Numerology : ಯಶಸ್ಸು ಮತ್ತು ಆತ್ಮವಿಶ್ವಾಸಕ್ಕಾಗಿ ನಿಮ್ಮ ಜನ್ಮ ದಿನಾಂಕದ ಪ್ರಕಾರ ಈ ವಸ್ತು ಯಾವತ್ತೂ ಕೈಯ್ಯಲ್ಲಿರಲಿ
ನೀವು ಹುಟ್ಟಿದ ದಿನಾಂಕವನ್ನು ಸಂಖ್ಯಾಶಾಸ್ತ್ರದಲ್ಲಿ ನಿಮ್ಮ ಮೂಲಾಂಕವನ್ನು ಅಥವಾ ರಾಡಿಕ್ಸ್ ನಂಬರ್ ಅನ್ನು ಲೆಕ್ಕಹಾಕಲು ಬಳಸಲಾಗುತ್ತದೆ. ಒಂದರಿಂದ ಒಂಭತ್ತರವರೆಗಿನ ಪ್ರತಿಯೊಂದು ಸಂಖ್ಯೆಯು ಕೆಲವು ಗುಣಗಳು, ಬಣ್ಣಗಳು ಮತ್ತು ಸಾಂಕೇತಿಕ ವಸ್ತುಗಳನ್ನು ಪ್ರತಿನಿಧಿಸುತ್ತದೆ. ಜನ್ಮ ದಿನಾಂಕಕ್ಕೆ ಅನುಗುಣವಾಗಿ ಕೆಲವು ನಿರ್ದಿಷ್ಟ ವಸ್ತುವನ್ನು ಇಟ್ಟುಕೊಳ್ಳುವುದರಿಂದ ಯಶಸ್ಸು ಸಿಗುತ್ತದೆ ಎನ್ನುವುದು ನಂಬಿಕೆ.
ಸಂಖ್ಯಾಶಾಸ್ತ್ರದಲ್ಲಿ ಹೇಳಿರುವಂತೆ ನಿಮ್ಮ ಮೂಲಾಂಕದ ಪ್ರಕಾರ ಸಾಂಪ್ರದಾಯಿಕವಾಗಿ ಕೆಲವೊಂದು ವಸ್ತುಗಳನ್ನು ನಿಮ್ಮ ಜೊತೆ ಕೊಂಡೊಯ್ಯಲು ಶಿಫಾರಸು ಮಾಡುತ್ತದೆ.

ಮೂಲಾಂಕ 1 ಅಂದರೆ 1, 10, 19 ಅಥವಾ 28 ರಂದು ಜನಿಸಿದವರು:
ಮೂಲಾಂಕ 1 ಇರುವವರು ಸೂರ್ಯನೊಂದಿಗೆ ಸಂಬಂಧ ಹೊಂದಿರುತ್ತಾರೆ. ಇವರು ಆತ್ಮವಿಶ್ವಾಸ, ಮಹತ್ವಾಕಾಂಕ್ಷೆಯುಳ್ಳವರು. ನಾಯಕತ್ವದ ಗುಣ ಹೆಚ್ಚಾಗಿ ಇರುತ್ತದೆ. ಇವರು ಚಿನ್ನದ ಬಣ್ಣದ ಯಾವುದಾದರೂ ವಸ್ತು, ತಾಮ್ರದ ನಾಣ್ಯ ಅಥವಾ ಕೆಂಪು ಬಣ್ಣದ ವಸ್ತುಗಳನ್ನು ತಮ್ಮ ಜೊತೆಗೆ ಇಟ್ಟುಕೊಳ್ಳಬೇಕು.ಈ ಬಣ್ಣಗಳು (color) ಸೂರ್ಯನೊಂದಿಗೆ ಸಂಬಂಧ ಹೊಂದಿರುವಂಥದ್ದು. ಹಾಗಾಗಿ ಈ ಬಣ್ಣದ ವಸ್ತುಗಳನ್ನು ಯಾವಾಗಲೂ ತಮ್ಮ ಜೊತೆಯಲ್ಲಿ ಇಟ್ಟುಕೊಂಡರೆ ಯಶಸ್ಸು ಬೆನ್ನ ಹಿಂದೆ ಇರುತ್ತದೆ ಎಂದು ಹೇಳಲಾಗುತ್ತದೆ.
ಮೂಲಾಂಕ 2 ಅಂದರೆ 2, 11, 20, 29ಕ್ಕೆ ಜನಿಸಿದವರು :
ಮೂಲಾಂಕ 2 ಅಂದರೆ ಚಂದ್ರ. ಈ ನಂಬರ್‌ನ ಜನರು ಸೂಕ್ಷ್ಮ, ಅರ್ಥಗರ್ಭಿತ ಮತ್ತು ಕಲ್ಪನಾಶಕ್ತಿಯುಳ್ಳವರು.ಇವರು ತಮ್ಮ ಜೊತೆ
ಬೆಳ್ಳಿ ಬಣ್ಣದ ವಸ್ತು, ಬಿಳಿ ಕರವಸ್ತ್ರ ಅಥವಾ ಮುತ್ತಿನ ವಸ್ತುಗಳನ್ನು ಇಟ್ಟುಕೊಳ್ಳಬೇಕು. ಬಿಳಿ ಮತ್ತು ಬೆಳ್ಳಿ ಚಂದ್ರನೊಂದಿಗೆ ಸಂಬಂಧ ಹೊಂದಿರುವಂಥದ್ದು. ಹಾಗಾಗಿ ಈ ಬಣ್ಣಗಳು ಭಾವನಾತ್ಮಕ ಸಮತೋಲನ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಮೂಲಾಂಕ 3 ಅಂದರೆ 3, 12, 21, 30ನೇ ತಾರೀಕಿಗೆ ಜನಿಸಿದವರು:
ಮೂಲಾಂಕ 3ರ ಅಧಿಪತಿ ಗುರು ಗ್ರಹ. ಇದು ಜ್ಞಾನ, ಸಂವಹನ, ಆಶಾವಾದ ಮತ್ತು ಬೆಳವಣಿಗೆಯೊಂದಿಗೆ ಸಂಬಂಧ ಹೊಂದಿದೆ.
ಹಾಗಾಗಿ ಯಾರ ಮೂಲಾಂಕ 3 ಇರುವುದೋ ಅವರು ಪೆನ್ನು, ಹಳದಿ ಕರವಸ್ತ್ರ ಅಥವಾ ಹಳದಿ ಬಣ್ಣದ ವಸ್ತುಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಕು. ಯಾಕೆಂದರೆ ಹಳದಿ ಬಣ್ಣವು ಗುರುಗ್ರಹದೊಂದಿಗೆ ಸಂಬಂಧ ಹೊಂದಿರುವಂಥದ್ದು. ಹಾಗಾಗಿ ಈ ವಸ್ತುಗಳು ನಿಮ್ಮ ಅದೃಷ್ಟದ ಬಾಗಿಲು ತೆರೆಯುವಂತೆ ಮಾಡುತ್ತದೆ.
ಮೂಲಾಂಕ 4 ಅಂದರೆ 4, 13, 22, 31ಕ್ಕೆ ಹುಟ್ಟಿದವರು :
ಮೂಲಾಂಕ 4 ರಾಹುವಿಗೆ ಸಂಬಂಧಿಸಿದ ಸಂಖ್ಯೆ. ಇದು ಚಿಂತನೆ, ದೃಢನಿಶ್ಚಯ ಮತ್ತು ವಿಭಿನ್ನವಾಗಿ ಕೆಲಸ ಮಾಡುವ ಬಯಕೆಯೊಂದಿಗೆ ಸಂಬಂಧ ಹೊಂದಿದೆ. ಇವರು ಕಡು ನೀಲಿ ಅಥವಾ ಬೂದು ಬಣ್ಣದ ವಸ್ತುಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಕು. ಈ ಬಣ್ಣಗಳು ಸ್ಥಿರತೆ ಮತ್ತು ಆಧಾರಸ್ತಂಭದ ಭಾವನೆಯನ್ನು ನೀಡುತ್ತವೆ ಎನ್ನುವುದು ನಂಬಿಕೆ.
ಮೂಲಾಂಕ 5 ಅಂದರೆ 5, 14, 23 ರಂದು ಜನಿಸಿದವರು :
ಮೂಲಾಂಕ 5 ಬುಧ ಗ್ರಹಕ್ಕೆ ಸಂಬಂಧಿಸಿದ್ದಾಗಿದೆ. ಈ ನಂಬರ್ ಮಾತು, ಬುದ್ಧಿವಂತಿಕೆ, ಹೊಂದಿಕೊಳ್ಳುವಿಕೆ ಮತ್ತು ವ್ಯವಹಾರದ ಪ್ರಜ್ಞೆಯನ್ನು ಸೂಚಿಸುತ್ತದೆ. ಇವರು ಹಸಿರು ಬಣ್ಣದ ಪೆನ್ನು, ಪರ್ಸ್ ಅಥವಾ ಸಣ್ಣ ಹಸಿರು ವಸ್ತುವನ್ನು ಯಾವಾಗಲೂ ತಮ್ಮ ಜೊತೆ ಇಟ್ಟುಕೊಳ್ಳಬೇಕು. ಹಸಿರು ಬಣ್ಣವು ಬುಧ ಗ್ರಹದ ಸಾಂಪ್ರದಾಯಿಕ ಬಣ್ಣವಾಗಿದ್ದು, ಮಾತು, ಕಲಿಕೆ ಮತ್ತು ಹೊಂದಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ.
ಮೂಲಾಂಕ 6 ಅಂದರೆ 6, 15 ಅಥವಾ 24ಕ್ಕೆ ಜನಿಸಿದವರು :
ಮೂಲಾಂಕ 6 ಶುಕ್ರನ ಅಧಿಪತ್ಯದ ನಂಬರ್. ಇದು ಸೌಂದರ್ಯ (beauty), ಸಂಬಂಧಗಳು, ಸೃಜನಶೀಲತೆ ಮತ್ತು ಸೌಕರ್ಯದೊಂದಿಗೆ ಸಂಬಂಧ ಹೊಂದಿದೆ. ಯಾರ ಮೂಲಾಂಕ 6 ಆಗಿರುವುದೋ ಅವರು ಬಿಳಿ, ಗುಲಾಬಿ ಅಥವಾ ನೀಲಿಬಣ್ಣದ ವಸ್ತುಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ನಿಮ್ಮ ಮನಸ್ಸು ಶಾಂತವಾಗಿರುತ್ತದೆ, ಮನಸ್ಸಿನಲ್ಲಿ ಒಳ್ಳೆಯ ಭಾವನೆ ಮೂಡುತ್ತದೆ. ಈ ಬಣ್ಣಗಳು ಮತ್ತು ವಸ್ತುಗಳು ಸಾಮರಸ್ಯ ಮತ್ತು ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುತ್ತವೆ.
ಮೂಲಾಂಕ 7 ಅಂದರೆ 7, 16 ಅಥವಾ 25ನೇ ತಾರೀಕಿಗೆ ಜನಿಸಿದವರು:
ಮೂಲಾಂಕ 7 ಅಂದರೆ ಕೇತು. ಇದು ಹೆಚ್ಚಾಗಿ ಆತ್ಮಾವಲೋಕನ, ಆಧ್ಯಾತ್ಮಿಕತೆ, ವಿಶ್ಲೇಷಣೆ ಮತ್ತು ಅಂತಃಪ್ರಜ್ಞೆಯೊಂದಿಗೆ ಸಂಬಂಧ ಹೊಂದಿದೆ.ನಿಮ್ಮ ಮೂಲಾಂಕ 7 ಆಗಿದ್ದರೆ ಸರಳ ನೈಸರ್ಗಿಕ ಕಲ್ಲು ಅಥವಾ ನೇರಳೆ ಬಣ್ಣದ ವಸ್ತುಗಳು ಸಣ್ಣ ನೋಟ್‌ಬುಕ್ ಅನ್ನು ನಿಮ್ಮ ಜೊತೆ ಇಟ್ಟುಕೊಳ್ಳಿ. ಈ ವಸ್ತುಗಳು ಶಾಂತವಾಗಿರಲು, ಫೋಕಸ್ಡ್ ಆಗಿರಲು ನಿಮ್ಮ ಆಂತರಿಕ ಆಲೋಚನೆಗಳೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ.
ಮೂಲಾಂಕ 8 ಅಂದರೆ 8, 17 ಅಥವಾ 26ಕ್ಕೆ ಜನಿಸಿದವರು. ಮೂಲಾಂಕ 8 ಅಂದರೆ ಶನಿ. ಇದು ಶಿಸ್ತು, ತಾಳ್ಮೆ, ಜವಾಬ್ದಾರಿ ಮತ್ತು ಪರಿಶ್ರಮದೊಂದಿಗೆ ಸಂಬಂಧ ಹೊಂದಿದೆ. ಮೂಲಾಂಕ 8 ಇರುವವರು
ಕಡು ನೀಲಿ ಅಥವಾ ಕಪ್ಪು ಬಣ್ಣದ ವಸ್ತು, ಪೆನ್ನು, ಪರ್ಸ್ ಅಥವಾ ಕೀಚೈನ್ ಅನ್ನು ತಮ್ಮ ಜೊತೆ ಇಟ್ಟುಕೊಳ್ಳಬೇಕು.ಶನಿಯು ಗಾಢ ಬಣ್ಣಗಳೊಂದಿಗೆ ಸಂಬಂಧ ಹೊಂದಿರುವವನು. ಹಾಗಾಗಿ ಈ ಬಣ್ಣಗಳು ಸ್ಥಿರತೆ, ಶಿಸ್ತು ಮತ್ತು ಗಂಭೀರತೆಯನ್ನು ಪ್ರತಿನಿಧಿಸುತ್ತದೆ.
ಮೂಲಾಂಕ 9 ಅಂದರೆ 9, 18 ಅಥವಾ 27ಕ್ಕೆ ಜನಿಸಿದವರು :
ಮೂಲಾಂಕ 9 ಧೈರ್ಯ, ಶಕ್ತಿ, ಕ್ರಿಯೆ ಮತ್ತು ದೃಢಸಂಕಲ್ಪದ ಗ್ರಹವಾದ ಮಂಗಳ ಗ್ರಹದೊಂದಿಗೆ ಸಂಪರ್ಕ ಹೊಂದಿದೆ. ಇವರು ಕೆಂಪು ಬಣ್ಣದ ವಸ್ತುಗಳು, ಕೆಂಪು ಪೆನ್ನು ಅನ್ನು ಇಟ್ಟುಕೊಂಡಿರಬೇಕು. ಮಂಗಳ ಗ್ರಹವು ಸಾಂಪ್ರದಾಯಿಕವಾಗಿ ಕೆಂಪು ಬಣ್ಣದೊಂದಿಗೆ ಸಂಬಂಧ ಹೊಂದಿದೆ. ಇದನ್ನು ಶಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸದ ಸಂಕೇತವಾಗಿ ನೋಡಲಾಗುತ್ತದೆ.
ನಿಮ್ಮ ಸಂಖ್ಯಾಶಾಸ್ತ್ರದ ಮೂಲಾಂಕವನ್ನು ಹೇಗೆ ಕಂಡುಹಿಡಿಯುವುದು :
ನಿಮ್ಮ ಮೂಲಾಂಕವನ್ನು ಲೆಕ್ಕ ಹಾಕುವುದು ತುಂಬಾ ಸರಳವಾಗಿದೆ. ನಿಮ್ಮ ಜನ್ಮ ದಿನಾಂಕದ ಅಂಕೆಗಳನ್ನು ಒಟ್ಟಿಗೆ ಸೇರಿಸಿದರೆ ಮೂಲಾಂಕ ಸಿಗುತ್ತದೆ. ಉದಾಹರಣೆ:
ಹುಟ್ಟಿದ ದಿನಾಂಕ: 14 ಆಗಿದ್ದರೆ 1 + 4 = 5. ಈಗ ನಿಮ್ಮ ಮೂಲಾಂಕ 5
ಹುಟ್ಟಿದ ದಿನಾಂಕ: 28 ಆಗಿದ್ದರೆ 2 + 8 = 10 → 1 + 0 = 1 ಆಗ ನಿಮ್ಮ ಮೂಲಾಂಕ 1 ಆಗುವುದು.
ನಿಮ್ಮ ತಿಂಗಳು ಮತ್ತು ಜನ್ಮ ವರ್ಷವನ್ನು ಮೂಲಾಂಕವನ್ನು ಲೆಕ್ಕಹಾಕಲು ಬಳಸುವುದಿಲ್ಲ. ಹುಟ್ಟಿದ ದಿನಾಂಕವನ್ನು ಮಾತ್ರ ಲೆಕ್ಕ ಹಾಕಲಾಗುತ್ತದೆ. ಸಂಖ್ಯಾಶಾಸ್ತ್ರದಲ್ಲಿ, ಹೇಳಲಾಗುವ ಬಣ್ಣ ಮತ್ತು ವಸ್ತುಗಳನ್ನು ಕಠಿಣ ಪರಿಶ್ರಮಕ್ಕೆ ಬದಲಿಯಾಗಿ ಅಲ್ಲ, ಸಾಂಕೇತಿಕ ಸಾಧನಗಳಾಗಿ ನೋಡಲಾಗುತ್ತದೆ. ಒಂದು ನಿರ್ದಿಷ್ಟ ಬಣ್ಣ ಅಥವಾ ವಸ್ತುವು ಮಾನಸಿಕವಾಗಿ ಆತ್ಮವಿಶ್ವಾಸದ ಸೂಚನೆಯಾಗಿಯೂ ಕೆಲಸ ಮಾಡಬಹುದು. ಆದರೆ ಯಶಸ್ಸು ಸಿದ್ಧತೆ, ಪರಿಶ್ರಮ, ಕೌಶಲ್ಯ, ನಿರ್ಧಾರಗಳು ಮತ್ತು ಸನ್ನಿವೇಶವನ್ನು ಆಧರಿಸಿರುತ್ತದೆ.


Click it and Unblock the Notifications
