ಪ್ರಾಣಿಗಳು ಮನುಷ್ಯರನ್ನು ತಿನ್ನುವುದೇಕೆ? ಜಂಗಲ್ ಡೈರಿಯ ಪುಟಗಳು

Posted By: ಗಗನ್ ಪ್ರೀತ್
Subscribe to Oneindia Kannada

ಯಾವುದೇ ಪ್ರಾಣಿ ನರಭಕ್ಷಕವಾದಾಗ ಅದನ್ನು ಕೊಲ್ಲುವುದಕ್ಕೆ ಅನುಮತಿ ಇದೆ. ಅಷ್ಟು ಅಪಾಯಕಾರಿ ಆದ ನಂತರ ಅವುಗಳನ್ನು ಪಳಗಿಸುವುದೋ ಹಾಗೇ ಇರಲು ಬಿಡುವುದೋ ಅಪಾಯಕಾರಿ ಎಂಬುದು ಅದರರ್ಥ. ಹಾಗಂತ ಸಿಂಹವೋ ಹುಲಿಯೋ ಚಿರತೆಯೋ ಇಂಥ ಪ್ರಾಣಿಗಳ ಬೇಟೆಯಾಗಿ ಮೊದಲ ಆಯ್ಕೆ ಖಂಡಿತಾ ಮನುಷ್ಯ ಅಲ್ಲ.

ಅವುಗಳ ಹಸಿವು ತೀರಿಸುವುದಕ್ಕೆ ಅಂತಲೇ ಬೇಟೆಪ್ರಾಣಿಗಳು ಇವೆ. ಮತ್ತು ಅವುಗಳನ್ನು ಭಕ್ಷಿಸಿದಾಗಲೇ ತೃಪ್ತಿ. ಆದರೆ ಕೆಲವು ಸಲ ಪ್ರಾಣಿಗಳ ವಯೋಸಹಜ ಕಾರಣಕ್ಕೆ ಅಥವಾ ಗಾಯಗೊಂಡಾಗ ಬೇಟೆ ಆಡುವುದು ಕಷ್ಟವಾಗುತ್ತದೆ. ಆಗ ಸುಲಭದ ಬೇಟೆಗಳನ್ನು ಹುಡುಕುತ್ತವೆ.[ಭಲೇ ನಿಗೂಢ ಪ್ರಾಣಿ ಚಿರತೆಯ ಕುರಿತು ರೋಚಕ ಮಾಹಿತಿ]

ಆ ಕಾರಣಕ್ಕೆ ಕಾಡಂಚಿನಲ್ಲಿ ಮೇಯಲು ಬರುವ ಜಾನುವಾರುಗಳು, ನಾಯಿ, ಮೇಕೆ-ಕುರಿ, ಮನುಷ್ಯರು ಅವುಗಳಿಗೆ ಆಹಾರ ಆಗುವ ಸಾಧ್ಯತೆಗಳಿವೆ. ಅದರಲ್ಲೂ ವನ್ಯಜೀವಿಗಳು ಸಾಮಾನ್ಯವಾಗಿ ಮನುಷ್ಯರಿಂದ ದೂರವಿರಲು ಬಯಸುತ್ತವೆ. ಮನುಷ್ಯನಿಗೆ ಪ್ರಾಣಿಗಳೆಂದರೆ ಹೇಗೆ ಭಯವಿರುತ್ತದೋ ಹಾಗೆ ಅವುಗಳಿಗೂ ನಾವೆಂದರೆ ಅಷ್ಟೇ ಭಯ.

ಅವುಗಳು ತಮ್ಮ ಅಥವಾ ತಮ್ಮ ಮರಿಗಳ ಜೀವಕ್ಕೆ ಅಪಾಯವೆನಿಸಿದಾಗ ಮಾತ್ರ ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಹೀಗಿದ್ದರೂ ಹುಲಿ ಅಥವಾ ಚಿರತೆಗಳು ಮನುಷ್ಯರನ್ನು ಆಹಾರಕ್ಕಾಗಿ ಬೇಟೆಯಾಡಿರುವ ಹಲವು ನಿದರ್ಶನಗಳಿವೆ. ಗಾಯಗೊಂಡ ಅಥವಾ ವಯಸ್ಸಾದ ಸಂಧರ್ಭದಲ್ಲಿ ಅವುಗಳಿಗೆ ಬೇರೆ ಪ್ರಾಣಿಗಳನ್ನು ಬೇಟೆಯಾಡಲು ಆಗುವುದಿಲ್ಲ. ಇಂತಹ ಸಂಧರ್ಭಗಳಲ್ಲಿ ಅವುಗಳು ಮನುಷ್ಯರನ್ನು ಬೇಟೆಯಾಡಿಬಿಡುತ್ತವೆ.[ರಾಮನಗರದ ರಣಹದ್ದು, ರಾಮ ದೇಗುಲ, ವಾರಾಂತ್ಯದ ಚಾರಣ]

ಅವುಗಳೇ ಮ್ಯಾನ್ ಈಟರ್ಸ್

ಅವುಗಳೇ ಮ್ಯಾನ್ ಈಟರ್ಸ್

ರಾಜಸ್ತಾನದ ರಣಥಂಬೋರ್ ಕಾಡಿನಲ್ಲಿ ಉಸ್ತಾದ್ ಎಂಬ ಹಿರಿಯ ಗಂಡು ಹುಲಿ ಇತ್ತು. ಈ ಹುಲಿಯು ಸಫಾರಿ ಗಡಿಗಳನ್ನು ಲೆಕ್ಕಿಸದೆ ಎದುರಿಗೇ ನಡೆದುಬರುತ್ತಿತ್ತು. ಹುಲಿಗಳು ತಮ್ಮ ಬೇಟೆಯನ್ನು ರಕ್ಷಿಸಿಕೊಳ್ಳಲು ಬೇಲಿಗಳಿಗೆ ಎಳೆದೊಯ್ದುಬಿಡುತ್ತದೆ. ಆದರೆ ಈ ಹುಲಿ ತನ್ನ ಬೇಟೆಯನ್ನು ರಸ್ತೆಗೆ ಎಳೆತಂದು ಗತ್ತಿನಿಂದ ತಿನ್ನುತ್ತಿತ್ತು. ಪ್ರವಾಸಿಗರಲ್ಲಿ ಈ ಹುಲಿ ತುಂಬಾ ಪ್ರಸಿದ್ಧವಾಗಿತ್ತು. ಎರಡು ವರ್ಷಗಳ ಹಿಂದೆ ಈ ಹುಲಿಯನ್ನು ಮೃಗಾಲಯಕ್ಕೆ ಹಾಕಲಾಯಿತು. ವಯಸ್ಸಾದ ಕಾರಣ ಬೇಟೆಯಾಡಲು ಸಾಧ್ಯವಾಗದೆ ನಾಲ್ಕು ಜನರನ್ನು ಅದು ಕೊಂದಿತ್ತು. ಹಾಗೆ ಚಿರತೆ ಅಥವಾ ಹುಲಿಗಳು ಮನುಷ್ಯರನ್ನು ಕೊಲ್ಲಲು ಶುರುವಾದಾಗ ಅವುಗಳನ್ನು ಮ್ಯಾನ್ ಈಟರ್ಸ್ (ನರಭಕ್ಷಕ) ಎಂದು ಕರೆಯಲಾಗುತ್ತದೆ.

ರುದ್ರಪ್ರಯಾಗದ ನರಭಕ್ಷಕ

ರುದ್ರಪ್ರಯಾಗದ ನರಭಕ್ಷಕ

ಉತ್ತರಾಖಂಡ್ ನ ರುದ್ರಪ್ರಯಾಗ್ ಎಂಬ ಕಾಡಿನಲ್ಲಿದ್ದ ಗಂಡು ಚಿರತೆಯೊಂದು 1920ನೇ ಇಸವಿಯಲ್ಲಿ 125 ಜನರನ್ನು ಕೊಂದಿತ್ತು. ಕೇದಾರ್ ನಾಥ್ ಮತ್ತು ಬದ್ರಿನಾಥ್ ದೇವಸ್ಥಾನಕ್ಕೆಂದು ಬರುತ್ತಿದ್ದ ಯಾತ್ರಿಗಳನ್ನು ಈ ಚಿರತೆ ಕೊಂದು ತಿನ್ನಿತ್ತಿತ್ತು. ಯಾರು ಒಂಟಿಯಾಗಿ, ನಿರಾಯುಧವಾಗಿ ಸಿಕ್ಕುತ್ತಾರೋ ಅಂತಹವರನ್ನೇ ಅದು ಬೇಟೆಯಾಡುತ್ತಿತ್ತು. ಅದಕ್ಕೆ ರೂಢಿಯಾಗುತ್ತಿದ್ದಂತೆ ಇರುಳಿನ ಹೊತ್ತು ಅಸುಪಾಸಿನ ಹಳ್ಳಿಗಳಿಗೆ ನುಗ್ಗಿ ಮನೆಯಲ್ಲಿ ಮಲಗಿದ್ದ ಮಕ್ಕಳನ್ನು ಎಳೆದೊಯ್ಯುತ್ತಿತ್ತು. ಈ ಚಿರತೆಯು ಚಿಕ್ಕ ವಯಸ್ಸಿನಿಂದಲೇ ಮನುಷ್ಯರನ್ನು ಕೊಲ್ಲಲು ಆರಂಭಿಸಿತ್ತು.

ಚಿಕ್ಕವಯಸ್ಸಿನಲ್ಲೇ ನರಭಕ್ಷಕ

ಚಿಕ್ಕವಯಸ್ಸಿನಲ್ಲೇ ನರಭಕ್ಷಕ

ಇದಕ್ಕೆ ಕಾರಣ ಏನೆಂದರೆ ಅಲ್ಲಿನ ಜನರು ಸಾಂಕ್ರಾಮಿಕ ರೋಗಕ್ಕೀಡಾಗಿ ಸಾಯುತ್ತಿದ್ದರು. ಶವಗಳನ್ನು ಕಾಡಿನ ಬಳಿ ತಂದು ಹಾಕುತ್ತಿದ್ದರು. ಆ ದೇಹಗಳನ್ನು ತಿನ್ನುತ್ತಿದ್ದ ಈ ಚಿರತೆ ಮನುಷ್ಯರನ್ನು ಬೇಟೆಯಾಡಲು ಶುರುಮಾಡಿತು. ಹೀಗೆ ಸುಮಾರು 6 ವರ್ಷಗಳ ಕಾಲ ಮನುಷ್ಯರನ್ನು ಈ ಚಿರತೆ ಬೇಟೆಯಾಡಿತು. ಗೂರ್ಖಾಗಳು ಮತ್ತು ಬ್ರಿಟಿಷ್ ಸೈನಿಕರು ಇದನ್ನು ಕೊಲ್ಲಲು ಹಲವು ಬಾರಿ ಪ್ರಯತ್ನಿಸಿದರೂ ತಪ್ಪಿಸಿಕೊಳ್ಳುತ್ತಿತ್ತು. ಕೊನೆಗೆ ಬ್ರಿಟಿಷ್ ಬೇಟೆಗಾರ ಜಿಮ್ ಕಾರ್ಬೆಟ್ 1926ರಲ್ಲಿ ಈ ಚಿರತೆಯನ್ನು ಕೊಂದು ಹಾಕಿದರು. ಈ ಬಗ್ಗೆ ಜಿಮ್ ಕಾರ್ಬೆಟ್ ತನ್ನ 'ಮ್ಯಾನ್ ಈಟಿಂಗ್ ಲೆಪರ್ಡ್ ಆಫ್ ರುದ್ರಪ್ರಯಾಗ್' ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಚಂಪಾವತ್ ನ ನರಭಕ್ಷಕ ಹೆಣ್ಣು ಹುಲಿ

ಚಂಪಾವತ್ ನ ನರಭಕ್ಷಕ ಹೆಣ್ಣು ಹುಲಿ

ಇನ್ನೊಂದು ಮ್ಯಾನ್ ಈಟರ್ (ನರಭಕ್ಷಕ) ಚಂಪಾವತ್ ನ ಹೆಣ್ಣು ಹುಲಿ. ನೇಪಾಳದ ಬೇಟೆಗಾರನೊಬ್ಬ ಈ ಹುಲಿಯನ್ನು ಬೇಟೆಯಾಡುವಾಗ ಗುಂಡೊಂದು ಹಲ್ಲಿಗೆ ತಾಕಿ, ಇದರ ಕೋರೆಗಳು ಮುರಿದುಬಿಟ್ಟಿದ್ದವು. ಅವನಿಂದ ತಪ್ಪಿಸಿಕೊಂಡ ಈ ಹುಲಿ ಮನುಷ್ಯರನ್ನು ಬೇಟೆಯಾಡಲು ಶುರು ಮಾಡಿತು. ನೇಪಾಳದ ಸೈನಿಕರು ಇದನ್ನು ಕೊಲ್ಲಲು ಪ್ರಯತ್ನಿಸಿದಾಗ ಅಲ್ಲಿಂದ ತಪ್ಪಿಸಿಕೊಂಡು ಭಾರತದ ಕಡೆಗೆ ಬಂದುಬಿಟ್ಟಿತು. ಮತ್ತೆ ಮನುಷ್ಯರನ್ನು ಬೇಟೆಯಾಡಲು ಶುರು ಮಾಡಿತು.

436 ಮಂದಿಯನ್ನು ಕೊಂದಿತ್ತು

436 ಮಂದಿಯನ್ನು ಕೊಂದಿತ್ತು

ಸಮಯ ಕಳೆಯುತ್ತಿದ್ದಂತೆ ಇದು ಹಗಲು ವೇಳೆಯಲ್ಲೇ ಹಳ್ಳಿಗಳಿಗೆ ನುಗ್ಗಿ ಮನುಷ್ಯರನ್ನು ಬೇಟೆಯಾಡುತಿತ್ತು. ಆ ಹುಲಿ ಘರ್ಜನೆಗೆ ಹೆದರಿ ಜನರು ಮನೆಯಿಂದ ಆಚೆಗೆ ಬರುತ್ತಿರಲಿಲ್ಲ. 1907ರಲ್ಲಿ ಒಮ್ಮೆ ಆ ಹುಲಿ 16 ವರ್ಷದ ಹುಡುಗಿಯನ್ನ ಕೊಂದು ಕಾಡಿಗೆ ಎಳೆದುಕೊಂಡು ಹೋಗಿತ್ತು. ಈ ಸಂದರ್ಭದಲ್ಲಿ ಅದು ಬಿಟ್ಟ ರಕ್ತದ ಗುರುತನ್ನು ಹಿಂಬಾಲಿಸಿ ಜಿಮ್ ಕಾರ್ಬೆಟ್ ಅದನ್ನು ಕೊಂದರು. ಆದರೆ ಅಷ್ಟು ಹೊತ್ತಿಗಾಗಲೇ ಅ ಹೆಣ್ಣು ಹುಲಿ 436 ಮಂದಿಯನ್ನು ಕೊಂದಿತ್ತು.

ಸುಂದರ್ಬನ್ಸ್ ಕಾಡಿನ ಹುಲಿಗಳಿಗೆ ರೋಷಾವೇಶ ಹೆಚ್ಚು

ಸುಂದರ್ಬನ್ಸ್ ಕಾಡಿನ ಹುಲಿಗಳಿಗೆ ರೋಷಾವೇಶ ಹೆಚ್ಚು

ಬಂಗಾಳದ ಸುಂದರ್ಬನ್ಸ್ ಕಾಡು ಮನುಷ್ಯರನ್ನು ಕೊಲ್ಲುವ ಹುಲಿಗಳಿಗೆ ಹೆಸರಾಗಿದೆ. ಇಲ್ಲಿನ ಜಾಗದಲ್ಲಿ ಉಪ್ಪು ನೀರಿರುವ ಕಾರಣ ಹುಲಿಗಳು ಹೆಚ್ಚು ರೋಷಾವೇಶದಿಂದ ಇರುತ್ತವೆ. ವರ್ಷದಲ್ಲಿ 50 ರಿಂದ 250 ಜನರ ಮೇಲೆ ಹುಲಿಗಳ ದಾಳಿಯು ಇಲ್ಲಿ ನಡೆಯುತ್ತದೆ. ಹುಲಿ, ಚಿರತೆಗಳು ಎದುರಿಂದ ದಾಳಿ ಮಾಡುವುದಿಲ್ಲ. ಹಿಂದಿನಿಂದ ಅಥವಾ ಪಕ್ಕದಿಂದ ಜಿಗಿದು ಬೇಟೆಯಾಡಿ ಬಿಡುತ್ತವೆ. ಅವುಗಳ ಇರುವಿಕೆ ಗೋಚರವಾದಲ್ಲಿ ತಪ್ಪಿಸಿಕೊಂಡುಬಿಡುತ್ತವೆ.

ಮನುಷ್ಯರ ಮುಖ ಹೋಲುವ ಮುಸುಕು

ಮನುಷ್ಯರ ಮುಖ ಹೋಲುವ ಮುಸುಕು

ಬಂಗಾಳದ ಜನರು ಕಾಡಿಗೆ ಹೋಗಬೇಕಾದಾಗ ತಲೆಯ ಹಿಂಭಾಗಕ್ಕೆ ಮನುಷ್ಯರ ಮುಖ ಹೋಲುವ ಮುಸುಕನ್ನು ಹಾಕಿಕೊಳ್ಳುತ್ತಾರೆ. ಇದರಿಂದ ಹುಲಿಗಳು ಗೊಂದಲಗೊಂಡು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಅಂದಹಾಗೆ ಈ ತಂತ್ರ ಅನುಸರಿಸಿದವರ ಮೇಲೆ ಈ ಮೂರು ವರ್ಷದಲ್ಲಿ ಹುಲಿ ಬೇಟೆಯಾಡಿಲ್ಲ. ಬೇಟೆಗಾರರ ಪ್ರಕಾರ ಇಂತಹ ನರಭಕ್ಷಕ ಹುಲಿ, ಚಿರತೆಗಳಿಗೆ ಯಾರು ಅವುಗಳನ್ನು ಬೇಟೆಯಾಡಲು ಬಂದಿರುವರೆಂದು ತಿಳಿದುಬಿಡುತ್ತದೆ. ಅಸಹಾಯಕರನ್ನು ಮಾತ್ರ ಬೇಟೆಯಾಡಿ, ಬೇಟೆಗಾರರಿಂದ ತಪ್ಪಿಸಿಕೊಂಡುಬಿಡುತ್ತವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
How and why animals become man eaters? Wild life photographer, Oneindia Kannada Columnist Gagan Preeth probes.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ