ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ..

By Staff
|
Google Oneindia Kannada News
M.R. Dattatri ಎಂ.ಆರ್‌. ದತ್ತಾತ್ರಿ,
ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ
[email protected]

ಗುಬ್ಬಕ್ಕ ಕಾಗಕ್ಕನ ಕಥೆ ಕೇಳಿ ಬಹಳ ದಿನವಾಯಿತು ಅಂದಿರಲ್ಲ ? ಕೆಂಪು, ಹಸುರು, ನೀಲಿ ಅಂತೆಲ್ಲಾ ಕಡು ದಟ್ಟಬಣ್ಣದ ಮುಖಪುಟದಲ್ಲಿ ಒಂದು ಕೈ ಕತ್ತರಿಸಿ ಬಿದ್ದಿದ್ದರೂ ಇನ್ನೊಂದರಲ್ಲಿ ರಥದ ಚಕ್ರವನ್ನೆತ್ತಿ ಕುರು ಸೈನ್ಯವನ್ನು ಸದೆಬಡಿಯುತ್ತಿರುವ ಅಭಿಮನ್ಯುವನ್ನು ಹೊತ್ತ ‘ಚಂದಮಾಮ’ವನ್ನು ಬೆಚ್ಚಗೆ ಕುತ್ತಿಗೆಯ ತನಕ ಹೊದ್ದು ಹಾಸಿಗೆಯ ಮೇಲೆ ಅಂಗಾತ ಮಲಗಿ ತಿರುವಿಹಾಕುತ್ತಿದ್ದಾಗ ಎಷ್ಟೊಂದು ಕಥೆಗಳು ಸಿಗುತ್ತಿದ್ದವು ಅಲ್ಲವೆ ? ಇದೂ ಅಂಥದ್ದೇ ಕಥೆ. ಚಂದಮಾಮದ ಚಿತ್ರಗಳನ್ನು ಊಹೆ ಮಾಡಿಕೊಂಡರೆ ತುಸು ರಂಜನೀಯವಾದೀತು.

ಕಾಗಕ್ಕ ಗುಬ್ಬಕ್ಕಗಳು ಸ್ನೇಹಿತರಾಗುವುದು ಚಂದಮಾಮದಲ್ಲೇ. ಬೇರೆ ಕಡೆ ಹೇಗೆ ಸಾಧ್ಯ ಹೇಳಿ? ಅಮಾವಾಸ್ಯೆಯಷ್ಟು ದಟ್ಟಗಪ್ಪಿನ, ಅಷ್ಟೇನೂ ಸಭ್ಯತೆ ತಿಳಿಯದ ಕಾಗಕ್ಕ ಹತ್ತಿರ ಬಂದರೆ ಸುತ್ತಮುತ್ತಲ ಹಕ್ಕಿಗಳಲ್ಲಿ ತಾನೇ ಬಿಳಿಯ ಅಂತ ಐಸ್‌ಕ್ರೀಮ್‌ನಂತೆ ಮೃದುವಾದ ಮೈಯನ್ನು ಕೊಂಕಿಸಿ ಹೆಮ್ಮೆಯಿಂದ ತನ್ನ ಜಾತಿಯನ್ನು ಬಿಟ್ಟು ಒಂದಿಂಚೂ ಕದಲದ ಗುಬ್ಬಕ್ಕ ಹೇಗೆ ತಾನೇ ಸೇರಿಸಿಯಾಳು?


ಆದರೆ ನಮ್ಮ ಕಥೆಯಲ್ಲಿ ಕಾಗಕ್ಕ ಗುಬ್ಬಕ್ಕ ಸ್ನೇಹಿತರಾದರು. ಹೇಗಾದರು ಅಂತ ಕೇಳಬೇಡಿ, ಚಂದಮಾಮ ಹುಡುಕಿದರೆ ಉತ್ತರ ಸಿಕ್ಕೀತು. ಅಂತೂ, ಆಗಾಗ ಸಿಕ್ಕಿ ‘ಏನೇ ನಿಮ್ಮನೆಯಲ್ಲಿ ಸಾರು ಇವತ್ತು?’, ‘ಆಚೆ ಮರದ ಬಿನ್ನಾಣಗಿತ್ತಿ ಕೋಗಿಲೆಯ ಜಂಬ ನೋಡಿದೆಯಾ? ಮೊನ್ನೆ ಏನಾಯ್ತು ಅಂದರೆ ...’. ಹೀಗೆ, ಮಾತು, ಮಾತು, ಮಾತು ... ಮಾತು ಮನೆ ಕೆಡಿಸುತ್ತೆ ಅಂತ ಹೇಳಿದ ದಡ್ಡನ್ಯಾರು?

ಗುಬ್ಬಕ್ಕನ ಮನೆ ಮಾತ್ರ ಹೇಳಿ ಕೇಳಿ ಒಳ್ಳೇ ಲೊಕಾಲಿಟಿಯಲ್ಲಿ ಇತ್ತು. ಮಾವಿನಮರ, ಮರದ ಕೆಳಗೆ ಒಂದು ಋಷ್ಯಾಶ್ರಮ, ಪಕ್ಕದಲ್ಲಿ ಜುಳು ಜುಳು ಮಂಜುಳ ನಿನಾದದ ಪವಿತ್ರ ನದಿ. ಹೋಮದ ಮಂತ್ರ ನಿರಂತರವಾಗಿ ಕಿವಿಯ ಮೇಲೆ ಬೀಳುತ್ತಲಿರುತ್ತದೆ. ಋಷಿಗಳೆಲ್ಲಾ ಸೇರಿ ಧರ್ಮ ಜಿಜ್ಞಾಸೆಯನ್ನು ನಡೆಸುವಾಗ ಬೇಡ ಬೇಡವೆಂದರೂ ಅಷ್ಟಷ್ಟು ಕೇಳಿಸುತ್ತದೆ. ಬ್ರಹ್ಮಚರ್ಯ ಏಕೆ ಶ್ರೇಷ್ಠ ? ಸಂಸಾರಸ್ಥನ ಧರ್ಮ ನಿಯಮಗಳೇನು? ಯಾವ ಗುಣಗಳು ಜೀವವನ್ನು ಹಾಳುಗೆಡವುತ್ತವೆ ? ಭಗವಂತನ ಸ್ವರೂಪವೇನು ? ನಿರಾಕಾರ ಆತ್ಮ ಭೌತಿಕ ವ್ಯಕ್ತತೆಗೆ ದೇಹವನ್ನೇಕೆ ಆಶ್ರಯಿಸುತ್ತದೆ ? ಮಾವಿನ ಮರದ ಮೇಲಿನ ಸಾತ್ವಿಕ ಗುಬ್ಬಿಗಳೆಲ್ಲಾ ಕಿಚಿಗುಡುವುದನ್ನು ನಿಲ್ಲಿಸಿ ಈ ಮಾತುಗಳನ್ನು ಕೇಳುತ್ತವೆ. ಕೇಳಿ ಕೇಳಿ ಕೆಲವಕ್ಕೆ ತಾವೇ ಒಂದು ಯಜ್ಞ ಮಾಡಿಸುವಷ್ಟು ಜ್ಞಾನ ಸಂಪಾದನೆಯಾಗಿದೆ. ಇಂತಹ ಶ್ರೇಷ್ಠತೆಯ ಗುಬ್ಬಕ್ಕನನ್ನು ಈ ಜಾಗಕ್ಕೇ ಸೇರದ, ಆತ್ಮ ಪರಮಾತ್ಮ ಒಂದನ್ನೂ ಕಾಣದ ಕಾಗಕ್ಕ ಸ್ನೇಹಿತೆಯನ್ನಾಗಿ ಮಾಡಿಕೊಂಡಳು ಅಂದರೆ ಅದು ಆಶ್ಚರ್ಯದ ಮತ್ತು ಕಾಗಕ್ಕನ ಕಡೆಯಿಂದ ಹೆಮ್ಮೆಯ ವಿಷಯವಲ್ಲವೇ?

ಹೀಗಿರಲು, ಒಂದು ದಿನ ಗುಬ್ಬಕ್ಕ ಕಾಗಕ್ಕನಿಗೆ ಒಂದು ಸಿಹಿಸುದ್ದಿಯನ್ನು ಹೇಳಿತು. ಬದಲಾಗಿ, ಕಾಗಕ್ಕ ಗುಬ್ಬಕ್ಕನಿಗೂ ಒಂದು ಸಿಹಿ ಸುದ್ದಿಯನ್ನು ಹೇಳಿತು. ಗೊತ್ತಾಯಿತಲ್ಲ ಏನೂಂತ ? ಇಬ್ಬರು ಹೆಂಗಸರು ಮುಖ ಕೆಂಪಗೆ ಮಾಡಿಕೊಂಡು ಪಿಸಿಪಿಸಿ ಮಾತನಾಡುತ್ತಾ ಈ ವಿಷಯವನ್ನು ತಮ್ಮ ಗಂಡಂದಿರಿಗೆ ಹೇಳಿದಾಗ ಅವರ ಮುಖ ಕೆಂಪಾಯಿತೋ ಕಪ್ಪಾಯಿತೋ ಎನ್ನುವ ವಿಚಾರ. ಎಚ್ಚರಗೊಂಡಂತೆಲ್ಲಾ ಹೊಟ್ಟೆಯಾಳಗಿನದು ಕೀಟಲೆಗಾಗಿ ಪಟಪಟನೆ ಒದೆಯುವ ವಿಚಾರ.

ಸರಿ, ಗುಬ್ಬಕ್ಕನಿಗೇ ಮೊದಲು ಹೆರಿಗೆ ಆಯ್ತು. ಕಾಗಕ್ಕ ಸಂಭ್ರಮದಿಂದ ಹುಡುಕಿ ಹುಡುಕಿ ಮೆತ್ತಗೆ ಹತ್ತಿಯಂತಿರುವ ಒಂದು ನಯವಾದ ಎಳೇ ಹುಳುವನ್ನು ಆರಿಸಿ ಹಲ್ಲೂ ಊರದಂತೆ ಮೆತ್ತಗೆ ಕಚ್ಚಿಕೊಂಡು ಬಂದು ಬಾಣಂತಿಯನ್ನು ನೋಡಿತು. ‘ಛೀ, ಛೀ! ನಾವು ಹುಳ ಹುಪ್ಪಟೆಗಳನ್ನು ತಿನ್ನುವುದ ನಿಲ್ಲಿಸಿ ಬಹಳ ದಿನವಾಯ್ತು. ದೂರಕ್ಕೆ ಎಸೆದು ಬಾ. ಕೆಳಗೆ ಹೋಮಕುಂಡಕ್ಕೇನಾದರೂ ಬಿದ್ದು ಅಪಚಾರವಾದೀತು’ ಎಂದಿತು ಗುಬ್ಬಕ್ಕ. ಅದರ ಪಕ್ಕದಲ್ಲಿ ಬೆಣ್ಣೆಯ ಸಣ್ಣ ಮುದ್ದೆಯಂತೆ ಅದರ ಮರಿ ಮಲಗಿತ್ತು. ಮರಿಯ ನಾಮಕರಣದ ಮಹೂರ್ತ ಗೊತ್ತು ಮಾಡಲು ಸುತ್ತಮುತ್ತಾ ಕೂತಿದ್ದ ಗುಬ್ಬಣ್ಣಂದಿರಿಗೆಲ್ಲಾ ಕಾಗಕ್ಕ ಬಂದದ್ದರಿಂದ ಮುಜುಗರವಾದದ್ದು ದಿಟ.

ಕಾಗಕ್ಕನಿಗೂ ಹೆರಿಗೆ ಆಯಿತು. ಇದ್ದಿಲನ್ನು ಕಲಸಿ ಉಂಡೆಗಟ್ಟಿದಂತೆ ಮರಿ. ಪಕ್ಕದಲ್ಲಿ ಸಂತೃಪ್ತ ತಾಯಿ. ಹೋಮಕ್ಕೆ ತುಪ್ಪ ಸುರಿಯುವ ಆಕಾರದ್ದೇ ಸಣ್ಣ ದೊನ್ನೆಯಲ್ಲಿ ಹಸುವಿನ ಹಾಲನ್ನು ತಂದಳು ಗುಬ್ಬಕ್ಕ, ಬಾಣಂತಿಯನ್ನು ನೋಡಲು. ಆವರೆಗೂ ಅವಳು ಕಾಗಕ್ಕನ ಮನೆಯನ್ನು ನೋಡೇ ಇರಲಿಲ್ಲ. ಪವಿತ್ರ ನದಿಯನ್ನು ದಾಟಿ ಹಾರುವ ಅವಶ್ಯಕತೆಯೇ ಅವಳಿಗೆ ಬಿದ್ದಿರಲಿಲ್ಲ. ರಾಮಾ! ರಾಮಾ! ಅದೆಂತಹಾ ಜಾಗ! ಗವ್‌ ಎನ್ನುವ ಹಲಸಿನ ಮರದ ಮೇಲೆ ಗವಿಯಂತಹಾ ಗೂಡು. ಕೆಳಗೆ ಕಟುಕನೊಬ್ಬನ ಕಸಾಯಿಖಾನೆ! ಅಷ್ಟೊಂದು ರಕ್ತ ಮಾಂಸಗಳನ್ನು ಗುಬ್ಬಕ್ಕ ಕಂಡೇ ಇರಲಿಲ್ಲ. ತಾನು ಎಂಥವಳ ಸ್ನೇಹ ಮಾಡಿಬಿಟ್ಟೆ ಅಂತ ಗುಬ್ಬಕ್ಕನಿಗೆ ತನ್ನ ಮೇಲೇ ಅನುಕಂಪ ಮೂಡಿತು.

ಕಾಗಕ್ಕನಿಗೂ ರೇಗಿತು. ‘ನಾನಿರುವ ಜಾಗ ಹಾಗಿದ್ದರೇನಾಯಿತು ಹೇಳು. ಮಾಂಸ ತಿಂದ ಮಾತ್ರಕ್ಕೇ ಯಾರೂ ಹಾಳಾಗೋಲ್ಲ’ ಎಂದಿತು.

‘ಹಾಳಾಗದೇ? ಅದಕ್ಕೇ ನಿಮ್ಮವೆಲ್ಲಾ ವಯಸ್ಸಿಗೆ ಬಂದೊಡನೆಯೇ ಚಪಲ ಚನ್ನಿಗರಾಯರಾಗಿ ದೂರ ಓಡುತ್ತವೆ’.

‘ಹಾಗೋ! ಓಡಿ ಹೋಗದಂತೆ ಬೆಳೆಸುವುದು ನನಗೆ ಗೊತ್ತಿದೆ. ಋಷಿಗಳ ಸ್ನಾನ ಕಾಣದ ಜಟೆಯ ಮೇಲೆ ಉಸಿರುಗಟ್ಟೋ ಹೊಗೆಯಲ್ಲಿ ಗೂಡು ಕಟ್ಟಿದೊಡನೆಯೇ ನಿನ್ನ ಮಕ್ಕಳು ನಿನ್ನ ಪುಕ್ಕಕ್ಕೇ ಅಂಟಿಕೊಂಡು ಉಳಿತಾರೆ ಅಂತ ತಿಳಿಬೇಡ. ಅವರೇ ಮೊದಲು ಓಡಿ ಹೋಗುವವರು’.

‘ನನ್ನ ಮಗನೇ! ನಾನು ಸಾಯುವವರೆಗೂ ನನ್ನ ಬಿಟ್ಟು ಸರಿಯುವವನಲ್ಲ’.

ಇವರಿಬ್ಬರ ಮಾತು ಕೇಳಿ ಪಕ್ಕದ ಮರದ ಕೋಗಿಲಮ್ಮ ಕಿಸಕ್ಕನೆ ನಕ್ಕು ‘ಏನ್ರೇ ಚಿನಾಲೀರಾ, ರೆಕ್ಕೆ ಬಲಿತ ಮೇಲೆ ಓಡಿಹೋಗುವುದು ಹಕ್ಕಿಗಳ ಧರ್ಮ ಅಲ್ವೇನ್ರೇ’ ಅಂತು. ಇವರಿಬ್ಬರೂ ಒಬ್ಬರನ್ನೊಬ್ಬರು ಬೈಯುತ್ತಾ ಇದ್ದ ಸಿಟ್ಟಿನ ಭರದಲ್ಲಿ ಬೇರೆ ಯಾರ ಮಾತುಗಳನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ.

ಅಲ್ಲಿಗೆ ಅವರಿಬ್ಬರ ಸ್ನೇಹ ಮುಗಿಯಿತು. ಸಣ್ಣ ಐಸ್‌ಕ್ರೀಂ ಕೋನ್‌ ಥರ ಇರುವ ಗುಬ್ಬಿಮರಿ, ಇದ್ದಿಲುಗಳನ್ನು ಅಪ್ಪಚ್ಚಿ ಮಾಡಿದಂತಿದ್ದ ಕಾಗೆಮರಿ ತಮ್ಮ ತಮ್ಮ ಗೂಡುಗಳಲ್ಲೇ ಬೆಳೆದವು. ತಮ್ಮ ತಮ್ಮ ಬಣ್ಣದವರೊಂದಿಗೇ ಆಟವಾಡಿದವು. ತಮ್ಮ ತಮ್ಮ ಹಿರಿಯರು ಹೇಳಿಕೊಟ್ಟ ಹಾಡುಗಳನ್ನೇ ಕಲಿತವು.

ಹೀಗಿರುವಾಗ ಒಮ್ಮೆ, ರೆಕ್ಕೆ ಸ್ವಲ್ಪ ಸ್ವಲ್ಪ ಬಲಿತಿರುವ ಗುಬ್ಬಚ್ಚಿ ಮರಿ ಹಾರ್ತಾ ಹಾರ್ತಾ ಶಿವನ ಜಟೆಯಿಂದ ಧುಮ್ಮಿಕ್ಕಿದಂತೆ ಹರಿವ ಪವಿತ್ರ ನದಿಯನ್ನು ದಾಟೇ ಬಿಡ್ತು. ಎಲ್ಲಿ ಬಂದೆ ಎಲ್ಲಿ ಬಂದೆ ಅಂತ ಕುತೂಹಲದಿಂದ ನೋಡುತ್ತಿರುವಾಗ ಕಾಗಕ್ಕನ ಮನೆಯ ಕೆಳಗಿನ ಕಸಾಯಿಖಾನೆ ಕಾಣಿಸ್ತು. ಸುಮ್ನೆ ಸ್ವಲ್ಪ ಹೊತ್ತು ಕುಳಿತು ನೋಡಿತು. ಅಲ್ಲಿ ಕತ್ತರಿಸಿ ಬೀಳುವ ತುಂಡುಗಳಿಗೆ ತಾನು ಈವರೆಗೂ ಕಾಣದ ಬಣ್ಣದ ಹಕ್ಕಿಗಳೆಲ್ಲಾ ಮುಗಿಬಿದ್ದು ಕಿತ್ತಾಡುವುದ ಕಂಡು ಆಶ್ಚರ್ಯವಾಯ್ತು. ಅಲ್ಲೇ ದೂರದಲ್ಲಿದ್ದು ಅಮ್ಮ ಕೊಟ್ಟ ತುಂಡನ್ನ ಕಣ್ಣು ಮುಚ್ಚಿ ನುಂಗಿಬಿಡೋದೋ ಅಥವಾ ಅಮ್ಮನಿಗೆ ಕಾಣದಂತೆ ಉಗಿದುಬಿಡೋದೋ ಅಂತ ಯೋಚನೆಯಲ್ಲಿದ್ದ ಒಂದು ಕಾಗೆಮರಿ ಇದನ್ನ ನೋಡ್ತು. ‘ಬೇಕಾ’ ಅಂತ ಕೇಳಿತು. ಗುಬ್ಬಿ ಮರಿಗೆ ಅರ್ಧ ಕುತೂಹಲ, ಅರ್ಧ ಹೆದರಿಕೆ. ‘ಬೇಕಾದ್ರೆ ಹೇಳು ಕೊಡ್ತೀನಿ, ಇಲ್ದಿದ್ರೆ ಉಗ್ದು ಬಿಡ್ತೀನಿ’ ಅಂತ ಕಾಗೆಮರಿ ಹೇಳ್ದಾಗ ಗುಬ್ಬಿಮರಿ ‘ಬೇಕು’ ಅಂತು.

ಕಾಗೆಮರಿ ಗುಬ್ಬಿಮರಿ ಜೊತೆ ಹಾರ್ತಾ ಹಾರ್ತಾ ಗುಬ್ಬಿಗಳ ಈ ಋಷ್ಯಾಶ್ರಮಕ್ಕೆ ಬಂತು. ಕಾಗೆಮರಿ ಒಂದು ಕ್ಷಣ ಕಣ್ಣು ಮುಚ್ಚಿತು. ದೂರದಲ್ಲಿ ಕೇಳಿ ಬರುತ್ತಿದ್ದ ವೇದ ಘೋಷ, ಹವಿಸ್ಸಿನ ಚರು ಚರಚರನೆ ಉರಿಯುವಾಗ ಬರುವ ಗಮ್ಮೆನ್ನುವ ಹೊಗೆ, ತನ್ನ ಮನೆಯ ಹತ್ತಿರ ರೌದ್ರಾವತಾರ ತಾಳಿ ಇಲ್ಲಿ ಮಗು ಅಂಬೆಗಾಲಿಕ್ಕಿದಂತೆ ಜುಳುಜುಳು ಹರಿವ ಪವಿತ್ರ ನದಿ. ಕಾಗೆಮರಿ ಹಾಗೇ ಎಷ್ಟು ಹೊತ್ತು ಧ್ಯಾನ ಮಾಡಿತೋ!

ಗುಬ್ಬಿಮರಿ ದಿನಾ ನದಿಯನ್ನು ದಾಟಿ ಕಸಾಯಿಖಾನೆಯ ಮುಂದೆ ಆಕಾಶದಿಂದ ಬೀಳುವ ಮಾಂಸದ ತುಂಡಿಗೆ ಕಾಯುತ್ತಾ ಕೂರತೊಡಗಿತು. ಕಾಗೆಮರಿ ದಿನಾ ಹೊಳೆದಾಟಿ ಯಾರೂ ನೋಡದ ಒಂದು ದೂರದ ಕೊಂಬೆಯಲ್ಲಿ ಕುಳಿತು ಹೋಮ, ಯಜ್ಞಗಳನ್ನು ನೋಡುತ್ತಾ ಅವರ ಮಾತುಗಳನ್ನೆಲ್ಲಾ ಕೇಳತೊಡಗಿತು. ಹೊಟ್ಟೆ ಹಸಿದರೆ ಈ ಪ್ರಾಣಿಸಂಕುಲಕ್ಕಾಗಿಯೇ ಋಷಿಗಳಿಟ್ಟ ಕಾಳುಗಳನ್ನು ಯಾರಾದರೂ ನೋಡುವುದಕ್ಕೆ ಮುನ್ನ ಕಚ್ಚಿಕೊಂಡು ಬಂದು ಮತ್ತೆ ಅದೇ ಜಾಗದಲ್ಲಿ ಕೂರುತ್ತಿತ್ತು.

ಋಷಿಗಳು ಹಾಕುವ ಕಾಳು ಗುಬ್ಬಿಮರಿಗೆ ಅಸಹ್ಯ ಬಂತು. ‘ತಗಾ ಮಗ, ನಿನಗೋಸ್ಕರ ತಂದೆ’ ಎಂದು ಅಮ್ಮ ಬಾಯಲ್ಲಿ ಕಚ್ಚಿತರುವ, ಅವಳ ಜೊಲ್ಲಿನೊಡನೆ ಬೆರೆತ ಕೆಂಪನೆಯ ಮಾಂಸದ ತುಂಡು ಕಾಗೆಮರಿಗೆ ವಾಕರಿಕೆ ಬರಿಸ್ತು.

ಕ್ರಮೇಣ ಕಸಾಯಿಖಾನೆಯ ಮಾಂಸದ ತುಂಡೂ ಬೇಜಾರಾಗಿ ‘ಛೆ! ಇದೆಂತಹ ಬದುಕು! ವೈವಿಧ್ಯವಾಗಿರೋದು ಮತ್ತೆಲ್ಲೋ ಇದ್ದೇ ಇರುತ್ತೆ’ ಅಂತ ಗುಬ್ಬಿಮರಿ ಹುಡುಕಿಕೊಂಡು ಹಾರಿ ಹೊರಟು ಹೋಯಿತು.

ಕೇಳಿದ್ದೇ ಕೇಳಿ, ನೋಡಿದ್ದೇ ನೋಡಿ ಕಾಗೆಮರಿಗೂ ಬೇಸರವಾಗಿ ‘ಹಿಮಾಲಯವೇರಿದರೆ ಮಾತ್ರಾ ಮೋಕ್ಷ’ ಎನ್ನುವ ಜೋರುದನಿಯ ಋಷಿಗಳೊಬ್ಬರ ಮಾತು ಕೇಳಿಸಿಕೊಂಡು ಕೈಲಾಸ ಪರ್ವತವನ್ನು ಹುಡುಕಿಕೊಂಡು ಹೊರಟೇಹೋಯಿತು.

ಎಷ್ಟೋ ದಿನಗಳ ಮೇಲೆ ಗುಬ್ಬಕ್ಕ ಕಾಗಕ್ಕಳನ್ನ ಮತ್ತೆ ಹುಡುಕಿಕೊಂಡು ಬಂತು! ‘ನೋಡು ನಿನ್ನ ಜಾತಿಯ ಮಾಂಸದ ಖಯಾಲಿಯೇ ನನ್ನ ಮಗನನ್ನು ಹಾಳು ಮಾಡಿ ದೂರ ಓಡಿಸಿತು’ ಅಂತ ಅಳುತ್ತಾ ಅಳುತ್ತಾ ದೂರಿತು.

‘ಸುಮ್ನಿರು ಸಾಕು’ ಕಾಗಕ್ಕನ ಕಣ್ಣಲ್ಲೂ ನೀರಿತ್ತು. ‘ನಿಮ್ಮ ಜಾತಿಯ ಋಷ್ಯಾಶ್ರಮದ ಹುಚ್ಚೇ ನನ್ನ ಮಗನಿಗೆ ವೈರಾಗ್ಯ ಬರಿಸಿ ದೂರ ಓಡಿಸಿತು’ ಅಂತು.

ಪಕ್ಕದ ಮರದ ಕೋಗಿಲಮ್ಮ ಕಿಸಕ್ಕನೆ ನಕ್ಕಳು. ‘ಬಿನ್ನಾಣಗಿತ್ತೀರಾ, ನಾನು ಅವತ್ತೇ ಹೇಳಿದ್ದೆ ನಿಮಗೆ, ಓಡಿಹೋಗೋದು ಹಕ್ಕಿಗಳ ಗುಣ ಕಣ್ರೆ ಅಂತ, ಅದಕ್ಯಾಕೆ ಕಾರಣ ಹುಡುಕ್ತೀರಿ? ನನ್ನನ್ನ ನೋಡಿ, ಮನೆಯೂ ಇಲ್ಲ, ಮಠವೂ ಇಲ್ಲ. ಮರಿಗಳು ಉಂಡದ್ದೂ ಗೊತ್ತಾಗಲ್ಲ , ಹೇತಿದ್ದೂ ಗೊತ್ತಾಗಲ್ಲ , ಬೆದೆಗೆ ಬಂದ ಹೆಣ್‌ಗೋಳ ಜೊತೆ ಓಡಿಹೋಗಿದ್ದೂ ಗೊತ್ತಾಗಲ್ಲ. ಇದ್ರೆ ನನ್ಹಾಗೆ ಇರ್ಬೇಕು’.

ತಮ್ಮ ತಮ್ಮ ದುಃಖದಲ್ಲಿ ಮುಳುಗಿದ್ದ ಕಾಗಕ್ಕ ಗುಬ್ಬಕ್ಕನಿಗೆ ಮನೆ ಮಠ ಇಲ್ಲದ ಕೋಗಿಲಮ್ಮನ ಮಾತುಗಳು ಸ್ಪಷ್ಟವಾಗಿ ಕೇಳಲಿಲ್ಲ.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X