ಓ ಗೊಮ್ಮಟೇಶ್ವರನೆ, ನಗ್ನತೆಗೆ ನಾಚದಿಹೆ; ಬತ್ತಲೆಗೆ ಬೆದರದಿಹೆ
ನಾ ಎಂಟನೆಯ ತರಗತಿಯಲ್ಲಿದ್ದೆ, ಆಗ ಪ್ರಥಮ ಭಾಷೆಯಾಗಿ ಕನ್ನಡ ತೆಗೆದುಕೊಂಡ ಕಾರಣ ಹಳೆಗನ್ನಡದ ಸುಮಾರು ಪದ್ಯ-ಗದ್ಯಗಳು ನಮ್ಮ ಪಠ್ಯದಲ್ಲಿತ್ತು. ಲೀಲಾವತಮ್ಮ ಮಿಸ್ ಹೈಸ್ಕೂಲ್ ಗೆ ಕನ್ನಡ ಪಾಠ ಮಾಡುತ್ತಿದ್ರು. ಆವತ್ತು ಭರತ ಬಾಹುಬಲಿಯ ಕಥೆಯಿತ್ತು. ಪಂಪ ಬರೆದ್ದಿದ್ದ ಹಳೆಗನ್ನಡ ಚಂಪೂ ಕಾವ್ಯದ ಒಂದೊಂದೆ ಪದಗಳ ಅರ್ಥಗಳನ್ನ ತಿಳಿಸುತ್ತಿದ್ದರು. ಮೊದಲೇ ಹಳೆಗನ್ನಡ ಕಬ್ಬಿಣದ ಕಡಲೆ, ಅದರೊಟ್ಟಿಗೆ ಬಾಹುಬಲಿಯ ತ್ಯಾಗ ಇವುಗಳ ಬಗ್ಗೆ ಅರ್ಥವೇ ಆಗದ ವಯಸ್ಸು. ತಲೆ ಕೆಟ್ಟು ಕೂತ ನಂತರ ಮಿಸ್ ಹೊಸಗನ್ನಡದಲ್ಲಿ ಕಥೆಯನ್ನ ವಿಸ್ತಾರವಾಗಿ ಹೇಳತೊಡಗಿದರು.
ವೃಷಭ ದೇವನ ಮಕ್ಕಳಾದ ಭರತ ಬಾಹುಬಲಿಯರಿಬ್ಬರಿಗೆ ರಾಜ್ಯವನ್ನ ಎರಡು ಭಾಗವಾಗಿ ಮಾಡಿ ಕೊಟ್ಟ ನಂತರ ಭರತನ ಶಸ್ತ್ರಾಗಾರದಲ್ಲಿ ಚಕ್ರರತ್ನ ಹುಟ್ಟುತ್ತದೆ. ಚಕ್ರವರ್ತಿಯಾಗಬೇಕಾದರೆ ಚಕ್ರರತ್ನವನ್ನ ಹಿಂಬಾಲಿಸಿಕೊಂಡು ಯಾವ ರಾಜ್ಯಕ್ಕೆ ತಲುಪುತ್ತದೆಯೋ ಆ ರಾಜ್ಯವನ್ನ ಭರತ ಯುದ್ಧಮಾಡಿ ಗೆಲ್ಲಬೇಕು. ಸೋತರೆ ಅವನ ರಾಜ್ಯವಷ್ಟೂ ಗೆದ್ದ ರಾಜನಿಗೆ.
ಹೀಗಿದ್ದಾಗ ಪ್ರತಿಯೊಂದು ರಾಜ್ಯ ಗೆದ್ದ ಭರತನ ಚಕ್ರರತ್ನ ಬಾಹುಬಲಿಯ ರಾಜ್ಯದ ಸೀಮೆಯಲ್ಲಿ ನಿಲ್ಲುತ್ತದೆ. ಅಣ್ಣ ತಮ್ಮಂದರಿಗೆ ಈಗ ಯುದ್ಧ ನಡೆಯಬೇಕು. ಹೆಸರೇ ಬಾಹುಬಲಿಯಾದ ಕಾರಣ ಅವನು ಸುಮ್ಮನೆ ಸೋಲೊಪ್ಪಿಕೊಳ್ಳುವನಲ್ಲ. ಆದರೂ ಬಾಹುಬಲಿ ತನ್ನ ಸೈನಿಕರಿಗೆ ತೊಂದರೆಯಾಗಬಾರದೆಂದು ಅವರಿಬ್ಬರಲ್ಲಿಯೇ ಸ್ಪರ್ಧೆ ಏರ್ಪಡಿಸಲು ಕೇಳುತ್ತಾನೆ.

ಭರತ ಬಾಹುಬಲಿಗೆ ಹಲವಾರು ಕಾದಾಟಗಳು ನಡೆಯತ್ತೆ. ಮಲ್ಲಯುದ್ಧ, ದೃಷ್ಟಿಯುದ್ಧ, ಜಲಯುದ್ಧ ಹೀಗೆ ಎಲ್ಲಾ ಯುದ್ಧಗಳು ನಡೆದ ನಂತರ ಗೆದ್ದದ್ದು ಬಾಹುಬಲಿಯೇ. ಭರತ ಎಲ್ಲವನ್ನು ಕಳೆದುಕೊಂಡು ನಿಂತಾಗ ಬಾಹುಬಲಿಗೆ ಆದ ಜ್ಞಾನೋದಯ ಇದ್ಯಾವುದೂ ಶಾಶ್ವತವಲ್ಲವೆಂಬುದು. ಗೆದ್ದ ನಂತರವೂ ಅವನಿಗೆ ಯಾವುದೇ ಸಂತೋಷ ಖುಷಿ ಕಾಣಲ್ಲಿಲ್ಲ. ಉಟ್ಟ ಬಟ್ಟೆಯನ್ನೂ ತ್ಯಜಿಸಿ ದಿಗಂಬರ ಸನ್ಯಾಸಿಯಾಗಿ ಬಾಹುಬಲಿ ಹೊರಟುಹೋದ.
ಇದಿಷ್ಟು ನಮ್ಮ ಪಠ್ಯಪುಸ್ತಕದಲ್ಲಿತ್ತು. ನಂತರ ನಮ್ಮ ಮಿಸ್ ಹೇಳಿದ್ದು ಶ್ರವಣಬೆಳಗೊಳದಲ್ಲಿರುವ "India's tallest monolithic statue" ಎಂದು ಓದಿದ್ದನ್ನ ಅವರು ತಿಳಿಸಿದ್ದು ಆ ಜಾಗವನ್ನ ನೋಡಬೇಕೆಂಬ ಆಸೆ ತುಂಬಾ ಇತ್ತು.

ನಿನ್ನೆ ದಿನಪತ್ರಿಕೆಯಲ್ಲಿ ಮಹಾಮಸ್ತಿಕಾಭಿಶೇಕದ ವಿಷಯ ಓದಿ ಹಳೆ ನೆನಪುಗಳು ಒತ್ತರಿಸಿ ಬಂತು. ಒಂದೈದು ವರ್ಷದ ಹಿಂದೆ ಹೋದ ಪ್ರವಾಸ ನೆನಪಾಯ್ತು. 1,000 ಕಿಲೋಮೀಟರ್ಗಳ ಪ್ರವಾಸದಲ್ಲಿ ಶ್ರವಣಬೆಳಗೊಳದ ಗೊಮ್ಮಟನ ದರ್ಶನವೂ ಆಯಿತು. ವಿಂದ್ಯಗಿರಿಯ ಮೇಲೆ ನಿಂತಿರುವ 57 ಫೀಟ್ ನ ದಿಗಂಬರನನ್ನ ನೋಡೋಕೆ ಎರಡು ಕಣ್ಣುಗಳು ಸಾಲದು. ಚಾವುಂಡರಾಯ ಕೆತ್ತಿಸಿದ ಶಿಲೆಯಂತೆ ಇದು. ಚಂದ್ರಗುಪ್ತ ಮೌರ್ಯ ತನ್ನ ದೇಹತ್ಯಾಗ ಮಾಡಿದ್ದು ಇಲ್ಲೆಯೇ ಅಂತೆ. ಅಶೋಕ ಚಕ್ರವರ್ತಿ ಚಂದ್ರಗುಪ್ತ ಬಸದಿಯನ್ನ ಕಟ್ಟಿಸಿದನೆಂಪ ಪ್ರತೀತಿ. ಇದಿಷ್ಟು ಸಾಕಿತ್ತು ನಾವು ಪ್ರವಾಸ ಹೊರಡಲು.
ಸ್ಯಾಂಟ್ರೋ ಕಾರ್ ನಂತರ ಮತ್ತೆ ತಗೊಂಡ ದೊಡ್ಡ ಕಾರಿಗೆ ಗೊಮ್ಮಟನ ದರ್ಶನ ಮಾಡಿಸುವ ಯತ್ನ ಮಾಡಿದೆವು. ನನಗದು ಮೊದಲನೇ ಬಾರಿ. ನನ್ನ ಕನ್ನಡ ಮಿಸ್ ನಾ ಪಾಠ, ಜೊತೆ ಜೊತೆಗೆ ಈ ಎಲ್ಲಾ ಕಥೆಗಳನ್ನ ನೆನೆಸಿಕೊಂಡು ನಾವು ತಲುಪಿದ್ವಿ ಶ್ರವಣಬೆಳಗೊಳ. ಬೆಳ್ಳಗಿನ ಕೊಳದಿಂದ ಈ ಹೆಸರು ಬಂದಿತಂತೆ, ಇಲ್ಲಿ ಬೆಳೆಯುವ ಬೆಳ್ಳಗಿನ ಗುಳ್ಳ(ಬದನೇಕಾಯಿ) ಯಿಂದ ಈ ಹೆಸರು ಬಂದಿತಂತೆ. ಹೀಗೆಲ್ಲಾ ಹೆಸರುಗಳು ಬಂದಿತೆಂದು ತಿಳಿದುಕೊಂಡ್ವಿ.

ಇನ್ನು ಶುರು ಆಯ್ತು ನೋಡಿ ಕಷ್ಟ. ವಿಂಧ್ಯಗಿರಿಯ ಬೆಟ್ಟದ ಮೇಲೆ ನಿಂತ ಮೂರ್ತಿಯನ್ನ ಹತ್ತೋದಕ್ಕೆ ಮೆಟ್ಟಿಲುಗಳು. ಕಾದ ಬಂಡೆ, ಕಾಲು ಭಾಗ ಹತ್ತುವಷ್ಟರಲ್ಲಿ ನನಗೆ ಅಪ್ಪನಿಗೆ ಏದುಸಿರು. ತಂಗಿ ಅಮ್ಮ ಪಟಪಟನೆ ಹತ್ತುತ್ತಿದ್ದರು. ಭರ್ತಿ ಒಂದು ವರ್ಷದ ಐಟಿ ಕೆಲಸ ನನಗೆ ಬೊಜ್ಜಿನ ಶುರುವಿಕೆ ಆಗಿತ್ತು. ಏದುಸಿರು ಬಿಟ್ಟು ನೀರು ಕುಡಿದು ಹತ್ತಿದ್ದೋ ಹತ್ತಿದ್ದು. ನನಗೆ ಒಮ್ಮೆ ಅರ್ಥವಾಗಲೇ ಇಲ್ಲ ಈ ದೇವರ/ ದೇವತೆಯರ ಸನ್ನಿಧಿ ಯಾಕೆ ಇಷ್ಟೆಲ್ಲಾ ಕಷ್ಟ ಪಡುವ ಹಾಗಿರುತ್ತದೆ ಎಂದು. ನನ್ನ ಪಕ್ಕವೇ ಜೈನ ಮುನಿಗಳೊಬ್ಬರು ಪಟಪಟನೆ ಹತ್ತಿ ಹೋಗುತ್ತಿದ್ದರು.
ಅಂತು ಬಾಹುಬಲಿಯ ಸನ್ನಿಧಾನಕ್ಕೆ ಬಂದ್ವಿ. ಅಲ್ಲಿ ನಿಶ್ಯಬ್ಢ, ನೀರವ ಮೌನ. ನಿರಾಳ, ನಿರ್ಗುಣ, ನಿರ್ಭಾವವಾಗಿ ನಿಂತಿದ್ದಾನೆ. ಕಾಲಿಗೆಲ್ಲಾ ಬಳ್ಳಿ ಸುತ್ತಿಕೊಂಡು ಇರುವಷ್ಟು ಗಾಢ ತಪಸ್ಸು ಮಾಡಿ ಎಲ್ಲವನ್ನು ತ್ಯಜಿಸಿದ್ದಾನೆ ಎಂಬ ಭಾವವೇ ನಂಬಲಸಾಧ್ಯ. ಎಲ್ಲವನ್ನ ಗೆದ್ದು ನಂತರ ಬಿಡುವುದು ತುಂಬಾ ಆಶ್ಚರ್ಯ ಪಡುವಂತ ಸಂಗತಿ. ಪ್ರಾಯಶಃ ಇದು ನಮ್ಮ ನೆಲದ ಮಹಿಮೆಯೆನ್ನಿಸುತ್ತದೆ.

ಮೊನ್ನೆ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಕೇಳಿದ ಭಾಷಣದಲ್ಲಿ ಮಾತು ಬಂದಿದ್ದು ಅದೇ. ಎಲ್ಲವನ್ನು ತ್ಯಜಿಸುವವರಿಗೆ ಇಲ್ಲಿ ಮರ್ಯಾದೆ ಎಂದು. ಬಿಡುವುದನ್ನು ಕಲಿಸುವ ಸಮಾಜದಲ್ಲಿ ನಾವು ಈಗ ಬಯಸಿ ಬಯಸಿ ಬೇಕಾದ್ದದನ್ನ ಶೇಖರಿಸುವ ಕೆಲಸವನ್ನ ಮಾಡುತ್ತಿದ್ದೇವೆ. ಇದು ನಮ್ಮ ಕಲಿಕೆಗೆ ವಿರುದ್ಧವಾ ಅಥವಾ ನಾವು ಇನ್ನ್ಯಾವುದೋ ಸಂಸ್ಕೃತಿಗೆ ಹೊಂದುಕೊಳ್ಳುವ ವಿಪರೀತ ಚಾಳಿ ಬೆಳೆಸಿಕೊಂಡಿದ್ದೀವಾ ಎಂಬುದು.
ಇಂತಹ ಯೋಚನೆಗಳು ಇಂತಹ ಜಾಗದಲ್ಲಿ ಬಂದರೂ ಮತ್ತೆ ಪಟ್ಟಣಕ್ಕೆ ಬಂದ ನಂತರ ಅದೇ ಕೆಲಸದಲ್ಲಿ ಮುಳುಗಿರುತ್ತೇವೆ. ಲಾಲ್ ಬಾಗಿನ ಪುಷ್ಪ ಪ್ರದರ್ಶನದಲ್ಲಿ ಈ ಸಲ ಮಹಾಮಸ್ತಕಾಭಿಷೇಕದ ಬಗ್ಗೆ ಅಲಂಕಾರವಿದೆಯಂತೆ, 12 ವರ್ಷಕ್ಕೊಮ್ಮೆ ನಡೆಯುವ ಈ ಮಹಾ ಮಜ್ಜನ ದೊಡ್ಡ ಹಬ್ಬ ಬೆಳಗೊಳದಲ್ಲಿ (ಫೆಬ್ರವರಿ 17-25). ಇದೆಲ್ಲಾ ನೆನಪಿಗೆ ಬಂತು. ನಿಮಗಾದರೆ ಹೋಗಿ ಬನ್ನಿ.

ಕುವೆಂಪು ಒಮ್ಮೆ ಈ ಮಹಾಮೂರ್ತಿಯ ಬಗ್ಗೆ ಹೀಗೆ ಬರೆಯುತ್ತಾರೆ, ಅರ್ಹಂತ ಗುರುದೇವ, ಓ ಗೊಮ್ಮಟೇಶ್ವರನೆ,
ನಗ್ನತೆಗೆ ನಾಚದಿಹೆ; ಬತ್ತಲೆಗೆ ಬೆದರದಿಹೆ. ಹುಸಿ ನಾಗರಿಕ
ವೇಷದಿಂದಲ್ಪತೆಯ ಮುಚ್ಚಿ ಮೆರುಗು ಬೆರಗಿನ ಮೋಸಗೈಯದಿಹೆ.
ಮುಚ್ಚು ಮರೆ ತಾನೇಕೆ ಅಲ್ಪತಾ ಲವಲೇಶವಿಲ್ಲದೆಯೆ
ಸರ್ವತ್ರ ಸರ್ವದರೊಳುಂ ಭೂಮನಾಗಿರುವ ಮಹತೋ
ಮಹೀಯನಿಗೆ ನಿನಗೆ? ಗುಟ್ಟಿನ ರಟ್ಟು ಕೇಡು ನೀಚತೆ ಹೀನತೆಯ
ಹೊತ್ತಗೆಗೆ ಬೇಕು; ಗಗನ ವಿಸ್ತಾರದೌದಾರ್ಯಕದು ಬೇಕೆ? ಸಾಕೆ?
ನಿಜ ಮಹಿಮೆ ನಗ್ನತೆಗೆ ಅಳುಕಬೇಕಾಗಿಲ್ಲ ಬಡಕಲಿಗುಡುಗೆ ಬೇಕು,
ಕಲಿಯ ಮೈಗೇತಕದು? ನಿಜ ಮಹಿಮೆ ನಗ್ನತೆಗೆ ಅಳುಕಬೇಕಾಗಿಲ್ಲ ಅಲ್ಲವೆ?
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications