ಐಟಿ ದಾಳಿಗೆ ಕಾರಣ: ನಾರಾಯಣಪುರ ಡ್ಯಾಮ್ ಕಾಲುವೆ ರಿಪೇರಿ 1466 ಕೋಟಿ ರೂ. ಟೆಂಡರ್!
ಬೆಂಗಳೂರು, ಅ. 07: ಐಟಿ ದಾಳಿಗೆ ತುತ್ತಾಗಿರುವ ಉಪ್ಪಾರ್ ಕಂಪನಿಯ ಟೆಂಡರ್ ಅಕ್ರಮ ಕುರಿತು 'ಒನ್ ಇಂಡಿಯಾ ಕನ್ನಡ' ಜೂ. 04 ರಂದೇ ವಿಶೇಷ ವರದಿ ಪ್ರಕಟಿಸಿತ್ತು." ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಕಾಲುವೆ ರೀಪೇರಿ 1466 ಕೋಟಿ ರೂ. ಕಥೆ' ಅಡಿ ಬರಹದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಕಾಕತಾಳೀಯ ಎಂಬಂತೆ ನೀರಾವರಿ ಇಲಾಖೆಯ ಬಸವಸಾಗರ ಕಾಲುವೆ ಆಧುನೀಕರಣ ಸಂಬಂಧ ಕರೆದಿದ್ದ 1466 ಕೋಟಿ ರೂ. ಮೊತ್ತದ ಟೆಂಡರ್ ಅಕ್ರಮಕ್ಕೆ ಸಂಬಂಧಿಸಿದಂತೆ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮಾಜಿ ಶಾಸಕರ ಒಡೆತನಕ್ಕೆ ಸೇರಿದ ಉಪ್ಪಾರ್ ಕನ್‌ಸ್ಟ್ರಕ್ಷನ್ ಕಂಪನಿಗೆ ಮಳೆಗಾಲದಲ್ಲಿ ಕಾಲುವೆ ಆಧುನೀಕರಣ ಟೆಂಡರ್ ನೀಡಿದ ಸುತ್ತ ವರದಿ ಇಲ್ಲಿದೆ.
ಕೊರೊನಾ ಎರಡನೇ ಅಲೆಯಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯದ ವಿವಿಧ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ ಬಜೆಟ್‌ನ ಮೊತ್ತ 500 ಕೋಟಿ ರೂ. ಮಾತ್ರ ಆಗಿತ್ತು. ಆದರೆ ಯಾದಗಿರಿಯಲ್ಲಿರುವ ನಾರಾಯಣಪುರ ಜಲಾಶಯ ಎಂದೇ ಖ್ಯಾತಿ ಪಡೆದಿರುವ ಬಸವ ಸಾಗರದ ಕಾಲುವೆ ಅಧುನೀಕರಣಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಟೆಂಡರ್ ಕರೆದಿರುವ ಮೊತ್ತ ಬರೋಬ್ಬರಿ 1466 ಕೋಟಿ ರೂಪಾಯಿದ್ದು ಆಗಿತ್ತು. ಅದೂ ಬೇಸಿಗೆ ಕಾಲದಲ್ಲಿ ನಡೆಯುವ ಆಧುನೀಕರಣ ಕಾಮಗಾರಿಗೆ ಮುಂಗಾರು ಆರಂಭದಲ್ಲಿ ಟೆಂಡರ್ ಕರೆದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಇದೀಗ ಐಟಿ ದಾಳಿ ಈ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದು, ಟೆಂಡರ್ ನ ಅಕ್ರಮದ ಸುತ್ತ ಐಟಿ ದಾಳಿ ನಡೆದಿದೆ.

ಜನರ ಕಲ್ಯಾಣಕ್ಕೆ 500 ಕೋಟಿ ಪ್ಯಾಕೇಜ್: ಕಾಲುವೆ ಕಾಮಗಾರಿಗೆ 1400 ಕೋಟಿ:
ರಾಜ್ಯದಲ್ಲಿ ಕೊರೊನಾ ಲಾಕ್ ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕೆಲಸವೂ ಸ್ಥಗಿತಗೊಂಡಿತ್ತು. ಕೊರೊನಾ ಸೋಂಕಿನಿಂದ ತತ್ತರಿಸಿರುವ ಜನರಿಗೆ ಕನಿಷ್ಠ ಅನ್ನ - ಆಹಾರ ಹಾಗೂ ಚಿಕಿತ್ಸೆ ಸಿಕ್ಕರೆ ಸಾಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರ್ಥಿಕ ಸಂಕಷ್ಟದಿಂದ ಹೊರ ಬರಲಾಗದೇ ಒದ್ದಾಡುತ್ತಿದ್ದ ರಾಜ್ಯಕ್ಕೆ ಮೊದಲ ಪ್ಯಾಕೇಜ್‌ನಲ್ಲಿ 1200 ಕೋಟಿ ರೂ. ಘೋಷಣೆ ಮಾಡಿತ್ತು. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಯಾದಗಿರಿಯಲ್ಲಿರುವ ಬಸವ ಸಾಗರ ಜಲಾಶಯದ ಕಾಲುವೆ ಆಧುನೀಕರಣಕ್ಕೆ ಕೃಷ್ಣ ಜಲ ಭಾಗ್ಯ ನಿಗಮ ಟೆಂಡರ್ ಕರೆದಿತ್ತು. ಟೆಂಡರ್‌ಗೆ ಅರ್ಜಿ ಸಲ್ಲಿಸವ ಕೊನೆ ದಿನ ಜೂ. 04 ಇಂದು ನಿಗದಿ ಮಾಡಿತ್ತು.

ಬೇಸಿಗೆಯಲ್ಲಿ ನಡೆಯುವ ಕಾಮಗಾರಿಗೆ ಮಳೆಗಾಲದಲ್ಲಿ ಟೆಂಡರ್!
ಮೊದಲ ಪ್ಯಾಕೇಜ್‌ನಲ್ಲಿ ನಾರಾಯಣಪುರ ಬಲದಂಡ ಕಾಲುವೆ ರಿಪೇರಿ ಹಾಗೂ ಆಧುನೀಕರಣಕ್ಕಾಗಿ 760 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿತ್ತು. ಪ್ಯಾಕೇಜ್ ಎರಡಲ್ಲಿ 706 ಕೋಟಿ ರೂ. ಮೀಸಲಿಡಲಾಗಿತ್ತು. ವಿಪರ್ಯಾಸವೆಂದರೆ ಮಳೆಗಾಲದಲ್ಲಿ ಯಾವುದೇ ಜಲಾಶಯಗಳ ಕಾಲುವೆ ಆಧುನೀಕರಣ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ. ಅದಾಗಲೇ ನಾರಾಯಣಪುರ ಜಲಾಶಯ ಕಾಲುವೆ ಆಧುನೀಕರಣ ಕಾಮಗಾರಿಯನ್ನು ಯಡಿಯೂರಪ್ಪ ಸರ್ಕಾರ ಉಪ್ಪಾರ ಕಂಪನಿ ಕೈಗಿಟ್ಟು ಆಗಿತ್ತು. ರಮೇಶ್ ಜಾರಕಿಹೊಳಿ ರಾಜೀನಾಮೆ ಬಳಿಕ ತಮ್ಮ ಬಳಿಯೇ ಜಲ ಸಂಪನ್ಮೂಲ ಖಾತೆ ಉಳಿಸಿಕೊಂಡಿದ್ದ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾರಾಯಣಪುರ ಜಲಾಶಯ ಕಾಲುವೆ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಿದ್ದರು. ಕಾಲುವೆಗಳಲ್ಲಿ ನೀರಿನ ಒಳ ಹರಿವು ಮಳೆ ಗಾಲದಲ್ಲಿ ಜಾಸ್ತಿಯಾದ ಬೆನ್ನಲ್ಲೇ ಅದೇನು ಕಾಮಗಾರಿ ನಡೆದಿತ್ತೋ ದೇವರೇ ಬಲ್ಲ. ಕೃಷ್ಣ ಜಲ ಭಾಗ್ಯ ನಿಗಮದ ಅಧಿಕಾರಿಗಳು ತರಾತುರಿಯಲ್ಲಿ ಟೆಂಡರ್ ಕರೆದು ಮಾಡಿದ ಎಡವಟ್ಟಿಗೆ ಈಗ ಐಟಿ ದಾಳಿ ಪ್ರತಿಫಲ ಎದುರಿಸುವಂತಾಗಿದೆ.

ಅನುಮಾನ ಮೂಡಿಸಿದ್ದ ಗುತ್ತಿಗೆ ಷರತ್ತುಗಳು:
ನಾರಾಯಣಪುರ ಜಲಾಶಯದ ಬಲ ದಂಡೆಯ ಕಾಲವೆ ಆಧುನೀಕರಣ ಸಂಬಂಧ ಕರೆದಿದ್ದ ಟೆಂಡರ್‌ಗೆ ಜೂ. 4 ಕೊನೆಯ ದಿನ ಡೆಡ್ ಲೈನ್ ನಿಗದಿ ಮಾಡಲಾಗಿತ್ತು. ಜಲಾಶಯ ನಿರ್ಮಾಣ ಕಾಮಗಾರಿ ಮಾಡಿರುವ ಕಂಪನಿಗಳು ಈ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿಲ್ಲ. ಆದರೆ, ಜಲಾಶಯ ಕಾಲುವೆ ರಿಪೇರಿ ಹಾಗೂ ಆಧುನೀಕರಣ ಮಾಡಿರುವ ಕಂಪನಿಗೆ ಮಾತ್ರ ಈ ಟೆಂಡರ್ ನಲ್ಲಿ ಭಾಗವಹಿಸುವ ಷರತ್ತು ವಿಧಿಸುವ ಮೂಲಕ ಜಲಾಶಯ ನಿರ್ಮಾಣ ಮಾಡಿದಂಥ ದೈತ್ಯ ಕಂಪನಿಗಳು ಟೆಂಡರ್ ನಲ್ಲಿ ಭಾಗವಹಿಸದಂತೆ ಉದ್ದೇಶ ಪೂರ್ವಕವಾಗಿ ಷರತ್ತು ವಿಧಿಸಲಾಗಿತ್ತು. ಹೀಗಾಗಿ ಜಲಾಶಯ ಕಾಮಗಾರಿ ಮಾಡಿದ ಕಂಪನಿಗಳು ದೂರ ಉಳಿದಿದ್ದವು. ಈ ಟೆಂಡರ್ ಅಕ್ರಮ ಕುರಿತು ಐಟಿ ಅಧಿಕಾರಿಗಳಿಗೆ ಈ ದೈತ್ಯ ಕಂಪನಿಗಳೇ ಸುಳಿವು ನೀಡಿದ್ದವು.

ಪಾರದರ್ಶಕ ನಿಯಮದ ಪ್ರಕಾರ 100 ಕೋಟಿ ರೂ. ಮೇಲ್ಪಟ್ಟ ಟೆಂಡರ್ ಕರೆದಲ್ಲಿ, ಟೆಂಡರ್ ನಲ್ಲಿ ಭಾಗವಹಿಸುವ ಕಂಪನಿ ಮತ್ತೊಂದು ಕಂಪನಿಯ ಜಂಟಿ ಸಹಯೋಗತ್ವ ಕಡ್ಡಾಯ ಮಾಡಲಾಗುತ್ತದೆ. ಗುತ್ತಿಗೆ ಪಡೆದ ಕಂಪನಿ ಏನಾದರೂ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಜಂಟಿ ಸಹಭಾಗಿತ್ವ ವಹಿಸಿರುವ ಕಂಪನಿ ಮೂಲಕ ಕಾಮಗಾರಿ ಪೂರ್ಣ ಮಾಡಿಸುವ ಉದ್ದೇಶದಿಂದ ಈ ಷರತ್ತನ್ನು ಸಾಮಾನ್ಯವಾಗಿ ವಿಧಿಸಲಾಗುತ್ತದೆ. ಇದು 1500 ಕೋಟಿ ರೂ. ಮೊತ್ತದ ಟೆಂಡರ್ ಕಾಮಗಾರಿಯಾಗಿದ್ದರೂ ಈ ಷರತ್ತನ್ನು ಸಡಿಲಿಸಿ ಉಪ್ಪಾರ್ ಕಂಪನಿಗೆ ಕಾಮಗಾರಿ ನೀಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.

ಕಮಿಷನ್ ಕಾಮಗಾರಿಗೆ ಆರ್ಥಿಕ ಸಂಕಷ್ಟವಿಲ್ಲ:
ಕೊರೊನಾ ಸೋಂಕು ನಿರ್ವಹಣೆ ಮಾಡಲಾಗದೇ ಸರ್ಕಾರ ತತ್ತರಿಸಿದ್ದ ದಿನಗಳು. ಒಂದಡೆ ಕೊರೊನಾ ನಿರ್ವಹಣೆಯಲ್ಲಿ ವಿಫಲತೆ, ಮತ್ತೊಂದಡೆ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಇರುವ ಆರ್ಥಿಕ ಸಂಪತ್ತನ್ನು ಮೊದಲ ಆದ್ಯತೆಯಾಗಿ ಜನರ ಜೀವ ಮತ್ತು ಆಹಾರಕ್ಕೆ ವಿನಿಯೋಗಿಸುವುದು ಸರ್ಕಾರದ ಧರ್ಮ. ಆದರೆ ಯಡಿಯೂರಪ್ಪ ಅವರ ಬಳಿಯೇ ಇದ್ದ ಜಲ ಸಂಪನ್ಮೂಲ ಇಲಾಖೆ ವ್ಯಾಪ್ತಿಗೆ ಒಳಪಡುವ ಕೃಷ್ಣ ಜಲ ಭಾಗ್ಯ ನಿಯಮದಲ್ಲಿ 1466 ಕೋಟಿ ರೂಪಾಯಿ ಮೌಲ್ಯದ ಟೆಂಡರ್ ಕರೆದಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಟೆಂಡರ್ ಷರತ್ತುಗಳಲ್ಲಿ ಬದಲಾವಣೆ ಮಾಡುವ ಮೂಲಕ ಬಿಜೆಪಿ ಪಕ್ಷದ ಮಾಜಿ ಶಾಸಕರೊಬ್ಬರ ಒಡೆತನಕ್ಕೆ ಸೇರಿದ ಕಂಪನಿಗೆ ಟೆಂಡರ್ ನೀಡಲಾಗಿತ್ತು. ಅದರ ಹಿಂದೆ ಕಿಕ್ ಬ್ಯಾಕ್ ಆರೋಪ ಕೇಳಿ ಬಂದಿತ್ತು. ಅದರಲ್ಲೂ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ, ಆಪ್ತ ಉಮೇಶ್ ಹೆಸರು ಈ ಅಕ್ರಮದಲ್ಲಿ ತಳಕು ಹಾಕಿಕೊಂಡಿತ್ತು. ಇದೀಗ ಐಟಿ ದಾಳಿ ನೋಡಿದರೆ ಉಮೇಶ್ ಮತ್ತು ಉಪ್ಪಾರ್ ಕಂಪನಿ ಮೇಲೆಯೇ ನಡೆದಿರುವುದು ಇದೇ ಟೆಂಡರ್ ಅಕ್ರಮವೇ ಮುಳುವಾಯಿತೇ ಎಂಬ ಪ್ರಶ್ನೆ ಎದ್ದಿದೆ.












Click it and Unblock the Notifications