• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೃತ್ತಿರಂಗಭೂಮಿಯ ಜೀವನಾಡಿ ರಂಗ ಗೀತೆಗಳು

By Staff
|

B. Jayashri singing theatre songವೃತ್ತಿರಂಗಭೂಮಿ ಜೀವತಳೆದ ದಿನಗಳಿಂದ ಇಂದಿನವರೆಗೂ ರಂಗಗೀತೆಗಳೇ ನಾಟಕದ ಆತ್ಮವಾಗಿವೆ. ಯಕ್ಷಗಾನದಲ್ಲಂತೂ ಭಾಗವತರಿಲ್ಲದೆ ಆಟ ನಡೆಯುವುದಿಲ್ಲ. ಗುಬ್ಬಿ ಕಂಪನಿಯ ನಾಗೇಶರಾಯರು, ಉತ್ತರ ಕರ್ನಾಟಕದ ಏಣಗಿ ಬಾಳಪ್ಪ, ರಂಗಸಂಗೀತಕ್ಕೆ ಹೊಸ ಆಯಾಮವನ್ನೇ ಕೊಟ್ಟ ಬಿವಿ ಕಾರಂತರು, ಅತ್ಯದ್ಭುತ ಕಂಠದಿಂದ ಹಾಡುವ ಬಿ. ಜಯಶ್ರೀಯವರು ನಾಟಕದ ಜೀವಾಳವಾದ ರಂಗಗೀತೆಗಳಿಗೇ ಜೀವ ತುಂಬಿದಂಥವರು.

*ಶಿಕಾರಿಪುರ ಹರಿಹರೇಶ್ವರ, ಮೈಸೂರು

ಕನ್ನಡ ನಾಡಿನ ನಾಟಕ ಕಲಾವಿದರ ಚಟುವಟಿಕೆಗಳನ್ನ ನಾವು ವಿಶ್ಲೇಷಿಸ ಹೊರಟಾಗ, ವೃತ್ತಿರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿ- ಎಂದು ಎರಡು ಪ್ರಮುಖ ವೇದಿಕೆಗಳನ್ನಾಗಿ ವಿಂಗಡಿಸಿಕೊಳ್ಳಬಹುದು. (ವಾಣಿಜ್ಯ ರಂಗಭೂಮಿ ಎಂಬುದೊಂದಿದೆ; ಅದಿನ್ನೂ ಇಲ್ಲಿ ಮೊಳಕೆಯೊಡೆದಿಲ್ಲ). ಈ ಬಗೆಯ ವಿಂಗಡನೆ ಮಾಡಿಕೊಂಡಾಗ, ಮೇಲ್ನೋಟಕ್ಕೇ ಎದ್ದುಕಾಣುವ ಒಂದು ಹೆಗ್ಗುರುತು- ಎಂದರೆ ಯಾವುದು? ಈ ವೃತ್ತಿರಂಗದವರ ಅಥವಾ ವಿಲಾಸೀ ರಂಗಭೂಮಿಯವರ ಉಸಿರು ಇದೇ ಎಂದಾಗ, ಬೇಗ ಹೊಳೆವುದು ಏನು? ಅದು ಅವರು ಆಶ್ರಯಿಸುವ ರಂಗಗೀತೆಗಳೇ.

ಮಾತಿನ ಚಕಮಕಿಯು ವೃತ್ತಿ ಮತ್ತು ಹವ್ಯಾಸೀ ರಂಗಭೂಮಿ ಎರಡರಲ್ಲೂ ಬೇಕಾಗಿದ್ದರೂ, ವಿಲಾಸೀ ರಂಗಭೂಮಿಗೆ ಜೀವ ತುಂಬುವುದು ಈ ರಂಗಗೀತೆಗಳು. ಹಾಗೆ ನೋಡಿದರೆ, ಇಲ್ಲಿ ಹಾಡುಗಳಿಲ್ಲ ಎನ್ನುವುದೇ ಒಂದಾನೊಂದು ಕಾಲದ ಹವ್ಯಾಸೀ ರಂಗಭೂಮಿಯ ವೈಶಿಷ್ಟ್ಯವಾಗಿತ್ತು. ಕಂಪನಿ ನಾಟಕಗಳು ಬಹು ಕಾಲ ರಸಿಕರನ್ನ ಆಕರ್ಷಿಸುತ್ತ ಇದ್ದದ್ದು ಈ ರಂಗಗೀತೆಗಳಿಂದಲೇ. ನಾಟಕಕ್ಕೆ ಹಾಡು ಬೇಕೇ ಬೇಕೇನು?- ಎನ್ನುವದರ ವಿಶ್ಲೇಷಣೆ ಇಲ್ಲಿ ಅಪ್ರಸ್ತುತವಾದರೂ ಒಂದೆರಡು ವಿಚಾರಗಳನ್ನ ಸ್ಥೂಲವಾಗಿ ಗಮನಿಸಬಹುದು. ಕಾವ್ಯವನ್ನ ಶ್ರವ್ಯ ಮತ್ತು ದೃಶ್ಯ ಎಂದು ವಿಭಾಗಿಸಿಕೊಂಡು ಗುರುತಿಸ ಹೊರಟರೂ, ಅನೂಚಾನವಾಗಿ ಅವೆರಡೂ ಒಂದಕ್ಕೊಂದು ಹೊಂದಿಕೊಂಡೇ ಬಂದಿವೆ. ನಾಟಕೀಯವಾಗಿ ಶ್ರವ್ಯಕಾವ್ಯದ ವಾಚನ ನಡೆಯುತ್ತಲೇ ಇದ್ದುದರಿಂದ ಉಳಿದು ಬಂತು; ಹಾಗೆ ದೃಶ್ಯಕಾವ್ಯವಂತೂ ಸಾಹಿತ್ಯ ಅಧ್ಯಯನದ ಅಭ್ಯಾಸದ ಹಂತದಲ್ಲಿ ನಾಟಕಾಭಿಮಾನೀ ರಸಿಕರ ಓದಿಗೆ ಆಹಾರವಾಗಿ ಉಳಿದು ಬಂತು. ಬೇರೆ ಬೇರೆ ಭಾಷೆಗಳಲ್ಲಿನ ಹಿಂದಿನ ಖ್ಯಾತ ನಾಟಕಕಾರರು ಬರೆದ ನಾಟಕಗಳಂತೂ ಗದ್ಯಪದ್ಯಗಳ ಹಿತಮಿತ ಮಿಶ್ರಣವೇ ಆಗಿವೆ. ಕಾವ್ಯಮಯವಾಗಿ ಗದ್ಯದ ಸಾಲುಗಳು ಅಲ್ಲಿ ಮಿಂಚಿವೆ, ನಿಜ. ಆದರೆ, ತನ್ನ ಪ್ರತಿಭೆಯನ್ನ ತೋರುವ, ಸೂಚ್ಯರ್ಥಗಳನ್ನು ಧ್ವನಿಸುವ, ವಿಶೇಷಾರ್ಥಗಳನ್ನು ಸ್ಫುರಿಸುವ ಸಮಯ ಬಂದಾಗಲೆಲ್ಲ ಹಿಂದಿನ ನಾಟಕಕಾರರು ಛಂದೋಬದ್ಧವಾದ ಪದ್ಯಗಳನ್ನೇ ಆಶ್ರಯಿಸುತ್ತಿದ್ದರು. ನೋಡುಗರ, ಓದುಗರ, ಕೇಳುಗರ ನೆನಪಿನಲ್ಲಿ ಬಹುಕಾಲ ಉಳಿಯುತ್ತಿದ್ದುದು ನಾಟಕದ ಈ ಪದ್ಯಗಳೇ. ಇಂಥ ಪದ್ಯಗಳನ್ನೆಲ್ಲ ಅಭಿನೇತೃಗಳು ಸುಶ್ರಾವ್ಯವಾಗಿ ಹಾಡಿ ನಾಟಕಕ್ಕೆ ಕಳೆಗಟ್ಟುತ್ತಿದ್ದರು. ರಂಗಗೀತೆಗಳ ಉಗಮ ಇಲ್ಲಿದೆ- ಎಂದು ಧಾರಾಳವಾಗಿ ಹೇಳಬಹುದು. ಆಮೇಲೆ ಬಂತು, ಗದ್ಯವೇ ಇಲ್ಲದ, ಬರೀ ಪದ್ಯಮಯವಾದ ನಾಟಕಗಳು, ಅವೇ ಗೀತನಾಟಕಗಳು.

ಹಾಡುವ ರೀತಿ, ಒಳ್ಳೆಯ ಕಂಠ, ಸೊಗಸಾದ ಸಾಹಿತ್ಯ- ಈ ಮೂರೂ ಮೇಳೈಸಿ, ರಂಗಸಂಗೀತ ವಿಜೃಂಭಿಸಿತು. ಲಾವಣಿ, ಜಾನಪದ ಶೈಲಿಯ ಹಾಡು, ವಚನಗಳು, ದಾಸರ ಪದಗಳು- ಇವುಗಳ ಜೊತೆ ಜೊತೆಗೆ ಶಾಸ್ತ್ರೀಯ ಸಂಗೀತದ ಆಧಾರದ ಮೇಲೆ ರಂಗಸಂಗೀತಗಳು ಮೆರೆದವು. ಆಯಾಯ ಸಂದರ್ಭಕ್ಕೆ ಅನುಸರಿಸಿ, ಸಾಹಿತ್ಯ ರಚನೆ ಮಾಡಿ, ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಮತ್ತು ಶಾಂತ (ಲಾಕ್ಷಣಿಕರು ಒಪ್ಪಲಿ ಬಿಡಲಿ, ಭಕ್ತಿಯೂ ಸೇರಿ)- ಎಲ್ಲ ದಶರಸಗಳಿಗೆ ಸಂಬಂಧಪಟ್ಟ ಅಂಶಗಳು ಆ ಹಾಡುಗಳಲ್ಲಿ ಇರುವ ಹಾಗೆ ಕವಿಗಳು ಪ್ರಯತ್ನಪಡುತ್ತ ಇದ್ದರು.

ಒಂದು ನಾಟಕದಲ್ಲಿ ನಾಟಕಕಾರ-ಕವಿ ರಂಗಗೀತೆಯನ್ನು ಹಾಡುವ ಸಂದರ್ಭವನ್ನು ಸಮಯೋಚಿತವಾಗಿ ಸೃಷ್ಟಿಸಬಲ್ಲವನಾಗಿದ್ದ. ನಾಟಕಾರಂಭದ ಪ್ರಾರ್ಥನೆಯಲ್ಲಿ, ಉದ್ಯಾನವನದ ಬಣ್ಣನೆಯಲ್ಲಿ, ನಲ್ಲ-ನಲ್ಲೆಯರ ಪ್ರಥಮ ನೋಟದಲ್ಲಿ, ಬೇಟದಲ್ಲಿ, ಪ್ರಣಯೋತ್ಸಾಹದಲ್ಲಿ, ಸಮಾಗಮದಲ್ಲಿ, ವಿರಹದಲ್ಲಿ, ಸಖಿಯರ ಯುಗಳಗೀತೆ ಸಮೂಹಗೀತೆಗಳ ಸಂಭ್ರಮದಲ್ಲಿ, ನಾರದಾದಿಗಳ ಸ್ತುತಿಸನ್ನಿವೇಶಗಳಲ್ಲಿ, ವಿಜಯ ಘೋಷಣೆಯಲ್ಲಿ, ಮಂಗಳಾಚರಣೆಯ ಪದ್ಯಗಳಲ್ಲಿ- ಬೇಕೆಂದಾಗಲೆಲ್ಲ ಗದ್ಯದ ಚಪ್ಪರಕ್ಕೆ ಪದ್ಯದ ಮಲ್ಲಿಗೆಬಳ್ಳಿ ಹಬ್ಬಿಸುತ್ತಿದ್ದರು. ನಾಟಕಕ್ಕೆ ಸಂಬಂಧಿಸಿದಂತೆ ಶಾಸ್ತ್ರೀಯಸಂಗೀತ ಅಂದಾಗ ಕರ್ನಾಟಕಸಂಗೀತ ಮತ್ತು ಹಿಂದೂಸ್ತಾನೀ ಚೀಜ್‌ಗಳು- ಎರಡೂ ಬಗೆಯ ಹಾಡುಗಳಲ್ಲಿ ಪ್ರಯೋಗಗಳನ್ನ ನಡೆಸಿ ಯಶಸ್ವಿಯಾದ ನಾಟಕಕಾರರಿದ್ದಾರೆ. ಹಲವು ನಾಟಕಕಾರರು, ಕಲಾವಿದರು ತಮ್ಮ ಆತ್ಮಕಥನಗಳಲ್ಲಿ, ಸಂದರ್ಶನಗಳಲ್ಲಿ ರಂಗಗೀತೆಗಳ ಹಲವು ಮಜಲುಗಳ ಮೋಜುಗಳನ್ನ ಬಣ್ಣಿಸಿದ್ದಾರೆ. ಒಂದು ಉದಾಹರಣೆ: ರಾಮಾಯಣದ ನಾಟಕ, ರಾಮನಿಗೆ ಇನ್ನೇನು ಪಟ್ಟಾಭಿಷೇಕ ಆಗಬೇಕು, ಅದನ್ನ ಕೈಕೇಯಿ ತಪ್ಪಿಸುತ್ತಾಳೆ. ದಶರಥ ತು೦ಬಾ ನೊಂದುಕೊಂಡು ದೈನ್ಯದಿಂದ ಕೈಕೇಯಿಯಲ್ಲಿ ಬೇಡಿಕೊಳ್ಳುತ್ತಿದ್ದಾನೆ:

ಛಲವ ರಾಮನೋಳು ಬೇಡೆ| ಲಲನೆ ದಯೆಯಿಂದ ನೋಡೆ .. ..

ಕುಲೀನಾಂಗನೆಯು ನೀನಾಗಿ| ಈ ಕೀಳಾಲೋಚನೆಯ ಬಿಡೆ|

ಮೊಲೆಹಾಲುಣಿಸಿದ ಸುತಗೆ| ಹಾಲಾಹಲವನ್ನ ಕೊಡುವಿಯಾ ನೀನು?

ಏಣಗಿ ಬಾಳಪ್ಪನವರು ಹೇಳುತ್ತಾರೆ: ದಶರಥ ಪಾತ್ರಧಾರಿ ಒಂಬತ್ತೂ ರಸಗಳು ಬರುವ ಹಾಗೆ ಈ ಹಾಡನ್ನು ಹಾಡುತ್ತಿದ್ದರಂತೆ.

ಕೃಷ್ಣ-ಸುಧಾಮನ ನಾಟಕದಲ್ಲಿ ಸುಧಾಮನ ಹೆಂಡತಿಯ ಪಾತ್ರವನ್ನ ಹಮ್ಮಿಗಿ ನೀಲಕಂಠಪ್ಪನವರು ಮಾಡುತ್ತಾ ಇದ್ದರಂತೆ. ಧಿಡೀರನೆ, ಅನಿರೀಕ್ಷಿತವಾಗಿ ಬಂದ ಮನೆತುಂಬ ತುಂಬಿದ ಸಂಪತ್ತನ್ನ ನಂಬಲಾರದೆ, ಸುಧಾಮನ ಹೆಂಡತಿ ನೋಡುತಿರುವೆ ನಾನಿದೇನು| ನೋಡಲಾರದ ನಂಟು.. ..'' - ಎಂದು ಹಾಡುತ್ತ, ಹಾಡುತ್ತಾ ತಾವು ಮೈ ಮರೆಯುತ್ತಿದ್ದರ೦ತೆ, ಪ್ರೇಕ್ಷಕರನ್ನೂ ಮೈ ಮರೆಸುತ್ತ ಇದ್ದರಂತೆ. ಬಸವೇಶ್ವರ ನಾಟಕದಲ್ಲಿ ಮಧುವರಸ-ಹರಳಯ್ಯನ ಪ್ರಸಂಗ ನೆನಪಿಗೆ ತಂದು ಕೊಳ್ಳೋಣ. ಅಲ್ಲಿ, ಬಸವ ಎನಗೊಲಿಯೋ| ಸಂಗನ ಬಸವ| ಲಿಂಗಜಂಗಮ ಗುರುಸೇವೆಯ ಗೈಯುವ| ಸಂಗಮನಾಥಸ್ವರೂಪಿಯೇ ಬಸವ| ಎನಗೊಲಿಯೋ .. ..''- ಇದನ್ನ ಭಾವಪೂರ್ಣವಾಗಿ ಹಾಡಿದಾಗ, ಭಕ್ತಿರಸ ತುಂಬಿ ತುಳುಕಾಡುತ್ತಿದ್ದುದನ್ನು ಇನ್ನೂ ಈಗಲೂ ಅನುಭವಿಸುವವ್ರಿದ್ದಾರೆ.

ನನಗೆ ಪ್ರಿಯವಾದ ಒಂದು ರಂಗಗೀತೆ ಇದೆ, ಅದು ಗುಬ್ಬಿ ವೀರಣ್ಣನವರ ಕಂಪನಿಯ ಪ್ರಖ್ಯಾತ ಸದಾರಮೆಯ ನಾಟಕದ್ದು: ಬಾರೆ, ಬಾ ಬಾರೆ, ಬಾರೆ ಬಾರೆ ನನ್ನ ಹಿಂದೆ ಹಿಂದೆ| ಮೆಚ್ಚಿ ಬಂದ ಪುರುಷರೆಲ್ಲ ಒಂದೇ, ಒಂದೇ ..''; ಕೊಟ್ಟೂರಪ್ಪನವರ ದಾನಶೂರ ಕರ್ಣದಲ್ಲಿ, ದೇಸ್/ಭೈರವಿ ಆದಿತಾಳದಲ್ಲಿ, ಸೋಮಪ್ರಭೆ ಹಾಡುವ- ಹಾ ಪ್ರಿಯಾ ಪ್ರಶಾಂತ ಹೃದಯಾ, ಹಾನಿ ಪೊಂದಿದೆಯಾ..''- ಮರೆಯಲು ಸಾಧ್ಯವೇ? ನಂಜನಗೂಡು ಶ್ರೀಕಂಠಶಾಸ್ತ್ರಿಗಳ ರಾಜಸೂಯಯಾಗದಲ್ಲಿ ಜೋನ್ಪುರಿ ಆದಿತಾಳದಲ್ಲಿ ದ್ರೌಪದಿ ದುರ್ಯೋಧನನನ್ನು ಹಂಗಿಸುತ್ತಾ ಹೇಳುವ, ಅರಿಯದೆ ಬಿದ್ದಿರಿ ಭಾವ| ಕುರುಕುಲ ಕುರುಡರ ದೇವಾ''- ನೆನಪಾಗದೇ? ಕು ರಾ ಸೀತಾರಾಮಶಾಸ್ತ್ರಿಗಳು ಬರೆದ ಮಹಾಕವಿ ಕಾಳಿದಾಸದಲ್ಲಿ ಕುರುಬ ಕುರಂಜಿ ಆದಿತಾಳದಲ್ಲಿ ಹಾಡುವ- ಅಳಬೇಡ್ ಕಣೇ ಸುಮ್‌ಕಿರೇ, ನನ್ನ ಮೆಚ್ಚಿನ ರಾಣಿ (ನನ್ನ್ ಹೆಂಡ್ರವ್ವ)..''- ಜ್ಞಾಪಕವಿಲ್ಲವೇ?

ವೀರಣ್ಣನವರ ಕಂಪನಿಯಲ್ಲಿ ನಾಗೇಶರಾಯರು ಮಿಂಚುತ್ತಿದ್ದುದನ್ನು ಪರ್ವತವಾಣಿಯವರ ಬಾಯಿಂದ ಕೇಳಬೇಕು- ಎನ್ನುತ್ತಾರೆ ಸಿಂಧುವಳ್ಳಿಯವರು: ಮೂರು ಬೆಲ್ಲುಗಳು ಬಡಿಯಬೇಕು; ತೆರೆ ಸುತ್ತಿಕೊಂಡು ಮೇಲೇಳಬೇಕು. ರಾಯರು ಹಾಡುತ್ತಾ ಪ್ರವೇಶಿಸಬೇಕು. ಆಯಿತು ದುಷ್ಯಂತನೋ, ವತ್ಸರಾಜನೋ, ಯಾರೋ!.. ರಸದೌತಣ! ತಾರದಲ್ಲಿ ವಿನ್ಯಾಸ ಹೆಚ್ಚು, ತಾಳದ ಬಿಕ್ಕಟ್ಟೋ ತಬಲದವನಿಗೆ ಯಮಭೀತಿ. .. ವೀರಣ್ಣನವರ ಗುಬ್ಬೀ ಚೆನ್ನಬಸವೇಶ್ವರ ಕಂಪನಿಯಲ್ಲಿ ಸುಮಾರು ಒಂಬತ್ತು-ಹತ್ತು ವರ್ಷ ಹಾಡಿ, ಲಕ್ಷೋಪಲಕ್ಷ ಪ್ರೇಕ್ಷರಿಗೆ ಆನಂದ ಕೊಟ್ತರು.. ಅತ್ಯಂತ ಜನಪ್ರಿಯರು ನಾಗೇಶರಾಯರು.'' ಸುಮಾರು ಮೂವತ್ತು ರಾಗಗಳಲ್ಲಿ ನಾಟಕದ ರಂಗ ಗೀತೆಗಳು ಹರಡಿವೆ ಎನ್ನುತ್ತಾರೆ ಸ೦ಶೋಧಕರು. ಕಂದ ಮತ್ತು ಸೀಸ ಪದ್ಯಗಳೂ ಸಹ ಇವೆ. ಉತ್ತರ ಕರ್ನಾಟಕದಲ್ಲಿ ಸೀಸ ಪದ್ಯಗಳು ಅಷ್ಟು ಪ್ರಚಾರದಲ್ಲಿ ಇರಲಿಲ್ಲ. ಕೆಲವು ಕ೦ದಪದ್ಯಗಳನ್ನ ರಾಗವಾಗಿ, ತಾಳಬದ್ಧವಾಗಿ ಹಾಡುತ್ತ ಇದ್ದದ್ದೂ ಉಂಟು. ಅಶೋಕ ವನದಲ್ಲಿ ಸೀತೆ ಎದುರು ಹನುಮಂತ ರಾಮನ ವರ್ಣನೆ ಮಾಡುವಾಗ, ಆ ಪಾತ್ರ ಮಾಡಿದ ಏಳಗಿ ಬಾಳಪ್ಪನವರು ಭೈರವಿ ರಾಗದಲ್ಲಿ ಈ ಹಾಡನ್ನು ಹಾಡುತ್ತಿದ್ದರಂತೆ: ಕೇಳಮ್ಮ ತಾಯೆ ರಾಮನೆಂಥ ಚೆಲುವ ನಮ್ಮಯ್ಯ| ಎಂತು ಪೇಳ್ವೆ ಶ್ರೀಮಂತ ರಾಮನ| ಭ್ರಾಂತಿಗೈಯುವುದು ಸ್ವಾಂತಕತಿಶಯ| ಚಿಂತೆಯನು ಬಿಡು ಮಾತೆ ನಮ್ಮಯ್ಯ.||

ವೀರಾವೇಶದ ಹಾಡುಗಳನ್ನ ಹಾಡುವಾಗ ಹೆಚ್ಚಾಗಿ ಭೂಪರಾಗ ಬಳಸುತ್ತ ಇದ್ದರಂತೆ. ಯುದ್ಧಕ್ಕೆ ಬರುವ ಮುನ್ನ ರಾವಣನ ಮಗ ಇಂದ್ರಜಿತು ನೇಪಥ್ಯದಿಂದಲೇ ಹೀಗೆ ಹಾಡುತ್ತಾ ರಂಗಪ್ರವೇಶ ಮಾಡುತ್ತಿದ್ದ: ಅಕ್ಷನ ಕೊಂದಾಹವದೊಳ್| ದಕ್ಷನೆನಿಸಿ ಮೆರೆವ ನೀಚ ಕೋಡಗನೇ ನಿಲ್ಲು| ಈ ಕ್ಷಣದಿ ನಿನ್ನ ಶಿರವ ಹಾರಿಸಿ| ಮೆರೆವೆ ಇಂದ್ರಜಿತು ಯುವರಾಜೇಂದ್ರ..|| ಇನ್ನೊಂದು ಹಾಡು; ನಾಟಕ, ರಾಣಿ ರುದ್ರಮ್ಮ. ಟಿಪ್ಪು ಸುಲ್ತಾನ್ ದಂಡೆತ್ತಿ ಬಂದಿದ್ದಾನೆ, ಹೆಂಡತಿ ರುದ್ರಮ್ಮನನ್ನು ತವರು ಮನೆಗೆ ಕಳಿಸುತ್ತ ಕಿತ್ತೂರ ಮಲ್ಲಸರ್ಜ ಅವಳನ್ನ ಸಮಾಧಾನ ಪಡಿಸುತ್ತಾ ಹೇಳುವ ಮಾತು ಅಠಾಣಾ ರಾಗದಲ್ಲಿ ಇದೆ: ಬಿಡು ಚಿಂತೆಯ, ಬಿಡು ಸುದತಿ,| ಕಡು ಪಾಪಿ ವೈರಿ ಶಿರ ತರಿಪೆ ನಾ ನಿಜದಿ| ಜನ್ಮಭೂಮಿ ಮಾನವ ಪಾಲಿಸಿ ಸ್ವಕುಲವ| ಯಶದಿ ಮುಳುಗಿಸುವೆ ನಾ .. ..||

ಯಾವ ಯಾವ ಸಮಯಕ್ಕೆ ಯಾವ ಯಾವ ರಾಗ ಸರಿಹೋಗಬಹುದು ಎಂದು ನಾಟಕ ರಚನಾಕಾರರು, ಹಾರ್ಮೋನಿಯಂ ಮಾಸ್ತರರೂ, ಕಲಾವಿದರೂ ಸಮಾಲೋಚಿಸಿ ನಿರ್ಧರಿಸಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ನಾಟಕದ ಪ್ರಾರಂಭದಲ್ಲಿ ನಾಂದೀ ಹಾಡನ್ನ ಹಾಡುತ್ತಾ ಇದ್ದರು. ಅದನ್ನ ಭೀಮಪಲಾಸ್, ಯಮನ್, ಬಿಹಾಗ್, ದೇಶ್ ಕಾರ್, ಹಮೀರ್- ಮುಂತಾದ ರಾಗಗಳಲ್ಲಿ ಹಾಡುತ್ತಾ ಇದ್ದರು. ಏಕೆ ಎಂದರೆ ನಾಟಕ ಶುರುವಾಗುವುದೇ ಸುಮಾರು ರಾತ್ರಿ ಹತ್ತು-ಹನ್ನೊಂದು ಗಂಟೆಗೆ, ಆದ್ದರಿಂದ, ಈ ಪ್ರಹರಕ್ಕೆ ಇದೇ ತಕ್ಕದ್ದು ಅಂತ ನಿರ್ಧಾರ ಮಾಡಿದ್ದರು. ಮಧ್ಯರಾತ್ರಿ ವೇಳೆಗೆ ಮಾಲ್‌ಕಂಸ್, ಬೆಳಗಿನಜಾವದ ವೇಳೆಗೆ ಬಿಬಾಸ್, ತೋಡಿ, ಭೈರವಿ, ಜೀವನ್‌ಪುರಿ, ಜೋಗಿ- ಹೀಗೆ ಒಂದನ್ನ ಆರಿಸಿಕೊಳ್ಳುತ್ತ ಇದ್ದರು. ಕೋಪ ರೋಷ ಸಿಟ್ಟಿಗಂತೂ ಬಹರ್ ರಾಗ ಇದ್ದೇ ಇತ್ತು. ಮಂಗಳಕ್ಕೆ ಯಾವ ರಾಗ ಆದರೂ ನಡೆಯುತ್ತಿತ್ತು. ಒಟ್ಟಿನ ಮೇಲೆ ಸಾಧ್ಯವಾದಷ್ಟು ಬೇರೆ ಬೇರೆ ರಾಗಗಳನ್ನ ಪ್ರಯೋಗ ಮಾಡುವುದಕ್ಕೆ ಪ್ರಯತ್ನಿಸುತ್ತಾ ಇದ್ದರು.

ಈ ರಂಗಗೀತೆಗಳ ಬಗ್ಗೆ ಕೆಲವು ಪುಸ್ತಕಗಳು ಬಂದಿವೆ. ಒಂದೆರಡನ್ನು ಮಾತ್ರ ಪ್ರಾತಿನಿಧಿಕವಾಗಿ ಹೆಸರಿಸ ಬಯಸುತ್ತೇನೆ: ರಂಗಸಂಗೀತದ ಲಕ್ಷಣ, ನಾಟಕಕ್ಕೆ ಅದರ ಅಗತ್ಯ, ಕನ್ನಡ ರಂಗಮಂಚವನ್ನೇರಿದ ಹಿಂದೂಸ್ತಾನಿ ರಾಗಿಣಿಗಳನ್ನು ಸೊಗಸಾಗಿ ಎಚ್ ಕೆ ರಾಮನಾಥ್ ಅವರು ತಮ್ಮ ಕನ್ನಡರಂಗಭೂಮಿಯ ವಿಕಾಸ' ದಲ್ಲಿ ವಿಶ್ಲೇಷಿಸುತ್ತಾರೆ. ರಂಗಸಂಗೀತ'ದ ಹೆಸರಿನಲ್ಲಿ ಸ್ವರಪ್ರಸ್ತಾರದ ಜೊತೆಗೆ, ಎಚ್.ಕೆ. ಯೋಗಾನರಸಿಂಹ ಅವರು ಹೆಸರಾಂತ ನಾಟಕದ ಹಾಡುಗಳನ್ನು ಸಂಪಾದಿಸಿರುವ ಪುಸ್ತಕ ಏನಿದೆ- ಅದು ಒಂದು ಉತ್ತಮ ಗ್ರಂಥ. ಹಲವು ಕಾರಣಗಳಿಗಾಗಿ ಅಷ್ಟೇ ಉತ್ತಮವಾದದ್ದು ಎಚ್.ಎಸ್. ಗೋವಿಂದೇಗೌಡರು ಸಂಪಾದಿಸಿರುವ ರಂಗಗೀತೆ''ಗಳು. ಸಿಂಧುವಳ್ಳಿ ಅನಂತಮೂರ್ತಿಯವರು ತಮ್ಮ ಗುಬ್ಬಿ ಕಂಪನಿ'ಯಲ್ಲಿ ಹಲವಾರು ರಂಗಗೀತೆಗಳಿಗೆ ಸ್ವರಪ್ರಸ್ತಾರದೊಂದಿಗೆ ಕೊಟ್ಟಿದ್ದಾರೆ. ನಾಗೇಶರಾಯರು ಹಾಡುತ್ತಿದ್ದ ಸದಾರಮೆ, ಗುಲೇಬಕಾವಲಿ ಸುಭದ್ರಾಪರಿಣಯ ಮತ್ತು ರಾಜಭಕ್ತಿ ನಾಟಕಗಳಿಂದ ನಾಲ್ಕು ಹಾಡುಗಳು, ಗಂಗಾಧರ ರಾಯರ ಕೃಷ್ಣಲೀಲಾ; ಗುರುಮೂರ್ತಪ್ಪನವರ ಕುರುಕ್ಷೇತ್ರ, ಬಿ ಜಯಮ್ಮನವರ ಸದಾರಮೆ, ಗುಬ್ಬಿ ವೀರಣ್ಣ ಮತ್ತು ಬಿ. ಜಯಮ್ಮನವರು ಸೇರಿ ಹಾಡುತ್ತಿದ್ದ ಕಂಸವಧೆಯ ಅಗಸ-ಅಗಸಗಿತ್ತಿಯ ತಮಾಷೆ ಹಾಡು, ಕೃಷ್ಣಲೀಲಾದಲ್ಲಿ ಮತ್ತು ದಶಾವತಾರದಲ್ಲಿ ನಾರದನ ಪಾತ್ರದಲ್ಲಿ ಶ್ರೀಕಂಠಮೂರ್ತಿಯವರ ಹಾಡು ಮುಂತಾದವುಗಳನ್ನು ಸಂದರ್ಭ, ಸಾಹಿತ್ಯ, ಸ್ವರಪ್ರಸ್ತಾರದೊಡನೆ ಇಲ್ಲಿ ವಿವರಿಸುತ್ತಾರೆ.

ರಂಗಗೀತೆಗಳ ಬಗ್ಗೆ ತಮ್ಮ ಅನುಭವಗಳನ್ನ ಸೊಗಸಾಗಿ ಹೇಳಿಕೊಂಡಿರುವ ಆತ್ಮಕಥನಗಳಿಗೆ ಮಾಸ್ಟರ್ ಹಿರಣ್ಣಯ್ಯನವರ, ಏಣಗಿ ಬಾಳಪ್ಪನವರ ಬಣ್ಣದ ಬದುಕಿನ ಚಿನ್ನದ ದಿನಗಳು'ಗಳನ್ನು ಹೆಸರಿಸಬಹುದು. ರಂಗಕರ್ಮಿಗಳು ರಂಗಸಂಗೀತದ ಬಗ್ಗೆ ಬರೆದಿರುವ ಲೇಖನಗಳು ಅದರ ಹಿರಿಮೆ, ವೃತ್ತಿರಂಗಭೂಮಿ ಉಚ್ಛ್ರಾಯಸ್ಥಿತಿಯಲ್ಲಿದ್ದಾಗ ಅದಕ್ಕಿದ್ದ ಹೆಗ್ಗಳಿಕೆಯ ಬಗ್ಗೆ ಸಾಕಷ್ಟು ಮಾಹಿತಿ ಒದಗಿಸುತ್ತವೆ; ಬೆಳಕನ್ನೂ ಚೆಲ್ಲುತ್ತದೆ. ಈ ರಂಗಗೀತೆಗಳು ಮೌಖಿಕ ಕಾವ್ಯ; ಸಂಪಾದಿಸುವುದು ಕಷ್ಟ. ದಾಸರಪದಗಳನ್ನ ಜಾನಪದ ಗೀತೆಗಳನ್ನ ಸಂಪಾದಿಸಿದ ಹಾಗೆಯೇ. ಆ ಕಾಲದಲ್ಲಿ ನಾಟಕ ಪ್ರಕಟಿತ ಪುಸ್ತಕ ರೂಪದಲ್ಲಿ ಇರುತ್ತಿರಲಿಲ್ಲ; ಒಬ್ಬರು ಹೇಳುವುದನ್ನ ಕೇಳಿಸಿಕೊಂಡು ಮತ್ತೊಬ್ಬರು ಹಾಡಬೇಕಿತ್ತಲ್ಲ, ಅವರವರ ಶಬ್ದಸಾಮರ್ಥ್ಯಕ್ಕೆ ಅನುಗುಣವಾಗಿ ಹಾಡನ್ನು ಗ್ರಹಿಸುತ್ತ, ಮನನ ಮಾಡಿಕೊಳ್ಳುತ್ತಿದ್ದರು. ಸಮಯೋಚಿತವಾಗಿ ಪದಗಳನ್ನ ಬದಲಾಯಿಸಿಕೊಳ್ಳುತ್ತಲೂ ಇದ್ದರು. ಹೀಗಾಗಿ, ಗೀತೆ ಅದೇ ಆಗಿರಬಹುದು, ಪಾಠಭೇದಗಳು ಸಹಜವಾಗಿಯೇ ನುಸುಳಿಕೊಂಡು ಬಿಟ್ಟಿವೆ. ಇದನ್ನೇ ಬಿವಿ ವೈಕುಂಠರಾಜು ಅವರೂ ಹೇಳುವುದು. ಈಗಾಗಲೇ ರಂಗಗೀತೆಯ ಬಗ್ಗೆ ಕೆಲವು ಧ್ವನಿಸುರುಳಿ ವೀಡಿಯೋ ಸಿಡಿ-ಗಳು ಬ೦ದಿವೆ; ಇನ್ನೂ ಹೆಚ್ಚುಹೆಚ್ಚಾಗಿ ಬರಲೆಂದು ರಂಗಾಸಕ್ತರು ಆಶಿಸುತ್ತಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪರಿಣತರಿರುವ ವಿದ್ವಾಂಸ-ವಿದುಷಿಯರಿಂದ ರಂಗಗೀತೆಗಳ ಶಾಸ್ತ್ರೀಯ ಸಂಗೀತಶೈಲಿಯ ಗಾಯನ ಕಾರ್ಯಕ್ರಮವೊಂದನ್ನು ಸಿಂಧುವಳ್ಳಿ ಅನಂತಮೂರ್ತಿಯವರ ಸುರುಚಿ ರಂಗಮಂದಿರದಲ್ಲಿ ಅವರಿದ್ದಾಗ ಮೈಸೂರಿನಲ್ಲಿ ಏರ್ಪಡಿಸಿದ್ದರು; ಅಂತಹವು ಇನ್ನೂ ಹೆಚ್ಚು ಹೆಚ್ಚಾಗಿ ನಡೆಯಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಂಗಗೀತೆಗಳ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ಏರ್ಪಡಿಸಿ, ರಂಗಗೀತೆಗಳ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದೂ ಸಂತೋಷದ ವಿಷಯವೇ. ನಾಟಕೋತ್ಸವಗಳಲ್ಲಿ ಪ್ರಾರಂಭದಲಿ ಅಥವಾ ಕೊನೆಯಲ್ಲಿ, ರಂಗಗೀತೆಗಳಲ್ಲಿ ಆಸಕ್ತಿ ಉಳಿಸಿಕೊಂಡಿರುವ ಕಲಾವಿದರ ಕಾರ್ಯಕ್ರಮಗಳನ್ನು ಯಥೋಚಿತವಾಗಿ ಏರ್ಪಡಿಸುವುದೂ ಸಾಧುವೇ. ಈಗ ಲಭ್ಯವಿರುವ ಈ ಮಾಹಿತಿ, ಪುಸ್ತಕ, ಹಸ್ತಪ್ರತಿ, ಧ್ವನಿಮುದ್ರಿಕೆ, ಭಾವಚಿತ್ರ- ಇತ್ಯಾದಿ ಸಂಬಂಧಪಟ್ಟ ಎಲ್ಲ ಸುಸಜ್ಜಿತ ಸಾಮಗ್ರಿಗಳ ವಸ್ತುಸಂಗ್ರಹಾಲಯ ರೂಪುಗೊಳ್ಳಬೇಕು- ಎಂಬುದೇ ನನ್ನ ಸಲಹೆಗಳು. ನಾಟಕ ಶಿರೋಮಣಿಗಳನ್ನು ನೆನಪಿಗೆ ತರುವ ಮಂಗಳಾಚರಣೆಯ ಒಂದು ಗೀತೆಯೊಂದಿಗೆ ಈ ಲೇಖನಕ್ಕೆ ಅಂಕದ ಪರದೆಯನ್ನು ಎಳೆಯೋಣ: ಮಳೆಗರೆಯಲಿ, ಬೆಳೆ ಬೆಳೆಯಲಿ, ಇರಲ್ಲೆಡೆ ಸಮೃದ್ಧಿ; ತಿರೆ ತಣಿಯಲಿ, ಜನ ನಲಿಯಲಿ, ಮೆರೆಯಲಿ ಸದ್ಬುದ್ಧಿ!''

ಪೂರಕ ಓದಿಗೆ

ನಾಟಕರಂಗದಲ್ಲಿ ನನ್ನ ತಾಲೀಮುಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more