• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಜವಾಗಿ ಕೆಲಸ ಮಾಡೋದೇ ಯಶಸ್ಸಿನ ಗುಟ್ಟು

By * ವಿಶ್ವೇಶ್ವರ ಭಟ್
|
ಉಲ್ಲಾಸದಿಂದಿರಿ, ಬೆವರು ಹರಿಯೆ ದುಡಿಯಿರಿ, ಹಣ ತಂತಾನೇ ಹರಿದು ಬರುತ್ತದೆ. ಸಮಯವನ್ನು ಕೊಲ್ಲಬೇಡಿ- ಅವಕಾಶವನ್ನು ಬಾಚಿಕೊಳ್ಳುವುದರಲ್ಲಿ ಹಿಂದೆ ಬೀಳಬೇಡಿ. ಜೀವನದ ಕುರಿತು ಒಂದು ಸಕಾರಾತ್ಮಕ ನೋಟವಿರಲಿ. ಯಾವತ್ತು ಕೆಲಸದಲ್ಲಿ ಉಲ್ಲಾಸ ಇರುವುದಿಲ್ಲವೋ ಆಗ ಅದನ್ನು ಬಿಟ್ಟು ಮುನ್ನಡೆಯಿರಿ' ಹೀಗೆನ್ನುವ ವರ್ಜಿನ್ ಏರ್‌ವೇಸ್‌ನ ಮಾಲೀಕ ರಿಚರ್ಡ್ ಬ್ರಾನ್ಸನ್ ಬಗ್ಗೆ ನಾನು ಪ್ರತಿ ಬಾರಿ ಬರೆದಾಗಲೂ ಓದುಗರಿಂದ ಅಭೂತಪೂರ್ವ ಪ್ರತಿಕ್ರಿಯೆ ಬಂದಿದ್ದಿದೆ. ಆತನ ಬಗ್ಗೆ ಯಾವುದಾದರೂ ಪುಸ್ತಕಗಳಿವೆಯೇ, ಆತ ಏನನ್ನಾದರೂ ಬರೆದಿದ್ದಾನಾ, ಅವನ ಬಗ್ಗೆ ತಿಳಿದುಕೊಳ್ಳಬೇಕು ಎಂದು ಓದುಗರು ಕೇಳಿಕೊಂಡಿದ್ದಿದೆ.

ಆತನೊಬ್ಬ ವಿಮಾನಯಾನ ಕಂಪನಿಯ ಮಾಲೀಕನಿರಬಹುದು, ಆತ ಸಾಗಿಬಂದ ಹಾದಿ ಮಾತ್ರ ನಿತ್ಯ ಬೆರಗು ಹುಟ್ಟಿಸುವಂಥದ್ದು. ಅದನ್ನು ಓದಿ ಮರೆಯದೆ, ಸ್ಫೂರ್ತಿ ಪಡೆದುಕೊಂಡು, ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕೆಂಬುದೇ ನನ್ನ ಇಚ್ಛೆ, ಆಶಯ. ಆ ಯಶೋಗಾಥೆಯನ್ನು ಅವನ ಮಾತಲ್ಲೇ ಕೇಳಿ...

ನಾನು ಯಶಸ್ವಿ ಪುರುಷ ಅನ್ನುವುದನ್ನು ಇಲ್ಲ ಎನ್ನಲಾರೆ. ನಾನು ಮುಟ್ಟಿದ್ದೆಲ್ಲ ಚಿನ್ನವಾಯಿತು ಎಂದು ಬಹಳಷ್ಟು ಮಂದಿ ಮಾತಾಡಿಕೊಳ್ಳುತ್ತಾರೆ. ಅದೇ ಬೆರಗನ್ನು ಇಟ್ಟುಕೊಂಡು ನನ್ನ ಬಳಿ ಬರುವವರು ಕೇಳುವ ಪ್ರಶ್ನೆ ಎಂದರೆ, ನೀವು ಹಣ ಮಾಡಿದ್ದು ಹೇಗೆ? ವಾಸ್ತವವಾಗಿ, ಈ ಪ್ರಶ್ನೆಗೆ ಉತ್ತರ ದೊರಕಿಸಿಕೊಂಡು ತಾವು ಹಣ ಮಾಡುವುದನ್ನು ತಿಳಿದುಕೊಳ್ಳುವುದಕ್ಕಾಗಿ ಅವರೆಲ್ಲರ ಧಾವಂತ. ಪ್ರತಿಯೊಬ್ಬರ ಕಣ್ಣಲ್ಲೂ ಕೋಟ್ಯಧಿಪತಿಗಳಾಗುವ ಕನಸು!

ಆಗೆಲ್ಲ ನಾನು ಹೇಳುವುದು ಉಲ್ಲಾಸದಿಂದಿರಿ..' ಎಂಬ ಮೇಲಿನ ಮಾತುಗಳನ್ನೆ. ನನ್ನಲ್ಲಿ ಯಾವ ಸಿಕ್ರೆಟ್‌ಗಳೂ ಇಲ್ಲ. ಉದ್ಯಮದಲ್ಲಿ ಅನುಸರಿಸಬೇಕಾದ ಇದಮಿತ್ಥಂ' ಎಂಬ ನಿಯಮಗಳ್ಯಾವವೂ ಇಲ್ಲ. ನಾನಿದನ್ನು ಮಾಡಬಲ್ಲೆ ಎಂಬ ದೃಢ ವಿಶ್ವಾಸ ಹಾಗೂ ಕಠಿಣ ಪರಿಶ್ರಮಗಳೇ ನನ್ನನ್ನು ಕೈ ಹಿಡಿದು ನಡೆಸಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ, ಕೆಲಸದಲ್ಲಿ ನಾನೊಂದು ಫನ್ ಅನ್ನು, ಉಲ್ಲಾಸವನ್ನು, ಮಜವನ್ನು ಅನುಭವಿಸುತ್ತೇನೆ. ಅದೇ ಮುಖ್ಯ.

ಮಜವಾಗಿ, ಮುದವಾಗಿರಿ, ಹಣ ತಾನಾಗೇ ಹುಡುಕಿಕೊಂಡು ಬರುತ್ತದೆ : ರಿಚರ್ಡ್ ಬ್ರಾನ್ಸನ್
1997ರಲ್ಲಿ ಬಿಸಿಗಾಳಿ ಬಲೂನ್‌ನಲ್ಲಿ ಜಗತ್ತು ಸುತ್ತುವ ಕಾರ್‍ಯಕ್ಕೆ ಮುಂದಾದಾಗ ಅದು ತುಂಬ ರಿಸ್ಕಿ ಅಂತ ಗೊತ್ತಿತ್ತು. ಹೊರಡುವುದಕ್ಕಿಂತ ಮೊದಲು ನನ್ನ ಮಕ್ಕಳಾದ ಸ್ಯಾಮ್ ಹಾಗೂ ಹೊಲಿ ಇವರಿಗೆ ಒಂದು ಪತ್ರ ಬರೆದೆ. ಜೀವನವನ್ನು ಇಡಿ ಇಡಿಯಾಗಿ ಬದುಕಿ. ಅದರ ಪ್ರತಿ ಕ್ಷಣವನ್ನೂ ಅನುಭೂತಿಗೆ ತಂದುಕೊಳ್ಳಿ. ಪ್ರೀತಿಸಿ, ತಾಯಿಯನ್ನು ಕಾಳಜಿಯಿಂದ ನೋಡಿಕೊಳ್ಳಿ.'- ಹೀಗೆ ನಾನು ಬರೆದ ಪತ್ರವೇ ನನ್ನ ನಿಲುವನ್ನು ಸ್ಪಷ್ಟಪಡಿಸುತ್ತದೆ. ಸಮಯ ವ್ಯರ್ಥಗೊಳಿಸಕೂಡದು, ಮಜವಾಗಿರಬೇಕು ಹಾಗೂ ಕುಟುಂಬವನ್ನು ಪ್ರೀತಿಸಬೇಕು. ನೀವು ಗಮನಿಸಿ- ಅಲ್ಲೆಲ್ಲೂ ನಾನು ಹಣದ ಪ್ರಸ್ತಾಪವನ್ನೇ ಮಾಡಿಲ್ಲ.

ಶ್ರೀಮಂತನಾಗಿಬಿಡಬೇಕು ಎಂದೇ ಹೊರಟವನು ನಾನಲ್ಲ. ಬದುಕಿನಲ್ಲಿ ಉಲ್ಲಾಸ ಹಾಗೂ ಸವಾಲುಗಳನ್ನು ಅರಸಿಕೊಂಡು ಹೋದೆನಷ್ಟೆ. ಹಾಗಂತ ಹಣ ಬೇಕಾಗಿಲ್ಲ ಎಂದು ವಾದಕ್ಕೆ ಬೀಳುವವನು ನಾನಲ್ಲ. ಗೆಡ್ಡೆ-ಗೆಣಸುಗಳನ್ನು ತಿಂದು ಹೊಟ್ಟೆ ತುಂಬಿದೆ ಸಾಕು ಎಂದು ತೃಪ್ತಿಪಟ್ಟುಕೊಳ್ಳಲು ನಾವು ಗುಹೆಯಲ್ಲಿ ವಾಸಿಸುವ ಜೀವಿಗಳಾಗಿ ಉಳಿದುಕೊಂಡಿಲ್ಲ. ಬದುಕಲು ಹಣ ಅವಶ್ಯ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನ ಇವಿಷ್ಟೆ ನನಗೆ ಹಸಿವು ತೀರಲು ಬೇಕಾಗಿರುವುದು ಎಂದು ಹಿಂದೊಮ್ಮೆ ನಾನು ಹೇಳಿದ್ದೆ. ಈಗಲೂ ನಾನು ಹಾಗೆಯೇ ಬದುಕುತ್ತಿರುವುದು. ಆದರೆ ಕೆಲಸದಲ್ಲಿ ಉಲ್ಲಾಸ ಕಂಡುಕೊಂಡಿದ್ದೇ ಆದಲ್ಲಿ ಹಣ ತಂತಾನೇ ಹರಿದುಬರುತ್ತದೆ ಎಂಬುದನ್ನು ನಾನು ಕಂಡುಕೊಂಡೆ. ನನಗೆ ಆಗಾಗ ಹಾಕಿಕೊಳ್ಳುವ ಪ್ರಶ್ನೆಗಳೇ ಅವು- ನನ್ನ ಕೆಲಸದಲ್ಲಿ ಮಜವಿದೆಯೇ? ಅದರಿಂದ ಸಂತೋಷ ಸಿಗುತ್ತಿದೆಯೇ? ಯಾವುದಾದರೂ ಉಲ್ಲಾಸ ಕೊಡುತ್ತಿಲ್ಲ ಅಂತಾದರೆ ನಾನು ಮತ್ತೆ ಹಾಕಿಕೊಳ್ಳುವ ಪ್ರಶ್ನೆ- ಇದನ್ನು ನಾನು ಸರಿ ಮಾಡಿಕೊಳ್ಳಬಲ್ಲೆನೇ? ಇಲ್ಲ ಎಂದು ಅರಿವಾದೊಡನೆ ಆ ಕೆಲಸವನ್ನು ಬಿಡುತ್ತೇನೆ.

ಸುಮ್ನಿರಪ್ಪಾ, ಕೆಲಸದಲ್ಲಿನ ಉಲ್ಲಾಸ ಪ್ರತಿಬಾರಿಯೂ ಹಣ ತಂದುಕೊಡುತ್ತದೆಯಾ ಎಂದು ನೀವು ಕೇಳಬಹುದು. ಯು ಆರ್ ರೈಟ್. ನನ್ನ ಬದುಕಿನಲ್ಲೂ ಯಶಸ್ಸು ಒಲಿದಂತೆಯೇ ವೈಫಲ್ಯಗಳೂ ಕಾಡಿಸಿವೆ. ಆದರೆ ಒಟ್ಟಾರೆಯಾಗಿ ನಾನು ಅದೃಷ್ಟವಂತ. ಮೊದಲಿಗೆ ನನ್ನನ್ನು ಯಶಸ್ಸು ಚುಂಬಿಸಲಿಲ್ಲ; ವೈಫಲ್ಯವೇ ತಪರಾಕಿ ಕೊಟ್ಟಿತ್ತು. ಆದರೆ ಅದರಿಂದ ನಾನು ಪಾಠ ಕಲಿತೆ. ತೀರ ಒಂಬತ್ತನೇ ವಯಸ್ಸಿನಲ್ಲಿರುವಾಗಲೇ ನಾನು ಹಣ ಮಾಡಬೇಕು ಎಂದು ಹೊರಟೆ. ಕ್ರಿಸ್‌ಮಸ್ ಗಿಡಗಳನ್ನು ಬೆಳೆಯುವ ಮಹಾ ಯೋಜನೆಯೊಂದು ನನ್ನ ತಲೆಯಲ್ಲಿ ಮೊಳಕೆ ಒಡೆದಿತ್ತು. ಗೆಳೆಯನೊಬ್ಬನ ಸಹಾಯ ತೆಗೆದುಕೊಂಡು ಮನೆಯಂಗಳದಲ್ಲೇ 400 ಬೀಜ ನೆಟ್ಟೆ. ಆ ಕೆಲಸದುದ್ದಕ್ಕೂ ನಾವು ಖುಷಿ ಕಂಡೆವು. ಶಾಲೆಯಲ್ಲಿ ಗಣಿತದಲ್ಲಿ ಅಷ್ಟೇನೂ ಚುರುಕಿಲ್ಲದ ನಾನು, ಲೆಕ್ಕ ಹಾಕುವುದನ್ನು ಆಗಲೇ ಕಲಿತೆ. ಬೀಜಗಳ ಭರ್ತಿ ಬ್ಯಾಗು 5 ಪೌಂಡ್ ಗೆಲ್ಲ ಸಿಗುತ್ತಿತ್ತು. ಆದರೆ ಪ್ರತಿ ಕ್ರಿಸ್‌ಮಸ್ ಗಿಡವನ್ನು 2 ಪೌಂಡ್‌ಗಳಿಗೆ ಮಾರಬಹುದಾಗಿತ್ತು. ಒಟ್ಟಾರೆ 795 ಪೌಂಡ್ ನಮ್ಮ ಕೈ ಸೇರುತ್ತಿತ್ತು. ಇದಕ್ಕೆ 18 ತಿಂಗಳು ಕಾಯಬೇಕಾಗಿತ್ತು. ಆಗಲೇ ನಾನು ಪ್ರತಿಫಲಕ್ಕಾಗಿ ತಾಳ್ಮೆಯಿಂದ ಕಾಯಬೇಕು ಎಂಬ ಪಾಠ ಕಲಿತುಕೊಂಡೆ. ಅಷ್ಟೆಲ್ಲ ಆಗಿ ನಂತರ ಕಲಿತ ಪಾಠ ಏನೆಂದರೆ -ಹಣ ಮರದಲ್ಲಿ ಬೆಳೆಯುವುದಿಲ್ಲ' ಅನ್ನೋದು! ಯಾಕೆಂದರೆ ಬೀಜಗಳನ್ನೆಲ್ಲ ಮೊಲಗಳು ತಿಂದುಹಾಕಿದ್ದವು. ನಾವು ಆ ಮೊಲಗಳನ್ನು ಶೂಟ್ ಮಾಡುವುದರ ಮೂಲಕ ಸೇಡು ತೀರಿಸಿಕೊಂಡೆವು ಎಂಬ ಕ್ರೌರ್‍ಯದ ಸತ್ಯವನ್ನೂ ನಾನು ಹೇಳಬೇಕು. ಅವನ್ನು ಸ್ಥಳೀಯ ವ್ಯಾಪಾರಿಗೆ ಮಾರಿ ಸ್ವಲ್ಪ ಹಣ ಮಾಡಿಕೊಂಡೆವು.

ಮುಂದೆ ಓದಿ : ಕೆಲಸದಲ್ಲಿ ಮಜ ಕಂಡುಕೊಳ್ಳುವುದು ತಿಳಿದರೆ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more