• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೀತಿ ಎನುವ ಮಾಯೆ ಏನು ಮಾಡಿತು?

By Staff
|
  • ಜಾನಕಿ
ಜೀವನದಲ್ಲಿ ಒಂದೇ ಸಾರಿ ಪ್ರಾಮಾಣಿಕವಾಗಿ ಪ್ರೀತಿ ಮಾಡೋದಕ್ಕೆ ಸಾಧ್ಯ. ಆಮೇಲಾಮೇಲಿನ ಪ್ರೀತಿಯೆಲ್ಲ ಮೊದಲ ಪ್ರೀತಿಯ ಪಡಿಯಚ್ಚು. ಅದರ ನೆರಳು ಮಾತ್ರ.

ಈ ಮಾತನ್ನು ನಲುವತ್ತರ ಆಸುಪಾಸಿನಲ್ಲಿರುವ ಯಾರೂ ಕೂಡ ನಂಬುವುದಿಲ್ಲ. ಪ್ರತಿ ಪ್ರೀತಿ ಕೂಡ ಹೊಸದು.

ಪ್ರೀತಿ, ನದಿಯ ಹಾಗೆ. ಕ್ಷಣಕ್ಷಣವೂ ಹೊಸ ನೀರು. ಹಳೆಯ ಪ್ರೀತಿ ಹರಿದು ಹೋಗುತ್ತದೆ. ಹರಿದು ಹೋಗುವುದನ್ನು ಕಟ್ಟಿಹಾಕಿದರೆ ಕೊಳೆಯುತ್ತದೆ ಅಥವಾ ಆವಿಯಾಗುತ್ತದೆ. ಆದ್ದರಿಂದ ಹರಿಯೋದನ್ನು ಹರಿಯೋದಕ್ಕೆ ಬಿಡಬೇಕು ಎಂದು ಅನೇಕರು ವಾದಿಸುತ್ತಾರೆ. ವಾದಿಸುವುದಕ್ಕೆ ಹಿಂಜರಿಯುವವರು ಹಾಗಂದುಕೊಂಡಿರುತ್ತಾರೆ.

ಹಾಗೇ ಇನ್ನೊಂದು ಥರದ ಜನರಿದ್ದಾರೆ. ಅವರಿಗೆ ಪ್ರೀತಿಯಲ್ಲಿ ಯಾವ ನಂಬಿಕೆಯೂ ಇಲ್ಲ. ಪ್ರೀತಿಯನ್ನು ಕರ್ತವ್ಯ ಅಂದುಕೊಂಡಿರುವ ಅವರ ಡೈಲಾಗುಗಳು ಸಾಮಾನ್ಯವಾಗಿ ಹೀಗಿರುತ್ತವೆ;‘ನಮ್ಮೋರನ್ನು ನಾವು ಪ್ರೀತಿ ಮಾಡ್ದೇ ಬೇರೆ ಯಾರು ಮಾಡೋಕೆ ಸಾಧ್ಯ?’ ಇದನ್ನೇ ಮತ್ತೆ ಮತ್ತೆ ಕೇಳಿದಾಗ ನಮ್ಮ ರೋಗಕ್ಕೆ ನಾವು ಔಷಧಿ ತಗೊಳ್ಳದೇ ಬೇರೆ ಯಾರು ತಗೊಳ್ಳೋಕೆ ಸಾಧ್ಯ ಅಂತಲೋ ಧ್ವನಿಸ ತೊಡಗಿ ಭಯವಾಗುತ್ತದೆ. ಪ್ರೀತಿಯೂ ಕರ್ತವ್ಯವೇ ಆಗಿಬಿಟ್ಟರೆ ಕರ್ತವ್ಯಚ್ಯುತಿ ಆರೋಪ ಎಷ್ಟೆಲ್ಲ ಮಂದಿಯ ಮೇಲೆ! ಪ್ರತಿಯಾಬ್ಬರೂ ಒಂದಲ್ಲ ಒಂದು ಹಂತದಲ್ಲಿ ಪ್ರೀತಿಗೆ ಚ್ಯುತಿಯಾದವರೇ?

ಹಾಗೆ ನೋಡಿದರೆ ನಮ್ಮ ಪುರಾಣದಲ್ಲೇ ಪ್ರೀತಿಗೆ ಪ್ರತೀಕಗಳಿಲ್ಲ. ರಾಮ-ಸೀತೆಯರು ನಿಜಕ್ಕೂ ಪ್ರೀತಿಸುತ್ತಿದ್ದರೋ ಅನ್ನುವ ಅನುಮಾನ ಮೂಡುತ್ತದೆ. ಸೀತೆಯನ್ನು ಗೆಲ್ಲುವುದಕ್ಕೆ ರಾಮ ಶಿವಧನಸ್ಸು ಎಂಬ ಬಿಲ್ಲು ಮುರಿಯಬೇಕಾಗಿತ್ತು ಅಷ್ಟೇ. ಕೈಯಲ್ಲಿ ಹೂವಿನ ಮಾಲೆ ಹಿಡಿದು ನಿಂತ ಸೀತೆಗೆ ರಾಮನಿಗಿಂತ ಮುಂಚೆ ಅನೇಕರು ಬಂದು ಬಿಲ್ಲು ಮುರಿಯುವ ಯತ್ನ ಮಾಡಿದಾಗ ‘ಈ ಹುಡುಗ ಮುರಿದು ಬಿಡಲಿ’ ಅಂತ ಯಾರ ಬಗ್ಗೆಯೂ ಅನ್ನಿಸಿರಲೇ ಇಲ್ಲವೇ?ಆಮೇಲಾದರೂ ರಾಮ ಮತ್ತು ಸೀತೆ ಆದರ್ಶ ದಂಪತಿಗಳ ಥರ ಬಾಳಿದರೇ ಹೊರತು, ಅನನ್ಯ ಪ್ರೇಮಿಗಳ ಥರ ಬದುಕಲೇ ಇಲ್ಲವಲ್ಲ. ಆತ ಕಾಡಿಗೆ ಹೊರಟಾಗ ಈತ ಹುಡುಕಾಡಿ, ಕಾದಾಡಿ ಆಕೆಯನ್ನು ಗೆದ್ದ. ಗೆದ್ದ ಮೇಲೆ ಕೂಡ ಅವರು ಹಿಂದಿ ಸಿನೆಮಾಗಳಲ್ಲಿ ಬಹುದಿನಗಳ ವಿರಹದ ನಂತರ ಒಂದಾದ ಪ್ರೇಮಿಗಳ ಹಾಗೆ, ದಂಪತಿಗಳ ಹಾಗೆ ಸ್ಲೋ ಮೋಷನ್ನಿನಲ್ಲಿ ಬಂದ ಒಬ್ಬರನ್ನೊಬ್ಬರು ತಬ್ಬಲಿಲ್ಲ. ರಾಮ, ಬೆಂಕಿಗೆ ಹಾರು ಅಂದ. ಸೀತೆ, ಹಾರಿದಳು. ನನ್ನ ಹೆಂಡತಿ ಪರಿಶುದ್ಧೆ ಅಂದ. ಯಾವತ್ತೂ ರಾಮ, ಸೀತೆಯನ್ನು ಸುಂದರಿ ಅನ್ನಲೇ ಇಲ್ಲ. ಕೊನೆಗೂ ಸೀತೆ ದೂರಾದ ನಂತರ ರಾಮ ಅವಳ ಸುವರ್ಣ ಪುತ್ಥಳಿ ಮಾಡಿಸಿಟ್ಟುಕೊಂಡನಂತೆ. ರಾಮ ಪ್ರೀತಿಸುತ್ತಿದ್ದುದ್ದು. ಸೀತೆಯನ್ನೋ ಬಂಗಾರವನ್ನೋ ಅನುಮಾನ!

ಸುಮ್ಮನೆ ನೋಡುತ್ತಾ ಹೋಗಿ. ಪ್ರೇಮಿಗಳ ಪ್ರಸ್ತಾಪ ಬಂದಾಗೆಲ್ಲ ನಾವು ಲೈಲಾ-ಮಜ್ನೂ ಅನ್ನುತ್ತೇವೆ. ಗ್ರೀಕ್‌ ಪ್ರೇಮ ದೇವತೆಯಾದ ವೀನಸ್ಸು ಇವತ್ತು ಭಾರತಕ್ಕೂ ಬಂದಿದ್ದಾನೆ. ಆದರೆ ನಮ್ಮ ಪುರಾಣಗಳಲ್ಲಿ ಪ್ರೇಮ ಪ್ರಕರಣಗಳೇ ಇಲ್ಲ. ಕೃಷ್ಣನನ್ನು ಅಪ್ಪಟ ಪ್ರೇಮಿ ಅನ್ನೋಣವೆಂದರೆ ಅದನ್ನು ಭಾರತದ ಅಸಂಖ್ಯಾತ ಗೃಹಿಣಿಯರು ಒಪ್ಪುವುದಿಲ್ಲ. ಅವರಿಗೆ ಗಂಡ ಶ್ರೀರಾಮಚಂದ್ರನ ಹಾಗಿರಬೇಕು. ಪ್ರೀತಿಸಬಾರದು, ಪೋಷಿಸಬೇಕು. ಪ್ರೇಮಿಸಬಾರದು, ರಕ್ಷಿಸಬೇಕು. ಹೆಂಡತಿಯ ಸುವರ್ಣ ಪುತ್ಥಳಿ ಮಾಡಿ ಅದನ್ನು ಮನಸ್ಸಿನ ಮೂಲೆಯಲ್ಲಿ ಪ್ರತಿಷ್ಠಾಪಿಸಿ, ದಿನಾ ಅದನ್ನೇ ನೋಡುತ್ತಾ ಕೂತಿರಬೇಕು. ಅಪ್ಪಿ-ತಪ್ಪಿ ಕಣ್ಣು ಅತ್ತಿತ್ತ ಸುಳಿದಾಡಿದರೂ ಕಣ್ಣಿಗೆಲ್ಲಿ ಬಂಗಾರದ ಜಿಂಕೆ ಬಿದ್ದೀತೋ ಅನ್ನುವ ಭಯ.

ಪುರಾಣದ ಪುಟ ತೆರೆಯುತ್ತಾ ಹೋದರೆ ಅಲ್ಲಿ ಸಿಗುವ ಪ್ರೇಮಿಗಳೆಲ್ಲ ದುಷ್ಟರೇ, ಖಳನಾಯಕರೇ. ಪ್ರೀತಿಗಾಗಿ ಹಂಬಲಿಸಿದ ರಾವಣ, ಪ್ರೀತಿಗಾಗಿ ಕಾತರಿಸಿದ ಶಿಶುಪಾಲ, ಸುಭದ್ರೆಯನ್ನು ಮೆಚ್ಚಿದ ದುರ್ಯೋಧನ, ದ್ರೌಪದಿಯನ್ನು ಮೋಹಿಸಿದ ಕೀಚಕ- ಹೀಗೆ ಪ್ರೇಮಿಸಿದವರೆಲ್ಲ ಕೆಟ್ಟವರೇ. ಹಾಗಂತ ಮದುವೆಯಾದವರು ಪ್ರೇಮಿಸಿದ ಒಂದೇ ಒಂದು ಉದಾಹರಣೆಯೂ ಅಲ್ಲಿಲ್ಲ. ಅರ್ಜುನ ಮತ್ತು ದ್ರೌಪದಿಯ ಪ್ರಣಯ ಪ್ರಸಂಗದ ಒಂದು ಅಧ್ಯಾಯ ತೆಗೆದು ತೋರಿಸಿ ನೋಡೋಣ?

ಹಾಗಂತ, ದುಷ್ಟರಷ್ಟೇ ಪ್ರೇಮಿಸಬಲ್ಲರು ಅನ್ನುವ ತೀರ್ಮಾನಕ್ಕೇನೂ ಬರಬೇಕಾಗಿಲ್ಲ. ಸಜ್ಜನರ ಸಮಸ್ಯೆಯೆಂದರೆ, ಅವರು ಪ್ರೇಮಿಸುವುದಕ್ಕೂ ಬಾರದಷ್ಟು ಸಜ್ಜನರು. ಪ್ರೀತಿ ಮಾಡುವುದೂ ಅವರ ಕಣ್ಣಿಗೆ ಅಪರಾಧವಾಗಿ ಕಾಣಿಸುತ್ತದೆ. ಭಾರತೀಯ ಸಂಸ್ಕೃತಿ, ಗಂಡು ಮತ್ತು ಹೆಣ್ಣು-ದೀಪವಾರಿದ ನಂತರ ಶಯ್ಯಾಗೃಹದ ಕತ್ತಲಲ್ಲಿ ಮಾತ್ರ ಸೇರಬೇಕು ಅನ್ನುತ್ತದೆ. ರಜನೀಶ್‌ ಹೇಳುತ್ತಾರೆ; ಪ್ರೀತಿ ಮಾಡುವುದೆಂದರೆ ಸಾಯುವುದು. ಸಾಯುವುದು ಎಂದರೆ ಕತ್ತಲು. ಆದ್ದರಿಂದ ಪ್ರೀತಿ ಮಾಡುವುದೂ ಕತ್ತಲಲ್ಲಿ ನಡೆಯಬೇಕು. ಕತ್ತಲಲ್ಲಿ ಪ್ರೇಮಿಸಿದಷ್ಟು ನಿರಾಳವಾಗಿ ನೀವು ಬೆಳಕಿನಲ್ಲಿ ಪ್ರೇಮಿಸಲಾರಿರಿ.

ಅದಕ್ಕೆ ವೈಜ್ಞಾನಿಕ ಕಾರಣಗಳೂ ಉಂಟಂತೆ. ಕತ್ತಲೆಂದರೆ ಅನೂಹ್ಯ. ಕತ್ತಲೆಂದರೆ ಕಲ್ಪನೆ. ಅಲ್ಲಿ ಜೊತೆಗಿರುವ ಸಂಗಾತಿ ಇನ್ಯಾರೋ ಆಗಿ ರೂಪುತಳೆಯುವ ಸಾಧ್ಯತೆಗಳೂ ಇರುತ್ತವೆ. ಇದನ್ನೆಲ್ಲ ಕೇಳುತ್ತಿದ್ದರೆ ವೈಜ್ಞಾನಿಕ ಅನ್ನುವ ಪದದ ಬಗ್ಗೆಯೇ ಅಸಹ್ಯ ಅನ್ನಿಸುತ್ತದೆ. ಕಾರಣಗಳು ಕೇಳುವುದು ಮತ್ತು ಕೊಡುವುದು ವಿಜ್ಞಾನ. ಕಾರಣವಿಲ್ಲದೆಯೇ ಪೊರೆಯುವುದು ಪ್ರಕೃತಿ. ಕಾರಣಗಳನ್ನು ತಿಳಿದುಕೊಳ್ಳುವುದರಿಂದ ನಿಜಕ್ಕೂ ಲಾಭವಿದೆಯಾ?

ಪ್ರೀತಿ ನಮ್ಮನ್ನು ಮೆದುಗೊಳಿಸುತ್ತದೆ, ಹದಗೊಳಿಸುತ್ತದೆ ಮತ್ತು ಮುದಗೊಳಿಸುತ್ತದೆ ಅನ್ನುತ್ತಾರೆ. ಅದಕ್ಕೇ ಪ್ರೀತಿಯೆಂಬುದು ವಾಂಛೆ ಮತ್ತು ಭಾವುಕತೆಯ ಅಪೂರ್ವ ಸಂಗಮದಂತಿದೆ. ಅಂತಿಮ ಉದ್ದೇಶದ ಅರಿಯಿರುವುದು ಪ್ರೀತಿಗಷ್ಟೇ. ಆ ಅರ್ಥದಲ್ಲಿ ಪ್ರೀತಿಯೆಂಬುದು ನಮ್ಮ ಮೂಲಭೂತ ಆಸೆಗೆ ನಾವು ಕೊಟ್ಟು ಕೊಂಡ ದಿವ್ಯವಾದ ಹೆಸರು.

ಪ್ರೀತಿಗೂ ಮದುವೆಗೂ ಸಂಬಂಧಯಾಕಿರಬೇಕು?ಪ್ರೀತಿ, ಮದುವೆಯಾಗು ಅಂತ ಯಾವತ್ತಾದರೂ ಹೇಳಿದೆಯಾ?ಪ್ರತಿ ಪ್ರೀತಿಯೂ ಮದುವೆಯಲ್ಲೇ ಕೊನೆಗೊಳ್ಳುತ್ತದೆ, ಕೊನೆಗೊಳ್ಳಬೇಕು ಅನ್ನುವುದಾದರೆ ನಮ್ಮ ಪ್ರೀತಿ ಅಷ್ಟು ಸಂಕುಚಿತವಾ?ಒಂದು ಉದಾಹರಣೆ ತಗೊಳ್ಳಿ; ಕೃಷ್ಣಾನಂದ ಎಂಬ ಹುಡುಗ ನಂದಿನಿ ಎಂಬ ಹುಡುಗಿಯನ್ನು ಪ್ರೀತಿಸುತ್ತಾನೆ ಅಂತಿಟ್ಟುಕೊಳ್ಳೋಣ. ಇಲ್ಲಿ ‘ಪ್ರೀತಿಸುತ್ತಾನೆ’ ಅನ್ನುವ ಪದದ ಅರ್ಥ ಎಷ್ಟು ವಿಸ್ತಾರವಾಗಿದೆ ನೋಡಿ. ಪ್ರೀತಿಸುತ್ತಾನೆ ಅಂತ ಗೊತ್ತಾದ ತಕ್ಷಣ ಕೃಷ್ಣಾನಂದ ಮತ್ತು ನಂದಿನಿ ಒಂದೇ ಜಾತಿಯಾ ಅನ್ನುವ ಪ್ರಶ್ನೆ ಮೂಡುತ್ತದೆ. ಅವರಿಬ್ಬರ ಅಂತಸ್ತಿನ ಪ್ರಶ್ನೆ ಬರುತ್ತದೆ. ಆಮೇಲೆ ಅವರಿಬ್ಬರೂ ಮದುವೆಯಾಗುತ್ತಾರಾ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಮದುವೆಯಾಗುವುದು ನಿಜ ಅಂತ ಗೊತ್ತಾದ ತಕ್ಷಣ ಅವರಿಬ್ಬರ ಪ್ರೀತಿಸುವ ಸ್ವಾತಂತ್ರ್ಯ ನಶಿಸುತ್ತದೆ. ಆಮೇಲೆ ಕೃಷ್ಣಾನಂದ ಮತ್ತು ನಂದಿನಿ ಪರಸ್ಪರರನ್ನು ಬಿಟ್ಟು ಬೇರೆ ಯಾರನ್ನೂ ಪ್ರೀತಿಸುವಂತಿಲ್ಲ. ಒಂದು ವೇಳೆ ಪ್ರೀತಿಸಿದರೆ ಅದು ಅಪರಾಧ, ಅನೀತಿ, ಅನ್ಯಾಯ. ಪ್ರೀತಿಯೇ ಪ್ರೀತಿಸುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ವೈಚಿತ್ರ್ಯಕ್ಕಿದು ಉದಾಹರಣೆ.

ಹಾಗಾಗಿದ್ದರೆ ಪ್ರೀತಿ ಎಂದರೇನು? ಅದು ಬಿಡುಗಡೆಯಾ, ಬಂಧನವಾ?ಮಿತಿಯಾ ಮಿತಿಯಿಲ್ಲದ ಸ್ಥಿತಿಯಾ?ಯಾಕೆ ಎರಡನೆಯ ಸಲ ಪ್ರೀತಿಸುವ ಹೊತ್ತಿಗೆ ಅಪರಾಧಿ ಪ್ರಜ್ಞೆ ಕಾಡುತ್ತದೆ?ಮೊದನೆಯ ಸಲ ಪ್ರೀತಿಸುವಾಗ ಭಯ ಕಾಡುತ್ತದೆ. ಪ್ರೀತ್ಸೋದ್‌ ತಪ್ಪಾ?

ಪ್ರೀತಿಯ ಉತ್ಕಟ ಸ್ಥಿತಿ ಭಕ್ತಿ. ಭಕ್ತಿಯ ಉತ್ಕಟ ಸ್ಥಿತಿ ಸಾಯುಜ್ಯ. ಸಾಯುಜ್ಯ ಅಂದರೆ ಮೋಕ್ಷ. ಮೋಕ್ಷವೆಂದರೆ ಬಿಡುಗಡೆ. ಪ್ರೀತಿ ಹೀಗೆ ನಿರಾಕಾರದತ್ತ ತಿರುಗಿದಾಗ ಬಿಡುಗಡೆ. ಆಕಾರದತ್ತ ತಿರುಗಿದರೆ ಬಂಧನ. ಭಕ್ತಿಯ ಒಂಬತ್ತು ವಿಧಾನಗಳನ್ನು ನೋಡಿ. ಪ್ರೀತಿಗೂ, ಭಕ್ತಿಗೂ ಎಂಥ ಹತ್ತಿರದ ಸಂಬಂಧ ಅನ್ನುವುದು ಹೊಳೆಯುತ್ತದೆ. ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮ ನಿವೇದನಾ ಎಂಬ ನವವಿಧ ಭಕ್ತಿಯ ಬಗ್ಗೆ ದಾಸರು ಹಾಡಿದ್ದಾರೆ. ದೇವದಾಸರೂ ಹೆಚ್ಚು-ಕಮ್ಮಿ ಇದೇ ಸ್ಥಿತಿ. ಶ್ರವಣ ಅಂದರೆ ಅವಳ ಬಗ್ಗೆ ಕೇಳುವುದು, ಕೀರ್ತನ ಅಂದರೆ ಅವಳನ್ನು ಹೊಗಳುವುದು, ಸ್ಮರಣ ಅಂದರೆ ಅವಳ ಬಗ್ಗೆ ಚಿಂತಿಸುವುದು, ಪಾದಸೇವನೆ ಅಂದರೆ ಅವಳ ಸೇವೆ ಮಾಡುವುದು, ಅರ್ಚನ ಅಂದರೆ ಅವಳನ್ನು ಪೂಜಿಸುವುದು... ಸ್ಥಿತಿ ಹೀಗೇ ಮುಂದುವರಿಯುತ್ತದೆ. ದಾಸ್ಯದಿಂದ ಸಖ್ಯವೂ ಸಖ್ಯದಿಂದ ಆತ್ಮ ನಿವೇದನೆಯೂ ಲಭಿಸುತ್ತದೆ. ಮುಂದೇನಾಗುತ್ತದೆ ಅನ್ನುವುದು ಅವರವರ ಭಾವಕ್ಕೆ ಬಿಟ್ಟಿದ್ದು.

*

ಹುಷಾರು.

ಪ್ರೀತಿ ಅನ್ನುವುದು ಕೂಡ ಅತ್ಯಂತ ಕಮರ್ಷಿಯಲ್‌. ಇವತ್ತು ಜಗತ್ತಿನಲ್ಲಿ ತಯಾರಾಗುವ ಎಲ್ಲಾ ಸಿನೆಮಾಗಳ ವಸ್ತುವೂ ಪ್ರೀತಿ. ಪ್ರೀತಿಯ ಕುರಿತ ಕತೆ, ಕಾದಂಬರಿ, ಸಿನೆಮಾ ಸಂಪಾದಿಸಿದಷ್ಟು ದುಡ್ಡನ್ನು ಯಾವ ಕಥಾವಸ್ತುವೂ ಸಂಪಾದಿಸಿಲ್ಲ. ಯಾವ ಉದ್ಯಮವೂ ಸಂಪಾದಿಸಿಲ್ಲ.

ಅಷ್ಟೇ ಅಲ್ಲ, ಮತ್ತೊಂದು ಕಾರಣಕ್ಕೂ ಪ್ರೀತಿ ಕಮರ್ಷಿಯಲ್ಲು. ಪ್ರೀತಿಸುತ್ತಲೇ ಇರುವ ಹುಡುಗಿಗೆ ಹುಡುಗನ ಆಸ್ತಿಯಲ್ಲಿ ಪಾಲಿಲ್ಲ. ಅದೇ ಮದುವೆಯಾದರೆ ಆಸ್ತಿ ಆಕೆಯದು. ಆದ್ದರಿಂದ ಪ್ರೀತಿಸಿದವರು ಮದುವೆ ಆಗಲೇ ಬೇಕು. ಮದುವೆ ಆದ ಮೇಲೆ ಯಥಾ ಪ್ರಕಾರ, ಆಸ್ತಿ, ಸಂಪತ್ತು, ಮನೆ, ಮಕ್ಕಳು, ಸಂಸಾರ, ಸ್ವಾರ್ಥ ಎಲ್ಲವೂ ಶುರುವಾಗುತ್ತದೆ. ಜಗತ್ತಿನ ಎಲ್ಲಾ ಜಗಳಗಳಿಗೂ ಕೌಟುಂಬಿಕ ಕಲಹಗಳಿಗೂ ಪ್ರೀತಿಯೇ ಮೂಲ.

ಅಷ್ಟೇ ಅಲ್ಲ, ಪ್ರೀತಿ ತೀರಾ ಸಂಕುಚಿತ. ಒಬ್ಬರನ್ನಲ್ಲದೆ ಇನ್ನೊಬ್ಬರನ್ನು ಪ್ರೀತಿಸಿದರೆ ಅಲ್ಲಿ ಹಾಹಾಕಾರ. ಇಬ್ಬರನ್ನು ಮದುವೆಯಾಗುತ್ತೇನೆ ಅಂದರೆ ರಣರಂಗ. ಮದುವೆಯಾದರೆ ಜಗತ್ತೇ ಮುಳುಗಿಹೋದಂತೆ, ಆಕಾಶವೇ ಕಳಚಿ ಬಿದ್ದಂತೆ ಗಾಬರಿ, ಗಲಭೆ, ಕುರುಕ್ಷೇತ್ರ. ಮೊದಲ ಹೆಂಡತಿ, ನಂತರ ಬಂದವಳನ್ನೇಕೆ ಪ್ರೀತಿಸಬಾರದು. ಇಬ್ಬರೂ ಒಬ್ಬರನ್ನೇ ಯಾಕೆ ಮೆಚ್ಚಬಾರದು. ಇಬ್ಬರಿಗೂ ಬದನೆಕಾಯಿ ಎಣ್ಣೆ ಗಾಯಿ ಇಷ್ಟವಾದರೆ, ಒಬ್ಬನೇ ಹುಡುಗನನ್ನು ಯಾಕೆ ಪ್ರೀತಿಸುವಂತಿಲ್ಲ.

ಅಲ್ಲಿ ಮತ್ತೆ ಆಸ್ತಿ ಪಾಸ್ತಿಯ ಪ್ರಶ್ನೆ ಬರುತ್ತದೆ. ಹಂಚಿಕೆಯ ಮಾತು ಬರುತ್ತದೆ. ಲೆಕ್ಕಾಚಾರ ಶುರುವಾಗುತ್ತದೆ. ಪ್ರೀತಿ ಯಾವ ಹಂತದಲ್ಲಿ ಪ್ರೀತಿಯ ಗುಣಗಳನ್ನು ಕಳೆದುಕೊಂಡು ಲೆಕ್ಕಾಚಾರ ಆಗುತ್ತದೆ ಅಂತ ಹೇಳೋದು ಕಷ್ಟ.

ಪ್ರೀತಿಸುವುದು ಅಭ್ಯಾಸ ಆಗಿಬಿಟ್ಟರೆ ಮತ್ತೂ ಅಪಾಯ. ಅಭ್ಯಾಸ ಆಗದಿದ್ದರೂ ಅಪಾಯ. ಪ್ರೀತಿಯನ್ನು ಅಂತಸ್ಫೂರ್ತಿ ಅಂದರೂ ತಪ್ಪು, ಮೂಲಗುಣ ಅನ್ನುವುದೂ ತಪ್ಪು. ಪ್ರೀತಿ ಹಸಿವೆಯ ಹಾಗೆ; ಆಗುತ್ತದೆ. ನೋವಿನ ಹಾಗೆ; ನೋಯುತ್ತದೆ. ಅಜೀರ್ಣದ ಹಾಗೆ; ಅತಿಯಾದರೆ ತೊಂದರೆ ಮಾಡುತ್ತದೆ. ಬೆಳಕಿನ ಹಾಗೆ; ಕಡಿಮೆಯಿದ್ದರೂ ಕತ್ತಲೆ, ಅತಿಯಾದರೂ ಕಣ್ಣುಕುಕ್ಕಿಕತ್ತಲೆ.

ಹಾಗಿದ್ದರೆ ಎಂಥ ಪ್ರೀತಿ ಒಳ್ಳೇದು?

ಜ್ವರದಂಥ ಪ್ರೀತಿ! ಬರಬೇಕು, ಬೆವರಿದಾಗ ಹೋಗಿಬಿಡಬೇಕು.

(ಸ್ನೇಹ ಸೇತು : ಹಾಯ್‌ ಬೆಂಗಳೂರು!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more