ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೊ.ಸೇತುರಾಮ ಮಳಗಿ ಅವರಿಗೆ 99 ವರ್ಷ

By Staff
|
Google Oneindia Kannada News

ಹುಬ್ಬಳ್ಳಿಯ 'ತೊರವಿ ಶಾಲೆ' ಎಂದು ಪ್ರಸಿದ್ಧಿ ಪಡೆದ ನ್ಯೂ ಇಂಗಿಷ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ(1938-47), ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ(1947-61), ಬೆಂಗಳೂರಿನ ಸೆಂಟ್ರಲ್ ಕಾಲೇಜು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರೀಡರ್‌ರಾಗಿ(1961-69), ನಿವೃತ್ತಿಯ ನಂತರ ಸಾಗರದ ಲಾಲ್ ಬಹಾದೂರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ(1969-71) ನಂತರ ಯು.ಜಿ.ಸಿ ಪ್ರಾಧ್ಯಾಪಕರಾಗಿ(1975-76) ದುಡಿದ ಪ್ರೋ. ಸೇತುರಾಮ ಮಳಗಿಯವರು ಈಗ 99ನೆಯ ವರ್ಷಕ್ಕೆ ಪಾದಾರ್ಪಣ ಮಾಡುತ್ತಿದ್ದಾರೆ. (ಜ. 8ಜುಲೈ, 1910). ಅವರೀಗ ಮಗನ ಮನೆಯಲ್ಲಿ ಬೆಂಗಳೂರಲ್ಲಿ (ರಾಜಾಜಿನಗರದಲ್ಲಿ) ವಾಸಿಸುತ್ತಿದ್ದಾರೆ. ಅವರನ್ನು ಅಭಿನಂದಿಸಿ ಫೋನಿನಲ್ಲಿ ಮಾತಾಡಿದೆ. ಅವರು ಸ್ಪಷವಾಗಿ ಮಾತಾಡಿದರು, ನಾವು ಮಾತಾಡಿದ್ದು ಅವರಿಗೆ ಚೆನ್ನಾಗಿ ಕೇಳಿಸುತ್ತಿತ್ತು. 99 ವರ್ಷವಾದರೂ ಓದುತ್ತಾರೆ, ಬರೆಯುತ್ತಾರೆ, ಸ್ಮರಣಶಕ್ತಿ ಚೆನ್ನಾಗಿದೆ. ''ಜೀವಿ ! ನನ್ನ ನೆನಪಾಯಿತೇ? ಸಂತೋಷವಾಯ್ತು. ನಿನ್ನ ಪುಸ್ತಕ “ನಾ ಕಂಡ ಬೇಂದ್ರೆ" ಮತ್ತೊಮ್ಮೆ ಓದಿದೆ. ತುಂಬಾ ಚೆನ್ನಾಗಿ ಬರೆದಿದ್ದೀಯಾ'' ಅಂದರು.

ಅಂಕಣಕಾರ : ಡಾ| 'ಜೀವಿ' ಕುಲಕರ್ಣಿ, ಮುಂಬೈ

ಪ್ರೊ.ಮಳಗಿಯವರು ವಿಜಾಪುರ ಜಿಲ್ಲೆಯ ಆಲೂರವರು. ಆಲೂರ ವೆಂಕಟರಾಯರ ಮನೆಯಲ್ಲೇ ಕೆಲಕಾಲ ವಾಸಿಸಿ ವಿದ್ಯಾಭ್ಯಾಸ ಮುಂದುವರಿಸಿದ್ದರು. ಬೇಂದ್ರೆಯವರ ಶಿಷ್ಯರು ಹಾಗೂ 'ಗೆಳೆಯರ ಗುಂಪಿ"ನ ಸದಸ್ಯರು. ಕನ್ನಡ-ಸಂಸ್ಕೃತ ವಿಷಯದಲ್ಲಿ ಎಂ.ಎ.ಪದವಿ ಗಳಿಸಿ, ನಂತರ ಬಿ.ಟಿ. ಡಿಗ್ರಿ ಪಡೆದವರು. ಇವರಿಗೆ ಸಾಹಿತ್ಯ ವಿಮರ್ಶೆ, ಛಂದಸ್ಸು, ವ್ಯಾಕರಣ, ಭಾಷಾಶಾಸ್ತ್ರದಲ್ಲಿ ವಿಶೇಷ ಪರಿಣತಿ. ಅವರ ಶಿಷ್ಯರ ಬಳಗ ಅಪಾರ. ಧಾರವಾಡದಲ್ಲಿ ನಾನು ಎಂಟು ವರ್ಷ ವಿದ್ಯಾರ್ಥಿಯಾಗಿದ್ದೆ. ಆ ದಿನಗಳನ್ನು ನೆನೆಯುವಾಗ ಸ್ಮರಣೆಗೆ ಬರುವ ಹಲವಾರು ಹಿರಿಯರಲ್ಲಿ ಪ್ರೊ. ಮಳಗಿಯವರೂ ಒಬ್ಬರಾಗಿದ್ದಾರೆ.

ನಾನು ಜನತಾ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಗೋಕಾಕರ ನಿಕಟ ಸಂಪರ್ಕ ಬಂದುದರಿಂದ, ಮಿತ್ರ ಆರ್.ಜಿ.ಕುಲಕರ್ಣಿಯವರ ರೂಂ-ಮೇಟ್ ಆಗಿದ್ದರಿಂದ, ಕರ್ನಾಟಕ ಕಾಲೇಜಿನ ಸಂಪರ್ಕ ಬಂತು. ಮಿತ್ರರೊಡನೆ ನಿತ್ಯ ಕರ್ನಾಟಕ ಕಾಲೇಜಿಗೂ ಹೋಗುತ್ತಿದ್ದೆ. ಅಲ್ಲಿಯ ನಡೆಯುವ ತರಗತಿಯಲ್ಲಿ ಮಿತ್ರರ ಜೊತೆಗೆ ಕುಳಿತುಕೊಳ್ಳುತ್ತಿದ್ದೆ. ಅಲ್ಲಿಯ ಹೆಚ್ಚಿನ ಪ್ರಾಧ್ಯಾಪಕರ ನಿಕಟ ಸಂಪರ್ಕ ನನಗೆ ಬಂತು. ಗೋಕಾಕರ ಮನೆಯ ಹುಡುಗನಂತ್ತಿದ್ದೆ. ಪ್ರೊ.ಇನಾಂದಾರರ ಸಂಪರ್ಕವೂ ಆತ್ಮೀಯವಾಗಿತ್ತು. ಪ್ರೊ.ಮಾಳವಾಡರ ಮನೆಯಲ್ಲಿ ವಾರಕ್ಕೊಮ್ಮೆ ನಡೆಯುತ್ತಿದ್ದ ಶ್ರೀಅರವಿಂದ ಮಂಡಲದ ಸಭೆಗಳಿಗೂ ನಾನು ಆಮಂತ್ರಿತನಾಗಿರುತ್ತಿದ್ದೆ. ಪ್ರೊ. ಮಳಗಿಯವರೂ ನಮಗೆ ಬಹಳ ಹತ್ತಿರದವರಾಗಿದ್ದರು. ಅವರು ಮೊದಲು ಪುಣೇಕರ್ ಮನೆಯಲ್ಲಿ ಬಾಡಿಗೆ ಇದ್ದರು, ನಂತರ ಕರ್ನಾಟಕ ಕಾಲೇಜಿನ ಸ್ಟಾಫ್ ಕ್ವಾರ್ಟರ್ಸ್‌ನಲ್ಲಿ ಇರತೊಡಗಿದರು. ಅವರ ಮಕ್ಕಳಾದ ರಘುನಾಥ, ಮಧುಸೂದನರು ನಮಗಿಂತ ಕಿರಿಯರು. ಈಗ ಇಬ್ಬರೂ ಎಂಜಿನಿಯರರಾಗಿ ನಿವೃತ್ತರಾಗಿದ್ದಾರೆ, ಅದು ಬೇರೆ ಮಾತು.

ಬೇಂದ್ರೆಯವರ ಮೇಲಿನ ಪ್ರೀತಿ ನಮ್ಮನ್ನು ಪ್ರೊ. ಮಳಗಿಯವರ ಹತ್ತಿರ ಎಳೆಯಲು ಪ್ರಮುಖ ಕಾರಣವಾಗಿತ್ತು. ಕಾಲೇಜು ಜೀವನದ ಕೆಲವು ನೆನಪುಗಳನ್ನಿಲ್ಲಿ ದಾಖಲಿಸುತ್ತಿದ್ದೇನೆ. ಆರ್.ಜಿ.ಕುಲಕರ್ಣಿ ಕರ್ನಾಟ ಕಾಲೇಜಿನ ಅತ್ಯಂತ ಮೇಧಾವಿ ವಿದ್ಯಾರ್ಥಿ ಎಂಬ ಹೆಮ್ಮೆ ನಮಗೆ. ಅವರ ಜೊತೆಗೇ ನಾವು ವಾಸಿಸುತ್ತಿದ್ದೆವು. ಇದರಿಂದ ಅವರ ಬಗ್ಗೆ ಹೆಚ್ಚಿನ ಅಭಿಮಾನ ನಮಗೆ. ಬಿ.ಎ.ತರಗತಿಯಲ್ಲಿದ್ದಾಗ 'ಯಶೋಧರಾ" ಎಂಬ ಮಾಸ್ತಿಯವರ ನಾಟಕ 'ರ್ಯಾಪಿಡ್-ರೀಡರ್" ಆಗಿತ್ತು. ಪ್ರೊ.ಮಳಗಿಯವರು ಅದರ ಬಗ್ಗೆ ಒಂದು ಪ್ರಬಂಧ ಬರೆದು ತರಲು ವಿದ್ಯಾರ್ಥಿಗಳಿಗೆ ಹೇಳಿದರು. ಎಲ್ಲರೂ ನಾಲ್ಕೈದು ಪುಟ ಬರೆದಿದ್ದರು. ಆರ್.ಜಿ.ಯವರು 20 ಪುಟಗಳ ಪ್ರೌಢಪ್ರಬಂಧವನ್ನೇ ಬರೆದಿದ್ದರು. ಅದನ್ನು ಕ್ಲಾಸಿನಲ್ಲಿ ಎಲ್ಲ ವಿದ್ಯಾರ್ಥಿಗಳ ಮುಂದೆ ಪ್ರೊ.ಮಳಗಿ ಓದಿ ತೋರಿಸಿದ್ದರು. ಅಷ್ಟೇ ಅಲ್ಲ, ಅವರು ಬೆಂಗಳೂರಿಗೆ ಹೋದಾಗ ಅದನ್ನು ಮಾಸ್ತಿಯವರಿಗೆ ತೋರಿಸಿದರು. ಮಾಸ್ತಿಯವರು ಅದನ್ನು ಮೆಚ್ಚಿದರು, ತಮ್ಮ ಬಳಿಯಲ್ಲೇ ಇಟ್ಟುಕೊಂಡರು. ತಾವು ಅದನ್ನು ಪ್ರಕಟಿಸುವುದಾಗಿ ಹೇಳಿದರು. 'ಜೀವನ" ಪತ್ರಿಕೆಯಲ್ಲಿ ಪ್ರಕಟಿಸುವಿರಾ? ಎಂದು ಕೇಳಿದ್ದಕ್ಕೆ ಮಾಸ್ತಿಯವರು ನೀಡಿದ ಉತ್ತರ ಕೇಳಿ ಮಳಗಿಯವರು ನಿಬ್ಬೆರಗಾದರು. “ನನ್ನ ನಾಟಕದ ಎರಡನೆಯ ಮುದ್ರಣದಲ್ಲಿ ಇದನ್ನು ಮುನ್ನುಡಿ ಎಂದು ಬಳಸಬೇಕೆಂದಿದ್ದೆ. ಇದನ್ನು ಬರೆದವ ಇನ್ನೂ ವಿದ್ಯಾರ್ಥಿ ಎಂದು ನೀವು ಹೇಳಿದ್ದರಿಂದ ಇದನ್ನು ಹಿನ್ನುಡಿಯಾಗಿ ಪ್ರಕಟಿಸುವೆ." ಎಂದಿದ್ದರಂತೆ ಮಾಸ್ತಿ.

ಇನ್ನೊಂದು ಘಟನೆ ನೆನಪಾಗುತ್ತದೆ. ಆರ್.ಜಿ.ಯವರು ಆರುತಿಂಗಳ ಪರೀಕ್ಷೆಯಲ್ಲಿ, ಆಗ ತಾನೇ ಪ್ರಸಿದ್ಧಿ ಪಡೆಯುತ್ತಿದ್ದ 'ನವ್ಯ ಕಾವ್ಯ"ದ ಬಗ್ಗೆ ಕೇಳಿದ ಒಂದು ಪ್ರಶ್ನೆಗೆ ಆರ್‌ಜಿ ದೀರ್ಘವಾದ ಉತ್ತರ ಬರೆದಿದ್ದರು. ಆ ಪೇಪರ್‌ಗೆ ಅತ್ಯಧಿಕ ಗುಣ ನೀಡುವುದಲ್ಲದೆ ಆ ಪ್ರಬಂಧವನ್ನು ಕ್ಲಾಸಿನಲ್ಲಿ ಎಲ್ಲ ವಿದ್ಯಾರ್ಥಿಗಳ ಮುಂದೆ ಪ್ರೊ.ಮಳಗಿ ಓದಿ ತೋರಿಸಿದ್ದರು. ಗುರುಗಳು ವಿದ್ಯಾರ್ಥಿಗಳಿಗೆ ಯಾವ ರೀತಿ ಪ್ರೋತ್ಸಾಹಿಸಬೇಕೆಂಬುದನ್ನು ಪ್ರೊ.ಮಳಗಿಯವರಿಂದ ಕಲಿಯಬೇಕು. ಆರ್.ಜಿ.ಯವರ ಉತ್ತರ ಪತ್ರಿಕೆಯನ್ನು ಪಡೆದು ಧಾರವಾಡದ ಪ್ರಸಿದ್ಧ ಸಾಹಿತಿಗಳಾದ ಬೆಟಗೇರಿ ಕೃಷ್ಣಶರ್ಮರಿಗೆ ಒಯ್ದು ತೋರಿಸಿದರು. ಆ ಪ್ರಬಂಧವನ್ನು ಬೆಟಗೇರಿಯವರು ಬರಿ ಮೆಚ್ಚಲಿ, ಅದನ್ನು ತಮ್ಮ 'ಜಯಂತಿ" ಮಾಸ ಪತ್ರಿಕೆಯಲ್ಲಿ ಪ್ರಕಟಿಸಿದರು. ಆರ್.ಜಿ.ಯವರಿಗೆ ಆರ್ಥಿಕ ಮುಗ್ಗಟ್ಟಿತ್ತು, ಬಡತನ ಕಾಡುತ್ತಿತ್ತು. 'ಜಯಂತಿ"ಪತ್ರಿಕೆ ಪ್ರತಿ ತಿಂಗಳು ಉತ್ತಮ ವಿಮರ್ಶೆಗೆ ನಗದು ಬಮಾಮಾನ ಕೊಡುತ್ತಿತ್ತು. ಆ ಕಾಲದಲ್ಲಿ ಹೆಚ್ಚಿನ ಬಹುಮಾನ ಆರ್.ಜಿ.ಯವರಿಗೇ ದೊರೆಯುತ್ತಿದ್ದವು. ಇದಕ್ಕೆ ಪ್ರೊ. ಮಳಗಿಯವರ ಪ್ರೋತ್ಸಾಹ ಇತ್ತು.

ಪ್ರೊ. ಮಳಗಿಯವರೊಂದಿಗೆ ದೂರವಾಣಿಯಲ್ಲಿ ಮಾತಾಡುವಾಗ ನಾನು ಅನೇಕ ಘಟನೆಗಳನ್ನು ನೆನಪಿಸಿದೆ. ಕೆಲವನ್ನು ಅವರು ಮರೆತಿದ್ದರು. ಕರ್ನಾಟಕ ಕಾಲೇಜಿನಲ್ಲಿ ಆಕಾಲದಲ್ಲಿ ಪಾಪ್ಯುಲರ್ ಆದ ಜೋಕುಗಳಲ್ಲಿ ನಿಮ್ಮ ಬಗ್ಗೆ ಒಂದೆರಡು ಇವೆ ಎಂದು ಹೇಳಿದೆ. ಅವರು ಹೊಟ್ಟೆತುಂಬಾ ನಕ್ಕರು. ಅದರಲ್ಲಿ ಒಂದು ಘಟನೆ ಹೀಗಿದೆ. ಪ್ರೊ.ಮಳಗಿಯವರು ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಧಾರವಾಡದ ಆಡುಭಾಷೆಯನ್ನು ಬಳಸುತ್ತಿರಲಿಲ್ಲ. ಕಾಲೇಜಿನಲ್ಲಿ ಇತರ ಪ್ರಾಧ್ಯಾಪಕರು (ಗೋಕಾಕ್. ಇನಾಂದಾರ್, ಮಾಳವಾಡ) ನಮ್ಮೊಡನೆ ಧಾರವಾಡದ ಆಡು ಭಾಷೆಯಲ್ಲೇ ಸಂವಾದಿಸುತ್ತಿದ್ದರು. ಪ್ರೊ.ಮಳಗಿಯವರು ಕ್ಲಾಸಿನಲ್ಲಿ, ಅಷ್ಟೇ ಏಕೆ ಕ್ಲಾಸಿನ ಹೊರಗೆ ಕೂಡ ಪಠ್ಯಪುಸ್ತಕದ ಭಾಷೆಯಲ್ಲಿ ಅರ್ಥಾತ್ ಗ್ರಂಥಸ್ಥ ಭಾಷೆಯಲ್ಲಿಯೇ ಮಾತಾಡುತ್ತಿದ್ದರು. ಪಾಠ ಮಾಡುವಾಗ ಕೆಲ ಸಲ ಮಹತ್ವದ ಸಾಲುಗಳನ್ನು ಉದ್ಧರಿಸುವಾಗ, 'ಅರ್ಧವಿರಾಮ, ಪೂರ್ಣವಿರಾಮ" ಕೂಡ ಉಚ್ಚರಿಸುತ್ತಿದ್ದರು. ಒಮ್ಮೆ ಅವರು ಸೂಟಿನಲ್ಲಿ ಕ್ಲಾಸ್‌ರೂಮ್ ಪ್ರವೇಶಿಸಿದರು. (ಆ ಕಾಲದಲ್ಲಿ ಹೆಚ್ಚಿನ ಪ್ರಾಧ್ಯಾಪಕರು ಸೂಟು ಟೈ ಧರಿಸಿರುತ್ತಿದ್ದರು). ಆ ದಿನ ಕ್ಲಾಸಿನಲ್ಲಿ ಒಬ್ಬ ಹುಡುಗ ನಕ್ಕದ್ದನ್ನು ಗಮನಿಸಿದರು. ಅವರಿಗೆ ಕೋಪ ಬಂತು. ಅವನಿಗೆ ಎದ್ದು ನಿಲ್ಲಲು ಹೇಳಿದರು. “ನೀನು ನಕ್ಕದ್ದು ಏತಕ್ಕೆ?" ಎಂದು ಕೇಳಿದರು. ಆಗ ಆ ತುಂಟ ಹುಡುಗ, “ನಗು ಬಂತು, ನಕ್ಕೆನು. ಪೂರ್ಣವಿರಾಮ." ಎಂದು ಉತ್ತರಿಸಿ ಕುಳಿತುಬಿಟ್ಟ. ಆಗ ಕ್ಲಾಸಿನಲ್ಲಿಯ ಎಲ್ಲ ಹುಡುಗರು ಗಹಗಹಿಸಿ ನಕ್ಕರು. ಡೆಸ್ಕು ಬಡಿದು ಚೆಪ್ಪಾಳೆ ತಟ್ಟಿದರು. ಪ್ರೊ.ಮಳಗಿಯವರಿಗೆ ಕೋಪ ತಡೆಯುವುದು ಸಾಧ್ಯವಾಗಲಿಲ್ಲ. ಅವರು ಕ್ಲಾಸು ಬಿಟ್ಟು ಸ್ಟಾಫ್ ರೂಮಿನೆಡೆ ನಡೆದೇಬಿಟ್ಟರು. ನಂತರ ಕೆಲ ವಿದ್ಯಾರ್ಥಿಗಳು ಸ್ಟಾಫ್-ರೂಮ್‌ಗೆ ಹೋಗಿ, ಆ ವಿದ್ಯಾರ್ಥಿಯಿಂದ ಕ್ಷಮೆಯಾಚಿಸಲು ಹಚ್ಚಿದರು. ನಂತರ ಪ್ರೊ.ಮಳಗಿಯವರು ಕ್ಲಾಸ್‌ಗೆ ಬಂದರು.

ಬಹಳ ವರ್ಷ ಪ್ರೊ.ಮಳಗಿಯವರನ್ನು ನಾನು ಕಂಡಿರಲಿಲ್ಲ. ಎರಡು ವರ್ಷದ ಹಿಂದೆ ಬೆಂಗಳೂರಿನ ಬಿಹೆಚ್‌ಎಸ್ ಕಾಲೇಜಿನವರು ವರಕವಿ ಬೇಂದ್ರೆಯವರ ಮೇಲೆ ಮೂರು ದಿನಗಳ ಸೆಮಿನಾರ್ ಆಯೋಜಿಸಿದಾಗ ನಾನು ಅತಿಥಿ ಭಾಷಣಕಾರನಾಗಿ ಅಲ್ಲಿ ಹೋಗಿದ್ದೆ. ಬಹಳ ವರ್ಷಗಳ ಮೇಲೆ ಪ್ರೊ.ಮಳಗಿಯವರ ಭೆಟ್ಟಿಯಾಗಿತ್ತು. ಅವರಿಗೆ ಆಗ 97 ವರ್ಷ. ಅವರು 25 ಪುಟಗಳ ಒಂದು ಪ್ರಬಂಧ ಬರೆದು ತಂದಿದ್ದರು. ವೃಧಾಪ್ಯದಲ್ಲಿಯ ಅವರ ಉತ್ಸಾಹ ತರುಣರನ್ನು ನಾಚಿಸುವಂತಿತ್ತು. ನನ್ನ ಭಾಷಣ ಆದ ಮೇಲೆ ಪ್ರೀತಿಯಿಂದ ತಲೆಯ ಮೇಲೆ ಕೈಯಿಟ್ಟು, 'ಬಹಳ ಬೆಳೆದಿದ್ದೀ"ಎಂದಿದ್ದರು.

ಪ್ರೊ.ಮಳಗಿಯವರು ಉದ್ದಾಮ ಪಂಡಿತರು. ಬ್ರಹ್ಮರ್ಷಿ ದೈವರಾತ ವಿರಚಿತ 'ಛಂದೋದರ್ಶನ" ಎಂಬ ವೈದಿಕ ಸಂಸ್ಕೃತ ಪುಸ್ತಕವನ್ನು ಮಳಗಿಯವರು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಅದನ್ನು ಭಾರತೀಯ ವಿದ್ಯಾಭವನದವರು ಪ್ರಕಟಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಎನ್‌ಸೈಕ್ಲೋಪೀಡಿಯಾಕ್ಕಾಗಿ ಹರಿಶ್ಚಂದ್ರ ಕಾವ್ಯಕಥೆಯನ್ನು ಇಂಗ್ಲೀಷಿನಲ್ಲಿ ಬರೆದಿದ್ದಾರೆ. ಕನ್ನಡ ಎಂ.ಎ ಅಧ್ಯಯನಕ್ಕಾಗಿ ಸಾಹಿತ್ಯ ವಿಮರ್ಶೆ, ವ್ಯಾಕರಣ, ಛಂದಸ್-ಶಾಸ್ತ್ರ, ಕಾವ್ಯ ಮೀಮಾಂಸೆ, ಭಾಷಾಶಾಸ್ತ್ರ ಮುಂತಾದ ಎಂಟು ಸಂಪುಟ ಸಿದ್ಧಪಡಿಸಿದ್ದಾರೆ. ಇವರ ಪ್ರೀತಿಯ ವಿಷಯ ಶಬ್ದಮಣಿದರ್ಪಣ. ಇದನ್ನು ಸಂಗ್ರಹಿಸಿದ್ದಾರೆ. ಶ್ರೀ ಅರವಿಂದರನ್ನು ಅಭ್ಯಾಸ ಮಾಡಿದ್ದಾರೆ. ಪಾಂಡಿಚೇರಿಯ ಶ್ರೀ ಅರವಿಂದ ಸೊಸೈಟಿಯ ಅಖಿಲ ಭಾರತ ಪತ್ರಿಕೆಯ ಪ್ರಧಾನ ಸಂಪಾದಕರಾಗಿಯೂ 25 ವರ್ಷ ಸೇವೆ ಸಲ್ಲಿಸಿದ್ದಾರೆ. ಇವರು ಕವಿಗಳು ಕೂಡ. ಮೂರು ಕವನ ಸಂಗ್ರಹಗಳಿವೆ. ಇವರಿಗೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಮಹತ್ವದ್ದು ಎಂದರೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(1991).

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X