ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡಹೆಂಡಿರು ಮತ್ತು ಪುರಂದರದಾಸರು

By Staff
|
Google Oneindia Kannada News

Purandara Dasaruಪುರಂದರದಾಸರಿಂದ ಪ್ರೇರಣೆಹೊಂದಿ ಯುವಕ ಹಂಸಾನಂದಿ ಉಲಿದ ಸುಧಾರಿತ ದಾಂಪತ್ಯ ಸುಧಾರಣಾ ಗೀತ ಮತ್ತು ಚಿಟಿಕೆ ವ್ಯಾಖ್ಯಾನ.

ಲೇಖನ : ಹಂಸಾನಂದಿ, ಉತ್ತರ ಕ್ಯಾಲಿಫೋರ್ನಿಯ

ನೀವು ಏನು ಬೇಕಾದ್ರೂ ಹೇಳಿ, ಪುರಂದರ ದಾಸರು ಅಂದ್ರೆ ನಂಗಿಷ್ಟ. ವ್ಯಾಸೋಚ್ಛಿಷ್ಟಂ ಜಗತ್ಸರ್ವಂ ಅನ್ನೋ ಮಾತಿದೆ. ಅಂದ್ರೆ, ವ್ಯಾಸರು ಹೇಳಿ ಬಿಟ್ಟುಳಿದದ್ದೇ ಈ ಜಗತ್ತಲ್ಲಿರೋದೆಲ್ಲ ಅಂತ. ಮಹಾಭಾರತ ಬರೆಯೋದಲ್ದೆ, ವೇದಗಳನ್ನ ನಾಕು ಪಾಲು ಮಾಡಿ ವಿಂಗಡಿಸಿದ್ದೇ ವ್ಯಾಸರು, ಮತ್ತೆ ಹದಿನೆಂಟು ಪುರಾಣಗಳನ್ನೂ ಬರ್ದಿದ್ದೂ ಅವರೇ ಅಂತ ನಂಬಿಕೆ ಇದೆಯಲ್ಲ. ನನಗೆ ಬಿಡಿ - ವೇದ ಓದಿದರೆ ನೇರವಾಗಿ ಅರ್ಥವಾಗೋಲ್ಲ. ಪುರಾಣ ಓದೋದಕ್ಕೆ ವೇಳೆ ಸಾಲದು. ಅದಕ್ಕೇ ನಾನು 'ದಾಸೋಚ್ಛಿಷ್ಟಂ ಜಗತ್ಸರ್ವಂ' ಅಂದ್ಕೊಂಡ್ಬಿಡ್ತೀನಿ. ಯಾಕೆ ಅಂತೀರಾ? 'ದಾಸರೆಂದರೆ ಪುರಂದರ ದಾಸರಯ್ಯ" ಅನ್ನೋ ಮಾತನ್ನ ಅವರ ಗುರುಗಳೇ ಹೇಳಿಬಿಟ್ಟಿರೋದ್ರಿಂದ, ಈ ದಾಸರು ಯಾರು ಅಂತ ನಾನು ಬಿಡಿಸಿ ಹೇಳ್ಬೇಕಿಲ್ಲ. ಅಲ್ವಾ?

ಪುರಂದರ ದಾಸರು ಬರ್ದಿರೋದೆಲ್ಲ ಕನ್ನಡದಲ್ಲಿ. ಓದಿದ್ರೆ, ನನಗೆ ಅರ್ಥವಾಗೋದೇನೂ ಕಷ್ಟವಿಲ್ಲ. ಅಲ್ದೆ, ಅವ್ರೇನೂ ಸರ್ಗದ ಮೇಲೆ ಸರ್ಗ ಕವಿತೆ ಹೊಸೆದಂತೆ ಕಾಳಿದಾಸನ ಹಾಗೆ ದೊಡ್ಡ ದೊಡ್ಡ ಕಾವ್ಯಗಳನ್ನೂ ಬರೆದಿಲ್ಲ. ಅದು ಬಿಡಿ ಕುಮಾರವ್ಯಾಸ ಹರಿಹರ ರಾಘವಾಂಕ ರತ್ನಾಕರವರ್ಣಿಯರ ಹಾಗೆ ಸಾಂಗತ್ಯ ರಗಳೆ ಷಟ್ಪದಿಯ ಗೊಡವೆಗೂ ಅವರು ಹೋಗಿಲ್ಲ. ಏನಿದ್ರೂ ಅವರು ಬರೆದಿರೋದು ಸಣ್ಣ ಸಣ್ಣ ಹಾಡುಗಳು. ಒಂದು ಓದಿದ್ಮೇಲೆ ಇನ್ನೊಂದು ಇದನ್ನೇ ಓದ್ಬೇಕು ಅನ್ನೋದಕ್ಕೆ ಅಲ್ಯಾವ ಕಥೇನೂ ಇರೋದಿಲ್ಲ. ಅಲ್ದೆ ಸರಿಸುಮಾರು ಅರ್ಥವಾಗ್ದಿರೋ ಪದಗಳೂ ಅಲ್ಲೊಂದು ಇಲ್ಲೊಂದು ಹೊರತು ನಾನೇನೂ ಪಕ್ದಲ್ಲಿ ನಿಘಂಟು ಇಟ್ಕೊಂಡು ಕೂರ್ಬೇಕಾಗಿಲ್ಲ. ಇದೇಕಾರಣಕ್ಕೆ ಆದಾದಾಗ ಒಂದೊಂದು ಹೊಸ ಹಾಡನ್ನ ಓದಿ ನೋಡೋದು ಅಂದ್ರೆ ನನಗಂತೂ ಬಹಳ ಹಿಡಿಸುತ್ತೆ.

ಅವರ ಬರವಣಿಗೆ ಅನ್ನೋದು ಅವರ ಕಾಲಕ್ಕೊಂದು ಕನ್ನಡಿ ಅಂತ ನಂಗನ್ಸತ್ತೆ. ನಾವು ಸುಮ್ಸುಮ್ನೆ ಹೇಳ್ತಾ ಇರ್ತೀವಿ - ವಿಜಯ ನಗರ ವೈಭವದ ಕಾಲ - ರಸ್ತೆ ರಸ್ತೆಲಿ ಮುತ್ತು ರತ್ನ ಹಾಕ್ಕೊಂಡು ಸೇರಲಿ ಅಳ್ಕೊಂಡು ಮಾರ್ತಿದ್ರು ಅಂತ. ಆದ್ರೆ ಆಗ್ಲೇ ದಾಸರು ಹೇಳಿರೋದು ನೋಡಿ 'ಸತ್ಯವಂತರಿಗಿದು ಕಾಲವಲ್ಲ' ಅಂತ! ಅಂದ್ರೆ, ಎಲ್ಲಾ ಕಾಲ್ದಲ್ಲೂ ಹುಳುಕು ಇದ್ದೇ ಇತ್ತು ಅಂತಾಯ್ತಲ್ಲ. ಅಯ್ಯೋ - ಏನೋ ಹೇಳಕ್‌ಹೊರ್ಟು, ಏನೋ ಹೇಳ್ತಿದೀನಿ ನೋಡಿ. ಎಷ್ಟೇ ಆದ್ರೂ, ಅವತ್ತಿನ ಕಾಲವನ್ನ ಇವತ್ತಿನ ಕಣ್ಣಲ್ಲಿ ನಾವು ದಿಟ್ಟಿಸಿ ನೋಡುವಾಗ, ನಮಗೆ ಅದು ಪೂರಾ ಸರಿಹೋಗದಿರಬಹುದು. ಮತ್ತೆ ಅಪ್ಪ ಹಾಕಿದಾಲದ್ ಮರ ಅಂತ ಅದರ ಬಿಳಲನ್ನೇ ಎಣಿಸ್ತಾ ಇರ್ಬೇಕಿಲ್ಲ ಅನ್ನೋದೂ ನಿಜ. ಆದ್ರೇನಂತೆ, ಆಲದ ಮರದಡೀಲಿ, ನೆರಳು ಚೆನ್ನಾಗಿದ್ದಾಗ ಕೂರೋದ್ರಲ್ಲೇನಿದೆ ತಪ್ಪು? ಅಥವಾ, ಮರದ ಮೇಲೆ ಹಕ್ಕಿ ಹಾಡೋದನ್ನ ಕೇಳೋದ್ರಲ್ಲೇನಿದೆ ತಪ್ಪು? ಹಾಗೇ ಎಲ್ಲವನ್ನೂ ಒರೆಗೆ ಹಚ್ಚಿ ಒಳ್ಳೇದನ್ನ ತೊಗೋಳೋಣ. ಇವತ್ತಿಗೆ ಹೊಂದದ್ದನ್ನ ಬಿಟ್ಬಿಡೋಣ. ಅಲ್ವೇ?

ದಾಸರು ಒಂದು ಹಾಡು ಬರ್ದಿದಾರೆ - ಹೆಂಡತಿ, ಪ್ರಾಣ ಹಿಂಡುತಿ ಅಂತ ಶುರುವಾಗತ್ತೆ ಅದು. ಅವರು ಅದನ್ನ ಅವರ್ಹೆಂಡ್ತಿ ಬಗ್ಗೆ ಬರ್ದ್ರೋ, ಅಥ್ವಾ ಸುಮ್ಮನೆ ಎಲ್ಲಾ ಹೆಂಗಸ್ರ ಮೇಲೆ ಬರ್ದ್ರೋ, ಅಥ್ವಾ ಏನ್ಕಥೆ ಅನ್ನೋದು ಗೊತ್ತಿಲ್ಲ ನನಗೆ. ಆದ್ರೆ ಒಂದಂತೂ ನಿಜ. ಆ ಕಾಲದಲ್ಲಿ, ಹೆಣ್ಣಿಗೆ ಹಿಡಿಸ್ತೋ ಇಲ್ವೋ, ಯಾರೋ ಒಬ್ಬನ್ನ ಕಟ್ಟಿ ಮದುವೆ ಮಾಡಿ ತವರ್ಮನೆಯಿಂದ ಕಳಿಸ್ಬಿಟ್ರೆ ಸಾಕು ಅಂತ ಎಷ್ಟೋ ಜನ ಅಂದ್ಕೋತಿದ್ರು ಅಂತ ಕಾಣತ್ತೆ. ದಾಸರು ಒಂದು ಹಾಡಲ್ಲಿ, ಮುದಿವಯಸ್ಸಿನ ಗಂಡನ್ನ ಕೈ ಹಿಡಿದ ಒಬ್ಬ ಹುಡುಗಿಯ ಕೊರಗನ್ನ ಚೆನ್ನಾಗಿ ಚಿತ್ರಿಸಿದ್ದಾರೆ. ಇಲ್ನೋಡಿ.

ಪಲ್ಲವಿ:

ಮುಪ್ಪಿನ ಗಂಡನ ಒಲ್ಲೆನು ನಾನು
ತಪ್ಪದೆ ಪಡಿಪಾಟ ಪಡಲಾರೆನಕ್ಕ

ಚರಣಗಳು:

ಉದಯದಲ್ಲೇಳಬೇಕು ಉದಕ ಕಾಸಲುಬೇಕು
ಬದಿಯಲ್ಲಿ ನಾನಿದ್ದು ಬಜೆ ಅರೆಯಬೇಕು
ಹದನಾಗಿ ಎಲೆ ಸುಣ್ಣ ಅಡಿಕೆ ಕುಟ್ಟಲುಬೇಕು
ಬಿದಿರುಕೋಲನು ತಂದು ಮುಂದೆ ಇಡಬೇಕಕ್ಕ

ಮೆತ್ತನೆ ರೊಟ್ಟಿ ಮುದ್ದೆಯ ಮಾಡಲುಬೇಕು
ಒತ್ತಿ ಒದರಿ ಕೂಗಿ ಕರೆಯಲುಬೇಕು
ವಾಕರಿಕೆಯು ಮೂಗಿನ ಸಿಂಬಳ
ಮತ್ತೆ ವೇಳೆಗೆ ಎದ್ದು ತೊಳೆಯಬೇಕಕ್ಕ

ಗೋಣಿ ಹಾಸಲು ಬೇಕು ಬೆನ್ನ ಗುದ್ದಲುಬೇಕು
ಗೋಣು ಹಿಡಿದು ಮೇಲಕ್ಕೆತ್ತಬೇಕು
ಶ್ರೀನಿಧಿ ಪುರಂದರ ವಿಟ್ಠಲನ್ನ ನೆನೆಯುತ್ತ
ನಾನೊಂದು ಮೂಲೇಲಿ ಒರಗಬೇಕಕ್ಕ

ಈ ಹಾಡಿಗೆ ಹೆಚ್ಚಿಗೆ ವಿವರಣೆ ಏನೂ ಬೇಕಿಲ್ಲ ಅಲ್ವೇ? ಪುರಂದರ ವಿಠಲನ್ನ ನೆನೆಯಬೇಕು ಅನ್ನೋದು ಹಾಡಿನ ಕೊನೆಯಲ್ಲಿದ್ರೂ, ಬರೀ ಅದನ್ನ ಮಾಡ್ತಾ ಸಂಸಾರದಲ್ಲಿ ಸಂತೋಷ ಇಲ್ದೇ ಇರೋದೂ ಸರಿಯಲ್ಲ ಅನ್ನೋ ಭಾವನೆ ಕೂಡ ಹಾಡಿನ ಒಳ್ಗೇ ಸೇರ್ಕೊಂಡಿದೆ ಅಂತ ನಂಗನ್ಸತ್ತೆ. ಆ ಕಾಲ್ದಲ್ಲಿ ಎಷ್ಟೋ ಹೆಂಗೆಳೆಯರಿಗೆ ಈ ಪಾಡಾಗ್ತಿತ್ತು ಅಂತ್ಲೂ ಅನ್ನಿದ್ತಾ ಇದೆ.

ಆದ್ರೆ 'ಚಕ್ರವತ್ಪರಿವರ್ತಂತೇ ದುಃಖಾನಿ ಚ ಸುಖಾನಿ ಚ" ಅಲ್ವೇ? ಅತ್ತೆಗೆ ಒಂದು ಕಾಲವಾದ್ರೆ, ಸೊಸೆಗೆ ಇನ್ನೊಂದು ಕಾಲ. ಇನ್ನೊಂದು ಹಾಡಿನಲ್ಲಿ, ಪಾಪ, ಖಾಯಿಲೆಗೊಳಗಾದ ಹೆಂಡತಿಯನ್ನ ಚೆನ್ನಾಗಿ ನೋಡಿಕೊಳ್ತಿರೋ ಒಬ್ಬ ಗಂಡನ ವಿಷಯ ಬರೀತಾರೆ. ಒಂದ್ಕಡೆ ಹೆಂಡತಿ ಗಂಡನ್ನ ನೋಡ್ಕೊಳೋವಾಗ, ಗಂಡನೂ ಹೆಂಡ್ತಿಯನ್ನ ಹಾಗೇ ನೋಡ್ಕೋಬೇಕು ಅನ್ನೋದು ಒಂದು ಆಶಯವಾದ್ರೆ, ಇನ್ನೊಂದ್ಕಡೆ ಬಗೆಬಗೆ ತಿನಿಸುಗಳ ಬಣ್ಣನೆ ಮಾಡ್ಬೇಕು ಅಂತಲೇ ಈ ಹಾಡನ್ನ ಬರೆದಹಾಗಿದೆ. ಓದಿ ನೋಡಿ.

ಪಲ್ಲವಿ : ಬೇನೆ ತಾಳಲಾರೆ ಬಾ ಎನ್ನ ಗಂಡ ಬೇನೆ ತಾಳಲಾರೆನು

ಚರಣಗಳು:

ಬೇಳೆ ಬೆಲ್ಲವ ತಂದು ಹೋಳಿಗೆಯನು ಮಾಡಿ ಬಾಳೆಹಣ್ಣ ತಂದು ಬದಿಯಲ್ಲಿ ಬಡಿಸಿ
ಹಾಲು ಸಕ್ಕರೆ ಹದ ಮಾಡಿ ತಂದಿಡು ಎರಕದ ಗಿಂಡಿಲಿ ನೀರ ತಾರೊ ಗಂಡ

ಗಸಗಸೆ ಲಡ್ಡಿಗೆ ಹಸನಾದ ಕೆನೆ ಹಾಲು ಬಿಸಿಯ ಹುರಿಗಡಲೆ ಬಿಳಿಯ ಬೆಲ್ಲ
ರಸದಾಳಿ ಕಬ್ಬು ಸುಲಿದು ಮುಂದಿಟ್ಟರೆ ವಿಷ ವಿಷವೆಂದು ನಾ ತಿಂಬೆನೊ

ಹಪ್ಪಳ ಕರಿದಿಡು ಸಂಡಿಗೆ ಹುರಿದಿಡು ತುಪ್ಪದಿ ನಾಲ್ಕು ಚಕ್ಕುಲಿ ಕರಿದು
ಬಟ್ಟಲೊಳು ತುಪ್ಪ ಕೆನೆ ಮೊಸರ ಹಾಕಿಡು ಬಚ್ಚಲಿಗೆ ಬರುತೇನೆ ನೀರ ಹದಮಾಡೊ

ಎಣ್ಣೆ ಬದನೆಕಾಯಿ ಬೆಣ್ಣೆ ಸಜ್ಜಿಯ ರೊಟ್ಟಿ ಸಣ್ಣಕ್ಕಿಬೋನ ಬದಿಯಲಿಟ್ಟು
ಸಣ್ಣ ತುಂಚಿಯ ಲಿಂಬೆ ಲಲಮಾಗಡಿಬೇರು ಉಣ್ಣುಣ್ಣು ಎಂದರೆ ಉಂಬೆನೊ ಗಂಡ

ಗಂಧ ಕುಂಕುಮವನು ಬದಿಯಲಿ ತಂದಿಡು ಮಡಿಯಲಿ ತಂಬಿಗೆ ನೀರ ತಾರೋ
ಮಣೆಯನ್ನೆ ಹಾಕಿ ಕೆಳಗೆ ಬಟ್ಟಲಿಡು ತೀರ್ಥವನೆ ತೊಕ್ಕೊಂಡು ನಾ ಬರುತೇನೆ ಗಂಡ

ನಾನುಂಡು ಇದ್ದದ್ದು ಬಾಲರಿಗುಣಲಿಕ್ಕೆ ಮೇಲಿಟ್ಟು ಮುಚ್ಚಿಡೋ ಎನ್ನ ಗಂಡ
ಸ್ನಾನ ಮಾಡಿಕೊಂಡು ಸೀರೆಯ ತೆಕ್ಕೊಟ್ಟು ತಾಂಬೂಲ ತೆಕ್ಕೊಂಡು ಬಾರೊ ನನ್ನ ಗಂಡ

ಸಣ್ಣ ನುಚ್ಚು ಇಟ್ಟುಕೊ ಗೊಡ್‍ಹುಳಿ ಕಾಸಿಕೊ ದೊನ್ನೆಯೊಳಗೆ ತುಪ್ಪ ಬಡಿಸಿಕೊ
ಎಣ್ಣೆ ತಟಕು ಉಪ್ಪಿನಕಾಯಿ ಸಂಗಾತ ಚೆನ್ನಾಗಿ ಉಣ ಬಂದು ಕಾಲೊತ್ತೊ ಗಂಡ

ಹೋಳಿಯ ಹುಣ್ಣಿಮೆ ತಣ್ಣನೆ ತಂಗಾಳಿ ಚಳಿ ಬಹಳ ಗಂಡ ಕದವ ಮುಚ್ಚೊ
ಮಂಚದ ಮೇಲೆ ಮಲಗಿದೆನ್ನನು ಸಕಲಾದಿ ಹಚ್ಚಡ ಬಿಗಿ ಬಿಗಿದ್‍ಹೊಚ್ಚೊ

ಸದ್ದು ಮಾಡದ ಹಾಗೆ ಎದ್ದು ಕದವ ಮುಚ್ಚೊ ಮುದ್ದು ಸ್ವಾಮಿಯನ್ನೆ ನೆನವುತಲಿ
ಮುದ್ದು ಶ್ರೀ ಪುರಂದರ ವಿಟ್ಟಲನ ನೆನೆವುತ ನೀನೊಂದು ಮೂಲೆಲಿ ಬಿದ್ದುಕೊಳ್ಳೋ ಗಂಡ

ಅದೆಷ್ಟು ತರಹೇವಾರಿ ತಿಂಡಿಗಳಪ್ಪ! ಕೆಲವಂತೂ ನಾನು ಇಲ್ಲೀ ವರೆಗೇ ಕೇಳೂ ಇಲ್ಲ ನೋಡೂ ಇಲ್ಲ! ಈ ಹಾಡು ಓದಿ ನಿಮ್ಮಗಳಿಗೂ ಬಗೆಬಗೆ ತಿಂಡಿ ತಿನ್ನೋ ಆಸೆ ಆದ್ರೆ, ಅದಕ್ಕೆ ನಾನಲ್ಲ ಕಾರಣ. ದಾಸರ ನಿಂದಿಸಬೇಡ ಅಂತ ಅವರೇನೋ ಹೇಳ್ಬಿಟ್ರು. ಆದ್ರೆ, ಈಗ ನಾನು ಹೇಳೋದು ಕೇಳಿ. ಈ ಹಾಡು ಓದಿದ್ಮೇಲೆ ಗಂಡಸರು ನಿಮಗೆ ಇದ್ರಲ್ಲಿರೋ ಹೊಸತೋ ಹಳತೋ ಯಾವ್ದಾದ್ರೂ ಸರಿ; ತಿಂಡಿ-ತಿನಿಸು ತಿನ್ನೋ ಆಸೆ ಆದ್ರೂ, ಅಲ್ಲದೆ ತಿಂಡಿ ಸಿಗದೆ ನಿರಾಸೆ ಏನೇ ಆದ್ರೂ, ದಾಸರನ್ನೇ ನಿಂದಿಸಿ. ಹೆಂಗೆಳೆಯರು? ಅದಕ್ಯಾಕೆ ಚಿಂತೆ ಮಾಡ್ತೀರಾ? ನಿಮ್ಮ ಗಂಡಂದ್ರು ಇರೋದು ಯಾಕೆ? ಏನಂತೀರಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X