ಸಫಾರಿಗೆ ಹೋಗುವ ಮುನ್ನ ಏನೇನು ಸಿದ್ಧತೆ ಮಾಡಿಕೊಳ್ಳಬೇಕು?
ಸಫಾರಿಗೆ ಯಾವಾಗ ಹೋಗಬೇಕು, ಯಾವ ಸಮಯದಲ್ಲಿ ಹೋಗಬೇಕು, ಏನೇನು ಸಿದ್ಧತೆ ಮಾಡಿಕೊಳ್ಳಬೇಕು, ಯಾವ್ಯಾವ ಸೂಚನೆಗಳನ್ನು ಪಾಲಿಸಬೇಕು, ಎಂಥ ಬಟ್ಟೆ ತೊಡಬೇಕು, ಯಾವ್ಯಾವ ನಿಯಮಗಳನ್ನು ಪಾಲಿಸಬೇಕು ಎಂಬಿತ್ಯಾದಿ ವಿವರಗಳನ್ನು ತಿಳಿಸಲು ಯತ್ನಿಸಿದ್ದೇನೆ.
ವಾರಾಂತ್ಯವಾಗಲಿ, ಕ್ರಿಸ್ಮಸ್ ಹಬ್ಬದ ರಜಾದಿನಗಳು ಬರಲಿ ಹೆಗಲಿಗೆ ಬ್ಯಾಗ್ ಏರಿಸಿಕೊಂಡು ರೆಸಾರ್ಟಿಗೋ, ಸೈಟ್ ಸೀಯಿಂಗಿಗೋ ಮತ್ತೆಲ್ಲಿಗೋ ಹೊರಟುಬಿಡುತ್ತೇವೆ. ಆದರೆ, ಅವಿಸ್ಮರಣೀಯ ಅನುಭವ ಕೊಡುವ, ಅನೂಹ್ಯ ಜಗತ್ತನ್ನು ನಮ್ಮ ಮುಂದೆ ತೆರೆದಿಡುವ, ಅಗಾಧವಾದ ರಹಸ್ಯವನ್ನು ತನ್ನ ಮಡಿಲಿನಲ್ಲಿ ಬಚ್ಚಿಟ್ಟುಕೊಂಡಿರುವ ಕಾಡಿಗೆ ಹೋಗಿದ್ದಿರಾ?
ಆದರೆ, ಬೇರೆ ಸ್ಥಳಗಳಿಗೆ ಹೋದಂತೆ ಅರಣ್ಯಕ್ಕೆ ಕಾಲಿಡಲು ಆಗುವುದಿಲ್ಲ. ಅದಕ್ಕೆ ಸಾಕಷ್ಟು ಸಿದ್ಧತೆ ಬೇಕು. ಭೌತಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಸಾಕಷ್ಟು ಸಿದ್ಧರಾಗಿರಬೇಕು. ಅದರಲ್ಲೂ ಸಫಾರಿಗೆ ಹೋದಾಗ ಸಾಕಷ್ಟು ಸಿದ್ಧತೆ ಮಾಡಿಕೊಳ್ಳದೆ ಹೋದರೆ ಅಥವಾ ಕೆಲ ಸೂಚನೆಗಳನ್ನು ಪಾಲಿಸದೆ ಹೋದರೆ ಪ್ರಾಣಿಗಳು ಸಿಗುವುದು ಅಪರೂಪ.
ಹೀಗಾಗಿ, ಸಫಾರಿಗೆ ಯಾವಾಗ ಹೋಗಬೇಕು, ಯಾವ ಸಮಯದಲ್ಲಿ ಹೋಗಬೇಕು, ಏನೇನು ಸಿದ್ಧತೆ ಮಾಡಿಕೊಳ್ಳಬೇಕು, ಯಾವ್ಯಾವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಎಂಥ ಬಟ್ಟೆ ತೊಡಬೇಕು, ಯಾವ್ಯಾವ ನಿಯಮಗಳನ್ನು ಪಾಲಿಸಬೇಕು ಎಂಬಿತ್ಯಾದಿ ವಿವರಗಳನ್ನು ತಿಳಿಸಲು ಯತ್ನಿಸಿದ್ದೇನೆ.

ವನ್ಯಜೀವಿಗಳ ಚಲನವಲನ, ಹಾವಭಾವ ತಿಳಿದಿದ್ದರೆ ಉತ್ತಮ
ಕಾಡಿನಲ್ಲಿ ಕಾಲಿಡುವ ಮುನ್ನ ವನ್ಯಜೀವಿಗಳ ಚಲನವಲನ, ಹಾವಭಾವ, ಅವುಗಳ ಜೀವನಕ್ರಮದ ಬಗ್ಗೆ ತಿಳಿದುಕೊಂಡಿದ್ದರೆ ಅದರ ಅನುಭವವೇ ಬೇರೆ ರೀತಿಯದ್ದು. ಸಫಾರಿಗೆ ಅತ್ಯುತ್ತಮ ಸೀಸನ್ ಎಂದರೆ ಅಕ್ಟೋಬರ್ ನಿಂದ ಮಾರ್ಚ್ ವರೆಗೆ. ಅಕ್ಟೋಬರ್ ನಂತರ ಮಳೆ ನಿಂತಿರುತ್ತದೆ ಹಾಗು ಕಾಡು ಹಸಿರಾಗಿರುತ್ತದೆ.

ಕೂಡುವಿಕೆಯ ಸೀಸನ್ ಕೂಡ ಹೌದು
ಚುಮುಚುಮು ಚಳಿಯಲ್ಲಿ ಪ್ರಾಣಿಗಳು ಕೂಡ ಹೆಚ್ಚಿನ ಚಟುವಟಿಕೆಯಿಂದ ಇರುತ್ತವೆ. ಇದು ಹುಲಿಗಳ ಕೂಡುವಿಕೆಯ ಸೀಸನ್ ಕೂಡ ಹೌದು. ಹಾಗಾಗಿ, ನಮಗೆ ಕಾಣಿಸಿಕೊಳ್ಳಬಹುದಾದ ಸಾಧ್ಯತೆ ಹೆಚ್ಚಿರುತ್ತದೆ. ಬೇಸಿಗೆಯಲ್ಲಿ ಕಾಡಿನಲ್ಲಿ ನೀರು ಕಡಿಮೆಯಾಗಿರುವುದರಿಂದ ಹುಲಿಗಳು ಸಫಾರಿಯ ದಾರಿಯಲ್ಲಿರುವ ನೀರಿನ ತಾಣದ ಬಳಿ ನೀರು ಕುಡಿಯಲು ಬರುತ್ತವೆ.

ಒಂದೂ ಹುಲಿ ಕಂಡಿರಲಿಲ್ಲವಂತೆ
ಒಮ್ಮೆ ಏನಾಯಿತೆಂದರೆ, ಒಂದು ವೈಲ್ಡ್ ಲೈಫ್ ಫೊಟೋಗ್ರಫರ್ಸ್ ತಂಡವನ್ನು ನಮ್ಮ ಕರ್ನಾಟಕದಲ್ಲಿರುವ ಬಂಡೀಪುರಕ್ಕೆ ಕರೆದುಕೊಂಡು ಹೊಗಿದ್ದೆ. ಅವರು ಕಾಡೊಳಗೆ ಹೋಗುವ ಮೊದಲೇ ತಾವುಗಳು ಎಷ್ಟು ದುರಾದೃಷ್ಟವಂತರು ಎಂದು ಹಳಹಳಿಸುತ್ತಿದ್ದರು. ರಾಜಸ್ತಾನದಲ್ಲಿರುವ ರಣಥಂಬೊರ್ ನ್ಯಾಷನಲ್ ಪಾರ್ಕಿನಲ್ಲಿ ಎಂಟು ಬಾರಿ ಸಫಾರಿ ಮಾಡಿದರೂ ಒಂದೂ ಹುಲಿ ಕಂಡಿರಲಿಲ್ಲವಂತೆ.

ಕೊನೆಗೂ ಹುಲಿ ಸಿಕ್ಕೇಬಿಟ್ಟಿತು!
ಬಂಡೀಪುರದಲ್ಲೂ ಸಫಾರಿ ಮಾಡುವಾಗಲೂ ಇದೇ ರಾಗ. ಅವರಿಗೆ ಸುಮ್ಮನಿರಲು ಹೇಳಿ, ಅವರ ಜೀಪಿನ ಗೈಡ್ ಅಗಿದ್ದ ನಾನು, ಕೆಲವು ಸೂಕ್ಷ್ಮವಾದ ಸೂಚನೆಗಳನ್ನು ನೀಡುತ್ತಾ ಹೊರಟೆ. ಕೊನೆಗೂ ಹುಲಿ ಸಿಕ್ಕೇಬಿಟ್ಟಿತು! ನಮ್ಮ ಎದುರಿಗೇ ಬಂದು, ಪಕ್ಕದಲ್ಲೆ ನಡೆದು ಹೊಯಿತು! ಎಲ್ಲರೂ ಮೂಕವಿಸ್ಮಿತರಾಗಿದ್ದರು! ಹಾಗಿದ್ದರೆ, ಆ ಸೂಚನೆ ಯಾವುವು? ಹೇಗೆ ಸಫಾರಿಗೆ ತಯ್ಯಾರಿ ಮಾಡಿಕೊಳ್ಳಬೇಕು?

ಯಾವ ರೀತಿಯ ತಯಾರಿ ಮಾಡಿಕೊಳ್ಳಬೇಕು?
1. ಸಫಾರಿಗೆ ಹೋಗುವ ಮುನ್ನ ಮಿತವಾದ ಆಹಾರ ಸೇವಿಸಿ, ಸಿಕ್ಕ ಸಿಕ್ಕಿದ್ದು ತಿಂದು ಹೊಟ್ಟೆ ಕೆಡುವಂತೆ ಮಾಡಿಕೊಳ್ಳಬೇಡಿ.
2. ಛಾಯಾಗ್ರಹಣಕ್ಕೆ ಹೋಗುತಿದ್ದ ಸಂದರ್ಭದಲ್ಲಿ ನಿಮ್ಮ ಬ್ಯಾಟರಿ ಪೂರ್ತಿ ಚಾರ್ಚ್ ಹಾಗೂ ಮೆಮೊರಿ ಕಾರ್ಡ್ ಖಾಲಿ ಇರುವಂತೆ ನೋಡಿಕೊಳ್ಳಿ.
3. ನಿಮ್ಮ ಬಟ್ಟೆ ಕ್ಯಾಮೊಪ್ಲಾಜ್ ಆಗಿದ್ದಲ್ಲಿ ಸೂಕ್ತ. ಇಲ್ಲದಿದ್ದಲ್ಲಿ ಹಸಿರು ಅಥವಾ ಕಂದು ಬಣ್ಣವಾಗಿರಲಿ, ಎದ್ದು ಕಾಣುವಂತ ಬಣ್ಣಗಳು ಬೇಡ.
4. ನೀರು ಹಾಗೂ ಕ್ಯಾಪ್ ಇಟ್ಟುಕೊಳ್ಳಿ.
5. ನಿಮ್ಮ ಮೊಬೈಲ್ ಸ್ವಿಚ್ ಆಫ್ ಆಗಿರಲಿ.

ಸೂಚನೆಗಳ ಜಾಡು ಹಿಡಿದು
ಕಾಡಿನಲ್ಲಿ ನೀವು ಹೋಗುತ್ತಿದ್ದಂತೆ ನಮಗೆ ಪ್ರಾಣಿಗಳ ಚಟುವಟಿಕೆಯ ಹಲವಾರು ಸೂಚನೆಗಳು ನಮಗೆ ಕಂಡುಬರುತ್ತವೆ. ಕಾಡಿನಲ್ಲಿ ಪ್ರಾಣಿಗಳು ಕಾಣುವುದು ಅದೃಷ್ಟ ಎಂದು ಹೇಳುತ್ತಾರೆ. ಹೌದು, ಹಾಗೆಂದು ಸುಮ್ಮನೆ ಕಾಡಿನಲ್ಲಿ ಸುತ್ತುವುದಲ್ಲ. ಅವುಗಳು ಕೊಡುವ ಸೂಚನೆಗಳ ಜಾಡು ಹಿಡಿದು ಹೋದಲ್ಲಿ ಅವುಗಳನ್ನು ನೋಡುವ ಸಾಧ್ಯತೆ ತೀರ ಹೆಚ್ಚಾಗುತ್ತದೆ.
ಇವುಗಳು ಕೂಡ ನಿಮ್ಮ ಗಮನದಲ್ಲಿರಲಿ
1. ಪಗ್ ಮಾರ್ಕ್ (Pug mark) : ಹುಲಿ, ಹಾಗೂ ಚಿರತೆಯ ಹೆಜ್ಜೆ ಗುರುತಿಗೆ ಪಗ್ ಮಾರ್ಕ್ ಎಂದು ಕರೆಯುತ್ತಾರೆ. ಚಿರತೆಯ ಹೆಜ್ಜೆ ಗುರುತು ಚೌಕಾಕಾರವಾಗಿದ್ದು, ಅದರ ಪಾದದಿಂದ ಬೆರಳಿಗೆ ಹೆಚ್ಚಿನ ಅಂತರವಿರುತ್ತದೆ. ಹುಲಿಯ ಹೆಜ್ಜೆಯ ಗಾತ್ರ ದೊಡ್ಡದಾಗಿರುತ್ತದೆ. ಹೆಜ್ಜೆ ಗುರುತಿನ ಮೂಲಕ ಅದು ಯಾವ ಪ್ರಾಣಿ, ಅದರ ಲಿಂಗ ಹಾಗೂ ವಯಸ್ಸು ಎಲ್ಲವೂ ತಿಳಿಯಬಹುದು. ಹಾಗಾಗಿ, ನಿಮಗೆ ಸಫಾರಿಯಲ್ಲಿ ಹೆಜ್ಜೆ ಗುರುತು ಕಂಡಾಗ. ಅದು ಯಾವ ಪ್ರಾಣಿ ಎಂದು ತಿಳಿದು ಅದು ಎಲ್ಲಿಗೆ ಹೋಗಿರಬಹುದೆಂದು ಊಹಿಸಬಹುದು.
2. ಅಲಾರಾಂ ಕಾಲ್ : ಸಿಂಗಳೀಕ ಹಾಗೂ ಜಿಂಕೆಗಳು ಹುಲಿ ಅಥವಾ ಚಿರತೆ ಇರುವ ಅರಿವಾದಲ್ಲಿ ಎಚ್ಚರಿಕೆಯ ಕರೆ ಕೊಡುತ್ತವೆ. ಇದನ್ನು ಅಲರ್ಟ್ ಕಾಲ್ ಅಥವಾ ಅಲಾರಾಂ ಕಾಲ್ ಎಂದು ಕರೆಯುತ್ತೇವೆ. ಈ ಕರೆಯು ನಮಗೆ ಕೇಳಿಸಿದ್ದಲ್ಲಿ ಆ ಜಾಗಕ್ಕೆ ಹೋಗಬೇಕು. ಅಲ್ಲಿ ನಮಗೆ ಹುಲಿ ಅಥವಾ ಚಿರತೆ ಕಾಣುವ ಸಾಧ್ಯತೆ ಹೆಚ್ಚಿರುತ್ತದೆ.
3. ಪ್ರಾಣಿಗಳನ್ನು ಕೊಂದ ಜಾಗ : ಚಿರತೆ ಚಿಕ್ಕ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಸಾಮಾನ್ಯವಾಗಿ ಚಿರತೆ ತನ್ನ ಬೇಟೆಯನ್ನು ರಕ್ಷಿಸಲು ಮರದ ಮೇಲೆ ಎಳೆದೊಯ್ಯುತ್ತವೆ. ಹುಲಿಗಳು ಜಿಂಕೆ ಅಥವಾ ಕಾಡೆಮ್ಮೆಯನ್ನು ಬೇಟೆಯಾಡುತ್ತವೆ. ಆ ಸಂದರ್ಭದಲ್ಲಿ ಅವುಗಳು ಅದೇ ಜಾಗದಲ್ಲಿದ್ದು, ತಮ್ಮ ಬೇಟೆಯನ್ನು ರಕ್ಷಿಸಿಕೊಳ್ಳುತ್ತವೆ. ಹಾಗಾಗಿ, ಇಂತಹ ಜಾಗದಲ್ಲಿದ್ದು, ಹುಡುಕುವುದರಿಂದ ನಾವು ನಮಗೆ ಹುಲಿ ಅಥವಾ ಚಿರತೆಯನ್ನು ನೋಡುವ ಅವಕಾಶವಿರುತ್ತದೆ.
ಈ ಮೇಲಿನ ಎಲ್ಲಾ ಅಂಶಗಳನ್ನು ಬಿಟ್ಟು ಅವು ಮಾಡುವ ಘರ್ಜನೆ, ಅದರ ಮಲ ಮತ್ತು ಮರಕ್ಕೆ ಪರಚಿ ಮಾಡುವ ಗುರುತುಗಳಿಂದಲೂ ನಾವು ಅವುಗಳನ್ನು ಹುಡುಕಬಹುದು. ಸಫಾರಿಯಲ್ಲಿ ನಿಶ್ಯಬ್ದತೆಯನ್ನು ಕಾಪಾಡುತ್ತಾ, ತಾಳ್ಮೆಯಿಂದ ಇದ್ದಲ್ಲಿ ನಮಗೆ ಉತ್ತಮ ಅನುಭವ ದೊರಕುವುದರಲ್ಲಿ ಸಂಶಯವಿಲ್ಲ.












Click it and Unblock the Notifications