• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವಳ ಮೇಲೆ ಸಾವಿಗೂ ಮೋಹವಿತ್ತು!

By Staff
|
(ಹಿಂದಿನ ಪುಟದಿಂದ)

ನಂತರದ ಒಂದೆರಡೇ ದಿನಗಳಲ್ಲಿ ನಿಕ್ ಗಾಡ್‌ವಿನ್‌ನ ಮನಸ್ಸು ಎಂಥದೆಂದು ಕಾಟಿಗೆ ಅರ್ಥವಾಗಿ ಹೋಯಿತು. ಆಕೆ ಅವನಿಗೆ ತನ್ನ ಸಂಕಟದ ಕಥೆ ಹೇಳಿದಳು. ನಾನು ಜಾಸ್ತಿ ದಿನ ಬದುಕಲ್ಲ ಅಂತ ಗೊತ್ತಿದ್ದೂ ಪ್ರೀತಿಸ್ತೀಯಾ? ಬೇಡ ಕಣೋ' ಅಂದಳು. ಇವನು ಒಪ್ಪಲಿಲ್ಲ. ನಿಂಗೇನೂ ಆಗಿಲ್ಲ. ಈಗ ಎಲ್ಲ ಕಾಯಿಲೆಗೂ ಔಷಧ ಇದೆ. ನಿನ್ನನ್ನ ಹೇಗಾದ್ರೂ ಮಾಡಿ ಬದುಕಿಸಿಕೊಳ್ತೇನೆ. ಹೆದರಬೇಡ ಸುಮ್ನಿರು' ಅಂದ. ಈ ಮಾತನ್ನೇ ಕಾಟಿಯ ಅಪ್ಪ- ಅಮ್ಮನಿಗೂ ಹೇಳಿದ. ಮುಂದೆ ಇವರ ಪ್ರೇಮ ಪರಾಕಾಷ್ಠೆಗೆ ತಲುಪುವ ವೇಳೆಗೇ ಕಾಟಿ ಮತ್ತೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಳು. ಹತ್ತಾರು ಥರದ ಟೆಸ್ಟ್ ಮಾಡಿದ ವೈದ್ಯರು ಕಡೆಗೊಮ್ಮೆ ವಿಷಾದದಿಂದ ಹೀಗೆಂದರು: ಒಂದೊಂದು ಕಾಯಿಲೆ ಇಂಥದೇ ಕಾರಣಗಳಿಂದ ಬರುತ್ತೆ ಎಂದು ವೈದ್ಯಶಾಸ್ತ್ರ ಹೇಳುತ್ತೆ. ಆದರೆ ಕೆಲವೊಂದು ಕಾಯಿಲೆಗಳು ಕಾರಣವೇ ಇಲ್ಲದೆ ಬಂದುಬಿಡ್ತವೆ. ಕಾಟಿಗೆ ಆಗಿರುವುದೂ ಹಾಗೇನೇ. ಆಕೆಗೆ ಶ್ವಾಸಕೋಶದ ಕ್ಯಾನ್ಸರ್ ಅಮರಿಕೊಂಡಿದೆ. ಅದೇನೇ ಚಿಕಿತ್ಸೆ ನೀಡಿದರೂ ಆಕೆ ಹೆಚ್ಚು ದಿನ ಬದುಕೋದಿಲ್ಲ. ಇದ್ದಷ್ಟು ದಿನ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಿ. ಇಂಥ ಮಾತು ಹೇಳೋಕೆ ನನಗೂ ಸಂಕಟ ಆಗ್ತಾ ಇದೆ. ಐಯಾಮ್ ವೆರಿ ಸಾರಿ...'

ಆನಂತರದಲ್ಲಿ ಕಾಟಿಗೆ ಆಸ್ಪತ್ರೆಯೇ ಮನೆಯಾಯಿತು. ಹೇಳಿ ಕೇಳಿ ಶ್ವಾಸಕೋಶದ ಕ್ಯಾನ್ಸರ್ ಅಲ್ಲವೇ? ಹಾಗಾಗಿ ತುಂಬ ಸಂದರ್ಭದಲ್ಲಿ ಉಸಿರಾಡುವುದೇ ಕಷ್ಟವಾಗುತ್ತಿತ್ತು. ಹಾಗೂ ಹೀಗೂ ಉಸಿರಾಟದ ಸಮಸ್ಯೆಯಿಲ್ಲ ಎಂದುಕೊಂಡರೆ ಮೈಯ ಮೂಳೆಗಳೆಲ್ಲಾ ಮುರಿದೇ ಹೋದವೇನೋ ಎಂಬಂಥ ನೋವು! ಉಸಿರಾಟದ ತೊಂದರೆ ಎಂದಾಗ ಆಕ್ಸಿಜನ್ ಪೈಪು, ಅಸಹನೀಯ ನೋವು ಎಂದಾಗಲೆಲ್ಲ ಮೆಹರ್‌ಫಿನ್ ಮಾತ್ರೆ. ನಿದ್ರೆ ಬರುತ್ತಿಲ್ಲ ಎಂದಾಗ ಅದಕ್ಕೂ ಒಂದು ಮಾತ್ರೆ! ಹೀಗೆ ಶುರುವಾಯಿತು ಯಾತನೆಯ ಬದುಕು.

ಈ ಸಂದರ್ಭದಲ್ಲಿ ಭಗವಂತನೇ ನಾಚುವಷ್ಟರ ಮಟ್ಟಿಗೆ ಕಾಟಿಯನ್ನು ನೋಡಿಕೊಂಡವನು ನಿಕ್ ಗಾಡ್‌ವಿನ್. ಆತ ಹಗಲು ಕಾಲೇಜಿಗೆ ಹೋಗುತ್ತಿದ್ದ. ಸಂಜೆಯಾದರೆ ಸಾಕು, ಆಸ್ಪತ್ರೆಗೆ ಓಡಿಬಂದು ಕಾಟಿಯ ಸೇವೆಗೆ ನಿಲ್ಲುತ್ತಿದ್ದ. ಅವನಿಗೆ ಇಡೀ ರಾತ್ರಿ ಜಾಗರಣೆ. ನಡುರಾತ್ರಿಯಲ್ಲಿ ನೋವಿಂದ ಆಕೆ ಮಗ್ಗಲು ಬದಲಿಸಿದರೂ ಸಾಕು, ಈತ ಚುಕ್ಕು ತಟ್ಟುತ್ತಿದ್ದ. ನಾನಿದ್ದೇನೆ, ಹೆದರಬೇಡ' ಅನ್ನುತ್ತಿದ್ದ. ಕಾಟಿಯ ಅಪ್ಪ-ಅಮ್ಮನ ಕಂಬನಿ ಒರೆಸುತ್ತಿದ್ದ ಎಷ್ಟೋ ಬಾರಿ ವೈದ್ಯರಿಗೂ ಧೈರ್ಯ ಹೇಳುತ್ತಿದ್ದ. ಈ ಹುಡುಗನ ನಿರ್ಮಲ ಪ್ರೀತಿ, ಕ್ಯಾನ್ಸರ್‌ನ ಕ್ರೌರ್ಯದಿಂದ ಕಾಟಿ ಎಂಬ ಸುಂದರಿ ಅನುಭವಿಸುತ್ತಿರುವ ಸಂಕಟ ಅಮೆರಿಕದಾದ್ಯಂತ ಸುದ್ದಿಯಾಯಿತು. ಆಕೆಗೆ ಒಳಿತು ಕೋರಿ ಚರ್ಚ್‌ಗಳಲ್ಲಿ ಪ್ರಾರ್ಥನೆಗಳಾದವು. ಈ ಹುಡುಗನ ಒಳ್ಳೆಯತನಕ್ಕೆ ಮೆಚ್ಚು ಮಾತುಗಳು ಕೇಳಿಬಂದವು. ಕಾಟಿಯ ಚಿಕಿತ್ಸೆಗೆಂದು ಅದೆಷ್ಟೋ ಮಂದಿ ಉದಾರವಾಗಿ ಹಣ ಕಳುಹಿಸಿದರು. ಈ ಸಂದರ್ಭದಲ್ಲಿಯೇ ಕಾಟಿ ವಿಪರೀತ ಮಂಕಾಗುತ್ತಿದ್ದುದನ್ನು ಕಂಡ ವೈದ್ಯರು ಮತ್ತೆ ಪರೀಕ್ಷಿಸಿ ತೀರ್ಪು ಕೊಟ್ಟರು: ನೋವು ನಿವಾರಕ ಮಾತ್ರೆಗಳನ್ನು ವಿಪರೀತ ನುಂಗಿದ ಕಾರಣದಿಂದ ದೇಹದ ಇತರೆ ಗ್ರಂಥಿಗಳಿಗೂ ಕ್ಯಾನ್ಸರ್ ಹರಡಿದೆ. ಸಾವು ಯಾವ ಕ್ಷಣದಲ್ಲಿ ಬೇಕಾದರೂ ಬಂದು ಬಿಡಬಹುದು. ಕಾಟಿಯ ಮೇಲಿನ ಆಸೆಯನ್ನು ಎಲ್ಲರೂ ಬಿಟ್ಟು ಬಿಡೋದು ಒಳ್ಳೆಯದು...'

ಒಂದೆರಡು ನಿಮಿಷ ಕಾಲ ಅಲ್ಲಿ ಸ್ಮಶಾನ ಮೌನ. ನಂತರ, ಸರಸರನೆ ವೈದ್ಯರ ಬಳಿಗೆ ಹೋದ ನಿಕ್ ಗಾಡ್ವಿನ್ ಹೀಗೆಂದ: ಡಾಕ್ಟರ್, ನಾನು ಕಾಟಿಯನ್ನು ಮದುವೆಯಾಗ್ತೇನೆ. ಅವಳು ಜಾಸ್ತಿ ದಿನ ಬದುಕೋದಿಲ್ಲ ಅಂತ ಗೊತ್ತಿದ್ದು ಮದುವೆ ಆಗಲು ತಯಾರಾಗಿದೀನಿ. ಮದುವೆಯಾದೆ ಎಂಬ ಖುಷಿ ಅವಳದಾಗಲಿ. ಇದ್ದಷ್ಟು ದಿನ ಆಕೆ ಆಕ್ಸಿಜನ್ ಪೈಪ್ ಮೂಲಕವೇ ಉಸಿರಾಡಿಕೊಂಡಿರಲಿ. ಆಕೆಗೆ ಇನ್ನು ಎರಡು ವರ್ಷ ಬದುಕ್ತೀಯ ಅಂತ ಮಾತ್ರ ಒಂದೇ ಒಂದು ಸುಳ್ಳು ಹೇಳಿ' ಅಂದ.

ಈ ಹುಡುಗನ ಪ್ರೀತಿ, ಸಾಯುವವಳಿಗೂ ಬದುಕು ಕೊಡಬೇಕೆಂಬ ಅವನ ಆದರ್ಶ ಕಂಡು ಡಾಕ್ಟರ್‌ಗೆ ಕಣ್ತುಂಬಿ ಬಂತು. ಮೆಲ್ಲಗೆ ಅವನ ಕೆನ್ನೆ ತಟ್ಟಿ ಹಾಗೇ ಆಗಲಿ' ಎಂದರು. ನಂತರದ ನಾಲ್ಕನೇ ದಿನಕ್ಕೇ ಆಸ್ಪತ್ರೆಯಲ್ಲೇ ಮದುವೆ ಎಂದು ನಿರ್ಧರಿಸಿದ್ದಾಯಿತು. ಅಲ್ಲಿನ ವೈದ್ಯರು, ದಾದಿಯರೇ ಬಂಧುಗಳಂತೆ ಓಡಾಡಿದರು. ಕಾಟಿಗೆ ಆಕ್ಸಿಜನ್ ಪೈಪ್‌ನಲ್ಲಿ ಉಸಿರಾಟದ ವ್ಯವಸ್ಥೆ ಮಾಡಲಾಯಿತು. ಪಾದ್ರಿಗಳು ಆಸ್ಪತ್ರೆಗೇ ಬಂದರು. ಅವತ್ತು ಸಿಂಡ್ರೆಲಾಳೇ ನಾಚುವಷ್ಟು ಚೆಂದಗೆ ಕಾಣುತ್ತಿದ್ದ ಕಾಟಿಯನ್ನು ಕಂಡು ದೃಷ್ಟಿ ನಿವಾಳಿಸಿದವರಿಗೆ ಲೆಕ್ಕವಿಲ್ಲ. ಮದುವೆ ಮುಗಿದ ನಂತರ ಪಾದ್ರಿಯಂಥ ವ್ಯಕ್ತಿ ಕೂಡ ಗದ್ಗದಿತನಾಗಿ ಪ್ರಾರ್ಥಿಸಿಬಿಟ್ಟ: ಜೀಸಸ್, ಈ ಹುಡುಗಿಗೆ ಸಾವು ಬಾರದಿರಲಿ...'

ಮದುವೆಯ ವಿಧಿವಿಧಾನಗಳು ಮುಗಿದವಲ್ಲ? ಅದೇ ವೇಳೆಗೆ ಕಾಟಿಯ ಗೆಳತಿಯರೆಲ್ಲ ಬಂದರು. ಗಾಡ್ವಿನ್‌ನ ಗೆಳೆಯರೂ ಜತೆ ಯಾದರು. ಮದುವೆಯಾದ ಖುಷಿಗೆ ಡ್ಯಾನ್ಸು ಮಾಡೋ' ಅಂದರು. ಇನ್ಯಾರೋ ಹಾಡು ಹೇಳಪ್ಪಾ' ಅಂದರು. ಈ ಎರಡರಿಂದಲೂ ಕಾಟಿಗೆ ಖುಷಿಯಾಗುತ್ತದೆ ಅನಿಸಿದ್ದರಿಂದ ಗಾಡ್ವಿನ್ ಹಾಗೇ ಮಾಡಿದ. ಅದೇ ಸಂದರ್ಭದಲ್ಲಿ ಕಾಟಿ ಬದುಕುವುದು ಇನ್ನು ಕೆಲವೇ ಕ್ಷಣ ಎಂದು ನೆನಪಾಗಿ, ನಿಂತಲ್ಲೇ ಬಿಕ್ಕಳಿಸಿದ. ಹಾಡುತ್ತ ಹಾಡುತ್ತಲೇ ಕಣ್ಣೀರಾದ.

ಅವತ್ತಿಗೆ ಮದುವೆಯಾಗಿ ನಾಲ್ಕನೇ ದಿನ. ಆಗಲೂ ಆಸ್ಪತ್ರೆಯಲ್ಲೇ ಇದ್ದಳು ಕಾಟಿ. ಈ ಗಾಡ್ವಿನ್ ಎದುರಿಗೇ ಕುರ್ಚಿ ಹಾಕಿಕೊಂಡು ಕೂತಿದ್ದ. ಅವನ ಕಂಗಳಲ್ಲಿ ಎಂಥದೋ ಹೊಳಪು. ಅದೇನೋ ಆಕರ್ಷಣೆ. ಈ ಹುಡುಗನಿಗೆ ನನ್ನಿಂದ ಸಿಕ್ಕಿದ್ದೇನು? ನನ್ನನ್ನು ಮದುವೆಯಾಗಿ ಇವನಾದರೂ ಏನು ಸುಖಪಟ್ಟ? ಬೈ ಛಾನ್ಸ್ ನಾಳೆಯೋ ನಾಡಿದ್ದೋ ನಾನು ಸತ್ತು ಹೋದರೆ... ಹೀಗೆಲ್ಲ ಯೋಚಿಸಿದ ಕಾಟಿ, ಅರೆ ಮಂಪರಿನಲ್ಲಿದ್ದಾಗಲೇ ಹಾಗೆಲ್ಲಾ ಬಡಬಡಿಸಿಬಿಟ್ಟಳು. ಈ ಹುಡುಗ ಉಕ್ಕಿ ಬರುತ್ತಿದ್ದ ದುಃಖವನ್ನು ತಡೆಹಿಡಿದು, ಅವಳಿಗೆ ಗೊತ್ತಾಗದಂತೆ ಚುಕ್ಕುತಟ್ಟಿ, ಅವಳ ತುಟಿಯ ಅದುರು ನಿಲ್ಲಿಸಿ ತನಗೇ ಎಂಬಂತೆ ಹೇಳಿಕೊಂಡ: ಕಾಟೀ, ನಿನ್ನನ್ನು ತುಂಬ ಪ್ರೀತಿಸ್ತೀನಿ, ನೀನು ಸತ್ತು ಹೋದ ನಂತರವೂ...'

ಅವತ್ತು 2005ರ ಜನವರಿ 15. ಅವತ್ತು ಕಾಟಿ ತುಂಬ ಗೆಲುವಾದಂತೆ ಕಂಡಳು. ಆಕ್ಸಿಜನ್ ಪೈಪ್ ಹಾಕಿಕೊಂಡೇ ಒಂದಿಷ್ಟು ಜಾಸ್ತಿಯೇ ಮಾತಾಡಿದಳು. ನಿಕೀ, ಹನಿಮೂನ್‌ಗೆ ಹೋಗಿಬರೋಣ್ವಾ' ಎಂದಳು. ಕೆನ್ನೆಗೊಂದು ಮುತ್ತಿಡೋ' ಎಂದು ಕೇಳಿದಳು. ಅದೇನೋ ಏನೋ, ಅವನ ಕೈ ಹಿಡಿದು ಕಣ್ಣಿಗೊತ್ತಿಕೊಂಡಳು ನೋಡಿ; ಮರುಕ್ಷಣವೇ ಈ ಹುಡುಗ ಬಿಕ್ಕಳಿಸಿ ಬಿಕ್ಕಳಿಸಿ ಅತ್ತುಬಿಟ್ಟ. ಅವತ್ತು ಅವಳೇ ಸಮಾಧಾನ ಮಾಡಿ, ಹಾಗೇ ನಿದ್ದೆ ಹೋದವಳು. ಬೆಳಗಿನ ಜಾವಕ್ಕೇ ಎದ್ದ ಕಾಟಿ, ಗಾಡ್ವಿನ್‌ಗೆ ಹತ್ತಿರ ಬಾ ಎಂಬಂತೆ ಸಂಜ್ಞೆ ಮಾಡಿದಳು. ಈತ ದಡಬಡಿಸಿ ಹೋದ. ಯಾಕೋ ಉಸಿರಾಡೋಕೆ ಕಷ್ಟ ಆಗ್ತಿದೆ ಅಂದವಳೇ ಅವನ ಎದೆಗೆ ಒರಗಿಕೊಂಡಳು. ಈತ ಅಮ್ಮನಂತೆ ಅವಳ ನೆತ್ತಿ ನೇವರಿಸಿದ. ನಂತರ ಅವಳೊಮ್ಮೆ ಬಿಕ್ಕಳಿಸಿದಂತಾಯಿತು. ಇವನು ಏನೋ ಹೇಳಲು ಹೋದ. ಅಷ್ಟರಲ್ಲಿಯೇ ಆಕೆಯ ಕತ್ತು ಎಡಕ್ಕೆ ವಾಲಿಕೊಂಡಿತು. ಕಥೆಯಾಗಿ ಹೋದಳು ಕಾಟಿ.

« ಲೇಖನದ ಮೊದಲ ಭಾಗ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more