ಎಲ್ಲರಿಗೂ ಬೇಕು ಮಿತಾಕ್ಷರ, ಯಾರಿಗೂ ಬೇಡ ವಿಜ್ಞಾನೇಶ್ವರ


ಸರ್ವಶ್ರೇಷ್ಠ ವ್ಯಾಖ್ಯಾನಕಾರರಲ್ಲೊಬ್ಬರಾದ ಯಾಜ್ಞವಲ್ಕ್ಯರ ಸ್ಮೃತಿಗೆ ಪಾಂಡಿತ್ಯ ಪೂರ್ಣ ವ್ಯಾಖ್ಯಾನ ಬರೆದ ವಿಜ್ಞಾನೇಶ್ವರ ಕನ್ನಡಿಗರಿಗೆ ಪರಕೀಯನಾಗಿಯೇ ಉಳಿದುಬಿಟ್ಟಿದ್ದಾನೆ. ಆತನೇನಾದರೂ ಕನ್ನಡಿಗನೆಂಬುದು ಗೊತ್ತಿದ್ದರೆ, ಗೊತ್ತಾದರೆ ನಮಗೇನಾದರೂ ಎಕ್ಸ್‌ಟ್ರಾ ಕೋಡುಗಳೇನಾದರೂ ಮೂಡುವುದೇನು? ಹಾಗಿದೆ ನಮ್ಮ ಧೋರಣೆ. ಹೀಗಾಗಿ ನಾವು ವಿಜ್ಞಾನೇಶ್ವರನ ಬಗ್ಗೆ ತಿಳಿಯಲು ಹೋಗಿಲ್ಲ. ಅದರಿಂದ ಪ್ರಯೋಜನವೇನು ಎಂಬುದು ನಮ್ಮ ಧೋರಣೆಯಾದ್ದರಿಂದ ಆತನ ಉಸಾಬರಿಗೆ ಹೋಗಿಲ್ಲ.

ಹುಯಿಲಗೋಳ ನಾರಾಯಣರಾಯರು ‘ಉದಯವಾಗಲಿ ಚೆಲುವ ಕನ್ನಡ ನಾಡು’ ಹಾಡಿನಲ್ಲಿ ವಿಜ್ಞಾನೇಶ್ವರನ ಬಗ್ಗೆ ‘ಮಿತಾಕ್ಷರರು ಬೆಳೆದು ಮೆರೆದಿಹ ನಾಡು’ ಎಂದು ಆತನ ಕೃತಿಯ ಕುರಿತು ಪ್ರಸ್ತಾಪಿಸಿದ್ದಾರೆ. ವಿಜ್ಞಾನೇಶ್ವರ ಹನ್ನೆರಡನೆಯ ಶತಮಾನದಲ್ಲಿ ‘ಮಿತಾಕ್ಷರ’ವನ್ನು ಬರೆದರೂ, ಆತನ ಊರು, ರಾಜ್ಯ, ಜಾತಿ, ಭಾಷೆ ಬಗ್ಗೆ ಗೊತ್ತಿರಲಿಲ್ಲ. ಆತನ ಬಗ್ಗೆ ತಿಳಿಯುವ ಆಸಕ್ತಿಯೂ ಯಾರಿಗೂ ಇರಲಿಲ್ಲ. ಹೀಗಾಗಿ ಈ ಸಂಗತಿಗಳ ಮೇಲೆ ಯಾರೂ ಬೆಳಕು ಚೆಲ್ಲಿರಲಿಲ್ಲ. ಆತ ಕರ್ನಾಟಕದವನೆಂದು ತಿಳಿಯುವ ತನಕ ಆತ ಮಹಾರಾಷ್ಟ್ರದವನೆಂದೇ ಎಲ್ಲರೂ ಭಾವಿಸಿದ್ದರು. ಮಹಾರಾಷ್ಟ್ರದವರು ವಿಜ್ಞಾನೇಶ್ವರ ತಮ್ಮವನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

ಆದರೆ ಪ್ರಪ್ರಥಮ ಬಾರಿಗೆ 1932ರಲ್ಲಿ ಇತಿಹಾಸ ಸಂಶೋಧಕ ಡಾ.ಡಿ.ಬಿ.ದೇಸಾಯಿ ಮರತೂರಿನಲ್ಲಿ ದೊರೆತ ಶಾಸನವನ್ನು ಆಧಾರವಾಗಿಟ್ಟುಕೊಂಡು ವಿಜ್ಞಾನೇಶ್ವರ ಕರ್ನಾಟಕದವನೆಂಬ ಅಂಶವನ್ನು ಹೊರಗೆಡವಿದರು. ಇದನ್ನೇ ಅವರು ‘ಪ್ರಾಜೀನ ಕರ್ನಾಟಕ ಹೊಸಬೆಳಕು ’ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ದುರ್ದೈವವೆಂದರೆ ಮುಂದೇನೂ ಆಗಲಿಲ್ಲ. ಈ ಕುರಿತು ಲೇಖನವನ್ನು 1981ರಲ್ಲಿ ಡಾ.ವಿ.ಎಸ್‌.ಕುಲಕರ್ಣಿ ಅವರು ಕರ್ನಾಟಕ ಇತಿಹಾಸ ಅಕಾಡೆಮಿಯ ‘ಇತಿಹಾಸ ದರ್ಶನ’ದಲ್ಲಿ ಪುನಃ ಪ್ರಕಟಿಸಿದರು. ಅಷ್ಟಾದ ನಂತರವೂ ವಿಜ್ಞಾನೇಶ್ವರನನ್ನು ನಮ್ಮವನನ್ನಾಗಿ ಮಾಡಿಕೊಳ್ಳುವ ಹೊಸ ಪ್ರಯತ್ನವೂ ನಡೆಯಲೇ ಇಲ್ಲ.

ಇಡೀ ಜಗತ್ತಿನಲ್ಲಿಯೇ ನ್ಯಾಯಶಾಸ್ತ್ರದ ಮಹತ್ವದ ಗ್ರಂಥ ಎಂದು ಪರಿಗಣಿತವಾಗಿರುವ ಮಿತಾಕ್ಷರ ಕೊಟ್ಟ, ವಿಧವಾ ವಿವಾಹ, ಉತ್ತರಾಧಿಕಾರ, ಸ್ತ್ರೀಯರ ಆಸ್ತಿ ಹಕ್ಕು, ವಾರಸುದಾರಿಕೆ, ಮಕ್ಕಳಿಗಿರುವ ಹಕ್ಕು, ಸ್ತ್ರೀಧನ, ಕಾರ್ಮಿಕ ಸಮಸ್ಯೆ ಹೀಗೆ ಅನೇಕ ಜಟಿಲ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಶಾಸ್ತ್ರಬದ್ಧ ನ್ಯಾಯ ಮೀಮಾಂಸೆ ಬರೆದ ಶತಮಾನಗಳ ಹಿಂದೆಯೇ ಮಾನವ ಹಕ್ಕುಗಳ ಬಗ್ಗೆ ಸವಿಸ್ತಾರವಾಗಿ ವಿಚಾರ ಮಂಡಿಸಿದ ವಿಜ್ಞಾನೇಶ್ವರ ಕನ್ನಡಿಗರಿಗೆ ಅಪರಿಚಿತನಾಗಿಯೇ ಉಳಿದುಬಿಟ್ಟ. ಇದೆಂಥ ದುರಂತ ನೋಡಿ.

ನಮ್ಮ ದೇಶದ ಶ್ರೇಷ್ಠ ನ್ಯಾಯವೇತ್ತರಲ್ಲೊಬ್ಬರಾದ ನ್ಯಾಯಮೂರ್ತಿ ಡಾ.ಎಂ.ರಾಮಾಜೋಯಿಸ್‌ ಆ ಕೆಲಸಕ್ಕೆ ಕೈಹಾಕದಿದ್ದರೆ ವಿಜ್ಞಾನೇಶ್ವರನ ಹೆಸರು ಗೊತ್ತಾಗುತ್ತಿರಲಿಲ್ಲವೇನೋ? ರಾಮಜೋಯಿಸ್‌ ಪುಸ್ತಕವೊಂದನ್ನು ಬರೆಯುವಾಗ ವಿಜ್ಞಾನೇಶ್ವರನ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಹೋದರು. ಆ ಸಂದರ್ಭದಲ್ಲಿ ಇತಿಹಾಸಕಾರ ಡಾ.ಸೂರ್ಯನಾಥ ಕಾಮತ್‌ ಮರತೂರಿನ ಶಾಸನದ ಬಗ್ಗೆ ಬೆಳಕು ಚೆಲ್ಲಿದರು. ಅಲ್ಲಿ ವಿಜ್ಞಾನೇಶ್ವರ ಕನ್ನಡಿಗನೆಂಬ ವಿಷಯ ತಿಳಿದ ಜೋಯಿಸ್‌, ಮರತೂರಿಗೆ 1988ರಲ್ಲಿ ಭೇಟಿ ನೀಡಿದರು. ಆಗಲೇ ಅವರು ನಿರ್ಧರಿಸಿದರು ಆ ಊರಿನಲ್ಲಿ ವಿಜ್ಞಾನೇಶ್ವರನ ನೆನಪಿನಲ್ಲಿ ಸ್ಮಾರಕ ಹಾಗೂ ಸಂಶೋಧನಾ ಕೇಂದ್ರ ಸ್ಥಾಪಿಸಿ ಮಿತಾಕ್ಷರ ಕರ್ತೃವಿನ ಹೆಸರನ್ನು ಚಿರಸ್ಥಾಯಿಯಾಗಿರಿಸಬೇಕೆಂದು . ಅವರು ಅಂದು ಕೈಗೊಂಡ ಸಂಕಲ್ಪ ಇಂದು ಈಡೇರಿದೆ. ಅದಕ್ಕಾಗಿ ಜೋಯಿಸ್‌ ಅವರು ತೆಗೆದುಕೊಂಡ ಶ್ರಮ ಅಷ್ಟಿಷ್ಟಲ್ಲ.

ಬಿಹಾರ, ಜಾರ್ಖಂಡ್‌ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ಅವರು ಈ ಸ್ಮಾರಕ ನಿರ್ಮಾಣದ ಉಸ್ತುವಾರಿಗಾಗಿ ಅಲ್ಲಿಂದ ಬರುತ್ತಿದ್ದರು. ಅವರು ಆಸ್ಥೆವಹಿಸದಿದ್ದರೆ ಖಂಡಿತವಾಗಿಯೂ ವಿಜ್ಞಾನೇಶ್ವರ ಸ್ಮಾರಕವಾಗಲಿ, ಸಂಶೋಧನಾ ಕೇಂದ್ರವಾಗಲಿ ತಲೆಯೆತ್ತುತ್ತಿರಲಿಲ್ಲ. ವಿಜ್ಞಾನೇಶ್ವರನ ಹೆಸರನ್ನು ಶಾಶ್ವತವಾಗಿರಿಸುವ ನಿಟ್ಟಿನಲ್ಲಿ ಇದೊಂದು ಶ್ಲಾಘನೀಯ ಯತ್ನ. ಮಿತಾಕ್ಷರ ಎಲ್ಲರಿಗೂ ಗೊತ್ತು. ಆದರೆ ವಿಜ್ಞಾನೇಶ್ವರ ಯಾರಿಗೂ ಗೊತ್ತಿಲ್ಲ. ಮಿತಾಕ್ಷರ ಎಲ್ಲರಿಗೂ ಬೇಕು. ಆದರೆ ವಿಜ್ಞಾನೇಶ್ವರ ಯಾರಿಗೂ ಬೇಡ. ಎಂಥ ವಿಪರ್ಯಾಸ?

ಹಾಗೇ ನೋಡಿದರೆ ವಿಜ್ಞಾನೇಶ್ವರಿಗೆ ಸ್ಮಾರಕ ನಿರ್ಮಿಸುವ, ಸಂಶೋಧನಾ ಕೇಂದ್ರ ಆರಂಭಿಸುವ ಕೆಲಸವನ್ನು ಸರ್ಕಾರವೇ ಮುಂದೆ ನಿಂತು ಮಾಡಬೇಕಿತ್ತು. ಮಿತಾಕ್ಷರದಂಥ ಮಹಾನ್‌ ಕೃತಿಯನ್ನು ಕೊಟ್ಟವ ಕನ್ನಡಿಗ ಎಂದು ಎದೆತಟ್ಟಿ ಹೇಳಿಕೊಳ್ಳಬೇಕಿತ್ತು. ಆದರೆ ಸರ್ಕಾರದಲ್ಲಿ ಕುಳಿದವರಿಗೆ ಮಿತಾಕ್ಷರ ಅಂದ್ರೆ ಗೊತ್ತಿದ್ದರೆ ತಾನೆ? ರಾಮ ಜೋಯಿಸ್‌ ಸರ್ಕಾರದ ಸಹಾಯ ಅಪೇಕ್ಷಿಸದೇ, ಕೇವಲ ದಾನಿಗಳ ನೆರವಿನಿಂದಲೇ ವಿಜ್ಞಾನೇಶ್ವರನಿಗೆ ನೆಲೆ ಕಲ್ಪಿಸಿಕೊಟ್ಟಿದ್ದಾರೆ. ಪತ್ರಕರ್ತ ಶ್ರೀನಿವಾಸ ಸಿರನೂರಕರ್‌ ವಿಜ್ಞಾನೇಶ್ವರನ ಬಗ್ಗೆ ಒಂದು ಒಳ್ಳೆಯ ಪುಸ್ತಕ ಬರೆದು ಕನ್ನಿಡಗರಿಗೆ ಪರಿಚಯಿಸಿದ್ದಾರೆ. ಅಷ್ಟರಮಟ್ಟಿಗೆ ವಿಜ್ಞಾನೇಶ್ವರ ಜೀವಂತ!

ಕಟ್ಟುವುದು ಸ್ಮಾರಕವೇ ಇರಲಿ, ಅಣೆೆಕಟ್ಟೇ ಇರಲಿ, ಕಟ್ಟೆಯೇ ಇರಲಿ ಅಲ್ಲೊಂದಷ್ಟು ಪ್ರೀತಿ, ನಿಷ್ಠೆ ಇಲ್ಲದಿದ್ದರೆ ದೇಶ ಕಟ್ಟಲಾಗುವುದಿಲ್ಲ.

(ಸ್ನೇಹ ಸೇತು : ವಿಜಯ ಕರ್ನಾಟಕ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+