ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಆಡಳಿತ ಭಾಷೆ ಅನ್ನೋದು ನೆನಪಿರಲಿ!

By Staff
|
Google Oneindia Kannada News

Derrick Fullinfawರಾಷ್ಟ್ರೀಯವಾದಿ ಪಕ್ಷ ಬಿಜೆಪಿಯಿಂದ ಶಾಸಕರಾಗಿ ನೇಮಕವಾಗಿರೋ, ಆ ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರೂ ಆಗಿರೋ ಗೌರವಾನ್ವಿತ ಮಹಾ ಮಹಿಮರಾದ ಶ್ರೀಯುತ ಡೆರಿಕ್ ಫುಲಿನ್ ಫಾ ಎಂಬ ಆಂಗ್ಲೋ ಇಂಡಿಯನ್ ಕೋಟಾದ ಸತ್‌ಪ್ರಜೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯೋರು ಮೊನ್ನೆ ಮುತ್ತಿಗೆ ಹಾಕಿದ ಸುದ್ದಿ ಬಂದಿದೆ. ಸದನದಲ್ಲಿ ಕನ್ನಡದಲ್ಲಿ ಮಾತಾಡಲ್ಲ ಅಂದಿದ್ದಕ್ಕೆ ಈ ಪೂಜೆ ಆಗಿದೆಯಂತೆ. ಏನೇ ಅಂದರೂ ಇಂಥಾ ಒಂದು ಬೆಳವಣಿಗೆಗೆ ಭಾರತೀಯ ಜನತಾ ಪಕ್ಷವೇ ಕಾರಣ ಅನ್ನೋದನ್ನು ಮರೆಯೋ ಹಾಗಿಲ್ಲ ಗುರು!

ಅಲ್ಪಸಂಖ್ಯಾತರ ಮೆರೆಸಾಟದಲ್ಲಿ ಇವ್ರೂ ಮುಂದು!

ಮಾತೆತ್ತುದ್ರೆ ಕಾಂಗ್ರೆಸ್ಸೋರು, ದಳದೋರು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡ್ತಿದಾರೆ ಅಂತಾ ಸದಾ ಶಂಖ ಹೊಡ್ಕೊಳೊ ಭಾಜಪದವರು ಈಗ ಮಾಡಿದ್ದೇನು? ತನ್ನದೇ ಪಕ್ಷದ ಶಾಸಕ ಕನ್ನಡದಲ್ಲಿ ಮಾತಾಡ್ಲಿಲ್ಲ ಅಂದ್ರೆ ಇವರು ಯಾಕೆ ಸುಮ್ಮಿನಿದಾರೆ? ಫಾ ಅವ್ರು ಬರೀ ಕನ್ನಡದಲ್ಲಿ ಮಾತಾಡಿಲ್ಲ ಅಲ್ಲ, ನನಗೆ ಕನ್ನಡ ಬರುತ್ತೆ, ಆದ್ರೂ ಮಾತಾಡಲ್ಲ ಅನ್ನೋ ಉದ್ಧಟತನದ ಮಾತಾಡಿದ್ರೂ ಸರ್ವಶ್ರೀ ಯಡ್ಯೂರಪ್ಪನವರು, ಅನಂತಕುಮಾರ್ ಅವ್ರೂ, ಜಗದೀಶ್ ಶೆಟ್ಟರ್ ಅವ್ರೂ, ಸದಾನಂದ ಗೌಡರೂ ಯಾಕೆ ಸುಮ್ಮನಿದ್ದರು? ಹೀಗೆ ಮೌನವಾಗಿರೋದೂ ಕೂಡಾ ಫಾ ಅವ್ರು ಮಾಡಿದ್ದನ್ನು ಅನುಮೋದನೆ ಮಾಡಿದ ಹಂಗಲ್ವಾ? ಇದುಕ್ಕಿಂತ ತುಷ್ಟೀಕರಣ ಬೇರೆ ಬೇಕಾ ಗುರು? ಇದು ಧಾರ್ಮಿಕ ಅಲ್ಪಸಂಖ್ಯಾತ ಮತ್ತು ಭಾಷಾ ಅಲ್ಪಸಂಖ್ಯಾತ ಅನ್ನೋ ಡಬ್ಬಲ್ ಮೆರೆಸಾಟ ಅಲ್ವಾ? ಇವ್ರು ಕಾಂಗ್ರೆಸ್ಸೋರ ಬಗ್ಗೆ ಆಕ್ಷೇಪಣೆ ಮಾಡೋದ್ರಲ್ಲಿ ಏನಾದ್ರೂ ನಿಜಾಯ್ತಿ ಇದ್ಯಾ ಗುರು! ಅಥ್ವಾ ಅದು ಬರೀ ಓಟು ಗಿಟ್ಸೋ ತಂತ್ರಾನಾ?

ರಾಷ್ಟ್ರೀಯತೆ ಅಂದ್ರೆ ಕನ್ನಡ ಕಡೆಗಣ್ಸೋದಾ?

ತಾನು ಹುಟ್ಟಿ ಬೆಳೆದ, ವಾಸ ಇರೋ, ತನಗೆ ಬದುಕು-ಸ್ಥಾನಮಾನ ಕೊಟ್ಟಿರೋ ನೆಲದ ಭಾಷೆ, ಸಂಸ್ಕೃತಿ, ಜನರ ಬಗ್ಗೆ ಗೌರವ ಇಲ್ದೇ ಇರೋದನ್ನು ಸಹಿಸೋದು ಯಾವ ಸೀಮೆ ದೇಶಭಕ್ತಿ? ಯಾವ ಸೀಮೆ ರಾಷ್ಟ್ರೀಯತೆ ಗುರು? ಫಾ ಅವ್ರು ಅಲ್ಪಸಂಖ್ಯಾತರು ಅನ್ನೋ ಕಾರಣಕ್ಕೇ ಅವ್ರುನ್ನ ಖಂಡಿಸೋಕೆ ಆಗ್ತಿಲ್ವಾ ಇವ್ರು ಕೈಲಿ? ಕರ್ನಾಟಕದ ವಿಧಾನ ಸಭೇಲೆ ಈ ವ್ಯಕ್ತಿ ರಾಜಾರೋಷವಾಗಿ ನಂಗೆ ಕನ್ನಡ ಬರುತ್ತೆ, ಆದ್ರೂ ಮಾತಾಡಲ್ಲ ಅನ್ನೋದು ಉದ್ಧಟತನದ ಪರಮಾವಧಿ ಅಲ್ವಾ ಗುರು? ಇಂಥಾ ವ್ಯಕ್ತೀನ ತತ್ ಕ್ಷಣದಿಂದ ಬಿಜೆಪಿ ವಾಪಸ್ ಕರುಸ್ಕೋಬೇಕಿತ್ತು. ರಾಜಿನಾಮೆ ಕೊಡುಸ್ಬೇಕಿತ್ತು. ಕಡೇ ಪಕ್ಷ ಇವ್ರಿಂದ ಕ್ಷಮೆ ಕೇಳುಸ್ಬೇಕಿತ್ತು. ಅದ್ಯಾವ್ದೂ ಇಲ್ದೆ ಸಖತ್ ಜಾಣ ಮೌನ ವಹಿಸಿರೋದ್ರ ಅರ್ಥ ಏನು? ಇವ್ರ ಕಣ್ಣಲ್ಲಿ ರಾಷ್ಟ್ರೀಯತೆ ಅಂದ್ರೆ ಕನ್ನಡಾನ ಕಡೆಗಣ್ಸೋದೇನಾ ಗುರು?

ಎಂ.ಇ.ಎಸ್ ಜೊತೆ ಸರಸವಾಡ್ದೋರು!

ಹಿಂದೆಲ್ಲಾ ಬೆಳಗಾವೀಲಿ, ಕನ್ನಡ ನಾಡನ್ನು ಒಡೆಯೋದನ್ನೆ ಗುರಿ ಮಾಡ್ಕೊಂಡಿರೋ ಮಹಾರಾಷ್ಟ್ರ ಏಕೀಕರಣ ಸಮಿತಿ ಜೊತೆ ಕರ್ನಾಟಕ ರಾಜ್ಯ ಭಾರತೀಯ ಜನತಾ ಪಕ್ಷದೋರು ಹೊಂದಾಣಿಕೆ ಮಾಡ್ಕೋತಾ ಇದ್ದುದ್ದು, ಕಡೆಗೆ ಎಂಇಎಸ್ ಮೋರೆಗೆ ಮಸಿ ಮೆತ್ತಿದ ಪ್ರಕರಣ ಆದ ಮೇಲೆ ಅವ್ರು ಜೊತೆ ನೇರವಾಗಿ ಗುರುತಿಸಿಕೊಳ್ಳೋದನ್ನು ನಿಲ್ಲಿಸಿದ್ದನ್ನೂ ಜನ ಮರೆತಿಲ್ಲ. ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಅವ್ರುನ್ನ ಆರಿಸಿ ಕಳಿಸಿದೋರೂ, ನ್ಯಾಷನಲ್ ಕಾಲೇಜು ಮೈದಾನದಲ್ಲಿ ವೆಂಕಯ್ಯನಾಯ್ಡು ತೆಲುಗಲ್ಲಿ ಭಾಷಣ ಮಾಡ್ತಿದ್ದಾಗ ಚಪ್ಪಾಳೆ ತಟ್ತಿದ್ದೋರೂ ಇದೇ ಭಾಜಪಾದೋರೆ... ಇರ್ಲಿ, ಈಗ ನಿಜವಾಗ್ಲೂ ಭಾಜಪದೋರು "ತಾವು ಪ್ರತಿಪಾದಿಸೋ ರಾಷ್ಟ್ರೀಯತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಅನ್ನೋದಕ್ಕೆ ಏನಾದ್ರೂ ಸ್ಥಾನ ಇದ್ಯೇ? ಅಥ್ವಾ ಅದು ಗೌಣವಾದ ವಿಷಯಾನಾ?" ಅಂತ ಜನಕ್ಕೆ ಸ್ಪಷ್ಟ ಪಡಿಸಿ ತಮ್ಮ ನಡವಳಿಕೆ ಮೂಲಕ ವಿವರಣೆ ಕೊಡಬೇಕಾಗಿದೆ ಗುರು!

(ಸ್ನೇಹಸೇತು : ಏನ್‌ಗುರು?)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X