ಉತ್ತಮ ಆಶ್ವಾಸನೆ : ಯಡ್ಡಿ ಭರವಸೆ

Subscribe to Oneindia Kannada
BSY assures better promises for LS election - 2009
ಶಿವಮೊಗ್ಗ, ಫೆ.3 : ಮುಂಬರುವ ಲೋಕಸಭಾ ಚುನಾವಣೆಯ ವೇಳೆಗೆ ತಾವು ಉತ್ತಮ ಆಶ್ವಾಸನೆಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಭಾರೀ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪನವರು ತಮ್ಮ ಮಂತ್ರಿ ಮಂಡಲ ಉತ್ತಮ ಆಶ್ವಾಸನೆಗಳನ್ನು ನೀಡುವಲ್ಲಿ ಇಲ್ಲಿಯವರೆಗೆ ವಿಫಲವಾಗಿರುವುದನ್ನು ಒಪ್ಪಿಕೊಂಡರು.

"ನಾನೂ ಸೇರಿದಂತೆ ನಮ್ಮ ಪಕ್ಷದ ಮಂತ್ರಿಗಳು ಯಾರೂ ಇಲ್ಲಿಯವರೆಗೆ ಒಂದೂ ಉತ್ತಮ ಆಶ್ವಾಸನೆ ನೀಡದೆ ಇರಬಹುದು. ಆದರೆ ನಾವು ಪ್ರಯತ್ನಿಸಿಲ್ಲ ಅಂತ ಯಾರೂ ಹೇಳಲು ಸಾಧ್ಯವಿಲ್ಲ. ಇನ್ನು ಕೆಲವೇ ತಿಂಗಳಲ್ಲಿ ಲೋಕಸಭೆಗೆ ಚುನಾವಣೆಗಳು ನಡೆಯಲಿವೆ. ಅಷ್ಟರಲ್ಲಿ ನಾವು ಅತ್ಯುತ್ತಮ ಗುಣಮಟ್ಟದ ಆಶ್ವಾಸನೆಗಳನ್ನು ತಯಾರಾಗಿಟ್ಟಿರುತ್ತೇವೆ" ಎಂದ ಯಡಿಯೂರಪ್ಪನವರು, ಆಶ್ವಾಸನೆಗಳು ಎಷ್ಟೇ ಪೊಳ್ಳಾಗಿದ್ದರೂ ಅವುಗಳ ಬಗೆಗೆ ಜನರಲ್ಲಿ ನಂಬಿಕೆ ಮೂಡಿಸಲು ಅಹರ್ನಿಶಿ ದುಡಿಯುವುದಾಗಿ ಭರವಸೆ ನೀಡಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಕಾಲದಲ್ಲಿ ನೀಡಿದ್ದ 'ಬೆಂಗಳೂರನ್ನು ಸಿಂಗಪುರವಾಗಿಸುವ' ಆಶ್ವಾಸನೆ ಜನಮನದಲ್ಲಿ ಇನ್ನೂ ಹಸಿರಾಗಿ ಉಳಿದಿದ್ದು ಅನಂತರದ ಆಶ್ವಾಸನೆಗಳ ಗುಣಮಟ್ಟದಲ್ಲಿ ಸಂಪೂರ್ಣ ಕುಸಿತ ಕಂಡುಬಂದಿರುವುದನ್ನು ಇಲ್ಲಿ ಗಮನಿಸಬಹುದು. ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ತಾವೇ ಸ್ವತಃ ಖುದ್ದಾಗಿ ನಿಂತು ಗ್ರಾಮದುದ್ದಕ್ಕೂ ಮಳೆ ಹುಯ್ಯಿಸುವುದಾಗಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಆಶ್ವಾಸನೆ ಜನರನ್ನು ಕೊಂಚಮಟ್ಟಿಗೆ ಸೆಳೆದಿತ್ತಾದರೂ ಈಗ ಅದು ಮರೆತ ಮಾತಾಗಿದೆ.

(ಮಜಾವಾಣಿ ವಾರ್ತೆ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...