ಆಟೋ ದರ ಹೆಚ್ಚಳವಾದರೂ ಪರಿಷ್ಕರಣೆಯಾಗದ ಮೀಟರ್: ಪ್ರತಿ ಕಿ.ಮೀ.ಗೆ ಎಷ್ಟು ದರ ಎಂಬ ವಿವರ ಇಲ್ಲಿದೆ
ಆಟೋದಲ್ಲಿ ಪ್ರಯಾಣ ಮಾಡುವಾಗ ಹಲವಾರು ಜನ ಪ್ರಯಾಣಿಕರು ಗೊಂದಲಕ್ಕೊಳಗಾಗುತ್ತಾರೆ. ಯಾಕೆಂದರೆ ಅವರಿಗೆ ಆಟೋ ಪ್ರಯಾಣದ ಬಳಿಕ ಎಷ್ಟು ಹಣ ನೀಡಬೇಕು ಎನ್ನುವ ಗೊಂದಲ. ಈವರೆಗೆ ಆಟೋದಲ್ಲಿ ಪ್ರಯಾಣಿಸುವಾಗ ಮೀಟರ್ ಹಾಕಿ ಅದರಲ್ಲಿ ತೋರಿಸುವ ಮೊತ್ತವನ್ನು ಪ್ರಯಾಣಿಕರು ನೀಡಬೇಕಿತ್ತು. ಇದೇ ಮೊತ್ತವನ್ನು ಪಾವತಿಸುವಂತೆ ಸರ್ಕಾರ ಕೂಡ ಪ್ರಯಾಣಿಕರಿಗೆ ಸೂಚನೆ ನೀಡಿತ್ತು. ಆದರೀಗ ಮೀಟರ್‌ನಲ್ಲಿ ತೋರಿಸುವ ಹಣಕ್ಕಿಂತ ಆಟೋ ಚಾಲಕರು ಅಧಿಕ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಈ ಬಗ್ಗೆ ಪ್ರಯಾಣಿಕರು ಪ್ರಶ್ನೆ ಮಾಡಿದರೆ ಆಟೋ ಪ್ರಯಾಣ ದರ ಸರ್ಕಾರವೇ ಹೆಚ್ಚು ಮಾಡಿದೆ ಎನ್ನುವ ಸಮಜಾಯಿಸಿ ನೀಡುತ್ತಾರೆ. ಜೊತೆಗೆ ತಮ್ಮ ಬಳಿ ಇರುವ ಪಟ್ಟಿಯೊಂದನ್ನು ತೆಗೆದು ಮೀಟರ್‌ನಲ್ಲಿ ತೋರಿಸುವ ಹಣವನ್ನು ಅದರಲ್ಲಿ ಪರಿಶೀಲಿಸಿ ಅದರಲ್ಲಿರುವ ಹಣವನ್ನು ಪಾವತಿಸುವುಂತೆ ಬೇಡಿಕೆ ಇಡುತ್ತಾರೆ. ಆದರೆ ಈ ರೀತಿಯ ಬೇಡಿಕೆ ಇಡುವ ಹಣವನ್ನು ಪ್ರಯಾಣಿಕರು ಪಾವತಿಸಬೇಕೆ? ಆಟೋ ಚಾಲಕರ ಬಳಿ ಇರುವ ಪಟ್ಟಿ ಯಾವುದು? ಇದು ಸರ್ಕಾರದಿಂದ ಅಂಗೀಕೃತಗೊಂಡ ಮೊತ್ತವೇ? ಇಂತೆಲ್ಲಾ ಗೊಂದಲಗಳು ಪ್ರಯಾಣಿಕರಿಗಿದೆ. ಈ ಗೊಂದಲಗಳನ್ನು ನಿವಾರಿಸುವಂತಹ ಕೆಲಸವನ್ನು ನಾವು ಮಾಡುತ್ತೇವೆ.

ಸರ್ಕಾರ ಹೆಚ್ಚಿಸಿದ ಪ್ರಯಾಣದ ದರ ಎಷ್ಟು?
ಸರ್ಕಾರ ಇತ್ತೀಚೆಗೆ ಆಟೋ ಪ್ರಯಾಣ ದರವನ್ನು 5 ರೂಪಾಯಿ ಹೆಚ್ಚಳ ಮಾಡಿದೆ. ಅಂದರೆ ಎರಡು ಕಿಲೋ ಮೀಟರ್ ಒಳಗೆ ಪ್ರಯಾಣ ಮಾಡಿದರೆ 25 ರೂಪಾಯಿ ಇದ್ದ ಕನಿಷ್ಠ ಶುಲ್ಕ ಈಗ 30ರೂಪಾಯಿಗೆ ಏರಿಕೆಯಾಗಿದೆ. ಆದರೆ ಇಲ್ಲಿ ಗೊಂದಲ ಏನು ಅಂದರೆ ಎಷ್ಟೋ ಮೀಟರ್‌ಗಳು ಅಪ್‌ಡೇಟ್ ಆಗಿಲ್ಲ. ಆರಂಭದಲ್ಲಿ 26 ರೂಪಾಯಿ ಕನಿಷ್ಠ ಶುಲ್ಕ ತೋರಿಸುತ್ತದೆ. ಹೀಗಾಗಿ ಪ್ರಯಾಣದ ಬಳಿಕ ಪ್ರಯಾಣಿಕರಿಗೆ ಎಷ್ಟು ಹಣವನ್ನು ನೀಡಬೇಕು ಎನ್ನುವ ಗೊಂದಲ ಸೃಷ್ಟಿಯಾಗಿದೆ. ಮಾತ್ರವಲ್ಲದೆ ಆಟೋ ಚಾಲಕ ತನ್ನಲ್ಲಿರುವ ಪಟ್ಟಿಯನ್ನು ನೋಡಿ ಇಂತಿಷ್ಟು ಹಣವನ್ನು ನೀಡುವಂತೆ ಪ್ರಯಾಣಿಕರಿಗೆ ಕೇಳುತ್ತಾನೆ. ಹಾಗಾದರೆ ಆ ಪಟ್ಟಿ ಯಾವುದು? ಅದನ್ನು ಪ್ರಯಾಣಿಕರು ನಂಬಬಹುದೇ? ಇಂತೆಲ್ಲಾ ಪ್ರಶ್ನೆಗಳು ಉದ್ಬವಿಸುತ್ತವೆ.

ಈ ಪಟ್ಟಿಯನ್ನು ಪ್ರಯಾಣಿಕರು ನಂಬಬಹುದೇ?
ಸರ್ಕಾರ ಆಟೋ ಪ್ರಯಾಣ ದರವನ್ನು ಹೆಚ್ಚಳ ಮಾಡಿದ ಬಳಿಕ ಎಷ್ಟು ಕಿಲೋ ಮೀಟರ್ ಪ್ರಯಾಣ ಮಾಡಿದರೆ ಪ್ರಯಾಣಿಕರು ಎಷ್ಟು ಹಣವನ್ನು ನೀಡಬೇಕು ಎನ್ನುವುದರ ವಿವರವನ್ನು https://transport.karnataka.gov.in ವೆಬ್‌ಸೈಟ್‌ನಲ್ಲಿ ನೀಡಿದೆ. ಇದರೊಂದಿಗೆ ನಾವು ಕೂಡ ಆ ಪಟ್ಟಿಯನ್ನು ಹಂಚಿಕೊಂಡಿದ್ದೇವೆ. ಆಟೋದಲ್ಲಿ ಚಾಲಕರ ಬಳಿ ಇರುವ ಪಟ್ಟಿ ಸಾರಿಗೆ ಇಲಾಖೆಯಿಂದ ನೀಡಲಾಗಿದೆ. ಆದರೆ ಈ ಪಟ್ಟಿಯ ಮೇಲೆ ಸಾರಿಗೆ ಇಲಾಖೆ ಸೀಲ್ ಇರುವುದನ್ನು ಖಾತರಿಪಡಿಸಿಕೊಳ್ಳುವುದು ಉತ್ತಮ. ಒಂದು ವೇಳೆ ಸೀಲ್ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಪಟ್ಟಿಯ ದರವನ್ನು ಪಾವತಿಸಬೇಡಿ. ಮತ್ತೊಂದು ಪ್ರಮುಖ ವಿಚಾರವೆಂದರೆ ಆಟೋ ಮೀಟರ್ ಅಪ್‌ಡೇಟ್ ಆಗದೇ ಕನಿಷ್ಠ ಶುಲ್ಕ 25 ರೂಪಾಯಿ ದರವನ್ನು ತೋರಿಸಿದರೆ ಆಟೋ ಚಾಲಕರ ಬಳಿ ಇರುವ ಸಾರಿಗೆ ಇಲಾಖೆ ಮುದ್ರಿತ ಪಟ್ಟಿಯಲ್ಲಿ ಕಿಲೋ ಮೀಟರ್ ದರವನ್ನು ನಿಗಧಿಪಡಿಸಿದಂತೆ ಹಣವನ್ನು ಪಾವತಿಸಿ. ಒಂದು ವೇಳೆ ಆಟೋ ಮೀಟರ್ ಕನಿಷ್ಠ ಶುಲ್ಕ 30 ರೂಪಾಯಿ ಆಗಿದ್ದರೆ. ಇಲ್ಲಿ ಆಟೋ ಮೀಟರ್ ಅಪ್‌ಡೇಟ್ ಆಗಿದೆ ಎಂದರ್ಥ. ಅಲ್ಲಿಗೆ ನೀವು ಯಾವುದೇ ಪಟ್ಟಿಯನ್ನು ನೋಡುವ ಅಗತ್ಯತೆ ಇಲ್ಲ. ಮೀಟರ್‌ನಲ್ಲಿ ತೋರಿಸಿದ ಹಣವನ್ನು ಮಾತ್ರ ಪಾವತಿಸಿ. ಹೀಗಾಗಿ ಆಟೋದಲ್ಲಿ ಕುಳಿತ ತಕ್ಷಣ ಮೀಟರ್‌ನಲ್ಲಿ ಹೊಸ ಪ್ರಯಾಣ ದರ (30ರೂ) ಅಪ್‌ಡೆಟ್ ಆಗಿರುವ ಬಗ್ಗೆ ಗಮನಿಸಿ.

ಆಟೋ ಪ್ರಯಾಣ ದರದ ಹೆಚ್ಚಳದ ಪಟ್ಟಿ ಇಲ್ಲಿದೆ
ಸಾಮಾನ್ಯವಾಗಿ ಆಟೋ ಪ್ರಯಾಣಿಕರು ಆಟೋದಲ್ಲಿ ಪ್ರಯಾಣದ ಬಳಿಕ ಮೀಟರ್‌ನಲ್ಲಿ ತೋರಿಸಿದ ಮೊತ್ತಕ್ಕಿಂತ ಐದು ರೂಪಾಯಿ ನೀಡಬೇಕು. ಅದುವೇ ಆಟೋದಲ್ಲಿ ಮಾಡಿದ ಹೆಚ್ಚಳ ಎಂದು ಭಾವಿಸುತ್ತಾರೆ. ಆದರೆ ಇದು ತಪ್ಪು ತಿಳುವಳಿಕೆ. ಆಟೋದಲ್ಲಿ ಪ್ರಯಾಣಿಕರು ಎಷ್ಟು ದೂರ ಪ್ರಯಾಣ ಮಾಡುತ್ತಾರೋ ಅಷ್ಟು ಹಣ ಅಧಿಕವಾಗುತ್ತಾ ಹೋಗುತ್ತದೆ. ಎರಡು ಕಿಲೋ ಮೀಟರ್ ಒಳಗೆ ಪ್ರಯಾಣ ಮಾಡಿದರೆ ಕನಿಷ್ಠ ಶುಲ್ಕ ಎಂದು ನಿಗಧಿಪಡಿಸಲಾಗಿದೆ. ಅಂದರೆ 30ರೂಪಾಯಿ ನೀಡಬೇಕು. ಅದರಂತೆ 5 ಕಿಲೋ ಮೀಟರ್‌ಗೆ 65ರಿಂದ 75ರೂಪಾಯಿ, 10ಕಿ.ಮೀಗೆ 130-150ರೂಪಾಯಿ, 15ಕೀ.ಮೀಗೆ 195-225ರೂ, 20ಕೀ.ಮೀಗೆ 260ರಿಂದ 300ರೂ ಹಾಗೂ 25ಕೀ.ಮೀಗೆ 325 ರಿಂದ 375ರೂಪಾಯಿ ಪ್ರಯಾಣ ದರವನ್ನು ನಿಗಧಿ ಮಾಡಲಾಗಿದೆ. ಗಮನಿಸಬೇಕಾದ ವಿಷಯವೆಂದರೆ ಇಲ್ಲಿ ಸಾರಿಗೆ ಇಲಾಖೆ 25ಕೀ.ಮೀ ವ್ಯಾಪ್ತಿಗೆ ಮಾತ್ರ ಪ್ರಯಾಣ ದರವನ್ನು ನಿಗದಿಪಡಿಸಿದೆ. ಇದಕ್ಕಿಂತ ಹೆಚ್ಚಿನ ಪ್ರಯಾಣ ಮಾಡಿದರೆ ಲೆಕ್ಕಾಚಾರದ ಪ್ರಕಾರ ಕಿ.ಮೀಟರ್‌ಗೆ 15ರೂಪಾಯಿಯಂತೆ ಪಾವತಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಾರಿಗೆ ಇಲಾಖೆ ನೀಡಿದ ಪಟ್ಟಿಯನ್ನು ವೀಕ್ಷಿಸಿ.

ಆಟೋ ಮೀಟರ್ ಅಪ್‌ಡೇಟ್ ಮಾಡಲಾಗದ ಹಿಂದಿರುವ ಸಮಸ್ಯೆಗಳೇನು?
''ಬೆಂಗಳೂರಿನಲ್ಲಿ ಒಂದುವರೆ ಲಕ್ಷಕ್ಕೂ ಹೆಚ್ಚು ಆಟೋಗಳು ಪ್ರಯಾಣ ಮಾಡುತ್ತವೆ. ಆದರೆ ಎಲ್ಲಾ ಆಟೋಗಳಲ್ಲಿ ಹೊಸ ಪ್ರಯಾಣ ದರ ಅಳವಡಿಕೆಯಾಗಿಲ್ಲ. ಎಲ್ಲಾ ಆಟೋಗಳ ಮೀಟರ್ ಅಪ್‌ಡೇಟ್ ಮಾಡಲು ಸಾಕಷ್ಟು ಸಮಸ್ಯೆಗಳಿವೆ. ಸರ್ಕಾರ ಆಟೋ ಪ್ರಯಾಣ ದರವನ್ನು ಹೆಚ್ಚಳ ಮಾಡಿದ ಕೂಡಲೆ ಆಟೋ ಮೀಟರ್ ಅಪ್‌ಡೇಟ್ ಮಾಡಿಸಬೇಕಾಗಿತ್ತು. ಆದರೆ ಆಟೋ ಚಾಲಕರಿಗೆ ಅದು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ತೂಕ ಮತ್ತು ಮಾಪನ ಇಲಾಖೆ (Weight and Measurement Department) ನಿರ್ಲಕ್ಷ್ಯ ಕಾರಣ ಎನ್ನಲಾಗುತ್ತದೆ. ಆಟೋ ದರ ಹೆಚ್ಚಳದ ಬಳಿಕ ಮೀಟರ್ ಕಂಪನಿಗಳೊಂದಿಗೆ ಆಟೋ ಚಾಲಕರ ಸಂಘಟನೆ ಸಭೆ ಮಾಡಿ ಒಂದು ಮೀಟರ್ ಅಪ್‌ಡೇಟ್ ಗಾಗಿ 450ರಿಂದ 550ರೂಪಾಯಿ ನೀಡಲು ಒಪ್ಪಂದ ಮಾಡಿಕೊಂಡಿತ್ತು. ಆದರೆ ಮೀಟರ್ ಅಪ್‌ಡೇಟ್ ಕಂಪನಿಗಳು ಸರ್ಕಾರದೊಂದಿಗೆ ಶಾಮೀಲಾಗಿ 1000ರಿಂದ 1500ರೂಪಾಯಿವರೆಗೆ ಪ್ರತೀ ಆಟೋ ಮೀಟರ್ ಅಪ್‌ಡೇಟ್‌ಗಾಗಿ ಹಣ ಪೀಕುತ್ತಿವೆ. ಕಾಸಿದ್ದವನೇ ಬಾಸ್ ಎಂಬಂತೆ ಅಧಿಕ ಹಣ ಕೊಟ್ಟವರಿಗೆ ಮಾತ್ರ ಮೀಟರ್ ಅಪ್‌ಡೇಟ್ ಮಾಡಲಾಗುತ್ತಿದೆ. ಹೀಗಾಗಿ ಆಟೋ ಚಾಲಕರು ಮೀಟರ್ ಅಪ್‌ಡೇಟ್ ಸಹವಾಸಕ್ಕೆ ಹೋಗುತ್ತಿಲ್ಲ,'' ಎನ್ನುತ್ತಾರೆ ಆಟೋ ರಿಕ್ಷಾ ಡ್ರೈವರ್ಸ್ ಯುನಿಯನ್ ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಎನ್. ಶ್ರೀನಿವಾಸ್ ಅವರು.
''ಹಾಗೆ ನೋಡಿದರೆ ಇಂತಹ ಮದ್ಯವರ್ತಿಗಳ ಕೈ ಬಿಸಿ ಮಾಡುವುದನ್ನ ತಪ್ಪಿಸಲು ಸರ್ಕಾರ ಆನ್‌ಲೈನ್ ಅಪ್ಲೈ ಮೂಲಕ ಆಟೋ ಮೀಟರ್ ಅಪ್ಡೇಟ್ ಮಾಡಿಸಿಕೊಳ್ಳುವ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಇಲ್ಲೂ ಕೂಡ ಗೋಲ್ಮಾಲ್ ಮಾಡಲಾಗುತ್ತದೆ. ಗುರುತುಪಡಿಸಿದ ಜಾಗಕ್ಕೆ ಹೋದ ತಕ್ಷಣ ಮೀಟರ್ ಸೀಲಿಂಗ್ ಆಗೋದಿಲ್ಲ. ಹಣ ವಸೂಲಿ ಆದರೆ ಮಾತ್ರ ಆಟೋ ಸಮಸ್ಯೆಗಳು ಬಗೆಹರಿಯುತ್ತವೆ. ಇಲ್ಲವಾದರೆ ಅಲ್ಲಿ ಇಲ್ಲಿ ಅಲೆದಾಡಿಸುತ್ತಾ, ಅದು ಇಲ್ಲ, ಇದು ಇಲ್ಲ ಎನ್ನುವ ಕುಂಟು ನೆಪಗಳನ್ನು ಹೇಳಿ ಆಟೋ ಚಾಲಕರನ್ನು ಯಾಮಾರಿಸಲಾಗುತ್ತದೆ,'' ಎಂದು ಶ್ರೀನಿವಾಸ್ ದೂರುತ್ತಾರೆ.

ಆಟೋ ಚಾಲಕರ ಸಮಸ್ಯೆಗಳೇನು?
ಆಟೋ ಚಾಲಕರ ಕಷ್ಟ ಕೇಳುವವರು ಇಲ್ಲದಂತಾಗಿದೆ. ಯಾಕೆಂದರೆ ಅವರಿಗೆ ಇಂದು ದುಡಿದರೆ ಮಾತ್ರ ಆಹಾರ ಸೀಗೋದು. ಕುಟುಂಬಸ್ಥರ ಹೊಟ್ಟೆ ತುಂಬೋದು ಎಂಬಂತಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ದುಡಿಮೆಗೆ ಕೆಲಸವಿಲ್ಲ. ಆಟೋ ಓಡಿಸಿಯೇ ಜೀವನ ಮಾಡಬೇಕು. ದಿನಕ್ಕೆ 50ರಿಂದ100 ಬಂದರೆ ಹೆಚ್ಚು ಎಂಬಂತಾಗಿದೆ. ಇದರ ನಡುವೆ ಗ್ಯಾಸ ಬೆಲೆ ಬೇರೆ ಏರಿಕೆಯಾಗಿದೆ. ಒಂದು ದಿನಕ್ಕೆ ಒಂದು ಆಟೋಕ್ಕೆ 5ರಿಂದ 6 ಲೀಟರ್ ಗ್ಯಾಸ್ ಬೇಕಾಗುತ್ತದೆ. ಒಂದು ಲೀಟರ್ ಗ್ಯಾಸ್ ಬೆಲೆ 75 ರೂಪಾಯಿ ನೀಡಬೇಕು. ಅಲ್ಲಿಗೆ ದುಡಿದ ದುಡ್ಡು ಕೂಡ ಗ್ಯಾಸ ಹಾಕಿಸಲು ಸಾಕಾಗುವುದಿಲ್ಲ. ಒಂದು ಕಡೆ ಗ್ಯಾಸ ಬೆಲೆ ಏರಿಕೆ, ಮತ್ತೊಂದು ಕಡೆ ಅಗತ್ಯ ಬೆಲೆಗಳ ಏರಿಕೆಯಿಂದಾಗಿ ಆಟೋ ಚಾಲಕರು ಜೀವನ ನಡೆಸಲು ಸಾಧ್ಯವಾಗದೇ ಬೇಸತ್ತು ಹೋಗಿದ್ದಾರೆ. ಇದೆಲ್ಲದರ ಮಧ್ಯೆ ಆಟೋ ಪ್ರಯಾಣ ದರವನ್ನು ಸರ್ಕಾರ ಹೆಚ್ಚಿಸುತ್ತಿಲ್ಲ. ಹೆಚ್ಚಳ ಮಾಡಿದರೂ ನೂರೆಂಟು ಸಮಸ್ಯೆಗಳು. ಸಮಸ್ಯೆಗಳನ್ನು ಹೊತ್ತು ಸರ್ಕಾರದ ಮುಂದಿಟ್ಟರೆ ಸರ್ಕಾರದ ನಿರ್ಲಕ್ಷ್ಯ. ಇವೆಲ್ಲದರಿಂದ ಆಟೋ ಚಾಲಕರ ಜೀವನ ನರಕದಂತಾಗಿದೆ.
ಹೀಗಾಗಿ ಸರ್ಕಾರ ಆಟೋ ಚಾಲಕರಿಗಿರುವ ಸಮಸ್ಯೆಗಳನ್ನು ಆಲಿಸಬೇಕು ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಆಗಲೇ ಮೋಸ ಮಾಡುವ ಆಟೋ ಚಾಲಕರಿಂದ ಪ್ರಯಾಣಿಕರಿಗೆ ಮುಸ್ತಿ ಸಿಗಲು ಸಾಧ್ಯ. ಹೀಗಾಗಿ ಆಟೋ ಚಾಲಕರು ತಪ್ಪು ದಾರಿ ಹಿಡಿದು ಪ್ರಯಾಣಿಕರನ್ನು ಮೋಸಗೊಳಿಸುತ್ತಿದ್ದಾರೆ ಅಂದರೆ ಅದಕ್ಕೆ ನೇರ ಹೊಣೆ ಕಿತ್ತು ತಿನ್ನುವ ಮಧ್ಯವರ್ತಿಗಳೇ ಹೊರತು ಬೇರೆ ಯಾರೂ ಆಗಲು ಸಾಧ್ಯವಿಲ್ಲ.












Click it and Unblock the Notifications