ವೈದ್ಯರ ಕೈಚಳಕಕ್ಕೆ ಫಲ ಕೊಟ್ಟ ಭೂಮಿ; ಬೆಳಗಾವಿಯಲ್ಲಿ ಇಸ್ರೇಲ್ ಮಾದರಿಯ 'ಕೇಶರ್ ಮಾವು' ಬೆಳೆದು ಕ್ರಾಂತಿ
ಬೆಂಗಳೂರು: ವೈದ್ಯರು ಸಾಮಾನ್ಯವಾಗಿ ಅನಾರೋಗ್ಯ ನಿವಾರಿಸುವಲ್ಲ, ಚಿಕಿತ್ಸೆ, ಮೊದಲಾದ ವೈದ್ಯಕೀಯ ರಂಗದಲ್ಲಿ ಯಶಸ್ವಿ ಕಂಡಿದ್ದನ್ನು ನೋಡಿದ್ದೇವೆ. ಆದರೆ ಕರ್ನಾಟಕದಲ್ಲಿ ಇಲ್ಲೊಬ್ಬರು ಬಂಜರು ಭೂಮಿಯಲ್ಲಿ ಬಂಗಾರದ ಬೆಲೆ ಬೆಳೆದು 'ಮನಸ್ಸಿದ್ದರೆ ಮಾರ್ಗ' ಎಂದು ತೋರಿಸಿಕೊಟ್ಟಿದ್ದಾರೆ. ಇಸ್ರೇಲ್ ಮಾದರಿಯಲ್ಲಿ ಕರ್ನಾಟಕದ ಬೆಳಗಾವಿಯಲ್ಲಿ ಮಾವು ಬೆಳೆದು ಇತರರಿಗೂ ಮಾದರಿಯಾಗಿದ್ದಾರೆ. ಅವರ ನಿರಂತರ ಶ್ರಮ, ವ್ಯವಸಾಯದ ಕಲಿಕೆ, ಬೆಳೆ ಬೆಳೆದಿದ್ದು ಹೇಗೆ? ಎಂಬ ಸ್ಪೂರ್ತಿದಾಯಕ ಕಥೆ ಇಲ್ಲಿದೆ.
ಕರ್ನಾಟಕ ಮೂಲದ ಆಯುರ್ವೇದ ವೈದ್ಯ ಡಾ. ಸಮೀರ್ ನಾಯರ್ ಅವರು ಬೆಳಗಾವಿಯಲ್ಲಿ ಇಸ್ರೇಲ್ ಮಾದರಿಯ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ಕೇಶರ್ ಮಾವಿನ ತೋಟ ನಿರ್ಮಿಸಿದ ವರ್ಷಗಳಲ್ಲಿ ಫಲಸು ಕಂಡುಕೊಂಡು ಇತಿಹಾಸ ನಿರ್ಮಿಸಿದ್ದಾರೆ. 2019 ರಲ್ಲಿ ಕೃಷಿ ಆರಂಭಿಸಿದ ಡಾ. ನಾಯರ್, ಮೂರೇ ವರ್ಷಗಳಲ್ಲಿ ಅವರ ತೋಟದಲ್ಲಿ ಗಿಡಗಳು ಫಲ ನೀಡಲು ಶುರು ಮಾಡಿವೆ. ಸದ್ಯ ಮಾವು ಋತುವಾಗಿದ್ದರಿಂದ ಉತ್ತಮ ಆದಾಯ ಸಹ ಕಾಣುತ್ತಿದ್ದಾರೆ.

ಈ ವರ್ಷ 30 ಟನ್ ಮಾವು ಕೊಯ್ಲು
ಆರಂಭದಲ್ಲಿ ಅಷ್ಟಾಗಿ ಇಳುವರಿ ನೀಡದ ಈ ಮಾವಿನ ಗಿಡಗಳು ಇದೀಗ ಭರ್ಜರಿ ಇಳುವರಿ ಕೊಟ್ಟಿವೆ. ನಾಲ್ಕು ವರ್ಷಗಳ ಹಿಂದಿನ ಇಳುವರಿಗೆ ಹೋಲಿಸಿದರೆ, ಈ ವರ್ಷ ಆರು ಪಟ್ಟು ಅಧಿಕ. ಅಂದರೆ ಸುಮಾರು 30 ಟನ್ ಮಾವಿನ ಕಾಯಿ ಕೊಯ್ಲು ಮಾಡಲಾಗುತ್ತಿದೆ. ವೈದ್ಯರು ಮಾವಿನ ತೋಟದಲ್ಲಿ ಡ್ರಿಪ್ ನೀರಾವರಿ, ಸೋಲಾರ್ ವ್ಯವಸ್ಥೆ ಹಾಗೂ ಜಲ ಸಂರಕ್ಷಣಾ ರಚನೆಗಳನ್ನು ಅಳವಡಿಸಿಕೊಂಡು ತಂತ್ರಜ್ಞಾನ ಮತ್ತು ಸುಸ್ಥಿರತೆಯ ಕೃಷಿ ಮಾಡಿದ್ದಾರೆ ಎಂದು "ಈಟಿವಿ ಭಾರತ್' ವರದಿ ಮಾಡಿದೆ.
ಕೇಶರ್ ಮಾವು ಕೆಜಿಗೆ ಗರಿಷ್ಠ 750 ರೂ.
ರಾಜ್ಯದಲ್ಲಿ ಮಾವು ಕೊಯ್ದಿಗೆ ಬಂದಿದೆ. ಡಾ. ನಾಯರ್ ತಮ್ಮದೇ ಹೆಸರಿನ ಬ್ರ್ಯಾಂಡ್ ಅಡಿಯಲ್ಲಿ ಹಣ್ಣುಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡಲಾರಂಭಿಸಿದ್ದಾರೆ. ಇವರ ಮಾವು ಒಂದು ಕೆಜಿಗೆ 350 ರಿಂದ 700 ರೂಪಾಯಿಗಳ ಬೆಲೆಗೆ ಮಾರಾಟವಾಗುತ್ತಿವೆ. ಕೃಷಿಯಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲದಿಂದ, ಮಾವಿನ ಕೃಷಿ ಕಾಯಕ ಆರಂಭಿಸುವ ಮುನ್ನ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿದ್ದಾರೆ. ಇಸ್ರೇಲಿ ಕೃಷಿ ತಂತ್ರಗಳನ್ನು ವಿವರವಾಗಿ ಅಧ್ಯಯನ ಮಾಡಿದ್ದಾರೆ. ಯೂಟ್ಯೂಬ್ ವಿಡಿಯೋ ನೋಡಿಕೊಂಡು ಒಂದಷ್ಟು ವಿಷಯಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಬಳಿಕ ಅವರು ಪ್ರಯತ್ನ ನಡೆಸಿ ಯಶಸ್ಸು ಕಂಡಿದ್ದಾರೆ. ಅವರ ಪಯತ್ನಕ್ಕೆ, ಯಶಸ್ಸಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಇಸ್ರೇಲ್ ಕೃಷಿ ತಂತ್ರಗಳಿಂದ ಪ್ರೇರಿತರಾದ ಡಾ. ನಾಯರ್, ಬೆಳಗಾವಿಯ ಬಂಜರು ಭೂಮಿಯನ್ನು ಫಲವತ್ತಾದ, ಹೆಚ್ಚಿನ ಇಳುವರಿ ನೀಡುವ ಕೇಶರ್ ಮಾವಿನ ತೋಟವಾಗಿ ಪರಿವರ್ತಿಸಿದ್ದಾರೆ. ಯೂಟ್ಯೂಬ್ ವೀಡಿಯೊಗಳು ಹಾಗೂ ಇಸ್ರೇಲಿ ಮಾದರಿಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡ ಮಹಾರಾಷ್ಟ್ರದ ತೋಟಗಳಿಗೆ ಭೇಟಿ ನೀಡುವ ಮೂಲಕ ಈ ಕೃಷಿ ವಿಧಾನಗಳನ್ನು ಕಲಿತಿರುವುದಾಗಿ ನಾಯರ್ ಮಾಹಿತಿ ಹಂಚಿಕೊಂಡಿದ್ದಾರೆ.
ಭೂಮಿ ಖರೀದಿಸಿ ತೋಟ ಮಾಡಿದ್ದೇ ರೋಚಕ
ಬೆಳಗಾವಿ ತಾಲ್ಲೂಕಿನಲ್ಲಿ 5.5 ಎಕರೆ ಭೂಮಿ ಖರೀದಿಸಿದ ಅವರು, ಹಿಡಕಲ್ ಡ್ಯಾಂ ಬಳಿಯ ತೋಟಗಾರಿಕೆ ಕೇಂದ್ರದಿಂದ 2,800 ಕೇಶರ್ ಮಾವಿನ ಸಸಿಗಳನ್ನು ತಂದು ನಾಲ್ಕು ಎಕರೆಯಲ್ಲಿ ನೆಟ್ಟರು. ಅಲ್ಲಿಂದ ಇಲ್ಲಿಗೆ ಏಳು ವರ್ಷಗಳ ನಂತರ, ನಾಲ್ಕನೇ ಕೊಯ್ಲು ಆರಂಭಿಸಲಾಗುತ್ತಿದೆ. ಸಾಂಪ್ರದಾಯಿಕ ಮಾವಿನ ಕೃಷಿಯಲ್ಲಿ ಎಕರೆಗೆ ಕೇವಲ 35-40 ಗಿಡ ನೆಟ್ಟು ಬೆಳೆಸಲಾಗುತ್ತದೆ. ಅವುಗಳಿಂದ ಫಸಲು ಪಡೆಯಲು ಸುಮಾರು 10 ವರ್ಷ ಕಾಯಬೇಕಾಗುತ್ತದೆ. ಆದರೆ ತಾವು ಹಚ್ಚಿದ ಗಿಡಗಳು ಹಾಗೂ ಇಸ್ರೇಲಿ ಮಾದರಿಯ ಕೃಷಿಯಿಂದಾಗಿ ಮೂರು ವರ್ಷಗಳೊಳಗೆ ಫಸಲ ಪಡೆದಿದ್ದೇನೆ ಎಂದರು.
ಒಂದು ಎಕರೆಗೆ 700 ಸಸಿಗಳನ್ನು ನೆಟ್ಟಿದ್ದೇವೆ. ಗಿಡಗಳ ನಡುವೆ ಏಳು ಅಡಿ ಮತ್ತು ಸಾಲುಗಳ ನಡುವೆ 12 ಅಡಿ ಅಂತರವಿದೆ. ಪ್ರತಿ ವರ್ಷವೂ ಇಳುವರಿ ದ್ವಿಗುಣಗೊಂಡಿದೆ ಎಂದ ಅವರು ಈ ವರ್ಷದ ಮಾವು ಇಳುವರಿ ಕಂಡು ಸಂತಸ ವ್ಯಕ್ತಪಡಿಸಿದರು. ಹೆಚ್ಚು ರುಚಿ ಮತ್ತು ಗುಣಮಟ್ಟದಿಂದ ಕೂಡಿದ್ದರಿಂದ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಇದೆ. ತಾಯಿ "ವೈಶಾಲಿ ಫಾರ್ಮ್ ಕೇಶರ್ ಮ್ಯಾಂಗೋ" ಬ್ರ್ಯಾಂಡ್ ಅಡಿಯಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದೇನೆ. ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಿದೆ ಎಂದರು.
ವಿದೇಶಗಳಿಗೂ ರಫ್ತು, ದೇಶಿಯ ಮಾರುಕಟ್ಟೆ ವಿಸ್ತರಣೆ
ಹಲವರು ನೇರವಾಗಿ ತೋಟಕ್ಕೆ ಬಂದು ಮಾವಿನ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ಕಳೆದ ವರ್ಷ, ಅವರ ತೋಟದಿಂದ ಯೂರೋಪ್ ಮತ್ತು ಗಲ್ಫ್ ರಾಷ್ಟ್ರಗಳಿಗೆ ಮಾವಿನ ಹಣ್ಣುಗಳನ್ನು ರಫ್ತು ಮಾಡುವ ರಫ್ತುದಾರರಿಗೂ ಹಣ್ಣುಗಳನ್ನು ಪೂರೈಸಲಾಗಿತ್ತು. ಯುದ್ಧಗಳ ಕಾರಣದಿಂದ ರಫ್ತು ಸ್ವಲ್ಪ ಕಷ್ಟವಾಗಿದೆ. ಈ ವರ್ಷ ನಮ್ಮದೇ ಆದ ಮಾರುಕಟ್ಟೆ ಜಾಲವನ್ನು ನಿರ್ಮಿಸಲು ಪ್ರಾರಂಭಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಹಣ್ಣುಗಳು ಸಂಪೂರ್ಣವಾಗಿ ನೈಸರ್ಗಿಕವಾಗಿ ಮಾಗಿದ ಮೇಲೆ ಕೊಡುತ್ತೇವೆ. ರಸಾಯನಿಕ ಬಳಸುವುದಿಲ್ಲ ಎಂದು ಡಾ. ನಾಯರ್ ಹೇಳಿದರು. ಮಾವಿನ ಕಾಯಿ ಸುಮಾರು 90 ಗ್ರಾಂ ತಲುಪಿದ ನಂತರ, ಪ್ರತಿ ಕಾಯಿಯನ್ನು ಪರಿಸರ ಸ್ನೇಹಿ ರಕ್ಷಣಾ ಚೀಲದಿಂದ ಮುಚ್ಚಲಾಗುತ್ತದೆ. ಸುಮಾರು 50 ರಿಂದ 55 ದಿನಗಳ ನಂತರ, ಮಾವಿನ ಹಣ್ಣುಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ತೋಟದಲ್ಲಿ ಸಹ ಶೇ. 95 ಕೃಷಿ ಪದ್ಧತಿಗಳು ಸಾವಯವ ವಿಧಾನಗಳಿಂದ ಕೂಡಿವೆ. ಹಸುಗಳ ಸಗಣಿ ಮತ್ತು ಕೃಷಿ ತ್ಯಾಜ್ಯವನ್ನು ಬಳಸಿ ಸಾವಯವ ಗೊಬ್ಬರ ತಯಾರಿಸುತ್ತೇವೆ ಎಂದು ತಿಳಿಸಿದ್ದಾರೆ.














Click it and Unblock the Notifications