ಮಾರ್ಚ್‌ನಲ್ಲಿ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ: ಈ ತಿಂಗಳು ಯಾರಿಗೆ ಶುಭ, ಯಾರಿಗೆ ಅಶುಭ
ಮಾಘಮಾಸದ ಬಹುಳ ಷಷ್ಠಿಯಿಂದ ಫಾಲ್ಗುಣಮಾಸ ಬಹುಳ ಷಷ್ಠಿಯವರೆಗೆ.
ಈ ತಿಂಗಳ ಚಂದ್ರನ ಸಂಚಾರ ಸ್ವಾತಿ ನಕ್ಷತ್ರದಿಂದ ಜ್ಯೇಷ್ಠಾ ನಕ್ಷತ್ರದ ವರೆಗೆ.
ಮಾಸದ ವಿಶೇಷ
08/03/2024-ಮಹಾಶಿವರಾತ್ರಿ
25/03/2024-ಹೋಳಿ ಹುಣ್ಣಿಮೆ
29/03/2024-ಗುಡ್ ಫ್ರೈಡೇ
07/03/2024-ರಂದು ಮೀನರಾಶಿಗೆ ಬುಧ ಮತ್ತು ಕುಂಭರಾಶಿಗೆ ಶುಕ್ರನ ಪ್ರವೇಶ.
14/03/2024ರಂದು ಮೀನ ರಾಶಿಗೆಸೂರ್ಯಪ್ರವೇಶ
15/03/2024 ರಂದು ಕುಂಭ ರಾಶಿಗೆ ಕುಜ ಪ್ರವೇಶ
25/03/2024ರಂದು ಮೇಷಕ್ಕೆ ಬುಧನ ಪ್ರವೇಶ
31/03/2024 ಮೀನರಾಶಿಗೆ ಶುಕ್ರನ ಪ್ರವೇಶ

ಮೇಷ ರಾಶಿಯ ಮಾಸ ಭವಿಷ್ಯ
ಈ ವರ್ಷವೆಲ್ಲ ಗುರುಬಲವಿಲ್ಲದೆ ಕಷ್ಟ ಪಟ್ಟಿದ್ದೀರಿ. ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದೀರಿ. ಆದರೆ ಈಗ ಗುರುಬಲ ಹತ್ತಿರವಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಗುರುಬಲ ಸಿಕ್ಕಿ ನಿಮ್ಮ ಜೀವನ ಇನ್ನಷ್ಟು ಹಗುರವಾಗುತ್ತದೆ. ಲಾಭ ಸ್ಥಾನದ ಶನಿಯ ಬೆಂಬಲದ ಜೊತೆ ಗುರುಬಲವೂ ಸೇರಿ ನಿಮಗೆ ಬದುಕು ಸರಾಗವಾಗಿ ನಡೆಯುತ್ತದೆ. ಈ ತಿಂಗಳ 7ರಂದು ಕುಂಭರಾಶಿಗೆ ಶುಕ್ರ ಹಾಗೂ 15 ರಂದು ಕುಜ ನ ಪ್ರವೇಶವಾಗುತ್ತದೆ. ಇದು ನಿಮಗೆ ಬಹಳಷ್ಟು ಲಾಭವನ್ನು ತಂದುಕೊಡುತ್ತದೆ.
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ, ಮನೆ ಅಥವಾ ಆಸ್ತಿ ಕೊಳ್ಳುವುದರತ್ತ ಮನಸ್ಸು ಮಾಡುವುದು, ಎಲೆಕ್ಟ್ರಾನಿಕ್ ಉಪಕರಣಗಳಿಂದ ಲಾಭ, ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಲಾಭ, ಆಭರಣ ಕೊಳ್ಳುವುದು, ಅಲಂಕಾರ ಸಾಮಗ್ರಿ ಕೊಳ್ಳುವುದು ಹೀಗೆ ಮನಸ್ಸಿಗೆ ಖುಷಿಕೊಡುವಂಥ ಕೆಲಸಗಳು ನಡೆಯುತ್ತದೆ. 15ರ ನಂತರ ಸೂರ್ಯನ 12 ನೇ ಮನೆ ಪ್ರವೇಶ ಕೊಂಚ ಹಿನ್ನಡೆಗೆ ಕಾರಣವಾಗುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಕೊಂಚ ಬದಲಾವಣೆ ಇದೆ. 12ರ ರಾಹುವಿನ ಕಿರಿಕಿರಿ ತಪಪಿಸಲು ಒಮ್ಮೆ ಕಾಳಹಸ್ತಿಗೆ ಹೋಗಿ ದರ್ಶನ ಮಾಡಿ ಬನ್ನಿ.

ವೃಷಭ ರಾಶಿಯ ಮಾಸ ಭವಿಷ್ಯ
ಲಾಭಸ್ಥಾನದ ರಾಹುವಿನ ಜೊತೆಗೆ 15ರ ನಂತರ ಸೂರ್ಯನೂ ಲಾಭಸ್ಥಾನಕ್ಕೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಧನಲಾಭ ಸೌಕರ್ಯ ಉಂಟಾಗುತ್ತದೆ. ಹತ್ತನೇ ಮನೆಯಲ್ಲಿ ಮೂರು ಗ್ರಹಗಳು ಸೇರಿ ವೃತ್ತಿ ಸಂಬಂಧವಾಗಿ ಒಂದು ಒಳ್ಳೆಯ ಬದಲಾವಣೆ ಇದೆ. ಕಾರ್ಯಕ್ಷೇತ್ರದಳ್ಲಿ ಒಳ್ಳೆಯ ಹೆಸರು ಪ್ರಶಂಸೆ ಗಳಿಸುತ್ತೀರಿ. ಗುರುಬಲ ಇಲ್ಲದಿದ್ದರೂ ಈಗ ಬೇರೆ ಗ್ರಹಬಲ ಚೆನ್ನಾಗಿ ಇರುವುದರಿಂದ ಜೀವನ ಸರಾಗವಾಗಿ ನಡೆಯುತ್ತದೆ.
ವ್ಯಯಸ್ಥಾನದಲ್ಲಿ ಇರುವ ಗುರು ಮುಂದಿನ ದಿನಗಳಲ್ಲಿ ನಿಮ್ಮ ರಾಶಿಗೇ ಪ್ರವೇಶವಾಗುತ್ತಾನೆ, ಆಗ ನಿಮಗೆ ಒಂದಷ್ಟು ಒತ್ತಡಗಳು ಸೃಷ್ಟಿಯಾಗುತ್ತದೆ. ಖರ್ಚುಗಳು ಬಹಳವಾಗಿ ಇದೆ. ಯಾವುದೇ ಕಿರಿಕಿರಿ ತರುವಂಥ ಸಂಗತಿಗಳನ್ನು ಕೊಂಚ ಪಕ್ಕಕ್ಕೆ ಸರಿಸಿ, ಜೀವನ ಹಗುರ ಮಾಡಿಕೊಳ್ಳಿ. ಬೇಡದ ಆಲೋಚನೆಗಳಿಂದ ಮನಸ್ಸಿಗೆ ನಿಮಗೆ ನೀವೇ ಘಾಸಿ ಮಾಡಿಕೊಳ್ಳಬೇಡಿ. ಯಾವುದೇ ನಿರ್ಧಾರಗಳನ್ನು ಯೋಚಿಸಿ ತೆಗೆದುಕೊಳ್ಳಿ. ಹಣಕಾಸಿನ ಮೇಲೆ ನಿಯಂತ್ರಣ ಇರಲಿ.

ಮಿಥುನ ರಾಶಿಯ ಮಾಸ ಭವಿಷ್ಯ
ಈಗ ಲಾಭಸ್ಥಾನದ ಗುರುವಿನಿಂದ ಅನೇಕ ಶುಭಫಲಗಳನ್ನು ಅನುಭವಿಸುತ್ತಿದ್ದೀರಿ. ನಿಮಗೆ ಸವಾಲಾಗಿರುವ ಸಂಗತಿಗಳೆಲ್ಲ ನಿಮಗೆ ಅನುಕೂಲವಾಗಿಯೇ ನಡೆಯುತ್ತಿದೆ. ಸವಾಲುಗಳು ನಿಮ್ಮಬಳಿಗೆ ಬರುವ ವೇಳೆಗೆ ಹಗುರವಾಗುತ್ತಿದೆ. 25 ರಂದು ಲಾಭಸ್ಥಾನಕ್ಕೆ ಬುಧನ ಪ್ರವೇಶ ನಿಮಗೆ ಇನ್ನಷ್ಟು ಶಕ್ತಿಯನ್ನು ಯಶಸ್ಸನ್ನೂ ತಂದುಕೊಡುತ್ತದೆ. ಈ ತಿಂಗಳ ಏಳರಂದು ಶುಕ್ರ ಭಾಗ್ಯಸ್ಥಾನಕ್ಕೆ ಪ್ರವೇಶವಾಗುವುದೂ ಸಹ ನಿಮಗೆ ಲಾಭಕರವಾಗಿಯೇ ಇದೆ. ಭಾಗ್ಯಸ್ಥಾನದ ಶುಕ್ರ ನಿಮ್ಮ ಭಾಗ್ಯಗಳನ್ನು ಹೆಚ್ಚಿಸುತ್ತಾನೆ.
ಈ ತಿಂಗಳ 31 ರಂದು ಮತ್ತೆ ಶುಕ್ರ ವೃತ್ತಿಸ್ಥಾನವಾದ ಮೀನರಾಶಿಗೆ ಪ್ರವೇಶವಾಗುತ್ತಾನೆ. ಇದು ವೃತ್ತಿಸಂಬಂಧವಾಗಿ ನಿಮಗೆ ಒಂದು ಒಳ್ಳೆಯ ಬದಲಾವಣೆಯನ್ನು ತರುತ್ತದೆ. ವೃತ್ತಿ ಸಂಬಂಧವಾಗಿ ದೂರಪ್ರಯಾಣ ಅಥವಾ ವಿದೇಶ ಪ್ರಯಾಣದ ಸಂಭವ ಇದೆ. ಔಷಧಿ ವ್ಯಾಪಾರಿಗಳು ವೈದ್ಯರು, ರಾಸಾಯನಿಕ ವಸ್ತುಗಳ ಮಾರಾಟ ಮಾಡುವವರು ಇವರಿಗೆ ಲಾಭ ಇದೆ. ತಾಯಿಗೆ ಅಧಿಕ ಕೆಲಸದ ಒತ್ತಡ ಇದೆ. ಇದರಿಂದ ಅವರ ಆರೋಗ್ಯಕ್ಕೆ ಹಾನಿಯಾಗದಂತೆ ಜಾಗ್ರತೆ ವಹಿಸಿ. ಅಕ್ಕಿ ಮತ್ತು ಬೆಲ್ಲವನ್ನು ಬಿಳಿ ಹಸುವಿಗೆ ತಿನ್ನಿಸಿ.

ಕಟಕ ರಾಶಿಯ ಮಾಸ ಭವಿಷ್ಯ
ಗುರುಬಲಕ್ಕಾಗಿ ಇನ್ನು ಕೆಲವೇ ತಿಂಗಳುಗಳು ಕಾಯಬೇಕು. ಈಗ ಶನಿಯ ಪ್ರಭಾವ ಜೋರಾಗಿದೆ. ಪ್ರತಿಯೊಂದು ವ್ಯವಹಾರದಲ್ಲೂ ಶನಿಯ ಪ್ರಭಾವದಿಂದ ನಿಧಾನಗತಿ ಮತ್ತು ಕಾರ್ಯ ವೈಫಲ್ಯ. ನಮ್ಮವರೇ ನಮಗೆ ಶತ್ರುಗಳಾಗಿ ಕಾಣುತ್ತಾರೆ. ಮನೆಯಲ್ಲಿ ಹಿರಿಯರಿಗೆ ಅನಾರೋಗ್ಯ ಸಂಗಾತಿಯೊಂದಿಗೆ ವೈಮನಸ್ಸು ಮುಂತಾದ ಸಣ್ಣಪುಟ್ಟ ತೊಂದರೆಗಳು ಇರುತ್ತದೆ. ಎಂಟನೇ ಮನೆಯಲ್ಲಿ ಶುಕ್ರ ಇರುವರೆಗೂ ಅಂದರೆ ಈ ತಿಂಗಳ 31 ರ ವರೆಗೂ ನಿಮಗೆ ಕೊಂಚ ಅನುಕೂಲಕರ ವಾತಾವರಣ ಇರುತ್ತದೆ.
ಮೂರರಲ್ಲಿ ಕೇತು ಸ್ವಲ್ಪ ಮಾನಸಿಕ ಶಕ್ತಿಯನ್ನು ಹೆಚ್ಚು ಮಾಡುತ್ತಾನೆ, ಹಾಗೂ ಧನಸಹಾಯವನ್ನೂ ಕೊಡಿಸುತ್ತಾನೆ. ಗುರು ಹತ್ತನೇ ಮನೆಯಲ್ಲಿ ಇರುವುದರಿಂದ ವೃತ್ತಿಯಲ್ಲಿ ಒತ್ತಡ ಇರುತ್ತದೆ. ನೀವು ಕಪ್ಪು ಹಸುವಿಗೆ ಅಕ್ಕಿ ಬೆಲ್ಲ ಬಾಳೆಹಣ್ಣು ಪ್ರತಿ ಶನಿವಾರ ಕೊಡಬೇಕು ಅಥವಾ ಹಸು ತಿನ್ನುವ ಆಹಾರ ಯಾವುದಾದರೂ ಕೊಡಬೇಕು. ಮದುವೆ ಕೆಲಸ ಬದಲಾವಣೆ ಎಲ್ಲವನ್ನೂ ಮುಂದಕ್ಕೆ ಹಾಕಿ. ಈಗ ಯಾವುದೇ ಮಹತ್ವದ ನಿಧಾರ ತೆಗೆದುಕೊಳ್ಳಲು ಸಕಾಲವಲ್ಲ.

ಸಿಂಹ ರಾಶಿಯ ಮಾಸ ಭವಿಷ್ಯ
ಈಗ ಗುರುಬಲ ಇದೆ. ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತದೆ. ದೇವರಿಗೆ ಧರ್ಮಕ್ಕೆ ಸಂಬಂಧಿಸಿದ ಕೆಲಸಗಳು ಮಾಡುತ್ತೀರಿ. ಏಳನೇ ಮನೆಯಲ್ಲಿ ಶನಿ ಇದ್ದು ನಿಮ್ಮ ರಾಶಿಯನ್ನು ನೇರವಾಗಿ ನೋಡುವುದರಿಂದ ನಿಮಗೆ ಕೋಪ ಹೆಚ್ಚು ಇರುತ್ತದೆ. ಈಗ ಏಳನೇ ತಾರೀಖಿಗೆ ಕುಂಭರಾಶಿಗೆ ಶನಿಯ ಜೊತೆ ಶುಕ್ರನೂ ಸೇರುತ್ತಾನೆ. ಇದು ಸ್ವಲ್ಪ ಅನಾರೋಗ್ಯ ತೋರಿಸುತ್ತದೆ. ಯಾವುದನ್ನೂ ನಿರ್ಲಕ್ಷ್ಯ ಮಾಡಬೇಡಿ. ಮನೆಯಲ್ಲಿ ಕೊಂಚ ಅಸಮಾಧಾನಕರ ವಾತಾವರಣ ಇರುತ್ತದೆ.
ಎಂಟನೇ ಮನೆಯಲ್ಲಿ ರಾಹು ಇದೂ ಸಹ ನಿಮಗೆ ಕ್ಷೇಮವಲ್ಲ. ಈ ತಿಂಗಳ 14 ರ ನಂತರ ಸೂರ್ಯ ಕೂಡ ಎಂಟನೇ ಮನೆಗೆ ಪ್ರವೇಶವಾಗುವುದ ಸೂರ್ಯ ರಾಹುಗಳ ಸಂಯೋಗ ನಿಮಗೆ ಒಂದು ಹೊಸ ಒತ್ತಡವನ್ನು ತರಬಹುದು. ವೃತ್ತಿ ಸಂಬಂಧವಾಗಿ ಒತ್ತಡಗಳು ಉದ್ಭವಿಸಬಹುದು. ಆದರೆ ಒಂಬತ್ತರಲ್ಲಿ ಗುರು ಇರುವುದರಿಂದ ಯಾವುದೇ ಸಮಸ್ಯೆಗಳಾದರೂ ಒಂದು ಪರಿಹಾರ ಅಂತೂ ಶೀಘ್ರ ಗೋಚರವಾಗುತ್ತದೆ. ಗುರುಬಲ ಇರುವುದರಿಂದ ಬೆಟ್ಟದಂತೆ ಬಂದ ಕಷ್ಟ ಮಂಜಿನಂಗೆ ಕರಗುತ್ತದೆ. ಗುರುಗಳ ಪ್ರಾರ್ಥನೆ ನಿರಂತರ ಇರಲಿ.

ಕನ್ಯಾ ರಾಶಿಯ ಮಾಸ ಭವಿಷ್ಯ
ಆರನೇ ಮನೆಯ ಶನಿ ಅಪರಿಮಿತ ಧನಲಾಭ ಕೊಡುತ್ತಾನೆ. ಶತ್ರುಗಳನ್ನು ದೂರ ಮಾಡುತ್ತಾನೆ. ಕೆಲಸಕಾರ್ಯಗಳು ಸರಾಗವಾಗಿ ನಡೆಯುವಂತೆ ಮಾಡುತ್ತಾನೆ. ಆದರೆ ಗುರು ಎಂಟನೇ ಮನೆಯಲ್ಲಿ ಇರುವುದು ಆರೋಗ್ಯಕ್ಕೆ ಹಾಗೂ ಕೌಟುಂಬಿಕವಾಗಿ ಶಾಂತಿ ಸಮಾಧಾನಕ್ಕೆ ತೊಂದರೆ ಇದೆ. ಜಠರಕ್ಕೆ ಸಂಬಂಧಪಟ್ಟ ತೊಂದರೆಗಳು ಕಾಣಿಸಬಹುದು. ಆಹಾರ ಸೇವಿಸುವಾಗ ಜಾಗ್ರತೆ ಇರಲಿ. ಏಳನೇ ಮನೆಯಲ್ಲಿ ರಾಹು ನಿಮ್ಮ ರಾಶೀಯಲ್ಲೇ ಕೇತು ಇರುವುದು ಅವಿವಾಹಿತರಿಗೆ ವಿವಾಹ ವಿಳಂಬ ಮಾಡುತ್ತದೆ. ಎಷ್ಟೇ ಹುಡುಕಿದರೂ ನಿಮಗೆ ಸಮಾಧಾನ ವಾಗುವಂಥ ಸಂಗಾತಿ ದೊರೆಯಲು ಈಗ ಕಷ್ಟ.
ಕೆಲವು ದಿನಗಳಲ್ಲಿ ಗುರು ಒಂಬತ್ತನೇ ಮನೆಗೆ ಪ್ರವೇಶವಾದಾಗ ಈ ಸಮಸ್ಯೆಗಳು ಹಗುರವಾಗಿ ನಿಮಗೆ ಪರಿಹಾರಗಳು ಗೋಚರಿಸುತ್ತದೆ. ಐದನೇ ಮನೆಯಲ್ಲಿ ಉಚ್ಚ ಕುಜ ಇದ್ದಾನೆ, ಇದು ನಿಮಗೆ ಮಕ್ಕಳಿಂದ ಶುಭಫಲಗಳು ಅಥವಾ ಮಕ್ಕಳ ಏಳ್ಗೆ ಸೂಚಿಸುತ್ತದೆ. ಶನಿಯೊಬ್ಬನೇ ಈಗ ನಿಮಗೆ ಕಾಪಾಡುವ ಗ್ರಹ. ಕೆಟ್ಟದನ್ನು ತಡೆಯುವ ಶಕ್ತಿ ಶನಿಗೆ ಇದೆ, ಆದರೆ ಶುಭಕಾರ್ಯ ಅಥವಾ ಒಳ್ಳೆಯ ಕೆಲಸಗಳು ನಡೆಯಲು ಗುರುಬಲ ಬೇಕು, ನೀವು ಕೊಂಚ ಕಾಯಬೇಕು.

ತುಲಾ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಎಲ್ಲಲ್ಲೂ ಗೆಲುವು ಸಂತೋಷ. ಗುರುಬಲ ರಾಹುಬಲ ಎರಡೂ ನಿಮ್ಮನ್ನು ಕಾಪಾಡುತ್ತಿದೆ. ನಾಲ್ಕನೇ ಮನೆಯಲ್ಲಿ ಉಚ್ಛ ಕುಜ ನಿಮಗೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ ಕೊಡಿಸುತ್ತಾನೆ. ಮನೆ ಕಟ್ಟುವುದು ಕೊಳ್ಳುವುದು ಮಾರುವುದು ಈ ವ್ಯವಹಾರಗಳು ಈಗ ಕುಜನಿಂದ ಸುಲಭವಾಗುತ್ತದೆ. ಈದನೇ ಮನೆಯಲ್ಲಿ ಶನಿ ಇದ್ದರೂ ಈ ತಿಂಗಳ ಕೊನೆವರೆಗೂ ಶುಕ್ರನೂ ಜೊತೆಗೆ ಇರುವುದರಿಂದ ಪಂಚಮ ಶನಿಯ ಪ್ರಭಾವ ನಿಮಗೆ ಕಡಿಮೆಯಾಗುತ್ತದೆ.
ಗುರುಬಲ ಇರುವುದರಿಂದ ವಿವಾಹ, ಗೃಹಪ್ರವೇಶ, ಕೆಲಸದಲ್ಲಿ ಬಡ್ತಿ ವಿದೇಶ ಪ್ರಯಾಣ, ಸಾಮಾಜಿಕವಾಗಿ ಕೀರ್ತಿ ಮುಂತಾದ ಒಳ್ಳೆಯ ಸಂಗತಿಗಳು ನಡೆಯುತ್ತದೆ. ಸುಗ್ರಾಸ ಭೋಜನ ವಿಹಾರ ಸ್ಥಳಗಳಿಗೆ ಭೇಟಿ, ಬಂಧು ಮಿತ್ರರೊಂಡನೆ ಮಾತ ಮೋಜು ಇವೆಲ್ಲವೂ ಇವೆ. ಮನಸ್ಸಿಗೆ ಸಂತೋಷ ಕೊಡುವ ಸಂಗತಿಗಳು ಬಹಳಷ್ಟು ಇವೆ. ಋಣಾತ್ಮಕ ಅಥವಾ ಕೆಟ್ಟ ಸಂಗತಿಗಳು ನಿಮ್ಮ ಬಳಿ ಬರದಂತೆ ರಾಹು ತಡೆಯುತ್ತಾನೆ. ನಿಮಗೆ ರಕ್ಷಣೆ ಕೊಡುತ್ತಾನೆ. 12 ನೇ ಮನೆಯ ಕೇತು ಆಧ್ಯಾತ್ಮದತ್ತ ಮನಸ್ಸು ಕೊಡುತ್ತಾನೆ. ಸನ್ಯಾಸಿಗಳ ಬಗ್ಗೆ ಯೋಗಿಗಳ ಬಗ್ಗೆ ಆಸಕ್ತಿ ವಹಿಸುತ್ತೀರಿ.

ವೃಶ್ಚಿಕ ರಾಶಿಯ ಮಾಸ ಭವಿಷ್ಯ
ಈಗ ಮೂರನೇ ಮನೆಯಲ್ಲಿ ಕುಜ 15 ನೇ ತಾರಿಖಿನ ವರೆಗೂ ಇರುತ್ತಾನೆ. ಇದು ನಿಮಗೆ ಬಹಳ ಪರಾಕ್ರಮ ಹಾಗೂ ವಿಜಯವನ್ನು ಸೂಚಿಸುತ್ತದೆ. ಗುರುಬಲ ಇಲ್ಲ ಆದರೆ ಬೇರೆ ಗ್ರಹಗಳ ಸಂಚಾರ ನಿಮಗೆ ಸ್ವಲ್ಪ ಮಟ್ಟಿಗಾದರೂ ಪರಿಹಾರ ಕೊಡುತ್ತದೆ. ಏಳನೇ ತಾರೀಖಿನಂದು ಶುಕ್ರ ಕುಂಭರಾಶಿಗೆ ಪ್ರವೇಶವಾಗುತ್ತಾನೆ. ನಾಲ್ಕನೇ ಮನೆಯ ಶುಕ್ರ ನಿಮಗೆ ಒಳ್ಳೆ ಫಲಗಳನ್ನು ಕೊಡಬಲ್ಲ. ವಾಹನದಿಂದ ಲಾಭ, ಅಲಂಕಾರ ವಸ್ತುಗಳಿಂದ ಲಾಭ, ಬೆಳ್ಳಿ ಬಂಗಾರ ವ್ಯಾಪಾರಿಗಳಿಗೆ ಲಾಭ, ಆಟೋಮೊಬೈಲ್ಸ್ ನವರಿಗೆ ಲಾಭ ಇದೆ.
ಏಳರಂದು ಮೀನ ರಾಶೀಗೆ ಬುಧ ಪ್ರವೇಶವಾಗುತ್ತಾನೆ. ಇದು ಮುಧನಿಗೆ ನೀಚಸ್ಥಾನ. ಅಂದರೆ ಬುಧ ಬಲಹೀನ. ಇಲ್ಲಿ ನಿಮಗೆ ರಾಹುವಿನ ಜೊತೆ ಬುಧ ಏನೂ ಪ್ರಯೋಜನ ಮಾಡಲಾರ. ಮಕ್ಕಳಿಂದ ವಿರೋಧ ಇದೆ. ಮಕ್ಕಳಿಂದ ಮಾನಸಿಕವಾಗಿ ದೂರವಾಗುತ್ತೀರಿ. ಅಥವಾ ಮಕ್ಕಳು ತಮ್ಮ ವೃತ್ತಿಸಂಬಂಧವಾಗಿ ಪರ ಊರಿಗೆ ಪ್ರಯಾಣ ಮಾಡುತ್ತಾರೆ. ಗುರುಬಲ ಇಲ್ಲದಿರುವುದರಿಂದ ಸಣ್ಣ ಸಮಸ್ಯೆಗಳು ನಿಮಗೆ ಬೃಹದಾಕಾರವಾಗಿ ಕಾಣಿಸುತ್ತದೆ. ಮಾನಸಿಕವಾಗಿ ಕ್ಷೋಭೆಗೊಳ್ಳುತ್ತೀರಿ. ಕಿರಿಕಿರಿ ಕೋಪತಾಪಗಳು ಇರುತ್ತದೆ. ಕೊಂಚ ತಾಳ್ಮೆ ವಹಿಸಿ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ.

ಧನಸ್ಸು ರಾಶಿಯ ಮಾಸ ಭವಿಷ್ಯ
ಈಗ ನಿಮ್ಮ ಸಮಯ ಬಹಳ ಚೆನ್ನಾಗಿ ಇದೆ. ಎರಡು ಬಲಾಢ್ಯ ಗ್ರಹಗಳು ಗುರು ಮತ್ತು ಶನಿ ಯ ಅನುಗ್ರಹ ನಿಮಗೆ ಇದೆ. ಶನಿ ಗುರು ಇಬ್ಬರೂ ಹಣ ಕೊಡುತ್ತಾರೆ. ಶನಿ ಕಷ್ಟಕರವಾಗಿದ್ದ ಕೆಲಸಗಳನ್ನು ಸುಲಭವಾಗಿ ನೆರೆವೇರುವಂತೆ ಮಾಡುತ್ತಾನೆ. ಕಳೆದ ವರ್ಷ ಆಗುವುದೇ ಇಲ್ಲ ಎಂದುಕೊಂಡಿದ್ದ ಕೆಲಸಗಳು ಈಗ ಸುಲಭವಾಗಿ ನೆರವೇರುತ್ತಿರುವುದನ್ನು ನೀವು ಕಾಣಬಹುದು. ನಿಮ್ಮ ಅನುಭವಕ್ಕೇ ಬಂದಿರುತ್ತದೆ. ಗುರು ಜೀವನ ಕಟ್ಟುವ ಕೆಲಸವನ್ನು ಮಾಡುತ್ತಾನೆ.
ಕೆಲಸ ಸಿಗುವುದು, ವಿವಾಹ ನಿಷ್ಕರ್ಷೆ, ಬಡ್ತಿ ಮನೆ ಕೊಳ್ಳುವುದು ಗೃಹಪ್ರವೇಶ ಮೊದಲಾದ ಶುಭಕಾರ್ಯಗಳು ಗುರುವಿನ ಅನುಗ್ರಹದಿಂದ ಸುಲಭವಾಗಿ ನೆರವೇರುತ್ತದೆ. ಒಂದು ಕೊರತೆ ಎಂದರೆ ಈಗ ರಾಹು ನಿಮಗೆ ಸುಖಸ್ಥಾನದಲ್ಲಿ ಇದ್ದಾನೆ. ಅದು ನಿಮಗೆ ವೃಥಾ ಶ್ರಮವನ್ನು, ಅಲೆದಾಟವನ್ನೂ ತೋರಿಸುತ್ತದೆ. ತಾಯಿಯ ಮನಸ್ಸಿಗೆ ಅಥವಾ ಆರೋಗ್ಯಕ್ಕೆ ಧಕ್ಕೆ ಒದಗಬಹುದು. ವೃತ್ತಿಯಲ್ಲಿ ಯಾವುದೇ ಏರುಪೇರು ಇಲ್ಲ. ಎರಡನೇ ಮನೆಯಲ್ಲಿ ಕುಜ ಇರುವುದು ಬೆಂಕಿಯಿಂದ ಪವರ್ ನಿಂದ ರಿಯಲ್ ಎಸ್ಟೇಟ್ ವ್ಯವಹಾರ ಇಂಥವುಗಳಲ್ಲಿ ಧನಲಾಭ ಇದೆ.

ಮಕರ ರಾಶಿಯ ಮಾಸ ಭವಿಷ್ಯ
ಸಾಡೆಸಾತಿ ಶನಿಯಿಂದ ಬಹಳಷ್ಟು ಕಷ್ಟಪಟ್ಟಿದ್ದೀರಿ. ಇನ್ನೂ ನಿಮಗೆ ಬೆಳಕು ಕಂಡಿಲ್ಲ. ಬೆಳಕಿನ ಕಿಂಡಿ ಸಣ್ಣದಾಗಿ ಗೋಚರಿಸಿದೆಯಾದರೂ ಸ್ಪಷ್ಟವಾದ ದಾರಿ ಕಾಣುತ್ತಿಲ್ಲ. ಕೆಲವು ದಿನಗಳು ಕಳೆದರೆ ನಿಮಗೆ ಬೆಳಕು ದೊಡ್ಡದಾಗಿ ಕಾಣುತ್ತದೆ. ಅವಕಾಶಗಳ ಬಾಗಿಲು ತೆರೆಯುತ್ತದೆ. ಮೂರನೇ ಮನೆ ಪರಾಕ್ರಮ ಸ್ಥಾನದಲ್ಲಿ ರಾಹು ಇರುವುದು ಈಗಿನಿಂದಲೇ ನಿಮಗೆ ಒಳ್ಳೆಯ ದಾರಿಯನ್ನು ಕಾಣುವ ಸೂಚನೆ ಸಿಕ್ಕಿರುತ್ತದೆ. ಅವಕಾಶಗಳ ಸುಳಿವು ಇದೆ. ಆದರೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಗೊಂದಲವಿದೆ. ಯೋಚಿಸಬೇಡಿ. ಖಂಡಿತಾ ಒಳ್ಳೆಯ ದಾರಿ ಕಾಣುತ್ತದೆ.
ಈ ತಿಂಗಳ ಕೊನೆಯ ವೇಳೆಗೆ ನಿಮ್ಮ ಭಾಗ್ಯದ ಬಾಗಿಲು ತೆರೆಯಬಹುದು. ನಾನು ಈ ಹಿಂದೆಯೇ ಹೇಳಿದ ಹಾಗೆ 2024 ಮಕರ ರಾಶಿಗೆ ಬಹಳ ಉತ್ತಮ ವರ್ಷ. ಭಾಗ್ಯೋದಯವಾಗುವ ಸಮಯ. ಧನಲಾಭ ಕುಟುಂಬಸೌಖ್ಯ ಆರೋಗ್ಯ ಸಾಲ ಮರುಪಾವತಿ ಗೃಹನಿರ್ಮಾಣ, ವಿಹಾರ, ವಿವಾಹ ಪ್ರಾಪ್ತಿ ಮುಂತಾದ ಎಲ್ಲ ಶುಭ ಸಂಗತಿಗಳು ಈಗ ನಿಮಗೆ ಒಂದೊಂದಾಗಿ ಜರುಗಲಿದೆ. ನಿಮ್ಮ ಅನುಭವಕ್ಕೆ ಗುಣಾತ್ಮಕ ಅಂಶಗಳು ಗೋಚರಿಸುತ್ತದೆ. ಮಾರ್ಚಿ 14ರ ನಂತರ ಮೂರನೇ ಮನೆಗೆ ಸೂರ್ಯನ ಪ್ರವೇಶವಾದಾಗ ಇನ್ನಷ್ಟು ನಿಮಗೆ ಹೊಸ ಹಾಗೂ ಶುಭ ಸಂಗತಿಗಳು ಗೋಚರಿಸುತ್ತದೆ.

ಕುಂಭ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಸ್ವಲ್ಪ ಸಂಕಷ್ಟದ ಕಾಲ. ನಿಮ್ಮ ನಿರೀಕ್ಷೆಗಳು ಹುಸಿಯಾಗಬಹುದು. ಶನಿ ನಿಮ್ಮಮನೆಯಲ್ಲಿಯೇ ಇರುವುದು ಬಹಳ ಖರ್ಚುಗಳಿಗೆ ಕಾರಣವಾಗುತ್ತದೆ. ವೃತ್ತಿಯಲ್ಲಿ ಒತ್ತಡ ಇರುತ್ತದೆ. ನಿಮ್ಮವರೇ ನಿಮಗೆ ಎದುರಾಗುವಂಥ ಸಂದರ್ಭ. ಸಾಡೆಸಾತಿಯ ಮಧ್ಯಭಾಗದಲ್ಲಿ ಇದ್ದೀರಿ. ಶನಿ ಕೊಡುವ ತೊಂದರೆಗಳನ್ನು ಸಹಿಸಲೇ ಬೇಕು. 12 ನೇ ಮನೆಯಲ್ಲಿ ಕುಜ ಇರುವುದೂ ಖರ್ಚುಗಳಿಗೆ ದಾರಿ ಮಾಡಿಕೊಡುತ್ತದೆ. ಎರಡನೇ ಮನೆಯ ರಾಹು ಕುಟುಂಬದಲ್ಲ ಕೊಂಚ ಅಶಾಂತಿ ಮೂಡಿಸುತ್ತಾನೆ. ಮೂರನೇ ಮನೆಯ ಗುರು ಸ್ವಲ್ಪ ಪ್ರಯೋಜನಕಾರಿ. 7 ನೇ ತಾರೀಖು ಬುಧ ಮೀನರಾಶಿಗೆ ಪ್ರವೇಶವಾಗುತ್ತಾನೆ, 25 ರ ವರೆಗೂ ಇರುತ್ತಾನೆ.
ಈ ದಿನಗಳು ನಿಮಗೆ ಕೊಂಚ ಧನಲಾಭ ಹಾಗೂ ಕುಟುಂಬ ಸೌಖ್ಯ ಇರುತ್ತದೆ. ಏಳನೇ ತಾರೀಖು ಶುಕ್ರ ಸಹ ಕುಂಭರಾಶಿಗೇ ಬರುತ್ತಾನೆ. 31 ರ ವರೆಗೂ ಇರುತ್ತಾನೆ. ಇದು ನಿಮಗೆ ಅಲ್ಪ ಸ್ವಲ್ಪ ಸೌಖ್ಯವನ್ನು ನೆಮ್ಮದಿಯನ್ನೂ ಕೊಡುತ್ತದೆ. ನಿಮ್ಮ ರಾಶಿಯಲ್ಲೇ ಇರುವ ಶನಿಯ ಪ್ರಭಾವ ಕೊಂಚ ಕಡಿಮೆಯಾಗುತ್ತದೆ. ಮನಸ್ಸಿಗೆ ಎಲ್ಲೋ ತಂಗಾಳಿ ಬೀಸಿದಂತೆ ತಂಪಾಗುತ್ತದೆ. ಎಂಟನೇ ಮನೆಯಲ್ಲಿ ಕೇತು ಇರುವುದು ನೀವು ಕೊಂಚ ಆರೋಗ್ಯ ದ ವಿಷಯದಲ್ಲಿ ಜಾಗ್ರತೆ ವಹಿಸಬೇಕು. ಕಾಲುಗಳ ತೊಂದರೆ ಕಾಲುನೋವು ಮುಂತಾದವು ಇರುತ್ತದೆ. ಚೂಪಾದ ವಸ್ತುಗಳಿಂದ ದೂರ ಇರಿ. ಗಣಪತಿಯ ದೇವಾಲಯದಲ್ಲಿ ಪೂಜೆ ಮಾಡಿಸಿ ಹುರುಳಿ ದಾನ ಕೊಡಿ.

ಮೀನ ರಾಶಿಯ ಮಾಸ ಭವಿಷ್ಯ
ನಿಮಗೂ ಈಗ ಕುಂಭರಾಶಿಯವರಂತೆಯೇ ಖರ್ಚುಗಳು ವಿಪರೀತ. ನಿಮಗೆ 12ನೇ ಮನೆ ವ್ಯಯಸ್ಥಾನದಲ್ಲಿ ಇರುವ ಶನಿ ನಾನಾ ಖರ್ಚುಗಳಿಗೆ ದಾರಿ ತೋರಿಸುತ್ತಾನೆ. ಆದಾಯ ಇದ್ದರೂ ಅದಕ್ಕೆ ಎರಡರಷ್ಟು ಖರ್ಚು ಇರುತ್ತದೆ. 11 ನೇ ಮನೆಯಲ್ಲಿ ಕುಜ ಉಚ್ಚನಾಗಿದ್ದು ನಿಮಗೆ ಲಾಭ ಇದೆ. ಆಸ್ತಿ ವ್ಯವಹಾರ ಗ್ರೃಹನಿರ್ಮಾಣ ಮುಂತಾದ ಕೆಲಸಗಳು ಹಗುರವಾಗಿ ನೆರವೇರುತ್ತದೆ. ವ್ಯವಸಾಯಗಾರರಿಗೆ ಲಾಭ ಇದೆ. ನಿಮ್ಮ ಬೆಳೆಗೆ ಒಳ್ಳೆಯ ಬೆಲೆ ಸಿಗುತ್ತದೆ. ಎರಡನೇ ಮನೆಯಲ್ಲಿ ಗುರು ಇರುವುದು ನಿಮಗೆ ಎಷ್ಟೋ ವಿಷಯಗಳಲ್ಲಿ ಪರಿಹಾರ ತೋರಿಸುತ್ತದೆ.
ಅವಿವಾಹಿತರಿಗೆ ವಿವಾಹ ಯೋಗ ಇದೆ. ವಿದೇಶ ಪ್ರವಾಸ ಯೋಗ ಇದೆ. ಆದರೆ ನಿಮ್ಮ ರಾಶಿಯಲ್ಲೇ ರಾಹು ಇರುವುದು ಕೊಂಚ ಚಿಂತೆಗೆ ಕಾರಣವಾದರೂ ನಿಮ್ಮ ರಾಶಿಗೆ ಬುಧ ಏಳನೇ ತಾರೀಖು ಬಂದಾಗ ನಿಮಗೆ ಸ್ವಲ್ಪ ತಂಪಿನ ಅನುಭವ ಆಗಬಹುದು, ಈ ತಿಂಗಳ ಕೊನೆಯಲ್ಲಿ ಶುಕ್ರ ನಿಮ್ಮ ರಾಶಿಗೆ ಬಂದಾಗ ಇನ್ನಷ್ಟು ಶುಭಸಂಗತಿಗಳು ಇರುತ್ತದೆ. ಸಾಡೆಸಾತಿ ಶನಿ ನಡೆಯುತ್ತಿರುವುದರಿಂದ ಮಾನಸಿಕ ಒತ್ತಡ ಹಾಗೂ ಕಿರುಕುಳ ಇದ್ದೇ ಇರುತ್ತದೆ. ನೀವೇ ನಿಭಾಯಿಸಿಕೊಳ್ಳಬೇಕು.












Click it and Unblock the Notifications