ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತಮ ಪತ್ರಕರ್ತನಿಗೆ ಸುದ್ದಿಮನೆಯಲ್ಲಿ ಸ್ಥಾನವೊಂದು ಸದಾ ಕಾದಿರುತ್ತದೆ!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ಯಾರು ಬೇಕಾದರೂ ಪತ್ರಕರ್ತರಾಗಬಹುದು. ಪತ್ರಕರ್ತರೆನಿಸಿಕೊಂಡವರಿಗೆಲ್ಲ ಬರೆಯಲು ಬರುತ್ತದೆಂದಲ್ಲ. ಅದಕ್ಕಾಗಿಯೇ ಜಗತ್ತಿನಲ್ಲಿ ಅಷ್ಟೊಂದು ಪತ್ರಕರ್ತರು ಹಾಗೂ ಪತ್ರಿಕೆಗಳಿವೆ. -ಚೋ.ರಾಮಸ್ವಾಮಿ, ಪತ್ರಕರ್ತ

ಹತ್ತವರ್ಷಗಳ ಹಿಂದೆ ಬೆಂಗಳೂರಿನಲ್ಲಿದ್ದ ಏಷಿಯನ್‌ ಕಾಲೇಜ್‌ ಆಫ್‌ ಜರ್ನಲಿಸಮ್‌ಗೆ ಖ್ಯಾತ ಪತ್ರಕರ್ತ ನಿಖಿಲ್‌ ಚಕ್ರವರ್ತಿ ಆಗಮಿಸಿದ್ದರು. ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ‘ನಮ್ಮ ಕಾಲದಲ್ಲಿ ಪತ್ರಿಕೋದ್ಯಮ ಕಾಲೇಜುಗಳಲ್ಲಿರಲಿಲ್ಲ. ಪತ್ರಿಕೋದ್ಯಮವನ್ನು ಒಂದು ಶಾಸ್ತ್ರವಾಗಿ ಕಲಿಯಬಹುದೆಂದು ನಮಗೆ ಗೊತ್ತಿರಲಿಲ್ಲ. ಆದರೂ ಆಗ ಉತ್ತಮ ಪತ್ರಕರ್ತರಿಗೆ ಕೊರತೆಯಿರಲಿಲ್ಲ. ಭಾಷೆ ಹಾಗೂ ವಿಷಯಗಳ ಬಗ್ಗೆ ಆಳಜ್ಞಾನವಿದ್ದವರು ಮಾತ್ರ ಸುದ್ದಿಮನೆಯಾಳಗೆ ನಡೆದು ಬರುತ್ತಿದ್ದರು. ಆದರೆ ಇಂದು ಎಲ್ಲೆಡೆ ಪತ್ರಿಕೋದ್ಯಮ ಕಾಲೇಜುಗಳು ಹುಟ್ಟಿಕೊಂಡಿವೆ. ಆದರೆ ಉತ್ತಮ ಪತ್ರಕರ್ತರ ಕೊರತೆಯನ್ನು ಎಲ್ಲ ಸಂಪಾದಕರು ಎದುರಿಸುತ್ತಿದ್ದಾರೆ’ ಎಂದಿದ್ದರು.

ಅಂದು ನಿಖಿಲ್‌ ಹೇಳಿದ ಮಾತು ಎಷ್ಟೊಂದು ಸತ್ಯವೆಂದು ಈಗ ಅನಿಸುತ್ತಿದೆ. ಇದೇ ಮಾತನ್ನು ಕೆಲದಿನಗಳ ಹಿಂದೆ ಮಿಡ್‌-ಡೇ ಸಂಪಾದಕ, ಹಿರಿಯ ಪತ್ರಕರ್ತ ಖಾಲೀದ್‌ ಅನ್ಸಾರಿ ಸಹ ಹೇಳಿದ್ದರು. ಎಲ್ಲ ಪತ್ರಿಕೆಗಳು ಅದರಲ್ಲೂ ವಿಶೇಷವಾಗಿ ಕನ್ನಡ ಪತ್ರಿಕೆಗಳು ಉತ್ತಮ ಪತ್ರಕರ್ತರ ಬರ ಎದುರಿಸುತ್ತಿವೆ. ಪತ್ರಿಕೋದ್ಯಮ ವಿಭಾಗಗಳಿಂದ ಬರುವ ವಿದ್ಯಾರ್ಥಿಗಳಲ್ಲಿ ಅಚ್ಚರಿ ಹುಟ್ಟಿಸುವಂಥ ಕಸುಬುದಾರಿಕೆ ಮೆರೆಯುವವರ ಸಂಖ್ಯೆ ತೀರಾ ಕಡಿಮೆ. ‘ಆಗ ಪತ್ರಿಕೋದ್ಯಮ Passion ಆಗಿತ್ತು. ಈಗ Fashion ಆಗಿದೆ’ ಎಂದು ಹಳೆ ತಲೆಮಾರಿನ ಪತ್ರಕರ್ತರು ವಟಗುಟ್ಟುವುದುಂಟು. ಇದು ಸ್ವಲ್ಪಮಟ್ಟಿಗೆ ನಿಜ ಕೂಡ.

ಇದು ಪತ್ರಕರ್ತರ ಕತೆಯಾದರೆ, ಪತ್ರಿಕೆಗಳ ಕತೆಯೇ ಬೇರೆ. ಅವು ಹೆಚ್ಚು ಹೆಚ್ಚು ಶ್ರೀಮಂತರ, ಉಳ್ಳವರ, ಹೈಸೊಸೈಟಿ ಮಂದಿಯ ಮುಖವಾಣಿಯಾಗುತ್ತಿವೆ. ಪತ್ರಿಕೆಗಳಲ್ಲಿ ಜನಸಾಮಾನ್ಯರಿಗೆ ಕಡಿಮೆ ಜಾಗ ಸಿಗುತ್ತಿದೆ. ಸಾವು ಅಥವಾ ದುರಂತಗಳ ಹೊರತಾಗಿ ಜನ ಸಾಮಾನ್ಯ ಸುದ್ದಿಯಾಗುವುದೇ ಇಲ್ಲ. ಜನಸಾಮಾನ್ಯನನ್ನು ರಾಜಕಾರಣಿಗಳಷ್ಟೇ ಅಲ್ಲ, ಪತ್ರಿಕೆಗಳೂ ಕಡೆಗಣಿಸಿವೆ ಎಂದು ಇತ್ತೀಚೆಗೆ ದಿಲ್ಲಿಯ ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌(ಸಿಎಂಎಸ್‌) ಸಮೀಕ್ಷೆ ತಿಳಿಸಿದೆ.

ಬೇಕಾದರೆ ಇಪ್ಪತ್ತೆೈದು ವರ್ಷಗಳ ಹಿಂದಿನ ಪತ್ರಿಕೆಗಳನ್ನು ಹರವಿ ಕುಳಿತುಕೊಳ್ಳಿ. ಪಿಕ್‌ಪಾಕೆಟ್‌, ಕಳ್ಳತನ, ದರೋಡೆ, ಸರಗಳ್ಳತನದಂಥ ಘಟನೆಗಳು ಮುಖಪುಟದ ಸುದ್ದಿಯಾಗುತ್ತಿದ್ದವು. ಸೀಮೆಎಣ್ಣೆಗಾಗಿ ಕ್ಯೂನಲ್ಲಿ ಕ್ಯಾನ್‌ ಹಿಡಿದು ನಿಂತವರ ಚಿತ್ರ ಮುಖಪುಟದಲ್ಲಿ ರಾರಾಜಿಸುತ್ತಿದ್ದವು. ಯಾವಾಗ ಪಡಿತರ ಸಾಮಗ್ರಿಗಳು ಬಿಡುಗಡೆಯಾಗುತ್ತವೆ ಎಂಬುದು ಸುದ್ದಿಯಾಗುತ್ತಿತ್ತು. ಪಡಿತರ ಅಕ್ಕಿಯಲ್ಲಿ ಕಲಬೆರಕೆ ಸುದ್ದಿ ‘ಪಡಿತರ ಅಕ್ಕಿ, ಗ್ರಾಹಕರು ಕಕ್ಕಾಬಿಕ್ಕಿ’ ಎಂಬ ಶೀರ್ಷಿಕೆಯಲ್ಲಿ ಪ್ರಜಾವಾಣಿಯಲ್ಲಿ ಮುಖಪುಟದ ಬಾಕ್ಸ್‌ ಸುದ್ದಿಯಾಗಿ ಪ್ರಕಟವಾಗಿತ್ತು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೊಟ್ಟ ಮೊದಲ ಬಾರಿಗೆ ಎರಡು ದಿನಗಳಿಗೊಮ್ಮೆ ನೀರು ಬಿಡಲು ತೀರ್ಮಾನಿಸಿದಾಗ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಅದು ಲೀಡ್‌ ಸುದ್ದಿಯಾಗಿತ್ತು. ಧಾರಾಕಾರ ಮಳೆಯಿಂದ ಸತತ ಐದನೇ ದಿನವೂ ಮೀನುಗಾರರಿಗೆ ಸಮುದ್ರಕ್ಕಿಳಿಯಲು ಆಗದಿದ್ದಾಗ ಉದಯವಾಣಿಯಲ್ಲಿ ಅದು ಫ್ರಂಟ್‌ಪೇಜ್‌ ನ್ಯೂಸ್‌. ಆದರೆ ವಿಚಿತ್ರವೆಂದರೆ ಇವ್ಯಾವವೂ ಇಂದು ಪತ್ರಿಕೆಯಲ್ಲಿ ಸುದ್ದಿಯೇ ಅಲ್ಲ. ಅಷ್ಟಾಗಿಯೂ ಪ್ರಕಟವಾದರೆ ಒಳಪುಟಗಳಲ್ಲಿ ಪೇಜ್‌ಫಿಲ್ಲರ್‌. ಹಾಗಂತ ಪಿಕ್‌ಪಾಕೆಟ್‌, ಸರಗಳ್ಳತನ, ಪಡಿತರ ಕಲಬೆರಕೆ, ಮೀನುಗಾರರ ಸಮಸ್ಯೆ ಇಲ್ಲವೇ ಇಲ್ಲ ಎಂದಲ್ಲ. ಅಂದಿಗಿಂತ ತೀವ್ರವಾಗಿವೆ. ಆದರೆ ಪತ್ರಿಕೆಗಳಿಗೆ ಮಾತ್ರ ಅವು ಸುದ್ದಿ ಅಲ್ಲ.

ಖ್ಯಾತ ಪತ್ರಕರ್ತ ಪಿ.ಸಾಯಿನಾಥ್‌ ಹೇಳುವಂತೆ ಆಂಧ್ರ, ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಆರು ಸಾವಿರಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ಅವು ನಮ್ಮ ಪತ್ರಿಕೆ ಅಥವಾ ನಿರಂತರ ಸುದ್ದಿ ಬಿತ್ತರಿಸುವ ಟೀವಿ ಚಾನೆಲ್‌ಗಳಿಗೆ ಸುದ್ದಿಯಾಗುವುದಿಲ್ಲ. ಅದೇ ಪ್ರಮೋದ್‌ ಮಹಾಜನ್‌ ಅಂತ್ಯ ಸಂಸ್ಕಾರವನ್ನು ಪತ್ರಿಕೆಗಳು ಪುಟಗಟ್ಟಲೇ ಬರೆಯುತ್ತವೆ. ಟೀವಿ ಚಾನೆಲ್‌ಗಳು ದಿನವಿಡೀ ತೋರಿಸುತ್ತವೆ. ರಾಹುಲ್‌ ಮಹಾಜನ್‌ ಮಾದಕ ಪದಾರ್ಥ ಸೇವಿಸಿ ಸಿಕ್ಕಿಬಿದ್ದಾಗಲೂ ಟೀವಿ ಚಾನೆಲ್‌ಗಳಲ್ಲಿ 24ತಾಸೂ ಇದೇ ಬಾತ್ಮಿ.

ಇತ್ತೀಚೆಗೆ ಖ್ಯಾತ ಇತಿಹಾಸ ಬರಹಗಾರ ರಾಮಚಂದ್ರ ಗುಹಾ ಒಂದು ಪ್ರಸಂಗವನ್ನು ಪ್ರಸ್ತಾಪಿಸಿದ್ದರು. ಭಾರತರತ್ನ ಸಿ.ಸುಬ್ರಮಣ್ಯಮ್‌ ಕೆಲವರ್ಷಗಳ ಹಿಂದೆ ನಿಧನರಾದಾಗ ಯಾವ ಪ್ರಮುಖ ಪತ್ರಿಕೆಗಳು ಅರ್ಧಪುಟಕ್ಕಿಂತ ಜಾಸ್ತಿ ಕವರೇಜ್‌ ಕೊಟ್ಟಿರಲಿಲ್ಲ. ಆದರೆ ಲಂಡನ್‌ನ ಎಕನಾಮಿಸ್ಟ್‌ ಪತ್ರಿಕೆ ಭಾರತೀಯ ಪತ್ರಿಕೆಗಳು ತಲೆತಗ್ಗಿಸುವಂತೆ ಅವರ ಸಾಧನೆ, ಜೀವನ ಮತ್ತು ಕೊಡುಗೆಗಳನ್ನು ವಿಸ್ತಾರವಾಗಿ ಬರೆದಿದ್ದವು.

ಈ ಮಾತನ್ನು ಮೊನ್ನೆ ನಿಧನರಾದ ಹಾಸನ ರಾಜಾರಾವ್‌ ನಿಧನದ ಕವರೇಜ್‌ಗೂ ಅನ್ವಯಿಸಬಹುದು. ಆದರೆ ಲಂಡನ್‌ನ ಗಾರ್ಡಿಯನ್‌ ಪತ್ರಿಕೆ ರಾಜಾರಾವ್‌ ಬಗ್ಗೆ ಬರೆದಷ್ಟು ಭಾರತೀಯ ಅಥವಾ ಕರ್ನಾಟಕದ ಯಾವ ಪತ್ರಿಕೆಯೂ ಬರೆದಿರಲಿಕ್ಕಿಲ್ಲ. ಆದೇ ಫ್ಯಾಶನ್‌ ಗುರು ಎಂದು ತನ್ನನ್ನೇ ತಾನು ಕರೆದುಕೊಳ್ಳುವ, ಕರೆಯಿಸಿ ಕೊಳ್ಳುವ ಪ್ರಸಾದ್‌ ಬಿದ್ದಪ್ಪ ದುಬೈನಲ್ಲಿ ಮಾದಕ ಪದಾರ್ಥ ಸೇವನೆ ಆರೋಪಕ್ಕೊಳಗಾಗಿ ಜೈಲು ಸೇರಿದಾಗ ಪುಟಗಟ್ಟಲೆ ಬರೆಯಲಾಗಿತ್ತು. ಕೀವಿ ಚಾನೆಲ್‌ಗಳು ಫ್ಯಾಶನ್‌ ಇಂಡಸ್ಟ್ರಿ ದಿಗ್ಗಜರನ್ನು ಕರೆಯಿಸಿ ಚರ್ಚಿಸಿದ್ದೇ ಚರ್ಚಿಸಿತ್ತು. ಮೂರು ದಿನ ಬೇರೆ ಚರ್ಚೆಯೇ ಇಲ್ಲ.

ಪತ್ರಿಕೆಗಳಾಗಲಿ, ಟೀವಿ ಸುದ್ದಿ ಚಾನೆಲ್‌ಗಳಾಗಲಿ ಹೀಗೇಕೆ ವರ್ತಿಸುತ್ತವೆ? ಮಾಧ್ಯಮಗಳು ಪಕ್ಷಪಾತೀನಾ? ಫುಟ್ಬಾಲ್‌ ಪಂದ್ಯಗಳಿಗೆ ನೀಡಿದ ಕವರೇಜ್‌ ಪೈಕಿ ಶೇ.1ರಷ್ಟನ್ನೂ ಕೃಷಿ, ಗ್ರಾಮೀಣ ಅಭಿವೃದ್ಧಿ, ರೈತರ ಆತ್ಮಹತ್ಯೆ, ಸಮಸ್ಯೆಗಳಿಗೆ ನೀಡುವುದಿಲ್ಲವೇಕೆ? ಈ ದೇಶದ ಯೋಜನಾ ಆಯೋಗವೆಂಬ ಸಂಸ್ಥೆಯನ್ನು ಕಟ್ಟಿದ ತರ್ಲೋಕ್‌ ಸಿಂಗ್‌ ಅವರಂಥವರು ನಿಧನರಾದಾಗ ಯಾಕೆ ಪತ್ರಿಕೆಗಳಲ್ಲಿ ಪ್ರಕಟವಾಗುವುದಿಲ್ಲ? ಟೀವಿಯಲ್ಲಿ ಯಾಕೆ ತೋರಿಸುವುದಿಲ? ಆರು ಸಾವಿರ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಒಮ್ಮೆಯೂ ಕೆಮರಾ ಹಿಡಿಯದ ಟೀವಿ ಸುದ್ದಿ ಚಾನೆಲ್‌ಗಳು, ಸಾಮಾನ್ಯ ಮಾಡೆಲ್‌ ನಫೀಸಾ ಜೋಸೆಫ್‌ ಆತ್ಮಹತ್ಯೆ ಮಾಡಿಕೊಂಡಾಗ ದಿನವಿಡೀ ಕಣ್ಣೀರು ಸುರಿಸಿದ್ದೇಕೆ? ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಿಂತ ಯಕಃಶ್ಚಿತ ರೂಪದರ್ಶಿಗಳು, ಫ್ಯಾಶನ್‌ ಡಿಸೈನರ್‌ಗಳು, ಹೋಟೆಲ್‌ ಅಡುಗೆ ಭಟ್ಟರು(ಶೆಫ್‌) ಬ್ಯೂಟಿಶಿಯನ್‌ಗಳಿಗೆ ಈ ಪರಿ ಪ್ರಾಮುಖ್ಯತೆ ಏಕೆ?

ಈ ಪ್ರಶ್ನೆ ಸಾಮಾನ್ಯ ಓದುಗರನ್ನು ಕಾಡುವಂತೆ, ಪತ್ರಿಕೋದ್ಯಮದಲ್ಲಿರುವವರನ್ನೂ ಕಾಡುತ್ತಿದೆ. ಇದು ಸಾಕಷ್ಟು ಚರ್ಚೆಗೆ ಸಹ ಗ್ರಾಸವೊದಗಿಸಿದೆ. ಕಳೆದ ಹತ್ತು-ಹನ್ನೆರಡು ವರ್ಷಗಳಲ್ಲಿ ಸುದ್ದಿಮನೆ ಸ್ವರೂಪ ಸಾಕಷ್ಟು ಬದಲಾಗಿದೆ. ಹಳಬರಿಗೆ ಗುರುತು ಸಿಗದ ಹಾಗೆ ಪರಿವರ್ತನೆಯಾಗಿದೆ. ಹಳಬರೆಲ್ಲ ಹೆಚ್ಚೂ ಕಮ್ಮಿ ನಿವೃತ್ತರಾಗಿ ಹೊರಬಿದ್ದಿದ್ದಾರೆ. ಹಳೆ ರಾಜಕಾರಣಿಯಾಬ್ಬ ಪತ್ರಿಕಾಗೋಷ್ಠಿಯನ್ನು ಕರೆದರೆ, ಆತ ಯಾವ ವರದಿಗಾರನನ್ನೂ ಗುರುತು ಹಿಡಿಯಲಾರ. ಎಲ್ಲರೂ ಹೊಸಬರೇ.

ಒಂದು ಪತ್ರಿಕೆಯಿಂದ ಮತ್ತೊಂದಕ್ಕೆ ಜಿಗಿದ ಸಾಮಾನ್ಯ. ಇಂಗ್ಲಿಷ್‌ ಪತ್ರಿಕೆಗಳಲ್ಲೂ ಇದೇ ಕತೆ. ಈ ಮಧ್ಯೆ ಪತ್ರಿಕೋದ್ಯಮದಲ್ಲಿ ಇನ್ನೊಂದು ರೀತಿಯ ಬದಲಾವಣೆಯಾಗುತ್ತಿದೆ. ಶ್ರೀಮಂತರು, ಬ್ಯೂರೋಕ್ರೇಟ್‌ಗಳು, ಮೇಲ್ವರ್ಗದವರ ಮಕ್ಕಳು ಸುದ್ದಿಮನೆಯಾಳಗೆ ಬರುತ್ತಿದ್ದಾರೆ. ಇವರೆಲ್ಲ ಇಂಗ್ಲಿಷ್‌ ಮೀಡಿಯಮ್‌ನಲ್ಲಿ ಓದಿದವರು. ಪ್ರತಿಷ್ಠಿತ ಶಾಲೆ, ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದವರು. ಇಂಗ್ಲಿಷೇ ಇವರ ಬಂಡವಾಳ. ಇವರೆಲ್ಲ ದುಬಾರಿ ಫೀಸು ತೆತ್ತು ಜರ್ನಲಿಸಮ್‌ ಕಾಲೇಜು ಸೇರುತ್ತಾರೆ.

ಇಂದು ಪತ್ರಿಕೋದ್ಯಮ ಶಿಕ್ಷಣ ಅದೆಷ್ಟು ದುಬಾರಿಯಾಗಿದೆಯೆಂದರೆ ಚೆನ್ನೈನಲ್ಲಿರುವ ಏಷಿಯನ್‌ ಕಾಲೇಜ್‌ ಆಫ್‌ ಜರ್ನಲಿಸಮ್‌ಗೆ ವರ್ಷಕ್ಕೆ ಮೂರು ಲಕ್ಷ ರೂ. ತೆರಬೇಕು. ಬೆಂಗಳೂರು ಐಐಜೆಎನ್‌ಎಂ ಸಂಸ್ಥೆ ಸೇರಲು ಎರಡೂವರೆ ಲಕ್ಷ ರೂ. ನೀಡಬೇಕು. ಇಲ್ಲೆಲ್ಲೂ ಓದಲಾಗದವರು ವಿಶ್ವವಿದ್ಯಾಲಯದಲ್ಲಿ ಓದಿ ಸಂತೃಪ್ತರಾಗಬೇಕು. ಅನೇಕರು ಪ್ರವೇಶ ಗಿಟ್ಟಿಸಿದರೂ ಫೀಸು ತೆರಲಾಗುವುದಿಲ್ಲ. ಹೀಗಾಗಿ ಪತ್ರಿಕೋದ್ಯಮಕ್ಕೆ, ಅದರಲ್ಲೂ ಸುದ್ದಿಮನೆ ಆಯಕಟ್ಟಿನ ಜಾಗಕ್ಕೆ ಶ್ರೀಮಂತರ ಮಕ್ಕಳು ಮಾತ್ರ ಬರುತ್ತಿದ್ದಾರೆ. ಟೀವಿ ಚಾನೆಲ್‌ಗಳಲ್ಲಿರುವವರಂತೂ ಇವರೇ.

ಇದು ಕೇವಲ ಇಲ್ಲಿನ phenomenon ಒಂದೇ ಅಲ್ಲ. ಲಂಡನ್‌ನಲ್ಲಿ ಈ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಟೀವಿ ಹಾಗೂ ಪತ್ರಿಕೆಗಳಲ್ಲಿ ದುಬಾರಿ ಶಿಕ್ಷಣ ಪಡೆದವರೇ ಸ್ಥಾನ ಗಿಟ್ಟಿಸುತ್ತಿದ್ದಾರೆ. ಶೇ.54ರಷ್ಟು ಮಂದಿ ಈ ವರ್ಗದ ಪತ್ರಕರ್ತರೇ ಇದ್ದಾರೆ. ಹೀಗಾಗಿ ಅಲ್ಲಿನ ಪತ್ರಿಕೆಗಳೂ ಮೇಲ್ವರ್ಗ ಕೇಂದ್ರಿತವಾಗುತ್ತಿವೆ.

ಈ ದೃಷ್ಟಿಯಲ್ಲಿ ಕನ್ನಡ ಪತ್ರಿಕೆಗಳೇ ವಾಸಿ. ಹುಟ್ಟುವಾಗಲೇ ಇಂಗ್ಲಿಷ್‌ ತೊದಲುವವರು, ಆ ಮಾಧ್ಯಮದಲ್ಲಿ ಓದಿದವರು ಇತ್ತ ಸುಳಿಯುತ್ತಿಲ್ಲ. ದುಬಾರಿ ಹಣ ತೆತ್ತು ಕಲಿಯೋಣವೆಂದರೆ ಕನ್ನಡ ಪತ್ರಿಕೋದ್ಯಮ ಕಲಿಸುವ ಶಿಕ್ಷಣ ಸಂಸ್ಥೆಗಳಿಲ್ಲ. ಅಷ್ಟರಮಟ್ಟಿಗೆ ಕನ್ನಡ ಪತ್ರಿಕೋದ್ಯಮ ಬಚಾವ್‌. ಆದರೆ ಇಲ್ಲಿನ ಸಮಸ್ಯೆಗಳೇ ಬೇರೆ. ಕನ್ನಡ ಪತ್ರಿಕೆಗಳ ಸುದ್ದಿಮನೆಯಾಳಗೆ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಶಿಕ್ಷಣ ಮುಗಿಸಿದವರು ಬರುತ್ತಿದ್ದಾರೆ. ಭಾವಿ ಪತ್ರಕರ್ತರನ್ನು ತಯಾರು ಮಾಡಿ ಕಳಿಸುವ ಪತ್ರಿಕೋದ್ಯಮ ವಿಭಾಗಗಳದೇ ಬಗೆಹರಿಯದ ಸಮಸ್ಯೆ. ಮುಗಿಯದ ಕತೆ.

ರಾಜ್ಯದ ಬಹುತೇಕ ಎಲ್ಲ ವಿಶ್ಯವಿದ್ಯಾಲಯಗಳ ಜರ್ನಲಿಸಮ್‌ ಡಿಪಾರ್ಟ್‌ಮೆಂಟ್‌ಗಳು ನೆಗೆಟಿವ್‌ ಕಾರಣಗಳಿಂದ ಸುದ್ದಿಯಲ್ಲಿರುತ್ತವೆ. ಜಾತಿ, ಪ್ರತಿಷ್ಠೆ, ಪರಸ್ಪರ ಮೇಲಾಟ, ಪೈಪೋಟಿಗಳಿಂದ ರಾಜಕೀಯ ತಾಣಗಳಾಗಿವೆ. ಒಂದಿಬ್ಬರು ಪ್ರಾಧ್ಯಾಪಕರಂತೂ ವಿದ್ಯಾರ್ಥಿಗಳಿಗೆ ಕೊಲೆಬೆದರಿಕೆ ಹಾಕುವ ತನಕ ಹೋಗಿದ್ದಾರೆ. ಇಂಥ ಮೇಷ್ಟ್ರು ವಿದ್ಯಾರ್ಥಿಗಳಿಗೆ ಅದೆಂಥ ಪಾಠ ಮಾಡಬಹುದು? ಜರ್ನಲಿಸಂ ಮೇಷ್ಟ್ರುಗಳ ಪೈಕಿ ಬಹುತೇಕ ಮಂದಿ ಎಂದೂ ಸುದ್ದಿಮನೆಯಾಳಗೆ ಕೆಲಸ ಮಾಡದವರೇ. ಪತ್ರಿಕೆಗಳಿಗೆ ಬರೆಯದವರೇ. ಪತ್ರಿಕೆಗಳಿಗೂ ತಮಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಇದ್ದುಬಿಡುವವರು. ಪತ್ರಿಕಾಲಯದಲ್ಲಿ ನಿತ್ಯ ನಡೆಯುವ ಪರಿವರ್ತನೆಗಳು ಇವರ ಗಮನಕ್ಕೆ ಬರುವುದಿಲ್ಲ. ಸ್ವತಃ ಪತ್ರಕರ್ತನಾಗದವನು ವಿದ್ಯಾರ್ಥಿಗಳಿಗೆ ಅದ್ಯಾವ ಸೀಮೆ ಬದನೆಕಾಯಿ ಪಾಠ ಹೇಳಬಹುದು?

ಇನ್ನು ಪಠ್ಯಗಳಂತೂ ಓಬೀರಾಯನ ಕಾಲದ್ದು. ‘ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿ ಅಲ್ಲ. ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿ’ ಎಂದು ಈಗಲೂ ಸುದ್ದಿಯನ್ನು ವ್ಯಾಖ್ಯಾನಿಸುವ ಮೇಷ್ಟ್ರುಗಳಿದ್ದಾರೆ. ಕನ್ನಡದ್ದೆನ್ನುವ ಪೂರ್ಣ ಪಠ್ಯ ಇನ್ನೂ ಇಲ್ಲ. ಇಂಗ್ಲಿಷ್‌ನ ವಿದೇಶಿ ಸರಕು ಇಟ್ಟುಕೊಂಡೇ ಪಾಠ ಮಾಡುವ ಸ್ಥಿತಿ! ಪತ್ರಿಕೆಗಳಲ್ಲಿ ಒಂದೂ ಲೇಖನ ಪ್ರಕಟಿಸದವರು ಡಿಗ್ರಿ ಸರ್ಟಿಫಿಕೇಟ್‌ ಹಿಡಿದು ಬರುತ್ತಾರೆ. ಅರ್ಜಿಯಲ್ಲಿ ಹತ್ತಾರು ಕಾಗುಣಿತ ದೋಷಗಳು. ಪತ್ರಿಕೋದ್ಯಮವನ್ನು ಕಲಿಸಬಹುದು. ಆದರೆ ಭಾಷೆ ಕಲಿಸುವುದು ಹೇಗೆ? ಈ ಎಲ್ಲ ಸಂಗತಿಗಳೂ ಪತ್ರಿಕೆಯ ಮೇಲೆ ಪರಿಣಾಮ ಬೀರುತ್ತವೆ.

ಉತ್ತಮ ಪತ್ರಕರ್ತನಿಗೆ ಸುದ್ದಿಮನೆಯಾಳಗೆ ಒಂದು ಸ್ಥಾನ ಸದಾ ಕಾದಿರುತ್ತದೆ ಅನ್ನೋದು ಇದಕ್ಕೆ.

(ಸ್ನೇಹ ಸೇತು : ವಿಜಯ ಕರ್ನಾಟಕ)


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X