• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ ಬೈದು ಬೂಕರ್ ಪಡೆದ ಬಿಳಿ ಹುಲಿ

By Staff
|
Google Oneindia Kannada News
ಭಾರತದ ಸಂಸ್ಕೃತಿಯ ಹೇರಳ ಅವಹೇಳನವಾಗಿದೆ ಎಂಬ ಆರೋಪ ಹೊತ್ತಿರುವ ಬೂಕರ್ ಪ್ರಶಸ್ತಿ ಭಾಜಕ ಅರವಿಂದ ಅಡಿಗರ ದಿ ವೈಟ್ ಟೈಗರ್ ಸಾಕಷ್ಟು ಚರ್ಚೆಗಳಿಗೆ, ವಿವಾದಗಳಿಗೆ ಗ್ರಾಸವಾಗಿದೆ. ಲೇಖಕನಿಗೆ ವಸ್ತುನಿಷ್ಠವಾಗಿ ತನಗನ್ನಿಸಿದ್ದನ್ನು ಅಭಿವ್ಯಕ್ತಿಸುವ ಸ್ವಾತಂತ್ರ್ಯವಿರಬೇಕಾದರೂ ಅದರಲ್ಲಿ ದುರುದ್ದೇಶವಿರಬಾರದು ಎಂಬುದು ಡಾ. ಜೀವಿ ಕುಲಕರ್ಣಿಯವರ ಸ್ಪಷ್ಟ ಅಭಿಪ್ರಾಯ.

ಬೂಕರ್ ಪ್ರಶಸ್ತಿ ಪಡೆದ 3ನೆಯ ಭಾರತೀಯ, ಪ್ರಥಮ ಕನ್ನಡಿಗ, ದಿ ವೈಟ್ ಟೈಗರ್ ಕಾದಂಬರಿಯ ಕರ್ತೃ ಅರವಿಂದ ಅಡಿಗ! ಎಂಬ ಲೇಖನ ಅಂತರ್ಜಾಲದಲ್ಲಿ ಪ್ರಕಟಗೊಂಡಾಗ ಈ ಪುಸ್ತಕ ಓದಿದವರು, ಓದದೆ ಇದ್ದವರು ಕೂಡ ದೊಡ್ದ ಸಂಖ್ಯೆಯಲ್ಲಿ ಪ್ರತಿಸ್ಪಂದನ ನೀಡಿದರು. ನಮ್ಮ ದೇಶದಲ್ಲಿ ಲೇಖಕನಿಗೆ ತನಗೆ ಅನಿಸಿದ್ದನ್ನು ಬರೆಯುವ ಸ್ವಾತಂತ್ರ್ಯವಿದೆ. ಅದರೆ ಅದರ ಹಿಂದೆ ದುರುದ್ದೇಶ ಇರಬಾರದು. ಈ ಕಥೆಯು ಕಾಲ್ಪನಿಕ. ಇಲ್ಲಿರುವ ಪಾತ್ರಗಳು ನಿಜ ಜೀವನದಿಂದ ಆಯ್ದುಕೊಂಡವು. ಕಾಲ್ಪನಿಕ ಸನ್ನಿವೇಶಗಳನ್ನು ಸೃಷ್ಟಿಸಿ ಭಾರತದ ಒಂದು ಕಪ್ಪುಮುಖವನ್ನು ಇಲ್ಲಿ ತೋರಿಸುವ, ಭಾರತವನ್ನು ಬೈದು ಬಹುಮಾನವನ್ನು ಗಳಿಸುವ ಉದ್ದೇಶ ಲೇಖಕರಿಗಿದೆ ಎಂಬುದು ಯಾವುದೇ ಪ್ರಾಜ್ಞ ವಾಚಕನಿಗೆ ಹೊಳೆಯದಿರದು. ಬಿಳಿಯ ಹುಲಿಯ ಬಗ್ಗೆ ನನ್ನ ಅನಿಸಿಕೆಗಳು:

* ಈ ಪುಸ್ತಕ ಬೂಕರ್ ಪ್ರಶಸ್ತಿಗೆ ಆಯ್ಕೆಗೊಂಡ ಪುಸ್ತಕಗಳಲ್ಲಿ ಒಂದಾಗಿದೆ ಎಂದು ತಿಳಿದಾಗ ಓದಲು ಆಸಕ್ತನಾದೆ. ನಾನಾಗ ಅಮೇರಿಕೆಯ ಪ್ರವಾಸದಲ್ಲಿದ್ದೆ. ಓದಲು ಪ್ರಾರಂಭಿಸಿ ಅರ್ಧಕ್ಕೆ ಬಿಟ್ಟೆ. ಇದಕ್ಕೆ ಬಹುಮಾನ ದೊರೆತ ಸುದ್ದಿ ಪ್ರಕಟವಾದಾಗ ಪುಸ್ತಕ ಓದಿ ಮುಗಿಸಿದೆ. ಬಹುಮಾನ ದೊರೆಯದಿದ್ದರೆ ನಾನು ಬಹುಶಃ ಇದನ್ನು ಪೂರ್ತಿ ಓದುತ್ತಿರಲಿಲ್ಲ.

* ಇದು ನನಗೆ ಬಾಲಿವುಡ್‌ನ ಒಂದು ಕ್ರೈಂ ಸ್ಟೋರಿಯಂತೆ ಕಂಡಿತು. ವಾಸ್ತವಾಂಶದ ಅತಿರಂಜನೆ, ಕಪೋಲಕಲ್ಪಿತ ಕಥಾನಕದ ಹಿನ್ನೆಲೆಯೂ ಕಂಡುಬಂತು. ಲೇಖಕರಿಗೆ ಚೆನ್ನಾಗಿ ಬರೆಯುವ ಯೋಗ್ಯತೆ ಇದೆ, ಆದರೆ ಅದನ್ನು ತಪ್ಪಾಗಿ ಬಳಸಿಕೊಂಡಂತೆ ತೋರಿತು. ಅನ್ಯರ ಮೆಚ್ಚುಗೆ ಗಳಿಸಲು ಅನನ್ಯ ಭಾರತವನ್ನು ತೆಗಳುವುದೇಕೆ? ಲೇಖಕನಿಗೆ, ಅವನು ಸೃಷ್ಟಿಸಿದ ಕಥಾನಾಯಕನಿಗೆ, ತಾನು ಕಂಡ ಭಾರತದಲ್ಲಿ ಏನೂ ಒಳ್ಳೆಯದು ಕಾಣಲಿಲ್ಲವೇ? ಎಂಬ ಭಾವ ನನ್ನನ್ನು ಆವರಿಸಿತು.

* ಈ ಕಾದಂಬರಿಯ ನಾಯಕ ಮುನ್ನಾ ಊರ್ಫ ಬಲರಾಮ ಹಲವಾಯಿ ಊರ್ಫ ಅಶೋಕ ಶರ್ಮಾ (ತನ್ನನ್ನು ಸಾಮಾಜಿಕ ಉದ್ಯಮಿ ಎಂದು ಕರೆದುಕೊಂಡ ವ್ಯಕ್ತಿ), ಭಾರತಕ್ಕೆ ಆಗಮಿಸಲಿರುವ ಚೀನದ ಪ್ರಧಾನಿಗೆ (ವೆನ್ ಜಿಯಾಬಾವೋಗೆ) ಏಳು ರಾತ್ರಿ, ಏಳು ದೀರ್ಘ ಪತ್ರಗಳನ್ನು ಬರೆಯುತ್ತಾನೆ. ಅದೇ ಈ ಕಾದಂಬರಿ. ಭಾರತದ ಬಗ್ಗೆ, ಭಾರತದ ಸಿಲಿಕಾನ್ ವ್ಯಾಲಿ ಎಂದು ಖ್ಯಾತವಾದ ಬೆಂಗಳೂರು ನಗರದ ಬಗ್ಗೆ ಬರೆಯುತ್ತಾನೆ. ತನ್ನದು ಅರೆಬೆಂದ ಭಾರತೀಯನೊಬ್ಬನ ಆತ್ಮಚರಿತ್ರೆ (ಹಾಫ್ ಬೇಕ್ಡ್ ಇಂಡಿಯನ್ಸ್ ಅಟೊಬಯಾಗ್ರಫಿ) ಎಂದು ಕರೆದುಕೊಳ್ಳುತ್ತಾನೆ.

* ತನ್ನ ಕಥನದ ಪ್ರಾರಂಭದಲ್ಲಿ ನಾಯಕ ದೇವರ ಬಗ್ಗೆ ಮಾತಾಡುತ್ತಾನೆ. ಮುಸ್ಲಿಮರಿಗೆ ಒಬ್ಬ ದೇವರು(ಅಲ್ಲಾಹ್), ಕ್ರಿಶ್ಚನ್ನರಿಗೆ ಮೂರು ದೇವರು (ಗಾಡ್, ಸನ್ ಆಫ್ ಗಾಡ್, ಹೋಲಿ ಘೋಸ್ಟ್) ಆದರೆ ಹಿಂದುಗಳಿಗೆ ಮೂರುಕೋಟಿ ಅರವತ್ತು ಲಕ್ಷ ದೇವರು. ಈ ಎಲ್ಲ ದೇವರುಗಳಲ್ಲಿ ಯಾರ ಪೃಷ್ಠಕ್ಕೆ ಮುತ್ತಿಟ್ಟು ತನ್ನ ಆತ್ಮ ಚರಿತ್ರೆ ಬರೆಯಲು ಪ್ರಾರಂಭಿಸಲಿ ಎಂದು ದೇವರಲ್ಲಿ ವಿಶ್ವಾಸವಿಲ್ಲದ ಚೀನದ ಪ್ರಧಾನಿಗೆ ಕೇಳುತ್ತಾನೆ. ದೇವರ ಬಗ್ಗೆ ಇಷ್ಟು ಲಘುವಾಗಿ ಮಾತಾಡುವುದು ಲೇಖಕರ ಕೆಳಮಟ್ಟದ ಅಭಿರುಚಿಯನ್ನು ತೋರುತ್ತದೆ. ಇದು ವ್ಯಂಗವೋ ಅಸಡ್ಡೆಯೋ ತಿಳಿಯುತ್ತಿಲ್ಲ. ದೇವತೆಗಳ ಸಂಖ್ಯೆ 33 ಕೋಟಿ, ಇಲ್ಲಿ ಬರೆದಂತೆ 3 ಕೋಟಿ ಅರವತ್ತು ಲಕ್ಷ ಅಲ್ಲ. (ಏಕಂ ಸತ್ ವಿಪ್ರಾ ಬಹುಧಾ ವದಂತಿ ದೇವರು ಒಬ್ಬನೆ ಎಂಬುದನ್ನು ವೇದಗಳು ಒಪ್ಪಿವೆ. ಸೃಷ್ಟಿ-ಪಾಲನೆ-ಸಂಹಾರ ಕ್ರಿಯೆಗೆ ಬ್ರಹ್ಮ-ವಿಷ್ಣು-ಮಹೇಶ ತ್ರಿಮೂರ್ತಿಗಳಿದ್ದರೂ ನಾರಾಯಣ ಒಬ್ಬನೆ ದೇವರು ಎಂದು ಶ್ರುತಿ ಸಾರುತ್ತದೆ. ಇನ್ನು ಪ್ರಮುಖ ಮುವತ್ಮೂರು ದೇವತೆಗಳೆಂದರೆ 8-ವಸುಗಳು, 11-ರುದ್ರರು, 12-ಆದಿತ್ಯರು, 1-ಪ್ರಜಾಪತಿ, 1-ಅದಿತಿ+ ಒಟ್ಟು 33. ಇದು ವೇದಗಳಲ್ಲಿಯ ದೇವತೆಗಳ ಸಂಖ್ಯೆ. ಪುರಾಣಗಳಲ್ಲಿ ಅದೆ 33 ಕೋಟಿಯಾಯಿತು. ವಿಶ್ವ ವ್ಯಾಪಿಸಿದ ದೇವಾಂಶರಿವರು. ಇದರಲ್ಲಿ ಅಪಹಾಸ್ಯ ಮಾಡುವಂತಹದು ಏನಿದೆ ತಿಳಿಯುತ್ತಿಲ್ಲ.)

* ತನ್ನ ಹಳ್ಳಿಯ ಬಗ್ಗೆ ಬರೆಯುತ್ತಾನೆ. ತನ್ನ ತಂದೆಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ದೊರೆಯದೆ, ಭ್ರಷ್ಟ ಆಸ್ಪತ್ರೆಯವರಿಂದಾಗಿ, ಸಾವನ್ನಪ್ಪಿದ ಎಂದು ಬರೆಯುತ್ತಾನೆ. ತಾನು ಕಾರ್ ಡ್ರೈವರ ಆದ ಬಗ್ಗೆ, ದೆಹಲಿಯಲ್ಲಿದ್ದ ತನ್ನ ಧಣಿಯ ಭ್ರಷ್ಟತೆಯ ಬಗ್ಗೆ, ಅವನ ಅನೈತಿಕ ವ್ಯವಹಾರಗಳ ಬಗ್ಗೆ, ಅವನ ತೆರಿಗೆ-ವಂಚನೆಯ ಬಗ್ಗೆ, ದಿಲ್ಲಿಯ ರಾಜಕಾರಣಿಗಳ ದುರಾಸೆಗಳ ಬಗ್ಗೆ ಬರೆಯುತ್ತಾನೆ. ಬಿಳಿಚರ್ಮದ ಹೇಮಕೇಶಿ ವಿದೇಶಿ ವಾರಾಂಗನೆಯರ ಬಗ್ಗೆ, ಶೋಷಿತರ ಬಗ್ಗೆ, ಶೋಷಕರ ಬಗ್ಗೆ ಬರೆಯುತ್ತಾನೆ. ತಾನು ತನ್ನ ಮಾಲೀಕನನ್ನು ಬರ್ಬರವಾಗಿ ಕೊಂದು ಅವನ ಹಣವನ್ನು ದೋಚಿಕೊಂಡು ಬೆಂಗಳೂರಿಗೆ ಹೋಗಿ ಹೊಸ ಜೀವನ ಪ್ರಾರಂಭಿಸಿದ ಬಗ್ಗೆ ಬರೆಯುತ್ತಾನೆ.

* ಈ ಕಾದಂಬರಿಯ ಕಥಾನಾಯಕ ಗಯಾ ಜಿಲ್ಲೆಯ ಲಕ್ಷ್ಮಣಗಢದ ನಿವಾಸಿ. ಅವನು ಹೆಚ್ಚು ಕಲಿತವನಲ್ಲ. ಆತ್ಮಚರಿತ್ರೆ ಪ್ರಾರಂಭಿಸುವ ಮೊದಲು ನಾಲ್ಕು ಕವಿಗಳನ್ನು ನೆನೆಯುತ್ತಾನೆ. ರೂಮಿ, ಇಕ್ಬಾಲ್, ಮಿರ್ಜಾ ಗಾಲಿಬ್ ಮತ್ತೆ ನಾಲ್ಕನೆಯ ಕವಿಯ ಹೆಸರು ಅವನ ನೆನಪಿಗೆ ಬರುವುದಿಲ್ಲ. ಅವನಿಗೆ ಆದಿಕವಿ ವಾಲ್ಮೀಕಿ, ವ್ಯಾಸ ಗೊತ್ತಿರಲಿಕ್ಕಿಲ್ಲ. ಆದರೆ ರಾಮಚರಿತ ಮಾನಸದ ತುಲಸೀದಾಸನ ಬಗ್ಗೆ ಕೂಡ ಗೊತ್ತಿದ್ದಂತೆ ತೋರುವುದಿಲ್ಲ. ತನ್ನನ್ನು ಸ್ವಯಂಶಿಕ್ಷಿತ ಉದ್ಯೋಗಪತಿ ಎಂದು ಕರೆದುಕೊಳ್ಳುತ್ತಾನೆ. ಶ್ರೀಮಂತ ಧಣಿಯ ಸಿಟಿ-ಹೊಂಡಾ ಕಾರ್ ಚಾಲಕನಾಗುತ್ತಾನೆ. ಧಣಿಯ ಮಗ ಅಶೋಕ ವಿದೇಶದಿಂದ ಬಂದವ. ಅವನ ಉದ್ಯೋಗವೇನು, ಹೇಗೆ ಹಣ ಗಳಿಸಿದ, ಯಾಕೆ ರಾಜಕಾರಣಿಗಳಿಗೆ ಲಕ್ಷಾವಧಿ ಹಣ ಲಂಚರೂಪದಿಂದ ಕೊಡುತ್ತಾನೆ, ಯಾವುದೇ ವಿವರ ದೊರೆಯುವುದಿಲ್ಲ. ಧಣಿಯ ಹೆಂಡತಿ ಪಿಂಕಿ ಎಂಬವಳು ವಿದೇಶೀಯ ಬಿಳಿಯ ಹೆಂಗಸು. ಅವಳಿಂದ ಕೆಲ ಇಂಗ್ಲಿಷ್ ಶಬ್ದ ಪ್ರಯೋಗ ಕಲಿತಿರುತ್ತಾನೆ. ವಾಟ್ ಎ ಫಕಿಂಗ್ ಜೋಕ್ ಎನ್ನುವುದು ಅವಳಿಂದ ಕಲಿತ ಮಹಾವಾಕ್ಯ. ಅದನ್ನೇ ಮತ್ತೆ ಮತ್ತೆ ಅವನ ಬಾಯಿಯಿಂದ ನಾವು ಕೇಳುತ್ತೇವೆ. ಅವನು ತನ್ನ ಧಣಿಗೆ ಕುಡಿಯಲು ಎಲ್ಲ ಬ್ರಾಂಡ್‌ನ ವಿದೇಶೀ ಮದಿರೆ ತಂದು ಒದಗಿಸುತ್ತಾನೆ. ಖಾಲಿ ಬಾಟಲಿಗಳನ್ನು ಮೋಸದ ಸೆರೆ ತಯಾರಿಸುವವರಿಗೆ ಮಾರಿ ಹಣಗಳಿಸುವ ಕಲೆಯಲ್ಲಿ ಪರಿಣಿತನಾಗುತ್ತಾನೆ. ಪೆಟ್ರ್ರೋಲ್ ಕದಿಯಲು, ಭ್ರಷ್ಟ ಮೆಕ್ಯಾನಿಕ್‌ರ ಸಹವಾಸದಿಂದ ರಿಪೇರಿ ಹೆಸರಿನಿಂದ ಹಣ ಗಳಿಸಲು ಕಲಿಯುತ್ತಾನೆ. ಕುಡಿದ ಅಮಲಿನಲ್ಲಿ ಪಿಂಕಿ ಮೆಡಂ ಕಾರ್ ನಡೆಸಿ ಒಬ್ಬ ಅಮಾಯಕನನ್ನು ರಸ್ತೆಯಲ್ಲಿ ಕೊಲ್ಲುತ್ತಾಳೆ. ವಿಧೇಯ ಸೇವಕನಾಗಿ ಈ ಅಪಘಾತ ತನ್ನಿಂದ ಆಯಿತು, ಕಾರು ನಡೆಸುವಾಗ ತಾನೊಬ್ಬನೇ ಕಾರಿನಲ್ಲಿ ಇದ್ದೆ, ಹೊಣೆಯೆಲ್ಲ ತನ್ನದು ಎಂದು ಬರೆದುಕೊಡುತ್ತಾನೆ. ಅದಕ್ಕೆ ಅವನ ಅಜ್ಜಿಯ ಸಾಕ್ಷಿ-ಸಹಿ ಬೇರೆ. ಇವನಿಗೆ ಶಿಕ್ಷೆ ಆಗುವುದಿಲ್ಲ ಪೋಲೀಸರ ಭ್ರಷ್ಟತೆಯಿಂದಾಗಿ ಕೇಸ್ ರಿಜಿಸ್ಟರೇ ಆಗುವುದಿಲ್ಲ. ದೆಹಲಿಯ ಜೈಲಿನ ತುಂಬ ಮಾಲೀಕರ ತಪ್ಪಿಗಾಗಿ ಶಿಕ್ಷೆ ಅನುಭವಿಸುವ ವಾಹನ ಚಾಲಕರಿಂದ ತುಂಬಿವೆ ಎನ್ನುತ್ತಾನೆ.

* ಹತ್ತು ಸಾವಿರ ವರ್ಷಗಳ ಇತಿಹಾಸ ಹೊಂದಿದ ಭಾರತ ಜಗತ್ತಿಗೆ ನೀಡಿದ ದೊಡ್ದ ಕೊಡುಗೆ ಎಂದರೆ ಕೋಳಿಯಗೂಡು (Rooster coop). ತಂತಿಯ ಜಾಲದಲ್ಲಿ ಕೋಳಿಗಳನ್ನು ಒಟ್ಟಿರುತ್ತಾರೆ. ಒಂದೊಂದಾಗಿ ಕೋಳಿಗಳನ್ನು ಕೊಲ್ಲುತ್ತಾರೆ. ಆ ದೃಶ್ಯ ಕಂಡ ಕೋಳಿಗಳು ಒಗ್ಗಟ್ಟಾಗಿ ಪ್ರತಿರೋಧಿಸುವುದಿಲ್ಲ, ಬಂಡೇಳುವುದಿಲ್ಲ. ಅವುಗಳಂತೆ ಇಲ್ಲಿಯ ಜನರ ಕಥೆ ಇದೆ ಎನ್ನುತ್ತಾನೆ. ತಾನು ಮಾತ್ರ ಆ ಕೂಳಿಗೂಡನ್ನು ತುಂಡರಿಸಿ ಹೊರಬಂದಿರುವುದಾಗಿ ಹೇಳುತ್ತಾನೆ.

* ಬಲರಾಮ ಹಲವಾಯಿ ತನ್ನ ಒಡೆಯನನ್ನೇ ಕೊಂದು ಅವನು ಲಂಚ ಕೊಡಲು ತಂದ ಲಕ್ಷಾವಧಿ ಹಣ ದೋಚಿಕೊಂಡು ಓಡಿ ಬೆಂಗಳೂರಿಗೆ ಬರುತ್ತಾನೆ. ತಾನು ಸೇವಕನ ಬಂಧನದಿಂದ ಬಿಡಿಸಿಕೊಳ್ಳಲು ಯಾವ ಮಹತ್ವದ ಕಾರಣ ಕೊಡುವುದಿಲ್ಲ. ಪಿಂಕಿ ಮೆಡಂ ಮಾಡಿದ ಅಪರಾಧಕ್ಕೆ ಇವನನ್ನು ಬಲಿಪಶು ಮಾಡಲು ಇವನ ಒಡೆಯ ಹೊರಟಾಗ ಇವನು ಸೇಡು ತೀರಿಸಿಕೊಳ್ಳಲು ಕೊಲೆ ಮಾಡಬಹುದಾಗಿತ್ತು. ಇವನು ಬೆಂಗಳೂರಿಗೆ ಬಂದ ಮೇಲೆ ಒಂದು ರೀತಿಯ ಭಯ ಇವನನ್ನು ಕಾಡುತ್ತದೆ. ರೇಡಿಯೋದಲ್ಲಿ ಟಿ.ವಿ.ಯಲ್ಲಿ ಇವನ ಹೆಸರು, ಎತ್ತರ, ಬಣ್ಣ ಹಾಗೂ ದೇಹದ ವಿವರ ನೀಡಿ ಅವನ ಶೋಧ ನಡೆದಿದೆ ಎಂಬ ಜಾಹೀರಾತು ಬರುತ್ತಿರುತ್ತವೆ. ಇವನು ತನ್ನ ಹೆಸರು ಬದಲಿಸಿ ಉದ್ಯಮಿಯಾಗುತ್ತಾನೆ. ತನ್ನ ಮನದ ಸ್ಥಿಮಿತ ಕಾಪಾಡಲು ಯೋಗಾಭ್ಯಾಸ ಮಾಡುವುದಾಗಿ ಹೇಳುತ್ತಾನೆ. ಚೀನದ ಪ್ರಧಾನಿಗೆ, ಯೋಗವನ್ನು ಅವರ ದೇಶದಲ್ಲಿ ಕಡ್ಡಾಯವಾಗಿ ಕಲಿಸಲು ಸಲಹೆ ನೀಡುತ್ತಾನೆ. ಬೆಂಗಳೂರಿನಲ್ಲಿರುವ ಐಟಿ ಕಂಪನಿಗಳಲ್ಲಿ ರಾತ್ರಿಪಾಳಿ ದುಡಿಯುತ್ತಿರುವವರ ಪಿಕ್ ಅಪ್ ಮತ್ತು ಡ್ರಾಪ್ ಕಾಂಟ್ರಾಕ್ಟ್ ಪಡೆದು, ಆ ಉದ್ಯಮದಲ್ಲಿ ಹಣಗಳಿಸುತ್ತಾನೆ. ಹದಿನಾರು ವಿದೇಶಿ ಕಾರು, ಹದಿನಾರು ಚಾಲಕರು ಇವನಲ್ಲಿ ಕೆಲಸ ಮಾಡುತ್ತಾರೆ. ಅದರ ವಿವರ ಕೊಡುತ್ತಾನೆ.

* ಆಶ್ಚರ್ಯದ ಸಂಗತಿ ಎಂದರೆ ಅವನಿಗೆ ಪಾಪಪ್ರಜ್ಞೆ ಕಾಡುವುದಿಲ್ಲ. ತಾನು ಮೋಸ ಮಾಡಿದ ಬಗ್ಗೆ, ತನ್ನೊಡೆಯನನ್ನು ಸ್ವಾರ್ಥಕ್ಕಾಗಿ ಕೊಂದ ಬಗ್ಗೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲ. ಸ್ವಯಂಘೋಷಿತ ತತ್ವಜ್ಞಾನಿಯಂತೆ, ಕ್ರಾಂತಿಕಾರಿಯಂತೆ ಮಾತಾಡುತ್ತಾನೆ. ಅದಕ್ಕೆಂದೇ 'ಬಿಳಿಯ ಹುಲಿ' ಎಂದು ಕರೆದುಕೊಳ್ಳುತ್ತಾನೆ. ಏಳನೆಯ ಪತ್ರದ ಕೊನೆಯಲ್ಲಿ ಹೇಳುತ್ತಾನೆ, ನನ್ನ ತಲೆಯ ಮೇಲೆ ನೇತಾಡುವ ಅಲಂಕಾರ-ತೂಗುದೀಪ ಕಳಚಿ ನೆಲಕ್ಕೆ ಬೀಳಬಹುದು, ಕಾನೂನಿನ ಕೈಗೆ ನಾನು ಸಿಕ್ಕು ಜೈಲು ಸೇರಬಹುದು, ನೇಣುಗಂಬ ಏರಬಹುದು, ಆಗಕೂಡ, ದೆಹಲಿಯಲ್ಲಿರುವಾಗ ನನ್ನ ಮಾಲೀಕನ ಕತ್ತು ಕತ್ತರಿಸಿ ನಾನು ತಪ್ಪು ಮಾಡಿದೆ ಎಂದು ಪಶ್ಚಾತ್ತಾಪ ಪಡುವುದಿಲ್ಲ. ಕಾರಣ, ಸೇವಕ ಆಗದೆ ಇರುವ ಅನುಭವ ಒಂದು ದಿನವಾಗಲಿ, ಒಂದು ಗಂಟೆಯಾಗಲಿ, ಒಂದು ಕ್ಷಣವಾಗಿಲಿ ಇದ್ದರೂ ಅದು ಅಮೂಲ್ಯವಾದುದು ಎಂಬುದು ನನ್ನ ಭಾವನೆ. ಎನ್ನುತ್ತಾನೆ.

ವಿದೇಶಗಳಲ್ಲಿ ಶಿಕ್ಷಣ ಪಡೆದ ಅರವಿಂದ ಅಡಿಗರು, ಭಾರತದ ಬಗ್ಗೆ ಸರಿಯಾದ ಅಧ್ಯಯನ ಮಾಡದೆ, ತೀರ್ಪುಕೊಡುವಂತೆ ಬರೆಯುವುದು ಕಾಲ್ಪನಿಕವಾದರೂ ಬಾಲಿಶವಾಗಿ ತೋರುತ್ತದೆ. ಬೆಂಗಳೂರಿನ ಐಟಿಗಳ ಬಗ್ಗೆ ಬರೆಯುತ್ತಾರೆ, ಅಲ್ಲಿ ನಾರಾಯಣ ಮೂರ್ತಿಯಂತಹ ಉದ್ಯಮಿಗಳ ಅದರ್ಶ ಜೀವನ ಇವರಿಗೆ ಸ್ಫೂರ್ತಿ ನೀಡುವುದಿಲ್ಲ. ಮೈಸೂರನ್ನು ರೂಪಿಸಿದ ಕರ್ನಾಟಕದ ಭಾರತರತ್ನ ವಿಶ್ವೇಶ್ವರಯ್ಯನವರ ಸಾಧನೆ ಇವರ ಕಣ್ಣಿಗೆ ಬೀಳುವುದಿಲ್ಲ. ಸಂಪೂರ್ಣ ವಿದೇಶಿ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬೆಳೆದ ಶ್ರೀಅರವಿಂದ ಘೋಷರು ಬರೋಡಾ ದಿನಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಟೀಕಿಸಿಯೇ ಲೇಖನ ಬರೆದರು. ವೇದೋಪನಿಷತ್ತು ಪುರಾಣಗಳನ್ನು ಮೂಲದಲ್ಲಿ ಓದದೆಯೇ ಟೀಕಿಸುವುದು ಎಂತಹ ಪ್ರಾಮಾಣಿಕತೆ ಎಂದು ಒಬ್ಬ ಹಿರಿಯರು ಪ್ರಶ್ನಿಸಿದಾಗ, ಅವನ್ನು ಟೀಕಿಸಲೆಂದೇ ಅಭ್ಯಾಸಕ್ಕೆ ತೊಡಗಿ, ತಾವೇ ಮಹರ್ಷಿಗಳಾದರು. ವಿವೇಕಾನಂದರು, ದಯಾನಂದ ಸರಸ್ವತಿಯವರು ಮಾಡಿದ ಕೆಲಸ ಸಾಮಾನ್ಯವೇ? ಜಗತ್ತಿಗೆ ಯೋಗ ಕಲಿಸಿದ ಬಿ.ಕೆ.ಎಸ್.ಐಯ್ಯಂಗಾರ್ ಸಾಧನೆ ಲೇಖಕರಿಗೆ ಸ್ಫೂರ್ತಿ ನೀಡುವುದಿಲ್ಲ. ಬೆಂಗಳೂರಲ್ಲಿ ವಾಸಿಸುತ್ತಿರುವ, ಆರ್‍ಟ್ ಆಫ್ ಲಿವಿಂಗ್ ಖ್ಯಾತಿಯ ಶ್ರೀಶ್ರೀ ರವಿಶಂಕರ, ಗಿರಿಜನ ಸೋಲಿಗರ ಬಾಳಿನ ಭಾಸ್ಕರರಾದ ಡಾ| ಸುದರ್ಶನ, ಇಂಜಿನಿಯರಿಂಗ್ ಪದವೀಧರರಾಗಿಯೂ ಅದನ್ನು ಬದಿಗಿಟ್ಟು ಸಂಸ್ಕೃತ ವ್ಯಾಸಂಗದಲ್ಲಿ ತೊಡಗಿದ ಮತ್ತು ಸಾಧನೆಗೈದ ಶತಾವಧಾನಿ ಗಣೇಶ ಹಾಗೂ ವ್ಯಾಸನಕೆರೆ ಪ್ರಭಂಜನಾಚಾರ್, ಎಂ.ಬಿ.ಎ. ವಿದ್ಯಾರ್ಥಿಗಳಿಗೆ ಪಾಠಹೇಳುತ್ತಿದ್ದರೂ ದಾಸಸಾಹಿತ್ಯದ ಹರಿಕಾರರಾಗಿ ಅರಳಿದ ಅರಳುಮಲ್ಲಿಗೆ ಪಾರ್ಥಸಾರಥಿ, ಶಂಕರ-ರಾಮಾನುಜ-ಮಧ್ವರ ಮೇಲೆ ಮೂಡಿಬಂದ ಸಂಸ್ಕೃತ ಚಿತ್ರಗಳಿಗೆ ಸಾಹಿತ್ಯ ಒದಗಿಸಿದ ವಿದ್ಯಾವಾಚಸ್ಪತಿ ಬನ್ನಂಜೆ ಮೊದಲಾದವರ ಜೀವನದಿಂದ ಸ್ಫೂರ್ತಿ ಪಡೆದು ಬರೆಯಲು ಸಾಧ್ಯವಿಲ್ಲವೆ? ರಾಷ್ಟ್ರದ ಮಟ್ಟದಲ್ಲಂತೂ ಬಾಬಾ ಆಮಟೆ, ಅಣ್ಣಾ ಹಜಾರೆ ಅವರಂತಹ ನೂರಾರು ಜನರು ನಮ್ಮೆದುರಿಗೆ ಇದ್ದಾರೆ. ಇಂಥವರನ್ನೆಲ್ಲ ಬಿಟ್ಟು ಬಲರಾಂ ಹಲವಾಯಿಯಂತಹ ಪಾತ್ರ ಅಡಿಗರ ತಲೆಯನ್ನು ಯಾಕೆ ಹೊಕ್ಕನೋ ನನಗಂತೂ ತಿಳಿಯುತ್ತಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X