• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೀತಿಯೆಂಬ ಪವಾಡ

By Super
|

ಹಾಗಂತ ಕರೆಕೊಡುತ್ತಾವೆ ಬುದ್ಧಿಜೀವಿಗಳು. ಪವಾಡಗಳ ಹಿಂದಿನ ರಹಸ್ಯವನ್ನು ಬಯಲು ಮಾಡುವವರ ಸಂಘಗಳಿಗೂ ನಮ್ಮಲ್ಲಿ ಕೊರತೆಯಿಲ್ಲ. ವಿಚಾರವೇದಿಕೆಗಳೂ ವಿಚಾರವಾದಿಗಳೂ ದಿನನಿತ್ಯ ಪವಾಡಗಳನ್ನು ಬಯಲಿಗೆಳೆದು ಗಹಗಹಿಸಿ ನಗುತ್ತಿವೆ. ಅವರ ಹುಚ್ಚಾಟಗಳನ್ನು ನೋಡಿ ಪವಾಡಪುರುಷರೂ ಗಹಗಹಿಸುತ್ತಾರೆ.

ಪವಾಡಗಳು ಯಾಕೆ ಇಷ್ಟವಾಗುತ್ತವೆ ಯೋಚಿಸೋಣ. ಅವು ನಮ್ಮ ಎದುರಿಗಿರುವ ವಾಸ್ತವವನ್ನು ನಿರಾಕರಿಸುತ್ತವೆ. ಇದು ಹೀಗೇ ನಡೆಯಬೇಕು ಅನ್ನುವ ನಮ್ಮ ಗ್ರಹಿಕೆಯನ್ನು ಸುಳ್ಳುಮಾಡುತ್ತವೆ. ಇದು ಹೀಗೇ ನಡೆಯುತ್ತದೆ ಅನ್ನುವ ನಮ್ಮ ಪೂರ್ವನಿರ್ಧಾರವನ್ನು ತಲೆಕೆಳಗು ಮಾಡುತ್ತವೆ. ಹೀಗಾಗಿ ನೀರಸ ದೈನಿಕಕ್ಕೆ ಒಂದು ಅಚ್ಚರಿ ಪ್ರಾಪ್ತಿಯಾಗುತ್ತದೆ. ಹತ್ತಾರು ವರುಷದ ವ್ರತನೇಮಾದಿ ಪೂಜೆಗಳಿಂದ ಪ್ರಾಪ್ತಿಯಾಗದ ಆರೋಗ್ಯ ಒಂದು ಸ್ಪರ್ಶದಿಂದ ಪ್ರಾಪ್ತಿಯಾದರೆ ಯಾರು ತಾನೇ ಬೇಡ ಅನ್ನುತ್ತಾರೆ.

ಹಾಗೆ ನೋಡಿದರೆ ನಮ್ಮ ದೇಶದಲ್ಲಾದ ಅತ್ಯಂತ ದೊಡ್ಡ ಪವಾಡ ಎಂದರೆ ಸಾಮಾಜಿಕವಾಗಿ ಆದ ಬದಲಾವಣೆ. ಉದಾಹರಣೆಗೆ ಕುಂವೀಯವರ ‘ಮನಮೆಚ್ಚಿದ ಹುಡುಗಿ' ಕಾದಂಬರಿಯಲ್ಲಿ ಆಳುಮಗನನ್ನು ಜಮೀನ್ದಾರನ ಮಗಳು ಪ್ರೀತಿಸುವುದು ಅಂಥ ಪವಾಡಗಳಲ್ಲಿ ಒಂದು. ಹನ್ನೆರಡನೇ ಶತಮಾನದಲ್ಲೇ ಕಲ್ಯಾಣದಲ್ಲಿ ಜಾತಿಪದ್ಧತಿಯನ್ನು ಶರಣರು ಮೆಟ್ಟಿನಿಲ್ಲುವಂತೆ ಮಾಡಿದ್ದು ಬಸವಣ್ಣನ ಪವಾಡ.

ಸಾಮಾಜಿಕವಾಗಿ ಕೆಳಸ್ತರದಲ್ಲಿದ್ದವರು ಎತ್ತರೆತ್ತರಕ್ಕೆ ಏರಿದ್ದು, ಎತ್ತರದಲ್ಲಿದ್ದವರು ಕೆಳಗಿಳಿದದ್ದು ಮತ್ತು ಸಮಾನತೆಯನ್ನು ಎಲ್ಲರೂ ತಾತ್ವಿಕವಾಗಿ ಒಪ್ಪಿಕೊಂಡಿರುವುದು ಇವೆಲ್ಲ ನಮ್ಮ ದೇಶದಲ್ಲೇ ನಮ್ಮ ಕಣ್ಮುಂದೆಯೇ ನಡೆದುಹೋಗಿದೆ. ಇವತ್ತಿನ ಮಧ್ಯಮವರ್ಗ ಎಲ್ಲವನ್ನೂ ನಿರಾಕರಿಸುವ ದಿಟ್ಟತನ ತೋರುತ್ತಿದೆ. ಮಧ್ಯಮವರ್ಗದ ಬ್ರಾಹ್ಮಣರ ಹುಡುಗಿಯಾಬ್ಬಳು, ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡಿ ರಾತ್ರಿ ಪಾರ್ಟಿಗಳನ್ನು ಅಟೆಂಡ್‌ ಮಾಡಿ ನಿರ್ಬಿಢೆಯಿಂದ ಮನೆ ಸೇರುತ್ತಾಳೆ. ಡೈವೋರ್ಸು ಮತ್ತ ವಿಧವಾ ವಿವಾಹಗಳ ಬಗ್ಗೆ ಯಾರೂ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ಮದುವೆ ಕೂಡ ಹೆಣ್ಣುಮಕ್ಕಳ ಅನಿವಾರ್ಯತೆಯಾಗಿ ಉಳಿದಿಲ್ಲ. ಹುಡುಗಿಗೆ ಗಂಡು ಸಿಕ್ಕುವುದಿಲ್ಲ ಅನ್ನುವ ಪರಿಸ್ಥಿತಿ ಬದಲಾಗಿ ಹೆಣ್ಣುಗಳೇ ಸಿಗುತ್ತಿಲ್ಲ ಅನ್ನುವ ದೂರು ಕೇಳಿಬರುತ್ತಿದೆ. ಈ ಗಂಡು ಬೇಡ ಅಂತ ಸ್ಪಷ್ಟವಾಗಿ ನಿರಾಕರಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಹತ್ತು ವರುಷಗಳ ಹಿಂದಿನ ಸ್ಥಿತಿಗೆ ತದ್ವಿರುದ್ಧವಾದ ಒಂದು ಸಮಾಜ ಇವತ್ತು ನಿರ್ಮಾಣವಾಗಿದೆ. ಬಗರೆ ಎಂಬ ಹೆಸರು ಕೂಡ ಕೇಳಿಲ್ಲದಂಥ ಗ್ರಾಮದಲ್ಲಿ ಹುಟ್ಟಿದ ಹೆಣ್ಣುಮಗಳು ಡೆಟ್ರಾಯಿಟ್‌ನ ಸಾಫ್ಟ್‌ವೇರ್‌ ಸಂಸ್ಥೆ ಸೇರಿಕೊಳ್ಳುತ್ತಾಳೆ. ಒಬ್ಬಳೇ ಡೆಟ್ರಾಯಿಟ್‌ಗೆ ಹೋಗಿಬರುತ್ತಾಳೆ. ಇವೆಲ್ಲವೂ ಪವಾಡಗಳೇ.

ಇಷ್ಟೇ ಅಲ್ಲ , ಇವತ್ತು ಯಾವ ಕಾಯಿಲೆಯೂ ನಮ್ಮನ್ನು ಕೊಲ್ಲುವುದಿಲ್ಲ ಮತ್ತು ಕೊಲ್ಲುವುದಕ್ಕೆ ಯಾವ ಕಾಯಿಲೆಯೂ ಬೇಕಾಗಿಲ್ಲ. ಸಾಗರ ಉಕ್ಕದೆ ನಿಂತದ್ದು ಒಂದು ಪವಾಡವಾದರೆ ಇದ್ದಕ್ಕಿದ್ದ ಹಾಗೆ ಉಕ್ಕಿದ್ದೂ ಒಂದು ಪವಾಡವೇ. ಹಿಂದೆ ಕಾಯಿಲೆಬಿದ್ದವರನ್ನು ದೇವರೋ ದೇವಮಾನವರೋ ಮಾತ್ರ ಉಳಿಸಬಲ್ಲರು ಅನ್ನುವ ನಂಬಿಕೆಯಿತ್ತು. ಜೀವವೆನ್ನುವುದು ಹಳ್ಳಿಯ ಅಳಲೆಕಾಯಿ ಪಂಡಿತನ ಪೆಟ್ಟಿಗೆಯಲ್ಲೋ ಪೂಜಾರಿಯ ಮಂತ್ರದಲ್ಲೋ ಅಡಗಿತ್ತು. ಹಳ್ಳಿಗೊಬ್ಬನೇ ವೈದ್ಯನಿದ್ದು ಅವನ ರಾಗದ್ವೇಷಗಳಿಗೆ ಅನುಗುಣವಾಗಿ ಮಂದಿ ಬದುಕುತ್ತಿದ್ದರು, ಸಾಯುತ್ತಿದ್ದರು. ಮಂತ್ರವಾದಿಗೂ ವೈದ್ಯನಿಗೂ ಜ್ಯೋತಿಷಿಗೂ ಖಗೋಲ ಶಾಸ್ತ್ರಜ್ಞನಿಗೂ ಅಂಥ ವ್ಯತ್ಯಾಸವಿರಲಿಲ್ಲ. ಅಷ್ಟೇ ಯಾಕೆ, ಬೇಸಾಯ, ಬಡಗಿ, ಕಮ್ಮಾರ, ಕುಂಬಾರ ಮುಂತಾದ ವೃತ್ತಿಗಳನ್ನು ಬಿಟ್ಟರೆ ಬೇರೆ ವೃತ್ತಿಯೂ ಇರಲಿಲ್ಲ. ಓದು ಅಷ್ಟಕ್ಕೇ ಸಾಕಾಗಿತ್ತು. ಆದರೆ ಇವತ್ತು ಬದುಕು ಮತ್ತಷ್ಟು ಸಂಕೀರ್ಣವಾಗಿಬಿಟ್ಟಿದೆ. ಮನೆಯಲ್ಲೊಂದು ಡಿಜಿಟಲ್‌ ಮೈಕ್ರೋಓವನ್‌ ತಂದಿಟ್ಟರೆ, ಮನೆಗೆ ಹತ್ತು ನಿಮಿಷ ದೂರದಲ್ಲಿರುವಾಗಲೇ ಫೋನ್‌ ಮಾಡಿ ಓವನ್‌ಗೆ ಸೂಚನೆ ಕೊಟ್ಟರೆ ಧ್ವನಿಯನ್ನೇ ಗ್ರಹಿಸಿ ಮೈಕ್ರೋ ಓವನ್‌ ಕಾರ್ಯಾರಂಭ ಮಾಡುತ್ತದೆ. ಮನೆಗೆ ಬರುವ ಹೊತ್ತಿಗೆ ಬಿಸಿಬಿಸಿ ಅಡುಗೆ ರೆಡಿಯಾಗಿರುತ್ತದೆ. ಹೆಂಡತಿಯಾಬ್ಬಳು ಮನೆಯಾಳಗಿದ್ದರೂ ಇಲ್ಲದಿದ್ದರೂ ಅಂಥ ವ್ಯತ್ಯಾಸವೇನೂ ಆಗುವುದಿಲ್ಲ.

ಅದು ಪವಾಡವಲ್ಲವೇ?

***

ಹಾಗೆ ನೋಡಿದರೆ ಈ ವಿಚಾರವಾದಿಗಳಿಂದಾಗಿ ವಿಜ್ಞಾನಿಗಳಿಂದಾಗಿ ನಾವು ಬೆರಗನ್ನೇ ಕಳೆದುಕೊಂಡಿದ್ದೇವೆ. ಆಧುನಿಕತೆ ನಮ್ಮನ್ನು ಮತ್ತೊಂದು ಯಂತ್ರವನ್ನಾಗಿ ಮಾಡಿಬಿಟ್ಟಿದೆ. ಬೆಳಗ್ಗೆ ಆಫೀಸಿಗೆ ಬರುತ್ತೇವೆ, ಮೈಮುರಿಯುವಷ್ಟು ದುಡಿಯುತ್ತೇವೆ, ರಾತ್ರಿ ಹೊತ್ತಿಗೆ ಮನೆ ಸೇರುತ್ತೇವೆ. ಗೆಳೆಯರ ಜೊತೆ ಮಾತಾಡುವುದಕ್ಕೂ ಹಿಂಜರಿಯುತ್ತೇವೆ. ನಮ್ಮ ಸಮಯ ಹಾಳಾಗುತ್ತದೆ ಅಂತ ಗಾಬರಿಯಾಗುತ್ತೇವೆ. ಅಷ್ಟಕ್ಕೂ ನಮ್ಮ ಸಮಯ ದುಡಿಯುವುದರಿಂದ ಸದುಪಯೋಗ ಆಗುತ್ತದೆಯಾ? ನಾವಿಲ್ಲದೇ ಹೋದರೂ ಆ ಕೆಲಸ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತದಲ್ಲ. ಅಷ್ಟಕ್ಕೂ ಆ ಕೆಲಸದಲ್ಲಿ ನಮ್ಮ ಸ್ಪರ್ಶದ ಗುರುತು ಇದೆಯಾ?

ಉದಾಹರಣೆಗೆ ಕಾರು ಫ್ಯಾಕ್ಟರಿಯನ್ನೇ ತೆಗೆದುಕೊಳ್ಳಿ. ದಿನಕ್ಕೆ ನೂರು ಕಾರು ಅಲ್ಲಿ ತಯಾರಾಗುತ್ತದೆ ಅಂತಿಟ್ಟುಕೊಳ್ಳಿ. ಆ ಕಾರನ್ನು ನಿರ್ಮಿಸುವ ಯಾರಿಗಾದರೂ ರಸ್ತೆಯಲ್ಲಿ ಓಡಾಡುವ ಒಂದು ಕಾರನ್ನು ತಾನು ನಿರ್ಮಿಸಿದೆ ಅಂತ ಹೇಳಿಕೊಳ್ಳುವ ಧೈರ್ಯವಿರಲು ಸಾಧ್ಯವಾ? ಅದೇ ಒಂದು ಸುಂದರವಾದ ಮನೆ ಕಟ್ಟಿಕೊಟ್ಟ ಆರ್ಕಿಟೆಕ್ಟ್‌ ಆ ಮನೆಯನ್ನು ತೋರಿಸಿ, ಇದನ್ನು ನಾನು ಕಟ್ಟಿಸಿಕೊಟ್ಟೆ ಎನ್ನುವಷ್ಟು ಸಹಜವಾಗಿ ಕಂಪ್ಯೂಟರ್‌ ಉದ್ಯಮದಲ್ಲಿರುವವನು ಹೇಳಬಲ್ಲನೇ? ಒಬ್ಬ ವಿದ್ಯಾರ್ಥಿಯನ್ನು ಇವತ್ತಿನ ಒಬ್ಬ ಮೇಷ್ಟ್ರು ಗುರುತಿಸಿ, ಇವನ ವ್ಯಕ್ತಿ ವಿಶಿಷ್ಟತೆ ನನ್ನಿಂದ ಬಂತು ಅಂತ ಹೇಳೋಕೆ ಸಾಧ್ಯವಿದೆಯೇ?

ಅಂಥ ಅವಕಾಶವಿಲ್ಲ. ಇಲ್ಲಿ ಎಲ್ಲವೂ ಯಾಂತ್ರಿಕ. ಇಂಥ ಯಾಂತ್ರಿಕತೆಯನ್ನು ನೀಗುವಂಥ ಪವಾಡ ಸಾಧ್ಯವಾಗುವುದು ಕಲೆಯಿಂದ. ಇವತ್ತು ಕಲೆ ಮತ್ತು ಕಂಪ್ಯೂಟರ್‌ ನಡುವಿನ ವ್ಯತ್ಯಾಸ ಅಳಿಸಿಹೋಗಿದೆ. ನಾಟಕಗಳನ್ನೂ ಅಚ್ಚುಕಟ್ಟಾಗಿ ಮಾಡತೊಡಗಿದ್ದಾರೆ. ಡಿಜಿಟಲ್‌ ಧ್ವನಿ ಲಭ್ಯವಿದೆ. ಈ ಡಿಜಿಟಲ್‌ ಧ್ವನಿ ಅದೇನೇ ಮಾಡಿದರೂ ಮನುಷ್ಯರದು ಅನ್ನಿಸುವುದಿಲ್ಲ. ಮನುಷ್ಯರದು ಅನ್ನಿಸದ ಹೊರತು ಅದನ್ನು ಪ್ರೀತಿಸುವುದಾದರೂ ಹೇಗೆ? ತೆರೆಯ ಮೇಲೆ ಕಾಣುವ ಮುಖಗಳೂ ಅಷ್ಟೇ, ತಿದ್ದಿ ತೀಡಿಟ್ಟ ಗೊಂಬೆಗಳಂತೆ ಕಾಣಿಸುತ್ತಿವೆ. ಆಧುನಿಕತೆ ಮತ್ತು ತಾಂತ್ರಿಕತೆ ಕುರೂಪವೇ ಇಲ್ಲದ ಆಕೃತಿಗಳನ್ನು ತಂದು ನಮ್ಮ ಮುಂದೆ ನಿಲ್ಲಿಸುತ್ತಿದೆ. ಅಲ್ಲಿ ಪವಾಡಗಳೇ ನಡೆಯುವುದಿಲ್ಲ, ಎಲ್ಲವೂ ಕೈವಾಡವೇ.

***

ನಿಜವಾದ ಪವಾಡ ಇರುವುದು ಸಾಹಿತ್ಯದಲ್ಲಿ. ಇವತ್ತಿಗೂ ರಾಮಾಯಣ ಮತ್ತು ಮಹಾಭಾರತ ಎಲ್ಲರಿಗೂ ಗೊತ್ತು. ಅದನ್ನು ಯಾರೂ ವಿಶೇಷವಾಗಿ ಕಲಿಯಬೇಕಾಗಿಲ್ಲ. ಅದು ಮಾತಿನೊಂದಿಗೆ, ಭಾಷೆಯಾಂದಿಗೆ ಮೈಗೂಡುತ್ತಾ ಹೋಗುತ್ತದೆ. ಅಂಥದ್ದೊಂದು ಕೃತಿಯನ್ನು ನೀಡುವುದಕ್ಕೆ ನಮ್ಮ ವಿಜ್ಞಾನಕ್ಕೋ ತಂತ್ರಜ್ಞಾನಕ್ಕೋ ಸಾಧ್ಯವಾಗಿಲ್ಲ ಅನ್ನುವುದರಲ್ಲೇ ಕಲೆಯ ಶ್ರೇಷ್ಠತೆ ಮತ್ತು ಅನನ್ಯತೆ ಅಡಗಿದೆ.

ಯಾರಾದರೂ ತೊಂದರೆಯಲ್ಲಿದ್ದಾರೆ ಅಂತ ಗೊತ್ತಾದಾಗ ‘ಅಯ್ಯೋ ರಾಮ' ಅನ್ನುತ್ತಿದ್ದೆವು. ಯಾರಾದರೂ ತುಂಬ ದಿನ ಕಾಣಿಸಿಕೊಳ್ಳದಿದ್ದರೆ ಅಜ್ಞಾತವಾಸ ಅಂತ ಕರೀತಿದ್ದೆವು. ತುಂಬ ಕಷ್ಟಬಂದವರಿಗೆ ವನವಾಸ ಪ್ರಾಪ್ತಿ ಎನ್ನುತ್ತಿದ್ದೆವು. ತುಂಬ ಉದಾರಿಗೆ ಧರ್ಮರಾಯ ಎಂದೂ ಧೈರ್ಯಶಾಲಿಗೆ ಭೀಮ ಎಂದೂ ಕರೆಯುವುದು ವಾಡಿಕೆಯಾಗಿತ್ತು. ಆದರೆ ಮತ್ತೊಂದು ಭಾಷೆ ಮನೆಯಾಳಗೆ ಬಂದಾಗ ಈ ಪುರಾಣದ ನುಡಿಗಟ್ಟೆಲ್ಲ ನಾಶವಾಗಿಬಿಟ್ಟಿದೆ. ಬೇರೆ ಬೇರೆ ಭಾಷೆ ಮಾತಾಡುವ ಇಬ್ಬರು ಮದುವೆಯಾದರೆ ಅವರ ಮನೆಮಾತೂ ಇಂಗ್ಲಿಷ್‌ ಆಗಿಬಿಡುತ್ತದೆ. ಅಲ್ಲಿಗೆ ಪುರಾಣ ಪ್ರತಿಮೆಗಳೂ ರೂಪಕಗಳೂ ಸಾಯುತ್ತವೆ. ನಮ್ಮೊಳಗಿನ ಪುರಾಣ ಸತ್ತುಹೋದರೆ ಉಳಿಯುವುದು ಶುಷ್ಕ ವರ್ತಮಾನ ಮಾತ್ರ. ವರ್ತಮಾನಕ್ಕೆ ಬೇರುಗಳಿಲ್ಲ!

***

ನಿಜವಾದ ಪವಾಡ ದಿನದಿನ ನಡೆಯುತ್ತದೆ. ಎಂಥ ಆಧುನಿಕತೆಯ ನಡುವೆಯೂ ಸೂರ್ಯೋದಯವಾಗುತ್ತದೆ, ಸೂರ್ಯಾಸ್ತವಾಗುತ್ತದೆ. ಎಷ್ಟೇ ಮಾತ್ರೆತಿಂದರೂ ಪೌಷ್ಠಿಕ ಆಹಾರ ತಿಂದರೂ ದೇಹಕ್ಕೆ ದಣಿವಾಗುತ್ತದೆ. ಎಂಟು ಗಂಟೆಗಿಂತ ಜಾಸ್ತಿ ನಿದ್ರೆ ಮಾಡಲಾಗುವುದಿಲ್ಲ. ಎಂಥ ಸುಂದರಿಯೂ ಸ್ವಲ್ಪ ದಿನಕ್ಕೇ ಬೋರು ಹೊಡೆಸುತ್ತಾಳೆ. ಹೆಂಡತಿಯ ಮುಂದೆ ಬೇರೆ ಹುಡುಗಿಯರೆಲ್ಲ ಸುಂದರಿಯರಾಗಿ ಕಾಣಿಸುತ್ತಾರೆ.

ನಮ್ಮ ಮಕ್ಕಳ ಹಾಗೆ ಎಲ್ಲ ಮಕ್ಕಳನ್ನೂ ಮುದ್ದಿಸಬೇಕು ಅನ್ನಿಸುತ್ತದೆ. ಕಡಲನ್ನು ನೋಡುತ್ತಿದ್ದರೆ ಅದು ಉಕ್ಕಿ ನಮ್ಮನ್ನು ಸಾಯಿಸುತ್ತದೆ ಅನ್ನಿಸುವುದಿಲ್ಲ. ಆಕಾಶದಿಂದ ಯಾವುದೋ ಒಂದು ಉಪಗ್ರಹ ಕಳಚಿ ತಲೆಮೇಲೆ ಬೀಳಬಹುದು ಅನ್ನುವ ಭಯ ಕಾಡದಷ್ಟು ಆಕಾಶ ವಿಶಾಲವಾಗಿದೆ ಮತ್ತು ಅಲ್ಲಿಂದ ಯಾವ ಬಿಲ್ಲೂ ಕೊಡದೇ ಚಂದ್ರ ರಾತ್ರಿಯೆಲ್ಲ ಬೆಳಕು ಕೊಡುತ್ತಾನೆ.

ಸಕ್ಕರೆ ಕಾಯಿಲೆಯಾಟ್ಟಿಗೇ ನಾವು ಮತ್ತೊಂದು ಮಧು-ಚಂದ್ರಕ್ಕಾಗಿ ಹಾತೊರೆಯುತ್ತೇವೆ.

ಮತ್ತು ಒಂಟಿಯಾಗಿದ್ದಾಗ ಈಗಲೂ ನಾವು ನಮ್ಮವರನ್ನು ಪ್ರೀತಿಸುತ್ತೇವೆ.

ಅದಲ್ಲವೇ ಪವಾಡ!

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Love and Miracle ; A thought provoking Kannada essay by Janaki, ThatsKananda columnist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more