ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಎರಡನೆ ಶ್ರೀಮಂತ ಶ್ರೀಸಾಮಾನ್ಯನಂತೆ ಸುಖವಂತ!

By Staff
|
Google Oneindia Kannada News


ಬಫೆ ಭಲೇ ವಿಚಿತ್ರ, ಘಾಟಿ ಆಸಾಮಿ. ಅವನ ಮ್ಯಾನೇಜ್‌ಮೆಂಟ್‌ ಸ್ಟೈಲ್‌ ನಿಗೂಢ. ಇಂದಿಗೂ ಅವನ ಕ್ಯಾಬಿನ್‌ನಲ್ಲಿ ಕಂಪ್ಯೂಟರ್ಸ್‌ ಇಲ್ಲ. ಮೊಬೈಲ್‌ ಫೋನ್‌ ಇಟ್ಟುಕೊಂಡಿಲ್ಲ. ಇಡೀ ದಿನ ಕ್ಯಾಬಿನ್‌ನಲ್ಲಿ ಒಬ್ಬನೇ ಕಳೆಯುತ್ತಾನೆ. ತನ್ನ ಕಂಪನಿಗಳ ಮುಖ್ಯಸ್ಥರಿಗೆ ವರ್ಷಕ್ಕೊಂದು ಪತ್ರ ಬರೆಯುತ್ತ್ತಾನೆ. ವರ್ಷಕ್ಕೊಮ್ಮೆ ಭೇಟಿ ಮಾಡಿ ಚರ್ಚಿಸುತ್ತಾನೆ. ಅವರಿಗೆ ಫೋನ್‌ ಮಾಡುವುದಿಲ್ಲ. ಇ-ಮೇಲ್‌ ಬರೆಯುವುದಿಲ್ಲ. ವರದಿ ಕಳಿಸಿ ಎಂದು ಪೀಡಿಸುವುದಿಲ್ಲ. ಕೆಲಸಕ್ಕೆ ಸೇರಿಸಿಕೊಳ್ಳುವಾಗಲೇ ತನ್ನ ಅಪೇಕ್ಷೆ, ನಿರೀಕ್ಷೆಗಳನ್ನು ತಿಳಿಸುತ್ತಾನೆ. ಗುರಿ ನಿರ್ಧರಿಸುತ್ತ್ತಾನೆ. ಮುಗೀತು. ಅದಕ್ಕೆತಕ್ಕಂತೆ ಫಲಿತಾಂಶ ತೋರಿಸದಿದ್ದರೆ ಉಳಿಗಾಲವಿಲ್ಲ.

ತನ್ನ ಕಂಪನಿಯ ಮುಖ್ಯಸ್ಥರಿಗೆ ಆತ ಎರಡು ನಿಯಮಗಳಿಗೆ ಬದ್ಧರಾಗಿರುವಂತೆ ಹೇಳುತ್ತಾನೆ. ನಿಯಮ ಒಂದು- ಷೇರುದಾರರ ಹಣವನ್ನು ಏನೇ ಆದರೂ ಕಳೆಯಬಾರದು ಹಾಗೂ ನಿಯಮ ಎರಡು- ಮೊದಲ ನಿಯಮವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು.

ಬಫೆ ಫೈಲು, ಕಾಗದಪತ್ರಗಳ ರಾಶಿಯಾಳಗೆ ಮುಳುಗಿರುವುದಿಲ್ಲ. ಒಂದು ಕ್ಯಾಲ್ಕ್ಯುಲೇಟರ್‌ ಸಹ ಹೊಂದಿರದ ಆತ, ಅಪರೂಪಕ್ಕೆಂಬಂತೆ ಫೋನ್‌ ಎತ್ತಿ ಮಾತನಾಡುತ್ತಾನೆ. ಅಂಥ ಕರೆಗಳು ಬ್ರೋಕರ್‌ಗಳಿಗೆ ಹೋಗುತ್ತವೆ. ಒಂದು ನಿಮಿಷಕ್ಕಿಂತ ಮಾತನ್ನು ಲಂಬಿಸದೇ ನೂರು ದಶಲಕ್ಷ ಡಾಲರ್‌ ವ್ಯವಹಾರವನ್ನು ಮುಗಿಸಿರುತ್ತಾನೆ. ಎರಡು ಮಹಡಿಗಳಿರುವ ಆತನ ಕಚೇರಿಯಲ್ಲಿ ಇರುವವರೇ 17 ಮಂದಿ ಸಿಬ್ಬಂದಿ.

ಪಬ್ಲಿಕ್‌ ರಿಲೇಷನ್‌, ಇನ್ವೆಸ್ಟ್‌ ರಿಲೇಷನ್‌, ಲೀಗಲ್‌ ಡಿಪಾರ್ಟ್‌ಮೆಂಟ್‌ ಇಲ್ಲವೇ ಇಲ್ಲ. ಬಂಡವಾಳದಾರರಿಗೆ ತ್ರೆೃಮಾಸಿಕ ವರದಿ ನೀಡುವ, ವಾರ್ಷಿಕ ಸಭೆ ಕರೆಯುವ ಸಂಪ್ರದಾಯವೂ ಇಲ್ಲ. ಬರ್ಕ್‌ ಷೈರ್‌ ಆಡಿಟ್‌ ವಿಭಾಗದಲ್ಲಿ ಒಬ್ಬ ಮಹಿಳೆಯಿದ್ದಾಳೆ. ಬಫೆಗೆ ಒಬ್ಬ ಸಹಾಯಕ/ಕಿಯೂ ಇಲ್ಲ. ಎಪ್ಪತ್ತಾರರ ಈ ವಯಸ್ಸಿನಲ್ಲಿ ತಾನೇ ಕಾರನ್ನು ಡ್ರೆೃವ್‌ ಮಾಡುವ ಬಫೆ, ಭದ್ರತಾ ಸಿಬ್ಬಂದಿಯನ್ನೂ ಇಟ್ಟುಕೊಂಡಿಲ್ಲ.

ವಿಶ್ವದಲ್ಲೇ ಅತಿ ದೊಡ್ಡ ಖಾಸಗಿ ಜೆಟ್ಸ್‌ ಕಂಪನಿಯನ್ನು ಹೊಂದಿದ್ದರೂ, ಖಾಸಗಿ ಜೆಟ್‌ನಲ್ಲಿ ಪಯಣಿಸುವುದಿಲ್ಲ. ಪಾರ್ಟಿ, ಸಮಾರಂಭ, ಔತಣಕೂಟಗಳಿಗೆ ಹೋಗುವುದಿಲ್ಲ. ಬಿಡುವಿನ ವೇಳೆಯಲ್ಲಿ ತಾನೇ ಪಾಪ್‌ ಕಾರ್ನ್‌ಗಳನ್ನು ಮಾಡಿಕೊಂಡು ಕೋಲಾ ಕುಡಿಯುತ್ತ್ತಾ ಟಿವಿ ನೋಡುತ್ತ್ತಾನೆ. ಇಷ್ಟೆಲ್ಲ ಹಣ ಮಾಡಿರುವ ಅವನ ಸಂಬಳ ವಾರ್ಷಿಕ ಒಂದು ಲಕ್ಷ ಡಾಲರ್‌! ಗೊತ್ತಿರಲಿ, ಸಾಮಾನ್ಯ ಕಂಪನಿಯ ಸಿಇಓ ಇದಕ್ಕಿಂತ ಹತ್ತಾರುಪಟ್ಟು ಜಾಸ್ತಿ ಸಂಬಳ ಪಡೆಯುತ್ತ್ತಾನೆ. ಐವತ್ತು ವರ್ಷಗಳ ಹಿಂದೆ ತನ್ನ ಹುಟ್ಟೂರಿನಲ್ಲಿ 31 ಸಾವಿರ ಡಾಲರ್‌ಗೆ ಖರೀದಿಸಿದ ಮೂರು ಬೆಡ್‌ರೂಮ್‌ ಮನೆಯಲ್ಲಿಯೇ ಬಫೆ ವಾಸಿಸುತ್ತಿದ್ದಾನೆ. ಆ ಮನೆಗೆ ಗೋಡೆಯಾಗಲಿ, ಬೇಲಿಯಾಗಲಿ ಇಲ್ಲವಂತೆ.

ಹಿಂದಿನ ವರ್ಷ ಬಫೆಯ ಸ್ನೇಹಿತ ಕೋರಿಯಾದ ಕಂಪನಿಯಾಂದರಲ್ಲಿ ನೂರು ದಶಲಕ್ಷ ಡಾಲರ್‌ ಹೂಡುವಂತೆ ಸಲಹೆ ಮಾಡಿದಾಗ ತನ್ನ ಬರ್ಕ್‌ ಷೈರ್‌ ಹಾಥವೇ ಕಂಪನಿ ಘನತೆಗೆ ತಕ್ಕುದಾದ ಸಲಹೆ ಕೊಡು, ಇಂಥ ಜುಜುಬಿ ಕೇಸು ತೆಗೆದುಕೊಂಡು ಬರಬೇಡ ಎಂದನಂತೆ. ಸಾಲ ಮಾಡಬೇಡಿ, ಉಳಿಸಿ, ಉಳಿಸಿದ್ದನ್ನು ಹೂಡಿ, ಒಳ್ಳೆಯ ಆಡಳಿತ , ಬೆಳವಣಿಗೆಯಿರುವ ಕಂಪನಿಯಲ್ಲಿ ಹಣ ಹೂಡಿ, ಯಾವಾಗ ಹೂಡಬೇಕು ಎಂಬುದು ಮುಖ್ಯವೆಂದು ತಿಳಿದುಕೊಳ್ಳಿ, ವ್ಯವಹಾರದಲ್ಲಿ ಪ್ರಾಮಾಣಿಕತೆಯಿರಲಿ, ಜೀವನವನ್ನು ಅನುಭವಿಸಿ, ಇದ್ದುದರಲ್ಲಿ ತೃಪ್ತಿಯಿರಲಿ, ಗಳಿಕೆಗಿಂತ ಕಡಿಮೆ ಖರ್ಚಿರಲಿ ಎಂಬುದು ಅವನ ಜೀವನ ಸಿದ್ಧಾಂತ.

ಐದಾರು ವರ್ಷಗಳ ಹಿಂದೆ ಬಿಲ್ಸ್‌ಗೇಟ್ಸ್‌ ಬಫೆಯನ್ನು ಭೇಟಿ ಮಾಡಿದ್ದ. ಅವನ ಜತೆ ಏನು ಮಾತಾಡುವುದು? ಹೆಚ್ಚೆಂದರೆ ಅರ್ಧಗಂಟೆ ಸಾಕು ಎಂದು ಅಷ್ಟು ಅವಧಿಗೆ ಭೇಟಿ ನಿಗದಿಪಡಿಸಿದ್ದ. ಬಫೆ ಜತೆಗೆ ಯಾವಾಗ ಮಾತಿಗೆ ಕುಳಿತನೋ ಗೇಟ್ಸ್ಸ್‌ಗೆ ಏಳಲು ಮನಸ್ಸಾಗಲಿಲ್ಲ. ಇಬ್ಬರೂ ಹತ್ತು ತಾಸು ಹರಟಿದರು. ಗೇಟ್ಸ್‌ ಆತನ ಪರಮ ಸ್ನೇಹಿತನಾಗಿಬಿಟ್ಟ.

ಬಫೆ ಕೇವಲ ಧನದಾಹಿ ಅಲ್ಲ. ತಾನು ಗಳಿಸಿದ್ದರಲ್ಲಿ ಶೇ. 85ರಷ್ಟನ್ನು ಬೇರೆ ಬೇರೆ ಸಂಸ್ಥೆಗಳಿಗೆ ದಾನ ನೀಡಿದ್ದಾನೆ. ಸುಮಾರು 37 ಶತಕೋಟಿ ಡಾಲರನ್ನು ಐದು ಸ್ವಯಂಸೇವಾ ಸಂಸ್ಥೆಗಳಿಗೆ ಕೊಟ್ಟಿದ್ದಾನೆ. ಈ ಪೈಕಿ ಹೆಚ್ಚಿನ ಹಣ ಬಿಲ್‌ಗೇಟ್ಸ್‌ ಪ್ರತಿಷ್ಠಾನಕ್ಕೇ ಹೋಗಿದೆ. ಹಣವನ್ನು ಕೊಡದಿದ್ದರೆ ಬರುವುದಿಲ್ಲ ಎನ್ನುವ ಬಫೆ, ತನ್ನ ಮೂವರು ಮಕ್ಕಳಿಗೂ ಇದನ್ನೇ ಕಲಿಸಿದ್ದಾನೆ. ತನ್ನ ಮಾತು, ಕೃತಿ, ಸಾಧನೆಯಿಂದಲೇ ಇಡೀ ಜನಾಂಗಕ್ಕೆ ಆದರ್ಶನಾಗಿರುವ ಈ ಅಜ್ಜನಿಗೆ ‘ನಿನ್ನ ಸಂದೇಶವೇನು’ ಅಂತಕೇಳಿದರೆ, ‘ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿಕೊಂಡು ಹೋಗಿ ಸಾಕು’ ಅಂತಾನೆ.

ಮಾಡೋ ಕೆಲಸ ಅಷ್ಟೇ ಆದ್ರೆ ಚಿಂತೆ, ಜಂಜಾಟ, ಕಿರಿಕಿರಿಯನ್ನು ಮೈತುಂಬಾ ಸುತ್ತಿಕೊಳ್ಳುವ ನಾವು ಈತನಿಂದ ಏನೆಲ್ಲ ಕಲಿಯಹುದು? ಈತ ಬಫೆ ಮಾತ್ರ ಅಲ್ಲ ಕಣ್ರೀ ಫುಲ್‌ಮೀಲ್‌, ಮೃಷ್ಟಾನ್ನ ಭೋಜನ!!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X