ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದುತ್ವ ಪ್ರಯೋಗಶಾಲೆಯಲ್ಲಿ ಮೆಕಾಲೆ ಮಕ್ಕಳು!

By Staff
|
Google Oneindia Kannada News

ಅಹ್ಮದಾಬಾದ್, ಜ. 5 : ನಗರದ ಸುಪ್ರಸಿದ್ಧ ಹಿಂದುತ್ವ ಪ್ರಯೋಗಶಾಲೆಯಲ್ಲಿ ನಿನ್ನೆ ರಾತ್ರಿ ಇಬ್ಬರು ಮೆಕಾಲೆ ಮಕ್ಕಳು ಕಂಡುಬಂದಿದ್ದು ಈ ಸುದ್ದಿ ದೇಶಾದ್ಯಂತ ಅಚ್ಚರಿಗೆ ಕಾರಣವಾಗಿದೆ. ಈ ಆಶ್ಚರ್ಯಕರ ಬೆಳವಣಿಗೆಯಿಂದ ಎಡ ಮತ್ತು ಬಲ ಪಂಥೀಯ ಬುದ್ಧಿಜೀವಿ ವಲಯಗಳು ತಲ್ಲಣಗೊಂಡಿದ್ದು ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಕಂಗೆಟ್ಟಿವೆ ಎನ್ನಲಾಗಿದೆ.

ಈ ವಿಚಾರದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ನಮ್ಮ ಮಿಲಿಟರಿ-ಬಂಡವಾಳಷಾಹಿ ತಜ್ಞ ಡಾ.ಯು.ಆರ್.ಅನಂತ ಮೂರ್ತಿಯವರು ಇದನ್ನು "ಅತ್ಯಂತ ಅಪಾಯಕಾರಿ ಬೆಳವಣಿಗೆ" ಎಂದು ಕರೆದಿದ್ದಾರೆ.

"ತ್ರಿಶೂಲ ಒಂದು ಅಪ್ಪಟ ದೇಸೀ ಸಂಸ್ಕೃತಿಯ ಪ್ರತೀಕ" ಎಂದಿರುವ ಡಾ.ಮೂರ್ತಿಯವರು, "ಇದೇ ತ್ರಿಶೂಲವನ್ನು ಅತ್ಯಾಧುನಿಕ ಲೈಟ್ ವೇಯ್ಟ್ ಕಾರ್ಬನ್ ಫೈಬರ್‌ನಿಂದ ತಯಾರಿಸಿ ಅದಕ್ಕೆ ಇರಿಡಿಯಂ ಕೋಟೆಡ್ ತುದಿಯುಳ್ಳ ಮಹಾನ್ ಮಾರಕಾಸ್ತ್ರವಾಗಿಸುವ ಸಂಶೋಧನೆಯಲ್ಲಿ ಹಿಂದುತ್ವ ಪ್ರಯೋಗಶಾಲೆಯೊಂದಿಗೆ ಅಮೆರಿಕನ್ನರೂ ಕೈಜೋಡಿಸಿರುವುದು ಗ್ಲೋಬಲೈಸೇಷನ್ ಮೂಲಕ ದೇಸೀ ಸಂಸ್ಕೃತಿಯನ್ನು ಸರ್ವನಾಶ ಮಾಡುವ ಅಮೆರಿಕದ ಹುನ್ನಾರಕ್ಕೆ ಒಂದು ಸಾಕ್ಷಿ" ಎಂದಿದ್ದಾರೆ.

ಹಿಂದೊಮ್ಮೆ ಭಾರತದ ಖ್ಯಾತ ಸಾಫ್ಟ್‌ವೇರ್ ಸಂಸ್ಥೆ ಇನ್ಫೋಸಿಸ್ ಇರಾಕ್ ಯುದ್ಧದಲ್ಲಿ ಬಳಸಲು ಅಮೆರಿಕದ ಪೆಂಟಗನ್ನಿಗೆ 500,000 ಚಡ್ಡಿಗಳನ್ನು ರಫ್ತುಮಾಡುವ ಒಳ ಒಪ್ಪಂದ ಮಾಡಿಕೊಂಡಿದ್ದನ್ನು ಡಾ.ಮೂರ್ತಿಯವರು ಸಾಕ್ಷ್ಯಾಧಾರಗಳ ಸಹಿತ ಬಯಲಿಗೆಳೆದದ್ದನ್ನು ಇಲ್ಲಿ ಸ್ಮರಿಸಬಹುದು.


***

"ಅನುಮಾನಾಸ್ಪದ ಬೆಳವಣಿಗೆ"-ಪ್ರೊ.ನರೇಂದ್ರ ಮೂರ್ತಿ : ಮೆಕಾಲೆ ಮಕ್ಕಳು ಒಮ್ಮಿಂದೊಮ್ಮೆಲೆ ಹಿಂದುತ್ವ ಪ್ರಯೋಗಶಾಲೆಯಲ್ಲಿ ಕಂಡು ಬಂದಿರುವುದು, ಹಿಂದುತ್ವ ವಲಯದಲ್ಲಿ ತೀವ್ರ ಶಂಕೆಗೆ ಕಾರಣವಾಗಿದೆ.

ನಮ್ಮ ಪತ್ರಿಕೆಯೊಂದಿಗೆ ಈ ವಿಚಾರದ ಕುರಿತು ಮಾತನಾಡಿದ ಪ್ರಯೋಗಶಾಲೆಯ ಮುಖ್ಯಸ್ಥ ಪ್ರೊ.ನರೇಂದ್ರ ಮೂರ್ತಿ "ಇದೊಂದು ಅನುಮಾನಾಸ್ಪ್ದದ ಬೆಳವಣಿಗೆ" ಎಂದರು.

"ಮೆಕಾಲೆ ಮಕ್ಕಳನ್ನು ನಾವು ನಮ್ಮ ಪ್ರಯೋಗಶಾಲೆಗೆ ಆಹ್ವಾನಿಸಿಯೇ ಇರಲಿಲ್ಲ. ನಮಗೆ ಸಿಕ್ಕಿಬಿದ್ದಾಗ ಅವರು ನಮ್ಮ ಹೆಮ್ಮೆಯ ಸಂಶೋಧನೆಯಾದ ಅತ್ಯಾಧುನಿಕ ತ್ರಿಶೂಲವನ್ನು ಪರಿಶೀಲಿಸುತ್ತಿದ್ದುದು ನಿಜ" ಎಂದು ದೃಢಪಡಿಸಿದ್ದಾರೆ.

"ಆದರೆ, ಇದರ ಹಿಂದೆ ಒಂದು ದೊಡ್ಡ ಷಡ್ಯಂತ್ರವೇ ಇರುವ ಸಂಭವವಿದೆ. ಶಿವಕಾಶಿಯ ಸ್ವದೇಶಿ ತಂತ್ರಜ್ಞಾನದೊಂದಿಗೆ ನಮ್ಮ ಪ್ರಯೋಗಶಾಲೆ ಒಂದು ಭಾರೀ ಗಾತ್ರದ ರಾಕೆಟ್ ನಿರ್ಮಿಸುತ್ತಿದೆ. ಅದರ ಸಹಾಯದಿಂದ ಮಂಗಳ ಗ್ರಹವನ್ನು ಮೂರನೆಯ ಮನೆಯಿಂದ ಹೊರತಳ್ಳಿ ಭಾರತ ದೇಶದ ಕುಜದೋಷವನ್ನು ನಿವಾರಿಸುವ ಅತ್ಯಂತ ಗುಪ್ತ ಯೋಜನೆ ನಮ್ಮದು. ಮೆಕಾಲೆ ಮಕ್ಕಳು ಈ ಭಾರತೀಯ ಸನಾತನ ತಂತ್ರಜ್ಞಾನವನ್ನು ಕದ್ದು ಜಾಗತೀಕರಣದ ಮೂಲಕ ನಮ್ಮ ಯೋಜನೆಗೆ ಅಕ್ಷರಶಃ ನೀರೆರುಚುವ ಯತ್ನದಲ್ಲಿ ತೊಡಗಿರುವ ಸಾಧ್ಯತೆಗಳೂ ಇಲ್ಲದಿಲ್ಲ" ಎಂದರು.

(ಮಜಾವಾಣಿ ತನಿಖಾ ವರದಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X