• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ರಾಶಿ’ ಸಾಹಿತ್ಯ ಲೋಕದಲ್ಲಿ ಒಂದು ಪಯಣ

By Staff
|

ಮನಮಂಥನ, ಮನೋನಂದನ, ಭಯ-ಸರಳ ವಿಶ್ಲೇಷಣೆ, ಅಲರ್ಜಿ, ಮನನ ಸೇರಿದಂತೆ ಡಾ.ಎಂ.ಶಿವರಾಂ(ರಾಶಿ)ರ ವಿವಿಧ ಪುಸ್ತಕಗಳ ಒಳಪುಟಗಳಲ್ಲಿ ಏನಿದೆ ಎನ್ನುವ ಕುತೂಹಲವೇ?

  • ಡಾ।‘ಜೀವಿ’ ಕುಲಕರ್ಣಿ, ಮುಂಬಯಿ

jeevi65@gmail.com

In the memory of Dr.M. Shivaram (Raashi), A Kannada Humoristಡಾ। ಶಿವರಾಂ ಅವರು ಮಗಳ(ವಿಮಲಾ) ನೆರವಿನಿಂದ ‘ನಮ್ಮ ಅಡಿಗೆ ಪಥ್ಯ ಊಟ’ ಎಂಬ ಪುಸ್ತಕ ಬರೆದಿದ್ದಾರೆ. ಇದನ್ನು ಅವರು ಯಾರಿಗೆ ಸಮರ್ಪಿಸಿದ್ದಾರೆ ಗೊತ್ತೇ? ‘‘ಅಡಿಗೆ ಮನೆಯ ಅನ್ನಪೂರ್ಣೆಯರಿಗೆ ಮತ್ತು ಪಥ್ಯ ವಿವರಿಸುವ ವೈದ್ಯರಿಗೆ’’.

ನಾವು ಪ್ರತಿನಿತ್ಯ ಸೇವಿಸುವ ತಿಂಡಿ, ಪಲ್ಯ, ಕೂಟು, ಗೊಜ್ಜು, ಚಟ್ನಿ, ಕೋಸಂಬರಿಗಳ ಬಗ್ಗೆ ವಿವರಿಸಿದ್ದಾರೆ. ಅವುಗಳಲ್ಲಿ ಎಷ್ಟು ಕೆಲೊರಿ ಉಂಟು ಮತ್ತು ಪ್ರೋಟೀನ್‌, ವಿಟಮಿನ್‌, ಲವಣ, ನೀರು, ಸಕ್ಕರೆ, ಜಿಡ್ಡು- ಇವುಗಳ ಪ್ರಮಾಣ ಎಷ್ಟಿದೆ ಎಂಬುದನ್ನು ಬರೆದಿದ್ದಾರೆ. ನಮ್ಮ ಆರೋಗ್ಯಕ್ಕೆ ಯಾವುದು ಸೂಕ್ತ ಎಂಬುದನ್ನೂ ತಿಳಿಸಿದ್ದಾರೆ.

ತಮ್ಮ ಮಗ ಡಾ। ಓಂಪ್ರಕಾಶನೊಂದಿಗೆ ‘ಅಲರ್ಜಿ’ ಎಂಬ ಪುಸ್ತಕ ಬರೆದಿದ್ದಾರೆ. ಕ್ರಿ.ಶ. 400ರ ವೇಳೆಗಾಗಲೇ ಅನುಭವಕ್ಕೆ ಬಂದಿದ್ದ ಅಲರ್ಜಿಯ ಬಗ್ಗೆ ನಮಗೆ ತಿಳುವಳಿಕೆ ಬಂದದ್ದು ಆಧುನಿಕ ಕಾಲದ ಮೈಕ್ರೋಸ್ಕೋಪಿನ ಅನ್ವೇಷಣೆಯ ನಂತರವೇ ಎಂದು ಬರೆಯುತ್ತಾರೆ. ಬ್ಯಾಕ್ಟೀರಿಯಾ, ಪ್ರೊಟೋಸೋವಾ, ವೈರಸ್‌ ಇತ್ಯಾದಿಗಳು ಮೈಕ್ರೋಸ್ಕೋಪಿಗೆ ಮಾತ್ರ ಕಾಣುತ್ತವೆ. ವೈದ್ಯವಿಜ್ಞಾನದ ಹೆಚ್ಚಿನ ಮಾಹಿತಿಯನ್ನು ಅವರು ಸಂಗ್ರಹಿಸುತ್ತಾರೆ. ಪ್ರದೇಶ, ಹವಾಮಾನ ಬದಲಾದಂತೆ ಅಲರ್ಜಿ ಬದಲಾಗುತ್ತವೆ ಎನ್ನುತ್ತಾರೆ.

ಭಯ - ಸರಳ ವಿಶ್ಲೇಷಣೆ

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸಕ್ಕಾಗಿ ‘ಭಯ’ದ ಬಗ್ಗೆ ಬರೆದ ಕಿರುಹೊತ್ತಿಗೆ ಮಹತ್ವದ್ದಾಗಿದೆ. ಭಯ ಹುಟ್ಟಿನಿಂದಲೇ ಮಾನವನನ್ನು ಆವರಿಸಿದೆ ಎನ್ನುತ್ತಾರೆ. ಅಜ್ಞಾನಿ ಮತ್ತು ಹುಚ್ಚರಿಗೆ ಮಾತ್ರ ಭಯವಿರುವುದಿಲ್ಲವಂತೆ. ಭಯವು ಪ್ರಾಣಿಗಳಿಗೆ ಅಗತ್ಯ ಎಂಬ ಮಾತನ್ನು ಪ್ರತಿಪಾದಿಸುತ್ತಾರೆ. ಭಗವದ್ಗೀತೆ, ಉಪನಿಷತ್ತು, ಮನೋವಿಜ್ಞಾನ, ವೈದ್ಯಕೀಯ ವಿಜ್ಞಾನ ಹಾಗೂ ತಮ್ಮ ಅನುಭವದ ಮೂಲಕ ಪಡೆದ ವಿಚಾರಗಳನ್ನು ಡಾ। ಶಿವರಾಂ ಅವರು ‘ಭಯ - ಸರಳ ವಿಶ್ಲೇಷಣೆ’ ಪುಸ್ತಕದ ಮೂಲಕ ನಮಗೆ ತಿಳಿಸುತ್ತಾರೆ.

ಡಾ। ಶಿವರಾಂ ‘ಕಾಲ’ದ ಬಗ್ಗೆ ಬರೆಯುತ್ತಾರೆ. ಕಾಲದ ಬಗ್ಗೆ ವೈಜ್ಞಾನಿಕ ವಿವರಣೆ ನೀಡುವುದರ ಜೊತೆಗೆ ‘ಯಾರಿಗೂ ಕಾಯದೆ ನಿರಂತರವಾಗಿ ಚಲಿಸುವ ಕಾಲ’ವು ಪುರಾಣ ಕಾಲದಲ್ಲಿ ವ್ಯಕ್ತವಾಗಿರುವದನ್ನು ಗುರುತಿಸುವ ಡಾ। ಶಿವರಾಂ, ವೈಕುಂಠದ ದ್ವಾರಪಾಲಕರಾದ ಜಯ-ವಿಜಯ, ಪೌರಾಣಿಕ ಪಾತ್ರಗಳಾದ ಮಾರ್ಕಂಡೇಯ, ಅಹಲ್ಯೆ, ಯಯಾತಿ ಇತ್ಯಾದಿ ಪಾತ್ರಗಳ ಮೂಲಕ ಕಾಲದ ಸ್ವರೂಪ ಮತ್ತು ಗತಿಯನ್ನು ವಿಶ್ಲೇಷಿಸಿದ್ದಾರೆ. ಮನೋತೀತವಾದ ಕಾಲದ ಬಗ್ಗೆ ಅವರು ವಿವರಿಸುತ್ತಾರೆ.

ಅರಿಸ್ಟಾಟಲ್‌, ಪ್ಲೇಟೋ, ಸೇಂಟ್‌ ಅಗಸ್ಟಿನ್‌, ಮೈಕ್‌ ಟಗ್ಗಾರ್ಟ್‌, ಇಮ್ಯಾನ್ಯುವೆಲ್‌ ಕಾಂಟ್‌, ಹೆನ್ರಿ ಬರ್ಗಸನ್‌, ಅಲ್‌ಫ್ರೆಡ್‌ ನಾರ್ತ್‌, ವೈಟ್‌ಹೆಡ್‌ ಇತ್ಯಾದಿ ಪಾಶ್ಚಾತ್ಯ ತತ್ವಜ್ಞಾನಿ, ವಿಜ್ಞಾನಿ, ಮನೋವಿಜ್ಞಾನಿಗಳು ನಡೆಸಿದ ಕಾಲದ ಕುರಿತಾದ ಅಲೋಚನೆಗಳ ಬಗ್ಗೆ ಬರೆಯುತ್ತಾರೆ. ಅಮೆರಿಕೆಯ ಅರೆಜೋನಾದಲ್ಲಿ ಸಹಸ್ರಾರು ವರ್ಷಗಳ ಹಿಂದೆ ‘ಹೋಪಿ’ ಎಂಬ ಜನಾಂಗವಿತ್ತಂತೆ. ಅವರಿಗೆ ಸಂಸ್ಕೃತಿ ಇತ್ತು, ಭಾಷೆ ಇತ್ತು. ಅವರ ಭಾಷೆಯಲ್ಲಿ ದೇಶ ಕಾಲ ಎಂಬ ಮಾತೇ ಇರಲಿಲ್ಲವಂತೆ. ಭಾರತೀಯ ತತ್ವಜ್ಞಾನಿಗಳ ಮತ್ತು ಅನುಭಾವಿಗಳ ದೃಷ್ಟಿಯಲ್ಲಿ ಕಾಲವನ್ನು ಪರಿಚಯಿಸಿ, ಅಥರ್ವವೇದದಲ್ಲಿರುವ ‘ಕಾಲ’ದ ಬಗೆಗಿನ ಪ್ರಾರ್ಥನೆಗಳನ್ನು ಸಂಗ್ರಹಿಸಿ, ಅವುಗಳ ಸರಳಾನುವಾದ ನೀಡಿದ್ದಾರೆ.

‘ಮನನ’ವೆಂಬ ಬಹು ಮಹತ್ವದ ವೈಚಾರಿಕ ಪುಸ್ತಕ ಬರೆದಿದ್ದಾರೆ. ತಾಯಿಯ ಹಾಲಿನ ಅವಶ್ಯಕತೆಯ ಬಗ್ಗೆ ಬರೆಯುತ್ತಾರೆ. ವಿಜ್ಞಾನ, ಇತಿಹಾಸ, ವೈದ್ಯಶಾಸ್ತ್ರ, ಮನಶ್ಶಾಸ್ತ್ರ, ತತ್ವಜ್ಞಾನ ಇವುಗಳ ಸಾರ ಕೊಡುತ್ತಾರೆ. ಮೂಢನಂಬಿಕೆ, ಹಣೆಬರಹ, ಅಂಗೈರೇಖೆಗಳ ಬಗ್ಗೆ ತಮ್ಮ ವಿಚಾರ ಮುಚ್ಚುಮರೆಯಿಲ್ಲದೇ ತಿಳಿಸುತ್ತಾರೆ.

ಇವು ವೈಜ್ಞಾನಿಕ ನೀತಿ ಕತೆಗಳು

ಮನೋದೈಹಿಕ ವಿಜ್ಞಾನ ಸಾಹಿತ್ಯದ ಉತ್ತಮ ಉದಾಹರಣೆ ‘ಮನೋನಂದನ’ ಎಂಬ ಮಹತ್ವದ ಕೃತಿ. ಈ ಪುಸ್ತಕದಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಎಂಟು ಕತೆಗಳಿವೆ. ವಿವಿಧ ಬಗೆಯ ಮನೋದೈಹಿಕ ಬೇನೆಗಳ ಪರಿಚಯ ಮಾಡಿಕೊಡುತ್ತಾರೆ. ಪ್ರತಿಯಾಂದು ಕತೆಯ ಕೊನೆಗೆ ‘ಆ ಕತೆಯಿಂದ ಕಲಿತ ಪಾಠ’ದ ಟಿಪ್ಪಣಿ ಇದೆ. ಇವು ನೀತಿಕತೆಗಳನ್ನು ನೆನಪಿಗೆ ತರುತ್ತವೆ. ಅಹುದು, ಇವು ವೈಜ್ಞಾನಿಕ ನೀತಿಕತೆಗಳು.

ಒಬ್ಬ ಗಂಡನಿಗೆ ಚಿಕ್ಕಪುಟ್ಟ ಸಾಮಾನು ಕದಿಯುವ ಗೀಳು(ಕ್ಲೆಪ್ಟಿಯೋಮೇನಿಯಾ). ಅವನು ಸಿಕ್ಕಾಗ ಹೆಂಡತಿಗೆ ತೀವ್ರ ಅಸಮಾಧಾನವಾಯಿತು. ಅದರಿಂದ ಮಂಡೆನೋವು ಕಾಯಿಲೆ ಉಂಟಾಯಿತು. ಅದರ ಹಿಂದೆ ಅಡಗಿರುವ ಮನದ ಕ್ಲೇಶ ಅರಿತಾಗ ಆ ನೋವು ವಾಸಿಯಾಯಿತು. ಇಂಥ ಹಲವಾರು ಕತೆಗಳು. ಇತರರ ಹೀಯಾಳಿಕೆಯಿಂದ ನೊಂದು ‘ಅಪಸ್ಮಾರ’ ಪಡೆದದ್ದು, ಹೆಂಡತಿಯ ಮಾತನ್ನು ಒಪ್ಪಲು ಆಗದೇ, ತಂದೆಯ ಮಾತನ್ನು ಮೀರಲು(ವಿರೋಧಿಸಲು) ಆಗದೇ ತಲೆಸುತ್ತು ಕಾಯಿಲೆ ತಂದುಕೊಂಡದ್ದು, ದೊಡ್ಡತನದ ಅಹಂಕಾರಕ್ಕೆ ಕುಂದು ಬಂದಾಗ ಉಂಟಾದ ಸಿಂಟ್ಟು, ಅದರಿಂದ ಆಡ್ರಿನಲ್‌ ಗ್ರಂಥಿಗಳ ಉದ್ರೇಕ. ಅದರಿಂದ ಹೊಟ್ಟೇಯುರಿ, ಉರಿತೇಗು ಕಾಯಿಲೆ ಬಂದ ಕತೆ.

ಓ ಮನಸೇ...

ಈ ಪುಸ್ತಕದ ಎರಡನೆಯ ಭಾಗದಲ್ಲಿ ಮನೋವೈಜ್ಞಾನಿಕ ಬೇನೆಗಳ ಬಗ್ಗೆ ಬರೆಯುತ್ತಾರೆ. ದೈಹಿಕ ಕಾಯಿಲೆಗಳಿಗೆ ಮನಸ್ಸು ಕಾರಣವಾಗಿರುತ್ತದೆ. ಈ ವಿಚಾರ ಇತರರಿಗೆ ಮನವರಿಕೆ ಮಾಡಿಕೊಡಬೇಕು ಎನ್ನುತ್ತಾರೆ. ದೇಹ ಮತ್ತು ಮನಸ್ಸುಗಳಿಗೆ ಒಂದು ಅವಿನಾಭಾವ ಸಂಬಂಧವಿದೆ ಎಂಬುದನ್ನು ತೋರಿಸುತ್ತರೆ. ಪ್ರತಿ ಅಧ್ಯಾಯದ ಕೊನೆಗೆ ಅದರಿಂದ ತಿಳಿಯಬೇಕಾದ ಅಂಶಗಳ ಸಾರಾಂಶ ಕೊಡುತ್ತರೆ. (ಒಬ್ಬ ಒಳ್ಳೆಯ ಶಿಕ್ಷಕನಂತೆ). ಮನೋದೈಹಿಕ ಬೇನೆಗಳಿಗೆ ಊಟ-ಕೂಟಗಳನ್ನು ಕುರಿತ ದುಗುಡಗಳೇ ಕಾರಣ ಎನ್ನುತ್ತಾರೆ ಡಾ। ಶಿವರಾಂ.

‘‘ಮನಸ್ಸು-ದೇಹ ಮತ್ತು ಆನಂದಗಳಿಗಿರುವ ಸಹಜ ಸಂಬಂಧಗಳ ಕುರಿತ ಅನ್ವೇಷಣೆ ಮಾಡುವಾಗ ಅವರು ಕೇವಲ ವೈದ್ಯ ಅಥವಾ (ಸಾಹಿತಿ) ಬರಹಗಾರರಾಗಿ ಕಾಣುವುದಿಲ್ಲ. ಮನುಷ್ಯನ ಅಂತರಂಗ ಬಹಿರಂಗಗಳನ್ನು ಅರ್ಥಮಾಡಿಕೊಂಡು, ವಿಶ್ಲೇಷಿಸಿ ಆತ್ಮೀಯರಿಗೆ ಪರಿಚಯ ಮಾಡಿಸಲು ಶ್ರಮಿಸುವ ಋಷಿಯಂತೆ ಕಾಣುತ್ತಾರೆ(ಶಿವರಾಂ).’’ ಎನ್ನುತ್ತಾರೆ ಡಾ। ಎಚ್‌.ಎನ್‌. ಗೋಪಾಲರಾವ್‌ (‘ರಾಶಿ’’ ಪು.108).

ಈ ಪುಸ್ತಕದ ಕೊನೆಯಲ್ಲಿ ಡಾ। ಶಿವರಾಂ ಮನೋದೈಹಿಕ ಬೇನೆಗಳಿಗಾಗಿ ಕಾರಣ, ಮನೋದೈಹಿಕ ರೋಗಿಗಳ ಕರ್ತವ್ಯ, ಮತ್ತು ವೈದ್ಯನ ಕರ್ತವ್ಯಗಳ ಬಗ್ಗೆ ಕೂಡ ಬರೆಯುತ್ತಾರೆ.

ಡಾ। ಶಿವರಾಂ ಅವರ ಅದ್ವಿತೀಯ ಮನೋದೈಹಿಕ, ಮನೋವೈಜ್ಞಾನಿಕ ಕೃತಿ- ‘ಮನಮಂಥನ’ ಕರ್ನಾಟಕ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಪುರಸ್ಕಾರಗಳನ್ನು ಪಡೆದ ಡಾ। ಶಿವರಾಂ ಅವರ ಕೃತಿ ‘ಮನಮಂಥನ’ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮೂರು ಸಲ ಪುನ್ರ್‌ಮುದ್ರಣ ಪಡೆಯಿತು(1974, 1979, 1987). ಇಂದಿಗೂ ಅದಕ್ಕೆ ಬೇಡಿಕೆ ಇದೆ.

ಈ ಗ್ರಂಥದಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ವಿವಿಧ ಮಾನಸಿಕ ರೋಗಗಳ ಪರಿಚಯಾತ್ಮಕ ವಿವರಗಳಿವೆ. ಯಾವ ಬೇನೆ(ರೋಗ)ಗಳು ಯಾವ ಕಾರಣದಿಂದ ನಮ್ಮ ಮನಸ್ಸನ್ನು ಆಕ್ರಮಿಸುತ್ತವೆ ಎಂಬುದನ್ನು ತಿಳಿಸುತ್ತ ಅವುಗಳಿಗೆ ಬೇಕಾಗುವ ಚಿಕಿತ್ಸಾ ಕ್ರಮಗಳನ್ನು ಸೂಚಿಸುತ್ತಾರೆ. ಎರಡನೆಯ ಭಾಗದಲ್ಲಿ ದೇಹ ಮತ್ತು ಮನಸ್ಸುಗಳ ನಡುವಿನ ಸಂಬಂಧವನ್ನು ಚರ್ಚಿಸುತ್ತಾರೆ. ಮನಸ್ಸಿನ ಸ್ವರೂಪ, ಮತ್ತು ಮನಸ್ಸಿನ ಕೇಂದ್ರ ಎನ್ನಲಾಗುವ ಮಿದುಳು ಹಾಗೂ ಅದರ ಭಾಗಗಳು, ಮನಸ್ಸಿನ ಚಟವಟಿಕೆ, ಆಸೆ, ನಿರಾಸೆ, ಭಯ, ಅಸ್ವಾಸ್ಥ್ಯಗಳ ವಿಶ್ಲೇಷಣೆ ಮಾಡುತ್ತಾರೆ. ಪತಂಜಲಿಯ ಯೋಗ ಸೂತ್ರದ ಪ್ರಕಾರ ಮನಸ್ಸು ಮತ್ತು ಯೋಗಕ್ಕಿರುವ ಸಂಬಂಧದ ಬಗ್ಗೆ ಬರೆಯುತ್ತಾರೆ.

ಆದಿ ಮಾನವನ ಕಾಲದಿಂದ ಮನುಷ್ಯನನ್ನು ಕಾಡುತ್ತಿರುವ ‘ಆತಂಕ’ ಎಂಬುದಕ್ಕೆ ‘ಆಂಗ್ಸಾಯಿಟಿ ಸಿಂಡ್ರೋಮ್‌’ ಎನ್ನುತ್ತಾರೆ. ಆತಂಕ, ಕಾತರ, ತವಕ, ತಲ್ಲಣ, ತಳಮಳ - ಇವೆಲ್ಲ ಸಮಾನಾರ್ಥದ ಪದಗಳು. ಮನಸ್ಸಿಗೆ ಆತಂಕ ಉಂಟಾದಾಗ ದೇಹದ ಮೇಲೆ ಪರಿಣಾಮವಾಗುತ್ತದೆ. ಹಸಿವು, ಬಾಯಾರಿಕೆ, ಊಟದ ಬಗ್ಗೆ ಆಸಕ್ತಿ/ನಿರಾಸಕ್ತಿ, ಅನುಮಾನ, ಸಂಶಯ - ಇವು ಆತಂಕದ ಕುರುಹುಗಳು. ಮನಸ್ಸಿನಲ್ಲಿ ಎರಡು ಭಾಗಗಳು- ಒಂದು ಆಳಮನಸ್ಸು, ಇನ್ನೊಂದು ತೋರಮನಸ್ಸು. ತೋರಮನಸ್ಸಿನ ಅರಿವಿಗೆ ಬಂದ ಆಳಮನಸ್ಸಿನ ಆತಂಕವು ದೇಹದ ಮೇಲೆ ತನ್ನ ಪ್ರಭಾವ ಬೀರುತ್ತದೆ.

ಯುವಕನು ತನ್ನ ಪೌಗಂಡಾವಸ್ಥೆಯಲ್ಲಿ(ಎಡೊಲೆಸನ್ಸ್‌) ಮಾಡಿದ ತಪ್ಪು ನೆನೆದು, (ಇಂದಿನ ತೊಂದರೆಗೆ ಅದೇ ಕಾರಣ ಎಂದು ಬಗೆದು) ಆತಂಕಪಡುತ್ತಾನೆ. ಉಸಿರಿನ ತೊಂದರೆ ಉಂಟಾಗುತ್ತದೆ. ತಪ್ಪಿನ ಅರಿವು ಉಂಟಾದಾಗ ಅದರ ನಿವಾರಣೆಯಾಗುತ್ತದೆ.

ಆತ್ಮಹತ್ಯೆ ಮಾಡಿಕೊಂಡ ಅಥವಾ ದುರ್ಮರಣಕ್ಕೀಡಾದ ವ್ಯಕ್ತಿಯು ಪ್ರೇತ ಅಥವಾ ಸೈತಾನನಾಗುತ್ತಾನೆ ಎಂಬ ನಂಬಿಕೆ ಹಿಂದು-ಮುಸ್ಲಿಂ-ಕ್ರಿಸ್ತೀಯರಲ್ಲಿ ಇದೆ. ನಂಬಿಕೆ, ಅದರ ಹಿಂದೆ ಭೀತಿ, ಅವುಗಳ ನಿವಾರಣೆಗಳ ಬಗ್ಗೆ ಚರ್ಚಿಸುತ್ತಾರೆ. ಅರ್ಜುನ ಯುದ್ಧಭೂಮಿಯಲ್ಲಿ ಆತಂಕ ಅನುಭವಿಸಿದ, ಶ್ರೀ ಕೃಷ್ಣನ ಬೋಧನೆ ಔಷಧಿಯಾಗಿ ಕೆಲಸಮಾಡಿತು ಎನ್ನುತ್ತಾರೆ.

ಕೆಲವರಿಗೆ ಪರೀಕ್ಷೆಯ ಮೊದಲು ತಲೆಸಿಡಿತ ಜ್ವರ ಬರುತ್ತದೆ. ಆತಂಕವು ತೀವ್ರವಾದಾಗ, ಅದುಮೆದುಳಿನ ಥಲಾಮಸ್‌ ಮತ್ತು ಸ್ವಯಂಚಾಲಿತ ನರಗಳ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಆತಂಕ ಪ್ರವೇಶಿಸಿದ ಕೇಂದ್ರಗಳು ಉಷ್ಣತೆಯನ್ನು ಉತ್ಪಾದಿಸುತ್ತವೆ. ಅದರ ಫಲವೇ ಜ್ವರ ಎನ್ನುತ್ತಾರೆ ಡಾ। ಶಿವರಾಂ. ಮುಪ್ಪಿನಲ್ಲಿ ಅಸಮಾಧಾನ, ಅತೃಪ್ತಿ ಸಾಮಾನ್ಯವಾಗಿ ಎಲ್ಲರನ್ನು ಬಾಧಿಸುತ್ತವೆ. ಅಂತಹ ಸಮಯದಲ್ಲಿ ಅಧ್ಯಾತ್ಮಿಕ ಅರಿವು ಮಾನಸಿಕ ಚಿಕಿತ್ಸೆಯಾಗಿ ಪರಿನಮಿಸುತ್ತದೆ ಎನ್ನುತ್ತಾರೆ.

ಕನ್ನಡ ಓದುಗರಿಗೆ ಚಿರಪರಿಚಿತವಾದ ಹೆಸರು ನಾಟಕಕಾರ ‘ಸಂಸ’ ಅವರದು. ಅವರಿಗೆ ಎಲ್ಲ ಜನರ ಬಗ್ಗೆ ಸಂಶಯವಿತ್ತು. ಪೋಲೀಸರು ತಮ್ಮನ್ನು ಹಿಬಾಲಿಸುತ್ತಾರೆ ಎಂಬ ಭಯ ಅವರನ್ನು ಸದಾ ಕಾಡುತ್ತಿತ್ತು. (‘ಪೋಲೀಸರಿದ್ದಾರೆ ಎಚ್ಚರಿಕೆ’ ಎಂಬ ಲಂಕೇಶರ ನಾಟಕ ಇದೇ ವಸ್ತುವಿನ ಮೇಲೆ ಇದೆ). ಪ್ಯಾರನೈಡ್‌ ಅವಸ್ಥೆ ನಕ್ಷತ್ರಿಕನಂತೆ ಕಾಡುತ್ತದೆಯಂತೆ. ಅದುವೆ ಬೆಳೆದು ಸ್ಕಿಜೋಫ್ರೇನಿಯಾ ಆಗುವ ಸಂಭವವಿರುತ್ತದೆ. ಇಂಥ ಸ್ಥಿತಿಗೆ ಅಧ್ಯಾತ್ಮವೇ ಔಷಧಿ ಎನ್ನುತ್ತಾರೆ ಡಾ। ಶಿವರಾಂ.

ಇದರಂತೆ ಮನವನ್ನು ಕಾಡುವ ಹಿಸ್ಟೀರಿಯಾದ ಹಲವಾರು ಉದಾಹರಣೆಗಳನ್ನು ಕೊಡುತ್ತಾರೆ. ಉಸಿರುಕಟ್ಟುವ, ಧ್ವನಿ ನಿಲ್ಲುವ, ಜ್ಞಾನತಪ್ಪುವ, ಅಂಗವಿಕಲವಾಗುವ, ಎಳೆಯ ಮಕ್ಕಳಂತೆ ವರ್ತಿಸುವ ಸ್ಥಿತಿ ಬರುತ್ತದೆ. ಸರಿಯಾದ ತಿಳುವಳಿಕೆ ನೀಡಿ ಸ್ನೇಹಮಯ ಉಪಚಾರ ನೀಡಬೇಕು ಎನ್ನುತ್ತಾರೆ.

ಭೂತಚೇಷ್ಟೆ!!!

ಕೆಲವು ಸಲ ದೇಹಕ್ಕೆ ‘ಒಬ್‌ಸೆಶನಲ್‌’ ಬೇನೆಗಳು ಬಂದಾಗ ‘ಭೂತಚೇಷ್ಟೆ’ ಎಂದೂ ಜನ ಭಾವಿಸುತ್ತಾರೆ. ಹಾಗೆಯೇ ವಾಸ್ತವ ಲೋಕದ ಅರಿವಿಲ್ಲದೇ ಉಹಾಲೋಕದಲ್ಲಿ ವಿಹರಿಸುವ ವ್ಯಕ್ತಿಯನ್ನು ‘ಡಿಪ್ರೆಶನ್‌’(ಖಿನ್ನತೆ) ಕಾಡುತ್ತದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯುವುದು ಅವಶ್ಯ ಎನ್ನುತ್ತಾರೆ. ಮನುಷ್ಯನ ಜೀವನದಲ್ಲಿ ಎದುರಾಗುವ ವಿಭಿನ್ನ ರೀತಿಯ ಮಾನಸಿಕ ಬೇನೆಗಳ ಸ್ವರೂಪ, ಗುಣಲಕ್ಷಣಗಳನ್ನು ಉದಾಹರಣೆಗಳೊಂದಿಗೆ, ತಮ್ಮ ಅಧ್ಯಯನ ಹಾಗೂ ಅನುಭವಗಳ ಆಧಾರದ ಮೇಲೆ ಚರ್ಚಿಸಿ ಸೂಕ್ತ ಚಿಕಿತ್ಸೆಯ ಬಗ್ಗೆ ಕೂಡ ಬರೆಯುತ್ತಾರೆ.

‘ಮನಮಂಥನ’ದ ಎರಡನೆಯ ಭಾಗದಲ್ಲಿ ದೇಹಮನಸ್ಸುಗಳ ಸಂಬಂಧವನ್ನು ಪರಿಚಯಿಸುತ್ತಾರೆ, ವಿಶ್ಲೇಷಿಸುತ್ತಾರೆ. ದೇಹ ದುರ್ಬಲವಾಗಿದ್ದರೂ ಮನಸ್ಸು ಸಬಲವಾಗಿದ್ದ ವ್ಯಕ್ತಿಗಳು ತಮ್ಮ ಜೀವನದಲ್ಲಿ ಅಸಾಧ್ಯವಾದ ಸಾಧನೆಗಳನ್ನು ಮಾಡಿದ ವಿಶ್ವದ ಅನೇಕ ಮಹಾನುಭಾವರ ಉದಾಹರಣೆ ಕೊಡುತ್ತಾರೆ.

ಮನಸ್ಸು ಮತ್ತು ದೇಹಗಳ ಸಮನ್ವಯ ಒಕ್ಕೂಟವೇ ಬಾಳಿನ ಜೀವಾಳ ಎನ್ನುತ್ತಾರೆ. ದೇಹಮನಗಳ ಸಂಬಂಧವನ್ನು ಪುರಾಣದ ಕಥೆಯ ನೆರವಿನಿಂದ ವಿಶ್ಲೇಷಿಸುತ್ತಾರೆ. ‘ದೇಹ ಮತ್ತು ಮನಸ್ಸು, ಬಯಲು ಮತ್ತು ಆಲಯದಂತೆ’ ಎನ್ನುತ್ತ ಅಧ್ಯಾತ್ಮಿಕ ವಿವರಣೆ ನೀಡುತ್ತಾರೆ. ತಮ್ಮ ವೈದ್ಯಕೀಯ ಜ್ಞಾನದಿಂದ ಮೆದುಳು ಮತ್ತು ಅದರ ಕಾರ್ಯವನ್ನು ಉಪನ್ಯಾಸಕರಂತೆ ವಿವೇಚಿಸುತ್ತಾರೆ. ಮೆದುಳಿನ ಕಾರ್ಟೆಕ್ಸ್‌, ಸೆರಿಬ್ರಮ್‌ ಮತ್ತು ಸೆರಿಬೆಲ್ಲಮ್‌ ಎಂಬ ಪ್ರಮುಖ ಭಾಗಗಳ ಕಾರ್ಯಾಚರಣೆಯ ಬಗ್ಗೆ ಬರೆಯುತ್ತಾರೆ. ಮನುಷ್ಯನ ಕಾರ್ಯ ಚಟುವಟಿಕೆಗಳು ಅವನ ಬಾಲ್ಯ, ಕೌಮಾರ್ಯ, ಯೌವನ, ವಾರ್ಧಕ್ಯ - ಈ ನಾಲ್ಕು ಅವಸ್ಥೆಗಳಿಗೆ ತಕ್ಕಂತೆ ಇರುತ್ತವೆ. ನಾನು, ನನ್ನದು ಎಂಬ ಪ್ರಜ್ಞೆ ಮಗುವಿದ್ದಾಗ ಬೆಳೆಯುತ್ತದೆ. ಅದುವೆ ಮುಂದೆ ‘ಇಗೊ’ ಆಗುತ್ತದೆ. ನಂತರ ತಮೋಗುಣ ಪ್ರಧಾನವಾದ ‘ಇಡ್‌’ದ ಜೊತೆಗೆ ಬೆರೆತು ‘ಸುಪರ್‌ ಇಗೊ’ ಆಗುತ್ತದೆ ಎನ್ನುತ್ತಾರೆ.

ನೆಮ್ಮದಿ ಎಲ್ಲಿದೆ?

ನೆಮ್ಮದಿ ಪಡೆಯಬೇಕಾದರೆ ‘ನಿನ್ನೆಯದೆಲ್ಲ ಮರೆಯಬೇಕು, ನಾಳೆಯ ಬಗ್ಗೆ ಚಿಂತಿಸಬಾರದು, ಇಂದಿನ ಬಗ್ಗೆ ಮಾತ್ರ ಯೋಚಿಸಬೇಕು’. ಆದರೆ ಮನುಷ್ಯನಿಗೆ ನಿನ್ನೆಯನ್ನು ಮರೆಯುವುದು ಸಾಧ್ಯವೇ ಇಲ್ಲ ಎಂಬುದೂ ಕಟು ಸತ್ಯ ಎನ್ನುತ್ತಾರೆ. ವಯಸ್ಸು ಹೆಚ್ಚಾದಂತೆ ಮನ್ನಣೆಯ ದಾಹ ತೀವ್ರವಾಗುತ್ತದೆ. ಬಾಲ್ಯದಲ್ಲಿ ಅನ್ನಕ್ಕಾಗಿ ದಾಹ, ಯೌವನದಲ್ಲಿ ಗಂಡು-ಹೆಣ್ಣಿನ ಪರಸ್ಪರ ಒಲವಿಗಾಗಿ ದಾಹ, ವಯಸ್ಕರಾದಂತೆ ಚಿನ್ನಕ್ಕಾಗಿ ಅಥವಾ ಮನ್ನಣೆಗಾಗಿ ದಾಹ ಉಂಟಾಗುತ್ತದೆ. ಹಿಡಿದ ದಾರಿ ತಪ್ಪು ಎನ್ನಿಸಿದಾಗ, ತಪ್ಪಿನ ನಿವಾರಣೆಗಾಗಿ ದೇವರು, ದಿಂಡರು, ಭಜನೆ, ತೀರ್ಥಯಾತ್ರೆ, ದಾನಧರ್ಮ, ಮುಡಿಪು ಇತ್ಯಾದಿ ವಿಧಾನ ಅನುಸರಿಸಬಹುದು ಎನ್ನುತ್ತಾರೆ. ವೈಚಾರಿಕರಿಗೆ ಈ ವಿಧಾನ ಮೌಢ್ಯ ಎನ್ನಿಸಬಹುದು.

ಡಾ। ಶಿವರಾಂ ಕೂಡ ವಿಚಾರವಾದಿಗಳೇ. ಆದರೂ, ‘ನೆಮ್ಮದಿ ದೊರೆಯುವ, ನಿರುಪದ್ರವಿಯಾದ ಯಾವುದೇ ಕಾರ್ಯ ಮಾಡಬಹುದು’ ಎನ್ನುತ್ತಾರೆ.

ವಯಸ್ಕರಲ್ಲಿರುವ ವೈವಿಧ್ಯಮಯ ಕಾರ್ಯಕ್ರಮಗಳು ಮತ್ತು ಅವುಗಳ ಹಿಂದಿನ ಮನಸ್ಸಿನ ಪಾತ್ರ ಕುರಿತು ವಿಶ್ಲೇಷಿಸುವಾಗ ಶಿವರಾಂ ಅವರಿಗೆ ಪತಂಜಲಿ ಮಹರ್ಷಿಯ ಯೋಗಸೂತ್ರ ನೆನಪಾಗುತ್ತದೆ.

‘‘ನಶ್ವರವಾದ ಲೌಕಿಕ ಸುಖದುಃಖಾನುಭವವನ್ನು, ಶಾಶ್ವತವಾದ, ದ್ವಂದ್ವಾತೀತವಾದ ಆನಂದದ ಅನುಭವವನ್ನು ಕೂಡಿಸುವುದೇ ಯೋಗ. ಅವುಗಳೆರಡರ ಮಧ್ಯೆ ಸೇತುವೆಯನ್ನು ಕಟ್ಟಿ ಸಂಪರ್ಕವನ್ನು ನೇರವಾಗಿ ಕಲ್ಪಿಸುವುದೇ ಯೋಗ’’ ಎಂದು ಯೋಗವನ್ನು ವಿವರಿಸುವ ಡಾ। ಶಿವರಾಂ, ಮನಸ್ಸು, ಚಿತ್ತ, ಅಹಂಕಾರ ಮತ್ತು ಬುದ್ಧಿಗಳ ಬಗ್ಗೆ ‘ಯೋಗಪಾದ’ದಲ್ಲೂ, ಅವಿದ್ಯಾ, ರಾಗ, ದ್ವೇಷ, ಅಭಿನಿವೇಶಗಳ ಬಗ್ಗೆ ‘ಸಾಧನಪಾದ’ದಲ್ಲೂ, ಯೋಗಾಂಗಗಳ ಬಗ್ಗೆ ‘ವಿಭೂತಿಪಾದ’ದಲ್ಲೂ ಮಹರ್ಷಿ ಪತಂಜಲಿ ತಿಳಿಸಿರುವ ವಿಷಯಗಳನ್ನು ಡಾ। ಶಿವರಾಂ ಸೂತ್ರಸಹಿತವಾಗಿ ಸಂಕ್ಷಿಪ್ತವಾಗಿ ತಿಳಿಸಿ, ಮನೋವಿಜ್ಞಾನಕ್ಕೂ ಯೋಗಕ್ಕೂ ಇರುವ ಸಾಮ್ಯವನ್ನು ಸ್ಪಷ್ಟಪಡಿಸುತ್ತಾರೆ.

‘‘ಮನಸ್ಸನ್ನು ಮಥಿಸಿ, ಮನಸ್ಸು ಮತ್ತು ದೇಹಗಳ ಅನ್ಯೋನ್ಯ ಸಂಬಂಧವನ್ನು ವಿಶದೀಕರಿಸುವ ಶಿವರಾಂ ಅಂದಿನ ಕಾಲದ ಋಷಿಯಂತೆ ಕಾಣುತ್ತಾರೆ.’’ ಎನ್ನುತ್ತಾರೆ ಡಾ। ಎಚ್‌. ಎನ್‌. ಗೋಪಾಲರಾವ್‌. ಈ ಮಾತಿನಲ್ಲಿಯ ತಥ್ಯಾಂಶವನ್ನು ಮನಗಾಣಲು ‘ಮನಮಂಥನ’ ಪುಸ್ತಕವನ್ನು ಅವಶ್ಯವಾಗಿ ಅವಲೋಕಿಸಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more