ಈ ರಾಶಿಯವರು ಹುಂಬರು, ಆ ರಾಶಿಯವರು ನಂಬರು: ನಿಮ್ಮದು ಯಾವ ರಾಶಿ? ನಿಮ್ಮ ಸ್ವಭಾವ ಹೇಗೆ? -ಇಲ್ಲಿದೆ ಉತ್ತರ
personality traits of zodiac signs: ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ ಚಕ್ರಗಳಿಗೆ ಬಹಳ ಮಹತ್ವವಿದೆ. ಮೇಷ ರಾಶಿಯವರು ಸ್ವಲ್ಪ ಹುಂಬರು, ಆದರೆ ಅವರನ್ನೇ ನಂಬಿ ಬಂದಿದ್ದಾರೆಂದರೆ ತಮ್ಮದು ಎನ್ನುವಂಥ ಎಲ್ಲ ಸವಲತ್ತನ್ನು ಕೊಟ್ಟುಬಿಡುತ್ತಾರೆ. ವೃಷಭದವರು ತಾವಾಯಿತು, ತಮ್ಮ ಪಾಡಾಯಿತು ಎಂಬ ನಿಸ್ಪೃಹ ವ್ಯಕ್ತಿತ್ವದವರು. ಮಿಥುನಕ್ಕೆ ಯಾವಾಗಲೂ ಗೊಂದಲವೇ. ಇನ್ನು ಕರ್ಕಾಟಕ ಬಹಳ ಎಮೋಷನಲ್. ಸಿಂಹ ದಿ ಬಾಸ್. ಕನ್ಯಾದವರು ಪರ್ಫೆಕ್ಷನಿಸ್ಟ್ ಗಳು. ತುಲಾ ರಾಶಿಯವರದು ಬರೀ ಲೆಕ್ಕಾಚಾರ. ವೃಶ್ಚಿಕದವರು ಸುಲಭಕ್ಕೆ ನಂಬಲ್ಲ. ಧನುಸ್ಸು ರಾಶಿಯವರು ಎಲ್ಲದಕ್ಕೂ ಹೊಂದಾಣಿಕೆ ಮಾಡಿಕೊಳ್ಳುವ ಜನ. ಮಕರ ತಮಗಿಂತ ತಮ್ಮ ಕೆಲಸ ಮಾತನಾಡಬೇಕು ಅಂದುಕೊಳ್ಳುವವರು. ಕುಂಭ ರಾಶಿಯವರು ಫಲಿತಕ್ಕೆ ತಕ್ಕ ಕೆಲಸ, ಕೆಲಸಕ್ಕೆ ತಕ್ಕ ಫಲಿತ ಎಂಬ ಜನ. ಮೀನ ರಾಶಿಯವರು ಗುಟ್ಟು ಬಿಟ್ಟುಕೊಡದ ನಿಗೂಢ ಜನ. ಹೀಗೆ ಹನ್ನೆರಡು ರಾಶಿಯ ಗುಣ- ಸ್ವಭಾವವನ್ನು ಇಷ್ಟಿಷ್ಟೇ ವಿವರಿಸುವ ವಿವರಣೆ ಇಲ್ಲಿದೆ:
ಮೇಷ ರಾಶಿ: ನಾಯಕತ್ವ ಇವರಿಗೆ ಸಹಜ (Aries)
ಮೇಷ ರಾಶಿಯವರು ಸಾಕ್ಷಾತ್ ಅಗ್ನಿತತ್ವದ ಪ್ರತೀಕ. ಕುಜ ಗ್ರಹ ಇವರ ರಾಶ್ಯಾಧಿಪತಿ. ಇವರಲ್ಲಿ ಹರಿಯುವ ರಕ್ತಕ್ಕೆ ವೇಗ ಹೆಚ್ಚು. ಯಾವುದೇ ಕೆಲಸವಿರಲಿ, 'ನಾನೇ ಮೊದಲು' ಎನ್ನುವ ನಾಯಕತ್ವದ ಗುಣ ಇವರ ಹುಟ್ಟಿನಲ್ಲೇ ಬಂದಿರುತ್ತದೆ. ಮುಚ್ಚುಮರೆ ಇಲ್ಲದ ನಿಷ್ಠುರವಾದಿಗಳು. ಮನಸ್ಸಿನಲ್ಲಿ ಒಂದು, ಹೊರಗೆ ಒಂದು ಇವರಿಗೆ ಗೊತ್ತಿಲ್ಲ. ಸ್ವಲ್ಪ ಹುಂಬತನ ಇರುತ್ತದೆ. ಸಾಹಸ ಪ್ರವೃತ್ತಿ ಹೆಚ್ಚು, ಆದರೆ ಈ ಉದ್ವೇಗವೇ ಕೆಲವೊಮ್ಮೆ ಇವರಿಗೆ ಮುಳುವಾಗಬಹುದು. ಹಠಮಾರಿತನ ಬಿಟ್ಟು, ತಾಳ್ಮೆಯನ್ನು ಮೈಗೂಡಿಸಿಕೊಂಡರೆ ಸಮಾಜದಲ್ಲಿ ದೊಡ್ಡ ಮಟ್ಟದ ಕೀರ್ತಿ ಪಡೆಯುತ್ತಾರೆ. ನಿನ್ನಿಂದ ಇದು ಮಾಡೋಕಾಗಲ್ಲ, ಇದನ್ನು ಮಾಡಬೇಡ ಅಂದ ಕೆಲಸವನ್ನೇ ಹುಡುಕಿಕೊಂಡು ಹೋಗಿ ಮಾಡುವ ಜನ ಇವರು.

ವೃಷಭ ರಾಶಿ: ಪ್ರೀತಿಸಿದವರಿಗಾಗಿ ಏನು ಬೇಕಾದರೂ ಮಾಡ್ತಾರೆ (Taurus)
ವೃಷಭ ರಾಶಿಯವರು ಸ್ಥಿರತೆಗೆ ಹೆಸರುವಾಸಿ. ರಾಶ್ಯಾಧಿಪತಿ ಶುಕ್ರ. ಇವರು ಒಮ್ಮೆ ನಿರ್ಧರಿಸಿದರೆ ಅದನ್ನು ಬದಲಿಸುವುದು ಅಸಾಧ್ಯ. ಭೂಮಿತತ್ವದ ಇವರು ಸಮಾಧಾನಿಗಳು, ಕಲಾಪ್ರೇಮಿಗಳು ಮತ್ತು ಐಷಾರಾಮಿ ಜೀವನದ ಆಕಾಂಕ್ಷಿಗಳು. ಶ್ರಮಜೀವಿಗಳೇ ಆದರೂ ಸ್ವಲ್ಪ ಸೋಮಾರಿತನವೂ ಇವರನ್ನು ಬಾಧಿಸುತ್ತದೆ. ಸಂಬಂಧಗಳಿಗೆ ಹೆಚ್ಚು ಬೆಲೆ ನೀಡುತ್ತಾರೆ, ಪ್ರೀತಿಸಿದವರಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸುತ್ತಾರೆ. ಭಾಷೆಗಿಂತ ಭಾವನೆಯಲ್ಲಿ ತಮ್ಮನ್ನು ಹೆಚ್ಚು ಅಭಿವ್ಯಕ್ತಿಸುವ ವೃಷಭ ರಾಶಿಯವರ ಬದುಕು ಒಂದು ಸುಂದರವಾದ, ವ್ಯವಸ್ಥಿತವಾದ ಹಾದಿಯಲ್ಲಿ ಸಾಗುತ್ತದೆ. ಪದೇಪದೇ ಮೋಸ ಹೋಗುವ ಇವರಿಗೆ ಕೆಲವೊಮ್ಮೆ ಆ ಬಗ್ಗೆ ಗೊತ್ತೇ ಆಗಲ್ಲ.
ಮಿಥುನ ರಾಶಿ: ಬದಲಾವಣೆಗೆ ಹಾತೊರೆಯುವ ಸ್ನೇಹಜೀವಿಗಳು (Gemini)
ಮಿಥುನ ರಾಶಿಯವರು ಜಾಣ್ಮೆಯ ಸಾಗರ. ಬುಧ ಇವರ ರಾಶ್ಯಾಧಿಪತಿ. ಇವರು ಮಾಡಿದ ಕೆಲಸ ಹೇಗಿದೆ ಎಂಬುದೇನಾದರೂ ಹೇಳದೇ ಹೋದರೆ ಸಿಕ್ಕಾಪಟ್ಟೆ ಸಿಟ್ಟಾಗುತ್ತಾರೆ. ಇವರಲ್ಲಿ ಎರಡು ವ್ಯಕ್ತಿತ್ವಗಳಿರುತ್ತವೆ. ಇವರು ಮಾತಿನಲ್ಲೇ ಕೋಟೆ ಕಟ್ಟಬಲ್ಲರು. ಬುಧನ ಅಧಿಪತ್ಯ ಇರುವುದರಿಂದ ಇವರ ಬುದ್ಧಿಶಕ್ತಿ ಚುರುಕು. ಒಂದೇ ಸಮಯದಲ್ಲಿ ಹತ್ತಾರು ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಇವರ ಶೈಲಿ. ಬೇಗನೆ ಬೇಸರ ಮಾಡಿಕೊಳ್ಳುವ ಇವರಿಗೆ ಬದಲಾವಣೆ ಬೇಕೇ ಬೇಕು. ಹಿತಮಿತವಾದ ಮಾತು ಮತ್ತು ನಿರ್ಧಾರದಲ್ಲಿ ದೃಢತೆ ಇದ್ದು, ಶಿಕ್ಷಣ ಮತ್ತು ಸಂವಹನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡುತ್ತಾರೆ. ಸ್ನೇಹಜೀವಿಗಳಾದ ಇವರು ಎಲ್ಲರನ್ನೂ ಬೇಗನೆ ಆಕರ್ಷಿಸುತ್ತಾರೆ. ಆದರೆ ಮಲ್ಟಿಪಲ್ ಪರ್ಸನಾಲಿಟಿ ಅಂತಾರಲ್ಲ, ಅದನ್ನು ಇವರಲ್ಲಿ ಕಾಣಬಹುದು.
ಕರ್ಕಾಟಕ ರಾಶಿ: ಹೊರಗೆ ಕಠಿಣ, ಒಳಗೆ ಮೃದು (Cancer)
ಚಂದ್ರನ ಅಧಿಪತ್ಯದ ಕರ್ಕಾಟಕ ರಾಶಿಯವರು ಭಾವಜೀವಿಗಳು. ಇವರ ಮನಸ್ಸು ಸಮುದ್ರದ ಅಲೆಯಂತೆ ಸದಾ ಏರಿಳಿಯುತ್ತಿರುತ್ತದೆ. ಕುಟುಂಬದ ಮೇಲಿನ ಪ್ರೀತಿ ಇವರ ಉಸಿರು. ತಾಯಿಯ ಗುಣವನ್ನು ಹೊಂದಿರುವ ಇವರು ಇತರರನ್ನು ಸಲಹುವುದರಲ್ಲಿ ಆನಂದ ಕಾಣುತ್ತಾರೆ. ಹಳೆಯ ನೆನಪುಗಳನ್ನು ಮೆಲುಕು ಹಾಕುವುದು ಇವರಿಗೆ ಬಹಳ ಇಷ್ಟ. ಹೊರನೋಟಕ್ಕೆ ಕಠಿಣವಾಗಿ ಕಂಡರೂ ಒಳಗೆ ಅತ್ಯಂತ ಮೃದು ಸ್ವಭಾವದವರು. ಅತೀ ಭಾವುಕತೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಇವರ ಬದುಕು ಹಾಲಿನಂತೆ ಶುಭ್ರವಾಗಿರುತ್ತದೆ. ಬೇರೆ ರಾಶಿಯವರ ಜೊತೆಗೆ ಶತ್ರುತ್ವ ಕಟ್ಟಿಕೊಂಡರೆ ಹೇಗೆ ಏನೋ ಗೊತ್ತಿಲ್ಲ. ಆದರೆ ಕರ್ಕಾಟಕ ರಾಶಿಯವರ ಜೊತೆಗೆ ಪ್ರೀತಿ- ಸ್ನೇಹ ಮಾಡುವುದು, ಸಂಭಾಳಿಸುವುದೇ ಕಷ್ಟ.
ಸಿಂಹ ರಾಶಿ: ಪ್ರಾಣಕ್ಕೂ ಮಿಗಿಲು ಆತ್ಮಗೌರವ (Leo)
ಸಿಂಹ ರಾಶಿಯವರು ರಾಜಸ ಗುಣದವರು. ರವಿ ಈ ರಾಶಿಯವರ ಅಧಿಪತಿ. ಸೂರ್ಯನಂತೆ ಬೆಳಗುವ ಹಂಬಲ ಇವರದ್ದು. ಗೌರವ, ಪ್ರತಿಷ್ಠೆ ಪ್ರಾಣಕ್ಕಿಂತ ಮಿಗಿಲು. ಎಲ್ಲೇ ಹೋದರೂ ಕೇಂದ್ರಬಿಂದುವಾಗಿ ಇರಲು ಬಯಸುತ್ತಾರೆ. ಇವರಲ್ಲಿ ಧೈರ್ಯ ಮತ್ತು ಔದಾರ್ಯ ಎರಡೂ ಸಮನಾಗಿರುತ್ತದೆ. ಯಾರ ಬಳಿಯೂ ಕೈಚಾಚದ ಸ್ವಾಭಿಮಾನಿಗಳು. ಹೊಗಳಿಕೆಗೆ ಇವರು ಬೇಗನೆ ಮರುಳಾಗುತ್ತಾರೆ, ಇದು ಇವರ ದೌರ್ಬಲ್ಯ. ಸಮಾಜದಲ್ಲಿ ಅಧಿಕಾರ ಮತ್ತು ನಾಯಕತ್ವ ಇವರನ್ನು ಹುಡುಕಿಕೊಂಡು ಬರುತ್ತದೆ. ಇವರ ಜೀವನ ಶೈಲಿಯೇ ಒಂದು ವೈಭವ. ಎಲ್ಲರೂ ತಮ್ಮ ಮಾತನ್ನು ಕೇಳಲಿ, ಕೇಳಿಕೊಳ್ಳಲಿ, ಅನುಸರಿಸಲಿ ಎಂಬ ಭಯಂಕರ ಡಿಕ್ಟೇಟರ್ ಸಿಂಹ.
ಕನ್ಯಾ ರಾಶಿ: ದೋಷ ಹುಡುಕುವ ಗುಣ (Virgo)
ಕನ್ಯಾ ರಾಶಿಯವರು ಪರಿಪೂರ್ಣತೆಯನ್ನು ಬಯಸುವವರು. ಬುಧ ಗ್ರಹ ಅಧಿಪತಿ. ಪ್ರತಿ ಸಣ್ಣ ವಿಷಯದಲ್ಲೂ ಅಚ್ಚುಕಟ್ಟುತನ ಇರಬೇಕೆಂದು ಬಯಸುತ್ತಾರೆ. ವಿಮರ್ಶಾತ್ಮಕ ಬುದ್ಧಿಯುಳ್ಳವರು, ಆದ್ದರಿಂದ ದೋಷಗಳನ್ನು ಬೇಗನೆ ಪತ್ತೆ ಹಚ್ಚುತ್ತಾರೆ. ಬುಧನ ಪ್ರಭಾವದಿಂದ ಇವರಲ್ಲಿ ಗಣಿತ ಮತ್ತು ವಿಶ್ಲೇಷಣಾ ಸಾಮರ್ಥ್ಯ ಹೆಚ್ಚು. ಸೇವಾ ಮನೋಭಾವ ಇವರ ವಿಶೇಷ ಗುಣ. ಅನಗತ್ಯ ಚಿಂತೆ ಮತ್ತು ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ಇವರನ್ನು ಕಾಡಬಹುದು. ಶಿಸ್ತುಬದ್ಧ ಜೀವನವೇ ಇವರ ಯಶಸ್ಸಿನ ಗುಟ್ಟು. ಇವರು ನಂಬಿಕಸ್ತ ಮಿತ್ರರಾಗಿರುತ್ತಾರೆ. ಈ ರಾಶಿಯವರಿಗೆ ಲೋಕಜ್ಞಾನ ಹೆಚ್ಚು. ಮಾತು ಕೇಳುವವರು ಸಿಕ್ಕಿಬಿಟ್ಟರೆ ಕೊನೆಮೊದಲಿಲ್ಲದ ಐಡಿಯಾಗಳನ್ನು ಕೊಡುತ್ತಲೇ ಇರುತ್ತಾರೆ. ಇತರರ ಏಳ್ಗೆಗೆ ಭಾರೀ ತಲೆ ಕೆಡಿಸಿಕೊಳ್ಳುವ ಜನ ಇವರು. ಡೆಡ್ ಲೈನ್ ಒಳಗಾಗಿ ಕೆಲಸ ಮುಗಿಸುವುದಕ್ಕೆ ಹರಸಾಹಸ ಪಡುವ ರಾಶಿ ಕನ್ಯಾ.
ತುಲಾ ರಾಶಿ: ಸಮತೋಲನದ ಸಾಕಾರ ರೂಪ (Libra)
ತುಲಾ ರಾಶಿಯವರು ಸಮತೋಲನದ ಸಾಕಾರ ರೂಪ. ರಾಶ್ಯಾಧಿಪತಿ ಶುಕ್ರ. ನ್ಯಾಯ ಮತ್ತು ನೀತಿ ಎಂದರೆ ಇವರಿಗೆ ಪಂಚಪ್ರಾಣ. ಸುಂದರವಾದ ವಸ್ತುಗಳು ಮತ್ತು ಕಲೆ ಎಂದರೆ ಇವರಿಗೆ ಅತೀವ ಒಲವು. ಸಂಘರ್ಷಗಳನ್ನು ಇಷ್ಟಪಡುವುದಿಲ್ಲ, ಶಾಂತಿ ಮತ್ತು ಸೌಹಾರ್ದತೆಯನ್ನು ಬಯಸುತ್ತಾರೆ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಅದ್ಭುತ ಗುಣ ಇವರಲ್ಲಿದೆ. ನಿರ್ಧಾರ ತೆಗೆದುಕೊಳ್ಳುವಾಗ ಸ್ವಲ್ಪ ಗೊಂದಲಕ್ಕೊಳಗಾಗುವುದು ಇವರ ಸ್ವಭಾವ. ಶುಕ್ರನ ಪ್ರಭಾವದಿಂದ ಇವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಇವರಿಗೆ ಲಭಿಸುತ್ತದೆ. ಪ್ರತಿಯೊಂದಕ್ಕೂ ಲೆಕ್ಕ ಲೆಕ್ಕ ಲೆಕ್ಕ. ನೀನು ನನಗೆ ಏನು ಮಾಡಿದೆ, ನಾನು ನಿನಗೆ ಹೀಗೆ ಸಹಾಯ ಮಾಡಿದೆ ಎಂದು ಪ್ರತಿಯೊಂದನ್ನು ಗಣಿತದ ಕನ್ನಡಕದಲ್ಲೇ ನೋಡುವ ಲೆಕ್ಕಾಚಾರಿ.
ವೃಶ್ಚಿಕ ರಾಶಿ: ರಹಸ್ಯ ಕಾಪಾಡುವಲ್ಲಿ ನಿಪುಣರು (Scorpio)
ವೃಶ್ಚಿಕ ರಾಶಿಯವರು ಅತೀಂದ್ರಿಯ ಶಕ್ತಿಯುಳ್ಳವರು. ಕುಜ ರಾಶ್ಯಾಧಿಪತಿ. ಇವರ ಮನಸ್ಸಿನ ಆಳವನ್ನು ಅಳೆಯುವುದು ಯಾರಿಗೂ ಸಾಧ್ಯವಿಲ್ಲ. ದೃಢಸಂಕಲ್ಪದವರು ಮತ್ತು ಅತೀವ ಧೈರ್ಯಶಾಲಿಗಳು. ದ್ವೇಷವಿರಲಿ, ಪ್ರೀತಿಯಿರಲಿ ಅದನ್ನು ತೀವ್ರವಾಗಿ ಮಾಡುತ್ತಾರೆ. ರಹಸ್ಯಗಳನ್ನು ಕಾಪಾಡುವುದರಲ್ಲಿ ನಿಪುಣರು. ಇವರ ಮಾತುಗಳು ಕೆಲವೊಮ್ಮೆ ಚುಚ್ಚಿದಂತೆ ಇರಬಹುದು, ಆದರೆ ಅದು ಸತ್ಯವಾಗಿರುತ್ತದೆ. ಸೋಲನ್ನು ಒಪ್ಪದ ಇವರು ಫೀನಿಕ್ಸ್ ಹಕ್ಕಿಯಂತೆ ಮತ್ತೆ ಎದ್ದು ಬರುತ್ತಾರೆ. ಆಧ್ಯಾತ್ಮಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಉತ್ತುಂಗಕ್ಕೇರುತ್ತಾರೆ. ಸದಾ ಜಗಳಕ್ಕೆ ಅಂತಲೇ ಕಾಯ್ದು ನಿಂತಿರುವ ಚೇಳಿನಂತೆ ಕಾಣುವ ವೃಶ್ಚಿಕ ರಾಶಿಯವರು ತಲೆ ತಣ್ಣಗೆ ಇಟ್ಟುಕೊಂಡಿರಬೇಕು, ಹೃದಯ ಬೆಚ್ಚಗೆ ಇಟ್ಟುಕೊಂಡಿರಬೇಕು.
ಧನು ರಾಶಿ: ಸೋಲಿಗೆ ಕುಗ್ಗದ ಪರೋಪಕಾರಿ (Sagittarius)
ಧನು ರಾಶಿಯವರು ಜ್ಞಾನದ ಹರಿಕಾರರು. ಗುರುಗ್ರಹದ ಪ್ರಭಾವದಿಂದ ಇವರಲ್ಲಿ ಧರ್ಮ ಮತ್ತು ತತ್ವಶಾಸ್ತ್ರದ ಬಗ್ಗೆ ಆಸಕ್ತಿ ಹೆಚ್ಚು. ಸದಾ ಸತ್ಯವನ್ನು ಹೇಳುವವರು, ಇದರಿಂದ ಕೆಲವೊಮ್ಮೆ ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಸ್ವಾತಂತ್ರ್ಯ ಪ್ರೇಮಿಗಳು, ಬಂಧನವನ್ನು ಇಷ್ಟಪಡುವುದಿಲ್ಲ. ಪ್ರವಾಸ ಮತ್ತು ಹೊಸ ವಿಷಯಗಳನ್ನು ಕಲಿಯುವುದು ಇವರ ಪ್ರವೃತ್ತಿ. ಜೀವನವನ್ನು ಸಕಾರಾತ್ಮಕವಾಗಿ ನೋಡುವ ಜನರು, ಸೋಲಿಗೆ ಎಂದೂ ಕುಗ್ಗುವುದಿಲ್ಲ. ಇವರಲ್ಲಿರುವ ಆತ್ಮವಿಶ್ವಾಸವೇ ಬದುಕಿನ ದಾರಿದೀಪ. ಇಡೀ ಜಗತ್ತಿಗೆ ತನ್ನ ಅಗತ್ಯ ಇದೆ, ತನ್ನಿಂದ ಕೈಲಾದ ಎಲ್ಲ ಸಹಾಯ ಮಾಡಿ, ಸುತ್ತ- ಮುತ್ತಲ ಜನರನ್ನು ಬದುಕಿಸುತ್ತಾ ಇದ್ದೀನಿ ಅಂತೇನಾದರೂ ಹೇಳುತ್ತಿದ್ದರೆ ಅದು ಶುದ್ಧ ಧನುಸ್ಸು.
ಮಕರ ರಾಶಿ: ಗೋಗರೆದರೂ ಪರಿಹಾರ ಹೇಳರು (Capricorn)
ಮಕರ ರಾಶಿಯವರು ಶ್ರಮ ಮತ್ತು ತಾಳ್ಮೆಯ ಮೂರ್ತಿಗಳು. ಶನಿಗ್ರಹದ ಅಧಿಪತ್ಯ ಇರುವುದರಿಂದ ಬದುಕು ಶಿಸ್ತಿನಿಂದ ಕೂಡಿರುತ್ತದೆ. ಹಂತ ಹಂತವಾಗಿ ಯಶಸ್ಸಿನ ಶಿಖರವನ್ನು ಏರುತ್ತಾರೆ. ಅತಿಯಾದ ಮಹತ್ವಾಕಾಂಕ್ಷೆ ಇವರಲ್ಲಿರುತ್ತದೆ. ಅಷ್ಟು ಬೇಗ ಯಾರನ್ನೂ ನಂಬುವುದಿಲ್ಲ ಮತ್ತು ಭಾವನೆಗಳನ್ನು ಹೊರಹಾಕುವುದಿಲ್ಲ. ಪ್ರಾಕ್ಟಿಕಲ್ ಜಗತ್ತಿನಲ್ಲಿ ಬದುಕುವ ಇವರಿಗೆ ಕೆಲಸವೇ ದೇವರು. ವಯಸ್ಸಾದಂತೆ ಇವರು ಹೆಚ್ಚು ಪ್ರಭಾವಶಾಲಿಯಾಗುತ್ತಾರೆ. ಸಂಘಟನಾ ಶಕ್ತಿ ಅದ್ಭುತವಾದುದು. ಮಕರ ರಾಶಿಯವರು ತಮ್ಮ ಪ್ರಾಮುಖ್ಯ ತೋರಿಸಿಕೊಳ್ಳುವುದಕ್ಕೋ ಅಥವಾ ಉಳಿಸಿಕೊಳ್ಳುವುದಕ್ಕೋ ತಮ್ಮ ಬಳಿ ಜನರು ಬಂದು ಗೋಗರೆಯುವ ತನಕ ತಮಗೆ ಗೊತ್ತಿರುವ ವಿಷಯವೇ ಆದರೂ ಆ ಬಗ್ಗೆ ಬಾಯಿಯನ್ನೇ ಬಿಚ್ಚಲ್ಲ. ಜೊತೆಗೆ ನೂರು ಪರಿಹಾರ ಇದ್ದರೂ ನೂರಾ ಒಂದು ಸಮಸ್ಯೆಗಳನ್ನು ಹೇಳುವಂಥ ವ್ಯಕ್ತಿಗಳು.
ಕುಂಭ ರಾಶಿ: ಹೇಳಿದ ಮಾತು ಕೇಳಿಬಿಡಿ (Aquarius)
ಕುಂಭ ರಾಶಿಯವರು ಬುದ್ಧಿವಂತರು ಮತ್ತು ಮಾನವತಾವಾದಿಗಳು. ಶನಿ ಗ್ರಹವೇ ಇವರಿಗೂ ಅಧಿಪತಿ. ಸಮಾಜಕ್ಕಾಗಿ ಏನಾದರೂ ಕೊಡುಗೆ ನೀಡುವಂಥ ಕೆಲಸ ಮಾಡಬೇಕೆಂಬ ಹಂಬಲ ಇವರಲ್ಲಿ ಸದಾ ಇರುತ್ತದೆ. ಯೋಚನೆಗಳು ಕಾಲಕ್ಕಿಂತ ಮುಂಚಿತವಾಗಿರುತ್ತವೆ. ಸಂಪ್ರದಾಯಕ್ಕಿಂತ ಹೊಸತನಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಮೇಲ್ನೋಟಕ್ಕೆ ಒಂಟಿಯಾಗಿ ಕಂಡರೂ ವಿಶಾಲವಾದ ಸ್ನೇಹವಲಯವನ್ನು ಹೊಂದಿರುತ್ತಾರೆ. ಸ್ವಾತಂತ್ರ್ಯವೇ ಇವರ ಉಸಿರು. ಯಾರದೇ ಹಸ್ತಕ್ಷೇಪವನ್ನು ಸಹಿಸುವುದಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬಲ್ಲರು. ಆದರೆ ಇವರು ನೀಡಿದ ಸಲಹೆ, ಐಡಿಯಾಗಳನ್ನು ಬೇರೆಯವರು ಕೇಳದೇ ಇದ್ದಾಗ ಒಂದು ಹಿಂಸೆ ಕೊಡುತ್ತಾರಲ್ಲ, ಅದಕ್ಕಿಂತ ಕುಂಭ ರಾಶಿಯವರ ಮಾತನ್ನು ಪಾಲಿಸುವುದೇ ವಾಸಿ ಎಂದೆನಿಸಿ ಬಿಡುತ್ತದೆ.
ಮೀನ ರಾಶಿ: ಅಧ್ಯಾತ್ಮ ಸಾಧನೆಗೆ ಸತತ ಪ್ರಯತ್ನ (Pisces)
ಮೀನ ರಾಶಿಯವರು ದೈವಭಕ್ತರು ಮತ್ತು ಕರುಣಾಮಯಿಗಳು. ಗುರು ಇವರ ರಾಶ್ಯಾಧಿಪತಿ. ಇವರು ಈ ಪ್ರಪಂಚದಲ್ಲಿದ್ದರೂ ಯಾವುದೋ ಒಂದು ಕಾಲ್ಪನಿಕ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ತ್ಯಾಗ ಮನೋಭಾವ ಇರುತ್ತದೆ. ಪರರ ಕಷ್ಟಕ್ಕೆ ಕರಗುವ ಜನರು, ಬೇಗನೆ ಮೋಸ ಹೋಗುವ ಸಾಧ್ಯತೆಯೂ ಇರುತ್ತದೆ.ಸೃಜನಶೀಲತೆ ಮತ್ತು ಕಲಾತ್ಮಕ ಗುಣಗಳು ಅಪಾರ. ಆಧ್ಯಾತ್ಮಿಕ ಸಾಧನೆಗೆ ಇದು ಅತ್ಯಂತ ಶ್ರೇಷ್ಠವಾದ ರಾಶಿ. ಗೊಂದಲದ ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಂಡರೆ ಅದ್ಭುತವಾದದ್ದನ್ನು ಸಾಧಿಸಬಲ್ಲವರು. ಇವರಿಗೆ ತಾವು ಬುದ್ಧಿವಂತರು, ಬೇರೆಲ್ಲರಿಗಿಂತ ವಿಶಿಷ್ಟ ಸಾಮರ್ಥ್ಯ ಇರುವವರು ಎಂದು ಬೇರೆಯವರಿಂದ ಪದೇಪದೇ ಕೇಳಿಸಿಕೊಳ್ಳಬೇಕು ಎಂಬ ಚಪಲ. ಅದಕ್ಕಾಗಿ ಇವರು ಪಡುವ ಪಡಿಪಾಟಲು ಇದೆಯಲ್ಲ, ಅದರಿಂದ ಮೀನ ರಾಶಿಯವರೇ ಭಯಂಕರ ಬೇಜಾರಾಗಿ ಬಿಡುತ್ತಾರೆ.
ಗಮನಿಸಿ: ಇಲ್ಲಿ ನೀಡಿರುವ ರಾಶಿಯ ಸ್ವಭಾವಗಳು ಮೇಲ್ಮೈ ಮಟ್ಟದಾಗಿರುತ್ತದೆ. ಜೊತೆಗೆ ಗುಣ-ಸ್ವಭಾವ ವಿಶ್ಲೇಷಣೆ ಪರಿಣಾಮಕಾರಿಯಾಗಿ ಇರಲಿ ಎಂಬ ಕಾರಣಕ್ಕೆ ನೇರ ನುಡಿ- ಉದಾಹರಣೆಗಳು ಇವೆ. ಇದು ಯಾರನ್ನೂ ಅಗೌರವವಾಗಿ ಕಾಣುವುದಕ್ಕೋ ಹೀಯಾಳಿಸುವುದಕ್ಕೋ ಅಲ್ಲ. ಜ್ಯೋತಿಷಿಗಳಿಂದ ಜನ್ಮ ಜಾತಕ ವಿಶ್ಲೇಷಣೆ ಮಾಡಿಸಿಕೊಂಡಲ್ಲಿ ವ್ಯಕ್ತಿಗತವಾಗಿ ನಿರ್ದಿಷ್ಟ ಫಲ ತಿಳಿದುಕೊಳ್ಳಬಹುದು)
ಲೇಖನ: ಶ್ರೀನಿವಾಸ ಮಠ, ಸಂಪಾದಕರು, ಶ್ರೀಗುರುಭ್ಯೋ ಡಾಟ್ ಕಾಂ ಜಾಲತಾಣ
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ













Click it and Unblock the Notifications