ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆತನ ಬಿಟ್ಟು ಹೊಸತನಕ್ಕೆ ತೆರೆದುಕೊಂಡಿರುವ ಅಜ್ಜಿಯರು

By ಜಯನಗರದ ಹುಡುಗಿ
|
Google Oneindia Kannada News

ಹೋದ ವಾರ ಲಿಂಡಾ ಅಜ್ಜಿಯ ಜೀವನ ಪ್ರೀತಿ ಬಗ್ಗೆ ಸುಮಾರು ಜನರು ವಿಚಾರಿಸಿದ್ದರು. ನಮ್ಮ ಮನೆಯೊಡತಿ ಅಜ್ಜಿಯ ಬಗ್ಗೆ ವಿಚಾರಿಸುತ್ತಿದ್ದೆ. ಹೀಗೆ ಮಾತಾಡುವಾಗಲೇ ಚಂಪಕಾ ಅಜ್ಜಿ ಮಾವಿನಕಾಯಿ ಚಟ್ನಿ ಮಾಡಿಕೊಟ್ಟರು. ಹೋದ ವರ್ಷ ಇದೇ ಸಮಯಕ್ಕೆ ನಾ ಬಾರ್ಸಿಲೋನಾದಲ್ಲಿದ್ದ ಕಾರಣ ಅಜ್ಜಿಗೆ ಅವರ ಚಟ್ನಿಯ ಬಟವಾಡೆ ಮಾಡಲು ಸಾಧ್ಯವಾಗಲ್ಲಿಲ್ಲ. ಈ ವರ್ಷ ಮಾಡಿ ಕಳಿಸಿದ್ದರು. ಮತ್ತೆಲ್ಲೋ ಮಾಡಿದ ಹಾಲುಬಾಯಿ ತಿಂದು ಪ್ರೇಮ ಅಜ್ಜಿ ಇದನ್ನ ಮಾಡಿ ಸುಮಾರು ದಿವಸ ಆಯ್ತು ಎಂದು ಮನದಲ್ಲಿಯೇ ಯೋಚಿಸಿ ಕೂತಿದ್ದೆ.

ತಂಗಿ ಮತ್ತು ನಾನು ತರಕಾರಿ ಕೊಳ್ಳಲು ಜಯನಗರದ ಮಾರುಕಟ್ಟೆಗೆ ಹೋದಾಗ ಜಾನು ಅಜ್ಜಿಯ ಮನೆ ಕಂಡು "ಛೇ ಇನ್ನೂ ಜಾನೂ ಅಜ್ಜಿ ಇರಬೇಕಿತ್ತು ಕಣೆ" ಎಂದು ಇಬ್ಬರು ಒಟ್ಟಿಗೆ ಅಂದು ಮುಂದೆ ಸಾಗಿದ್ವಿ. ಹೀಗೆ ಜೀವನದಲ್ಲಿ ನಾನು ತುಂಬಾ ಬದಲಾವಣೆಯನ್ನ ಕಂಡಿದ್ದು ಅಜ್ಜಿಯರಲ್ಲಿಯೇ. ಅಪ್ಪ ಅಮ್ಮ ಅಥವ ಅವರ ಜನರೇಷನ್ ಗೆ ಬದಲಾವಣೆ ಅನಿವಾರ್ಯ ಅತ್ಯಗತ್ಯ. ಆದರೆ ಈ ಅಜ್ಜಿ ತಾತಂದಿರ ಪ್ರೀತಿಯ ಬದಲಾವಣೆ ನಿಜ ಆಶ್ಚರ್ಯಚಕಿತವಾದದ್ದೇ.

ಜರ್ಮನ್ ಅಜ್ಜ ಕತಲಾನ್ ಅಜ್ಜಿಯ ಅಮರ ಪ್ರೇಮ!ಜರ್ಮನ್ ಅಜ್ಜ ಕತಲಾನ್ ಅಜ್ಜಿಯ ಅಮರ ಪ್ರೇಮ!

ನಾನು ಅಜ್ಜಿ ತಾತರೊಟ್ಟಿಗೆ ಬೆಳೆದ್ದದ್ದು. ನನ್ನ ಮುತ್ತಜ್ಜಿ ಈಗಲೂ ಇದ್ದಾರೆ. ಹಿರಿಯರ ಮುಗ್ಧತೆ, ಪ್ರೀತಿ, ಕೋಪ, ಅಸಹಾಯಕತೆಯನ್ನ ಕಣ್ಣಾರೆ ಕಂಡು ಬೆಳೆದವಳು ನಾನು. ಮೊದಮೊದಲು ಅಜ್ಜಿಯರ ಕೈ ಅಡುಗೆಗೆ ಮಾತ್ರ ಮಾರುಹೋದ ನನಗೆ ಈಗ ಅವರ ಸ್ವಾವಲಂಬಿತನ ಕಂಡು ಬೆಚ್ಚುಬೆರಗಾಗಿದ್ದೇನೆ.

The changing times and lifestyles of grand mothers

72 ವರ್ಷಕ್ಕೆ ಬದಲಾವಣೆಯಾಗೋದು ಸಣ್ಣ ವಿಷವೇ ಅಲ್ಲ. ಅದೂ ತಾತನ ನೆರಳಿನಲ್ಲಿ ಜೀವನ ಮಾಡಿದವರಾದ ಕಾರಣ, ಅವರಿಗೇ ಅವರತನವನ್ನ ಕಂಡುಕೊಳ್ಳುವ ಯಾವ ದಾರಿಯೂ ಕಂಡಿಲ್ಲ ಎಂದರೆ ತಪ್ಪೇನಿಲ್ಲ. ಪ್ರತಿಯೊಂದನ್ನೂ ತಾತನೇ ಮ್ಯಾನೇಜ್ ಮಾಡುತ್ತಿದ್ದ ಕಾರಣ ಇವರಿಗೆ ಮನೆ ಸುದ್ದಿ ಅಷ್ಟೆ. ಅದೂ ತಂದಿದ್ದರಲ್ಲಿ ಅಚ್ಚುಕಟ್ಟಾಗಿ ಅಡುಗೆ ಮಾಡುವುದು, ಅತಿಥಿಗಳಿಗೆ ಸತ್ಕಾರ ಮಾಡುವುದು ಅವರ ಬಹು ಮುಖ್ಯ ಆಸೆ. ಈಗಲೂ ಮಕ್ಕಳು ಮೊಮ್ಮಕ್ಕಳು ಬಂದಾಗ ಸಿಹಿ ಅಡಿಗೆ ಮಾಡಲ್ಲಿಲ್ಲವೆಂದರೆ ಅವರ ಮನಸ್ಸಿಗೆ ನೆಮ್ಮದಿ ಖಂಡಿತಾ ಇರುವುದಿಲ್ಲ. ಹಾಗೇ ಮನೇಗೆ ಸೀಮಿತವಾಗಿದ್ದ ಅವರ ಸಂಭ್ರಮ ಅವರ ಜೀವನದ ಅನಿರೀಕ್ಷಿತ ಬದಲಾವಣೆಗಳನ್ನ ಒಪ್ಪಿಕೊಂಡು ನಡೆಯಬೇಕಾದ ಸಂದರ್ಭ ಬಂದಿದೆ.

ನನ್ನಜ್ಜಿಗೆ ನಾನೂ ಮತ್ತು ತಂಗಿ ಆಗಾಗ ಕೀಟಲೆ ಮಾಡುತ್ತಿದ್ವಿ. ಬೆಂಗಳೂರಿನಲ್ಲಿ ಒಂದು 50 ವರ್ಷ ಇದ್ದು ಇನ್ನೂ ವಿದ್ಯಾಪೀಠಕ್ಕೆ ಹೋಗೋಕ್ಕೆ ಗೊತ್ತಗ್ಲಿಲ್ವಾ ಎಂದು ಚೆನ್ನಾಗಿ ತಮಾಷೆ ಮಾಡಿದ್ವಿ. ತಾತ ಹೋದ ನಂತರವಂತೂ ಅಜ್ಜಿಗೆ ಎಲ್ಲಾದರೂ ಹೋಗಬೇಕೆಂದರೆ ಹಿಂಸೆ. ಅವರಿಷ್ಟದ ಕಡೆ ನಮಗೆ ಹೋಗಲು ಮನಸ್ಸಿಲ್ಲ, ಒಬ್ಬರೇ ಹೋಗೋದಕ್ಕೆ ಸರಿಹೋಗುವುದಿಲ್ಲ. ಹೀಗೆಲ್ಲ ಇದ್ದಾಗ ಮುಂದೆ ಏನು ಎಂದು ಯೋಚಿಸುತ್ತಿದ್ದಾಗ ಮೊನ್ನೆ ಅಜ್ಜಿ ಒಬ್ಬರೇ ಆಟೋದಲ್ಲಿ ಮಲ್ಲೇಶ್ವರದಿಂದ ಜಯನಗರಕ್ಕೆ ಬಂದ ಸುದ್ದಿ ಕೇಳಿ ನಾನು ಹಿರಿಹಿರಿ ಹಿಗ್ಗಿದೆ. ಬದಲಾಯಿಸಿಕೊಳ್ಳುವ ಮನಸ್ಸು ಮಾಡಿಕೊಂಡು ಅಜ್ಜಿ ಎಲ್ಲಿ ಬೇಕಾದರೂ ಈಗ ಓಡಾಡುತ್ತಿದ್ದಾರೆ. ಅವರ ಹುಶಾರಿನಲ್ಲಿ ಅವರು ಇರುವಷ್ಟು ಸಂಯಮ ಬೆಳೆಸಿಕೊಂಡಿದ್ದಾರೆ.

ತಾತ ಹೇಳಿದ ಮೇಘು ಮತ್ತು ಅವರೆಕಾಳಿನ ಕಥೆ!ತಾತ ಹೇಳಿದ ಮೇಘು ಮತ್ತು ಅವರೆಕಾಳಿನ ಕಥೆ!

ಇನ್ನು ಅಮ್ಮನ ತಾಯಿಯೂ ಸಹ ಅವರೇ ಹೋಗಿ ಸಾಮಾನು ತಂದು ಅಡಿಗೆ ಮಾಡುವಷ್ಟು ಕಲಿತಿದ್ದಾರೆ. ಮೊನ್ನೆ ಆಫೀಸಿನಿಂದ ಬಂದಾಗ ಅಜ್ಜಿ ದಾರಿಯಲ್ಲಿ ಸಿಕ್ಕು ಅವರ ಸಾಮಾನಿನ ಪಟ್ಟಿಯ ಬಗ್ಗೆ ತಿಳಿಸುತ್ತಿದ್ದರು. ಒಂದು ಕೊತ್ತಂಬರಿ ಸೊಪ್ಪು ತರದಿದ್ದ ಅಜ್ಜಿ ಈಗ ಎಲ್ಲ ಕೆಲಸವನ್ನ ಮನೆ ಒಳಗೆ ಹೊರಗೆ ಮಾಡುವಷ್ಟು ಪ್ರವೀಣೆ. ಇದೆಲ್ಲದಕ್ಕೂ ಅಮ್ಮನ ಸಾಥ್ ಇದೆ ಅಂದುಕೊಂಡರೂ ಬದಲಾವಣೆ ಮಾಡಬೇಕು ಎಂಬ ಮನಸ್ಸಿದೆಯಲ್ಲ ಅದೇ ಸಂತೋಷ.

ಮೊದಮೊದಲು ಸೀರೆ ಮಾತ್ರ ಮೈಮುಚ್ಚುವ ಬಟ್ಟೆ ಎಂದುಕೊಂಡಿದ್ದ ಅಜ್ಜಿಯರು ಈಗ "ನೀ ಹಾಕೊಳ್ಳೋ ಚೂಡಿದಾರ, ಪ್ಯಾಂಟ್ ಶರ್ಟೇ ನಿನ್ನ ದೇಹವನ್ನ ಸರಿಯಾಗಿ ಮುಚ್ಚತ್ತೆ ಬಿಡೆ, ಯಾವಾಗ್ಯಾವಾಗ ಏನೂ ಹಾಕೋಬೇಕೋ ಅದೆಲ್ಲಾ ಹಾಕೋ ನೋಡು" ಎಂದು ಖುಷಿಯಾಗಿ ಮಾತಾಡುವವರಾಗಿದ್ದಾರೆ. ಈ ಮಾತನ್ನ ಅವರ ಮಕ್ಕಳಿಗೆ, ಸೊಸೆಯರಿಗೆ ಹೇಳಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ಮೊಮ್ಮಕ್ಕಳಿಗೆ ಬದಲಾವಣೆಯಾಗಿದ್ದನ್ನ ತಿಳಿಸಿ ಹೇಳಿ ತೋರಿಸಿದ್ದಾರೆ.

ನೀವೇನೇ ಸಾಧನೆ ಮಾಡಿದ್ರೂ, ನೀವು ಕಥೆ ಹೇಳುವ ತಾತನೆ!ನೀವೇನೇ ಸಾಧನೆ ಮಾಡಿದ್ರೂ, ನೀವು ಕಥೆ ಹೇಳುವ ತಾತನೆ!

ಅವರ್ಯಾವುದನ್ನು ಮಾಡಿಲ್ಲವೋ ಅದೆಲ್ಲ ಈಗಿನ ಹೆಣ್ಣುಮಕ್ಕಳು ಮಾಡಲಿ ಎಂಬ ಮಗದಾಸೆ. ನಾ ಒಬ್ಬಳೆ ಯೂರೋಪಿನ ಊರೂರು ತಿರುಗಿದರೆ ಇಬ್ಬರ ಅಜ್ಜಿಯರ ಬಾಯಲ್ಲಿಯೂ ಒಂದಷ್ಟು ಕಥೆಗಳು. ಒಬ್ಬೊಬ್ಳೆ ಓಡಾಡ್ತಾಳೆ ಅನ್ನೋ ಹೆಮ್ಮ ಅವರಿಗೆ.

ಪ್ರಾಯಶಃ ಇಡೀ ಜೀವನವನ್ನ ಅವರು ತಾಳ್ಮೆ, ಸಹನೆ, ಬೇರೆಯವರ ಸೇವೆಯಲ್ಲಿಯೇ ಕಳೆದವರಿಗೆ ಈಗ ಸಿಕ್ಕಿರುವ ಸ್ವಾತಂತ್ರ್ಯ ಆಲೋಚನಾ ಶಕ್ತಿ ನಿಜವಾಗಲೂ ಶ್ಲಾಘನೀಯವಾದದ್ದೇ.

ನನ್ನ ಮುತ್ತಜ್ಜಿ(ದೊಡ್ಡಜ್ಜಿ) ಕಲಿಸಿದ ಹಾಡು, ಈಗಲೂ ನನಗೆ ನಾನೇ ಹಾಡಿಕೊಳ್ಳುವ ಲಾಲಿ ಹಾಡು, ನನ್ನ ಎಷ್ಟೋ ಅಕ್ಕ ಅಣ್ಣಂದಿರು ರೆಕಾರ್ಡ್ ಮಾಡಿ ಅವರ ಮಕ್ಕಳಿಗೆ ಕೇಳಿಸಿದ್ದಾರೆ. "ನಮ್ಮ ಮೇಘುಗೆ ಪ್ರೈಝ್ ಬಂತು, ಮಾಧುರ್ಯಾಗೆ rank ಬಂತು" ಛದ್ಮವೇಷಕ್ಕೆ ಏನು ಮಾಡೋದು, ಯಾವ ಹಾಡು ಹಾಡಿಸೋದು ಎಂದು ಅಮ್ಮನನ್ನ ಪದೆ ಪದೇ ಕೇಳಿ ಒಂದಷ್ಟು ರಿಹರ್ಸಲ್ ಮಾಡಿಸುತ್ತಿದ್ದ ಜಾನೂ ಅಜ್ಜಿ, ಈಗಲೂ ಜೀವನೋತ್ಸಾಹದಿಂದ ಎಲ್ಲಾ ಜಾಗಗಳನ್ನ ನೋಡಿಕೊಂಡು ಬಂದು , ಮೊಮ್ಮಗಳಿಗೆ ಚೆಂದ ಕಾಣುವ ಮ್ಯಾಚಿಂಜ್ ಪರ್ಸ್ ತಂದುಕೊಡುವ ಅಜ್ಜಿ, ಸಹನೆಯನ್ನ ಎರಡನೇ ಹೆಸರಾಗಿಸಿರುವ ವಸುಂಧರಾ ಅಜ್ಜಿ. ಹೀಗೆ ಎಲ್ಲ ಅಜ್ಜಿಯರು ಅವರ ಹಳೆತನವನ್ನ ಬಿಟ್ಟು ಸಾಕಷ್ಟು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಿದ್ದಾರೆ.

ಬದಲಾವಣೆ ಆಗಲ್ಲ, ಮಾಡಿಕೊಳ್ಳುವುದು ಕಷ್ಟ ಎನ್ನುವವರಿಗೆ ಇವರೆಲ್ಲಾ ಉದಾಹರಣೆ. ಅಂದ ಹಾಗೆ ಬದಲಾವಣೆ ಹೆಣ್ಣಿಗೆ ಬಹು ಸುಲಭವೇ? ಗೊತ್ತಿಲ್ಲ ನನಗಂತೂ ಹಾಗೆ ಕಾಣಿಸುತ್ತಿದ್ದೆ ಇವರೆಲ್ಲರ ಬದಲಾವಣೆಯನ್ನ ಕಂಡಾಗ.

English summary
Present grand mothers are not like the one in old days or decades. Their time and lifestyles have changed drastically as the time is passing on. But, their love for the siblings has not changed even an inch. Meghana Sudhindra writes about ajjis of olden days and present generation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X