತ್ತಾ ಮುಂದುವರೆದೆನಾದರೂ, ನಾನು ಛಂದೋಬದ್ಧವಾಗಿ ಬರೆಯುವ ಶಿಸ್ತಿನ ಕವಿಯಲ್ಲ. ತಕ್ಷಣ ನನಗೆ ನೆನಪಾದದ್ದು ಇಬ್ಬರು ಮಿತ್ರರು. ರಾಮಪ್ರಿಯನ್ ಮತ್ತು ಕೃಷ್ಣಪ್ರಿಯನ್ ಸಹೋದರರು. ಇವರಿಬ್ಬರೂ ಕನ್ನಡ, ಸಂಸ್ಕೃತ ಎರಡುಭಾಷೆಗಳಲ್ಲೂ ಘಟ್ಟಿಗರು, ಛಂದಸ್ಸನ್ನು ಚೆನ್ನಾಗಿ ತಿಳಿದವರು. ತಕ್ಷಣವೇ ಪ್ರಾರಂಭವಾಯಿತು ಅವರೊಂದಿಗೆ ವಿನಿಮಯ. ಅದೇ ಸಮಯದಲ್ಲಿ ನನಗೆ ತುಂಬಾ ಬೇಕಾದ ಮತ್ತೊಬ್ಬ ರಾಮಭಕ್ತರ ನೆನಪೂ ಆಯಿತು. ಅವರೇ, ವರದರಾಜನ್ ಆತೂರ್ (ಗೆಳೆಯರಿಗೆ "ವರದು"). ಹಿಂದೆ ನಾನು "ನವರತ್ನಮಾಲಿಕಾ" ಎಂಬ ಹೆಸರಿನಲ್ಲಿ ಒಂಬತ್ತು ಕೃತಿಗಳನ್ನು ಸಂಸ್ಕೃತದಲ್ಲಿ ರಚಿಸಿದ್ದೆ. ಆ ಕೃತಿಗಳಿಗೆ, ಉಷಾ ಚಾರ್ ಸಂಗೀತವನ್ನು ಸಂಯೋಜಿಸಿದ್ದರು. ಆ ಕೃತಿಗಳು ಲೋಕಾರ್ಪಣೆಗೊಂಡು ಹಲವಾರು ವರ್ಷಗಳೇ ಕಳೆದಿವೆ.

ವರದು ಆಗಲಿಂದಲೂ ಹೇಳುತ್ತಲೇ ಬಂದಿದ್ದರು ; "ನೀವು ರಾಮನನ್ನು ಕುರಿತ ಕೃತಿಗಳನ್ನು ರಚಿಸಿ ಉಷಾ ಅವರಿಂದ ಸಂಗೀತ ಸಂಯೋಜನೆ ಮಾಡಿಸಿದ್ದನ್ನು ಕೇಳಬೇಕೆಂದು ನನಗೆ ಆಸೆ" ಎಂದು. ಆದರೆ, ಅವರ ಆಸೆ ಪೂರೈಸಿರಲಿಲ್ಲ. ಈಗ ರಾಮಾಯಣದ ಒಂದುಭಾಗ ಕವಿತಾರೂಪದಲ್ಲಿ ಸಿದ್ಧವಾಗಿತ್ತು. ಅದನ್ನು ಅವರಿಗೆ ಕಳುಹಿಸಿ ಅವರ ಅಭಿಪ್ರಾಯವನ್ನೂ ಕೋರಿದೆ. ಅವರು ಕೂಡಲೇ ನನ್ನ ಕವನದ ಪ್ರತಿಯನ್ನು ಅವರ ಪೂಜಾಗೃಹದಲ್ಲಿ ರಾರಾಜಿಸುವ ರಾಮಪಟ್ಟಾಭಿಷೇಕದ ದೊಡ್ಡ ಚಿತ್ರಪಟದಡಿಯಲ್ಲಿಟ್ಟು, ಪೂಜಿಸಿ ತಮ್ಮ ಮನಸ್ಸಿಗೆ ತೋಚಿದ ಮಟ್ಟಿನಲ್ಲಿ ಹಾಡಿಕೊಂಡಿದ್ದನ್ನು ನನಗೆ ತಿಳಿಸಿದರು (ಅದನ್ನು ಕೇಳುವ ಸುಯೋಗ ನನಗಿನ್ನೂ ಆಗಿಲ್ಲವೆಂಬುದು ಬೇರೇ ವಿಷಯ!) ಪ್ರೇರಣೆಗೆ ಮೂಲಕಾರಣರಾದ ತೆಲುಗಿನ ರಾಮಶಾಸ್ತ್ರಿಗಳೂ ಕನ್ನಡದ ಈ ಕೃತಿಯನ್ನು ಓದಿದರು. ಎಲ್ಲರಿಂದಲೂ ಮೆಚ್ಚುಗೆಗಳು ಮತ್ತು ಸಲಹೆಗಳೂ ಬಂದವು. ರಾಮಪ್ರಿಯನ್ ಮತ್ತು ಕೃಷ್ಣಪ್ರಿಯನ್ ಸೋದರರು ಮಾತ್ರೆಯ ಲೆಕ್ಕಾಚಾರವನ್ನು ಕಟ್ಟುನಿಟ್ಟಾಗಿ ಮಾಡಿ ಹೆಚ್ಚು ಕಡಿಮೆ ಇದ್ದದ್ದನ್ನು ಸರಿತೂಗಿಸಲು ಸಹಾಯಮಾಡಿದರು. ಎಲ್ಲರ ಸಲಹೆಗಳನ್ನೂ ತೆಗೆದುಕೊಂಡು ನಾನು ನಿಮಿತ್ತಮಾತ್ರನಾಗಿ, ಫಲಶೃತಿಯೂ ಸೇರಿದಂತೆ, ಒಟ್ಟು ಮುವತ್ಮೂರು ಚರಣಗಳ ಸುಂದರಕಾಂಡದ ಸಾಹಿತ್ಯ ನವೆಂಬರ್-ಡಿಸೆಂಬರ್ 2006ರಲ್ಲಿ ಪೂರ್ಣಗೊಂಡಿತು.

ಸಾಹಿತ್ಯವನ್ನು ಉಷಾ ಚಾರ್ ಅವರಿಗೆ ಕೊಟ್ಟು ಅವರ ಹಿಂದೆ ದುಂಬಾಲು ಬಿದ್ದೆನಾದರೂ, ಹಲವಾರು ಕಾರಣಗಳಿಂದ ಸಂಗೀತ ಸಂಯೋಜನೆ ಮುಂದೂಡಲ್ಪಟ್ಟಿತು. ಯಾವುದಕ್ಕೂ ಕಾಲ ಬರಬೇಕಷ್ಟೆ? ಸ್ವಲ್ಪ ತಡವಾದರೂ, ಒಳ್ಳೆಯ ಕೆಲಸಕ್ಕೆ ಸಮಯ ಬಂದೇ ಬರುತ್ತದೆ. ನಾದತರಂಗಿಣಿ ಸಂಸ್ಥೆಯ ಈ ವರ್ಷದ ಪುರಂದರದಾಸ-ತ್ಯಾಗರಾಜ ಸಂಗೀತೋತ್ಸವಕ್ಕೆ ಆಗಮಿಸಿದ್ದ ಮೃದಂಗ ವಿದ್ವಾನ್ (ಇವರು ಹಾಡುಗಾರರೂ ಸಹ) ಆನೂರ್ ಅನಂತಕೃಷ್ಣ ಶರ್ಮ ಅವರಿಗೆ (ಇವರನ್ನು ಎಲ್ಲರೂ ಪ್ರೀತಿಯಿಂದ ಕರೆಯುವುದು "ಶಿವು" ಎಂದೇ) ಸಂಗೀತರಚನೆಯ ಕೆಲಸವನ್ನು ಉಷಾಚಾರ್ ಒಪ್ಪಿಸಿದರು. ಹತ್ತಾರು ಕಚೇರಿಗಳ ನಡುವೆ ಶಿವು ಅದ್ಭುತವಾದ, ಒಟ್ಟು ಹನ್ನೊಂದು ರಾಗಗಳ ಮಾಲಿಕೆಯನ್ನು ಆಶ್ಚರ್ಯಕರ ಎನ್ನಿಸುವಷ್ಟು ಅಲ್ಪಸಮಯದಲ್ಲಿ ರಚಿಸಿಬಿಟ್ಟರು. ಅದಕ್ಕಿಂತಲೂ ಆಶ್ಚರ್ಯಕರ ಎನಿಸುವಷ್ಟು ವೇಗವಾಗಿ ಉಷಾ ತಮ್ಮ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸುಂದರಕಾಂಡವನ್ನು ಕಲಿಸಿಬಿಟ್ಟರು.

ಮೊನ್ನೆ ಜೂನ್ ಒಂದನೇ ತಾರೀಖು ವೃಂದಗಾನದ ಭಾಗ ಇಲ್ಲೇ ಒಂದು ಧ್ವನಿಮುದ್ರಣಾಲಯದಲ್ಲಿ ಮುದ್ರಣವಾಯಿತು! ಅದನ್ನು ತೆಗೆದುಕೊಂಡು ಶಿವು ಭಾರತಕ್ಕೆ ಹಿಂದಿರುಗಿದರು. ಎಮ್.ಎಸ್. ಶೀಲ, ಎಮ್.ಡಿ. ಪಲ್ಲವಿ ಮತ್ತು ಮಂಗಳ ಅವರು ಮುಖ್ಯಗಾಯಕಿಯರಾಗಿ, ಶಿವು ಅವರ ವಾದ್ಯಗೋಷ್ಠಿಯ ಸಹಾಯದೊಂದಿಗೆ, ವೈಯಕ್ತಿಕಗಾನವಿರುವ ಮುಖ್ಯಭಾಗದ ಧ್ವನಿಮುದ್ರಣ ಬೆಂಗಳೂರಿನಲ್ಲಿ ಮುಂದಿನ ವಾರಗಳಲ್ಲಿ ನಡೆಯಲಿದೆ. ಕೆಲವೇ ವಾರಗಳಲ್ಲಿ ಸುಂದರವಾದ ಸುಂದರಕಾಂಡದ ಮಧುರ ಧ್ವನಿಸಂಪುಟ ಇನ್ನೇನು ತಯಾರಾಗಲಿದೆ ಎಂದರೆ ನಂಬುವುದೇ ಸಾಧ್ಯವಾಗುತ್ತಿಲ್ಲ. ತಾನು ಸಮುದ್ರವನ್ನು ದಾಟುವ ಸಾಧ್ಯತೆ ಇದೆ ಎಂಬ ತಿಳಿವು ಹನುಮನಿಗೂ ಇರಲೇ ಇಲ್ಲವಂತೆ! ಅದನ್ನು ತಿಳಿಯಪಡಿಸಿ ಅವನು ಸಮುದ್ರೋಲ್ಲಂಘನಮಾಡುವಂತೆ ಪ್ರೇರೇಪಿಸಿದವರು ಅಂಗದ, ನಳ, ನೀಲ ಮುಂತಾದವರು. ಇತರರ ಪ್ರೇರಣೆಯ ಬಲದಿಂದ ನನಗೂ ಇಂಥದೇ ಒಂದು ಸಾಧ್ಯತೆಯ ಅನುಭವವಾಯಿತು ಎಂಬುದಂತೂ ದಿಟ. ಈ ಧ್ವನಿಸಂಪುಟದ ರಚನೆಯನ್ನು ಪ್ರಾಯೋಜಿಸಲು ಕನ್ನಡಭಕ್ತರು, ಸಾಹಿತ್ಯಪ್ರಿಯರು, ಸಂಗೀತಪ್ರಿಯರು ಮತ್ತು ರಾಮಭಕ್ತರು ಸ್ವಪ್ರೇರಣೆಯಿಂದ ಮುಂದಾಗಿದ್ದಾರೆ ಎನ್ನುವುದೇ ಇದಕ್ಕೆ ಸಾಕ್ಷಿ.

ಈ ಧ್ವನಿಸಂಪುಟವನ್ನು ಹೊರತರಲು ಮುಂದಾಗಿರುವ ಪ್ರಾಯೋಜಕರಿಗೂ, ಸುಮಧುರ ಸಂಗೀತವನ್ನು ಸಂಯೋಜಿಸಿದ ಶಿವು ಅವರಿಗೂ, ಹಾಡಲು ಮುಂದಾಗಿರುವ ಕಲಾವಿದ-ಕಲಾವಿದೆಯರಿಗೂ, ಈ ಯೋಜನೆಯ ಸಾರಥ್ಯವನ್ನು ವಹಿಸಿಕೊಂಡಿರುವ ನಾದತರಂಗಿಣಿ ಸಂಸ್ಥೆಯ ಎ.ಆರ್. ಚಾರ್ ಮತ್ತು ಉಷಾ ಚಾರ್ ಅವರಿಗೂ ಶ್ರೀರಾಮನ ಕೃಪೆಯಿರಲೆಂದು ಪ್ರಾರ್ಥಿಸುವುದಕ್ಕಿಂತ ಹೆಚ್ಚಿನ ಕಾಣಿಕೆಯನ್ನು ನಾನೇನೂ ಕೊಡಲಾರೆ. ಮುಗಿಸುವ ಮುನ್ನ ಒಂದು ಕಳಕಳಿಯ ಮಾತು.

ಅಮೇರಿಕಾ ಮುಂತಾದ ದೇಶಗಳಲ್ಲಿರುವ ಹತ್ತಾರು ಕನ್ನಡ ಸಂಘಗಳು, ಕನ್ನಡ ರಾಮಭಕ್ತರು ಮುಂಚೂಣಿಯಲ್ಲಿರುವ ದೇವಾಲಯಗಳು, ಮತ್ತು ಇತರ ಕಲಾಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಧ್ವನಿಸಂಪುಟಗಳನ್ನು ಮುಂಗಡವಾಗಿ ಕೊಳ್ಳಲು ಮುಂದೆಬಂದರೆ ಸಾಕಷ್ಟು ಸಂಖ್ಯೆಯಲ್ಲಿ ಮುದ್ರಿಸಲು ಸಹಾಯವಾಗುತ್ತದೆ. ಯಾವ ಲಾಭದೃಷ್ಟಿಯಾಗಲೀ ವ್ಯಾಪಾರೀ ಮನೋಭವವಾಗಲೀ ಇಲ್ಲದೇ ಕೈಗೆತ್ತಿಕೊಂಡಿರುವ ಈ ಯೋಜನೆಗೆ ನಿಮ್ಮೆಲ್ಲರ ಸಹಾಯ ಸಹಕಾರ ಇದೆ ಎಂದು ನಂಬುತ್ತೇನೆ. ವಿವರಗಳಿಗೆ ನನ್ನನ್ನಾಗಲೀ ([email protected]) ಉಷಾ ಚಾರ್ ([email protected]) ಅವರನ್ನಾಗಲೀ ದಯವಿಟ್ಟು ಸಂಪರ್ಕಿಸಿ. ಸಾಹಿತ್ಯ ಮತ್ತು ಸಂಗೀತ ಶ್ರದ್ಧಾಭಕ್ತಿಗಳಿಂದ ಕೂಡಿದ ನಮ್ಮೀ ಕಾಣಿಕೆಯನ್ನು ಸಾಧ್ಯವಾದಷ್ಟು ಜನರೊಂದಿಗೆ ಹಂಚಿಕೊಳ್ಳಬೇಕೆಂಬುದೇ ನಮ್ಮ ಉದ್ದೇಶ.

ಸುಂದರಕಾಂಡ ಧ್ವನಿಮುದ್ರಣ ಕಾರ್ಯದಲ್ಲಿ ಭಾಗಿಯಾದವರ ಚಿತ್ರಸಂಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X