• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜಕಾರಣಿಗಳ ಬಗ್ಗೆ ಈಗಲೂ ಕನಿಕರ ತೋರದಿದ್ದರೆ ಹೇಗೆ!

By * ವಿಶ್ವೇಶ್ವರ ಭಟ್
|
ಇಂದು ಎಂಬುದು ಸರಿದು ಹೋದರೆ ಇನ್ನು ಐದು ವರ್ಷಗಳಲ್ಲದಿದ್ದರೂ ಹತ್ತಾರು ತಿಂಗಳು ಚುನಾವಣೆಯ ಕಿರಿಕಿರಿ ಇರಲಿಕ್ಕಿಲ್ಲ. ಅಷ್ಟರಮಟ್ಟಿಗೆ ನಿಶ್ಚಿಂತೆ, ನಿರುಮ್ಮಳ. ಚುನಾವಣೆ ಬಂತೆಂದರೆ ನಮಗೆ ಹೇಗೆ ರಾಜಕಾರಣಿಗಳ ಕಾಟವೋ, ಪಾಪ ಅವರಿಗೂ ನಮ್ಮ ಕಾಟ. ಚುನಾವಣೆ ಮುಗಿದರೆ ಇಬ್ಬರೂ ಅವರವರ ಕಾಟಗಳಿಂದ ಮುಕ್ತ. ನಾವೇ ಬೇರೆ, ಅವರೇ ಬೇರೆ.

ಬೀchiಯವರು ಹೇಳುತ್ತಿದ್ದರು ನಮ್ಮ ದೇಶದಲ್ಲಿ ಹುಚ್ಚು ನಾಯಿ, ತಿಗಣೆ, ಚೇಳಿಗಿಂತ ಹೆಚ್ಚು ನಿಂದಿತರಾದವರೆಂದರೆ ರಾಜಕಾರಣಿಗಳು. ಇವರನ್ನು ಟೀಕಿಸದವರು, ಬೈಯದವರು, ಶಾಪ ಹಾಕದವರು ಪ್ರಾಯಶಃ ಯಾರೂ ಇರಲಿಕ್ಕಿಲ್ಲ. ತಮಾಷೆ ಅಲ್ಲ, ನಮಗೆ ಮಕ್ಕಳಾಗದಿದ್ದರೆ ಮಾತ್ರ ನಾವು ರಾಜಕಾರಣಿಗಳನ್ನು ದೂರುವುದಿಲ್ಲ. ಉಳಿದ ಎಲ್ಲ ಅನಿಷ್ಟಗಳಿಗೂ ನಾವು ಅವರನ್ನೇ ದೂರುತ್ತೇವೆ. ನಮ್ಮ ಈ ಸ್ಥಿತಿಗೆ, ದೇಶದ ಈ ಪರಿಸ್ಥಿತಿಗೆ ಅವರೇ ಕಾರಣ ಎಂದು ಹಿಡಿಶಾಪ ಹಾಕುತ್ತೇವೆ. ನಮ್ಮ ದೃಷ್ಟಿಯಲ್ಲಿ ರಾಜಕಾರಣಿಗಳೆಂದರೆ ಸುಳ್ಳರು, ಭ್ರಷ್ಟರು, ನೀಚಾತಿನೀಚರು, ಆಶ್ವಾಸನೆ ಕೊಡುವವರು, ಅವನ್ನು ಈಡೇರಿಸದವರು, ಜನರ ದುಡ್ಡು ಹೊಡೆಯುವವರು, ಹತ್ತಾರು ಜನ್ಮ ತಿಂದುಂಡರೂ ಕರಗದಷ್ಟು ಹಣ ಸಂಪಾದಿಸುವವರು, ರಾಜಕಾರಣಕ್ಕಾಗಿ ಎಂಥ ಕೀಳುಮಟ್ಟಕ್ಕಾದರೂ ಹೋಗುವವರು ಇನ್ನೂ ಯಾವ ಯಾವ ವಿಶೇಷಣ'ಗಳನ್ನು ಹಚ್ಚಿ ಬೈಯ್ದರೂ ಅವಕ್ಕೆಲ್ಲ ಲಾಯಕ್ಕಾಗುವವರು.

ನಿಜಕ್ಕೂ ರಾಜಕಾರಣಿಗಳೆಂದರೆ ಅವರೇನಾ? ಅವರು ಅಷ್ಟೊಂದು ಕೆಟ್ಟವರಾ? ಒಂದು ವೇಳೆ ಅವರು ಅಷ್ಟೊಂದು ಕೆಟ್ಟವರಾಗಿದ್ದರೆ, ಅವರನ್ನು ಹಾಗೆ ಮಾಡಿದ್ದು ಯಾರು? ಅವರು ಅಷ್ಟೊಂದು ಕೆಟ್ಟವರಾದರೂ ನಾವೇಕೆ ಸಹಿಸಿಕೊಂಡಿದ್ದೇವೆ, ಸಹಿಸಿಕೊಳ್ಳಬೇಕು? ಅಂಥ ಅನಿವಾರ್ಯ ನಮಗೇನಿದೆ? ರಾಜಕಾರಣಿಗಳನ್ನು ಇಷ್ಟು ಭ್ರಷ್ಟರನ್ನಾಗಿ ಮಾಡಿದ್ದು ಯಾರು? ಈ ಪ್ರಶ್ನೆಗಳನ್ನು ಕೇಳಿಕೊಂಡರೆ ನಮಗೆ ರಾಜಕಾರಣಿಗಳನ್ನು ಇನ್ನೂ ಹತ್ತಿರದಿಂದ ನೋಡಲು ಸಹಾಯವಾಗುತ್ತದೆ.

ಬ್ರಿಟನ್‌ನ ಪ್ರಧಾನಿಯಾಗಿದ್ದ ವಿನ್‌ಸ್ಟನ್ ಚರ್ಚಿಲ್ ಹೇಳುತ್ತಿದ್ದರು- ಜನ ನಮ್ಮನ್ನು ಸ್ಕೌಂಡ್ರಲ್(ಫಟಿಂಗ)ಗಳೆಂದು ಜರೆಯುತ್ತಾರೆ. ಆದರೆ ಇದೇ ಸ್ಕೌಂಡ್ರಲ್‌ಗಳಿಂದ ಆಳಿಸಿಕೊಳ್ಳಲು ಇಷ್ಟಪಡುತ್ತಾರೆ. ನಾವು ನಿಜಕ್ಕೂ ಸ್ಕೌಂಡ್ರಲ್‌ಗಳೇ ಆಗಿದ್ದರೆ ನೀವು ನಮಗೆ ಮತ ಹಾಕುತ್ತಿದ್ದಿರಾ? ಹಾಗಂತ ನಮ್ಮಲ್ಲಿ ಅಂಥವರು ಇಲ್ಲವೇ ಇಲ್ಲ ಅಂತ ಹೇಳುವುದಿಲ್ಲ, ಇದ್ದಾರೆ. ಅಂಥವರು ಯಾವ ವೃತ್ತಿಯಲ್ಲಿ ಇಲ್ಲ? ಅಷ್ಟಕ್ಕೂ ಒಬ್ಬ ಸ್ಕೌಂಡ್ರಲ್ ಆರಿಸಿಬರುವುದು ಜನರಿಂದಲೇ. ಅವನನ್ನು ಆರಿಸಿದ ಜನರನ್ನು ಏನಂತ ಕರೆಯುತ್ತೀರಿ?''

ರಾಜಕಾರಣಿಗಳನ್ನು ಬೈಯುವುದು, ಟೀಕಿಸುವುದು ಬಹಳ ಸುಲಭ. ಅದೊಂದು ಫ್ಯಾಶನ್. ಅದೊಂದು national pastime. ಆದರೆ ನಿಜಕ್ಕೂ ರಾಜಕಾರಣಿಯಾಗುವುದಿದೆಯಲ್ಲ ಅದರಂಥ ಕಷ್ಟ ಇನ್ನೊಂದಿಲ್ಲ. ರಾಜಕಾರಣವನ್ನೇ ವೃತ್ತಿಯಾಗಿಸಿಕೊಳ್ಳುವುದು, ಬದುಕನ್ನಾಗಿಸಿಕೊಳ್ಳುವುದು ಜೀವನದ ಉಸಿರಾಗಿಸಿಕೊಳ್ಳುವುದು ಅಪ್ಪಪ್ಪಾ ಕಷ್ಟ ಕಷ್ಟ. ನಮ್ಮ ದೇವೇಗೌಡರನ್ನೇ ನೋಡಿ. ನಿಮ್ಮ ದೃಷ್ಟಿಯಲ್ಲಿ ಅವರು ಕ್ಷೇಮವಾಗಿದ್ದಾರಾ? ನೆಮ್ಮದಿಯಾಗಿದ್ದಾರೆಂದು ನಿಮಗೆ ಅನಿಸುವುದಾ? ರಾಜಕಾರಣವನ್ನೇ ವೃತ್ತಿ, ಕಸುಬು, ಉಸಿರಾಗಿಸಿಕೊಳ್ಳದಿದ್ದರೆ ಅವರು ದೇವೇಗೌಡರಾಗಲು ಸಾಧ್ಯವೇ ಇರಲಿಲ್ಲ. ಹೀಗಾಗಿ ಅವರಿಗೆ ಒಂದು ಸಿನಿಮಾ, ನಾಟಕ ನೋಡಲು ಸಹ ಆಗುವುದಿಲ್ಲ. ಸಂಗೀತ ಕೇಳಲು ಆಗುವುದಿಲ್ಲ. ಪುಸ್ತಕ ಬಿಡುಗಡೆಗೆ, ಕವಿಗೋಷ್ಠಿಗೆ, ವಿಚಾರಗೋಷ್ಠಿಗೆ, ಹಾಸ್ಯೋತ್ಸವಕ್ಕೆ, ರಾಕ್ ಷೋಗೆ, ಕ್ರಿಕೆಟ್‌ಪಂದ್ಯ ವೀಕ್ಷಣೆಗೆ ಸಭಿಕರಾಗಿ ಹೋಗಲು ಆಗುವುದಿಲ್ಲ. ಹೋಗಿದ್ದರೆ ಅವರು ರಾಮಕೃಷ್ಣ ಹೆಗಡೆಯೋ, ಎಸ್ಸೆಂ ಕೃಷ್ಣನೋ ಆಗುತ್ತಿದ್ದರು, ದೇವೇಗೌಡರಾಗಲು ಆಗುತ್ತಿರಲಿಲ್ಲ.

ದೇವೇಗೌಡರಾಗುವುದು ಬಹಳ ಕಷ್ಟದ ಕೆಲಸ. ದಿನವಿಡೀ ರಾಜಕಾರಣ ಮಾಡಬೇಕು. ರಾಜಕಾರಣಿಗಳನ್ನು ಭೇಟಿ ಮಾಡಬೇಕು. ರಾಜಕಾರಣದಲ್ಲೇ ನಿರತವಾಗಬೇಕು. ಬೇಕೋ ಬೇಡವೋ, ಮನಸ್ಸಿದೆಯೋ ಇಲ್ಲವೋ ಎಲ್ಲರನ್ನೂ ಭೇಟಿ ಮಾಡಬೇಕು. ಅವರು ಹೇಳುವುದೆಲ್ಲವನ್ನೂ ಕೇಳಿಸಿಕೊಳ್ಳಬೇಕು. ಕೆಲವರು ಬಾಯಿ ತೆರೆದರೆ ದುರ್ಗಂಧ! ಅಂಥವರು ಹತ್ತಿರ ಬಂದು ಗುಟ್ಟು ಹೇಳುವ ರೀತಿ ಮಾತಾಡುತ್ತಾರೆ. ಬಾಯಿವಾಸನೆಗೆ ಹೊಟ್ಟೆತೊಳಸಿ ವಾಂತಿ ಬಂದಂತಾಗುತ್ತದೆ. ಅದನ್ನು ಪದೇ ಪದೆ ನುಂಗಿಕೊಳ್ಳಬೇಕು. ಅವನ ಜತೆ ಬೇಡದಿದ್ದರೂ ಎರಡು ಸಿಪ್ಪು ಕಾಫಿ ಹೀರಬೇಕು. ಅವನಿಗೊಂದು ಸಾಂತ್ವನದ ಮಾತುಗಳನ್ನು ಹೇಳಬೇಕು. ಬಹುತೇಕ ಸಂದರ್ಭಗಳಲ್ಲಿ ಹೇಳುವುದೆಲ್ಲವೂ ಸುಳ್ಳೇ ಆಗಿರುತ್ತದೆ. ಅಪ್ಪಟ ಸತ್ಯವೆಂದೇ ಬಿಂಬಿಸಬೇಕು. ಹೀಗಾಗಿ ಸದಾ ನಾಟಕವಾಡಬೇಕು. ಅದಕ್ಕಾಗಿ ಒಳ್ಳೆಯ ಕಲಾವಿದನ ವೇಷ ಧರಿಸಬೇಕು. ಎಲ್ಲೂ ಕೂಡ ತಾನು ಹೇಳುತ್ತಿರುವುದೆಲ್ಲ ಸುಳ್ಳು ಎಂಬ ಸಂದೇಹ ಬರದ ರೀತಿಯಲ್ಲಿ ಪಾತ್ರ ನಿರ್ವಹಿಸಬೇಕು.

ಒಂದೇ ಮಾತಿನಲ್ಲಿ ಹೇಳುವುದಾದರೆ ಜನರನ್ನು ನಂಬಿಸಬೇಕು. ಸದಾ ನಂಬಿಸುತ್ತಲೇ ಇರಬೇಕು. ಅಂದರೆ ನಿರಂತರ ಸುಳ್ಳು ಹೇಳಬೇಕು, ಜನರು ನಂಬುವಂಥ ಸುಳ್ಳುಗಳನ್ನೇ ಹೇಳಬೇಕು. ತಮ್ಮ ರಾಜಕೀಯ ವಿರೋಗಳು ಜನರಿಗೆ ಮೋಸ ಮಾಡುತ್ತಿದ್ದಾರೆ, ಆಡಳಿತಪಕ್ಷ ಜನರನ್ನು ಲೂಟಿ ಮಾಡುತ್ತಿದೆಯೆಂದೇ ಸದಾ ಬಿಂಬಿಸಬೇಕು. ತನ್ನ ಜನಪ್ರಿಯತೆಯ ಮಟ್ಟ ಸ್ವಲ್ಪ ಕುಸಿಯುತ್ತಿದೆಯೆಂದು ಅನಿಸಿದರೆ ಸಾಕು, ಜನರಿಗೆ ಅನ್ಯಾಯವಾಗುತ್ತಿದೆಯೆಂದು ಬೀದಿಗಿಳಿದು ಹೋರಾಡಲು, ಪ್ರತಿಭಟನೆ ಮಾಡಲು, ಉಪವಾಸ ಮುಷ್ಕರ ಕೈಗೊಳ್ಳಲು, ಬಂದ್‌ಗೆ ಕರೆ ಕೊಡಲು ಸಿದ್ಧವಾಗಿರಬೇಕು. ಇಂಥ ಕಾರ್ಯಕ್ರಮಗಳಿಗೆ ಜನರನ್ನು, ಹಣವನ್ನು ಒಟ್ಟುಹಾಕಬೇಕು. ಸಂದರ್ಭ ಬಂದರೆ ಹೇಳುವುದೊಂದೇ ಅಲ್ಲ ಆಮರಣಾಂತ ಉಪವಾಸಕ್ಕೂ ಕುಳಿತುಕೊಳ್ಳಬೇಕು. ಪತ್ರಕರ್ತರು, ಟಿವಿಯವರನ್ನು ನಿಭಾಯಿಸಬೇಕು. ಜತೆಯಲ್ಲಿ ತಮ್ಮ ಪಕ್ಷದ ನಾಯಕರು, ಶಾಸಕರು, ಜಾತಿ ಮುಖಂಡರನ್ನು ಜತೆಯಲ್ಲೇ ಕರೆದುಕೊಂಡು ಹೋಗಬೇಕು. ಒಬ್ಬೊಬ್ಬ ಮುಖಂಡನ ರಗಳೆ, ಬೆದರಿಕೆಗಳನ್ನು ನುಂಗಿಕೊಳ್ಳಬೇಕು ಇಲ್ಲವೇ ಅವನನ್ನೇ ನುಂಗಬೇಕು. ಇನ್ನು ಪದೇಪದೆ ಬರುವ ಚುನಾವಣೆಗೆ ಸಿದ್ಧರಾಗಬೇಕು, ಯೋಗ್ಯ ಅಭ್ಯರ್ಥಿಗಳನ್ನು ಹುಡುಕಬೇಕು. ಊರೂರಿಗೆ ಹೋಗಿ ಮಳೆ, ಬಿಸಿಲೆನ್ನದೇ ಸುತ್ತಿ ಭಾಷಣ ಮಾಡಬೇಕು. ಮನೆಮನೆಗೆ ಹೋಗಿ ಮತಭಿಕ್ಷೆ ಯಾಚಿಸಬೇಕು. ಜನರು ಹೇಳುವುದೆಲ್ಲವನ್ನೂ ಕೇಳಿಸಿಕೊಂಡು, ಬೈಯ್ಯುವುದೆಲ್ಲವನ್ನೂ ಬೈಯಿಸಿಕೊಂಡು ನಗುನಗುತ್ತಾ ಸುಮ್ಮನೆ ಬರಬೇಕು. ಚುನಾವಣೆ ನಡೆಸುವುದು ಅಂದ್ರೆ ತಮಾಷೀನಾ? ಎಲ್ಲರ ಮುಂದೆ ಕೈಚಾಚಬೇಕು. ಯಾರೂ ನಗುನಗುತ್ತಾ ಬಂದು ದುಡ್ಡು ಕೊಟ್ಟು ಹೋಗುವುದಿಲ್ಲ. ಚುನಾವಣೆಯಲ್ಲಿ ಹಣ ಕೊಟ್ಟ ಉದ್ಯಮಿ, ಗೆದ್ದು ಬಂದ ನಂತರ ಹತ್ತು ಪಟ್ಟು ಹಣಮಾಡಲು ಸ್ಕೆಚ್ ಹಾಕುತ್ತಾನೆ.

ಇವೆಲ್ಲವುಗಳ ನಡುವೆ ಸ್ವಲ್ಪ ಒಳ್ಳೆಯ' ಚಿಂತನೆ ಮಾಡಬೇಕು. ದೇಶದ ಬಗೆಗೂ ಯೋಚಿಸಬೇಕು. ಮಕ್ಕಳು, ಕುಟುಂಬದ ಬಗೆಗೂ ಚಿಂತಿಸಬೇಕು. ಎಲ್ಲವನ್ನೂ ಮಾಡುವುದು ರಾಜ್ಯ, ದೇಶಕ್ಕಾದರೂ ಗೌಡರು ಮಕ್ಕಳಿಗಾಗಿ ರಾಜಕಾರಣ ಮಾಡುತ್ತಾರೆ ಎಂಬ ಟೀಕೆಯನ್ನು ಸಹಿಸಿಕೊಳ್ಳಬೇಕು. ದೇವೇಗೌಡರಾಗುವುದು ಸುಲಭ ಅಲ್ಲ. ದೇವೇಗೌಡರಿಗೆ ಮಾತ್ರ ಹಾಗೆ ಆಗುವುದು ಸಾಧ್ಯ. ಇಲ್ಲಿ ದೇವೇಗೌಡರು ಕೇವಲ ಸಂಕೇತವಾಗಿರಬಹುದು. ಎಲ್ಲ ರಾಜಕೀಯ ಮುಖಂಡರ ಪಾಡೂ ಹೆಚ್ಚುಕಮ್ಮಿ ಹೀಗೆಯೇ. ಒಬ್ಬ ಬ್ಯಾಂಕ್ ಮ್ಯಾನೇಜರ್, ಹೆಡ್‌ಮಾಸ್ತರ್, ಕಾಲೇಜು ಉಪನ್ಯಾಸಕ, ಸಾಫ್ಟ್‌ವೇರ್ ಎಂಜಿನಿಯರ್, ಕಾಲ್‌ಸೆಂಟರ್ ಉದ್ಯೋಗಿ, ಹೋಟೆಲ್ ಮಾಲೀಕ, ರಿಯಲ್ ಎಸ್ಟೇಟ್ ಧಣಿ ತನ್ನ ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ಹೆಂಡತಿ, ಮಕ್ಕಳ ಜತೆಗೆ ಕೆಲಕಾಲ ಕಳೆಯಬಹುದು- ಅವರಿಗೆಲ್ಲ ಫ್ಯಾಮಿಲಿ ಲೈಫ್ ಎಂಬುದಿರುತ್ತದೆ. ಆದರೆ ರಾಜಕಾರಣಿಗಳಿಗ್ಯಾವ ಫ್ಯಾಮಿಲಿ ಲೈಫ್?

ಬೆಳಗ್ಗೆ ಎದ್ದರೆ ಮನೆಮುಂದೆ ನೂರಾರು ಜನ ಸೇರಿರುತ್ತಾರೆ. ಅಧಿಕಾರ ಇರಲಿ, ಇಲ್ಲದಿರಲಿ. ಇದ್ದರಂತೂ ಕೇಳುವುದೇ ಬೇಡ. ಬೆಡ್‌ರೂಮನ್ನೂ ಬಿಡುವುದಿಲ್ಲ, ಅಲ್ಲಿಯೂ ಜನ ಸೇರಿರುತ್ತಾರೆ. ಬೀದಿಗೆ ಲೈಟಿಲ್ಲ, ನಲ್ಲಿಯಲ್ಲಿ ನೀರಿಲ್ಲ, ಮನೆಮುಂದಿನ ಕಸ ತೆಗೆದಿಲ್ಲ, ಚರಂಡಿ ಕಟ್ಟಿಹೋಗಿದೆ, ಮೋರಿ ನೀರು ರಸ್ತೆಗೆ ಬಂದಿದೆ, ಸೇತುವೆ ಇಲ್ಲದೇ ತೊಂದರೆಯಾಗಿದೆ, ಮನೆಗೆ ನೀರು ನುಗ್ಗಿದೆ, ಪಡಿತರ ನೀಡದೇ ತಿಂಗಳಾಯಿತು ಎಂಬ ದೂರುಗಳಿಂದ ಹಿಡಿದು, ಮಗನಿಗೆ ಉದ್ಯೋಗ ಕೊಡಿಸಿ, ಅಳಿಯನನ್ನು ಟ್ರಾನ್ಸ್‌ಫರ್ ಮಾಡಿಸಿಕೊಡಿ, ಪೊಲೀಸರಿಗೆ ಹೇಳಿಸಿ ಅಣ್ಣನನ್ನು ಬಿಡಿಸಿಕೊಡಿ, ಮನೆ ಖಾಲಿ ಮಾಡಿಸಿಕೊಡಿ, ಭೂ ವಿವಾದ ಬಗೆಹರಿಸಿಕೊಡಿ ಎಂಬ ಮನವಿಗಳಿಂದ ಹಿಡಿದು, ಮಗಳ ಮದುವೆಗೆ ಸಹಾಯ ಮಾಡಿ, ಮಗನಿಗೆ ಆಕ್ಸಿಡೆಂಟಾಗಿದೆ ಹಣ ಕೊಡಿ, ತಾಳಿಗೆ ದುಡ್ಡು ಕೊಡಿ, ಛತ್ರವನ್ನು ಪುಕ್ಕಟೆ ಕೊಡಿಸಿ ಎಂಬ ಮನವಿಯನ್ನೂ ಪುರಸ್ಕರಿಸಬೇಕಾಗುತ್ತದೆ.

ಇನ್ನು ಅಣ್ಣಮ್ಮದೇವಿ ಹಬ್ಬಕ್ಕೆ, ತಲಗೇರಿ, ಚಂದಾವರ ತೇರಿಗೆ, ಜಾತ್ರೆಗೆ, ಹೋಳಿಹಬ್ಬ ಕಾಮಣ್ಣನಿಗೆ, ಶಬರಿಮಲೈಗೆ ಹೊರಟ ಕಪ್ಪುಬಟ್ಟೆ ತೊಟ್ಟು ಮಾಲೆ ಹಾಕಿಕೊಂಡವನಿಗೂ ರಾಜಕಾರಣಿಗಳು ಹಣ ಕೊಡಬೇಕು. ಅವನ ಕ್ಷೇತ್ರದ ಸರಹದ್ದಿಗೆ ಬರುವ ಯಾವ ಬೀದಿಯಲ್ಲಿ ಗಣೇಶನನ್ನು ಕೂಡ್ರಿಸಿದರೂ ಹಣ ಕೊಡಬೇಕು. ಆರ್ಕೆಸ್ಟ್ರಾ ಕರೆಸಬೇಕು. ಪಟಾಕಿ ಸುಡಬೇಕು. ಕಬಡ್ಡಿ, ವಾಲಿಬಾಲ್, ಕ್ರಿಕೆಟ್ ಪಂದ್ಯಾವಳಿಗೆ, ಯುವಕಸಂಘಗಳಿಗೆ ಹಣ ಕೊಡಬೇಕು. ಕೊಳೆಗೇರಿಯಲ್ಲಿ ಯಾರೇ ಸಾಯಲಿ ಅಂತ್ಯಸಂಸ್ಕಾರಕ್ಕೆ ರಾಜಕಾರಣಿ ಹಣ ಪೀಕದಿದ್ದರೆ ಚಟ್ಟ ಮೇಲಕ್ಕೇರುವುದಿಲ್ಲ. ಎಲ್ಲ ಆಸ್ಪತ್ರೆ, ಹೋಟೆಲ್, ಬಾರುಗಳಲ್ಲಿ ರಾಜಕಾರಣಿಗಳ ಅಕೌಂಟ್ ಇದ್ದೇ ಇರುತ್ತದೆ. ಅಲ್ಲಿ ಇವರ ಹೆಸರು ಹೇಳಿ ಚಿಕಿತ್ಸೆ ಪಡೆಯುತ್ತಾರೆ, ಊಟ ಮಾಡುತ್ತಾರೆ, ಗುಂಡು ಹಾಕುತ್ತಾರೆ.

ಇನ್ನು ಅಡ್ಮಿಶನ್ ಸಮಯ ಬಂದರೆ ಎಲ್ಲರಿಗೂ ಸೀಟು ಕೊಡಿಸಬೇಕು. ಸೀಟು ಕೊಡಿಸದಿದ್ದರೆ ನಮ್ಮ ಎಮ್ಮೆಲ್ಲೇ ಇದ್ದಾನಲ್ರೀ ಯಾವುದಕ್ಕೂ ಪ್ರಯೋಜನವಿಲ್ಲ. ಹಿಂದಿನವನೇ ವಾಸಿ. ಒಂದು ಸೀಟನ್ನೂ ಕೊಡಿಸುವ ಯೋಗ್ಯತೆ ಇಲ್ಲ" ಎಂದು ನಾಲ್ಕು ಜನರಿಂದ ಉಗಿಸಿಕೊಳ್ಳಬೇಕು. ಇನ್ನು ತನ್ನ ಕ್ಷೇತ್ರದಲ್ಲಿ ಯಾರ ಮನೆಯಲ್ಲಿ ಸತ್ಯನಾರಾಯಣಕತೆ, ಪಾರಾಯಣ, ಮದುವೆ, ಮುಂಜಿ, ಶ್ರಾದ್ಧ, ಶೋಬನ ಆದರೂ ತಪ್ಪಿಸುವಂತಿಲ್ಲ. ರಾಜಕಾರಣಿ ಬರದ ಗೃಹಪ್ರವೇಶವೂ ಒಂದು ಗೃಹಪ್ರವೇಶವಾ? ಆರತಕ್ಷತೆಯೂ ಒಂದು ಆರತಕ್ಷತೆಯಾ? ವೈಕುಂಠ ಸಮಾರಾಧನೆಯೂ ಒಂದು ವೈಕುಂಠ ಸಮಾರಾಧನೆಯಾ? ಮದುವೆ, ಮುಂಜಿ ಹಾಗೂ ಗೃಹಪ್ರವೇಶದ ಸೀಜನ್ನಿನಲ್ಲಿ ಒಬ್ಬ ಹಾಲಿ ಅಥವಾ ಮಾಜಿ ಎಮ್ಮೆಲ್ಲೆ ಪ್ರತಿದಿನ ಏನಿಲ್ಲವೆಂದರೂ ತನ್ನ ಕ್ಷೇತ್ರದಲ್ಲಿ 20-3- ಇಂಥ ಸಮಾರಂಭಗಳಿಗೆ ಹೋಗಬೇಕಾಗುತ್ತದೆ. ಎಲ್ಲ ಕಡೆ ಬರೀ ಹೂಗುಚ್ಛ ಕೊಟ್ಟರೂ ಪ್ರತಿದಿನ ಅದಕ್ಕೊಂದೇ ಹತ್ತು ಸಾವಿರ ರೂ. ಖರ್ಚಾಗುತ್ತದೆ. ಬೆಂಗಳೂರಿನ ಜನಪ್ರಿಯ ಶಾಸಕರೊಬ್ಬರು ಹೇಳುತ್ತಿದ್ದರು- ನನ್ನ ಕ್ಷೇತ್ರದಲ್ಲಿ ಪ್ರತಿ ದಿನ ನಾನು ಏನಿಲ್ಲವೆಂದರೂ 4-5 ಅಂತ್ಯಕ್ರಿಯೆಗಳಲ್ಲಿ ಪಾಲ್ಗೊಳ್ಳುತ್ತೇನೆ. ಬಡವರ ಮನೆಗೆ ಹೋದಾಗ ಅಂತ್ಯಕ್ರಿಯೆ ಖರ್ಚನ್ನು ಕೊಡದೇ ವಾಪಸ್ ಬರಲು ಆಗುವುದಿಲ್ಲ. ಇದಕ್ಕಾಗಿಯೇ ದಿನಕ್ಕೆ ನನಗೆ 40-50 ಸಾವಿರ ರೂ. ಖರ್ಚಾಗುತ್ತದೆ. ಕೊಟ್ಟರೂ ಕಷ್ಟ. ಕೊಡದಿದ್ದರೂ ಕಷ್ಟ. ಹೀಗಾಗಿ ಹಣ ಕೊಟ್ಟು ನಾವು ಕಷ್ಟ ಅನುಭವಿಸುತ್ತೇವೆ."

ಒಬ್ಬ ಶಾಸಕನಾದವನಿಗೆ ಏನಿಲ್ಲವೆಂದರೂ ದಿನಕ್ಕೆ ಐವತ್ತು ಸಾವಿರ ರೂ. ಖರ್ಚಾಗುತ್ತದೆ. ಚಹ, ತಿಂಡಿ, ಹೂಗುಚ್ಛ, ಅಂತ್ಯ ಸಂಸ್ಕಾರ, ಆಳು, ಕಾಳು, ಕಾರು, ಪೆಟ್ರೋಲ್ ಅಂತ ಅಷ್ಟು ಹಣವನ್ನು ತೆಗೆದಿಡಲೇಬೇಕು. ಇನ್ನು ಕಣ್ಣಿಗೆ ಕಾಣದ, ಅನಪೇಕ್ಷಿತ, ಅನಿರೀಕ್ಷಿತ ಖರ್ಚುಗಳಂತೂ ಆಗಾಗ ಬರುತ್ತಲೇ ಇರುತ್ತವೆ. ಸಮಾಜದ ಗಣ್ಯರು, ಸ್ವಾಮೀಜಿಗಳು, ಅವರಿಗಿಂತ ದೊಡ್ಡ ನಾಯಕರು ಸಲ್ಲಿಸುವ ಕೋರಿಕೆಗಳಿಗೆಲ್ಲ ಇಲ್ಲ' ಎನ್ನಲು ಆಗುವುದಿಲ್ಲ. ಈ ಎಲ್ಲ ಖರ್ಚಿನ ಬಾಬ್ತುಗಳಿಗೆ ಕೊನೆಯೆಂಬುದೇ ಇಲ್ಲ. ಬೆಳಗಿನಿಂದ ರಾತ್ರಿಯವರೆಗೆ ಊರು, ಸಮಾಜದ ಕೆಲಸ ಮಾಡಿ ಮನೆಗೆ ಬಂದು ನಿಶ್ಚಿಂತೆಯಿಂದ ಹೆಂಡತಿ, ಮಕ್ಕಳ ಜತೆ ಊಟ ಮಾಡೋಣ ಅಂದ್ರೆ ಜನ ಬಿಡ್ತಾರಾ? ಅದೂ ಇಲ್ಲ. ರಾತ್ರಿ ಹನ್ನೊಂದಾದರೂ ಮನೆಯೆಂಬ ಸಂತೆಪೇಟೆಯಲ್ಲಿ ಜನ ಕರಗಿರುವುದಿಲ್ಲ. ಇಷ್ಟೆಲ್ಲ ಜನರಿಗಾಗಿ ಮಾಡುವ ರಾಜಕಾರಣಿ, ಎಮ್ಮೆಲ್ಲೆ ತನಗಾಗಿ ಏನಾದರೂ ಮಾಡಿಕೊಳ್ಳದೇ ಇರುತ್ತಾನಾ? ಮಾಡಿಕೊಳ್ಳದಿದ್ದರೆ show ನಡೆಸುವುದಾದರೂ ಹೇಗೆ? ಅವನು ಆರಿಸಿಬಂದಿದ್ದು ಯಾವ ಪುರುಷಾರ್ಥಕ್ಕಾಗಿ? ರಾಜಕಾರಣಿಯ ಮೆಟ್ಟು ತೊಟ್ಟರೆ ಅದು ಎಲ್ಲೆಲ್ಲಿ ಚುಚ್ಚುತ್ತದೆ ಎಂಬುದು ಗೊತ್ತಾಗುತ್ತದೆ.

ಪ್ರಾಯಶಃ ಇದನ್ನು ನೋಡಿಯೇ ಶಾಂತವೇರಿ ಗೋಪಾಲ ಗೌಡರಂಥ ಸಜ್ಜನ ರಾಜಕಾರಣಿ ಹೇಳಿದ್ದರು-ಎಲ್ಲರೂ ರಾಜಕಾರಣಿಗಳನ್ನು ಬೈಯುತ್ತಾರೆ. ಕಳ್ಳರನ್ನು ಕಂಡವರ ಹಾಗೆ ನೋಡುತ್ತಾರೆ. ಜನರು ಭಾವಿಸಿದ ಹಾಗೆ ರಾಜಕಾರಣ ಇಲ್ಲ. ಅಷ್ಟಕ್ಕೂ ನಮ್ಮಲ್ಲಿ ರಾಜಕಾರಣ ಅಂದ್ರೆ ಜನರನ್ನು ನಿರ್ವಹಿಸುವುದೇ ಆಗಿದೆ. ಎಲ್ಲ ಜನರನ್ನೂ ಖುಷಿಪಡಿಸುವುದು ಅಸಾಧ್ಯ. ದೇವರನ್ನೂ ಟೀಕಿಸುವವರು ಇದ್ದಾರಲ್ಲ.''

ರಾಜಕಾರಣಿಗಳು ಸುಳ್ಳು ಹೇಳಬಾರದೆಂದು ಜನರು ನಿರೀಕ್ಷಿಸುತ್ತಾರೆ. ಆದರೆ ಜನರೇ ನಮ್ಮ ಬಾಯಿಂದ ಸುಳ್ಳು ಹೇಳಿಸುತ್ತಾರೆ" ಎಂದು ರಾಮಕೃಷ್ಣ ಹೆಗಡೆ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದ ನಜೀರ್‌ಸಾಬ್ ಹೇಳುತ್ತಿದ್ದರು. ಈ ಕೆಲಸ ನನ್ನಿಂದ ಆಗುವುದಿಲ್ಲ ಎಂಬುದು ನನಗೆ ಗೊತ್ತಿರುತ್ತದೆ. ಆದರೆ ನಾನು ಆಗೊಲ್ಲ ಎಂದು ಹೇಳುವುದಿಲ್ಲ. ಸತ್ಯವನ್ನೇ ಹೇಳಬೇಕು, ಜನರಿಗೆ ಮೋಸ ಮಾಡಬಾರದೆಂದು ನಿರ್ಧರಿಸಿ ನಾನೇನಾದರೂ ಈ ಕೆಲಸ ಆಗೊಲ್ಲ ಅಂತ ಹೇಳಿದರೆ, ಈ ನಜೀರ್‌ಸಾಬ್ ಇದ್ದಾನಲ್ಲ ಅವನಿಂದ ನಾಲ್ಕಾಣೆ ಕೆಲಸ ಆಗೊಲ್ಲ. ಪ್ರಯೋಜನವಿಲ್ಲ. ಇವನ ವಿರುದ್ಧ ನಿಂತಿದ್ದನಲ್ಲ ಅವನೇ ವಾಸಿ ಅಂತಾರೆ. ಅದಕ್ಕಾಗಿ ಕೆಲಸ ಆಗದಿದ್ದರೂ ಪರವಾಗಿಲ್ಲ, ನಾನು ಮಾಡಿಕೊಡುತ್ತೇನೆ, ಖಂಡಿತ ನಿನ್ನ ಕೆಲಸ ಆದಂತೆ ಎಂದು ತಿಳಿದುಕೋ ಎಂದು ಸುಳ್ಳು ಹೇಳುತ್ತೇವೆ. ಅಲ್ಲದೇ ಎಲ್ಲರಿಗೂ ಇಂಥದೇ ಸುಳ್ಳುಗಳನ್ನು ಹೇಳಬೇಕಾಗುತ್ತದೆ. ಯಾರು ಸುಳ್ಳು ಹೇಳುವುದನ್ನು ಒಂದು ಉತ್ತಮ ಕಲೆಯಾಗಿ ಕರಗತ ಮಾಡಿಕೊಂಡಿರುತ್ತಾರೋ ಅವರು ಯಶಸ್ವಿಯಾಗುತ್ತಾರೆ" ಎಂದು ಸ್ವತಃ ನಜೀರ್‌ಸಾಬ್ ಹೇಳುತ್ತಿದ್ದರು.

ಕೆಲ ವರ್ಷಗಳ ಹಿಂದೆ ಜಾರ್ಜ್ ಫರ್ನಾಂಡಿಸ್ ಅಭಿನಂದನಾ ಸಮಾರಂಭವೊಂದರಲ್ಲಿ ಮಾತಾಡುತ್ತಾ, ರಾಜಕಾರಣಿಗಳು ಶುಭ್ರವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಆತ ಶುಭ್ರವಾಗಿದ್ದರೆ ರಾಜಕಾರಣಿಯಾಗಿ ಬಹಳ ದಿನ ಇರಲು ಸಾಧ್ಯವಿಲ್ಲದಂಥ ಸ್ಥಿತಿ ಇದೆ. ಪ್ರತಿದಿನ ನನ್ನ ಮನೆಗೆ ಬರುವ ಅತಿಥಿ ಸತ್ಕಾರಕ್ಕೆ ಏನಿಲ್ಲವೆಂದರೂ ಐದಾರು ಸಾವಿರ ರೂ. ಬೇಕು. ಅಷ್ಟು ಹಣವನ್ನು ಒಬ್ಬ ಪ್ರಾಮಾಣಿಕ ಸಂಸದನಿಗೆ ಹೊಂದಿಸುವುದು ಕಷ್ಟ. ರಾಜಕಾರಣಿಗಳಿಂದ ಜನ ಎಲ್ಲವನ್ನೂ ನಿರೀಕ್ಷಿಸುತ್ತಾರೆ. ಕೊಲೆ ಮಾಡಿ ಬಂದು ರಕ್ಷಿಸುವಂತೆ ಬೇಡಿಕೊಳ್ಳುತ್ತಾರೆ. ಅನಂತರ ನಮ್ಮನ್ನೇ ಪಾತಕಿಗಳ ರಕ್ಷಕ ಎಂದು ನಿಂದಿಸುತ್ತಾರೆ" ಎಂದಿದ್ದರು.

ಈ ಸಲದ ಚುನಾವಣೆಯಲ್ಲಿ ರಾಜಕಾರಣಿಗಳ ಪಾಡನ್ನು ಗಮನಿಸಿ. ಒಬ್ಬೊಬ್ಬ ಉಮೇದುವಾರನೂ ಕೋಟ್ಯಂತರ ರೂ. ಖರ್ಚು ಮಾಡಿ ಟಿಕೆಟ್ ಗಿಟ್ಟಿಸಿದವರೇ. (ಟಿಕೆಟ್ ಸಿಗದಿದ್ದವರು ಇನ್ನೂ ಹೆಚ್ಚು ಕೊಡಲು ಸಿದ್ಧರಿದ್ದರು. ಆದರೆ ಬೇರೆ ಬೇರೆ ಕಾರಣಗಳಿಂದ ಅವರಿಗೆ ಸಿಗಲಿಲ್ಲ ಅಷ್ಟೆ.) ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿ ಕನಿಷ್ಠ ಹತ್ತು ಕೋಟಿ ರೂ. ಖರ್ಚು ಮಾಡಿದ್ದಾನೆ. ಹಣ ಚೆಲ್ಲದಿದ್ದರೆ ಕಾರ್ಯಕರ್ತರು ಕೆಲಸ ಮಾಡುವುದೇ ಇಲ್ಲ. ಬಿಜೆಪಿಯಂಥ cadre based ಪಕ್ಷದ ಕಾರ್ಯಕರ್ತ ಮೊದಲಾಗಿದ್ದರೆ ಕಾಫಿ, ಚಹ ಕುಡಿದು ಕೆಲಸ ಮಾಡುತ್ತಿದ್ದ. ಈಗ ಮೊದಲು ಇಂತಿಷ್ಟು ಅಂತ ಹಣ ಮಡಗು ಅಂತಿದ್ದಾನೆ. ಒಬ್ಬ ಅಭ್ಯರ್ಥಿ ಹಿಂದೆ ಐನೂರು ಮಂದಿ ಕಾರ್ಯಕರ್ತರಿದ್ದಾರೆಂದರೆ ಅವರೆಲ್ಲರೂ paid workers. ಬಿಜೆಪಿ ಅಭ್ಯರ್ಥಿ ಹಿಂದೆ ಏಕಿದ್ದಾರೆಂದರೆ ಕಾಂಗ್ರೆಸ್ಸಿನವನಿಗಿಂತ ಬಿಜೆಪಿಯವ ಹೆಚ್ಚು ಹಣ ಕೊಟ್ಟಿದ್ದಾನೆಂಬ ಕಾರಣಕ್ಕೆ ಅಷ್ಟೆ. ನಿಂತರೆ ಕುಂತರೆ ಹಣ ಕಕ್ಕಬೇಕು. ಕೆಲ ಅಭ್ಯರ್ಥಿ ಗಳು ದಿನಕ್ಕೆ 50-75 ಲಕ್ಷ ರೂ.ಗಳಂತೆ ಖರ್ಚು ಮಾಡಿದ್ದಾರೆ. ಕೊನೆಯ ಎರಡು-ಮೂರು ದಿನ ಕೋಟಿ ಕೈಬಿಟ್ಟಿದೆ.

ಆರಿಸಿಬಂದ ನಂತರ ಖರ್ಚು ಮಾಡಿದ ಹಣವನ್ನು ವಾಪಸ್ ಪಡೆಯಲು ಬಯಸಿದರೆ ಅದು ತಪ್ಪಾ? ಈಸಲದ ಚುನಾವಣೆಯಲ್ಲಿ ಕಡಿಮೆ ಮತದಾನವಾಗಲು ಅಭ್ಯರ್ಥಿಗಳು ಮತದಾರರಿಗೆ ಕಡಿಮೆ ಹಣ ಕೊಟ್ಟಿದ್ದೂ ಒಂದು ಕಾರಣವಂತೆ. ಹಣ ನೀಡದಿದ್ದರೆ ಮತ ಹಾಕುವುದಿಲ್ಲವೆಂದು ಕೆಲವು ಕಡೆ ಜನರು ಬಹಿರಂಗವಾಗಿ ಹೇಳಿದ್ದುಂಟು. ಹಾಗಾದರೆ ರಾಜಕಾರಣಿಗಳನ್ನು ಭ್ರಷ್ಟಾಚಾರಕ್ಕೆ ನೂಕಿದವರು ಯಾರು? ಒಬ್ಬ ಎಮ್ಮೆಲ್ಲೆ, ಕಾರ್ಪೊರೇಟರ್, ಸಂಸದನಿಂದ ನಮ್ಮ ಊರನ್ನು ರಿಪೇರಿ ಮಾಡಲು ಸಾಧ್ಯವಾಗದಷ್ಟು ನಾವು ಹಾಳುಗೆಡವಿದ್ದೇವೆ. ಅವರೇ ಬಂದು ಎಲ್ಲವನ್ನೂ ಸರಿಪಡಿಸಬೇಕೆಂದು ನಿರೀಕ್ಷಿಸುತ್ತೇವೆ. ಭಾರತದಂಥ ದೇಶದಲ್ಲಿ ರಾಜಕಾರಣಿಯಾಗುವುದು ಸಾಮಾನ್ಯ ಸಂಗತಿಯಲ್ಲ. ಸಾಮಾನ್ಯರಿಗೆ ರಾಜಕಾರಣ ಸುಲಭಕ್ಕೆ ದಕ್ಕುವಂಥದೂ ಅಲ್ಲ. ರಾಜಕಾರಣಿಗಳ ಜತೆ ಒಂದು ದಿನ ಇದ್ದರೆ ನಮ್ಮ ತಲೆಕೆಟ್ಟು ಕೆರ ಹಿಡಿದಿರುತ್ತದೆ. ಇಷ್ಟಾಗಿಯೂ ನಾಲ್ಕು ಜನರಿಗೆ ಬೇಕಾದವರಾಗಿ, ನಾಲ್ಕು ಒಳ್ಳೆಯ ಮಾತುಗಳನ್ನು ಹೇಳಿಸಿಕೊಳ್ಳುವುದು ಬಹಳ ಕಷ್ಟ. ಏನೇ ಮಾಡಿದರೂ ಜನ ಟೀಕಿಸುತ್ತಾರೆ. ಈ ರಾಜಕಾರಣಿಗಳಿದ್ದಾರಲ್ಲ, ಮನೆಹಾಳರು ಎಂದೇ ಮೂದಲಿಸುತ್ತಾರೆ, ರಾಜಕಾರಣಿಗಳೆಲ್ಲ ಹಾಗೇ ಎಂದು ಸಾರಾಸಗಟಾಗಿ ಮೂಗುಮುರಿಯುತ್ತಾರೆ. ಅವರ ಜೀವನದೊಳಗೂ ಒಂದು ಸಲ ಇಣುಕಿದರೆ ಅವರ ಕಷ್ಟವೇನೆಂಬುದು ಗೊತ್ತಾದೀತು.

ಚುನಾವಣೆ ಮುಗಿಸಿ ಬಸವಳಿದು ಕುಳಿತು ಮುಂದಿನ ತಿಂಗಳ ಹದಿನಾರರವರೆಗೆ ಭವಿಷ್ಯಕ್ಕಾಗಿ ಆಕಾಶದತ್ತ ಮುಖ ಮಾಡಿ ನಿಂತಿರುವ ರಾಜಕಾರಣಿಗಳ ಬಗ್ಗೆ ಈಗಲೂ ಕನಿಕರ ತೋರದಿದ್ದರೆ ಹೇಗೆ?! ಅವರನ್ನು ದೂಷಿಸುವುದಂತೂ ಇದ್ದೇ ಇದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more