• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಟಿಎನ್‌ಗೆ ಮೈಸೂರಿನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

By Staff
|

ಕಲಾವಿದರ ಜೊತೆಗಿನ ಒಡನಾಟದ ಅನುಭವಗಳನ್ನು ಕಥನರೂಪದಲ್ಲಿ ಉಣಬಡಿಸುತ್ತಿದ್ದ; ಸಂಗೀತದ ರಸನಿಮಿಷಗಳನ್ನ ಉಪನ್ಯಾಸಗಳಲ್ಲಿ ಮೆಲುಕು ಹಾಕುತ್ತಿದ್ದ ಅಪರೂಪದ ವಿಜ್ಞಾನ ಬರಹಗಾರ ಜಿಟಿ ನಾರಾಯಣರಾವ್ ಅವರಿಗೆ ಅವರ ಮಕ್ಕಳು, ಮೊಮ್ಮಕ್ಕಳು, ಗೆಳೆಯರು, ಆತ್ಮೀಯರು ಮೈಸೂರಿನಲ್ಲಿ ನುಡಿನಮನ, ಕಾವ್ಯನಮನ ಸಲ್ಲಿಸಿದರು.

ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರು

Prof De.Ja.Gowda speaking on GT Narayana Raoಆ ವೇದಿಕೆಯ ಮೇಲೆ ಕುರ್ಚಿಗಳಿರಲಿಲ್ಲ; ಅಲಂಕರಿಸಿದ ಕಾಫೀಮೇಜೂ ಇರಲಿಲ್ಲ. ಅಧ್ಯಕ್ಷರು ಇಲ್ಲ; ಭಾಷಣಕ್ಕೆಂದೇ ಬರಮಾಡಿಕೊಂಡ ಅತಿಥಿಮಹಾಶಯರಿರಲಿಲ್ಲ. ಕಾರ್ಯಕ್ರಮ ನಡೆಸಿಕೊಡುವವರು (ಅವರನ್ನ ಕಾರ್ಯಕ್ರಮ ನಿಯೋಜಕರೋ, ನಿರೂಪಕರೋ, ನಿರ್ವಾಹಕರೋ- ಏನಾದರೂ ಅನ್ನಿ, ಅನ್ನಿಸಿಕೊಳ್ಳಲೆ೦ದೇ ಇರುವವರು ಅಲ್ಲವೇ ಅವರು!) ಒಬ್ಬರು ಮಾತ್ರ ವ್ಯಾಸಪೀಠಸ್ತಂಭ (ಪೋಡಿಯಮ್)ದ ಮುಂದೆ ನಿಂತು ಈಗೇನು, ಮುಂದೇನು, ಆಮೇಲೇನು- ಎನ್ನುವುದನ್ನ ಹೇಳುತ್ತ ಸೂತ್ರಧಾರರಾಗಿದ್ದರು. ಸಹಾಯಕರು ಇದ್ದರೂ ಅವರುಗಳು, ರಂಗಸಜ್ಜಿಕೆ ಮುಗಿದೊಡನೆ, ನೇಪಥ್ಯಕ್ಕೆ ಸರಿದು ಮರೆಯಾಗಿಯೋ ಅಂತರ್ಧಾನರಾಗಿಯೋ ದೂರವಾಗಿದ್ದರು, ಮೇಳದವರಾಗಿ ತಮ್ಮ ಅಂಗಚೇಷ್ಟೆಗಳೊಡನೆ ಸುತ್ತಮುತ್ತ ಸುಳಿದಾಡುತ್ತಿರಲಿಲ್ಲ.

ವೇದಿಕೆಯ ಹಿಂಬದಿಯಲ್ಲಿ ಗೋಡೆಗೆ ತಗುಲಿಸಿದಂತೆ ಒಂದು ತೆರೆ. ಆ ತೆರೆಗೆ ಅಂಟಿಕೊಂಡಂತೆ, ಮೇಲೆ ಛಾವಣಿಯಿಂದ ನೆಲಮುಟ್ಟುವಷ್ಟು ಸುಮಾರು ಹನ್ನೆರೆಡು ಅಡಿ ಎತ್ತರದ ಆರಡಿ ಅಗಲದ, ಒಂದೇ ಒಂದು ವರ್ಣಚಿತ್ರ. ಎದ್ದು ಬರುತ್ತಿದ್ದಾರೇನೋ ಎನ್ನುವಷ್ಟರ ಮಟ್ಟಿಗೆ ಉದ್ದಗಲಕ್ಕೂ ವ್ಯಾಪಿಸಿಕೊಂಡಿರುವ ಇಳಿಬಿಟ್ಟ ಆ ಭಾವಚಿತ್ರದಲ್ಲಿ ನಗುಮೊಗದ ಪ್ರೊ| ಜಿಟಿಎನ್ ರಾರಾಜಿಸುತ್ತಿದ್ದರು. ತೈಲಚಿತ್ರದ ಪಾದದಡಿ ನೆಲದಮೇಲೆ ಅಗಲಗಲದ ತಟ್ಟೆಗಳಲ್ಲಿ ಮಂಗಳದ್ರವ್ಯಗಳು, ಹಣ್ಣುಗಳು ತುಂಬಿದ ಹರಿವಾಣಗಳು, ಬಗೆ ಬಗೆಯ ಹೂ ಬುಟ್ಟಿಗಳು, ಇನ್ನೊಂದೆರಡು ಹರಿವಾಣಗಳಲ್ಲಿ ಬಣ್ಣ ಬಣ್ಣದ ಕಾಗದಗಳಿಂದ ಆಚ್ಛಾದಿತವಾದ ಕನ್ನಡದಲ್ಲಿ ವೈಜ್ಞಾನಿಕ ಬರಹದ ಉಡುಗೊರೆಯ ಪುಸ್ತಕಗಳು ಅರ್ಧಚಂದ್ರಾಕಾರದಲ್ಲಿ ರಂಗೋಲಿ ವಿನ್ಯಾಸಗಳ ಪುಷ್ಪಾಲಂಕಾರದ ನಡುವೆ ಶೋಭಿಸುತ್ತಿದ್ದವು.

ವೇದಿಕೆಯ ಎಡ ಬದಿಯಲ್ಲಿ ಒಂದು ಪ್ರತ್ಯೇಕ ಪರದೆಯ ಮೇಲೆ ಜಿಟಿಎನ್ ಜೀವನದ ಮುಖ್ಯಘಟ್ಟಗಳನ್ನು ನೆನಪಿಸುವ ಭಾವಚಿತ್ರಗಳ ಪ್ರಾತ್ಯಕ್ಷಿಕೆಯ ಪ್ರದರ್ಶನವೊಂದು ನಿರಂತರವಾಗಿ ಹಾದುಹೋಗುತ್ತಿತ್ತು- ಕಾರ್ಯಕ್ರಮದ ಉದ್ದಕ್ಕೂ. ಜಿಟಿಎನ್ ಅವರ ಮನೆತನದ ಹಿರಿಯರು, ಅವರ ಕುಟುಂಬ ಮಕ್ಕಳು ಮೊಮ್ಮಕ್ಕಳು, ಒಡನಾಡಿಗಳು, ಗೆಳೆಯರು, ಆತ್ಮೀಯರು, ಭಾಗವಹಿಸಿದ ಮುಖ್ಯ ಕಾರ್ಯಕ್ರಮಗಳು, ಪುರಸ್ಕಾರ, ಸನ್ಮಾನ, ಪ್ರಶಸ್ತಿ ಪ್ರದಾನ ಸಮಾರಂಭಗಳ ಇಣುಕುನೋಟಗಳು- ತೆರೆಯಮೇಲೆ ಮೂಡಿ ಮಾಯವಾಗುತ್ತಿದ್ದವು; ಆ ಚಿತ್ರಗಳ ಶೀರ್ಷಿಕೆಗಳೂ ಯಥೋಚಿತವಾಗಿದ್ದವು.

ಮೈಸೂರಿನ ಜನತೆಯ ಪರವಾಗಿ, ಜಿಟಿಎನ್ ಅಭಿಮಾನಿಗಳು ಒಂದೆಡೆ ಕಲೆತು, ಇತ್ತೀಚೆಗೆ ಅಗಲಿದ ತಮ್ಮ ನೆಚ್ಚಿನ ಆದರ್ಶವ್ಯಕ್ತಿಯೊಬ್ಬರಿಗೆ ತಮ್ಮ ಶ್ರದ್ಧಾಂಜಲಿಯನ್ನು ಸಮರ್ಪಿಸಲು ಸೇರಿದ್ದ ಸನ್ನಿವೇಶ ಅದು. ಎರಡನೆಯ ಸಾಲಿನ ಖಾಲಿ ಕುರ್ಚಿಯೊಂದರಮೇಲೆ ಜಿಟಿಎನ್ ಅವರ ಊರುಗೋಲು ಮತ್ತು ಅದರ ಮೇಲೆ ಟೊಪ್ಪಿಗೆಯನ್ನು ಇಡಲಾಗಿತ್ತು. ಥಟ್ಟನೆ ನೋಡಿದರೆ, ಅಲ್ಲಿ ಜಿಟಿಎನ್ ಕುಳಿತಿದ್ದಾರೇನೋ ಎಂದೇ ಭಾಸವಾಗುತ್ತಿತ್ತು. ತಾವು ಸಾಕಷ್ಟು ಶ್ರಮವಹಿಸಿ, ಕಟ್ಟಿ ಬೆಳೆಸಿದ ಗಾನಭಾರತಿಯ ವೀಣೆ ಶೇಷಣ್ಣ ಭವನದಲ್ಲಿ ಅಭಿಮಾನಿಗಳಿಂದ ನುಡಿನಮನ ಕಾವ್ಯನಮನ ಸಂಗೀತನಮನ ಸ್ವೀಕರಿಸಿದ ದಿವಂಗತ ಜಿಟಿ ನಾರಾಯಣರಾಯರು ಇಡೀ ಸಭಾಂಗಣದಲ್ಲಿ ನೆರೆದಿದ್ದವರೆಲ್ಲ ನಿಬ್ಬೆರೆಗಾಗುವಂತೆ ನಗುನಗುತ್ತ ಕೇಂದ್ರವ್ಯಕ್ತಿಯಾಗಿ ಕಂಗೊಳಿಸುತ್ತಿದ್ದರು.

Fans pay homage to GTNಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ವಿಜ್ಞಾನ ಪರಿಷತ್ತು, ಮೈಸೂರು ವಿಶ್ವವಿದ್ಯಾನಿಲಯ, ಅದರ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಕನ್ನಡ ಅನುವಾದ ಅಕಾಡೆಮಿ, ಕೇಂದ್ರ ಆಹಾರ ಮತ್ತು ತಾಂತ್ರಿಕ ಸಂಶೋಧನಾಲಯ, ಪತ್ರಿಕೋದ್ಯಮ, ಹವ್ಯಾಸೀ ರಂಗಕರ್ಮಿಗಳ ತಂಡ, ನೃತ್ಯ ಸಂಗೀತ ಸಂಸ್ಥೆ, ಆಕಾಶವಾಣಿಯ ಮೈಸೂರು ಕೇಂದ್ರ, ಮೈಸೂರು ನಗರಪಾಲಿಕೆ, ಎನ್ ಸಿ ಸಿ, ಪ್ರತಿಷ್ಠಿತ ಪರಂಪರೆ' ಸಂಸ್ಥೆ, ಖ್ಯಾತ ಭ್ರಮರ ಪ್ರತಿಷ್ಠಾನ, ಸಂಗೀತ ಕಾರ್ಯಕ್ರಮಗಳಿಗೆ ಮೀಸಲಾದ ಗಾನಭಾರತಿ, ಚಿಂತನಶೀಲ ಅಂಕಣ ಬರಹಗಳಿಗೆ ಹೆಸರಾದವರು, ಮತ್ತು ಜಿಟಿಎನ್ ಬಂಧುಗಳು- ಹೀಗೆ, ನಗರದ ಹದಿನೆಂಟು ಸಂಸ್ಥೆಗಳ ಧೀಮಂತ ಮುಖ್ಯಸ್ಥರಿಗೆ ಪ್ರಾತಿನಿಧಿಕವಾಗಿ ಅಲ್ಲಿ ತಮ್ಮ ನುಡಿನಮನಗಳನ್ನು ಅರ್ಪಿಸಲು ಅನುವು ಮಾಡಿಕೊಡಲಾಗಿತ್ತು. ಜೊತೆಗೆ, ಸ್ವಲ್ಪ ಕಾಲ ಶಾಸ್ತ್ರೀಯ ಸ೦ಗೀತದ ಹಾಡುಗಾರಿಕೆಯ ಏರ್ಪಾಟೂ ಆಗಿತ್ತು. ಸಾಹಿತ್ಯ ಎನ್ನೊಡಲು. ಸಂಗೀತ ಎನ್ನುಸಿರು, ವಿಜ್ಞಾನ ಎನ್ನಶನ, ಅಧ್ಯಾತ್ಮ ಎನ್ನ ಗಮನ- ಎನ್ನುತ್ತಿದ್ದ ಈ ಅತ್ರಿಸೂನು ಮುದ್ರಾಂಕಿತ ವಚನಕಾರನಿಗೆ ತಮ್ಮ ನೆನಕೆಗಳನ್ನು ಸಲ್ಲಿಸಲು ಸುರಿಯುತ್ತಿದ್ದ ಮಳೆಯನ್ನೂ ಕಡೆಗಣಿಸಿ ಅಭಿಮಾನಿಗಳು ಗಾನಭಾರತಿಯ ಸಭಾಂಗಣದಲ್ಲಿ ನೆರೆದಿದ್ದರು.

ಗಾನಭಾರತಿಯ ಸಭಾಂಗಣದ ಮಹಡಿಯ ಮೇಲೆ, ಒಂದು ದಿವಾನಖಾನೆಯಲ್ಲಿ ಜಿಟಿಎನ್ ಜೀವನದ ಮುಖ್ಯ ಸನ್ನಿವೇಶಗಳ ಆಯ್ದ ಚಿತ್ರಗಳ ಪ್ರದರ್ಶನವಿತ್ತು. ಇತ್ತೀಚೆಗೆ ಪತ್ರಿಕೆಗಳಲ್ಲಿ ಅವರ ಬಗ್ಗೆ ಪ್ರಕಟವಾದ ಆರಿಸಿದ ಲೇಖನಗಳ ಪ್ರತಿಕೃತಿಗಳೂ ಭಿತ್ತಿಗಳನ್ನು ತುಂಬಿದ್ದವು. ಜಿಟಿಎನ್ ಅವರು ಬಳಸುತ್ತಿದ್ದ ನಡೆಗೋಲು, ಕೋತಿಟೋಪಿ, ಕನ್ನಡಕ, ಸಾಮಾನ್ಯವಾಗಿ ಧರಿಸುತ್ತಿದ್ದ ಉಡುಪುಗಳ ಒಂದೆರಡು ಮಾದರಿಗಳು- ಅಲ್ಲಿ ಪ್ರದರ್ಶಿತವಾಗಿದ್ದವು. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಪ್ರಕಟಿಸಿದ ವಿಶ್ವಕೋಶದ ಹದಿನಾಲ್ಕು ಸಂಪುಟಗಳನ್ನೂ ಅಲ್ಲಿ ಮುಟ್ಟಿ ನೋಡಬಹುದಾಗಿತ್ತು. (ಅವುಗಳ ವಿಜ್ಞಾನವಿಭಾಗಕ್ಕೆ ಜಿಟಿಎನ್ ಸಂಪಾದಕರಾಗಿರಲು ಕರೆತಂದವರು ಅ೦ದಿನ ಕುಲಪತಿ ಡಾ| ದೇ ಜವರೇಗೌಡರು.) ಜಿಟಿಎನ್ ಬರೆದು ಪ್ರಕಟಿಸಿದ (ಹೆಚ್ಚಾಗಿ, ಮಂಗಳೂರಿನ ಅತ್ರಿ ಪುಸಕಕೇ೦ದ್ರ'ವೇ ಅವುಗಳ ಪ್ರಕಾಶಕರು) ಗ್ರಂಥಗಳ ಪ್ರದರ್ಶನವಿತ್ತು. ಸಭಾಂಗಣಕ್ಕೆ ಬರುವ ಮುನ್ನ, ತಮಗಿದ್ದ ಸಮಯಾವಧಿಯಲ್ಲಿ, ಅಭಿಮಾನಿಗಳು ಅವನ್ನೆಲ್ಲ ನೋಡಿ, ತಮ್ಮ ಅಭಿಪ್ರಾಯಗಳನ್ನ ಅದಕ್ಕಾಗಿಯೇ ಮೀಸಲಾಗಿಟ್ಟಿದ್ದ ಪುಸ್ತಕದಲ್ಲಿ ನಮೂದಿಸಿ, ಕೆಳಗಿಳಿಯುತ್ತಿದ್ದರು.

ಈ ವಿಜ್ಞಾನಿಯು ಪೌರಾಣಿಕ ಋಷಿ ಅತ್ರಿಯ ಅಂಕಿತನಾಮವನ್ನು ತಮ್ಮ ಅತ್ರಿಸೂನು' ಚೌಪದಿಯ ಉವಾಚಗಳಿಗೆ ಆರಿಸಿಕೊಡದ್ದು ಏಕೆ ಮತ್ತು ಹೇಗೆ ಎಂಬುದನ್ನ ಮುಂದೆ ತಿಳಿಸುವೆ. ಆಲ್ಬರ್ಟ್ ಐನ್‌ಸ್ಟೈನ್‌ನ ಮಾನವೀಯ ಮುಖ ಕಂಡರಿಸಿದ ಜಿಟಿಎನ್ ಅವರು ಅವನ ಸೂಕ್ತಿಗಳನ್ನೂ ಅನುವಾದಿಸಿದರು. ಋಷಿವಾಕ್ಯ ಮತ್ತು ವಿಜ್ಞಾನ ಕಲೆಗಳನ್ನು ಸಮೀಕರಿಸಲು ಪ್ರಯತ್ನಿಸಿದರು. ಶಿಸ್ತು ಅವರ ಮೈಯುಂಡಿತ್ತು; ಎನ್‌ಸಿಸಿ ಅಧಿಕಾರಿಯಾಗಿ ದೇಶ ಸುತ್ತಿದ್ದರ ಪರಿಣಾಮವಾಗಿ, ಶಿಬಿರಗಳನ್ನು ನಡೆಸಿದ ಫಲವಾಗಿ, ವಿದ್ಯಾರ್ಥಿಗಳ ಮಾರ್ಗದರ್ಶಕರಾದುದರ ಸಲುವಾಗಿ ಅದು ಇನ್ನೊಂದು ಆಯಾಮ ಪಡೆಯಿತು. ಕುವೆಂಪುವಿನ ಸಂದರ್ಶನದಲ್ಲಿ ದರ್ಶನವನ್ನು ಹುಡುಕಿದ ಈ ಸಾಹಿತಿಗೆ ಕೊಡಗಿನ ಸುಮಗಳು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಕೃಷ್ಣವಿವರಗಳೂ ಸಹ, ಸೂಪರ್ನೋವಾ ನಕ್ಷತ್ರದ ಹುಟ್ಟು ಬದುಕು ಸಾವಿನ ಬಣ್ಣನೆಯೂ ಕೂಡ. ಕೊಪರ್ನಿಕಸ್ ತನ್ನ ಕಾಲದಲ್ಲಿ ಖಗೋಳಶಾಸ್ತ್ರ ಕ್ಷೇತ್ರದಲ್ಲಿ ಎಸಗಿದ ಕ್ರ್ರಾಂತಿಯನ್ನು ಬಣ್ಣಿಸುವುದು ಎಷ್ಟು ಪ್ರಿಯವೋ ಅಷ್ಟೇ ಪ್ರಿಯವಾದ ವಿಚಾರ ಚಂದ್ರಶೇಖರ್ ಪರಿಮಿತಿಯ೦ಥ ಭೌತ ವೃತ್ತಾಂತವನ್ನು ವಿವರಿಸುವಾಗಲೂ ಸಹ. ಗಗನ ನಾಟಕದ ವಿಜ್ಞಾನ ವೃತ್ತಾಂತವೆಂದು ಗ್ರಹಣಗಳನ್ನು ಪರಿಗಣಿಸುತ್ತಾ, ಗಣಿತ ಗಗನ ಗಮನವನ್ನು, ಧೂಮಕೇತುವಿನ ಉಗಮ ವ್ಯಾಪ್ತಿ ಕಾಕತಾಳೀಯ ಪರಿಣಾಮಗಳನ್ನು ತಿಳಿಹೇಳುವುದರಲ್ಲಿ, ಬಾನ ಬಯಲಾಟದ ಚಂಡೆಮದ್ದಲೆಗಳನ್ನು ಕೇಳಿಸುವುದರಲ್ಲಿ ಇವರಿಗೆ ಖುಷಿಯೋ ಖುಷಿ. ನಕ್ಷತ್ರವೀಕ್ಷಣೆ ತಮ್ಮ ಹವ್ಯಾಸ ನಿಜ, ಅದರೆ, ಎಲ್ಲರ ಆಸಕ್ತಿಯನ್ನೂ ಇತ್ತ ಸೆಳೆಯುವ ಹುಚ್ಚಿಗೆ ನಕ್ಷತ್ರಿಕ ಜಾಲಕ್ಕೆ ಏನು ಹೇಳೋಣ? ಮ೦ಗಳನ ಮೇಲೆ ಮಾನವ ಅಡಿಯಿಟ್ಟಾನೆ, ಅಲ್ಲಿ ಉಳಿವನೇ- ಎಂದು ಚರ್ಚಿಸುತ್ತಾ, ಅದಕ್ಕೂ ಮೊದಲು ಮಾನವನ ಚಂದ್ರಯಾನದ ಬಗ್ಗೆ ವಿವರಗಳನ್ನು ದಾಖಲಿಸುವ ತವಕ. ವೈಜ್ಞಾನಿಕ ಮನೋಧರ್ಮವೆಂದರೇನು ಎಂದು ದೃಷ್ಟಾಂತಗಳ ಮೂಲಕ ಹೇಳಿ, ಕೆಣಕುವ ಇವರಿಗೆ ಯುಗಾದಿಯ, ಮಕರ ಸಂಕ್ರಮಣದ, ಉತ್ತರಾಯಣ-ದಕ್ಷಿಣಾಯಣಗಳ ಈಗಿನ ಸಾಂಪ್ರದಾಯಿಕರ ತಪ್ಪು ಗಣನೆ, ಖಗೋಳ ರೀತ್ಯಾ ಖಚಿತ ಪರಿಗಣನೆಯ ಬಗ್ಗೆ ಹೇಳಿ ಸರಿ ಅಡಿಯಿಡಿಸುವ ಬಯಕೆ. ಫರ್ಮಾನ ಯಕ್ಷಪ್ರಶ್ನೆಗೆ ಉತ್ತರಿಸ ಹೊರಟವರನ್ನ ನೆನಸಿಕೊಳ್ಳುವ ಹಂಬಲ. ಮೂಢನಂಬಿಕೆಗಳ ಬಗ್ಗೆ ಯುದ್ಧವನ್ನೇ ಹೂಡಿ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರೂ ಎದೆಗೆಡದೆ ನಂಬಿದ್ದನ್ನ, ಸುತ್ತು ಬಳಸಿ ಬೆಣ್ಣೆ ಮಾತನಾಡದೆ, ಇದ್ದದ್ದನ್ನ ಇದ್ದಂತೆ ಹೇಳಿ ಬಿಡುವ ಪರಿಪಾಠ. ಆಗಸದಲ್ಲಿ ಒಂದು ನಿರ್ದಿಷ್ಟ ಸಮಯದಲ್ಲಿ ಆಕಾಶಕಾಯಗಳ ಗ್ರಹಗಳ' ಸಾಪೇಕ್ಷ ಸ್ಥಿತಿ (ಪೊಸಿಷನ್)ಯನ್ನು ಗುರುತಿಸಲು ಜಾತಕ ಎನ್ನುವುದು ಒಂದು ಆರ್ಷೇಯ ವಿಧಾನ- ಎಂಬುದನ್ನ ಒಪ್ಪಿದರೂ, ಫಲಜ್ಯೋತಿಷ್ಯ ಏಕೆ ನಂಬಲರ್ಹವಲ್ಲ- ಎಂಬುದನ್ನ ಸಾಧಾರವಾಗಿ ವಿವರಿಸುತ್ತ, ಅದನ್ನ ಅವಲಂಬಿಸಿ ವಂಚಕದಂಧೆಯನ್ನ ನಡೆಸುತ್ತಿರುವವರ ಮೇಲೆ ಸಮರ ಸಾರಿದ್ದರು. ಸವಾಲನ್ನು ಎದುರಿಸುವ ಛಲ ಅವರ ಹುಟ್ಟುಗುಣ. ಅದು ಅವರ ಋಜು ಜೀವನದ ಸಾರವೆಂದರೂ ತಪ್ಪಲ್ಲ. ವಿಜ್ಞಾನದ ಪೌರ್ವಾತ್ಯ ಪಾಶ್ಚಾತ್ಯ ಸಪ್ತರ್ಷಿಗಳನ್ನ (ವರಾಹ ಮಿಹಿರ, ಲೈಫ್‌ನಿಟ್ಸ್, ಗೌಸ್, ಚಂದ್ರಶೇಖರ್, ರಾಮಾನುಜನ್ ಅಂತ್ತು ಸಿ ವಿ ರಾಮನ್) ಮತ್ತು ಇನ್ನಿತರ ಹೆಸರಾಂತ ವಿಜ್ಞಾನ ನಿರ್ಮಾಪಕರನ್ನ ಕನ್ನಡಿಗರಿಗೆ ಅವರು ಪರಿಚಯಿಸುವುದೂ ಸಹ ಅವರೆಲ್ಲರ ಚಿಕಿತ್ಸಕ ಬುದ್ಧಿಯನ್ನು ಹೊಗಳುತ್ತ, ಎದುರಾದ ಸಮಸ್ಯೆಗಳನ್ನ ಸವಾಲಾಗಿ ತೆಗೆದುಕೊಂಡು ಅವರುಗಳು ಹೇಗೆ ಪರಿಹಾರ ಕಂಡುಕೊಂಡರು- ಎನ್ನುವ ರೀತಿಯಲ್ಲೇ. ಅದೇನೋ, ವಿಜ್ಞಾನಿಗಳಿಗೂ ಸಂಗೀತಕ್ಕೂ ಒಂದು ಬಗೆಯ ನಂಟು. ಶ್ರುತ ಮತ್ತು ಅಶ್ರುತ ಗಾನದ ಮೇಲೆ ಒಲವು. ಕಲಾವಿದರ ಜೊತೆಗಿನ ಒಡನಾಟದ ಅನುಭವಗಳನ್ನು ಕಥನರೂಪದಲ್ಲಿ ಉಣಬಡಿಸುತ್ತಿದ್ದರು; ಸಂಗೀತದ ರಸನಿಮಿಷಗಳನ್ನ ಉಪನ್ಯಾಸಗಳಲ್ಲಿ ಮೆಲುಕು ಹಾಕುತ್ತಿದ್ದರು; ಬರಹರೂಪಕ್ಕೂ ಇಳಿಸಿ ಹಂಚಿಕೊಂಡಿದ್ದರು.

ನಿಗದಿತ ವೇಳೆಗೆ ಆರಂಭವಾದ ಆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ, ಮುಕ್ತವಿಶ್ವವಿದ್ಯಾಲಯದ ಕುಲಪತಿ ಡಾ| ಬಿ ವಿ ವಿವೇಕ ರೈ ಅವರು ಮಾತನಾಡಿ, ಎಲ್ಲ ತರಹೆಯ ಕಲೆಗಳಲ್ಲಿ ಸಮಾನ ಅಸಕ್ತಿ ಅಭಿರುಚಿ ತಜ್ಞತೆಯನ್ನು ಹೊಂದಿದ್ದ ಜಿಟಿಎನ್ ಅವರದ್ದು ದಾರ್ಶನಿಕ, ಅನುಭಾವಿ, ವಿಜ್ಞಾನಿಯ ಅಪೂರ್ವವ್ಯಕ್ತಿತ್ವ-ಎಂದರು. ಸಾಹಿತ್ಯ ಎಷ್ಟು ಪ್ರಿಯವಾಗಿತ್ತು, ಕ್ಲಿಷ್ಟತರ ಸಂಗತಿಗಳನ್ನ ಬಹು ಸರಳವಾಗಿ ಕನ್ನಡಿಸುವ ಕಲೆ ಅವರ ಕರಗತವಾಗಿತ್ತು- ಎಂದು ಅವರು ಅಭಿಪ್ರಾಯಪಟ್ಟರು.

ಜಿಟಿಎನ್ ಮತ್ತು ಆಕಾಶವಾಣಿ ಎಂದೊಡನೆ ಥಟ್ಟನೆ ನೆನಪಾಗುವುದು ಅವರು ನಡೆಸಿಕೊಟ್ಟ ನಕ್ಷತ್ರವೀಕ್ಷಣೆ ಕಾರ್ಯಕ್ರಮ- ಎಂದು ಆಕಾಶವಾಣಿಯ ನಿರ್ದೇಶಕಿ, ಡಾ| ವಿಜಯಾ ಹರನ್ ಅವರು ನುಡಿದರೆ, ಜಿಟಿಎನ್ ಅವರ ಆಸಕ್ತಿ ರಂಗಭೂಮಿಯನ್ನು ಆರೋಗ್ಯಕರವಾಗಿ ಬೆಳೆಸುವತ್ತ ಇತ್ತು- ಎಂದು ಕದಂಬ ನಾಟಕವೇದಿಕೆಯ ರಾಜಶೇಖರ ಕದಂಬ ಅಭಿಪ್ರಾಯಪಟ್ತರು. ಭ್ರಷ್ಟಾಚಾರ ಕಂಡರೆ ಉರಿದೇಳುತ್ತಿದ್ದ ಜಿಟಿಎನ್ ಅದೇ ಕಾರಣಕ್ಕೆ ಎನ್‌ಸಿಸಿಯ ಆಫೀಸರ್ ಹುದ್ದೆಗೆ ರಾಜಿನಾಮೆಯಿತ್ತು ಹೊರಬಂದರೆಂದು ಅವರ ಸಹೋದ್ಯೋಗಿಯಾಗಿದ್ದ ಮೇಜರ್ ಅಶ್ವತ್ಥನಾರಾಯಣ ತಿಳಿಸಿದರು. ಈ ಖ್ಯಾತ ಬರಹಗಾರರ ಸ್ಮರಣಾರ್ಥ ಅವರ ಎಲ್ಲ ಪ್ರಕಟಿತ, ಈಗ ಅಲಭ್ಯವಾಗಿರುವ ಪುಸ್ತಕಗಳ ಪುನರ್ಮುದ್ರಣದ ಹೊಣೆಯನ್ನು ಸರ್ಕಾರದ ಪುಸ್ತಕ ಪ್ರಾಧಿಕಾರ ಹೊರಬೇಕು- ಎಂದು ಕನ್ನಡ ಪ್ರಾಧ್ಯಾಪಕ ಪ್ರೊ| ಅರವಿಂದ ಮಾಲಗತ್ತಿಯವರು ಒತ್ತಾಯಿಸಿದರು. ಅವರ ಬರಹದಲ್ಲಿ ದ್ವಂದ್ವಾತೀತತೆಯಿತ್ತೆಂದು ಕರ್ನಾಟಕ ವಿಜ್ಞಾನಪರಿಷತ್ತಿನ ಹರಿಪ್ರಸಾದ್ ಹೇಳಿದರೆ, ಅವರದು ಪರಿಪೂರ್ಣವ್ಯಕ್ತಿತ್ವ ಎಂದವರು ಪತ್ರಿಕೋದ್ಯಮಿ ರಂಗನಾಥ್ ಮೈಸೂರು ಅವರು. ಖ್ಯಾತ ವಿದುಷಿಯರಾದ ಡಾ| ಸುಕನ್ಯಾ ಪ್ರಭಾಕರ್ ಮತ್ತು ಡಾ| ಆರ್ ಎನ್ ಶ್ರೀಲತಾ ಅವರುಗಳು ಸಂಗೀತನಮನಾಂಜಲಿಯನ್ನಿ ಪಕ್ಕವಾದ್ಯಗಳೊಡನೆ ನಡೆಸಿಕೊಟ್ಟರು.

ಈಗ ಚೌಪದಿಕಾರ, ಸುಭಾಷಿತ-ಬ್ರಹ್ಮ ಅತ್ರಿಸೂನು'ವಿನ ವಿಚಾರ: ಜಿಟಿಎನ್‌ಗೆ ಮೂರು ಜನ ಮಕ್ಕಳು- ಅಶೋಕವರ್ಧನ, ಅನಂದವರ್ಧನ ಮತ್ತು ಅನಂತವರ್ಧನ. ಅಲ್ಲಿ ಮೂರು ಅ'ಗಳು; ಅಥವಾ ಇಂಗ್ಲಿಷಿನಲ್ಲಿ ತ್ರೀ ಅ'ಗಳು. ಯಾರಿಗೆ ಅ' ಎಂಬ ತ್ರೀ ಸೂನುಗಳು ಇದ್ದಾರೋ ಅವರೇ ಅತ್ರಿಸೂನು'- ಎಂಬುದು ಈ ಪದದ ನಿಷ್ಪತ್ತಿಯಂತೆ. ಏನು ಸಮಾಸವೋ ಭಗವಂತನೇ ಬಲ್ಲ!

ಮನೆಗೆ ಹಿ೦ತಿರುಗುವಾಗ ಪ್ರತಿಯೊಬ್ಬ ಸಭಿಕರ ಕೈಯಲ್ಲೂ ಉಡುಗೊರೆಯಾಗಿ ಕೊಟ್ಟ ಸಿಹಿತಿಂಡಿಯ ಪೊಟ್ಟಣದೊಂದಿಗೆ ಜಿಟಿಎನ್ ಬರೆದ ಪುಸ್ತಕವೊಂದೂ ಇತ್ತು. ಒಟ್ಟಾರೆ, ಆ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು, ಕಾರ್ಯಕ್ರಮ ನಿಯೋಜಿಸಿ, ನಿರ್ವಹಿಸುತ್ತಿದ್ದ ನಾಗಲಕ್ಷ್ಮಿ ಹರಿಹರೇಶ್ವರ ಕರೆದಾಗ ಬಂದು ವೇದಿಕೆಯನ್ನೇರಿ ಇಳಿದ ಪ್ರತಿಯೊಬ್ಬ ಮಾತಾಳಿಗೂ ಹೀಗೆ ಇದ್ದರು ನಮ್ಮ ಜಿಟಿಎನ್''- ಎಂದು, ಅವರ ಬಹುಮುಖ ಪ್ರತಿಭೆಯನ್ನು ಬೇರೆ ಬೇರೆ ದೃಷ್ಟಿಕೋಣಗಳಿಂದ ಸಮರ್ಥವಾಗಿ ಗುರುತಿಸಲು, ಸಂಗ್ರಾಹ್ಯವಾಗಿ ಅಭಿವ್ಯಕ್ತಿಸಲು, ಮೂರುನಿಮಿಷದ ಕಾಲಾವಧಿಯೇ ಸಾಕಾಯ್ತು, ಬೇಕಾದಷ್ಟಾಯ್ತು, ಮೈಸೂರಿನಲ್ಲಿ ವಿಕ್ರಮವನ್ನೂ ಸಾಧಿಸಿದಂತಾಯ್ತು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more