Get Updates
Get notified of breaking news, exclusive insights, and must-see stories!

ಪರಿಪರಿ ಪ್ರಯತ್ನಿಸಿದರೂ ಕರಿಯಾಗದ ಕೂದಲು

Gopal Kulkarni
"ಕಟ್... ಕಟ್ ..." ಸ್ವಲ್ಪ ಸಮಯದ ನಂತರ ಮತ್ತೆ ಅದೇ "ಕಟ್ ಕಟ್". ನನ್ನ ಹೆಂಡತಿ ಗೊಣಗುತ್ತ ಎದ್ದು ಬಾಗಿಲು ತೆರೆದಳು. ಒಂದು ಹುಡುಗಿಯ ಧ್ವನಿ. ಇನ್ನೂ ನಿದ್ದೆಯಲ್ಲಿ ಇದ್ದವ ಜಿಗಿದು ಕುಳಿತು ಯಾರೇ ಅದು ಎಂದು ಕೇಳಿದೆ. ಅದೇ ಪಕ್ಕದ ಮನೆ ಪ್ರಿಯಾ. ಏನಂತೆ ಅವಳಿಗೆ? ಹಾಲಿನವನು ಬಂದರೆ, ನಾನು ಒಂದು ವಾರ ಮನೆಯಲ್ಲಿ ಇರಲ್ಲ ಊರಿಗೆ ಹೊರಟಿದ್ದೇನೆ ಎಂದು ಹೇಳಿ ಎಂದು ಹೇಳಿ ಹೋದಳು. ಅಯ್ಯೋ ಪಾಪಿ ನಿದ್ದೆ.. ನಿದ್ದೆ.. ಎಂದು ಸಾಯುತ್ತಿ. ನೀನೆ ಹೋಗಿ ಬಾಗಿಲು ತೆಗೆದಿದ್ದರೆ? ಎಂದು ಮನದೊಳಗೆ ನನ್ನನ್ನು ಬೈದು ಕೊಂಡೆ. ನನ್ನ ಮಡದಿ ಮುಖ ತೊಳೆಯಲು ಬಾತ್ ರೂಮ್ ಹೋಗುತ್ತಿದ್ದಂತೆ ಮತ್ತೆ "ಕಟ್... ಕಟ್...." ಶಬ್ದ. ನಾನು ಹೋಗಿ ಬಾಗಿಲು ತೆಗೆದೆ. ಮತ್ತೆ ಅವಳೇ ಪಕ್ಕದ ಮನೆ ಪ್ರಿಯಾ. ನನ್ನ ಖುಷಿಗೆ ಪಾರವೇ ಇರಲಿಲ್ಲ. "ಅಂಕಲ್ ಪೇಪರ್ ನವನು ಬಂದರೆ ಒಂದು ವಾರ ಇರಲ್ಲ ಎಂದು ಹೇಳಿ ನಾನು ಮರೆತು ಬಿಟ್ಟೆ" ಎಂದಳು. ಹೂವಿನ ಹಾಗೆ ಅರಳಿದ ನನ್ನ ಮುಖ 'ಅಂಕಲ್' ಶಬ್ದ ಕೇಳಿ ಬಾಡಿ ಬೆಂಡಾಗಿತ್ತು. ಆಯಿತು ಎಂದು ಹೇಳಿ ಬಾಗಿಲು ಮುಚ್ಚಿಕೊಂಡೆ.

ಯಾರು ಎಂದು ಕೇಳಿದಳು ನನ್ನ ಮಡದಿ. ಅದೇ ಪ್ರಿಯಾ ಪೇಪರ್ ನವನಿಗೆ ಹೇಳಬೇಕಂತೆ ಎಂದೆ. ಮನದಲ್ಲಿ ಮತ್ತೆ ಅದೇ ಯೋಚನೆ... ಅಂಕಲ್...? ಹೋಗಿ ಕನ್ನಡಿ ಮುಂದೆ ನಿಂತೆ. ಪೂರ್ತಿಯಾಗಿ ಎಲ್ಲಡೆ ಕಣ್ಣು ಹಾಯಿಸಿ ನೋಡಿದೆ. ತಲೆ ಒಂದು ಬಿಟ್ಟು ಎಲ್ಲವೂ ಸರಿ ಇತ್ತು(ತಲೆ.. ಐ ಮೀನ್ ಕೂದಲು!) ಈ ಕೂದಲಿಗೆ ಏನು ಮಾಡುವುದು ಎಂದು ಯೋಚಿಸುತ್ತಿದ್ದೆ. ಅಲ್ಲೇ ಬಿದ್ದ ಏಶಿಯನ್ ಕರಿ ಪೈಂಟ್ ನನ್ನ ನೋಡಿ "ಬಣ್ಣ ನನ್ನ ಒಲವಿನ ಬಣ್ಣ" ಎಂದು ಹಾಡುತ್ತಿದ್ದ ಹಾಗೇ ಅನ್ನಿಸಿತು. ಪೈಂಟ್ ಡಬ್ಬಿ ತೆಗೆದೆ ಸೀಮೆ ಎಣ್ಣೆ ವಾಸನೆ. ಒಯಿಕ... ಒಯಿಕ... ಎಂದು ಎರಡು ಸಾರಿ ಹೊಟ್ಟೆ ತೊಳಿಸುವ ಹಾಗೆ ಅನ್ನಿಸಿತು. ಎತ್ತಿ ಪಕ್ಕಕ್ಕೆ ಇಟ್ಟೆ. ನೀರು ಕಾಯಿಸಲು ಹೋದಾಗ ಇದ್ದಿಲು ಕಾಣಿಸಿತು. ಆ "ಯುರೇಕಾ....." ಎಂದು ಕಿರುಚೋಣ ಎಂದು ಕೊಂಡೆ. ಮಗ ಇನ್ನೂ ಎದ್ದಿರಲಿಲ್ಲ. ಕಿರುಚಿದರೆ ಅಷ್ಟೇ ನನ್ನ ಮಡದಿ ಪರಚಿ ಬಿಡುತ್ತಾಳೆ ಎಂದು ಸುಮ್ಮನಾದೆ. ಆದರೆ ಇದನ್ನು ಹಚ್ಚಿಕೊಂಡರೆ ಮಳೆ ಬಂದರೆ ಕಷ್ಟ. ಮತ್ತೆ ಆ ಐಡಿಯಾ ಕೂಡ ತಲೆ ಕೆಳಗಾಯಿತು.

ಸ್ನಾನ ಮುಗಿಸಿ ಬಂದ ಕೂಡಲೇ... ಕಾಣಿಸಿದ್ದು ಕಾಡಿಗೆ ಡಬ್ಬಿ. ತೆಗೆದೆ ಅದು ಪೂರ್ತಿ ಖಾಲಿ ಆಗಿತ್ತು. ಮತ್ತೆ ನಿರಾಸೆಯ ಅಲೆಯಲ್ಲಿ ತೇಲುತ್ತ ತಿಂಡಿ ತಿಂದು ಆಫೀಸ್ ಹೋಗಲು ಅನುವಾದೆ. ಬೂಟ್ ಹಾಕಿಕೊಳ್ಳುವಾಗ ಕಾಣಿಸಿತು ನೋಡಿ. ನನ್ನ ಬೂಟ್ ಪಾಲಿಷ್. ಅದನ್ನೇ ಹಚ್ಚಿಕೊಳ್ಳೋಣ ಎಂದು ಬ್ರಶ್ ಎತ್ತಿದೆ. ನನ್ನ ಮಡದಿ ಒಳಗಿನಿಂದ ಬಂದು ರೀ ಹಾಲು ಕುಡಿದು ಹೋಗಿ ಎಂದಳು. ಮೊದಲೇ ಆ ಬಿಳಿ ಬಣ್ಣದ ಮೇಲೆ ಕೋಪವಿದ್ದಿದರಿಂದ. ಇವತ್ತು ನನಗೆ ಹಾಲುಬೇಡ ಕಣೆ ಎಂದೆ. ಏನು ಮಾಡುತ್ತಾ ಇದ್ದೀರ? ಎಂದು ಕೇಳಿದಳು ಮಡದಿ. ಏನು ಇಲ್ಲ, ಕಣೆ ಬೂಟ್ ಪಾಲಿಷ್ ಮಾಡುತ್ತಾ ಇದ್ದೇನೆ ಎಂದೆ. ಬೂಟ್ ತೆಗೆದು ಕೊಂಡೆ. ರೀ ನಾನು ಆಗಲೇ ಪಾಲಿಷ್ ಮಾಡಿ ಆಗಿದೆ ಎಂದಳು. ನೋಡು ಎಷ್ಟು ಕೊಳೆಯಾಗಿದೆ ಎಂದು ಪಾಲಿಷ್ ಮಾಡಲು ಅನುವಾದೆ. ನನ್ನನ್ನು ನೋಡಿ ಜೋರಾಗಿ ನಗಲು ಶುರು ಹಚ್ಚಿಕೊಂಡಳು. ನಾನು ಅರಿವಿಲ್ಲದೇ ಏಕೆ? ಎಂದು ದಬಾಯಿಸಿ ಕೇಳಿದಾಗ. ಮತ್ತೆ ಏನು ಬ್ರೌನ್ ಬೂಟ್ ಗೆ ಕರಿ ಪಾಲಿಷ್ ಎಂದು ಕುಹಕವಾಡಿದಳು. ನಾನು ಅದನ್ನು ನೋಡಿ ನನ್ನ ಬುದ್ದಿಗೆ ಮಲ.. ಮಲ.. ಮರುಗಿ, ಅವಳು ಪಾಲಿಷ್ ಮಾಡಿದ ಕರಿ ಬೂಟ್ ಹಾಕಿಕೊಂಡು ಆಫೀಸ್ ಹೋಗಲು ಬಸ್ ಸ್ಟಾಪ್ಗೆ ಹೋದೆ. ಅಷ್ಟರಲ್ಲಿ ಒಬ್ಬ ಶಾಲೆಗೆ ಹೋಗುತ್ತಿದ್ದ ಒಂದು ಹುಡುಗಿ "ಅಂಕಲ್ ಟೈಮ್ ಎಷ್ಟು" ಎಂದು ಕೇಳಿದಳು. ಅವಳಿಗೆ ಟೈಮ್ ಹೇಳಿ ನಿಂತ ಎರಡೇ ನಿಮಿಷದಲ್ಲಿ ಬಸ್ ಬಂತು.

ಕೂದಲು ಕಪ್ಪು ಮಾಡೋಕೆ ಮತ್ಯಾವುದಾದರೂ ಉಪಾಯವಿದ್ದರೆ ತಿಳಿಸಿ
ಬಸ್ನಲ್ಲಿ ತುಂಬಾ ಜನ ಜಂಗುಳಿ ಇತ್ತು. ಮುಂದೆ ಹೋಗಿ ನಿಂತೆ. ಅಷ್ಟರಲ್ಲಿ ಒಬ್ಬ ಹುಡುಗ ಅಂಕಲ್ ನೀವು ಕುಳಿತು ಕೊಳ್ಳಿ ಎಂದು ತನ್ನ ಸೀಟ್ ನನಗೆ ಬಿಟ್ಟು ಕೊಟ್ಟ. ಕಡೆಗೆ ಶತಾಯುಗತಾಯ ಈ ಬಿಳಿ ಕೂದಲಿಗೆ ಏನಾದರೂ ಪರಿಹಾರ ಹುಡುಕಲೇಬೇಕು ಎಂದು ಆಫೀಸ್ ಹೋಗಿ ರಜೆ ಹಾಕಿ ಡಾಕ್ಟರ್ ಹುಡುಕಲು ಹೊರಟೆ. ಹೋದ ಕೂಡಲೇ ಸಿಗಬೇಕಲ್ಲ. ಒಂದೆರಡು ತಾಸು ತಿರುಗಿದ ಮೇಲೆ ಒಬ್ಬ ಡಾಕ್ಟರ್ ಕ್ಲಿನಿಕ್ ಸಿಕ್ಕಿತು. ಡಾಕ್ಟರ್ ಹೆಸರು ಕರಿಯಪ್ಪ. ತಕ್ಕ ಹೆಸರು ಎಂದು ಅಂದುಕೊಂಡು ಕುಳಿತೆ. ಡಾಕ್ಟರ್ ಬಂದರು. ಆದರೆ ಡಾಕ್ಟರ್ ಕೂದಲು ಮಾತ್ರ ಪೂರ್ತಿ ಸಿಲ್ವರ್ ಕಲರ್! ಬೇಡ ಎಂದು ಎದ್ದು ಹೋಗಲು ಅನುವಾದೆ. ರೀ ಒಳಗೆ ಹೋಗಿ ಎಂದರು. ಏಕೆಂದರೆ ನಾನೇ ಮೊದಲನೆ ಪೇಶಂಟ್. ಮನಸ್ಸಿಲ್ಲದೆ ಒಳಗೆ ಹೋದೆ. ಏನು ಸಮಸ್ಯೆ ಎಂದರು ಡಾಕ್ಟರ್. ಸರ್ ನನ್ನ ತಲೆ... ಎಂದೆ. ನಾನು ಸ್ಕಿನ್ ಸ್ಪೆಶಲಿಸ್ಟ್. ನಿಮ್ಮ ತಲೆ ನೋಡೋಕೆ ಬೇಕಾದರೆ ನಿಮಾನ್ಸ್ ಗೆ ಹೋಗಿ ಎಂದರು. ಸರ್ ಅದು ನನ್ನ ತಲೆಯಲ್ಲಿ ತುಂಬಾ ಬಿಳಿ ಕೂದಲು ಏನಾದರೂ ಔಷಧಿ ಕೊಟ್ಟು ಕರಿ ಮಾಡಿ ಎಂದೆ. ಸರ್ ನಿಮಗೆ ಬೇಕಾಗೋದು ಹಜಾಮತಿ ಅಂಗಡಿ. ಕಾರ್ನರ್ ಬಳಿ ಇದೆ ನೋಡಿ ಎಂದರು. ಸರ್ ನಾನು ಮೊದಲು ಅಲ್ಲೇ ಹೇರ್ ಡೈ ಮಾಡಿಸುತ್ತಾ ಇದ್ದೇ. ಆಗ ನನ್ನ ಕೂದಲು ಎರಡೋ ಮೂರೋ ಬಿಳಿ ಇದ್ದವು ಈಗ ನೋಡಿ ಎಂದೆ. ನನ್ನದು ಅದೇ ಕತೆ ಮಹಾರಾಯ ಎಂದರು ಡಾಕ್ಟರ್. ನಾನು ನಿಮಗೆ ಇನ್ನೊಬ್ಬ ಡಾಕ್ಟರ್ ಅಡ್ರೆಸ್ ಕೂಡುತ್ತೇನೆ. ಅವರು ನಾಟಿ ಔಷಧಿ ಕೊಡುತ್ತಾರೆ ಹೋಗಿ ಎಂದು ಹೇಳಿದರು.

ಆ ನಾಟಿ ಔಷಧಿ ಡಾಕ್ಟರ್ ಅಡ್ರೆಸ್ ಹುಡುಕಿ... ಹುಡುಕಿ... ಅರ್ಧ ಬೆಂಗಳೂರು ತಿರುಗಿದ್ದೆ. ಏಕೆಂದರೆ ಆ ಆಸಾಮಿ ತನ್ನ ಔಷಧಿ ಅಂಗಡಿಯನ್ನು ಒಂದು ಜಾಗದಲ್ಲಿ ಇಡುವದಿಲ್ಲ ಎಂದು ಎಲ್ಲರೂ ಹೇಳಿದರು. ಕಡೆಗೆ ಮನೆಗೆ ಹೋಗುವ ಮನಸಿಲ್ಲದೇ ಕಡೆಯ ಪ್ರಯತ್ನ ಎಂದು ಒಬ್ಬರು ಹೇಳಿದ ಅಡ್ರೆಸ್ ಬಳಿ ಹೋದೆ. ಆಸಾಮಿ ಸಿಕ್ಕೇ ಬಿಟ್ಟ. ಸರ್... ಎಂದು ಒಳಗೆ ಹೋದ ಕೂಡಲೇ ನಿಮ್ಮ ಸಮಸ್ಯೆ ಏನು ಎಂದು ಕೇಳದೇ. ಒಂದಿಷ್ಟು ಎಣ್ಣೆ ಕೈಗೆ ಕೊಟ್ಟ. ಸರ್ ಇದು ಏನು? ಎಂದೆ. ನಿಮ್ಮ ತಲೆ ನೋಡಿ ಗೊತ್ತಾಗುತ್ತೆ? ನೀವು ಏತಕ್ಕೆ ಬಂದಿದ್ದೀರಿ ಎಂದ. ಹೇಗಾದರೂ ಮಾಡಿ ಈ ಬಿಳಿ ಕೂದಲಿಗೆ ಅಂತ್ಯ ಕಾಣಿಸಿ ಎಂದೆ. ಡಾಕ್ಟರ್ ತಲೆ ಕೆರೆದುಕೊಳ್ಳಲು ಶುರು ಮಾಡಿದರು. ಪಾಪ ಏನೋ ಸಮಾಧಾನ ಆಗಲಿಲ್ಲ ಅಂತ ಕಾಣುತ್ತೆ. ನೋಡ.. ನೋಡುತ್ತಲೇ.. ವೀಗ್ ತೆಗೆದು ಕೆರೆದುಕೊಂಡರು. ನಾನು ಘಾಬರಿ. ಏನು ಹೆದರಬೇಡಿ ಎಂದು ಹೇಳಿದರು. ಕೂದಲು ನನಗೆ ಹುಟ್ಟಾ ಇಲ್ಲ ಎಂದರು. ಅದಕ್ಕೆ ಇರಬೇಕು ಇಷ್ಟು ಜಾಣ ಡಾಕ್ಟರ್ ಎಂದು ಮನದಲ್ಲೇ ಅಂದು ಕೊಳ್ಳುತ್ತಿದ್ದಾಗ, ಒಬ್ಬ ವೀಗ್ ವ್ಯಾಪಾರ ಮಾಡುವ ಆಸಾಮಿ ಬಂದು, ಸರ್ ಎಷ್ಟು ವೀಗ್ ಕೊಡಲಿ ಎಂದು ಡಾಕ್ಟರನ್ನು ಕೇಳಿದ. ಮತ್ತೆ ಡಾಕ್ಟರ್ ನನಗೆ ಸಮಾಧಾನ ಮಾಡಿ ಅದು ನಿಮಗೆ ಅಲ್ಲ ಎಂದು ಹೇಳಿ. ನನಗೆ ಫೀಸ್ ಕೊಡಲು ಹೇಳಿದರು. ಎಷ್ಟು ಎಂದಾಗ. ಬರಿ 2000 ರೂಪಾಯಿ!

ವಿಧಿ ಇಲ್ಲದೇ ಕೊಟ್ಟು ಮನೆಗೆ ಬಂದೆ. ದಿನವೂ ಔಷಧ ಲೇಪನ ಶುರು ಹಚ್ಚಿ ಕೊಂಡೆ. ನನ್ನ ಮಡದಿ ರೀ... ನಿಮ್ಮ ತಲೆ ವಾಸನೆ ಗೋಮೂತ್ರ ಹಾಗೆ ಬರುತ್ತೆ ಎಂದಳು. ಲೇ ಅದು ಫೇಮಸ್ ಡಾಕ್ಟರ್ ಕೊಟ್ಟ ಔಷಧಿ ಎಂದು ಹೇಳಿ ಸಮಾಧಾನ ಮಾಡಿದೆ. ಅಪ್ಪ ನೀನು ಹೊರಗೆ ಬಿದ್ದುಕೊ ಎಂದು ಮಗ ದುಂಬಾಲು ಬಿದ್ದ. ವಿಧಿ ಇಲ್ಲ ಎಂದು ಹೊರಗೆ ಮಲಗಿಕೊಂಡೆ. ಹತ್ತು ದಿನ ಹಾಗೆ ಲೇಪನ ಮಾಡಿದ್ದೆ ಮಾಡಿದ್ದು. ಮಡದಿ, ರೀ... ಮೇಹಂದಿ ಹಚ್ಚಿಕೊಳ್ಳಬಾರದೇ ಎಂದು ಹೇಳಿದರೂ ಕೇಳಲಿಲ್ಲ. ನೋಡಿ, ಒಂದು ತಿಂಗಳು ಆದರೂ ಒಂದು ಕೂದಲು ಕೂಡ ಕರಿ ಆಗಲಿಲ್ಲ ಎಂದು ಅಪಹಾಸ್ಯ ಮಾಡಿದಳು.

ಕಡೆಗೆ ಒಂದು ದಿನ ನನ್ನ ಗೆಳೆಯ ಕೇಶವ್ ಕುಲ್ಕರ್ಣಿ ಕರೆ ಮಾಡಿದ್ದ. ನನ್ನ ಸಮಸ್ಯೆ ಹೇಳಿದೆ. ಅವನು ನೋಡು ಗೋಪಿ ದಿನಾಲೂ ರಾಗಿ ಹಿಟ್ಟು ಹಚ್ಚು ಎಂದು ಹೇಳಿದ. ಕಡೆಗೆ ದಿನವೂ ರಾಗಿ ಹಿಟ್ಟು. ಒಂದು ದಿನ ರಾಗಿ ಹಿಟ್ಟು ಹಚ್ಚಿ ಮಲಗಿ ಕೊಂಡಾಗ, ತಲೆಯಲ್ಲ ಕೆರೆತ ಮತ್ತು ಉರಿ ಎದ್ದು ನೋಡುತ್ತೇನೆ. ತಲೆ ತುಂಬಾ ಇರುವೆ. ನನ್ನ ಮಡದಿ ಸಿಹಿ ತಿಂಡಿಗೆ ಮಾಡಿದ ಸಿಹಿ ರಾಗಿ ಬಳಿದುಕೊಂಡಿದ್ದೆ!

ಮತ್ತೊಂದು ತಿಂಗಳು ಕಳೆಯಿತೇ ಹೊರತು ಬಿಳಿ ಕೂದಲು ಕರಿ ಆಗಲಿಲ್ಲ. ಮತ್ತೆ ಅದೇ ನಾಟಿ ಡಾಕ್ಟರ್ ಹುಡುಕಿ ಹೋದೆ. ಮತ್ತೆ ಒಂದು ಸಾವಿರ ರೂಪಾಯಿ ಕೊಟ್ಟು ಮತ್ತೊಂದು ಔಷಧ ತಂದೆ. ಮತ್ತೆ ದಿನವೂ ಅದನ್ನು ಹಚ್ಚಿಕೊಂಡು ಮಲಗಿದೆ. ಒಂದೇ ತಿಂಗಳ ಪ್ರಯೋಗದ ನಂತರ ನನ್ನ ತಲೆಯಲ್ಲಿ ಎಲ್ಲ ಕೂದಲು ಕರಿ.... :-) ಆದರೆ ಇದ್ದ ಬಿಳಿ ಕೂದಲು ಎಲ್ಲವೂ ಬಿದ್ದು ಹೋಗಿದ್ದವು... :-(. ಈಗ ನನ್ನ ತಲೆ ನೋಡಿದರೆ ಬೆಂಗಳೂರಿನಿಂದ ಧಾರವಾಡದ ನಡುವೆ ಸಿಗುವ ಸ್ಟಾಪ್ ಗಳ ಹಾಗೆ 20-30 ಕಿಲೋ ಮೀಟರ್ ದೂರ.. ದೂರ ಇವೆ.

ಈಗ ನಾನು ಯಾರಾದರೂ ಮತ್ತೆ ಕೂದಲು ಬರುವ ಹಾಗೇ ಮಾಡುವ ವೈದ್ಯರನ್ನು ಹುಡುಕುತ್ತಾ ಇದ್ದೇನೆ. ಬಿಳಿ ಕೂದಲು ಆದರೂ ಪರವಾಗಿಲ್ಲ. ಏಳು ಬಣ್ಣ ಸೇರಿ ತಾನೇ ಬಿಳಿ ಬಣ್ಣ ಆಗುವದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+