• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವುಗಳಿಂದ ಚಿಮ್ಮುವ ಕಿರಣಗಳು ಮನುಕುಲದ ದಾರಿದೀಪ

By Staff
|

ಸಾವನ್ನು ಎದುರಿಸುವ ದುರ್ಭರ ಸಂದರ್ಭದಲ್ಲೂ ಸ್ಥಿತಪ್ರಜ್ಞ,ಎಲ್ಲ ಸಮಯಗಳಲ್ಲೂ ನೋವು ಅಸೂಯೆ ಹಗೆಗಳಿಂದ ಕಲುಷಿತಗೊಳ್ಳದ ಮನಸ್ಸು, ದಯೆ, ಸಮರ್ಪಣ ಭಾವಗಳೇ ಪುರುಷೋತ್ತಮನ ಲಕ್ಷಣಗಳು. ಮನುಕುಲೋದ್ದಾರಕರೆನಿಸಿದ ಮಹಾಮಹಿಮರ ಈ ಗುಣಗಳನ್ನು ಕಿಂಚಿತ್ತಾದರೂ ಮೈಗೂಡಿಸಿಕೊಂಡರೆ ಪಾಮರನ ಜನ್ಮವೂ ಧನ್ಯ.

ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರು

Socratesಬಹಳದಿನಗಳ ಹಿಂದೆಯೇ ನಾನು ಓದಿದ ಕೆಲವು ಪುಸ್ತಕಗಳನ್ನು ಕವನಗಳನ್ನು ಆಗಾಗೆ ಮೆಲುಕು ಹಾಕುತ್ತಿರುತ್ತೇನೆ. ಅವುಗಳಲ್ಲಿ ಮಂಜೇಶ್ವರ ಗೋವಿಂದ ಪೈಗಳ 'ಗಿಳಿವಿಂಡು" ಕವನ ಸಂಕಲನದಲ್ಲಿನ 'ಯೇಸು ಮತ್ತು ಕೃಷ್ಣ" ಪದ್ಯ; ಅವರದೇ ಆದ 'ಗೋಲ್ಗೋಥಾ" ಖಂಡಕಾವ್ಯ; ಜಿ.ಪಿ.ರಾಜರತ್ನಂ ಅವರ 'ಮಹಾತ್ಮರ ಮರಣ" ಪುಸ್ತಕ ಮತ್ತು ಕುವೆ೦ಪು ಅವರ 'ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?" ಕವನ- ಇವುಗಳ ಬಗ್ಗೆ ನಾಲ್ಕು ಮಾತು

ಬರೆಯಬೇಕೆನಿಸುತ್ತಿದೆ.

ಈ ಭೂಮಿಯ ಮೆಲೆ ಬೇರೆ ಬೇರೆ ಮೂಲೆಗಳಲ್ಲಿ, ಬೇರೆ ಬೇರೆ ಕಾಲಗಳಲ್ಲಿ ಅವತರಿಸಿ, ಜನರನ್ನು ಉದ್ಧರಿಸಿದ ಪುರುಷೋತ್ತಮರ ಕತೆಗಳನ್ನ ನಾವು ಕೇಳಿಬಲ್ಲೆವು. ಈ ಜಗದೋದ್ಧಾರಕರು ಕಲ್ಪನೆಯ ಕೂಸಾಗಿರಬಹುದು, ಜನರ ನಂಬಿಕೆಯ ಪೌರಾಣಿಕ ಮಹಾಪುರುಷರಾಗಿರಬಹುದು, ಇಲ್ಲವೇ ಐತಿಹಾಸಿಕ ವ್ಯಕ್ತಿಗಳೂ ಆಗಿರಬಹುದು. ಚಾರಿತ್ರಿಕ ವ್ಯಕ್ತಿಗಳಾಗಿದ್ದರೂ ಅವರ ಸುತ್ತ ಮುತ್ತ ಏನೋ ಒಂದು ಅಮಾನುಷ ಪ್ರತಿಭೆಯ ಪ್ರಭಾವಳಿಯನ್ನ ಅನುಯಾಯಿಗಳು ಹೆಣೆದು, ಉತ್ಪ್ರೇಕ್ಷಿಸಿ, ಸಿಂಗರಿಸಿರಲೂಬಹುದು. ಕಾಲಕಾಲಕ್ಕೆ ಸಂಶೋಧಕರ ಅವಿರತ ಶ್ರಮದ ಫಲವಾಗಿ ಹೊಸಬೆಳಕು ಕಗ್ಗತ್ತಲೆಯ ಗವಿಗಳ ಮೇಲೆ ಬಿದ್ದು, ಒಂದು ಅಂದಾಜಿನ ನಿಜಸ್ವರೂಪ ಗೋಚರಿಸಲೂ ಬಹುದು.

ಇವು ಏನೇ ಇರಲಿ, ಜನ ಒಪ್ಪಿದ ಆ ಮಹಾಪುರುಷರ ಹೆಸರಿನಲ್ಲಿ ತಲೆತಲಾಂತರದಿಂದ ಚಲಾವಣೆಯಲ್ಲಿರುವ ದೃಷ್ಟಾಂತಗಳು, ಪವಾಡಗಳು, ಸಂದೇಶಗಳು, ಹಿತವಚನಗಳು, ಜಾಣ್ಣುಡಿಗಳು ಕೆಳಗೆ ಬೀಳುತ್ತಿರುವ ಹಲವರನ್ನು ಕೈಹಿಡಿದು ಮೇಲಕ್ಕೆ ಎತ್ತಿರುವುದು ಸತ್ಯ; ಸರಿದಾರಿಯಲ್ಲಿ ಕೈ ಹಿಡಿದು ನಡೆಸಿಕೊಂಡು ಹೋಗಿರುವುದೂ ಸತ್ಯ; ಮತ್ತು ನೆಮ್ಮದಿಯ ಬಾಳಿಗೆ ದಾರಿದೀವಿಗೆ ಆಗಿರುವುದೂ ಸತ್ಯ. ಈ ಕಾರಣಕ್ಕಾಗಿಯೇ ಇವರೆಲ್ಲರನ್ನು ಮನುಕುಲೋದ್ಧಾರಕರೆಂದು ನಾವು ಗುರುತಿಸುವುದು.

ಈ ಬೆರಗಿನ ವೇದಿಕೆಯ ಮೇಲೆ ರಾರಾಜಿಸುತ್ತಿರುವ ಪುಣ್ಯಜೀವಿಗಳಲ್ಲಿ ರಾಮ, ಕೃಷ್ಣ, ಬುದ್ಧ, ಸಾಕ್ರಟಿಸ್, ಯೇಸು, ಜರಾತುಷ್ಟ್ರ, ಬಸವಣ್ಣ, ಗುರುನಾನಕ್, ಮಹಮದ್ ಪೈಗಂಬರ್, ಗಾಂಧಿ ಮುಂತಾದವರು ಮುಖ್ಯರು. ಈ ಮಹಾತ್ಮರುಗಳ ಜೀವನ ಪ್ರಗಾಥೆಯ ಮೇಲೆ ಕಣ್ಣಾಡಿಸಿದಾಗ, ಪ್ರವಾದಿಗಳ ಚಿಂತನೆಗಳನ್ನು ಅಧ್ಯಯನ ಮಾಡಿದಾಗ ನಮಗೆ ಹಲವಾರು ಸಾಮ್ಯ, ವೈಷಮ್ಯಗಳು ಎದುರಾಗುತ್ತವೆ; ಸಾಮ್ಯಗಳು ಸೋಜಿಗವನ್ನು ಉಂಟುಮಾಡುತ್ತದೆ. ವೈರುಧ್ಯಗಳು ದೇಶ-ಕಾಲದ ಹಿಡಿತಕ್ಕೆ ಒಳಪಟ್ಟವು. ಮೊದಲು ಕೃಷ್ಣ ಮತ್ತು ಯೇಸು ಅವರಿಬ್ಬರನ್ನು ಬಳಿಗೆ ಬರಮಾಡಿಕೊಳ್ಳೋಣ.

'ಯೇಸು ಮತ್ತು ಕೃಷ್ಣ" ಶೀರ್ಷಿಕೆಯ ಕವನದಲ್ಲಿ ಮಂಜೇಶ್ವರ ಗೋವಿಂದ ಪೈಗಳು ಕಾಣಿಸುವ ಹೋಲಿಕೆಗಳಿಗೆ ರೆಕ್ಕೆ ಪುಕ್ಕ ಸೇರಿಸಿ, ವಿಸ್ತರಿಸಿ ಇಬ್ಬರನ್ನೂ ಅರ್ಥಮಾಡಿಕೊಳ್ಳಲು ನಾನು ಇಲ್ಲಿ ಪ್ರಯತ್ನಿಸುತ್ತಿದ್ದೇನೆ. ಮಾನವ ಜನ್ಮವನ್ನೆತ್ತಿದಾಗ, ತಾವು ಆಡಿದ ಲೀಲಾನಾಟಕದ ಅಂಕಗಳಲ್ಲಿ ಅವರಿಬ್ಬರೂ ಸಾಮಾನ್ಯರಂತೆ ಹುಟ್ಟಿ, ಸಾಮಾನ್ಯರಂತೆ ಬೆಳೆದು, ನುಡಿದಂತೆ ನಡೆದು, ಒಳ್ಳಿತನ್ನೇ ಹೊಳೆದು, ಎತ್ತರಕ್ಕೆ ಏರಿದರು. ಲೋಕದ ಜನರಿಗಾಗಿ ಬಳಲಿದರು, ನೋವುಂಡರು. ಅವರಿಬ್ಬರದೂ ಅವತರಣಕ್ಕಿಂತ ಅವರ ಉತ್ಥಾನವೇ ನಮಗೆ ಮುಖ್ಯವಾದದ್ದು. ಶುಭಜನನಕ್ಕೆ ಒಬ್ಬರಿಗೆ ಕಡುಗತ್ತಲೆಯ ಸೆರೆಮನೆಯ ಕೋಣೆಯ ಮೂಲೆಯೇ ಸುಖತಾಣವೆನಿಸಿದರೆ, ಕಸ ಕಡ್ಡಿಗಳ ನಡುವಣ ಕುರಿ ಮಂದೆಯ ಗೋದಲೆಯೇ ಇನ್ನೊಬ್ಬರಿಗೆ ಹಿತವಾಯ್ತು.

ಆಳುವ ರಕ್ಕಸನ ಕ್ರೌರ್ಯಕ್ಕೆ ಬೆದರಿ, ಶಿಶುವಾಗಿದ್ದ ಇವನನ್ನ ಕೊಂಡೊಯ್ದು, ಯಮುನೆಯನ್ನ ಈಸಿ ದಾಟಿ, ಆ ದಡಕ್ಕೆ ಸುರಕ್ಷಿತ ಜಾಗವೊಂದಕ್ಕೆ ತಲುಪಿಸುವ ಸಾಹಸವನ್ನ ಒಬ್ಬನ ತಂದೆ ಮಾಡಿದ; ಆಳುವ ಅರಸನೇ ಕೊಂದು ಹಾಕಿಯಾನೆಂಬ ಭಯಕ್ಕೆ ಮಣಿದು, ಶಿಶುವಿನ ತಲೆ ಕಾಯಲು ದೂರದ ಈಜಿಪ್ಟಿನತ್ತ ಅವನನ್ನು ಕೊಂಡೊಯ್ಯುವ ಪ್ರಮೇಯ ಇನ್ನೊಬ್ಬನ ತಂದೆಗಾಯ್ತು.

ಕೊಳಲ ನುಡಿಸಿ, ಪಶುಗಳನ್ನೂ ಹಸುವಿನ ಮನಸ್ಸಿನ ಮುಗುದೆಯರನ್ನೂ ಹಳ್ಳಿಗರನ್ನೂ ಹುಲ್ಲುಗಾವಲುಗಳಲ್ಲಿ ಒಬ್ಬ ಕುಣಿಸಿದ ತಣಿಸಿದ; ತಂದೆಯ ಕೂಡೆ ಬಡಗಿಯ ಹಿಡಿ ಹಿಡಿದು, ಶ್ರದ್ಧೆಯಿಂದ ದುಡಿ ದುಡಿದು, ನೆರೆಹೊರೆಯ ಜೊತೆ ಹಿಡಿದು, ನೆರವೀವ ನಡೆ ನಡೆದು- ಇನ್ನೊಬ್ಬನು ಕಾಯಕದಲ್ಲಿ ಕೈಲಾಸ ತೋರಿದ. ರಕ್ಕಸ ದುರುಳನ ಬಾಧೆ ತಾಳಲಾರದೆ ಹುಟ್ಟೂರು ಮಥುರೆಯನ್ನು ಬಿಟ್ಟು, ದೂರದ ದ್ವಾರಕೆಯನ್ನು ವಾಸಕ್ಕಾಗಿ ಆರಿಸಿಕೊಂಡವ ಒಬ್ಬನಾದರೆ, ತೌರಿಗೆ ಹಿಂತಿರುಗಲಾರದೆ ಪರಊರಿನಲ್ಲೇ ಶೈಶವವನ್ನ ಕಳೆಯುವಂತಾಯ್ತು ಇನ್ನೊಬ್ಬನಿಗೆ.

ಗೋಪಿಕೆಯರ ನಿರ್ವ್ಯಾಜ ಪ್ರೇಮದ ಉತ್ಕಟತೆಯ ಬಿಗಿಪಟ್ಟಿನ ತೋಳ್‌ಬಂಧದ ಬಂದಿಯಾಗಿದ್ದ ಒಬ್ಬ; ಪರಿಮಳದ್ರವ್ಯಗಳಿಂದ ಪೂಜಿಸಿ, ತನ್ನ ಕೇಶರಾಶಿಯಿಂದ ಒರೆಸಿ, ಚರಣಕಮಲಗಳಿಗೆ ಮುತ್ತಿಟ್ಟ ಅನುಯಾಯಿಯ ಭಕ್ತಿಯ ಒತ್ತುಗಳು ಇನ್ನೊಬ್ಬನನ್ನು ಅಷ್ಟೇ ಬಿಗಿಯಾಗಿ ಕಟ್ಟಿಹಾಕಿದ್ದವು. ಮಹಾಸಮರ ಸೆಣೆಯುವ ಮುನ್ನಿನ ಸಂದರ್ಭ; ಸಂಧಾನಕ್ಕೆ ಹೋದ, ಒಲಿದವರನುಜ್ಜೀವಿಸುವ ಸ್ವಭಾವದ ಮುರವೈರಿಗೆ, ಕುರುರಾಯ ಇತ್ತ ಬಳುವಳಿಯೆಂದರೆ- ಹೆಡೆಮುರಿಯ ಕಟ್ಟುಗಳ ಕೇಯೂರ; ನಿಷ್ಪಕ್ಷಪಾತದ ವಿಚಾರಣೆ ನಡೆಸಬೇಕಾಗಿದ್ದ ಆಳುವ ಅರಸನ ಕಡೆಯಿಂದ ಯೇಸುವಿಗೆ ದೊರೆತ ಬಳುವಳಿ ಏನು? ಒಂದು ಮುಳ್ಳಿನ ಕಿರೀಟ ಧಾರಣೆ!

ಅತ್ತ, ಬಿಲ್ಲಿನ ಹಬ್ಬದಲ್ಲಿ ಪಾಲ್ಗೊಳ್ಳಲು, ಸೋದರ ಮಾವನ ಅರಮನೆಗೆ ಕರೆದೊಯ್ಯಲು ರಥವೇನೋ ಬಂದಿತ್ತು, ಆದರೆ, ಗೋಪಾಲ ಹತ್ತಿ ಹೋದದ್ದು ಅದನ್ನು ಹಿ೦ಬಾಲಿಸಿದ, ಹಾಲು ಮೊಸರಿನ ತುಪ್ಪದ ಗಡಿಗೆಗಳೂ, ಕಪ್ಪಕಾಣಿಕೆಗಳೂ ತುಂಬಿದ ಎತ್ತಿನ ಬಂಡಿಯಲ್ಲಿ, ಗೊಲ್ಲ ಗೆಳೆಯರ ತಂಡದೊಡನೆ; ಇತ್ತ ಮರಿಗತ್ತೆಯ ಮೇಲೆ ನಡೆದಿತ್ತು ದೇವಪುತ್ರನ ಮೆರವಣಿಗೆ.

ಸುತ್ತಮುತ್ತ ಇಂತಹ ಮಿತ್ರರೇ ಇರುವಾಗ ಇನ್ನು ಶತ್ರುಗಳು ಬೇರೆ ಬೇಕೇನು? ಹಿಂದೆ ತನ್ನ ಸಹಾಯವನ್ನು ಪಡೆದು ನಿರಾಳವಾಗಿ ಉಸಿರಾಡುವಂತಾಗಿದ್ದರೂ ಅದನೆಲ್ಲ ಮರೆತು ಕೃಷ್ಣನಿಗೆ ಎರಡು ಬಗೆದವರಿಗೇನು ಕಡಿಮೆಯಿರಲಿಲ್ಲ, ಬೇಕಾದರೆ ಸ್ಯಮಂತಕ ಮಣಿಯ ಉಪಾಖ್ಯಾನವನ್ನು ನೆನಪಿಸಿಕೊಳ್ಳಿ; ಕೊನೆಯ ದಿನಗಳ ಸನಿಹದಲ್ಲಿ, ಯೇಸುವಿಗೆ ಮುತ್ತಿಟ್ಟು ಹಂತಕರಿಗೆ ಪರಿಚಯಿಸಿದವನು ಬೇರೆ ಯಾರಲ್ಲ, ಯೇಸುವಿನ ಆಪ್ತ ಶಿಷ್ಯನೊಬ್ಬನೇ.

ಕಡುಬಡವನಾದರೇನಂತೆ ಕುಚೇಲ ನೆಚ್ಚಿನ ಗೆಳೆಯ ತಾನೆ. ಆ ಸುದಾಮನಿತ್ತ ಅವಲಕ್ಕಿಯ ಪಾರಣೆಯೇ ಇವನಿಗೆ ಮೃಷ್ಟಾನ್ನ ಭೋಜನ; ರಾಜವೈಭೋಗಗಳ ಅರಮನೆಯನ್ನು ಧಿಕ್ಕರಿಸಿ ರಾಜದೂತ ಹೋಗುವುದು ತನ್ನನ್ನು ಗೌರವದಿಂದ ಕಾಣುವ ದಾಸೀಪುತ್ರನ ವಿದುರನ ಮನೆಗೆ; ಅಲ್ಲಿ ಅವನಿಂದ ಪಡೆದು ನೀರು ಕುಡಿದು ತೇಗಿದಂತೆಯೇ, ಇಲ್ಲಿ ನೀರಡಿಕೆಯಾದಾಗ ಬೇಡಿ ಕಾಡಿಕೊಂಡು ಕುಡಿದು ತಣಿಯುವುದು ಅಸ್ಪೃಶ್ಯ ಸಮೇರಿಯಾದ ಹೆಂಗಸು ಕೊಟ್ಟ ಬಾವಿನೀರಿನಿಂದ.

ಅಲ್ಲಿ ಬೆಂಕಿಯ ಮಗಳ ಆರ್ತದನಿಯ ಕೂಗಿಗೆ ಕರಗಿದ ಎದೆಯವನೇ, ಇಲ್ಲಿ ಲಜಾರಸ್‌ನಿಗಾಗಿ ಮಾರ್ಥಳ ಕರೆಗೆ ಓಗೊಟ್ಟು ತ್ವರೆಯಿಂದ ಬಂದವ. ಧರ್ಮಜನ ರಾಜಸೂಯ ಯಾಗಾರ್ಥವಾಗಿ ಬಂದ ಋತ್ವಿಕರ ಪಾದಪ್ರಕ್ಷಾಳನವನ್ನೇನೂ ಮಾಡಿದ; ಆದರೆ ಸಮರದಲ್ಲಿ ಸಖ ಅರ್ಜುನ ಬಿಟ್ಟ ಕೂರಂಬುಗಳ ಪೆಟ್ಟಿಯಿಂದ ಭೀಷ್ಮನ ಎದೆಯಿಂದ ಚಿಮ್ಮುತ್ತಿದ್ದ ರಕ್ತವನ್ನ ಒರೆಸದೆ ಬಿಟ್ಟ ತಪ್ಪಿಗೇ ಇರಬೇಕು, ಇಲ್ಲಿ ತನ್ನ ಹನ್ನೆರಡು ಶಿಷ್ಯರ ಕಾಲ್ತೊಳೆದು ತನ್ನ ಮೇಲುವಸ್ತ್ರದಿಂದ ಒರೆಸಿದನೆ ಆ ಸದ್ಗುರು? ಅರಸಾಗ ಬಯಸುವವನು ಆಳಾಗಬಲ್ಲನೂ ಆಗಬೇಕೆಂದು ತೋರಿದನೇ? ಸಮಾನತೆಯನ್ನೂ ಸೂಚ್ಯವಾಗಿ ಬೋಧಿಸಿದನೇ?

ಭಕ್ತಜನಾಶ್ರಯ, ಶಿಷ್ಟಜನ ಪರಿಪಾಲಕ, ಕಷ್ಟತಂದೊಡ್ಡುವವರನ್ನ ತಡೆಯುವವ, ಹಿತದ ಮಾತು ಕೇಳದಿದ್ದರೆ ಮುಗಿಸಿಯೂ ಬಿಡುವಾತ- ಒಬ್ಬ; ನಂಬಿದವರನ್ನ ಕೈಹಿಡಿದೆತ್ತಿದವ, ನೊಂದವರ ಕಣ್ಣೀರನೊರಸಿದವ, ದಾರಿ ತಪ್ಪಿದವರ ತಪ್ಪನ್ನ ಮನಗಾಣಿಸಿ ಕೈಹಿಡಿದು ನಡೆಸಿದವ- ಇನ್ನೊಬ್ಬ. ಕೆಣಕಿದರೂ, ನೂರು ತಪ್ಪಾಗುವವರೆಗೂ ಶಿಕ್ಷಿಸದೆ ಕ್ಷಮಿಸುವ ಪ್ರವೃತ್ತಿ; ತನ್ನ ಅವತಾರದ ಕೊನೆಯ ಅಂಕಕ್ಕೆ ಪರದೆಯೆಳೆಯುವ ಸಂದರ್ಭದಲ್ಲೂ, ತನ್ನನ್ನು ಕೊಲ್ಲುವ ಉದ್ದೇಶವಿಲ್ಲದೇ, ಬೇಟೆಯಾಟದ ಬಾಣ ಬಿಟ್ಟ ಆ ಬೇಡ ಬಂದು ಮನ್ನಿಸಲು ಬೇಡಿಕೊಂಡಾಗ, ಕ್ಷಮಿಸಿದವ ಒಬ್ಬ; “ತಾವೇನು ಮಾಡುತ್ತಿದ್ದೇವೆಂಬ ಅರಿವಿಲ್ಲದ ಮುಗ್ಧರು ಇವರು; ಪ್ರಭುವೇ ಇವರನ್ನು ಕ್ಷಮಿಸು"- ಎಂದು ತನ್ನನ್ನು ಕೊಲ್ಲ ಬಂದವರನ್ನೂ ಕ್ಷಮಿಸ ಹೊರಟ ದಯಾಸಿಂಧು ಇನ್ನೊಬ್ಬ.

ಅಲ್ಲಿ ಅವ ಯದುನಾಥ; ಇಲ್ಲಿ ಇವ ಯೂದನಾಥ! ಆ ದಿನಗಳೆರಡಿರಬಹುದು; ಆದರೆ, ಮೂಡಿದ ಭಾಸ್ಕರನೊಬ್ಬನೆ!!- ಎನ್ನುತ್ತಾರೆ ಗೋವಿಂದ ಪೈಗಳು ತಮ್ಮ ಕವನದ ಭರತವಾಕ್ಯದಲ್ಲಿ.

***

ಸಾಕ್ರಟಿಸ್, ಯೇಸು ಮತ್ತು ಗಾಂಧಿ- ಇವರುಗಳ ಬಾಳನ್ನು ತೌಲನಿಕವಾಗಿ ಅಧ್ಯಯನ ಮಾಡುವಾಗ, ಶರಣರ ಗುಣವನ್ನು ಮರಣದಲ್ಲಿ ನೋಡು- ಎಂಬ ಒಂದು ಅರ್ಥವತ್ತಾದ ಗಾದೆ ನೆನಪಾಗುತ್ತದೆ. ಸುಮಾರು ಎರಡೂವರೆ ಸಾವಿರ ವರ್ಷಕ್ಕೂ ಮುಂಚೆ ಇದ್ದ ಸಾಕ್ರಟೀಸ್ ಸದಾ ಸತ್ಯದ ಶೋಧನೆಯಲ್ಲಿ ತೊಡಗಿದ್ದವ; ಚಿಕ್ಕಂದಿನಿಂದಲೂ ತಾನು ಗುರುಹಿರಿಯರ ಬಳಿ ಓದಿ ಕಲಿತ ತಿಳಿದ ಧರ್ಮಗ್ರಂಥಗಳ ಸಾರಸರ್ವಸ್ವವೇ ಸತ್ಯ ಎಂದು ಬಗೆದವನು ಯೇಸು. ಜೊತೆಗೆ, ತನ್ನ ಅನುಯಾಯಿಗಳಿಗೆ ಅದರ ಒಳತಿರುಳಿನ ದರ್ಶನ ಮಾಡಿಸಲು ಉಪದೇಶಿಸುತ್ತಿದ್ದವನು ಈ ಸತ್ಯಾಶ್ರಯ ಯೇಸು. ಈ ಬಗೆಯ ಸತ್ಯಶೋಧನೆಯ ಕಾರ್ಯದಲ್ಲಿ ತಿಳಿದವರ ಸ್ನೇಹವನ್ನೂ, ತಿಳಿಯದವರ ದ್ವೇಷವನ್ನೂ ಗಳಿಸಿಕೊಂಡು ಮುಂದುವರೆದವನು ಸಾಕ್ರಟಿಸ್; ಯೇಸುವೂ ಅದೇ ಹಾದಿಯ ಪಯಣಿಗ. ಅಷ್ಟಲ್ಲದೇ ಹೇಳುವರೇ?

“ಬರಲಿರುವ ಮರಣವನು ಅತಿಥಿಯೊಲು ಕಾಯುವರು| ಮಾಡಬೇಕಾದುದನೆಲ್ಲ ಮಾಡಿ ಮುಗಿಸಿದವರು!" ಸಾಕ್ರಟಿಸ್ ಮತ್ತು ಯೇಸು ಇಬ್ಬರಿಗೂ ಬರಲಿರುವ ಮರಣದ ಬಗ್ಗೆ ನಿಶ್ಚಿತ ಮುನ್ಸೂಚನೆಯಿತ್ತು. ಅವರಿಬ್ಬರೂ ಅವಿಚಲರಾಗಿ, ನಿಶ್ಚಿ೦ತರಾಗಿ ಸಾವನ್ನು ಎದುರುಗೊಂಡರು.

ಯೇಸುವನ್ನು ಅವನ ಜನಾಂಗದ ಬಂಧುಗಳೇ ಶಿಲುಬೆಗೆ ಏರಿಸಿ ಕೊನೆಗಾಣಿಸಲು ಷಡ್ಯಂತ್ರ ಮಾಡಿದಂತೆ, ಸಾಕ್ರಟಿಸಿನಿಗೂ ಅವನ ಪ್ರಿಯ ಅಥೆನ್ಸ್‌ನ ಜನರೇ ವಿಷವಿಕ್ಕಿ ಸೆರೆಮನೆಯಲ್ಲೇ ಕೊಂದರು. ವಿಷಪಾತ್ರೆಯನ್ನ ಸಿದ್ಧಪಡಿಸಿದ ಯೋಧ ಅದನ್ನು ತಂದು ಸಾಕ್ರಟಿಸ್‌ಗೆ ಕೊಟ್ಟಾಗ, ಅದನ್ನು ಕುಡಿಯುವ ವಿಧಾನ ಹೇಗೆಂಬುದನ್ನ ಅವನಿಂದಲೇ ಕೇಳಿ ಸಾಕ್ರಟಿಸ್ ತಿಳಿದುಕೊಂಡನಂತೆ. ಶಾಂತಚಿತ್ತನಾಗಿ ಬಟ್ಟಲನ್ನೆತ್ತಿ ಕುಡಿಯತೊಡಗಿದಾಗ, ಸಾಕ್ರಟಿಸ್‌ನ ಸುತ್ತಮುತ್ತ ಇದ್ದವರು ಅಳಲು ತೊಡಗಿದರಂತೆ. ಯೇಸುವಂತೆ ಅವನೂ ತನ್ನ ಮರಣಕ್ಕೆ ಯಾರನ್ನೂ ದೂಷಿಸಲಿಲ್ಲ. ಯೇಸುವಂತೂ “ತನ್ನನ್ನು ಜನ ಅರ್ಥಮಾಡಿಕೊಳ್ಳಲಿಲ್ಲವಲ್ಲ; ಅವರೇನು ಮಾಡುತ್ತಿದ್ದಾರೆ೦ದು ಅವರಿಗೇ ಗೊತ್ತಾಗುತ್ತಿಲ್ಲ"- ಎಂದು ತಪ್ಪು ಮಾಡಿದ ಹಗೆಗಳ ಬಗ್ಗೆ ಆಗಲೂ ಅನುಕಂಪದ ಮಾತುಗಳನ್ನಾಡುತ್ತಾನೆ.

ಗೀತೆಯಲ್ಲಿ ಶ್ರೀಕೃಷ್ಣ ಸ್ಥಿತಪ್ರಜ್ಞನೊಬ್ಬನ ಲಕ್ಷಣಗಳನ್ನು ಪಟ್ಟಿಪಡುತ್ತಾನೆ. ಆ ಬಗೆಯ ಸಮಚಿತ್ತನಾದವನು ಜೀವನವನ್ನೂ ಮರಣವನ್ನೂ ಹೇಗೆ ಅವಲೋಕಿಸುತ್ತಾನೆ- ಎಂಬುದರ ಬಣ್ಣನೆ ಅಲ್ಲಿದೆ. ಆ ಮಾತುಗಳಿಗೆ ಬೆಲೆಕೊಟ್ಟವರು, ಸಾವಿನ ಬಗ್ಗೆ ತಮ್ಮ ನಿರ್ದಿಷ್ಟ ಅಭಿಪ್ರಾಯಗಳನ್ನು ಬರೆದಿಟ್ಟವರು, “ಸಾವು ಒಂದು ವರ. ಸತ್ಯಕ್ಕಾಗಿ ಹೋರಾಟ ಮಾಡುತ್ತಿರುವಾಗ ಅದು ಬಂದರಂತೂ ಆ ವೀರನಿಗೆ ಅದು ಎರಡರಷ್ಟು ವರ"- ಎಂದು ಹೇಳಿದವರು ಮಹಾತ್ಮಾ ಗಾಂಧಿ. ಬಹಳ ಹಿಂದೆಯೇ, ಆ ಮಾತಿನಂತೆ ನಡೆದು ತೋರಿಸಿಕೊಟ್ಟವನು ಗಾಂಧಿ ಮೆಚ್ಚಿದ ಯೇಸು.

******

ಸಾಮಾನ್ಯವಾಗಿ ಎಲ್ಲ ಧರ್ಮಪ್ರವರ್ತಕರು ಮತ್ತು ಪ್ರವಾದಿಗಳು ಜೀವನದ ಆದರ್ಶ ಮೌಲ್ಯಗಳನ್ನು ಪ್ರಸ್ತಾಪಿಸಿದಾಗ ಸತ್ಯ ಮತ್ತು ದಯೆ- ಇವೆರಡಕ್ಕೇ ಒಜ್ಜೆ ಹಾಕಿದ್ದಾರೆ. ಉಪನಿಷತ್ತಿನ ಅಂತಿಮ ಘೋಷಣೆಯೂ ಶಾಂತಿಯೇ. ಸತ್ಯದಿಂದ ಸಾಮಾಜಿಕನ್ಯಾಯ ನೀತಿ, ಶಾಂತಿ; ಭೂತದಯೆಯಿಂದ ಸಹಬಾಳ್ವೆ ನೆಮ್ಮದಿ, ಶಾಂತಿ- ಒಟ್ಟಾರೆ ಶಾಂತಿಯೇ ಪರಮೋಚ್ಚ ಗುರಿ. “ದಯೆಯೆ ಧರ್ಮದ ಮೂಲವಯ್ಯ"- ಎನ್ನುತ್ತಾರೆ ಬಸವಣ್ಣನವರು. ಬುದ್ಧನೂ ಒಬ್ಬ ಕಾರುಣ್ಯಮೂರ್ತಿ.

'ಇಂಥವನೊಬ್ಬ ನಮ್ಮೊಡನಿದ್ದು, ನಡೆದಾಡಿದನೇ ಎನ್ನುವಷ್ಟು ಯಾರ ಬಗ್ಗೆ ಸೋಜಿಗಪಟ್ಟುಕೊಳ್ಳುತ್ತೇವೆಯೋ"- ಆ ಮಹಾತ್ಮ ಗಾಂಧೀಜಿಯವರ ಜೀವನ ಆದರ್ಶಗಳು ಸತ್ಯ ಅಹಿಂಸೆ ದಯೆಗಳೇ ಆಗಿದ್ದವು. ಯೇಸುವಿನ ಜೀವನದಲ್ಲಿ ಅವನು ದಯೆತೋರಿ, ತಪ್ಪಿತಸ್ಥರನ್ನು ಮನ್ನಿಸಿದ ಪ್ರಸಂಗಗಳು ಹೇರಳವಾಗಿವೆ. ಹಾಗಾಗಿ ಅವನೊಬ್ಬ ದಯಾಮೂರ್ತಿ. ಸತ್ಯ ಮತ್ತು ದಯೆಯ ಮೂರ್ತರೂಪವಲ್ಲದೆ, ದೇವರೆಂದರೆ ಇನ್ನೇನು? ನಂಬಿದವರ ಮನಃಪೂರ್ವಕವಾದ ಮಿಡಿತದ ಎದೆಯಾಳದ ದನಿಯ ಕರೆಗೆ ಓಗೊಡುವ, ಕನಿಕರಿಸುವ, ಬಾಳಿನ ಮಸುಕಿದ ಮಬ್ಬಿನಲ್ಲಿ ಕೈಹಿಡಿದು, ಹೇಳಿ ಅಡಿಯಿಡಿಸುತ್ತ ಸದಾ ನಡೆಸುವ, ದೂರದ ಮನೆಗೆ ಕೊಂಡೊಯ್ಯುವ, ಕರುಣಾಳು ಬೆಳಕು ಅದು.

ದೇವರನ್ನು ನಂಬದವರೂ ಈ ಮಾನವೀಯ ಮೌಲ್ಯಗಳಿಗೆ ಗೌರವತೋರಿಸದೆ ಇರುವುದಿಲ್ಲ. ದಯೆ ಶಾಂತಿಗಾಗಿ ಶ್ರಮಿಸುವುದು, ನುಡಿದಂತೆ ನಡೆವುದು ಪುಣ್ಯಜೀವಿಗಳ ಅನುಕರಣಿಯ ಆದರ್ಶ ಗುಣ. ಸಾವನ್ನು ಎದುರಿಸುವ ಆ ದುರ್ಭರ ಸಂದರ್ಭದಲ್ಲೂ ಸ್ಥಿತಪ್ರಜ್ಞನಾಗಿ ಇರುವದೂ ಒಂದು ವಿಶೇಷ ಗುಣ, ಎಲ್ಲ ಸಮಯಗಳಲ್ಲೂ ನೋವು ಅಸೂಯೆ ಹಗೆಗಳಿಂದ ಕಲುಷಿತಗೊಳ್ಳದ ಮನಸ್ಸು, ದಯೆಯ ಪ್ರವೃತ್ತಿ, ನಂಬಿದ ಸರ್ವಶಕ್ತತತ್ವಕ್ಕೇ ಶರಣುಹೋಗುವ ಸಂಪೂರ್ಣ ಸಮರ್ಪಣ ಭಾವ- ಈ ಗುಣಗಳೇ ಪುರುಷೋತ್ತಮರನ್ನು ಮನುಕುಲೋದ್ಧಾರಕರೆ೦ದು ದೈವತ್ವಕ್ಕೇರಿಸುವ ಮಾನದಂಡಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more