• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಗುರಾತಿ ಹಗುರ ಮಾತೂ, ಅಯ್ಯರ್‌ ಎಂಬ ಅವಿವೇಕಿಯೂ!

By ವಿಶ್ವೇಶ್ವರ ಭಟ್‌
|

ಹೀಗಾಗಿರಲಿಕ್ಕಿಲ್ಲವೆಂದು ಹೇಳಬೇಡಿ. ಯಾರಿಗೆ ಗೊತ್ತು. ನಾಳೆ ಯಾವನೋ ತಿಕ್ಕಲು ಸಚಿವ ಹೀಗೆ ಹೇಳುವುದಿಲ್ಲವೆಂದು? ಅದೇ ಸಚಿವ ಬಂದು ನಾವು ಅಂದುಕೊಂಡಂತೆ ಮಹಾತ್ಮ ಗಾಂಧಿ ಈ ದೇಶಕ್ಕೆ ಸ್ವಾತಂತ್ರ ್ಯ ತಂದು ಕೊಡಲಿಲ್ಲ. ಅವರಿಗೆ ಕೊಡುತ್ತಿರುವ ಗೌರವ ಅತಿಯಾಯಿತು. ಇನ್ನು ಮುಂದೆ ಅವರನ್ನು ಮಹಾತ್ಮ ಎಂದು ಕರೆಯಬಾರದು. ಸರಕಾರಿ ಕಚೇರಿಗಳಲ್ಲಿ ಗಾಂಧಿ ಚಿತ್ರವನ್ನು ತೂಗುಹಾಕಬಾರದು ಎಂದು ಆದೇಶಿಸಬಹುದು. ಅದನ್ನು ಆತ ಸಮರ್ಥಿಸಿಕೊಳ್ಳಲೂಬಹುದು. ಕೆಲವರು ಅತನನ್ನು ಬೆಂಬಲಿಸಲೂಬಹುದು. ಇದು ಎಷ್ಟೆಂದರೂ ಪ್ರಜಾಪ್ರಭುತ್ವ ತಾನೆ?

ನೋಡಿ, ಮಣಿಶಂಕರ್‌ ಅಯ್ಯರ್‌ ಎಂಬ ಅವಿವೇಕಿ ಮಂತ್ರಿ ಪೋರ್ಟ್‌ಬ್ಲೇರ್‌ನಲ್ಲಿರುನ ಸೆಲ್ಯುಲರ್‌ ಜೈಲಿಗೆ ಹೋಗಿ ಸ್ವಾತಂತ್ರ್ಯ ಸೇನಾನಿ ವಿನಾಯಕ ದಾಮೋದರ ಸಾವರಕರ್‌ ಬರೆದ ಘೋಷವಾಕ್ಯಗಳನ್ನು ಅಳಿಸಿಹಾಕುವಂತೆ ಅದೇಶ ಕೊಡುತ್ತಾರೆ. ಸಾವರಕರ್‌ಗೆ ಸೇರಿದ ವಸ್ತುಗಳನ್ನು ಜೈಲಿನ ಸ್ವಾತಂತ್ರ್ಯ ಯೋಧರ ಸ್ಮಾರಕದಿಂದ ಕಿತ್ತೆಸೆಯುವಂತೆ ಆರ್ಡರ್‌ ಮಾಡುತ್ತಾರೆ. ಸಾವರಕರ್‌ ಎಂಬ ಹೇಡಿಯ ಚಿತ್ರವನ್ನು ಜೈಲಿನಲ್ಲಿಟ್ಟಿದ್ದೀರಲ್ಲ ನಾಚಿಕೆಯಾಗೊಲ್ವಾ ಅಂತ ಅಧಿಕಾರಿಗೆ ಗದರುತ್ತಾರೆ. ಸಾವರಕರ್‌ ಸ್ವಾತಂತ್ರ್ಯ ಯೋಧನೆಂದು ಹೇಳಿದ್ದು ಯಾರು? ಅವರನ್ನು ಬ್ರಿಟಿಷರು ಜೈಲಿಗೆ ಹಾಕಿದ್ದಾಗ, ತನ್ನನ್ನು ಬಿಡುಗಡೆ ಮಾಡುವಂತೆ ಅವರು ಪತ್ರ ಬರೆದಿದ್ದರು. ಅಂಥ ಮನುಷ್ಯ ಸ್ವಾತಂತ್ರ್ಯ ಸೇನಾನಿಯಾಗಲು ಹೇಗೆ ಸಾಧ್ಯ? ಅಂಥವನನ್ನು ವೀರ ಎಂದು ಸಂಭೋಧಿಸುವುದು ಏಕೆ? ಎಂದು ಹುಚ್ಚಾಪಟ್ಟೆ ಕೂಗುತ್ತಾರೆ. ಜೈಲಿಗೆ ಭೇಟಿ ನೀಡಿದಾಗ ಅಯ್ಯರ್‌, ಸ್ಮಾರಕದಲ್ಲಿ ಸಾವರಕರ್‌ ಅವರ ಕುರುಹು ಕೂಡ ಇರಬಾರದು ಎಂದು ಅಪ್ಪಣೆ ಕೊಡಿಸುತ್ತಾರೆ.

Veer Savarkar - Great Revolutionary or Traitor?ಈ ಅವಿವೇಕಿ ಮಂತ್ರಿಯ ಅಧಿನಾಯಕಿ ಸೋನಿಯಾಗಾಂಧಿ ಕೂಡ ಕೇವಲ ಒಂದು ವರ್ಷದ ಹಿಂದೆ ಹೀಗೇ ಮಾತನಾಡಿದ್ದರು. ಪಾರ್ಲಿಮೆಂಟ್‌ನ ಸೆಂಟ್ರಲ್‌ ಹಾಲ್‌ನಲ್ಲಿ ಸಾವರಕರ್‌ ಭಾವಚಿತ್ರ ಅನಾವರಣ ಮಾಡುವ ಸಂದರ್ಭದಲ್ಲಿ ಸೋನಿಯಾ ಸಾವರಕರ್‌ರನ್ನು ಹೇಡಿಯೆಂದು ಜರೆದಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಬಾರದೆಂದು ರಾಷ್ಟ್ರಪತಿಗಳಿಗೆ ಪತ್ರ ಸಹಾ ಬರೆದಿದ್ದರು. ಆದರೆ ಕಾಂಗ್ರೆಸ್‌ನ ಪ್ರತಿಭಟನೆಯ ಮಧ್ಯೆಯೂ ಭಾವಚಿತ್ರ ಅನಾವರಣಗೊಂಡಿತು. ಈಗ ತಮ್ಮ ನಾಯಕಿಯನ್ನು ಸಂತೃಪ್ತಗೊಳಿಸಲು ಅಯ್ಯರ್‌, ಸಾವರಕರ್‌ ನಿಂದನೆಯನ್ನು ಮುಂದುವರೆಸಿದ್ದಾರೆ. ಇದೆಂಥ ಮಾನಸಿಕ ದಾಸ್ಯತ್ವ? ಇದೆಂಥ ಲಜ್ಜೆಗೇಡಿತನ?

ಬ್ರಿಟಿಷ್‌ ಆಡಳಿತದ ವಿರುದ್ಧ ದನಿಯೆತ್ತಿದ್ದಕ್ಕಾಗಿ ಇಪ್ಪತ್ತೇಳು ವರ್ಷ ಕರಿನೀರಿನ ಶಿಕ್ಷೆ ಅನುಭವಿಸಿದ ಸಾವರಕರ್‌, ಸ್ವರಾಜ್ಯ ಎದು ಉಚ್ಚರಿಸುವುದೇ ಮಹಾಪರಾಧವಾಗಿದ್ದ ಕಾಲದಲ್ಲಿ ಸಂಪೂರ್ಣ ಸ್ವಾತಂತ್ರ್ಯ ವೇ ಭಾರತದ ಧ್ಯೇಯ ಎಂದು ಘೋಷಿಸಿದ್ದ. ಕ್ರಾಂತಿಕಾರಿ ಚಟುನಟಿಕೆ ನಡೆಸುವುದಿಲ್ಲವೆಂದು ಮುಚ್ಚಳಿಕೆ ಬರೆದು ಕೊಟ್ಟರೆ ಮಾತ್ರ ಪದವಿ ಕೊಡಲಾಗುವುದೆಂದು ಬ್ರಿಟಿಷರು ತಾಕೀತು ಹಾಕಿದಾಗ ಬ್ಯಾರಿಸ್ಟರ್‌ ಪದವಿಯನ್ನೇ ತಿರಸ್ಕರಿಸಿದ್ದ ಸಾವರಕರ್‌ರನ್ನು ಹೇಡಿ, ದೇಶದ್ರೋಹಿಯಂತೆ ಚಿತ್ರಿಸಲು ಕಾಂಗ್ರೆಸ್‌ ನಡೆಸುತ್ತಿರುವ ವ್ಯವಸ್ಥಿತ ಸಂಚನ್ನು ಯಾರೂ ಸಹಿಸಿಕೊಳ್ಳಲಾರರು. ಎಂಥ ವಿಪರ್ಯಾಸ ನೋಡಿ, ಸಾವರಕರ್‌ ಸ್ವಾತಂತ್ರ್ಯ ಸೇನಾನಿಯಾಗಿದ್ದರು ಎಂದು ಸಾಬೀತುಪಡಿಸುವ ಕಾಲ ಬಂದೊದಗಿದೆ.

ಸಾವರಕರ್‌ ಜೀವನ(1883-1966)ವನ್ನು ಗಮನಿಸಿದರೆ ಒಬ್ಬ ವೀರ ಯೋಧ, ಸಾಹಸಿ, ದೇಶಪ್ರೇಮಿಯ ಚಿತ್ರಣ ಕಣ್ಣುಂದೆ ಬರುತ್ತದೆ. ಒಬ್ಬ ವ್ಯಕ್ತಿ ಹಲವು ಸ್ತರಗಳಲ್ಲಿ ಕೆಲಸ ಮಾಡಬಹುದೆಂಬುದಕ್ಕೆ ಅವರೊಂದು ನಿದರ್ಶನ. ಬಾಲ್ಯದಿಂದಲೂ ಬ್ರಿಟಿಷ್‌ ಆಳ್ವಿಕೆ ವಿರುದ್ಧ ಹೋರಾಟದಲ್ಲಿ ನಿರತರಾದ ಸಾವರಕರ್‌ ಒಳ್ಳೆಯ ಬರಹಗಾರ. ಇತಿಹಾಸತಜ್ಞ, ಬ್ಯಾರಿಸ್ಟರ್‌, ಸಂಸ್ಕೃತ ಪಂಡಿತ, ಕವಿ, ಸಮಾಜ ಸುಧಾರಕ, ಸ್ವಾತಂತ್ರ್ಯಸೇನಾನಿ ಹಾಗೂ ದಾರ್ಶನಿಕರಾಗಿದ್ದರು. ಭಾರತದ ಸ್ವಾತಂತ್ರ್ಯಹೋರಾಟಕ್ಕೆ ಕ್ರಾಂತಿಕಾರಿ ಸ್ವರೂಪ ನೀಡಿದ ಅಗ್ಗಳಿಕೆ ಇವರಿಗೆ ಸಲ್ಲಬೇಕು. ಭಗತ್‌ ಸಿಂಗ್‌, ಮದನ್‌ ಲಾಲ್‌ ಧಿಂಗ್ರ, ಅಜಾದ್‌, ಬಟುಕೇಶ್ವರ ದತ್‌ ಮೊದಲಾದವರು ಸಾವರ್‌ಕರ್‌ರಿಂದಲೇ ಪ್ರೇರಿತರಾಗಿ ಸ್ವಾತಂತ್ರ್ಯಚಳವಳಿಯಲ್ಲಿ ಧುಮುಕಿದವರು. ಇಂಥ ಸಾವರಕರ್‌ ಬ್ರಿಟಿಷರಿಂದ ಇನ್ನಿಲ್ಲದ ಚಿತ್ರಹಿಂಸೆ ಅನುಭವಿಸುವಂತಾಯಿತು. ಆರು ತಿಂಗಳ ಕಾಲ ಅವರನ್ನು ಕತ್ತಲು ಕೋಣೆಯಲ್ಲಿ ಬಂಧಿಸಲಾಗಿತ್ತು. ಎರಡೂ ಕೈಗಳನ್ನು ಹಿಂಬದಿಗೆ ಕಟ್ಟಿ ನೇತು ಹಾಕಿ ಏಳು ದಿನಗಳ ಕಾಲ ಅಲ್ಲಿಟ್ಟಿದ್ದರು. ನಾಸಿಕ್‌ನಲ್ಲಿನ ಬ್ರಿಟಿಷ್‌ ಮ್ಯಾಜಿಸ್ಟ್ರೇಟ್‌ನ ಹಿಂಸೆ, ದೌರ್ಜನ್ಯ ತಾಳಲಾರದೇ ಮ್ಯಾಜಿಸ್ಟ್ರೇಟ್‌ರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಸಾವರಕರ್‌ರನ್ನು 1911 ರಲ್ಲಿ ಐವತ್ತು ವರ್ಷಗಳ ಕರಿನೀರಿನ ಶಿಕ್ಷೆ ವಿಧಿಸಿ ಬ್ರಿಟಿಷರು ಅಂಡಮಾನ್‌ ಜೈಲಲ್ಲಿ ಕೂಡಿಹಾಕಿದ್ದರು. ಹತ್ತು ವರ್ಷಗಳ ನಂತರ ಆಲಿಪುರ ಜೈಲಿನಲ್ಲಿಟ್ಟಿದ್ದರು. 1937 ರಲ್ಲಿ ಷರತ್ತಿನಮೇಲೆ ಸಾವರಕರ್‌ರನ್ನು ಬಂಧ ಮುಕ್ತಗೊಳಿಸಲಾಯಿತು. ಅನಂತರ ಸಾವರಕರ್‌ ಹಿಂದೂ ಮಹಾಸಭಾದ ಅಧ್ಯಕ್ಷರಾಗಿ ಸ್ವಾತಂತ್ರ್ಯ ಹೋರಾಟ ಮುಂದುವರೆಸಿದರು. ಸುಭಾಶ್‌ ಚಂದ್ರ ಬೋಸ್‌, ಎಂ.ಎನ್‌.ರಾಯ್‌, ನೆಹರು, ಪಟೇಲ್‌ ಸೇರಿದಂತೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಾಯಕರು ಸಾವರಕರ್‌ರ ಭೇಟಿಗೆ ಬರುತ್ತಿದ್ದರು. ಇಡೀ ದೇಶಾದ್ಯಂತ ಸಂಚರಿಸಿ ದೇಶವಾಸಿಗಳಲ್ಲಿ ರಾಷ್ಟ್ರಪ್ರೇಮ ಬಡಿದೆಬ್ಬಿಸಿದ್ದ ಸಾವರಕರ್‌ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು.

ಇಂಥ ಸಾವರಕರ್‌ ಹೇಡಿಯಾಗಿದ್ದರು ಹಾಗೂ ಬ್ರಿಟಿಷ್‌ ಸಂಕೋಲೆಯಿಂದ ಪಾರಾಗಲು ಕ್ಷಮಾದಾನದ ಅರ್ಜಿ ಸಲ್ಲಿಸಿದ್ದರು ಎಂದು ಹುಯಿಲೆಬ್ಬಿಸಿ ಅವರ ಭಾವಚಿತ್ರ ಪಾರ್ಲಿಮೆಂಟ್‌ನಲ್ಲಿ ಬೇಡವೆಂದು ಕಾಂಗ್ರೆಸ್‌, ಕಮ್ಯುನಿಸ್ಟ್‌ ನಾಯಕರು ಹಿಂದಿನ ವರ್ಷ ಕೂಗೆಬ್ಬಿಸಿದ್ದರು. ಅಲ್ಲದೇ ನಾಥುರಾಮ್‌ ಗೋಡ್ಸೆಯಾಂದಿಗೆ ಸಾವರಕರ್‌ ಗಾಂಧಿ ಹತ್ಯೆಗೆ ಸಂಚು ರೂಪಿಸಿದ್ದಾರೆಂದು ಕೋಲಾಹಲವೆಬ್ಬಿಸಿದದ್ದರು. ಗಾಂಧಿ ಹತ್ಯೆ ನಂತರ ಸಾವರಕರ್‌ರನ್ನು ಬಂಧಿಸಲಾಗಿತ್ತು. ಆದರೆ ಸ್ವತಃ ಗೋಡ್ಸೆಯೇ ಈ ಹತ್ಯೆಯಲ್ಲಿ ಸಾವರಕರ್‌ ಶಾಮೀಲಾಗಿಲ್ಲವೆಂದು ಹೇಳಿದ ಮೇಲೆ ಬಿಡುಗಡೆಗೊಳಿಸಲಾಯಿತು. ಆಗಲೂ ಕೂಡ ಅಂದಿನ ಕಾಂಗ್ರೆಸಿಗರು ಸಾವರಕರ್‌ರನ್ನು ಬಿಟ್ಟಿರಲಿಲ್ಲ .

ಒಂದು ವೇಳೆ ಸಾವರಕರ್‌ ಹೇಡಿಯಾಗಿದ್ದರೆ, ಗಾಂಧಿ ಹತ್ಯೆಯಲ್ಲಿ ಸಂಚು ರೂಪಿಸಿದ್ದರೆ, ಕಾಂಗ್ರೆಸ್‌ ಸೇರುವಂತೆ ಜವಹರಲಾಲ್‌ ನೆಹರು, ಸಾವರಕರ್‌ರನ್ನು ಒತ್ತಾಯಿಸಬೇಕಿತ್ತೇ? ಇದಕ್ಕೂ ಮೊದಲು 1937ರಲ್ಲಿ, ಸಾವರಕರ್‌ ಜೈಲಿನಿಂದ ಬಿಡುಗಡೆಯಾದಾಗಲೂ ನೆಹರು ಖುದ್ದಾಗಿ ಕಾಂಗ್ರೆಸ್‌ ಸೇರುವಂತೆ ಆಮಂತ್ರಿಸಿದ್ದೇಕೆ? ಗಾಂಧಿ ಹತ್ಯೆಯಲ್ಲಿ ಸಾವರಕರ್‌ ನಿರ್ದೋಷಿಯೆಂದು ಕೋರ್ಟ್‌ ತೀರ್ಪು ನೀಡಿದಾಗ ನೆಹರು ಸರಕಾರ ಮೇಲ್ಮನವಿ ಸಲ್ಲಿಸಲಿಲ್ಲವೇಕೆ?

ಬ್ರಿಟಿಷ್‌ ಗೃಹ ಕಾರ್ಯದರ್ಶಿ ಮ್ಯಾಕ್‌ಪರ್ಸನ್‌ ಸರಕಾರಕ್ಕೊಂದು ವರದಿ ಸಲ್ಲಿಸಿದ್ದ. ಅದರಲ್ಲಿ ಸಾವರಕರ್‌ರನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡುವುದು ಅಪಾಯಕಾರಿ. ಅವರು ಬ್ರಿಟಿಷ್‌ ಆಳ್ವಿಕೆ ವಿರುದ್ಧ ಭೂಗತ ಚಳವಳಿ ಆರಂಭಿಸಬಹುದು. ಇದು ಸಾರ್ವಜನಿಕ ಶಾಂತಿಗೆ ಭಂಗ ತರಬಹುದೆಂದು ಬರೆದಿದ್ದ. ಇದು ಗೃಹ ಕಾರ್ಯದರ್ಶಿ ಕಾಲಕಾಲಕ್ಕೆ ಸರಕಾರಕ್ಕೆ ಸಲ್ಲಿಸುತ್ತಿದ್ದ ವರದಿ. ಇದನ್ನೇ ಆಧಾರವಾಗಿಟ್ಟುಕೊಂಡು ಕೆಲವು ಕಾಂಗ್ರೆಸ್‌, ಕಮ್ಯುನಿಸ್ಟ್‌ ನಾಯಕರು ಸಾವರಕರ್‌ ಕ್ಷಮಾದಾನಕ್ಕೆ ಅರ್ಜಿಸಲ್ಲಿಸಿದ್ದರು ಹಾಗೂ ಅದಕ್ಕೆ ಗೃ ಹ ಕಾರ್ಯದರ್ಶಿ ಹೇಗೆ ಉತ್ತರ ಬರೆದಿದ್ದಾರೆಂದು ಗುಲ್ಲೆಬ್ಬಿಸಿದರು. ಅನಂತರ ಇದನ್ನೇ ನಿಜವೆಂದು ಬಿಂಬಿಸಲು ಪ್ರಯತ್ನಿಸಿದರು. ಈಗ ಕಾಲಕಾಲಕ್ಕೆ ಈ ವಿಷಯ ಪ್ರಸ್ತಾಪಿಸುತ್ತ ಇದನ್ನು ಜೀವಂತವಾಗಿಡಲು ಹುನ್ನಾರ ನಡೆಸಿದ್ದಾರೆ.

ಆದರೆ ಇದೇ ಕಾಂಗ್ರೆಸ್‌ನ ಮಹಾ ನಾಯಕಿ ಇಂದಿರಾಗಾಂಧಿ 1980ರ ಮೇ 20 ರಂದು ಸಾವರಕರ್‌ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಬರೆದ ಪತ್ರದಲ್ಲಿ ಹೀಗೆ ಹೇಳಿದ್ದಾರೆ -ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಾವರಕರ್‌ ಸಾಹಸ ಯಾವತ್ತು ಚಿರಸ್ಥಾಯಿ. ದೇಶದ ಹೆಮ್ಮೆಯ ಪುತ್ರನ ಜನ್ಮಶತಮಾನೋತ್ಸವ ಆಚರಣೆ ನಿಜಕ್ಕೂ ಪ್ರಶಂಸನೀಯ. ನಾನು ನನ್ನೆಲ್ಲ ಸಹಕಾರ ನೀಡುತ್ತೇನೆ. ದೇಶಭಕ್ತಿಗೆ ಸಾವರಕರ್‌ ಇನ್ನೊಂದು ಹೆಸರು. ಸ್ವಾತಂತ್ರ್ಯ ಸಮರದಲ್ಲಿ ತೊಡಗಿಸಿಕೊಂಡ ಮಹಾನ್‌ ಕ್ರಾಂತಿಕಾರಿಗಳನ್ನು ಈ ದೇಶ ಯಾವತ್ತೂ ಸ್ಮರಿಸುತ್ತದೆ.

ಅಷ್ಟೇ ಅಲ್ಲ , ಇಂದಿರಾಗಾಂಧಿ ಸಾವರಕರ್‌ ಸ್ಮಾರಕ ಸಮಿತಿಗೆ ವೈಯುಕ್ತಿಕವಾಗಿ ಹತ್ತು ಸಾವಿರ ರೂ.ಗಳ ದೇಣಿಗೆಯನ್ನು ಸಹಾ ನೀಡಿದ್ದಾರೆ. ಅಧಿಕಾರಿಗಳನ್ನು ಕರೆದು ಸಾವರಕರ್‌ ನೆನಪಿಗಾಗಿ ಅಂಚೆ ಚೀಟಿ ಹೊರತರಲು ಆದೇಶಿಸಿದ್ದರು. ಆದನ್ನು ಅವರೇ ಬಿಡುಗಡೆ ಮಾಡಿದರು.

ನಾಲ್ಕು ವರ್ಷಗಳ ಹಿಂದೆ (14, ಜುಲೈ 2000) ಸಾವರಕರ್‌ ಸಮಗ್ರ ಸಂಪುಟಗಳ ಐದು ಕೃತಿ ಬಿಡುಗಡೆ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ವಸಂತ ಸಾಠೆ ಹೇಳಿದ್ದರು, ಸಾವರಕರ್‌ರಂಥ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಪದೇಪದೇ ಸಂದೇಹದಿಂದ ನೋಡುತ್ತೇವೆ. ಅವರು ಹುಟ್ಟುಹಾಕಿದ ಕ್ರಾಂತಿಕಾರಿಗಳು ಇಲ್ಲದಿದ್ದರೆ, ಸ್ವಾತಂತ್ರ್ಯ ಇನ್ನೆಷ್ಟು ತಡವಾಗುತ್ತಿತ್ತೋ? ಸಾವರಕರ್‌ ಎಂದಿಗೂ ಜೀವಭಿಕ್ಷೆ ಕೇಳಿದವರಲ್ಲ. ಇದೊಂದು ವ್ಯವಸ್ಥಿತ ಪಿತೂರಿ. ಇದು ನಿಜಕ್ಕೂ ನಮ್ಮ ದುರ್ದೈವ.

ಗ್ರೇಟರ್‌ ಲಂಡನ್‌ ಕೌನ್ಸಿಲ್‌ ಸಾವರಕರ್‌ ಸ್ಮರಣಾರ್ಥ ವಿಶಿಷ್ಟ ಸ್ಮಾರಕವನ್ನು ಸ್ಥಾಪಿಸಿದೆ. ಅದರ ಮೇಲೆ ಭಾರತದ ಹೆಮ್ಮೆಯ ದೇಶಪ್ರೇಮಿ ಹಾಗೂ ತತ್ತ್ವಶಾಸ್ತ್ರಜ್ಞ ಎಂದು ಬರೆಯಲಾಗಿದೆ. ಬ್ರಿಟಿಷ್‌ ಸರಕಾರ ಇಂಥ ಮಾನ್ಯತೆ ಕೊಟ್ಟಿರುವಾಗ ಭಾರತ ಸರಕಾರದ ಜವಾಬ್ದಾರಿಯುತ ಮಂತ್ರಿಯಾಬ್ಬ ಸಾವರಕರ್‌ ಪೋಟೋ ಕಿತ್ತಾಕಿ, ಅವರ ವಸ್ತುಗಳನ್ನು ಕಿತ್ತೆಸೆಯಿರಿ, ಹೇಡಿಗೊಂದು ಸ್ಮಾರಕ ಬೇಕೇ? ಎಂದು ಲೇವಡಿ ಮಾಡಿದರೆ ಸುಮ್ಮನಿರುವುದಾದರೂ ಹೇಗೆ ? ಸ್ಮಾರಕದಲ್ಲಿರುವ ವಸ್ತುಗಳ ಹೊರಗೆಸೆಯಿರಿ ಎಂದು ಹೇಳುವ ಮಂತ್ರಿ ನಾಳೆ ಸ್ಮಾರಕವನ್ನೇ ನಾಶಮಾಡಿ ಎಂದು ಹೇಳಬಹುದು. ತಮ್ಮದೇ ಸಹೋದ್ಯೋಗಿ ಅರ್ಜುನಸಿಂಗ್‌ಗೆ ಹೇಳಿ ಸಾವರಕರ್‌ ಬಗೆಗೆ ಪಠ್ಯಪುಸ್ತಕದಲ್ಲಿ ಇನ್ನಷ್ಟು ಸುಳ್ಳುಗಳನ್ನು ಬರೆಸಬಹುದು! ದೇಶದ ಚರಿತ್ರೆ ಗೊತ್ತಿಲ್ಲದ, ಬರಿ ಪೂರ್ವಾಗ್ರಹ ತುಂಬಿಕೊಂಡ, ಜವಾಬ್ದಾರಿ ಹುದ್ದೆಯಲ್ಲಿರುವ ಮಂತ್ರಿಯಾಬ್ಬ ವಿವೇಕ ಮರೆತರೆ ದೇಶದ ಹಾಗೂ ತನ್ನ ಹುದ್ದೆಯ ಘನತೆಯನ್ನು ಹೇಗೆ ಮೂರಾಬಟ್ಟೆ ಮಾಡಬಲ್ಲ ಎಂಬುದಕ್ಕೆ ಅಯ್ಯರ್‌ ಸಾಕ್ಷಿ.

ರಾಜೀವ್‌ಗಾಂಧಿಯನ್ನು ಮದುವೆಯಾಗಿ ಭಾರತಕ್ಕೆ ಬಂದಾಗ ವೀರ ಸಾವರಕರ್‌ ಹೆಸರು ಕೇಳಿರದ, ಅನಂತರ ಇಲ್ಲಿಯೇ ನೆಲೆಸಿದ ಬಳಿಕವೂ ಸಾವರಕರ್‌ ಅಂದ್ರೆ ಯಾರು ಅಂತ ತಿಳಿತುಕೊಳ್ಳದ ಸೋನಿಯಾಗಾಂಧಿಯನ್ನು ಮೆಚ್ಚಿಸುವ, ಅಯ್ಯರ್‌ ದುಂಡಾವರ್ತನೆಯನ್ನು ಯಾವ ಭಾರತೀಯನೂ ಸಹಿಸಲಾರ.

ಇಂಥ ಸಂದರ್ಭದಲ್ಲಿ ಪ್ರತಿಭಟಿಸುವ ಗುತ್ತಿಗೆಯನ್ನು ಪೂರ್ತಿಯಾಗಿ ಬಿಜೆಪಿ, ಶಿವಸೇನೆಗೆ ಬಿಡುವುದು ಬೇಡ. ಕಾರಣ ಸಾವರಕರ್‌ ಇಡೀ ದೇಶದ ಹೆಮ್ಮೆಯಪುತ್ರ. ಈಗ ಸುಮ್ಮನಿದ್ದರೆ ಯಾವನೋ ತಲೆತಿರುಕ ಮಂತ್ರಿ, ನಾಳೆ ಮಹಾತ್ಮ ಗಾಂಧಿಯೇನು ಮಹಾ ಎಂದು ಹೇಳಬಹುದು.

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more