ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಜನಿಕ ಮೂತ್ರಿಗಳಿಗೂ ಈ ತ್ರಿಮೂರ್ತಿಗಳ ಹೆಸರು!

By * ವಿಶ್ವೇಶ್ವರ ಭಟ್
|
Google Oneindia Kannada News

Rajiv Gandhi, Nehru, Indira (photo by Kulwant Roy)
ಯಾರಾದರೂ ಹಾಗೆ ಭಾವಿಸಿದರೆ ಭಾವಿಸಲಿ ಬಿಡಿ, ಏನು ಮಾಡುವುದು? ಇಡಿ ದೇಶವೇ ಚುನಾವಣೆಯ ಅಂಗಳದಲ್ಲಿ ನಿಂತಿರುವಾಗ ಇಂಥದೊಂದು ವಿಷಯ ಹೇಳಿದರೆ, ನನ್ನನ್ನು ಕಾಂಗ್ರೆಸ್ ವಿರೋಧಿ ಎಂದೂ, ಬಿಜೆಪಿಗೆ ಅನುಕೂಲವಾಗಲೆಂದು ಬರೆದಿದ್ದೆಂದೂ, ಇದರಲ್ಲಿ ದುರುದ್ದೇಶ ಕೂಡಿದೆಯೆಂದೂ ಭಾವಿಸುವ ಅಪಾಯವಿದೆ. ಪತ್ರಕರ್ತನಿಗೆ ಇವೆಲ್ಲ ಹೊಸತಲ್ಲ. ಒಂದು ವೇಳೆ ಯಾರಾದರೂ ಈ ಕ್ಷಣದಲ್ಲಿ ಹಾಗೆ ಭಾವಿಸಿದರೆ ಭಾವಿಸಲಿ ಬಿಡಿ. ಆದರೆ ಈ ವಿಷಯವನ್ನು ಪೂರ್ತಿ ಓದಿದ ಬಳಿಕವಾದರೂ ತಮ್ಮ ಅಭಿಪ್ರಾಯ ಬದಲಿಸಿಕೊಳ್ಳುತ್ತಾರೆಂಬ ನಂಬಿಕೆಯಿಂದಲೂ, ಬದಲಿಸಿಕೊಳ್ಳದಿದ್ದರೆ ಅದು ಅವರ ಕರ್ಮ ಎಂಬ ಪೂಜ್ಯ ತಾತ್ಸಾರದಿಂದಲೂ ಕೆಲ ಸಂಗತಿಗಳನ್ನು ಹೇಳಲೇಬೇಕಿದೆ.

ಮೊನ್ನೆ ಮಾರ್ಚ್ 12ರಂದು ಪತ್ರಕರ್ತ ಎ. ಸೂರ್ಯಪ್ರಕಾಶ್ ಅವರು ಮುಖ್ಯ ಚುನಾವಣಾ ಅಧಿಕಾರಿ ಗೋಪಾಲಸ್ವಾಮಿಯವರಿಗೆ ಬರೆದ ಪತ್ರದಲ್ಲಿ ಒಂದು ಪ್ರಮುಖ ವಿಷಯ ಪ್ರಸ್ತಾಪಿಸಿದ್ದಾರೆ. ಇದ್ಯಾಕೋ ಯಾವುದೇ ಪತ್ರಿಕೆ, ಟಿವಿಯಲ್ಲಾಗಲಿ ವರದಿಯಾಗಲಿಲ್ಲ. ಅದರಲ್ಲಿ ಆಶ್ಚರ್ಯವಿಲ್ಲ ಬಿಡಿ. ಯಾಕೆಂದರೆ ಎಲ್ಲರೂ ವರುಣ್ ಗಾಂಧಿಯ ಬೇಜವಾಬ್ದಾರಿ, ಮೂರ್ಖತನದ ಹೇಳಿಕೆ ಬಗ್ಗೆಯೇ ತಲೆಕೆಡಿಸಿಕೊಂಡಂತಿದೆ. ನಿಮಗೆ ಗೊತ್ತಿರಬಹುದು, ನಾನು ಇಷ್ಟಪಡುವ, ಗೌರವಿಸುವ ಸೂರ್ಯಪ್ರಕಾಶ್ ಮೂಲತಃ ನಮ್ಮ ಹಾಸನ ಜಿಲ್ಲೆಯ ಅರಕಲಗೂಡಿನವರು. ಸುಮಾರು ಎರಡು ದಶಕಗಳ ಕಾಲ ಇಂಡಿಯನ್ಎಕ್ಸ್‌ಪ್ರೆಸ್'ನಲ್ಲಿ ಕೆಲಸ ಮಾಡಿದವರು. ದಿಲ್ಲಿಯ ಎಕ್ಸ್‌ಪ್ರೆಸ್ ನ್ಯೂಸ್ ಬ್ಯೂರೋದ ಮುಖ್ಯಸ್ಥರಾಗಿದ್ದ ಸೂರ್ಯಪ್ರಕಾಶ್, ರಾಷ್ಟ್ರವನ್ನು ಬಾಧಿಸುವ ಸೂಕ್ಷ್ಮ ಹಾಗೂ ಗಂಭೀರ ವಿಷಯಗಳ ಬಗ್ಗೆ ಚಿಂತನೆಗೆ ಹಚ್ಚುವ ಲೇಖನ, ಪುಸ್ತಕ ಬರೆದ ವಿಚಾರವಂತ ಪತ್ರಕರ್ತ. ಅಧ್ಯಯನ, ಸಂಶೋಧನೆಯ ಮೂಸೆಯಲ್ಲಿಯೇ ಅರಳುವ ಅವರ ಬರಹಗಳಿಂದ ಹಲವು ಸಲ ರಾಷ್ಟ್ರೀಯ ಸ್ತರದಲ್ಲಿ ಚರ್ಚೆಗಳಾಗಿವೆ. ಈಗ ಸೂರ್ಯಪ್ರಕಾಶ್ ಪುನಃ ಅಂಥ ಒಂದು ಚರ್ಚೆಯನ್ನು ದೇಶದ ಮುಂದೆ ಇಟ್ಟಿದ್ದಾರೆ. ಇದನ್ನು ಪ್ರಜ್ಞಾವಂತ ನಾಗರಿಕರಾರೂ ಕಡೆಗಣಿಸುವಂತಿಲ್ಲ.

ರಾಷ್ಟ್ರೀಯವಾದದ ಬಗ್ಗೆ ಮಾತಾಡಿದರೆ ಕೋಮುವಾದಿ ಎಂದು ಮೂದಲಿಸುವ, ಸ್ವಾಮಿ ವಿವೇಕಾನಂದರ ತತ್ತ್ವ, ಆದರ್ಶಗಳ ಬಗ್ಗೆ ಹೇಳಿದರೆ ಕೇಸರೀಕರಣ ಎಂದು ಜರೆಯುವ ಕಾಂಗ್ರೆಸ್ಸಿಗರು ಇದನ್ನು ಏನೆಂದು ಕರೆಯುತ್ತಾರೋ ಗೊತ್ತಿಲ್ಲ. ಕಳೆದ ಹದಿನೆಂಟು ವರ್ಷಗಳಲ್ಲಿ ಕೇಂದ್ರ ಹಾಗೂ ರಾಜ್ಯಗಳಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರಗಳು ಜವಾಹರಲಾಲ್ ನೆಹರು, ಇಂದಿರಾಗಾಂಧಿ ಮತ್ತು ರಾಜೀವ್‌ಗಾಂಧಿ ಹೆಸರುಗಳನ್ನು 450ಕ್ಕೂ ಹೆಚ್ಚು ಸರಕಾರಿ ಕಾರ್ಯಕ್ರಮಗಳಿಗೆ, ಯೋಜನೆಗಳಿಗೆ, ಸಂಸ್ಥೆಗಳಿಗೆ ಇಟ್ಟಿವೆಯೆಂದರೆ ಆಶ್ಚರ್ಯವಾದರೂ ನಂಬಬೇಕು! ಸೋಜಿಗದ ಸಂಗತಿಯೆಂದರೆ ಕಾಂಗ್ರೆಸ್ ಸರಕಾರ ಯಾವುದೇ ಹೊಸ ಯೋಜನೆ ಜಾರಿಗೆ ತರಲಿ, ಹೊಸ ಸೇತುವೆ ಕಟ್ಟಲಿ, ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಿ ಅದಕ್ಕೆ ಜವಾಹರಲಾಲ್ ನೆಹರು, ಇಂದಿರಾಗಾಂಧಿ ಅಥವಾ ರಾಜೀವ್ ಗಾಂಧಿಯವರ ಪೈಕಿ ಒಬ್ಬರದಾದರೂ ಹೆಸರನ್ನು ಇಡಲೇಬೇಕು ಎಂಬುದನ್ನು ಸುಶಾಸನದಂತೆ ಜಾರಿಗೆ ತರುತ್ತಿದೆ! ಈ ಮೂರು ಹೆಸರುಗಳನ್ನು ಬಿಟ್ಟು ಬೇರೆ ಹೆಸರಿಡುವ ಧೈರ್ಯ ಯಾವ ಪ್ರಧಾನಿ, ಮುಖ್ಯಮಂತ್ರಿಗೂ ಇಲ್ಲ. ಬೇರೆ ಹೆಸರಿಟ್ಟು ತಾನೂ ಯಾವ ಸೀಮೆ ಪುಕ್ಕಲ ಧೈರ್ಯವಂತ' ಎಂದೇಕೆ ತೋರಿಸಿಕೊಳ್ಳಬೇಕೆಂದು ಯಾವ ಕಾಂಗ್ರೆಸ್ಸಿಗನೂ ಬೇರೆ ಹೆಸರಿಡುವ ಗೋಜಿಗೂ ಹೋಗಿಲ್ಲ. ಪರಿಣಾಮ, ಎಲ್ಲವೂ ಜವಾಹರ, ಇಂದಿರಾ ಹಾಗೂ ರಾಜೀವ್ ಮಯ!

ಸರಕಾರದ ಕಾರ್ಯಕ್ರಮ, ಯೋಜನೆ, ಕಟ್ಟಡ, ಸಂಸ್ಥೆಗಳಿಗೆ ರಾಷ್ಟ್ರೀಯ, ರಾಜ್ಯಮಟ್ಟದ ನಾಯಕರ ಹೆಸರಿಡುವುದು ತಪ್ಪೇನಲ್ಲ. ಅದು ಸರಕಾರಗಳ ವಿವೇಚನೆಗೆ ಬಿಟ್ಟ ವಿಚಾರ. ಆ ಪ್ರಕಾರ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರುಗಳನ್ನಿಡುವುದೂ ತಪ್ಪೇನಲ್ಲ. ಆದರೆ ಎಲ್ಲವುಗಳಿಗೂ ಒಂದೇ ಕುಟುಂಬದ ಮೂವರ ಹೆಸರುಗಳನ್ನು ಮಾತ್ರ ಇಟ್ಟರೆ, ಬೇರೆಯವರ ಹೆಸರುಗಳನ್ನು ಇಡಲೇಕೂಡದೆಂದರೆ ಅದನ್ನು ಪ್ರಶ್ನಿಸಬೇಕಾಗುತ್ತದೆ. ಇದ್ಯಾಕೋ ತುಸು ಅತಿಯಾಯ್ತು ಕಣ್ರೀss' ಎಂದು ಹೇಳಬೇಕಾಗುತ್ತದೆ. ಯಾಕೆಂದರೆ ಇವೆಲ್ಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲ, ದೇಶದ ಪ್ರಜೆಗಳ ತೆರಿಗೆಯಿಂದ ಸಂಗ್ರಹಿಸಲಾದ ಲಕ್ಷಾಂತರಕೋಟಿ ಹಣವನ್ನು ಒಂದು ಮನೆತನದ ಕೆಲ ಸದಸ್ಯರ ಹೆಸರಿನಲ್ಲಿ ಖರ್ಚು ಮಾಡುವುದು ಯಾವ ನ್ಯಾಯ? ಈ ದೇಶದಲ್ಲಿ ಈಮೂವರ ಹೊರತಾಗಿ ಬೇರ್ಯಾರೂ ನಾಯಕರೇ ಇಲ್ಲವಾ? ಕಾಂಗ್ರೆಸ್‌ನಲ್ಲಿ ಇರೋರು ಈ ಮೂವರೇನಾ? ಸರಕಾರವೆಂದರೆ ಒಂದು ಕುಟುಂಬದ ಆಸ್ತಿನಾ? ಮಹಾತ್ಮ ಗಾಂಧಿಗಿಂತ ರಾಜೀವ್ ಗಾಂಧಿನೇ ದೊಡ್ಡವರಾ?

ಯಾಕೆಂದರೆ ಮಹಾತ್ಮ ಗಾಂಧಿಯವರ ಹೆಸರನ್ನು ಒಂದೆರಡು ಕಾರ್ಯಕ್ರಮಗಳಿಗೆ ಇಟ್ಟಿರಬಹುದು. ಆದರೆ ರಾಜೀವ್ ಗಾಂಧಿ ಅದೆಂಥ ಮಹಾತ್ಮರೆಂದರೆ ಅವರ ಹೆಸರನ್ನು ಇನ್ನೂರಕ್ಕೂ ಹೆಚ್ಚು ಕಾರ್ಯಕ್ರಮ, ಯೋಜನೆ, ಸಂಸ್ಥೆಗಳಿಗೆ ಇಡಲಾಗಿದೆ. ಹಾಗಾದರೆ ಇದು ಯಾವ ಕರಣ"? ಇದು ಇಂದಿರಾಗಾಂಧಿಯವರಿಂದ ಶುರುವಾಯಿತು. ಅವರು ಪ್ರಧಾನಿಯಾಗಿದ್ದಾಗ ಎಲ್ಲ ಕಾರ್ಯಕ್ರಮ, ಸಂಸ್ಥೆಗಳಿಗೆ ತಮ್ಮಪ್ಪನ ಹೆಸರನ್ನು ಇಡಲು ಆರಂಭಿಸಿದರು. ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನಾಯಕರು ಇಂದಿರಮ್ಮನನ್ನು ಖುಷಿಪಡಿಸಲು ತಮ್ಮಪ್ಪನ ಹೆಸರಿಗಿಂತ ಹೆಚ್ಚಿನ ಅಭಿಮಾನದಿಂದ ಜವಾಹರಲಾಲ್ ನೆಹರು ಹೆಸರನ್ನು ಇಡುವುದೇ ಸೌಭಾಗ್ಯವೆಂದು ಭಾವಿಸಿದರು. ರಾಜೀವ್ ಗಾಂಧಿ ಪ್ರಧಾನಿಯಾಗುತ್ತಿದ್ದಂತೆ ಸರಕಾರಿ ಪ್ರಣೀತ ಯೋಜನೆ, ಸಂಸ್ಥೆಗಳಿಗೆ ಒಂದೋ ತಾತನ ಹೆಸರು, ಇಲ್ಲವೇ ಅಮ್ಮನ ಹೆಸರನ್ನು ಇಡಲಾರಂಭಿಸಿದರು. ಹೆಸರಿಗೆ ಹೆಸರು ಎಂದು ಹೆಸರಿಟ್ಟು ಹೆಸರುವಾಸಿಯಾದವನ ಹೆಸರೇ ಹೇಳ ಹೆಸರಿಲ್ಲದಂತಾಗಿದೆಯೆಂದು ಬೀchi ಹೇಳಿದಂತೆ ಬೇರೆ ಹೆಸರಿಟ್ಟರೆ ತಾನೂ ಹೇಳಹೆಸರಿಲ್ಲದಂತಾಗಬಹುದೆಂದು ನರಸಿಂಹರಾಯರೂ ಇದೇ ಚಾಳಿ ಮುಂದುವರಿಸಿದರು. ಸೋನಿಯಾ ಕೈಗೊಂಬೆಯಂತಿರುವ ಡಾ. ಮನಮೋಹನ್ ಸಿಂಗ್ ಪ್ರಧಾನಿಯಾದ ನಂತರವಂತೂ ಎಲ್ಲವೂ ರಾಜೀವ್‌ಗಾಂಧಿಮಯ! ಹತ್ತಾರು ಸಲ ರಾಜೀವ್ ಹೆಸರಿಟ್ಟಾಗ ಜನ ಏನೆಂದು ಭಾವಿಸಬಹುದೆಂದು ಅನಿಸಿದಾಗ ಇಂದಿರಾಗಾಂಧಿ ಹೆಸರು! ಇವರಿಬ್ಬರ ಹೆಸರಿಗೂ ಹಾಗೆ ಅನಿಸಿದಾಗ ನೆಹರು! ಅನಂತರ ಪುನಃ ರಾಜೀವ್... ಬಳಿಕ ಇಂದಿರಾ... ತರುವಾಯ ನೆಹರು! ಒಟ್ಟಾರೆ ಅವರೇ!

ಐದನೆ ಪಂಚವಾರ್ಷಿಕ ಯೋಜನೆಯಲ್ಲಿ 28 ಸಾವಿರ ಕೋಟಿ ರೂ. ಗ್ರಾಮೀಣ ಪ್ರದೇಶಗಳಿಗೆ ವಿದ್ಯುಚ್ಛಕ್ತಿ ಪೂರೈಸುವ ಯೋಜನೆಯನ್ನು ಡಾ. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ ನಿರ್ಧರಿಸಿತಲ್ಲದೇ 2008-09ರಲ್ಲಿ 5500ಕೋಟಿ ರೂ. ಬಿಡುಗಡೆ ಮಾಡಿತು. ಈ ಮಹತ್ವಾಕಾಂಕ್ಷಿ ಯೋಜನೆಗಿಟ್ಟ ಹೆಸರು ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆ. ಮೂರು ವರ್ಷಗಳಲ್ಲಿ ಎಲ್ಲ ಗ್ರಾಮಗಳಿಗೆ 21 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಪೂರೈಸುವ ಯೋಜನೆಗೂ ರಾಜೀವ್ ಗಾಂಧಿ ಅವರದೇ ಹೆಸರು. ಎರಡು ವರ್ಷಗಳಲ್ಲಿ 15 ಸಾವಿರ ಕೋಟಿ ರೂ. ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸುವ ಕಾರ್ಯಕ್ರಮಕ್ಕೆ ಇಂದಿರಾ ಆವಾಸ್ ಯೋಜನೆ ಎಂಬ ಹೆಸರು. ಬಡತನರೇಖೆಗಿಂತ ಕೆಳಗಿರುವ ಗ್ರಾಮೀಣ ಕಡುಬಡವರು ಈ ಯೋಜನೆಯ ಫಲಾನುಭವಿಗಳು. ವೃದ್ಧರಿಗೆ ಕೇಂದ್ರ ಸರಕಾರ ಪಿಂಚಣಿ ನೀಡುವ ಕಾರ್ಯಕ್ರಮ ರೂಪಿಸಿದರೆ ಅದಕ್ಕಿಟ್ಟ ಹೆಸರು ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧ ಪಿಂಚಣಿ ಯೋಜನೆ. ಈ ವರ್ಷದ ಬಜೆಟ್‌ನಲ್ಲಿ ಈ ಯೋಜನೆಗೆ ತೆಗೆದಿರಿಸಿದ ಹಣ 3443 ಕೋಟಿ ರೂ. ಎರಡು ದಶಕಗಳಿಂದ ಕೇಂದ್ರ ಸರಕಾರದ ಯಾವುದಾದರೂ ಒಂದು ಯೋಜನೆಗೆ ನಿರಂತರವಾಗಿ ಹಣ ಹರಿದುಬರುತ್ತಿದ್ದರೆ ಅದು ರೋಜ್‌ಗಾರ್ ಯೋಜನೆಗೆ. ಅದಕ್ಕೆ ಜವಾಹರ್ ರೋಜ್‌ಗಾರ್ ಯೋಜನೆ ಅಂತ ಹೆಸರು. ಇಂಥದೇ ಇನ್ನೆರಡು ಯೋಜನೆಗಳೆಂದರೆ ಜವಾಹರ ಗ್ರಾಮಸಮೃದ್ಧಿ ಯೋಜನೆ ಹಾಗೂ ಸಂಪೂರ್ಣ ಗ್ರಾಮೀಣ ರೋಜ್‌ಗಾರ್ ಯೋಜನೆ. ಗೊತ್ತಿರಲಿ, ಜವಾಹರ ಗ್ರಾಮಸಮೃದ್ಧಿ ಯೋಜನೆಗೆ ಮುಂದಿನ ಏಳು ವರ್ಷಗಳಲ್ಲಿ 50 ಸಾವಿರ ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಲಾಗಿದ್ದು, ಹಿಂದಿನ ವರ್ಷ 10 ಸಾವಿರ ಕೋಟಿ ರೂ. ವ್ಯಯಿಸಲಾಗಿದೆ. ಕೆಲಸಕ್ಕೆ ಹೋಗುವ ಮಹಿಳೆಯರ ಮಕ್ಕಳನ್ನು ನೋಡಿಕೊಳ್ಳಲೆಂದು ಆರಂಭಿಸಿರುವ ಶಿಶು ಪಾಲನಾಕೇಂದ್ರಗಳಿಗೂ ರಾಜೀವ್‌ಗಾಂಧಿ ಹೆಸರನ್ನೇ ಇಡಲಾಗಿದೆ. ಸಣ್ಣ ಪ್ರಮಾಣದ ಉದ್ಯಮದಾರರಿಗೆ ನೆರವಾಗುವ ಉದ್ಯಮಿ ಮಿತ್ರ ಯೋಜನೆಗೂ ರಾಜೀವ್‌ಗಾಂಧಿ, ಶ್ರಮಿಕ ಕಲ್ಯಾಣ ಯೋಜನೆಗೂ ರಾಜೀವ್ ಗಾಂಧಿ, ಶಿಲ್ಪಿ ಸ್ವಾಸ್ಥ್ಯ ವಿಮಾ ಯೋಜನೆಗೂ ರಾಜೀವ್‌ಗಾಂಧಿ!

ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಅಂತಾರಲ್ಲ ಹಾಗೆಯೇ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯ ಸರಕಾರಗಳೂ ಈ ವಿಷಯದಲ್ಲಿ ಜಿದ್ದಿಗೆ ಬಿದ್ದವರಂತೆ ನೆಹರು-ಇಂದಿರಾ-ರಾಜೀವ್ ಹಿಂದೆ ಬಿದ್ದಿವೆ. ಆಂಧ್ರಪ್ರದೇಶ ಸರಕಾರ ಗ್ರಾಮೀಣ ಪ್ರದೇಶಗಳಿಗೆ ಆಂಬ್ಯುಲೆನ್ಸ್ ನೀಡುವ ಯೋಜನೆ ಆರಂಭಿಸಿತು. ಅದಕ್ಕೆ ರಾಜೀವ್ ಆರೋಗ್ಯಶ್ರೀ' ಅಂತ ಹೆಸರು. 650 ಆಂಬ್ಯುಲೆನ್ಸ್‌ಗಳ ಮೇಲೆ ರಾಜೀವ್‌ಗಾಂಧಿ ಚಿತ್ರ. ಒಂದಕ್ಕೆ 12 ಲಕ್ಷ ರೂ.ನಂತೆ, ತಿಂಗಳ ನಿರ್ವಹಣೆಗೆ 1.25 ಲಕ್ಷ ರೂ. ಖರ್ಚು ಮಾಡಿ ರಾಜೀವ್‌ಗಾಂಧಿ ಚಿತ್ರ ಹಾಕಿ ಊರೂರು ತಿರುಗಿಸಿದರೆ ಇದು ಕಾಂಗ್ರೆಸ್ಸೀಕರಣವಾಗುವುದಿಲ್ಲವಾ?

ಕೆಲವು ರಾಜ್ಯಗಳು ಆರಂಭಿಸಿರುವ ಗಾಂಧಿ ಸಂಪ್ರೀತ' ಯೋಜನೆಗಳ ಸ್ಯಾಂಪಲ್ ನೋಡಿ. ರಾಜೀವ್‌ಗಾಂಧಿ ಉಪಾಹಾರ ಯೋಜನೆ(ಪುದುಚೇರಿ), ರಾಜೀವ್‌ರತ್ನ ಆವಾಸ್ ಯೋಜನೆ(ದಿಲ್ಲಿ), ರಾಜೀವ್‌ಗಾಂಧಿ ಕಂಪ್ಯೂಟರ್ ಸಾಕ್ಷರತಾ ಯೋಜನೆ (ಅಸ್ಸಾಂ), ರಾಜೀವ್‌ಗಾಂಧಿ ಸೇತುವೆ-ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ (ಹರಿಯಾಣ), ರಾಜೀವ್‌ಗಾಂಧಿ ವಿದ್ಯಾರ್ಥಿ ಸುರಕ್ಷಾ ಯೋಜನೆ (ಮಹಾರಾಷ್ಟ್ರ), ರಾಜೀವ್‌ಗಾಂಧಿ ಪ್ರವಾಸೋದ್ಯಮ ಅಭಿವೃದ್ಧಿ ಮಿಷನ್ (ರಾಜಸ್ಥಾನ), ಇಂದಿರಾ ಜೀವಿತ ವಿಮಾ ಪಾಠಕಂ (ಆಂಧ್ರ), ಇಂದಿರಾಗಾಂಧಿ ನಿರಾಧಾರ ಯೋಜನೆ (ಮಹಾರಾಷ್ಟ್ರ), ಇಂದಿರಾಗಾಂಧಿ ಪ್ರಿಯದರ್ಶಿನಿ ವಿವಾಹ ಶಾಗುನ್ ಯೋಜನೆ (ಹರ್‍ಯಾಣ), ಇಂದಿರಾಗಾಂಧಿ ಭೂಹೀನ ಕೃಷಿ ಕಾರ್ಮಿಕರ ಯೋಜನೆ (ಮಹಾರಾಷ್ಟ್ರ)... ಹೀಗೆ 52 ಕಾರ್ಯಕ್ರಮಗಳಿವೆ. ಇವೆಲ್ಲ ಕಳೆದ ಐದು ವರ್ಷಗಳಲ್ಲಿ ಜಾರಿಗೆ ಬಂದವು. ಗಂಡಸರು, ಹೆಂಗಸರು, ಮಕ್ಕಳು, ನಿರ್ಗತಿಕರು, ಕಾರ್ಮಿಕರು, ವೃದ್ಧರು, ಮದುವೆ, ಮಸಣ, ಉದ್ಯೋಗ, ನಿರುದ್ಯೋಗ, ವೈಕಲ್ಯ, ಶಿಕ್ಷಣ, ಆಹಾರ, ಮೂಲಸೌಕರ್ಯ, ವಸತಿ, ಕುಡಿಯುವ ನೀರು, ವಿಮೆ, ಕೃಷಿ... ಹೀಗೆ ಯಾವುದೇ ಕ್ಷೇತ್ರಕ್ಕೆ ಸರಕಾರ ಕಾರ್ಯಕ್ರಮ ರೂಪಿಸಲಿ, ಈ ಮೂವರ ಹೊರತಾಗಿ ಬೇರೆ ಯಾರದಾದರೂ ಹೆಸರಿಟ್ಟರೆ ಕೇಳಿ. ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಫೆಲೋಶಿಪ್ ನೀಡುವ ಯೋಜನೆಗಾದರೂ ಡಾ. ಅಂಬೇಡ್ಕರ್ ಹೆಸರು ಇಡಬಹುದಲ್ಲ ಅಂದರೆ ಉಹುಂ, ಅದಕ್ಕೂ ರಾಜೀವ್‌ಗಾಂ ನಾಮವೇ ಬೇಕು!

ಈ ತ್ರಿಮೂರ್ತಿಗಳ ನಾಮಸ್ಮರಣೆಯ ಜಪಾವಳಿ ಇಲ್ಲಿಗೇ ನಿಲ್ಲುವುದಿಲ್ಲ. ರಸ್ತೆ, ಸೇತುವೆ, ಮೇಲ್‌ಸೇತುವೆ, ಕಾಲುವೆ, ಅಣೆಕಟ್ಟು, ಚೆಕ್‌ಡ್ಯಾಮ್, ಕೆರೆ, ಕೋಡಿ, ಗ್ರಂಥಾಲಯ, ಸಮಾ, ಉದ್ಯಾನವನ, ಸ್ಮಾರಕ, ಚೌಕ, ವರ್ತುಲರಸ್ತೆ, ಆಸ್ಪತ್ರೆ, ಕಾಲೇಜು, ವಿಶ್ವವಿದ್ಯಾಲಯ, ಸಮುದಾಯಭವನ, ರಾಷ್ಟ್ರೀಯ ಉದ್ಯಾನ, ಐಟಿ ಪಾರ್ಕ್, ದ್ವೀಪ, ಕ್ರೀಡಾಂಗಣ, ಬಂದರು, ಬಡಾವಣೆ, ಈಜುಕೊಳ, ಮ್ಯೂಸಿಯಂ, ಮೃಗಾಲಯ, ವಿಮಾನ ನಿಲ್ದಾಣ, ರೈಲು ನಿಲ್ದಾಣ, ರೈಲ್ವೆ ಟರ್ಮಿನಲ್, ಬಹುಮಹಡಿ ಕಟ್ಟಡ, ಸರಕಾರಿ ಕಟ್ಟಡ... ಈ ಮೂವರ ಹೆಸರುಗಳ ಹೊರತಾಗಿ ಮತ್ತ್ಯಾರ ಹೆಸರೂ ಇಲ್ಲ. ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಹೆಸರಿನಲ್ಲಿ 32 ಮೆಡಿಕಲ್ ಕಾಲೇಜುಗಳಿವೆ. ರಾಜೀವ್ ಹೆಸರಿನಲ್ಲಿ ಎರಡು ವಿಮಾನ ನಿಲ್ದಾಣಗಳಿವೆ. ಐವತ್ತೈದು ವಿಶ್ವವಿದ್ಯಾಲಯ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ರಾಜೀವ್ ಗಾಂಧಿ ನಾಮಕರಣ ಮಾಡಲಾಗಿದೆ. ಹನ್ನೊಂದು ಸ್ಟೇಡಿಯಮ್‌ಗಳಿಗೂ ರಾಜೀವ್ ಹೆಸರು. ಎಪ್ಪತ್ನಾಲ್ಕು ರಸ್ತೆ, ಸೇತುವೆಗಳಿಗೆ ಒಂದೋ ತಾತ, ಇಲ್ಲವೇ ಅಮ್ಮ ಅಥವಾ ಮಗನ ಹೆಸರು ಫಲಕಗಳಲ್ಲಿ ರಾರಾಜಿಸುತ್ತಿವೆ. ಮಹಾರಾಷ್ಟ್ರ ಸರಕಾರ ಜಾರಿಗೆ ತಂದ ಸ್ಮಶಾನ ಅಭಿವೃದ್ಧಿಗೂ ರಾಜೀವ್ ಗಾಂಧಿ ಹೆಸರೇ ಬೇಕು. ರಾಜ್ಯದಲ್ಲಿ ಎಲ್ಲಿಯೇ ಸರಕಾರ ಸ್ಮಶಾನ ನಿರ್ಮಿಸಲಿ, ನವೀಕರಿಸಲಿ ಅದು ರಾಜೀವ್ ನಾಮಸ್ತುತಿಯಿಂದಲೇ ಆರಂಭವಾಗಬೇಕು!

ಪ್ರಾಯಶಃ ಬಚ್ಚಲುಮನೆ, ಕಕ್ಕಸು, ಚರಂಡಿಗಳು ಮಾತ್ರ ಈ ತ್ರಿಮೂರ್ತಿಗಳ ನಾಮಧಾರಣದಿಂದ ಬಚಾವ್ ಆಗಿರುವ ಗುಮಾನಿಗಳಿವೆ ಅಂದುಕೊಂಡರೆ ರಾಜಸ್ಥಾನ ಸರಕಾರ ಅದನ್ನೂ ಬಿಟ್ಟಿಲ್ಲ. ಇಂದಿರಾ ಸಾರ್ವಜನಿಕ ಶೌಚ್ ಯೋಜನೆಯಲ್ಲಿ ಎಲ್ಲೆಡೆ ಬಚ್ಚಲುಮನೆ ಕಟ್ಟಿಸಿ ಅದಕ್ಕೂ ಇಂದಿರಾಗಾಂಧಿ ಹೆಸರಿನ ಫಲಕ ತೂಗುಹಾಕಿದೆ. ಸಾರ್ವಜನಿಕ ಮೂತ್ರಿಗಳಿಗೂ ತ್ರಿಮೂರ್ತಿಗಳ ಹೆಸರೇ ಬೇಕಾ? ಸ್ವಲ್ಪ ತಡೆಯಿರಿ, ಇಷ್ಟಕ್ಕೇ ಮುಗಿಯಲಿಲ್ಲ. ಸರಕಾರ ಕೊಡುವ ಪ್ರಶಸ್ತಿಗಳಿಗೂ ಇವರ ಹೆಸರು ಇಲ್ಲ ಅಂದ್ರೆ ಹೇಗೆ? ರಾಜೀವ್ ಗಾಂಧಿ ಶಿರೋಮಣಿ ಪ್ರಶಸ್ತಿ, ರಾಜೀವ್ ಗಾಂಧಿ ಶ್ರಮಿಕ ಪ್ರಶಸ್ತಿ, ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ, ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿ. ರಾಜೀವ್ ಗಾಂಧಿ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ, ರಾಜೀವ್ ಗಾಂಧಿ ಜ್ಞಾನ ವಿಜ್ಞಾನ ಕುರಿತ ಮೂಲ ಪುಸ್ತಕ ರಚನೆಗೆ ರಾಷ್ಟ್ರೀಯ ಪ್ರಶಸ್ತಿ, ರಾಜೀವ್ ಗಾಂಧಿ ವನ್ಯಪ್ರಾಣಿ ಸಂರಕ್ಷಣ ಪ್ರಶಸ್ತಿ, ರಾಜೀವ್ ಗಾಂಧಿ ಅಸಾಧಾರಣ ಸಾಧನಾ ಪ್ರಶಸ್ತಿ, ರಾಜೀವ್ ಗಾಂಧಿ ಚಲನಚಿತ್ರ ಪ್ರಶಸ್ತಿ... ಪಟ್ಟಿ ಹೀಗೆ ಬೆಳೆಯುತ್ತದೆ. ಇಂದಿರಾಗಾಂಧಿ ಪರ್‍ಯಾವರಣ ಪುರಸ್ಕಾರ, ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ, ಇಂದಿರಾಗಾಂಧಿ ಶಾಂತಿ ಪ್ರಶಸ್ತಿ ಸೇರಿದಂತೆ ಇಂದಿರಾ ಹೆಸರಿನಲ್ಲಿ 22 ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಕೇಂದ್ರ ಸರಕಾರ ನೀಡುತ್ತಿದೆ. ನೆಹರು ಹೆಸರಲ್ಲಿ ಎಂಟು ಪ್ರಶಸ್ತಿಗಳು ಬೇರೆ.

ನಮಗೆಲ್ಲ ಫುಲ್‌ಬ್ರೈಟ್ ಸ್ಕಾಲರ್‌ಶಿಪ್ ಗೊತ್ತು. ಡಾ. ಮನಮೋಹನ್ ಸಿಂಗ್ ಸರಕಾರ ಬಂದ ನಂತರ ಇದನ್ನು ಫುಲ್‌ಬ್ರೈಟ್-ಜವಾಹರಲಾಲ್ ನೆಹರು ಸ್ಕಾಲರ್‌ಶಿಪ್ ಎಂದು ಬದಲಿಸಿತು. ಬ್ರಿಟನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರತಿವರ್ಷ ಹತ್ತು ಅರ್ಹ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರ ಸ್ಕಾಲರ್‌ಶಿಪ್ ನೀಡುತ್ತಿದೆ. ಅದಕ್ಕೆ ಕೇಂಬ್ರಿಡ್ಜ್ ನೆಹರು ಸ್ಕಾಲರ್‌ಶಿಪ್ ಅಂತ ಹೆಸರು. ರಾಜೀವ್ ಗಾಂಧಿಯವರ ಹೆಸರಿನಲ್ಲೊಂದೇ ಹನ್ನೊಂದು ಸ್ಕಾಲರ್‌ಸಿಪ್‌ಗಳನ್ನು ನೀಡಲಾಗುತ್ತಿದೆ. ದುಡ್ಡು ಜನರದ್ದು ಆದರೆ ಪ್ರಚಾರ ಮಾತ್ರ ಕಾಂಗ್ರೆಸ್ಸಿಗೆ! ನೆಹರು-ಗಾಂಧಿ ಕುಟುಂಬದ ಭಟ್ಟಂಗಿತನ ಇಲ್ಲಿಗೇ ನಿಲ್ಲುವುದಿಲ್ಲ. ಪ್ರಮುಖ ಕ್ರೀಡಾಕೂಟ, ಟೂರ್ನ್‌ಮೆಂಟ್ ಗಳಿಗೂ ರಾಜೀವ್ ಗಾಂಧಿ ಹೆಸರಿಡುವ ಮಟ್ಟಕ್ಕೆ ಕಾಂಗ್ರೆಸ್ ಇಳಿದಿರುವುದನ್ನು ನೋಡಿದರೆ ಮಸ್ಕಾ ಹೊಡೆಯುವುದಕ್ಕೂ ಮಿತಿಯಿರಬೇಕೆನಿಸುತ್ತದೆ. ರಾಜೀವ್ ಗಾಂಧಿ ಹೆಸರಿನಲ್ಲಿ ಕಬಡ್ಡಿ ಕ್ರೀಡಾಕೂಟ, ಸ್ಕೇಟಿಂಗ್ ಸ್ಪರ್ಧೆ, ಫುಟ್ಬಾಲ್ ಪಂದ್ಯ ಸೇರಿದಂತೆ 22 ಕ್ರೀಡಾಕೂಟಗಳು ನಡೆಯುತ್ತವೆ. ಬೀಚ್‌ಬಾಲ್, ಬಾಸ್ಕೆಟ್ ಬಾಲ್, ಜೂಡೋ, ಗ್ರಾಮೀಣ ಕ್ರಿಕೆಟ್, ಬಾಕ್ಸಿಂಗ್, ದಿಲ್ಲಿ ಮ್ಯಾರಾಥಾನ್, ಮಿನಿ ಒಲಿಂಪಿಕ್ಸ್, ಸದ್ಭಾವನಾ ಓಟಗಳು ನಡೆಯುತ್ತವೆ. ಕೇರಳದ ದೋಣಿರೇಸಿಗೂ ರಾಜೀವ್ ಗಾಂಧಿ ಹೆಸರನ್ನೇ ಇಡಬೇಕಾ? ಹಾಗಾದರೆ ಈ ದೇಶದಲ್ಲಿ ಬೇರೆ ನಾಯಕರೇ ಇಲ್ಲವಾ? ಲಾಲ್ ಬಹಾದ್ದೂರ್ ಶಾಸ್ತ್ರಿ, ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಭಭಾಯಿ ಪಟೇಲ್, ರಾಜಾಜಿ, ಸರೋಜಿನಿ ನಾಯ್ಡು, ಮೌಲಾನ ಅಬ್ದುಲ್ ಕಲಾಂ ಅಜಾದ್, ಜಾಕೀರ್ ಹುಸೇನ್ ಅವರಂಥ ದಿಗ್ಗಜರ ಹೆಸರುಗಳನ್ನು ಇಡಬಹುದಲ್ಲ? ಆದರೂ ಯಾಕೆ ಇಡುತ್ತಿಲ್ಲ? ಇನ್ನು ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧಿ, ನೇತಾಜಿ ಸುಭಾಷ್‌ಚಂದ್ರ ಬೋಸ್, ವಿನೋಬಾ ಭಾವೆ, ಬಾಲಗಂಗಾಧರ ತಿಲಕ್, ಗೋಖಲೆ, ಸಮಾಜ ಸುಧಾರಕರಾದ ರಾಜಾರಾಮ ಮೋಹನ್‌ರಾಯ್, ಮಹಾತ್ಮ ಫುಲೆ, ಶ್ರೇಷ್ಠ ವಿಜ್ಞಾನಿಗಳಾದ ಸಿ.ವಿ. ರಾಮನ್, ವಿಕ್ರಮ್ ಸಾರಾಭಾಯಿ ಮುಂತಾದವರ ಹೆಸರುಗಳನ್ನು ಇಡಬಹುದಲ್ಲ? ಗಿಲ್ಲಿದಾಂಡು ಟೂರ್ನಿಗೂ ರಾಜೀವ್‌ಗಾಂಧಿ ಹೆಸರೇ ಇರಬೇಕಾ? ಇದು ನಾಚಿಕೆಗೇಡು.

ವಾಜಪೇಯಿ ನೇತೃತ್ವದ ಎನ್‌ಡಿಎ ಅಧಿಕಾರದಲ್ಲಿದ್ದಾಗ ದೇಶದೆಲ್ಲೆಡೆಯಿರುವ ಹಳ್ಳಿಗಳ ರಸ್ತೆಯನ್ನು ಅಭಿವೃದ್ಧಿಪಡಿಸುವ ಅತಿ ಮಹತ್ವಾಕಾಂಕ್ಷೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಇದಕ್ಕೆ ಯಾವ, ಯಾರ ಹೆಸರಿಡಬೇಕು ಎಂಬ ಚರ್ಚೆಯಾದಾಗ ಅವರ ಕೆಲ ಸಂಪುಟ ಸಹೋದ್ಯೋಗಿಗಳು ಅವರ ಪಕ್ಷದ ಹಿರಿಯ ನಾಯಕರುಗಳ ಹೆಸರನ್ನು ಸೂಚಿಸಿದರು. ಪ್ರಧಾನಿಯವರನ್ನು ಸಂಪ್ರೀತಗೊಳಿಸಲು ಕೆಲವರು ಅವರ ಹೆಸರನ್ನೇ ಪ್ರಸ್ತಾಪಿಸಿದರು. ಇದ್ಯಾವುದಕ್ಕೂ ಒಪ್ಪದ ವಾಜಪೇಯಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ' ಎಂದು ಹೆಸರಿಟ್ಟರು. ಯುಪಿಎ ಸರಕಾರವೇನಾದರೂ ಅಧಿಕಾರಕ್ಕೆ ಬಂದರೆ ಇದಕ್ಕೆ ರಾಜೀವ್‌ಗಾಂಧಿ ಗ್ರಾಮ್ ಸಡಕ್ ಯೋಜನಾ' ಎಂದು ಪುನರ್ ನಾಮಕರಣ ಮಾಡಿದರೂ ಆಶ್ಚರ್ಯವಿಲ್ಲ. ಒಂದು ವಿಶ್ವವಿದ್ಯಾಲಯ, ಒಂದು ಕ್ರೀಡಾಂಗಣ, ಒಂದು ವಿಮಾನ ನಿಲ್ದಾಣಕ್ಕೆ ಒಬ್ಬರ ಹೆಸರಿಟ್ಟರೆ ಸರಿ. ಆದರೆ ದೇಶದಲ್ಲಿರುವ ಎಲ್ಲವುಗಳಿಗೂ ಒಬ್ಬರದೇ ಹೆಸರಿಡುವುದು ಅದ್ಯಾವ ಸಂಸ್ಕೃತಿ? ಮಾನಮರ್‍ಯಾದೆ ಬಿಡುವುದಕ್ಕೂ ಒಂದು ಮಿತಿ ಬೇಡವಾ? ಈ ಮೂವರು ತಮ್ಮ ನಾಯಕರೆಂದು ಕಾಂಗ್ರೆಸ್ ಹೇಳಿಕೊಳ್ಳಲು ಯಾರದೂ ತಕರಾರಿಲ್ಲ. ಆದರೆ ಜನರ ದುಡ್ಡಿನಲ್ಲಿ ನಡೆಸುವ ಕಾರ್ಯಕ್ರಮಗಳಿಗೆಲ್ಲ ಈ ಮೂವರದೇ ಹೆಸರಿಡಲು ಈ ದೇಶದಲ್ಲಿ ನಾಯಕರಿಗೆ ದಾರಿದ್ರ್ಯವಾ? ಮಂದಿ ಹಣವನ್ನು ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ?

ಸೂರ್ಯಪ್ರಕಾಶ್ ಕೇಳುತ್ತಿರುವುದೂ ಇದನ್ನೇ. ಚುನಾವಣಾ ನೀತಿ ಸಂಹಿತೆ ಪ್ರಕಾರ, ಮೊದಲು ಈ ತ್ರಿಮೂರ್ತಿಗಳ ಹೆಸರುಗಳನ್ನು ಕಿತ್ತುಹಾಕುವಂತೆ ಸರಕಾರಗಳಿಗೆ ಆದೇಶ ನೀಡಬೇಕೆಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ. ಅವರು ಹೇಳುವುದರಲ್ಲಿ ತಪ್ಪೇನೂ ಇಲ್ಲ. ಏನಂತೀರಿ?

(ಸ್ನೇಹಸೇತು : ವಿಜಯ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X