ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಕ್ತಿತ್ವ ಬೆಳೆಸಿದ ಕನ್ನಡ ಕಲಿಸಿದ ನನ್ನ ಪ್ರೀತಿಯ ಶಾಲೆ

By ಜಯನಗರದ ಹುಡುಗಿ
|
Google Oneindia Kannada News

ಅಂತೂ ಜೂನ್ ಬಂತು, ಬೆಂಗಳೂರಲ್ಲಿ ಶಾಲೆ ಶುರುವಾಗಿದೆ. ಮೊನ್ನೆ ನಮ್ಮ ದಟ್ಸ್ ಕನ್ನಡದಲ್ಲಿಯೂ ಸಹ ಶಾಲೆಯ ನೆನಪುಗಳನ್ನ ಬರೆಯಿರಿ ಅಂತಾನೂ ಹೇಳಿದ್ದನ್ನು ನೋಡಿದ್ದೆ. ಆ ನಿಟ್ಟಿನಲ್ಲಿ ನನ್ನ ಶಾಲೆಯ ಬಗ್ಗೆ ಬರೆಯಲೆಬೇಕು. ನನ್ನ ಪ್ರೀತಿಯ ಶಾಲೆಯ ಬಗ್ಗೆ ಬರೀದೆ ಇದ್ರೆ ಹೇಗೆ?

ಬೇಗ ಮಾತು, ನಡಿಗೆ ಎಲ್ಲ ಕಲಿತಿದ್ದರ ಪರಿಣಾಮ ನನ್ನನ್ನು ಶಾಲೆಗೆ ಅಮ್ಮ ಬೇಗನೆ ಸೇರಿಸಿಬಿಟ್ಟಿದ್ದರು. ಲಾರಾ ಪ್ಲೇ ಹೋಂಗೆ ಸೇರಿಸಿದರು. ಆ ಶಾಲೆಯಷ್ಟು ಸುಂದರ ಶಾಲೆಯನ್ನು ನಾ ಎಲ್ಲೂ ನೋಡಿರಲ್ಲಿಲ್ಲ. ಕನ್ನಡ, ಇಂಗ್ಲಿಷ್ ಎರಡನ್ನೂ ಚೆನ್ನಾಗಿ ಹೇಳಿಕೊಡುತ್ತಿದ್ದರು ನಮ್ಮ ಲಲಿತ ರಾಮಚಂದ್ರಯ್ಯ ಮಿಸ್ಸು.

ಒಮ್ಮೊಮ್ಮೆ ಜಾರೋ ಬಂಡೆಯನ್ನ ಆಡಿಕೊಂಡು ಬಂದು ಒಂದೊಂದು ಅಕ್ಷರವನ್ನ ಬರೆಯಬಹುದಿತ್ತು. ನಾನು ಅವರ ತೊಡೆಯ ಮೇಲೆ ಕುಳಿತುಕೊಂಡೇ ಪಾಠಗಳನ್ನ ಕಲಿತ್ತಿದ್ದೂ ಇದೆ. ಒಮ್ಮೆ ನಮ್ಮ ಮಿಸ್ಸ್ ನಮಗೆ ಜಾರೋ ಬಂಡೆ ಆಡಲು ಸಮಯ ನಿಗದಿ ಪಡಿಸಿದ್ದರು. ನಾನು ಜಾರುವುದಕ್ಕೆ ಸಮಯ ಜಾಸ್ತಿ ತೆಗೆದುಕೊಳ್ಳುತ್ತದೆ ಎಂದು ಅಲ್ಲಿಂದಾನೆ ಹಾರಿಬಿಟ್ಟಿದ್ದೆ. ಇನ್ನೇನಾಗತ್ತೆ? ತಲೆ ಒಡೆದು 20 ಸ್ಟಿಚ್ ಹಾಕಿದ್ರು. [ನಾವು ಮೊದಲ ಬಾರಿಗೆ ಸ್ಯಾಂಟ್ರೋ ಕಾರು ಕೊಂಡ ಕಥೆ!]

Beautiful memories of my dearest school in Bengaluru

ನಮ್ಮ ಈ ಪ್ಲೇ ಹೋಂ ವಾರ್ಷಿಕೋತ್ಸವಕ್ಕೆ ಯಾವಾಗ್ಲೂ ಮೇಕಪ್ ನಾಣಿಯವರು ಮುಖ್ಯ ಅತಿಥಿಯಾಗಿ ಬರುತ್ತಿದ್ದರು. ನಮ್ಮ ಮಿಸ್ಸ್ ಅವರಿಗೆ ಬಹಳ ಪರಿಚಯ ಅಂತ. ಒಮ್ಮೆ ಮೇಕಪ್ ಕೋಣೆಗೆ ಬಂದು ನಮ್ಮ ಮುಖಕ್ಕೆ ಬಣ್ಣ ಬಳಿದು ಹೋಗಿದ್ದರು. ಅವರೆಷ್ಟು ದೊಡ್ಡವ್ಯಕ್ತಿ ಎಂದು ನನಗೆ ತಿಳಿದಿರಲಿಲ್ಲ. ಅಲ್ಲಿಯೇ ಮೊದಲ ಬಾರಿ ನಮಗೆ ವೇದಿಕೆ, ಮೇಕಪ್ ಹಾಗೂ ಧ್ವನಿವರ್ಧಕವನ್ನ ನೋಡಿದ್ದು.

ನಂತರ ಅಮ್ಮ ಅಪ್ಪ ನನ್ನನು ಸೇರಿಸಿದ್ದು ಜೆಪಿನಗರದ ವಿ ಇ ಟಿ ಶಾಲೆಗೆ. ಅಮ್ಮ ಶಾಲೆಗೆ ಸೇರಿಸುವುದಕ್ಕೆ ಇದ್ದದ್ದು 2 ಕಂಡೀಷನ್. ಆಟದ ಮೈದಾನ, ಕನ್ನಡವನ್ನ ಹತ್ತೂ ವರ್ಷ ಕಲೀಬೇಕು ಎಂಬುದು. ಅಪ್ಪ ಮನೆಯ ಹತ್ತಿರ ಶಾಲೆಯಿರಲೇಬೇಕು ಎಂದು ಒಂದು ಕಂಡೀಷನ್ ಹಾಕಿದ್ದರು. ಇದೆಲ್ಲದರ ಅಡಕವಾಗಿ ನನಗೆ ಈ ಶಾಲೆಯಲ್ಲಿ ಪರೀಕ್ಷೆಯ ನಂತರ ಸೀಟ್ ಸಹ ದೊರೆಯಿತು. ಅಲ್ಲಿ 10 ವರ್ಷ ಸಹ ಖುಶಿಯಾಗಿಯೇ ಶಾಲೆಗೆ ಹೋದೆ.[ಮುದ್ದಾದ ನೆನಪುಗಳ ಬಿಚ್ಚಿಡುವ ಬೆಂಗಳೂರಿನ ಮಳೆ!]

ನಾನು ಓದ್ದಿದ್ದು ಆಂಗ್ಲ ಮಾಧ್ಯಮದ ಶಾಲೆಯಾದರೂ ಸಹ, ಕನ್ನಡದ ವಾತಾವರಣ ಚೆನ್ನಾಗಿಯೇ ಇತ್ತು. ನಮ್ಮ ನಮ್ಮಲ್ಲಿ ಕನ್ನಡವನ್ನೇ ಮಾತಾಡಿಕೊಳ್ಳುತ್ತಿದ್ವಿ. ನಾವು ಒಂದನೆ ತರಗತಿಯಲ್ಲಿ ಇದ್ದಾಗ ಇದ್ದ ಅಧ್ಯಾಪಕರು ಹತ್ತನೇ ತರಗತಿಯಲ್ಲಿದ್ದಾಗಲೂ ಇದ್ದರು. ಅವರೊಂದಿಗೆ ಸಲಿಗೆ ಇದ್ದಷ್ಟೆ ಭಯವೂ ಇತ್ತು. ಹಾಗೆಯೆ ಗೌರವವೂ ಇತ್ತು.

Beautiful memories of my dearest school in Bengaluru

ನಾನು ತುಂಬಾ ಇಷ್ಟ ಪಟ್ಟು ಕೇಳಿಸಿಕೊಳ್ಳುತ್ತಿದ್ದುದು ಕನ್ನಡ ಮತ್ತು ಗಣಿತ ಪಾಠಗಳನ್ನ. ಮಕ್ಕಳಿಗೆ ಇರುವ ಸಹಜ ಪ್ರತಿಭೆಗಳನ್ನ ಗುರುತಿಸಿ ಪ್ರೋತ್ಸಾಹ ಕೊಡುವ ಕೆಲಸ ನಮ್ಮ ಅಧ್ಯಾಪಕರದ್ದು. ಪ್ರಾಥಮಿಕ ಶಾಲೆಯಲ್ಲಿ ಎಲ್ಲ ಮಿಸ್ಸ್ ಗಳು ಬಹಳ ಸ್ಟ್ರಿಕ್ಟ್ ಆಗಿಯೇ ಇದ್ದರು. ನಮಗೆ ಶಿಸ್ತನ್ನ ಕಲಿಸಬೇಕೆಂಬುದಕ್ಕೆ.

ಪ್ರೌಢ ಶಾಲೆಗೆ ಬರುವಾಗ ಸ್ನೇಹಿತರ ಹಾಗೆ ನಮ್ಮ ನಡತೆಯನ್ನ ತಿದ್ದಿತೀಡಿದ್ದರು. 100ಕ್ಕೆ 100 ತಗೊಂಡರೆ ಉತ್ತಮ ವಿದ್ಯಾರ್ಥಿ/ನಿ ಅಲ್ಲ ಎಂಬುದನ್ನು ತಿಳಿಸಿ ಹೇಳಿದ್ದರು. ಸನ್ನಡತೆಯಿಲ್ಲ ಎಂದರೆ ಏನನ್ನು ಸಾಧನೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಪದೆ ಪದೆ ಹೇಳಿದ್ದರು. ಶಾಲೆಯಲ್ಲಿ ವಿಪರೀತ ಹೋಂ ವರ್ಕ್ ಸಹ ಕೊಡುತ್ತಿರಲಿಲ್ಲ. ಅವತ್ತಿನ ಅವತ್ತೆ ಮಾಡುವ ಅಭ್ಯಾಸವನ್ನ ಸಹ ಕಲಿಸಿಕೊಟ್ಟಿದ್ದರು.[ಜಯನಗರದಲ್ಲಿ ಅವಿಸ್ಮರಣೀಯ ಬೇಸಿಗೆಯ ರಜಾ ದಿನಗಳು]

ಮೊದಲ ಬಾರಿಗೆ ಹಾಡಿದ್ದು, ಭಾಷಣ ಮಾಡಿದ್ದು, ಕನ್ನಡ ಪ್ರಬಂಧ ಬರೆಸಿದ್ದು ಎಲ್ಲವೂ ನಮ್ಮ ಗುರುಗಳೆ. ನಮ್ಮ ರಮಾ ಮಿಸ್ಸ್ ಕನ್ನಡ ಪಾಠ ಮಾಡುವ ಜೊತೆ ಜೊತೆಗೆ ಸುಶ್ರಾವ್ಯವಾದ ಜನಪದ ಗೀತೆಗಳನ್ನು, ಭಾವಗೀತೆಗಳನ್ನು ಕಲಿಸುತ್ತಿದ್ದರು. ಅವರೇ "ಲಂಗ ದಾವಣಿ ಹಾಕಿಕೊಂಡು ಬಾ ಮೇಘನ. ಅದು ಬೆಟ್ಟ ಇದು ಬೆಟ್ಟವೋ ನಂಜುಂಡ ಹಾಡಬೇಕು" ಎಂದು ಹೇಳಿದ್ದರು.

ನಮ್ಮ ಕನ್ನಡ ಅಧ್ಯಾಪಕರಾದ ಲೀಲಾವತಮ್ಮ ಮಿಸ್ಸ್ ಇನ್ನೊಂದು ಅದ್ಭುತ. ನನ್ನ ಕೈಯಲ್ಲಿ ಎಷ್ಟು ಕನ್ನಡ ಪ್ರಬಂಧ ಬರೆಸಿದ್ದರೋ ನಾನು ಕಾಣೆ. ಕನ್ನಡವನ್ನ ಇಷ್ಟು ಪ್ರೀತಿಸುವುದಕ್ಕೆ ಕಲಿಸಿಕೊಟ್ಟಿದ್ದು ಅವರೆ. ನಮ್ಮಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸಿದ, ಕನ್ನಡದ ಬಗ್ಗೆ ಪ್ರೀತಿ ಕಲಿಸಿದ ಶಿಕ್ಷಕರಿಗೆ ಇಲ್ಲಿಂದಲೇ ಶಿರಸಾಷ್ಟಾಂಗ ನಮಸ್ಕಾರ.

ಅಮ್ಮ ಪ್ರತಿ ಮಕ್ಕಳ ದಿನಾಚರಣೆಯ ಸಲುವಾಗಿ ನಡೆಯುವ ಛದ್ಮ ವೇಷದ ಸ್ಪರ್ಧೆಗೆ ಅವಳ ಕಲಾ ಕುಸುರಿಯನ್ನೆಲ್ಲ ನನ್ನ ಮೇಲೆ ಹಾಕಿ ಬಹುಮಾನ ಬರುವಹಾಗೆ ಮಾಡಿದ್ದಳು. ನಮ್ಮ ಇಂಗ್ಲಿಷ್ ಅಧ್ಯಾಪಕರಾದ ಪ್ರೇಮ ಮಿಸ್ಸ್, ಕಲೈ ವಾಣಿ ಮಿಸ್ಸ್ ಹಾಗೂ ಜಯಂತಿ ಮಿಸ್ಸ್ ಒಂದೊಂದು ಅಕ್ಷರವನ್ನ ತಿದ್ದಿ ನಮಗೆ ಭಾಷೆಯನ್ನ ಕಲಿಸಿದ್ದರು. ಹಿಂದಿಯ ಅಧ್ಯಾಪಕಿ ಬೀನು ಮಿಸ್ಸ್, ರಾಜಾಮ್ಮಾಳ್ ಮಿಸ್ಸ್ ಭಾಷೆಯನ್ನ ಕಲಿಸುವ ಬಗೆ ಅನನ್ಯ.[ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ!]

ತುಂಬಾ ಇಷ್ಟವಾದ್ದದ್ದು ನಮ್ಮ ಗಣಿತ ಅಧ್ಯಾಪಕಿ ಮೀರಾ ಮಿಸ್ಸ್ ಅವರು ಕಲಿಸುತ್ತಿದ್ದ ರೀತಿ. ಎಲ್ಲಾ ಸೂತ್ರಗಳನ್ನು ಬಾಯಿಪಾಠ ಮಾಡದೆ ಅರ್ಥ ಮಾಡಿಕೊಳ್ಳಿ ಅಂತ ಪ್ರೇರೇಪಿಸುತ್ತಿದ್ದರು. ಹತ್ತನೆ ಕ್ಲಾಸ್ ನ ಒತ್ತಡವನ್ನ ಕಡಿಮೆ ಮಾಡಲು ದಿನಾಲೂ ಪಾಠದ ನಡುವೆ ಹಾಡು ಸಹ ಹಾಡಿಸುತ್ತಿದ್ದರು. ಸೈನ್ಸ್ ಮಿಸ್ಸ್ ಆಗಿ ಭಾರತಿ ಮಿಸ್ಸ್, ಮಂಜರಿ ಮಿಸ್ಸ್ ಹಾಗೂ ಉಷಾ ಮಿಸ್ಸ್ ಇರ್ತಿದ್ರು. ಸಿಕ್ಕಾಪಟ್ಟೆ ತರಲೆಯಾದ ನನ್ನ ಕಟ್ಟಿ ಹಾಕಿ ಕೂಡಿಸುತ್ತಿದ್ದದು ಅವರೆ.

ಸೋಷಿಯಲ್ ಕ್ಲಾಸ್ ನಲ್ಲಿ ನಿದ್ದೆ ಮಾಡಿ ಸಿಕ್ಕಿಹಾಕೊಂಡಾಗ, ಅಂಕ ತೆಗೆದು ತೋರಿಸು ಅಂತ ಸವಾಲು ಹಾಕಿದ್ದು ನಮ್ಮ ಫಸೀಹಾ ಮಿಸ್ಸ್. ಈ ಎಲ್ಲ ಕಾರಣ, ಶ್ರದ್ಧೆಯಿಂದಲೇ ಶಾಲೆ ಬಿಡುವಾಗ ನನಗೆ ಜಾಸ್ತಿ ಅಂಕ ಬಂದಿದ್ದು. ಮೀರಾ ಮಿಸ್ಸ್ ಗಣಿತದಲ್ಲಿ 100 ತೆಗೆದುಕೊಳ್ಳುವಾಗ ಅದಕೆ ಇರಬೇಕಾದ ಶ್ರದ್ಧೆಯನ್ನು ತಿಳಿಸಿ ಹೇಳುತ್ತಿದ್ದರು. ಕಡೆಗೆ ನನಗೆ 99 ಬಂದಾಗ, ಬೇಜಾರು ಮಾಡಿಕೊಳ್ಳದೆ ಮುನ್ನುಗ್ಗು ಅಂತ ವಿಪರೀತ ಧೈರ್ಯ ಕೊಟ್ಟಿದ್ದರು.

ನಮ್ಮ ಶಾಲೆಯಲ್ಲಿ ನಿಯಮಿತವಾಗಿ ಯೋಗ, ಆಟದ ಸಮಯ, ಲೈಬ್ರರಿ ಸಹ ಕಡ್ದಾಯವಾಗಿತ್ತು. ನಮ್ಮ ಲೈಬ್ರರಿಯ ಅಷ್ಟೂ ಪುಸ್ತಕಗಳನ್ನು ನಾನೆ ಓದಿದ್ದೆ ಅಂತ ನಮ್ಮ ಪದ್ಮಜ ಮಿಸ್ಸ್ ಪುಸ್ತಕವನ್ನ ಉಡುಗೊರೆಯಾಗಿ ಕೊಟ್ಟು ಕಳಿಸಿದ್ದರು. ನಾಯಕತ್ವದ ಗುಣ ಬರಲಿ ಎಂದು ಶಾಲೆಗೆ ಲೀಡರ್ ಗಳನ್ನ ಆರಿಸಲು ಚುನಾವಣೆಯನ್ನ ಸಹ ನಡೆಸುತ್ತಿದ್ದರು. ನಾನು 2 ವರ್ಷ ವೈಸ್ ಕ್ಯಾಪ್ಟನ್ ಹಾಗೂ ಕ್ಯಾಪ್ಟನ್ ಆಗಿದ್ದೆ.[ಪುಸ್ತಕದ ಹುಚ್ಚು ಹಚ್ಚಿದ ಗ್ರಂಥಾಲಯದ ಕಥೆಯಿದು]

ಈಗಲೂ ನನ್ನ ಸ್ನೇಹಿತರೆಲ್ಲಾ ಆ ಶಾಲೆಯವರೆ. ಸಿಕ್ಕಾಗ ಹೊಟ್ಟೆ ಹುಣ್ಣಾಗುವ ಹಾಗೆ ನಕ್ಕು ರೇಗಿಸಿ ಇರುತ್ತೇವೆ. ಗೆಳೆಯರೆಲ್ಲಾ ಬೇರೆ ಬೇರೆ ದೇಶ ಊರುಗಳಲ್ಲಿ ಇದ್ದಾಗ ವಾಟ್ಸಾಪ್ನಲ್ಲಿ ಮಾತು ಕತೆ ನಡೆಯತ್ತೆ. ಒಬ್ಬೊಬ್ಬರು ಒಂದೊಂದು ವೃತ್ತಿ. ಡಾಕ್ಟರ್ ಇಂಜಿನಿಯರ್ ಜೊತೆಗೆ ಸಿನೆಮಾ ನಿರ್ದೇಶಕ, ನೇವಿಯಲ್ಲಿ ದೇಶ ಸೇವೆ, ಹೀಗೆ ಭಿನ್ನವಾದ ವೃತ್ತಿಗಳನ್ನ ಮಾಡುತ್ತಿದ್ದರೂ ಸಹ ಎಲ್ಲರೂ ಸೇರಿ ಅಷ್ಟೆ ಆತ್ಮೀಯತೆಯಿಂದ ಮಾತಾನಾಡುತ್ತಿರುತ್ತೇವೆ.

ಮೊನ್ನೆ ಗೆಳೆಯನ್ನೊಬ್ಬನ ಮದುವೆಗೆ ಹೋಗಿ ಬಂದ ನನ್ನ ಸ್ನೇಹಿತರು, ನಮ್ಮ ವಾಟ್ಸಾಪ್ ಗುಂಪಿನಲ್ಲಿ ಚಿತ್ರ ಕಳಿಸಿದಾಗ ಇದೆಲ್ಲ ಬರೆಯುವ ನೆನಪಾಯಿತು. ಬೇರೆ ಊರಲ್ಲಿ ಕೂತಾಗ ನೆನಪಾಗೋದು ಶಾಲೆಯೊಂದೆ. ನೀವು ಓದಿದ ಶಾಲೆ ಯಾವುದು? ನಿಮ್ಮ ಅನುಭವಗಳೇನು? ನಾನೂ ಕೇಳಲು ಉತ್ಸುಕಳಾಗಿದ್ದೇನೆ.

English summary
Memories of schools and childhood are always green for everyone. Meghana Sudhindra from Barcelona recalls the memories of her school in Jayanagar, Bengaluru, thanks her teachers for instilling love for Kannada language and making her what she is now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X