ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಗ ನಿವಾರಣೆಗೆ ಯೋಗ ಆಸನಗಳೇ ಮದ್ದು

By Staff
|
Google Oneindia Kannada News

Surya Namaskara positionsಗೀತೆಯಲ್ಲಿ ಪರಮಾತ್ಮನು ಯೋಗಾಭ್ಯಾಸದ ಕಡೆಗೆ ಮನವು ಒಲಿಯಬೇಕಾದರೆ ಜನ್ಮಾಂತರದ ಸಂಸ್ಕಾರವಿರಬೇಕು ಎಂದು ಹೇಳುತ್ತಾನೆ. ಮನವು ಶಾಂತವಾಗದೇ ಯಾವ ಕೆಲಸವನ್ನು ಮಾಡಿದರೂ ಅದು ಪೂರ್ಣವಾಗಲಾರದು. ಚಿರಂತನವಾದ ದುಃಖ ಭೋಗದಿಂದ ರೋಗವೇ ವಿನಾ ಯೋಗವು ಲಭಿಸಲಾರದು. ಯೋಗವು ರೋಗವೆಂಬ ಪಿಶಾಚಿಯಿಂದ ಬಿಡುಗಡೆ ಮಾಡುವುದು. ಮನವು ಯೋಗದಲ್ಲಿ ನೆಲಸಿದರೆ ಭೋಗವೂ ಯೋಗವಾಗುವುದು.

ಅಂಕಣಕಾರ : ಡಾ. 'ಜೀವಿ' ಕುಲಕರ್ಣಿ, ಮುಂಬಯಿ

* ಹಠಯೋಗ ಮತ್ತು ರಾಜಯೋಗ ಬೇರೆಯಲ್ಲ. ಆದ್ದರಿಂದ ಸ್ವಾತ್ಮಾರಾಮರು ಹೇಳುತ್ತಾರೆ:
ಭ್ರಾಂತ್ಯಾ ಬಹುಮತಧ್ವಾಂತೇ ರಾಜಯೋಗಮಜಾನತಾಂ |
ಹಠಪ್ರದೀಪಿಕಾಂ ಧತ್ತೇ ಸ್ವಾತ್ಮಾರಾಮಃ ಕೃಪಾಕರಃ || ''

* ಯೋಗಾಂಗಗಳಲ್ಲಿ ಆಸನಗಳೇ ಮೊದಲು ಎಂದು ಕೆಲವು ಉಪನಿಷತ್ತುಗಳು ಹೇಳಿವೆ ಆದ್ದರಿಂದ ಸ್ವಾತ್ಮಾರಾಮರು ಷಡಂಗಗಳ ಬಗ್ಗೆ ಹೇಳುತ್ತಾರೆ. ಆದ್ದರಿಂದ ಇಲ್ಲಿ ಆಸನಗಳೇ ಮೊದಲು ಬರುತ್ತವೆ:
ಆಸನಃ ಪ್ರಾಣ ಸಂರೋಧಃ ಪ್ರತ್ಯಾಹಾರಶ್ಚ ಧಾರಣಾ |
ಧ್ಯಾನಂ ಸಮಾಧಿರೇತಾನಿ ಷಡಂಗಾನಿ ಪ್ರಕೀರ್ತಿತಃ ||

* ರೋಗಾದಿಗಳಿಂದ ದೇಹವು ಬಲಹೀನವಾಗಿ ಕುಗ್ಗಿರುವಾಗ ಯಮ-ನಿಯಮಗಳ ಅಂಗ ಉಪಾಂಗಗಳನ್ನು ಅಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರೋಗ ನಿವಾರಣೆಗೆ ಆಸನಗಳನ್ನೇ ಮೊದಲು ಮಾಡಲು ಹೇಳುತ್ತಾರೆ. ಆಸನಗಳನ್ನು ಅಭ್ಯಾಸ ಮಾಡುವ ಮೊದಲು ಸೂರ್ಯನಮಸ್ಕಾರ ಹಾಕಲು ಪಟ್ಟಾಭಿಯವರು ಹೇಳುತ್ತಾರೆ.

* ಸೂರ್ಯನಮಸ್ಕಾರವನ್ನು ವಿನ್ಯಾಸ ಪದ್ಧತಿಯಿಂದ ಹಾಕಲು ಶಿಫಾರಸುಮಾಡುತ್ತಾರೆ. ಇದರಲ್ಲಿ ಎರಡು ಬಗೆಗಳು ಇವೆ. ಮೊದಲನೆಯ ಪ್ರಕಾರದಲ್ಲಿ ಒಂಭತ್ತು ಅಂಗವಿನ್ಯಾಸಗಳಿದ್ದರೆ ಎರಡನೆಯದರಲ್ಲಿ ಹದಿನೇಳು ವಿನ್ಯಾಸಗಳು ಇವೆ. ಶರೀರ ಮಾದ್ಯಂ ಖಲು ಧರ್ಮ ಸಾಧನಂ'' ಎನ್ನಲಾಗುತ್ತದೆ. ಪೂರ್ವದಲ್ಲಿ ಯೋಗಶಾಸ್ತ್ರದಲ್ಲಿ ಹೇಳಿದ ಸೂರ್ಯನಮಸ್ಕಾರವು ಭರತಖಂಡದ ಮೂಲೆಮೂಲೆಯಲ್ಲಿಯೋ ಸಕಲ ಮಾನವವರ್ಗದವರೂ ನಿತ್ಯಕರ್ಮದಲ್ಲಿ ಇದೊಂದು ಸತ್ಕರ್ಮವೆಂದು ಭಾವಿಸಿ ಆಚರಣೆಗೆ ತರುತ್ತಲಿದ್ದರು' ಎನ್ನುತ್ತಾರೆ. (ಆದರೆ ಅಧುನಿಕ ಯುಗದಲ್ಲಿ ಸೂರ್ಯನಮಸ್ಕಾರ ಮಾಡುವ ಜನ ಬೆರಳೆಣಿಕೆಯಲ್ಲಿ ಸಿಗುವುದೂ ದುರ್ಲಭವಾಗಿದೆ.) ಸೂರ್ಯದೇವನ ಅನುಗ್ರಹವನ್ನು ಸಂಪಾದಿಸಬೇಕಾದರೆ ಸೂರ್ಯನಮಸ್ಕಾರವನ್ನು ವಿಧಿವತ್ತಗಿ ಆಚರಿಸಬೇಕು. ಸೂರ್ಯನಿಗೆ ನಮಸ್ಕಾರವೇ ಪ್ರಧಾನ ಪೂಜೆಯಾಗಿದೆ. ನಮಸ್ಕಾರ ಪ್ರಿಯಃಸೂರ್ಯಃ'' ಎಂಬ ಶಾಸ್ತ್ರವಾಕ್ಯ ಅದಕ್ಕೆ ಆಧಾರ. ಸೂರ್ಯದೇವನನ್ನು ನಮಸ್ಕರಿಸಿ ಈ ರೀತಿ ಪ್ರಾರ್ಥಿಸಬೇಕು, ಭದ್ರಂ ಕರ್ಣೇಭಿಶೃಣುಯಾಮ ದೇವಾಃ | ಭದ್ರಂ ಪಶ್ಶೇಮಾಕ್ಷಿಭಿರ್ಯಜತ್ರಾಃ ||'' (ಹೇ ಸೂರ್ಯದೇವ, ನನ್ನ ಕಿವಿಗಳಿಗೆ ಮಂಗಳಕರವಾದ ಶಬ್ದಗಳನ್ನು ಕೇಳುವ ಸಾಮರ್ಥ್ಯವನ್ನು ಅನುಗ್ರಹಿಸು. ನನ್ನ ಕಣ್ಣುಗಳಿಗೆ ಸುಂದರವಾದ ಪರಮಾತ್ಮನ ಶಕ್ತಿ ರೂಪವನ್ನು ನೋಡಿ ಆನಂದವನ್ನು ಅನುಭವಿಸುವಂತೆ ದಿವ್ಯಶಕ್ತಿಯನ್ನು ಅನುಗ್ರಹಿಸು) ಎಂದು ಹೇಳುತ್ತದೆ ಈ ಮಂತ್ರ.

* ಸೂರ್ಯ ನಮಸ್ಕಾರವನ್ನು ಮಾಡುವ ಕ್ರಮವನ್ನು ಅನೇಕರು ಅನೇಕ ರೀತಿಯಲ್ಲಿ ಹೇಳಿರುತ್ತಾರೆ. ಪಟ್ಟಾಭಿಯವರ ಪ್ರಕಾರ, ಯೋಗಶಾಸ್ತ್ರವನ್ನು ವಿಚಾರ ಮಾಡಿದರೆ ಸೂರ್ಯನಮಸ್ಕಾರದ ಪದ್ಧತಿಯು ವಿನ್ಯಾಸ, ರೇಚಕ, ಪೂರಕ, ಇವುಗಳ ಗತಿ, ಧ್ಯಾನ ಇವುಗಳನ್ನು ಮುಖ್ಯವಾಗಿ ಅನುಸರಿಸಿರುತ್ತದೆ. ಈ ಕ್ರಮವನ್ನು ಅನುಸರಿಸಿ ಮಾಡುವ ನಮಸ್ಕಾರದ ಪದ್ಧತಿಯನ್ನು ಯೋಗಶಾಸ್ತ್ರವು ಹೇಳುವುದು. ಸೂರ್ಯ ನಮಸ್ಕಾರದಲ್ಲಿ ವಿನ್ಯಾಸಕ್ರಮ, ರೇಚಕ-ಪೂರಕಕ್ರಮ, ಧ್ಯಾನಕ್ರಮ, ತ್ರಾಟಕಕ್ರಮ(ನೋಟ) ಬಂಧಾದಿಗಳು, ಇವೆಲ್ಲವೂ ಸೇರಿರುವದರಿಂದ, ಇದನ್ನೇ ಯೋಗಿಗಳು ಅನುಭವಿಸಿ ಹೇಳುವುದರಿಂದ, ಇದೇ ಸೂರ್ಯನಮಸ್ಕಾರ ಮಾಡುವ ಕ್ರಮವೆಂದು ತಿಳಿಯಬೇಕು. ನಿಯಮಗಳಿಲ್ಲದೆ ಮಾಡುವ ಸೂರ್ಯನಮಸ್ಕಾರವು ಶಾರೀರಿಕ ವ್ಯಾಯಾಮವಾಗುವುದೇ ವಿನಾ ಸೂರ್ಯನಮಸ್ಕಾರವಾಗಲಾರದು.'' ಎನ್ನುತ್ತಾರೆ. ಸರಿಯಾಗಿ ಸೂರ್ಯನಮಸ್ಕಾರ ಮಾಡಲು ಕಲಿಯಲು ಸದ್ಗುರುವನ್ನು ಆಶ್ರಯಿಸಬೇಕೆನ್ನುತ್ತಾರೆ. ಪೂರ್ವಿಕರು ಮಂತ್ರಗಳ ಅಧ್ಯಯನ ಮಾಡಿ ಅದರ ಸಾರವನ್ನು ತಿಳಿದು ಆಚರಣೆಯಲ್ಲಿ ತರುತ್ತಿದ್ದರು. ಶಾಸ್ತ್ರಮಾರ್ಗವನ್ನು ಅನುಸರಿಸಿ ಆಚರಿಸಿದ ಸೂರ್ಯನಮಸ್ಕಾರದಿಂದ ಮಹತ್ತರ ವ್ಯಾಧಿಗಳಾದ ಕುಷ್ಠರೋಗ, ಮೂರ್ಛಾರೋಗ, ಪಾಂಡುರೋಗ ಮೊದಲಾದ ವ್ಯಾಧಿಗಳೂ ನಾಶಹೊಂದುತ್ತವೆ. ಈ ವಿಷಯದಲ್ಲಿ ಯಾವುದೇ ಅಪನಂಬಿಕೆ ಬೇಡ ಎನ್ನುತ್ತಾರೆ. ಅನೇಕ ವೈದ್ಯರ ಶುಶ್ರೂಷೆಯಿಂದ ಗುಣವಾಗದ ಕುಷ್ಠಾದಿ ರೋಗಗಳು ಸೂರ್ಯನಮಸ್ಕಾರ, ಯೋಗಾಸನ, ಪ್ರಾಣಾಯಮದಿಂದ ಗುಣಹೊಂದಿದ್ದನ್ನು ತಮ್ಮ ಅನುಭವದಿಂದ ಪ್ರಮಾಣಿಸಿದ್ದಾರೆ.

* ಎರಡು ಬಗೆಯ ಸೂರ್ಯ ನಮಸ್ಕಾರಗಳ ಉಲ್ಲೇಖ ಮಾಡುತ್ತಾರೆ. ಒಂದರಲ್ಲಿ 9 ವಿನ್ಯಾಸಗಳಿದ್ದರೆ ಇನ್ನೊಂದರಲ್ಲಿ 17 ವಿನ್ಯಾಸಗಳಿವೆ. ಅವುಗಳ ಚಿತ್ರಗಳನ್ನೂ ಕೊಡುತ್ತಾರೆ. ಆದರೆ ಇವನ್ನು ಓದಿ, ಚಿತ್ರನೋಡಿ, ಅನುಸರಿಸಲು, ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಗುರುಗಳಲ್ಲಿಯೇ ಕಲಿಯಬೇಕಾಗುತ್ತದೆಂಬುದು ಅವರ ಪುಸ್ತಕ ಓದಿದಾಗ ಮನದಟ್ಟಾಗುತ್ತದೆ. 41 ಆಸನಗಳ ಚಿತ್ರಗಳನ್ನೂ ಕೊಟ್ಟಿದ್ದಾರೆ. ಅವುಗಳನ್ನು ಮಾಡುವ ಕ್ರಮವನ್ನು ತಿಳಿಸಿದ್ದಾರೆ. ಅವುಗಳು ಗುಣಪಡಿಸುವ ಕಾಯಿಲೆಗಳ ಬಗ್ಗೆ ಬರೆದಿದ್ದಾರೆ. ಯೋಗಾಭ್ಯಾಸ ಮಾಡಿದಮೇಲೆ ಈ ಪುಸ್ತಕ ಹೆಚ್ಚು ಉಪಯುಕ್ತವಾಗುತ್ತದೆ, ಮಾರ್ಗದರ್ಶಿಯ ಕೆಲಸ ಮಾಡುತ್ತದೆ. ಕಾರಣ ಕಲಿಸಿದ ಎಲ್ಲ ಮಾತು ನೆನಪಿನಲ್ಲಿಡಲು ಸಾಧ್ಯವಾಗುವುದಿಲ್ಲ. ಅದನ್ನು ಈ ಪುಸ್ತಕ ಮತ್ತೆ ಹೇಳುತ್ತದೆ.

* ಸೂರ್ಯನಮಸ್ಕಾರ ಮತ್ತು ಆಸನಗಳನ್ನು ಅಭ್ಯಾಸ ಮಾಡಿದ ಮೇಲೆಯೇ ಪ್ರಾಣಾಯಾಮ ಮಾಡಬೇಕು. ಹಠಯೋಗ ಪ್ರದೀಪಿಕಾ'' ಗ್ರಂಥಕರ್ತ ಸ್ವಾತ್ಮಾರಮರು ಎಂಟುವಿಧದ ಪ್ರಾಣಾಯಮ ಉಲ್ಲೇಖಿಸಿದ್ದಾರೆ.
ಸೂರ್ಯಭೇದನ ಮುಜ್ಜಾಯಿ ಸಿತ್ಕಾರೀ ಸೀತಳೀ ತಥಾ |
ಭಸ್ತ್ರಿಕಾ ಭ್ರಾಮರೀ ಮೂರ್ಛಾ ಪ್ಲಾವನೀತ್ಯಷ್ಟ ಕುಂಭಕಾಃ || ''
ಪ್ರಾಣಯಾಮದಲ್ಲಿ ಭೇದಪ್ರಭೇದಗಳಿವೆ. ಕೆಲವು ಪ್ರಣಾಯಮಗಳು ರೋಗಚಿಕಿತ್ಸಾ ವಿಧಾನಕ್ಕೂ, ಕೆಲವು ಪ್ರಾಣಾಯಮಗಳು ನಾಡಿ ಶುದ್ಧಿಗಾಗಿಯೂ, ಕೆಲವು ಮನೋನಿರೋಧಕ್ಕೂ ಉಪಯುಕ್ತವಾಗಿವೆ. ಪಟ್ಟಾಭಿಯವರು ಪ್ರಾಣಾಯಾಮದ ಬಗ್ಗೆ ಅಧಿಕಾರವಾಣಿಯಿಂದ ಕೆಲವು ಮಹತ್ವದ ಮಾತುಗಳನ್ನು ಹೇಳುತ್ತಾರೆ. ಅವನ್ನು ಈ ರೀತಿ ಸಂಗ್ರಹಿಸಬಹುದು:

* ಎಲ್ಲವೂ ಪರಮಾತ್ಮನ ಇಚ್ಛೆಯಂತೆಯೇ ನಡೆಯುವುದೇ ವಿನಾ ಮಾನವನ ಇಚ್ಛೆಯಂತೆ ಲೋಕದಲ್ಲಿ ಯಾವುದೊಂದೂ ನಡೆಯಲಾರದು. ಆದುದರಿಂದ ನಮ್ಮ ಧರ್ಮಕರ್ಮಾದಿಗಳನ್ನು ನಿಃಸ್ಪೃಹತೆಯಿಂದ ಮಾಡುವುದೊಂದೇ ನಮ್ಮ ಕೆಲಸವೇ ವಿನಾ ಯಾವ ಫಲಾಫಲಗಳನ್ನು ಅಪೇಕ್ಷಿಸಬಾರದು. ಗೀತೆಯಲ್ಲಿ ಪರಮಾತ್ಮನು ಯೋಗಾಭ್ಯಾಸದ ಕಡೆಗೆ ಮನವು ಒಲಿಯಬೇಕಾದರೆ ಜನ್ಮಾಂತರದ ಸಂಸ್ಕಾರವಿರಬೇಕು ಎಂದು ಹೇಳುತ್ತಾನೆ. ಮನವು ಶಾಂತವಾಗದೇ ಯಾವ ಕೆಲಸವನ್ನು ಮಾಡಿದರೂ ಅದು ಪೂರ್ಣವಾಗಲಾರದು. ಚಿರಂತನವಾದ ದುಃಖ ಭೋಗದಿಂದ ರೋಗವೇ ವಿನಾ ಯೋಗವು ಲಭಿಸಲಾರದು. ಯೋಗವು ರೋಗವೆಂಬ ಪಿಶಾಚಿಯಿಂದ ಬಿಡುಗಡೆ ಮಾಡುವುದು. ಮನವು ಯೋಗದಲ್ಲಿ ನೆಲಸಿದರೆ ಭೋಗವೂ ಯೋಗವಾಗುವುದು. ಮನವು ಒಂದೆಡೆ ನಿಲ್ಲುವಂತೆ ಅಭ್ಯಾಸ ಮಾಡುವುದು ಅತಿ ಮುಖ್ಯ. ನಮ್ಮ ಶರೀರದ ಒಳಹೊರ ಭಾಗಗಳಲ್ಲಿ ಸಂಚರಿಸುವ ವಾಯುವನ್ನು ನಿರೋಧಮಾಡಿದರೆ ಮನವು ನಿರೋಧವಾಗುವುದು. ವಾಯುವು ಚಂಚಲವಾದರೆ ಮನವು ಚಂಚಲವಾಗುವುದು. ಪ್ರಾಣಾಯಾಮದಿಂದ ವಾಯುವನ್ನು ನಿರೋಧ ಮಾಡಿದರೆ ಮನವು ನಿರೋಧವಾಗುವುದು. ಅಭ್ಯಾಸ ಕಾಲದಲ್ಲಿ ಗುರುಗಳು ಹೇಳಿದಂತೆ ಕೇಳಿ ಕಲಿಯಬೇಕು. ಯಾರೂ ದುಡುಕಿ ಪ್ರಣಾಯಮದ ಅಭ್ಯಾಸ ಮಾಡಬಾರದು.

ಹುಲಿ ಸಿಂಹ ಮದಿಸಿದ ಆನೆ ಮುಂತಾದ ಮೃಗಗಳನ್ನು ಹಿಡಿದು ಆಟವಾಡಿಸುವವ ಮೆಲ್ಲಮೆಲ್ಲನೆ ಅವುಗಳನ್ನು ಪಳಗಿಸುವಂತೆ ವಾಯುವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅದು ಮಾರಕವಾಗುತ್ತದೆ. ರೋಗ, ಋಣ, ದಾರಿದ್ರ್ಯದಿಂದ ಬಿಡುಗಡೆ ಪಡೆಯಲು ಶಕ್ತಿಶಾಲಿಯಾಗಬೇಕು. ನಾಯಮಾತ್ಮಾ ಬಲಹೀನೇನ ಲಭ್ಯಃ ನ ಮೇಧಯಾ ನ ಬಹುನಾ ಶ್ರುತೇನ' ಎಂದು ಶ್ರುತಿ ಸಾರುತ್ತದೆ. ಇಲ್ಲಿ ಶಕ್ತಿ ಎಂದರೆ ದೈಹಿಕ ಹಾಗೂ ಮಾನಸಿಕ ಬಲ. ದೇಹ ರೋಗಾಧೀನವಾದರೆ ದುರ್ಬಲಗೊಳ್ಳುತ್ತದೆ. ಆಸನಾದಿಗಳ ತರುವಾಯ ಪ್ರಾಣಾಯಮ ಮುಖ್ಯವಾಗಿದೆ, ಅದರಲ್ಲಿ ಕುಂಭಕ ಸಹಿತ ಪ್ರಾಣಾಯಮ ಬಹಳ ಮಹತ್ವದ್ದು. ''

(ಪಟ್ಟಾಭಿಯವರಂತಹ ಯೋಗಾಚಾರ್ಯರನ್ನು ಓದಿದಾಗ ಪ್ರಾಣಾಯಾಮ ಮಾಡಲು ಭಯವಾಗುತ್ತದೆ. ಈ ಸಂದರ್ಭದಲ್ಲಿ ಟಿ.ವಿ.ಮೂಲಕ ಯೋಗವನ್ನು ಮನೆಮನೆಗೂ ತಲುಪಿಸಿದ ಸ್ವಾಮಿ ರಾಮದೇವರ ನೆನಪಾಗುತ್ತದೆ. ಇಂದು ಬಾಬಾ ರಾಮದೇವ ಅವರು ಮೂರು ವರ್ಷದ ಮಕ್ಕಳಿಂದ ಹಿಡಿದು ನೂರು ವರ್ಷದ ವೃದ್ಧರವರೆಗೂ ಪ್ರಾಣಾಯಾಮ ಮಾಡಲು ಹೇಳುತ್ತಾರೆ. ಅದರಿಂದ ರೋಗಗಳು ತೊಲಗುತ್ತವೆ ಅನ್ನುತ್ತಾರೆ. ರಾಮದೇವರ ಪ್ರಾಣಾಯಮದಲ್ಲಿ ಕಪಾಲಭಾತಿ ಎಂಬ ಶುದ್ಧಿಕ್ರಿಯೆ ಪ್ರಾಣಾಯಾಮದ ಅಂತಸ್ತು ಪಡೆದಿದೆ. ಅವರು ಕುಂಭಕವನ್ನು ಬಿಟ್ಟೇ ಪ್ರಾಣಾಯಮ ಕಲಿಸುತ್ತಾರೆ. ಕುಂಭಕದಿಂದ ಲಾಭಗಳು ಬಹಳ, ಹಾನಿಗಳು ಅಷ್ಟೇ ಹೆಚ್ಚು. ಸಾಮಾನ್ಯರಿಗೆ ಯೋಗಿಗಳಾಗುವ ಮನಸಿಲ್ಲ, ಸಾಕ್ಷಾತ್ಕಾರದ ಕನಸಿಲ್ಲ, ರೋಗವಾಸಿಯಾದರೆ ಸಾಕು. ಕುಂಭಕರಹಿತ ಮೂರು ಪ್ರಣಾಯಾಮಗಳಿಗೆ ಸ್ವಾಮಿ ರಾಮದೇವ ಮಹತ್ವ ಕೊಡುತ್ತಾರೆ. ಕಪಾಲಭಾತಿ, ಅನುಲೋಮ-ವಿಲೋಮ ಹಾಗೂ ಭ್ರಾಮರಿ.)

ಪಟ್ಟಾಬಿ, ಅಯ್ಯಂಗಾರ, ದೇಶಿಕಾಚಾರರಂಥ ಯೋಗಾಚಾರ್ಯರು ಒಂದು ಧೀಮಂತ ಯೋಗಾಭ್ಯಾಸ ಪರಂಪರೆಯನ್ನು ಪ್ರತಿನಿಧಿಸುತ್ತಾರೆ. ಅಂಥವರ ಮಾರ್ಗದರ್ಶನ ಇಂದಿಗೂ ಲಭ್ಯವೆನ್ನುವುದು ನಮ್ಮೆಲ್ಲರ ಭಾಗ್ಯ.

ಪೂರಕ ಓದಿಗೆ

ಪರಮಾತ್ಮನ ಸಾಕ್ಷಾತ್ಕಾರಕ್ಕೆ ಅಷ್ಟಾಂಗ ಯೋಗ
ಯೋಗಾಸನ ವಿಶಾರದ ಕೆ. ಪಟ್ಟಾಭಿ ಜೋಯಿಸ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X