ಬಾಯಲ್ಲಿ ಭಗವದ್ ಗೀತೆ ಬಗಲಲ್ಲಿ ಬಾಕು

Subscribe to Oneindia Kannada

JD (S) Turn Coats"ಇಲ್ಲಿನ ನಾಡು ನುಡಿ ಕಾಪಾಡಕ್ಕೆ ಈ ರಾಷ್ಟ್ರೀಯ ಪಕ್ಷಗಳಿಂದ ಆಗದ ಕೆಲ್ಸ, ನಮ್ಗೊಂದು ನಮ್ಮದೇ ಮಣ್ಣಿನ ಪ್ರಾದೇಶಿಕ ಪಕ್ಷ ಇದ್ರೆ ಚೆನ್ನ" ಅಂತ ನಾಡಿನ ಜನ್ರು ಅಂದ್ಕೊತಾ ಇದಾರೆ ಅನ್ನೋ ಸುಳಿವು ಸಿಕ್ಕಿದ್ದೇ ತಡ ಜಾತ್ಯಾತೀತ ಜನತಾ ದಳದ ಮಹಾದಂಡನಾಯಕರಾದ ಶ್ರೀಮಾನ್ ದೇವೇಗೌಡ್ರ ಸುಪುತ್ರರೂ, ಅಂದಿನ ಸರ್ಕಾರದ ದಂಡನಾಯಕರೂ ಆಗಿದ್ದ ಶ್ರೀಯುತ ಕುಮಾರ ಸ್ವಾಮಿಯೋರು... ಕಣ್ಣೀರು ಸುರಿಸುತ್ತಾ "ಹೌದು, ನಮ್ಮ ಪಕ್ಷಾನೂ ಸೇರಿದ ಹಾಗೆ ಯಾವ ರಾಷ್ಟ್ರೀಯ ಪಕ್ಷಗಳೂ ಈ ನಾಡಿಗೆ ನ್ಯಾಯ ಒದುಗುಸ್ತಿಲ್ಲ, ಇದರಿಂದ ನಾನಂತೂ ಸಖತ್ ಬೇಸತ್ತು ಹೋಗಿದೀನಿ, ನಾನೇ ಒಂದು ಪ್ರಾದೇಶಿಕ ಪಕ್ಷ ಕಟ್ಬೇಕು ಅಂತ ಗಂಭೀರವಾಗಿ ಯೋಚುಸ್ತಿದೀನಿ" ಅಂದ್ಬಿಟ್ರು. ಇದನ್ನು ಮಾಡಕ್ ಅವ್ರು ಪ್ರಯತ್ನ ಪಟ್ರೋ ಇಲ್ವೋ ಒಟ್ನಲ್ಲಿ ಅಂಥಾ ಒಂದು ಪಕ್ಷಾ ಅಂತು ಅವ್ರುಗೆ ಇವತ್ತಿನ ತನಕಾ ಕಟ್ಟಕ್ ಅಗಿಲ್ಲ.


ಪ್ಲೇಟ್ ಬದಲಾಯ್ಸಿದ ಕುಮಾರಣ್ಣ!

ಆರು ತಿಂಗಳ ಹಿಂದೆ ತಮ್ಮ ಪಕ್ಷಾನೂ ರಾಷ್ಟ್ರೀಯ ಪಕ್ಷದ ಸಾಲಲ್ಲಿ ನಿಲ್ಲಿಸಿದ್ದ ಇವ್ರು, ಈಗ ಚುನಾವಣೆ ಹತ್ರ ಆಗ್ತಿದ್ ಹಾಗೇ ತಮ್ಮದು ಪ್ರಾದೇಶಿಕ ಪಕ್ಷಾ ಅಂತ ಊರೂರು ಅಲಕೊಂಡು ಮತ ಕೇಳ್ತಿರೋದು ನೋಡಿದ ಜನ "ಇದೇನ್ರಣಾ, ರಾಷ್ಟ್ರೀಯ ಪಕ್ಷ ಅಂದ್ರೆ ಗಿಟ್ತಿಲ್ಲ ಅಂತ ಪ್ರಾದೇಶಿಕ ಪಕ್ಷಾ ಅನ್ನೋಕ್ ಹೊಂ‍ಟವ್ರಲ್ಲಾ ಇವ್ರು" ಅಂತ ಮುಸಿಮುಸಿ ನಗ್ತಾವ್ರೆ ಗುರು! ಅನುಕೂಲಕ್ ತಕ್ಕ ಹಾಗೆ ಪ್ಲೇಟ್ ಬದಲಾಯುಸ್ತಿರೋ ಕುಮಾರಣ್ಣ ಮತ ಬೇಕು ಅಂದ್ರೆ ಏನೇನೆಲ್ಲಾ ಮಾಡಕ್ ಮುಂದಾಗ್ತಾರೆ ಅನ್ನಕ್ಕೆ ಇಲ್ಲಿದೆ ನೋಡಿ ಸ್ಯಾಂಪಲ್ಲು.

ಪರಭಾಷೆಯೋರ ಓಲೈಕೆ

ಹೊಟ್ಟೆ ಪಾಡಿಗಾಗಿ ವಲಸೆ ಬರೋ ಬೇರೆ ಭಾಷೆಯೋರು ಇಲ್ಲಿನ ಮುಖ್ಯವಾಹಿನೀಗೆ ಬರಬೇಕಾದ್ದು ಅವ್ರ ಧರ್ಮವಾದ್ರೆ, ಅವರುಗಳು ಹಾಗೆ ಬರೋಕೆ ನಾವು ಉತ್ತೇಜನ ಕೊಡಬೇಕಾದ್ದು ನಮ್ಮ ಕರ್ತವ್ಯ ಗುರು. ಆದರೆ ಅಧಿಕಾರ ಹಿಡೀಬೇಕು ಅಂತ ಪರಭಾಷಿಕರ ಓಲೈಕೆಗೆ ಮುಂದಾಗಿರೋ ಜಾತ್ಯಾತೀತ ಜನತಾ ದಳದೋರ ಬೆಂಗಳೂರಿನ ಶಾಂತಿನಗರದ ಸಭೆಯಲ್ಲಿ ಮಿರಮಿರ ಮಿಂಚಿದ್ದು ಮಾತ್ರಾ ತಮಿಳು ಗುರು.

"ಬಾಯಲ್ಲಿ ಭಗವದ್ ಗೀತೆ ಬಗಲಲ್ಲಿ ಬಾಕು" ಅನ್ನೋಕೆ ಇದಕ್ಕಿಂತ ಉದಾಹರಣೆ ಬೇಕಾ? ಹೀಗೆ ಹೊರಗಿಂದ ಬಂದವ್ರನ್ನು ಹೊರಗಿನವರಾಗೇ ಉಳ್ಸಬೇಕು ಅಂತಾ ಹುನ್ನಾರ ಮಾಡೋದು ನಾಡಿನ ಹಿತಕ್ಕೆ ಮಾರಕವಾಗಲ್ವಾ? ಇಂಥಾ ನಡವಳಿಕೆಗಳಿಂದ್ಲೇ ಬೆಂಗಳೂರಿನ ಬಡಾವಣೆಗಳಿಗೆ, ರಸ್ತೆಗಳಿಗೆ ಬೇರೆ ಭಾಷೆಯೋರ ಹೆಸರುಗಳು ಬರೋದು, ಬೆಂಗಳೂರಿನಲ್ಲಿ ನಾವೆಂದೂ ಕಂಡು ಕೇಳರಿಯದ ತಿರುವಳ್ಳುವರ್ ಪ್ರತಿಮೆ ನಿಲ್ಲುಸ್ತೀವಿ ಅನ್ನೋದು, ಬೆಂಗಳೂರನ್ನ ಕೇಂದ್ರಾಡಳಿತ ಪ್ರದೇಶ ಮಾಡಿ ಅಂತಾ ಕೂಗೆಬ್ಬಿಸೋದು ನಡ್ಯೋದು ಗುರು.

ದುರಂತವೆಂದರೆ ಇಂತಹ ಓಲೈಕೆಯ ನಡವಳಿಕೆ ರಾಷ್ಟ್ರೀಯ ಪಕ್ಷಗಳಿಂದ ಮಾತ್ರಾ ಆಗ್ತಿಲ್ಲ, ನಾವು ಈ ಮಣ್ಣಿನ ಮಕ್ಕಳು ಅಂತ ಹೇಳ್ಕೊಳ್ತಿರೋರಿಂದ್ಲೂ ಆಗ್ತಿದೆ. ಎಲ್ಲೆಲ್ಲಿ ಯಾವ್ಯಾವ ಪರಭಾಷಿಕ್ರು ಇದಾರೋ ಅಲ್ಲಲ್ಲಿ ಅವರವರ ಭಾಷೇಲಿ ಮತ ಕೇಳೋದು ಮಹಾತಂತ್ರಗಾರಿಕೆ ಥರಾ ಕಾಣ್ಸುದ್ರೂ, ತಾತ್ಕಾಲಿಕವಾಗಿ ಮತಗಳ್ನ ತಂದುಕೊಟ್ರೂ ಕನ್ನಡಿಗರ ಕಣ್ಣಲ್ಲಿ ಇವ್ರುಗಳ್ನ ಕೀಳು ಮಾಡಿಬಿಡುತ್ತೆ ಅನ್ನೋದು ಇವರಿಗೆ ಯಾಕೋ ಅರಿವಾಗ್ತಿಲ್ಲ ಗುರು. "ಕನ್ನಡಿಗರನ್ನು, ಕರ್ನಾಟಕವನ್ನು ರಾಷ್ಟ್ರೀಯ ಪಕ್ಷಗಳು ಹಾಳು ಮಾಡಿಬಿಡ್ತವೆ. ಪ್ರಾದೇಶಿಕ ಪಕ್ಷಗಳನ್ನು ಬೆಳೆಸಿ. ನಮ್ಮದು ಪ್ರಾದೇಶಿಕ ಪಕ್ಷ. ನಮಗೇ ಮತ ಕೊಡಿ, ನಾವು ಉದ್ಧಾರ ಮಾಡ್ತೀವಿ" ಅನ್ನೋರ ನಿಜವಾದ ಬಣ್ಣ ಇದು. ಮತ ಬೇಕು ಅಂದ್ರೆ ಇವತ್ತು ತಮಿಳಲ್ಲಿ ಸಭೆ ಮಾಡಕ್ಕೆ, ಪ್ರಚಾರಕ್ಕೆ ಮುಂದಾಗೊ ಮಾನಗೇಡಿಗಳು ನಾಳೆ ಇಲ್ಲಿರೋ ತಮಿಳ್ರನ್ನು ಸಂತೋಷ ಪಡ್ಸಕ್ಕೆ ತಮಿಳುನಾಡಿಗೆ ಹೊಗೆನಕಲ್ಲನ್ನೂ ಬಿಟ್ಟುಕೊಟ್ಟಾರು, ಕಾವೇರೀನೂ ಬಿಟ್ಟಾರು, ನಿಪ್ಪಾಣಿನ್ನೂ ಕೊಟ್ಟಾರು, ಬೆಳಗಾವಿನೂ ಕೊಟ್ಟಾರು. ಅಷ್ಟ್ಯಾಕೆ, ಕನ್ನಡ-ಕರ್ನಾಟಕ-ಕನ್ನಡಿಗರ ಬಗ್ಗೆ ಒಂದೇ ಒಂದು ಅಕ್ಷರಾನಾದ್ರೂ ಈ ಪಕ್ಷದ ಪ್ರಣಾಳಿಕೆಯಲ್ಲಿ ಇರುತ್ತಾ ಅನ್ನೋ ಅನುಮಾನ ಕನ್ನಡಿಗರನ್ನು ಕಾಡ್ತಿದೆ ಗುರು.

ನಿಜವಾದ ಪ್ರಾದೇಶಿಕ ಪಕ್ಷ ಹೀಗಿರುತ್ತೆ

ಇಲ್ಲಿನ ಜನರಿಂದ ಹುಟ್ಟಿದ, ಇಲ್ಲಿನ ಜನರ ಹಿಡಿತದಲ್ಲಿರುವ, ಕನ್ನಡ-ಕನ್ನಡಿಗ-ಕರ್ನಾಟಕಗಳ ಹಿತಾಸಕ್ತಿಯನ್ನು ತನ್ನ ಕೇಂದ್ರವಾಗಿ ಮಾಡಿಕೊಂಡು ನಾಡು, ನುಡಿ, ಗಡಿ, ನದಿ, ಉದ್ಯೋಗ, ಉದ್ದಿಮೆ... ಎಲ್ಲ ಕ್ಷೇತ್ರಗಳಲ್ಲಿ ಹೇಗೆ ಕ-ಕ-ಕಗಳ ಹಿತಕ್ಕೆ ಪೂರಕವಾಗಿ ಇಂಥಿಂಥಾ ನಿಲುವು ಇಟ್ಕೊಂಡಿದೀವಿ, ಹೀಗ್ ಹೀಗೆ ನಡ್ಕೋತೀವಿ, ವಲಸಿಗರನ್ನು ಮುಖ್ಯವಾಹಿನಿಗೆ ತರೋಕೆ ಮುಂದಾಗ್ತೀವಿ ಅಂತ ಜನರ ಮುಂದೆ ಹೋಗೋರು ನಿಜವಾದ ಪ್ರಾದೇಶಿಕ ಪಕ್ಷದೋರು ಗುರು.

ಮಾತಲ್ಲಿ ನಮ್ಮದು ಪ್ರಾದೇಶಿಕ ಪಕ್ಷ ಅನ್ನೋದು, ನಮಗೇ ಮತ ಹಾಕಿ ಅನ್ನೋದು... ನಡವಳಿಕೇಲಿ ಮಾತ್ರಾ ಭಾಷಾ ಅಲ್ಪಸಂಖ್ಯಾತರನ್ನು ಓಲೈಸೋದು, ಅಧಿಕಾರಕ್ಕಾಗಿ ಬಗೆ ಬಗೆ ಬಣ್ಣ ಕಟ್ಟೋದು ಎಷ್ಟು ಕೀಳಲ್ವಾ ಗುರು!


( ಸ್ನೇಹ ಸೇತು : ಏನ್ ಗುರು )

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...