ಜನವರಿ 2023ರ ಮಾಸಭವಿಷ್ಯ: ಹೊಸ ವರ್ಷದ ಮೊದಲ ತಿಂಗಳು ಯಾವೆಲ್ಲ ರಾಶಿಗೆ ಸಂತಸ ಸುದ್ದಿ ಇದೆ?
ಪ್ರತಿಯೊಬ್ಬ ವ್ಯಕ್ತಿಯು ತನ್ನ ಭವಿಷ್ಯದ ಸಮಯದ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳುವ ಮೂಲಕ ತನ್ನ ಭವಿಷ್ಯದ ಯೋಜನೆಗಳನ್ನು ನಿರ್ಧರಿಸಲು ಬಯಸುತ್ತಾನೆ. ಆದರೆ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವುದು ಸ್ವಲ್ಪ ಕಷ್ಟ. ಇದರೊಂದಿಗೆ, ನಿಮ್ಮ ರಾಶಿಚಕ್ರದ ಪ್ರಕಾರ ನಿಮ್ಮ ಮುಂಬರುವ ಸಮಯದಲ್ಲಿ ಸಂಭವಿಸುವ ಘಟನೆಗಳನ್ನು ಊಹಿಸಲು ಸಹ ಕಷ್ಟವಾಗುತ್ತದೆ. ಅಂತಹ ಯಾವುದೇ ಮಾಹಿತಿಗಾಗಿ ವ್ಯಕ್ತಿಯು ಜ್ಯೋತಿಷ್ಯದ ಸಹಾಯವನ್ನು ತೆಗೆದುಕೊಳ್ಳುತ್ತಾನೆ.
ಶುಭಕೃತ್ ನಾಮ ಸಂವತ್ಸರದ ಹೇಮಂತ ಋತು ಪುಷ್ಯಮಾಸ, ತಾ: 01.01.2023 ರಿಂದ 31.01.2023, ಮಾಸಭವಿಷ್ಯ.
ಈ ತಿಂಗಳು 17ಕ್ಕೆ ಕುಂಭರಾಶಿಗೆ ಶನಿಯ ಪ್ರವೇಶ, 14ಕ್ಕೆ ಮಕರ ರಾಶಿಗೆ ರವಿಯ ಪ್ರವೇಶ, 22ಕ್ಕೆ ಕುಂಭಕ್ಕೆ ಶುಕ್ರನ ಪ್ರವೇಶ. ಮಾಸವಿಶೇಷ: 14 .01.023 ಮಕರ ಸಂಕ್ರಾಂತಿ, 28.01.23 ರಥಸಪ್ತಮಿ. 30.01.23 ಮಾಧ್ವನವಮಿ,
ಈ ವರ್ಷದ ಆದಿಯಲ್ಲಿ ಶನಿಯು ಮೂರು ವರ್ಷದಿಂದ ಇದ್ದ ಮಕರ ರಾಶಿಯನ್ನು ಬಿಟ್ಟು ಕಂಭರಾಶಿಗೆ ಪ್ರವೇಶವಾಗುತ್ತಾನೆ. ಇಲ್ಲಿ ಎರಡೂವರೆ ವರ್ಷ ಇರುತ್ತಾನೆ. ಏಪ್ರಿಲ್ 22 ರಂದು ಗುರು ಮೀನರಾಶಿಯಿಂದ ಮೇಷಕ್ಕೆ ಪ್ರವೇಶವಾಗುತ್ತಾನೆ. ಅಕ್ಟೋಬರ್ ನಲ್ಲಿ ರಾಹು ಕೇತುಗಳು ಮೇಷದಿಂದ ಮೀನರಾಶಿಗೆ, ತುಲಾದಿಂದ ಕನ್ಯಾರಾಶಿಗೆ ಪ್ರವೇಶ ಮಾಡುತ್ತಾರೆ. ಇದು ಜನವರಿ ತಿಂಗಳ ಭವಿಷ್ಯ ಹಾಗೂ 2023ರ ವರ್ಷ ಭವಿಷ್ಯ ಎರಡೂ ಆಗಿದೆ.

ಮೇಷ ರಾಶಿ:
ನೀವು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಶುಭ ಸಮಯ ಈಗ ಒದಗಿ ಬಂದಿದೆ. ಶನಿ ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಾದ ಕುಂಭರಾಶಿಗೆ ಈ 17ಕ್ಕೆ ಪ್ರವೇಶ ಮಾಡುತ್ತಾನೆ. 11ನೇ ಮನೆ ಲಾಭಸ್ಥಾನ. ಗೋಚಾರದಲ್ಲಿ ಲಾಭಸ್ಥಾನಕ್ಕೆ ತುಂಬ ಮಹತ್ವ ಇದೆ. ಶನಿಯ 11ನೇ ಮನೆ ಪ್ರವೇಶ ನಿಮಗೆ ಧನಲಾಭವನ್ನು ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನೂ, ಶೀಘ್ರ ಫಲವನ್ನೂ ಕೊಡುತ್ತದೆ. ಯಾವುದಾದರೂ ಹಣ ಬಾಕಿಯಾಗಿದ್ದರೆ ಈಗ ವಸೂಲಾಗುತ್ತದೆ. ನಿಂತುಹೋದ ಕೆಲಸ ಕಾರ್ಯಗಳು ಮತ್ತೆ ಚಾಲನೆ ಪಡೆದುಕೊಳ್ಳುತ್ತದೆ.
ಈಗ ನಿಮಗೆ ಗುರುಬಲ ಕಡಿಮೆ, ಏಪ್ರಿಲ್ ನಂತರ ಗುರು ನಿಮ್ಮ ರಾಶಿಗೆ ಪ್ರವೇಶವಾಗುವುದು ಅಷ್ಟೇನೂ ಫಲ ಕೊಡುವುದಿಲ್ಲ. ಆದರೆ ಶನಿಬಲ ಇರುವುದು ನಿಮಗೆ ಬಹಳ ಬೆಂಬಲ ಸಹಕಾರ ಧೈರ್ಯ ಶಕ್ತಿ ನೀಡುತ್ತದೆ. ಉದ್ಯೋಗದಲ್ಲಿ ಬಹಳ ದೊಡ್ಡ ಬದಲಾವಣೆ ಕಾಣುತ್ತೀರಿ. ಈ ತಿಂಗಳು ಪೂರ್ತಿ ಹಾಗೂ ವರ್ಷ ಪೂರ್ತಿ ನಿಮಗೆ ಸಾಕಷ್ಟು ಶುಭಫಲಗಳು ಸಿಗುತ್ತದೆ. ವೈರಿಗಳಿಂದ ಮುಕ್ತರಾಗುತ್ತೀರಿ.
ವೈರಿಗಳು ಅಥವಾ ನಿಮ್ಮ ಮೇಲೆ ಪಿತೂರಿ ಮಾಡುವವರ ಅಟ ನಿಲ್ಲುತ್ತದೆ. ನಿಮ್ಮ ದಾರಿ ಸುಗಮವಾಗುತ್ತದೆ. ರಾಜಕೀಯ ಕ್ಷೇತ್ರದವರಿಗೂ ಈಗ ಶುಭಸಮಯ. ಒಳ್ಳೆಯ ಪದವಿ ಅಧಿಕಾರ ನಿರೀಕ್ಷಿಸಬಹುದು. ಪವರ್ ಗೆ ಸಂಬಂಧಪಟ್ಟ ಕೆಲಸ ಮಾಡುವವರಿಗೂ ಈಗ ಶುಭಫಲಗಳು ಇವೆ. ಗುರುಬಲ ಇಲ್ಲದಿರುವುದರಿಂದ ದತ್ತಾತ್ರೇಯ ಸ್ತೋತ್ರ, ಗುರುಗಳ ದರ್ಶನ ಮಾಡಿ. ಗುರುವಾರ ಶಿವನ ಗುಡಿಗೆ ಹೋಗಿಬನ್ನಿ.

ವೃಷಭ ರಾಶಿ
ಈಗ ನಿಮಗೆ ಗುರುಬಲ ಇದೆ. ಶನಿ 9ನೇ ಮನೆಯಿಂದ 10 ನೇ ಮನೆಗೆ ಪ್ರವೇಶವಾಗುವುದು ನಿಮಗೆ ದೊಡ್ಡ ಬದಲಾವಣೆ ತರದಿದ್ದರೂ ಕೆಡುಕನ್ನು ಮಾಡುವುದಿಲ್ಲ. ಉದ್ಯೋಗದಲ್ಲಿ ಸುಸ್ಥಿತಿ ಕಾಯ್ದುಕೊಳ್ಳುವಿರಿ. ಒಳ್ಳೆಯ ಹೆಸರನ್ನು ಪಡೆಯುತ್ತೀರಿ. ಗುರುಬಲ ಇರುವುದರಿಂದ ನೀವು ಕೈ ಹಾಕಿದ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ. ಬಹಳ ದೊಡ್ಡ ಬದಲಾವಣೆ ನಿಮ್ಮ ಜೀವನದಲ್ಲೂ ಇದೆ. ನಿಮ್ಮನ್ನು ವಿರೋಧಿಸುವವರ ಮುಂದೆ ತಲೆಯೆತ್ತಿ ನಿಲ್ಲುವ ಅವಕಾಶ ಗುರು ನಿಮಗೆ ಅನುಗ್ರಹಿಸುತ್ತಾನೆ.
ಕುಟುಂಬದಲ್ಲಿ ಗೌರವ ಮರ್ಯಾದೆಗಳಿಗೆ ಪಾತ್ರರಾಗುತ್ತೀರಿ. ಸಾಮಾಜಿಕವಾಗಿ ಒಳ್ಳೆಯ ಹೆಸರನ್ನು ಪಡೆಯುತ್ತೀರಿ. ಉಪಕಾರಿಯಾಗಿ ಬದುಕುತ್ತೀರಿ. 14ಕ್ಕೆ ಮಕರಕ್ಕೆ ರವಿಯ ಪ್ರವೇಶ ನಿಮಗೆ ಶುಭಫಲಗಳನ್ನು ಕೊಡುತ್ತದೆ. ತಂದೆಯಿಂದ ಸಹಾಯ ಬೆಂಬಲ ಸಿಗುತ್ತದೆ. ತಂದೆಯಿಂದ ಆಸ್ತಿ ಅಥವಾ ಹಣ ದೊರೆಯಬಹುದು. ಆಭರಣ ಖರೀದಿ ಯೋಗ ಇದೆ. ಒಳ್ಳೆಯ ಸ್ಥಳಗಳಿಗೆ ಪ್ರವಾಸ, ದೇವರ ಕ್ಷೇತ್ರದರ್ಶನ ಮೊದಲಾದ ಪುಣ್ಯಫಲಗಳು ದೊರೆಯುತ್ತದೆ.
ದಾನಧರ್ಮ ಮಾಡುತ್ತೀರಿ. ನಿಮ್ಮನ್ನು ದೂರ ಮಾಡಿದವರು ಕೂಡಾ ನಿಮ್ಮ ಬಳಿಗೆ ಬರುವಂತೆ ಗುರು ಅನುಗ್ರಹಿಸುತ್ತಾನೆ. ರಾಜಕೀಯ ಕ್ಷೇತ್ರದವರಿಗೂ ಉತ್ತಮ ಫಲಗಳಿವೆ. ವ್ಯವಸಾಯಗಾರರಿಗೆ ಶುಭಫಲಗಳಿವೆ. ಜಾಗ ಬದಲಾವಣೆ ಸಾಧ್ಯತೆ ಇದೆ. ಆದರೆ ಇದು ನಿಮಗೆ ಶುಭ ತರುವಂಥ ಬದಲಾವಣೆ ಆಗಿರುತ್ತದೆ.

ಮಿಥುನ ರಾಶಿ
ಮೂರು ವರ್ಷದಿಂದ ಅಷ್ಟಮ ಶನಿಯ ಪ್ರಭಾವಕ್ಕೆ ಒಳಗಾಗಿ ಬಹಳ ಕಷ್ಟ ಪಟ್ಟಿದ್ದೀರಿ. ಕುಟುಂಬ ಸೌಖ್ಯವನ್ನು ಕಳೆದುಕೊಂಡಿದ್ದೀರಿ. ನೀವು ಮಾಡದ ತಪ್ಪಿಗೂ ಅಪನಿಂದೆ ಅಪಮಾನ ಅನುಭವಿಸಿದ್ದೀರಿ. ಹಣಕಾಸಿನ ಎಷ್ಟೋ ಸಮಸ್ಯೆಗಳನ್ನು ಎದುರಿಸಿದ್ದೀರಿ. ಹಣವನ್ನು ನೀರಿನಂತೆ ಕಳೆದುಕೊಂಡಿದ್ದೀರಿ. ಸಾಲಗಳನ್ನು ಅನುಭವಿಸಿದ್ದೀರಿ. ಈಗ ಇವೆಲ್ಲಕ್ಕೂ ಮುಕ್ತಾಯದ ಕಾಲ ಬಂದಿದೆ. ನಿಮಗೆ 9ನೇ ಮನೆಯ ಶನಿ ಉತ್ತಮಫಲಗಳನ್ನು ನೀಡುತ್ತಾನೆ. ನೀವು ಕಳೆದುಕೊಂಡ ಎಲ್ಲ ಸೌಖ್ಯಗಳನ್ನೂ ಹಂತಹಂತವಾಗಿ ಸರಿಪಡಿಸುತ್ತಾನೆ.
ಏಪ್ರಿಲ್ ನಂತರ ಗುರುಬಲ ಕೂಡ ಬರುವುದರಿಂದ ನಿಮಗೆ ಇನ್ನಷ್ಟು ಪ್ರಯೋಜನಗಳಿವೆ. 12ನೇ ಮನೆಯಲ್ಲಿ ಕುಜ ಇದ್ದಾನೆ. ಇದು ನಿಮಗೆ ಭೂಮಿಯಿಂದ ನಷ್ಟ ಮಾಡಿಸುತ್ತದೆ. ಕುಜನ ಶುಭಸ್ಥಾನದ ಪ್ರವೇಶ ಆಗುವವರೆಗೂ ನೀವು ಭೂಮಿಯ ಯಾವುದೇ ವ್ಯವಹಾರಕ್ಕೆ ಕೈಹಾಕಬೇಡಿ. ಭೂಮಿ ಕೊಳ್ಳುವುದು ಮಾರುವುದು ಮುಂದಕ್ಕೆ ಹಾಕಿ. ಏಕೆಂದರೆ ನೀವು ಅಪೇಕ್ಷಿಸಿದ ಬೆಲೆ ದೊರೆಯುವುದಿಲ್ಲ.
ವಿದ್ಯುತ್ ಸಂಬಂಧಿಸಿದ ಕೆಲಸಗಳಲ್ಲಿ ಜಾಗರೂಕರಾಗಿರಿ. ನಿಮ್ಮ ಅಪಮಾನ ನಷ್ಟ ಇವುಗಳಿಗೆ ತಕ್ಕ ಉತ್ತರ ಈಗ ಸಿಗಲಿದೆ. ಜೀವನದಲ್ಲಿ ಒಳ್ಳೆಯದನ್ನು ಅನುಭವಿಸುವ ಯೋಗ ಒದಗಿಬರುತ್ತದೆ. ನೀವು ಅದರ ಸೂಚನೆಯನ್ನು ಗಮನಿಸಿ. ಅದರಂತೆ ನಡೆದುಕೊಳ್ಳಿ. ಅವಕಾಶ ಬಂದಾಗ ಮೈಮರೆಯಬೇಡಿ. ಕುಂಭ ರಾಶಿಗೆ ಶುಕ್ರ 22.01 ರಂದು ಪ್ರವೇಶ ಮಾಡುತ್ತಾನೆ. ಇದು ಕೂಡ ನಿಮಗೆ ಬಹಳ ಬೆಂಬಲ ನೀಡುತ್ತದೆ.

ಕಟಕ ರಾಶಿ
ನಿಮಗೆ ಈಗ ಗುರುಬಲ ಇದೆ. ಆದರೆ ಏಳನೇ ಮನೆಯಲ್ಲಿ ಇರುವ ಶನಿ ಎಂಟನೇ ಮನೆಗೆ 17ರಂದು ಪ್ರವೇಶವಾಗುತ್ತಾನೆ. ಇದು ನಿಮಗೆ ಸವಾಲುಗಳ ಸಮಯ. ನೀವು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪರಿಸ್ಥಿತಿ ನಿಮಗೆ ಎದುರು ತಿರುಗಬಹುದು. ನಿಮ್ಮವರೇ ನಿಮಗೆ ವಿರೋಧ ಮಾಡಬಹುದು. ಕುಟುಂಬದಲ್ಲಿ ಅಶಾಂತಿ ತಲೆಹಾಕಬಹದು. ಪತಿಪತ್ನಿಯರ ನಡುವೆ ವೈಮನಸ್ಸು ಬರಬಹುದು. ಎಲ್ಲದಕ್ಕೂ ತಾಳ್ಮೇಯೇ ನಿಮ್ಮ ಅಸ್ತ್ರ. ಮುಂದೆ ಪರಿಸ್ಥಿತಿಗಳು ಸರಿಹೋಗುವವರೆಗೂ ಸಹನೆ ತಂದುಕೊಳ್ಳಬೇಕು.
ನಿಮ್ಮ ಮಾತಿಗೂ ಬೆಲೆ ಸಿಗದಂಥ ಕಾಲ. ಹಣಕಾಸಿನ ಸ್ಥಿತಿ ಏರುಪೇರಿನಿಂದ ಕೂಡಿರುತ್ತದೆ. ಉದ್ಯೋಗದಲ್ಲಿ ಒತ್ತಡ ಅನುಭವಿಸಬೇಕಾಗುತ್ತದೆ. ನಿಮ್ಮ ಶ್ರಮ ಬುದ್ದಿವಂತಿಗೆ ಸೃಜನಶಿಲತೆ ಯಾರೂ ಗಮನಿಸುವುದಿಲ್ಲ. ಆದರೆ ಹಿಂಜರಿಯಬೇಡಿ. ನಿಮ್ಮ ನಿರ್ಲಕ್ಷ್ಯ ಮಾಡಿದ ಜನಗಳೇ ಮುಂದಿನ ದಿನಗಳಲ್ಲಿ ನಿಮ್ಮ ಬಳಿ ಅಂಗಲಾಚಿ ಬರುತ್ತಾರೆ. ಅಲ್ಲಿಯವರೆಗೂ ಸಹನೆ ನಿಮ್ಮ ಮಂತ್ರವಾಗಿರಲಿ.
ಹನುಮಾನ್ ಸ್ತೋತ್ರ, ವಿಷ್ಣು ಸಹಸ್ರನಾಮ ಪ್ರತಿದಿನ ಹೇಳಿಕೊಳ್ಳಿ. ಪ್ರತಿ ಗುರುವಾರ ಈಶ್ವರನ ಗುಡಿಗೆ ಹೋಗಿಬನ್ನಿ. 11ರಲ್ಲಿ ಇರುವ ಕುಜ ನಿಮಗೆ ಸಾಕಷ್ಟು ಬೆಂಬಲ ಕೊಡುತ್ತಾನೆ. ಭೂ ವ್ಯವಹಾರಗಳಲ್ಲಿ ತಕ್ಕಮಟ್ಟಿಗೆ ಲಾಭ ಬರುತ್ತದೆ. ಕುಂಭರಾಶಿಗೆ ಶುಕ್ರನ ಪ್ರವೇಶವಾದಾಗ ನಿಮಗೆ ತಂಗಾಳಿ ಬೀಸಿದಂತೆ ಕೊಂಚ ಉಪಶಮನ ಸಿಗುತ್ತದೆ. ಈ ತಿಂಗಳು ನಿಮಗೆ ಮಧ್ಯಮ ಫಲಗಳು ಸಿಗಲಿದೆ.

ಸಿಂಹ ರಾಶಿ
ನಿಮಗೆ ಆರನೇ ಮನೆಯಲ್ಲಿ ಇದ್ದ ಶನಿ ಏಳನೇ ಮನೆಗೆ 17ರಂದು ಪ್ರವೇಶವಾಗುತ್ತಾನೆ. ಆರನೇ ಮನೆಯ ಶನಿ ಬಹಳ ಲಾಭವನ್ನು ಕೊಟ್ಟಿರುತ್ತಾನೆ. ಹಣಕಾಸು, ಅಧಿಕಾರ, ಕೀರ್ತಿ ಪ್ರತಿಷ್ಠೆ ಎಲ್ಲವನ್ನೂ ನೋಡಿದ್ದೀರಿ. ಈಗ ಅವೆಲ್ಲವನ್ನೂ ಒರೆಗೆ ಹಚ್ಚುವ ಸಮಯ. ಅಂದರೆ ನಿಮ್ಮನ್ನು ನೀವು ಪ್ರೂವ್ ಮಾಡಿಕೊಳ್ಳುವ ಸಮಯ. ಕೊಂಚ ಸಂಕಟಗಳು ಎದುರಾಗಬಹುದು. ಈ ಹಿಂದೆ ಅನುಭವಿಸಿದಷ್ಟು ಸುಖಸಂತೋಷಗಳು ಸಿಗದೇ ಇದ್ದರೂ ನಷ್ಟವಾಗದೇ ಇದ್ದರೂ ನಿಮಗೆ ಅಂಥ ಲಾಭದ ಸಮಯ ಅಲ್ಲ. ಯಾವ ವಿಚಾರಕ್ಕೂ ಯೋಚಿಸಿ ಹೆಜ್ಜೆ ಮುಂದಿಡಿ.
ಏಪ್ರಿಲ್ ವರೆಗೂ ಗುರುಬಲವೂ ಇಲ್ಲ. ಏಪ್ರಿಲ್ ನಂತರ ಗುರುಬಲ ಸಿಗುತ್ತದೆ ಆದರೆ ಗುರು ರಾಹು ಒಟ್ಟಿಗೆ ಇರುವುದು ನಿಮಗೆ ಹೇಳಿಕೊಳ್ಳುವಂಥ ಲಾಭ ಕೊಡುವುದಿಲ್ಲ. ಮೂರನೇ ಮನೆಯ ಕೇತು ನಿಮಗೆ ಶುಭಕಾರಕನಾಗಿದ್ದಾನೆ. ಧೈರ್ಯ ಮುನ್ನುಗ್ಗುವ ಕೆಚ್ಚು ಕೊಡುತ್ತಾನೆ. 10ರ ಕುಜ ಕಾರ್ಯಕ್ಷೇತ್ರವನ್ನು ಅಲುಗಾಡದಂತೆ ನಿಭಾಯಿಸುತ್ತಾನೆ. ಜನವರಿ 14 ರ ನಂತರ ಸೂರ್ಯನ ಮಕರ ರಾಶಿ ಪ್ರವೇಶ ನಿಮಗೆ ಶುಭಫಲಗಳನ್ನು ಕೊಡುತ್ತದೆ. ರಾಜಕೀಯವಾಗಿಯೂ ಒಳ್ಳೆಯ ಸ್ಥಾನಮಾನ ಸಿಗುುವಂಥ ಸಮಯ.
ಸ್ವಂತ ಉದ್ಯಮ ನಡೆಸುವ ಹಾಗೂ ಬಾಸ್ ಸ್ಥಾನದಲ್ಲಿ ಇರುವವವರಿಗೆ ಸೂರ್ಯ ಹೆಚ್ಚು ಶಕ್ತಿಯನ್ನು ಕರುಣಿಸುತ್ತಾನೆ. ಶುಕ್ರನ ಕುಂಭರಾಶಿ ಪ್ರವೇಶ ನಿಮಗೆ ಕೊಂಚ ಅನಾರೋಗ್ಯ ಕಾಡುತ್ತದೆ. ಎಂಟರ ಗುರು ನಿಮಗೆ ಕಾರ್ಯವಿಳಂಬವನ್ನು ಮಾಡಿಸುತ್ತಾನೆ. ನಿಧಾನ ಪ್ರಗತಿ. ತಾಳ್ಮೆ ಕಳೆದುಕೊಳ್ಳಬೇಡಿ. ದುಡುಕಬೇಡಿ. ದುಡುಕಿನಿಂದ ಬಹಳ ನಷ್ಟ ಅನುಭವಿಸಬೇಕಾಗುತ್ತದೆ. ಈಶ್ವರನ ಧ್ಯಾನ ಮಾಡಿ.

ಕನ್ಯಾ ರಾಶಿ
ಈಗ ನಿಮಗೆ ಕಲ್ಲು ಮುಟ್ಟಿದರೂ ಚಿನ್ನವಾಗುವ ಸಮಯ. ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ. ಶನಿಯ ಆರನೇ ಮನೆ ಪ್ರವೇಶ ನಿಮಗೆ ಬಹಳ ಲಾಭವನ್ನು ತಂದುಕೊಡುತ್ತದೆ. ಅನೇಕ ದಿನಗಳಿಂದ ಕನಸು ಕಾಣುತ್ತಿದ್ದ ಒಂದು ಮಹತ್ಕಾರ್ಯಕ್ಕೆ ಈಗ ಕೈ ಹಾಕುತ್ತೀರಿ. ಅದು ಯಶಸ್ವಿಯಾಗುವ ಎಲ್ಲ ಸೂಚನೆಗಳು ಇವೆ. ಉದ್ಯೋಗದಲ್ಲಿ ಪದವಿ ಪ್ರತಿಷ್ಠೆ ಗಳಿಸುತ್ತೀರಿ. ನಿಮ್ಮ ಮಾತಿಗೆ ಕೊಂಚ ಅಸಮಾಧಾನ ವ್ಯಕ್ತವಾಗುತ್ತದೆ.
ಆಡಿದ ಮಾತಿನಂತೆ ನಡೆದುಕೊಳ್ಳಲು ಆಗುವುದಿಲ್ಲ. ಇದು ನಿಮಗೆ ಅಪಕೀರ್ತಿ ತರುತ್ತದೆ. ಮಾತನಾಡುವಾಗ ಎಚ್ಚರಿಕೆ ಇರಲಿ. ಉಳಿದಂತೆ ನಿಮಗೆ ಈಗ ಸುಸಮಯ. ಶನಿ ಆರನೇ ಮನೆಯಲ್ಲಿ ಇದ್ದು ಶತ್ರುಗಳನ್ನು ದೂರ ಮಾಡುತ್ತಾನೆ. ಅಧಿಕ ಧನಲಾಭ ಮಾಡಿಸುತ್ತಾನೆ. ಗುರು ಏಳನೇ ಮನೆಯಲ್ಲಿ ನಿಮ್ಮ ಕೆಲಸ ಕಾರ್ಯಗಳಿಗೆ ಯಶಸ್ಸನ್ನೂ ಗೆಲುವನ್ನೂ ತಂದುಕೊಡುತ್ತಾನೆ. 14ರಂದು ಸೂರ್ಯ ಮಕರರಾಶಿ ಪ್ರವೇಶ ಹಾಗೂ ಮಕರದಲ್ಲಿ ಇರುವ ಬುಧ ನಿಮಗೆ ಕೊಂಚ ಅನಾರೋಗ್ಯ ಹಾಗೂ ಅಪಮಾನ ಅಥವಾ ಅಪಕೀರ್ತಿ ಬರುವಂತೆ ಮಡುತ್ತಾರೆ.
ಯಾರಿಗೂ ವಚನ ಕೊಡಬೇಡಿ. ವಚನ ಕೊಟ್ಟರೆ ಅದನ್ನು ನಿಭಾಯಿಸಿ. ಸಾಮಾಜಿಕವಾಗಿ ಈ ತಿಂಗಳೇ ಅಲ್ಲ ಈ ವರ್ಷಪೂರ್ತಿ ನಿಮಗೆ ಶುಭಸಮಯ. ಸಾಮಾಜಿಕ ಮನ್ನಣೆ ಮರ್ಯಾದೆ ಗೌರವ ಸಿಗುವ ಕಾಲ. ಅರ್ಹರಿಗೆ ಪ್ರಶಸ್ತಿ ಪುರಸ್ಕಾರಗಳು ಸಿಗುತ್ತದೆ. ರಾಜಕೀಯವಾಗಿಯೂ ಉತ್ತಮ ಫಲ ದೊರೆಯುತ್ತದೆ. ನೀವು ನಿರೀಕ್ಷೆ ಮಾಡದಂಥ ಶುಭ ಸಂಗತಿಗಳು ನಡೆಯುತ್ತದೆ.

ತುಲಾ ರಾಶಿ
ಈಗ ನಿಮಗೆ ಗುರುಬಲ ಇಲ್ಲ. ಶನಿಸಹ ಈ ತಿಂಗಳು 17ಕ್ಕೆ ಕುಂಭರಾಶಿ ಪ್ರವೇಶ ನಿಮಗೆ ಐದನೇ ಮನೆ ಅಂದರೆ ಪಂಚಮ ಶನಿ ಪ್ರಾರಂಭ. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ನೀವು ಎಣಿಸಿದಂಥ ಕೆಲಸಕಾರ್ಯಗಳು ಈಗ ನೆರವೇರುವುದಿಲ್ಲ. ನೀವು ಯೋಚಿಸುವುದೇ ಒಂದು ಅದಾಗುವುದೇ ಒಂದು. ಅದಕ್ಕಾಗಿ ಮನಸ್ಸಿನಲ್ಲಿ ವ್ಯಥೆ ಪಡಬೇಡಿ. ಇವೆಲ್ಲ ತಾತ್ಕಾಲಿಕ. ಮುಂದಿನ ದಿನಗಳಲ್ಲಿ ಎಲ್ಲವೂ ಒಂದು ತಹಬದಿಗೆ ಬರುತ್ತದೆ. ಕುಟುಂಬದಲ್ಲಿ ಕೆಲವು ನಿರ್ಧಾರಗಳಿಂದ ನಿಮ್ಮ ಮನಸ್ಸಿಗೆ ಅಸಮಾಧಾನ ಆಗಲಿದೆ.
ಈಗ ನಿಮಗೆ ತಾಳ್ಮೆಯ ಪರೀಕ್ಷೆ. ನೀವು ಎಷ್ಟು ತಾಳ್ಮೆ ವಹಿಸುತ್ತೀರೋ ಅಷ್ಟೇ ನಿಮಗೆ ಒಳ್ಳೆಯದು. ಹಣಕಾಸಿನ ಖರ್ಚೂ ಆಗಲಿದೆ. ನೀವು ಶ್ರಮ ಹಾಕಿದ ಕೆಲಸಗಳಿಗೆ ಫಲಿತಾಂಶ ಸಿಗುವುದು ಕಡಿಮೆ. ಫಲ ಕಡಿಮೆ ಶ್ರಮ ಹೆಚ್ಚು. ನಿಮ್ಮ ರಾಶಿಯ;ಲ್ಲಿರುವ ಕೇತು ಏಳನೇ ಮನೆಯ ರಾಹು ಆರರ ಗುರು ಯಾರೂ ನಿಮಗೆ ಈಗ ಸಹಾಯ ನೀಡುತ್ತಿಲ್ಲ. ಮೂರನೇ ಮನೆಯಲ್ಲಿ ಇರುವ ಬುಧಶುಕ್ರ ಹಾಗೂ ಸೂರ್ಯ ನಿಮಗೆ ಕೊಂಚ ಬಲವನ್ನು ಕೊಡುತ್ತಾರೆ.
ಮಳೆಗಾಲದಲ್ಲಿ ಕೊಡೆ ಹಿಡಿದ ಹಾಗೆ ಅಲ್ಪಸ್ವಲ್ಪ ಆಸರೆ ಸಿಗುತ್ತದೆ. ಮನೆ ಕೊಳ್ಳುವ ಕಟ್ಟು ವಾಹನ ಖರೀದಿಸುವ ಯಾವುದಾದರೂ ಮುಖ್ಯ ನಿರ್ಧಾರಗಳನ್ನು ಮುಂದೆ ಹಾಕಿ. ಏಪ್ರಿಲ್ ನಂತರ ನಿಮಗೆ ಕೊಂಚ ನಿರಾಳತೆ ಸಿಗುತ್ತದೆ. ಈ ತಿಂಗಳು ಸೂರ್ಯ ಬುಧ ಶುಕ್ರರೇ ನಿಮಗೆ ಬಲ.

ವೃಶ್ಚಿಕ ರಾಶಿ
ನಿಮಗೆ ಈಗ ಗುರುಬಲ ರಾಹುಬಲ ಶನಿಬಲ ಎಲ್ಲವೂ ಇದೆ. ಆದರೆ ಜನವರಿ 17 ರ ನಂತರ ಶನಿಬಲ ಕಡಿಮೆಯಾಗುತ್ತದೆ. ಶನಿ ನಾಲ್ಕನೇ ಮನೆಯ ಪ್ರವೇಶ ನಿಮಗೆ ಅರ್ಧಾಷ್ಠಮ ಶನಿ. ಹೆದರಿಕೆ ಬೇಡ. ನೀವು ಸಾಡೆಸಾತಿ ಶನಿ ಪೂರ್ಣ ಮಾಡಿದ್ದೀರಿ. ಗುರುಬಲ ಇರುವುದರಿಂದ ಏನೂ ಹೆಚ್ಚಿನ ತೊಂದರೆ ಇರುವುದಿಲ್ಲ. ಬೆಟ್ಟವಾಗಿ ಬಂದದ್ದು ಮಂಜಿನ ಹಾಗೇ ಹಾರಿಹೋಗುತ್ತದೆ.
ವೃತ್ತಿಯಲ್ಲಿ ಯಶಸ್ಸು, ಅರ್ಹರಿಗೆ ವಿವಾಹಯೋಗ ವಾಹನ ಖರೀದಿ, ಮನೆ ಕೊಳ್ಳುವ ಯೋಗ ಮೊದಲಾದ ಎಲ್ಲ ಶುಭಫಲಗಳು ಇವೆ. ಎರಡನೇ ಮನೆಯಲ್ಲಿ ಬುಧಶುಕ್ರ ಹಾಗೂ ಸೂರ್ಯರು ಇದ್ದು ನಿಮ್ಮ ಹಣಕಾಸಿನ ಪರಿಸ್ಥಿಯನ್ನು ಸುಗಮ ಮಾಡುತ್ತಾರೆ. ಸೂರ್ಯ ಮಕರರಾಶಿಗೆ ಪ್ರವೇಶವಾದಾಗ ನಿಮಗೆ ಇನ್ನಷ್ಟು ಶುಭಫಲಗಳು ಇವೆ. ಸರ್ಕಾರದಿಂದ ಲಾಭ, ರಾಜಕೀಯ ವ್ಯಕ್ತಿಗಳಿಗೆ ಲಾಭ ಸಿಗುತ್ತದೆ.
ಐದನೇ ಮನೆಯ ಗುರು ವಿದ್ಯಾರ್ಥಿಗಳಿಗೆ ಶುಭಫಲವನ್ನು ಕೊಡುತ್ತಾನೆ. ಉನ್ನತ ವ್ಯಾಸಂಗಕ್ಕೆ ಅವಕಾಶ ಒದಗಿಬರಲಿದೆ. ಸಾಮಾಜಿಕವಾಗಿ ಸನ್ಮಾನಗಳು ಗೌರವ ಪ್ರಶಸ್ತಿಗಳು ಸಿಗಲಿದೆ. ಆರನೇ ಮನೆಯ ರಾಹು ಶತ್ರುಗಳನ್ನು ದೂರ ಮಾಡುತ್ತಾನೆ. ಸಾಲಗಳಿಂದ ಮುಕ್ತಿ ಕೊಡಿಸುತ್ತಾನೆ. 12ರ ಕೇತು ಆದ್ಯಾತ್ಮಿಕವಾಗಿ ನಿಮಗೆ ಸನ್ಮಾರ್ಗ ತೋರಿಸುತ್ತಾನೆ. ಸ್ವಾಮಿಗಳ ಗುರುಗಳ ದರ್ಶನಭಾಗ್ಯ ಸಿಗುತ್ತದೆ. ಸಂತಾನದಿಂದ ಲಾಭ, ಸಂತಾನದಿಂದ ಶುಭಸುದ್ದಿ ಮಕ್ಕಳ ಏಳಿಗೆಅಭಿವೃದ್ಧಿ ಮುಂತಾದವು ನಿಮಗೆ ಸಂತಸ ತಂದುಕೊಡುತ್ತದೆ. ವಿದೇಶ ಪ್ರಯಾಣ ಯೋಗ ಇದೆ.

ಧನಸ್ಸು ರಾಶಿ
ಈಗ ನಿಮಗೆ ಸಾಡೇಸಾತಿ ಶನಿಯ ಮುಕ್ತಾಯ ಹಂತ. ಏಳುವರೆ ವರ್ಷ ಬಹಳ ಕಷ್ಟ ಪಟ್ಟಿದ್ದೀರಿ. ನಷ್ಟ ಎನ್ನುವುದು ನಾನಾ ವಿಧದಲ್ಲಿ ಅನುಭವಿಸಿದ್ದೀರಿ. ಕುಟುಂಬವನ್ನು ಕಳೆದುಕೊಂಡಿದ್ದೀರಿ. ಕುಟುಂಬದಿಂದ ದೂರ ಇದ್ದು ಅನಾಥ ಭಾವ ಅನುಭವಿಸಿದ್ದೀರಿ. ಹಣಕಾಸಿನ ನಷ್ಟ ಅನುಭವಿಸಿದ್ದೀರಿ. ನಿಮ್ಮವರಿಂದಲೇ ವಿರೋಧ ಅಪಮಾನ ಎದುರಿಸಿದ್ದೀರಿ. ಈಗ ನಿಮಗೆ ಶುಭಕಾಲ. ನೀವು ಕಳೆದುಕೊಂಡ ನಷ್ಟಗಳೆಲ್ಲವೂ ಲಾಭವಾಗಿ ನಿಮ್ಮ ಕೈಸೇರುತ್ತದೆ.
ವೃತ್ತಿಯಲ್ಲಿ ಒಳ್ಳೆಯ ಅಭಿವೃದ್ಧಿ ಇದೆ. ಬಡ್ತಿ ಸಂಭವ ಇದೆ. ಸಾಡೆಸಾತಿಯ ಪ್ರಭಾವದಿಂದ ದೂರಸ್ಥಳಕ್ಕೆ ವರ್ಗಾವಣೆ ಆಗಿದ್ದರೆ ಈಗ ನಿಮಗೆ ಅನುಕೂಲ ಪ್ರದೇಶಕ್ಕೆ ವರ್ಗಾವಣೆ ಸಿಗಲಿದೆ. ನೀವು ಅಂದುಕೊಂಡ ಕೆಲಸ ಕಾರ್ಯಗಳು ಈಗ ಶೀಘ್ರ ನೆರವೇರುತ್ತದೆ. ಮೂರನೇ ಮನೆ ಶನಿ ಪ್ರವೇಶ ನಿಮ್ಮಲ್ಲಿ ಒಂದು ಧೈರ್ಯ ಛಲ ಕೆಚ್ಚನ್ನು ತುಂಬುತ್ತದೆ. ಯಾರು ನಿಮ್ಮನ್ನು ಅವಹೇಳನ ಅಪಮಾನ ಮಾಡಿರುತ್ತಾರೋ ಅವರ ಮುಂದೆ ಎದ್ದುನಿಲ್ಲುತ್ತೀರಿ.
ನಿಮ್ಮ ಜೀವನ ಬಹಳ ದೊಡ್ಡ ಬದಲಾವಣೆ ಹೊಂದುವುದನ್ನು ಕಾಣುತ್ತೀರಿ. ಇನ್ನು ನಾಲ್ಕು ತಿಂಗಳಲ್ಲಿ ಗುರುಬಲ ಕೂಡ ಸೇರಲಿದೆ. ವಿದ್ಯಾರ್ಥಿಗಳಿಗೆ ಸುಸಮಯ. ವಿದೇಶದಲ್ಲಿ ವ್ಯಾಸಂಗ ಮಾಡುವ ಅವಕಾಶ ಒದಗಿ ಬರುತ್ತದೆ. ಮಕ್ಕಳಿಂದ ಕೊಂಚ ವಿರೋಧ ಎದುರಿಸುತ್ತೀರಿ. ಆರನೇ ಮನೆಯಲ್ಲಿ ಕುಜ ಸಹ ನಿಮಗೆ ಒಳಿತನ್ನೇ ಮಾಡುತ್ತಾನೆ. ಭೂಮಿಯಿಂದ ಲಾಭ ಇದೆ. ಆಸ್ತಿಖರೀದಿ ಯೋಗ ಇದೆ. ರಾಜಕೀಯದವರಿಗೂ ಬಹಳ ಒಳ್ಳೆಯ ಬದಲಾವಣೆಗಳು ನಡೆಯುತ್ತದೆ.

ಮಕರ ರಾಶಿ
ಈಗ ನಿಮಗೆ ಬದಲಾವಣೆಯ ಕಾಲ. ಸಾಡೆಸಾತಿ ಶನಿಯ ಮುಕ್ಕಾಲು ಭಾಗ ಮುಗಿಸಿದ್ದೀರಿ. ಶನಿ ಈಗ ನಿಮ್ಮ ರಾಶಿಯಲ್ಲೇ ಇದ್ದು 17ಕ್ಕೆ ಕುಂಭರಾಶಿಗೆ ಪ್ರವೇಶವಾಗುತ್ಥಾನೆ. ಇದು ನಿಮಗೆ ಸಾಡೆಸಾತಿಯ ಕೊನೆಯ ಹಂತ. ಇಲ್ಲಿ ಶನಿ ನಿಮಗೆ ಬಹಳಷ್ಟು ನಿರಾಳತೆಯನ್ನು ಕೊಡುತ್ತಾನೆ. ಹೊಸ ಅವಕಾಶಗಳು ಹುಡುಕಿ ಬರುತ್ತದೆ. ಐದು ವರ್ಷದಿಂದ ಬಹಳ ಕಷ್ಟ ಪಟ್ಟಿದ್ದೀರಿ. ಹಣಕಾಸಿನ ನಷ್ಟ ಅನುಭವಿಸಿದ್ದೀರಿ.
ಈಗ ಅವೆಲ್ಲವೂ ಹಂತಹಂತವಾಗಿ ಸರಿಹೋಗಲಿದೆ. ನಿಮ್ಮ ಅಪಮಾನಿಸಿದವರ ಮುಂದೆ ನೀವು ಫೀನಿಕ್ಸ್ ಪಕ್ಷಿಯಂತೆ ಎದ್ದು ನಿಲ್ಲುತ್ತೀರಿ. ಹೊಸ ಅವಕಾಶಗಳು ಪೂರ್ಣಪ್ರಮಾಣದಲ್ಲಿ ಈಗ ಸಿಗುವುದಿಲ್ಲ. ಅಲ್ಪ ಮಟ್ಟಿನ ಕೊರತೆ ಕಾಣುತ್ತದೆ. ಆದರೆ ಬಂದ ಅವಕಾಶವನ್ನು ಬಾಚಿಕೊಳ್ಳಿ. ಈಗ ಸಣ್ಣ ಅವಕಾಶವೇ ಆದರೂ ಅದೇ ಮುಂದೆ ನಿಮಗೆ ದೊಡ್ಡಮಟ್ಟದ ಯಶಸ್ಸನ್ನು ಒಳ್ಳೆಯ ಹೆಸರನ್ನೂ ತಂದುಕೊಡುತ್ತದೆ. ಮುಂದೆ ನಿಮಗೆ ಬಹಳ ಒಳ್ಳೆಯ ಕಾಲ ಇದೆ.
ಹಣದ ಸುರಿಮಳೆಯಾಗುವಂಥ ಕಾಲವೂ ಮುಂದೆ ಬರಲಿದೆ. ಕೊಂಚ ತಾಳ್ಮೆ ತಂದುಕೊಳ್ಳಿ. ಈಗಲೂ ಮೂರನೇ ಮನೆಯ ಗುರು ನಿಮಗೆ ಅಲ್ಪಸ್ವಲ್ಪ ಲಾಭವನ್ನು ತಂದುಕೊಡುತ್ತಾರೆ. ಈ ವರ್ಷದ ಕೊನೆಯ ಭಾಗದಲ್ಲಿ ರಾಹುಕೇತುಗಳ ಸ್ಥಾನ ಚಲನೆ ಕೂಡ ನಿಮಗೆ ಅತ್ಯುತ್ತಮ ವರವಾಗಿ ಪರಿಣಮಿಸಲಿದೆ. ಈ ತಿಂಗಳು ಹೊಸದೊಂದು ಅವಕಾಶ ನಿಮ್ಮ ಕೈಹಿಡಿಯುತ್ತದೆ. ಬಿರುಬಿಸಿಲಲ್ಲಿ ತಂಗಾಳಿಯಂತೆ ಅದು ನಿಮಗೆ ತಂಪು ನೀಡುತ್ತದೆ. ಮಕ್ಕಳಿಂದ ಶುಭ ಸುದ್ದಿ ಕೇಳುತ್ತೀರಿ. ಕುಟುಂಬ ದಿಂದ ದೂರ ಇರುವ ಸಂಭವ ಇದೆ. ಅದನ್ನು ಗುಣಾತ್ಮಕವಾಗಿ ಬದಲಾಯಿಸಿಕೊಳ್ಳಿ. ಸಕಾರಾತ್ಮಕವಾಗಿ ತೆಗೆದುಕೊಳ್ಳಿ.

ಕುಂಭ ರಾಶಿ
ನೀವು ಸಾಡೆಸಾತಿ ಶನಿಯ ಮೊದಲ ಭಾಗ ಮುಗಿಸಿದ್ದೀರಿ. ಈ ತಿಂಗಳ 17ಕ್ಕೆ ಶನಿ ನಿಮ್ಮ ರಾಶಿಗೇ ಪ್ರವೇಶವಾಗುವುದು ಎರಡನೇ ಹಂತದ ಪ್ರಾರಂಭ. ಈಗ ನಿಮಗೆ ಗುರುಬಲ ಇದೆ. ಬಿಸಿ ಅಷ್ಟಾಗಿ ತಾಕುವುದಿಲ್ಲ. ಆದರೆ ನಿಮ್ಮ ರಾಶಿಯಲ್ಲೇ ಶನಿ ಇರುವುದು ನಿಮ್ಮ ವೈಯುಕ್ತಿಯ ವರ್ಚಸ್ಸಿಗೆ ಕೀರ್ತಿ ಪ್ರತಿಷ್ಠೆಗಳಿಗೆ ಕೊಂಚ ಧಕ್ಕೆ ತರುತ್ತದೆ. ನಿಮಗೆ ಪರಿಚಿತರೇ ನಿಮ್ಮನ್ನು ಅಪಮಾನಿಸುತ್ತಾರೆ.
ನಿಮ್ಮ ಪ್ರತಿಯೊಂದು ನಡೆಯನ್ನೂ ಜಾಗರೂಕರಾಗಿ ಇಡಿ. ನೀವು ಕೈಗೊಳ್ಳುವ ತೀರ್ಮಾನಗಳು ಜಾಗ್ರತೆಯಿಂದ ಕೂಡಿರಲಿ. ನಿಮ್ಮ ಸಣ್ಣಪುಟ್ಟ ತಪ್ಪುಗಳು ಕೂಡ ನಿಮ್ಮನ್ನು ಅಪಕೀರ್ತಿಯ ಪಾಲಾಗಿಸಬಹುದು. ಹನುಮಾನ್ ಚಾಲೀಸಾ, ದತ್ತಾತ್ರೇಯ ಜಪ ಮಾಡಿ. ನಿಮಗೆ ಈಗ ರಾಹುಬಲವೂ ಇದೆ. ಹಾಗಾಗಿ ಈ ವರ್ಷ ನಿಮಗೆ ಶನಿಯ ಪ್ರಭಾವ ಅಷ್ಟಾಗಿ ಕಾಡಿಸುವುದಿಲ್ಲ. ನಾಲ್ಕನೇ ಮನೆಯಲ್ಲಿ ಕುಜ ಇದ್ದು ನಿಮಗೆ ಭೂಮಿಲಾಭ ಮಾಡಿಸುತ್ತಾನೆ. ವಾಹನ ಖರೀದಿ ಯೋಗ ಇದೆ.
ಹನ್ನೊಂದರ ಶುಕ್ರ ಸೂರ್ಯ ಹಾಗೂ ಬುಧ ನಿಮಗೆ ಧನಲಾಭವನ್ನು ಮಾಡಿಸುತ್ತಾರೆ. ವೃತ್ತಿಯಲ್ಲಿ ಯಶಸ್ಸು ಅಭುವೃದ್ಧಿ ಇದೆ. ಸಾಮಾಜಿಕವಾಇ ಗೌರವ ಮರ್ಯಾದೆ ಸಿಗಲಿದೆ. ಬಂಧುಜನರಲ್ಲಿ ನಿಮ್ಮ ಕೀರ್ತಿ ಹೆಚ್ಚುತ್ತದೆ. ಅರ್ಹರಿಗೆ ವಿವಾಹಯೋಗ ಇದೆ. ಸಂತಾನ ಫಲ ಅಪೇಕ್ಷಿಸುವವರಿಗೂ ಶುಭಸುದ್ದಿ ಇದೆ. ಹಣಕಾಸಿನ ಹರಿವು ಉತ್ತಮವಾಗಿದೆ. ಈ ತಿಂಗಳಿನಲ್ಲಿ ನಿಮಗೆ ಶುಭಫಲಗಳು ಹೆಚ್ಚು ಸಿಗಲಿದೆ. ವಿದ್ಯಾರ್ಥಿಗಳಿಗೆ ಲಾಭ ಇದೆ. ವಿದೇಶಪ್ರಯಾಣ ಯೋಗ, ಪ್ರವಾಸ ಮುಂತಾದ ಶುಭಫಲಗನ್ನು ಅನುಭವಿಸುತ್ತೀರಿ.

ಮೀನ ರಾಶಿ
ಈಗ ನಿಮಗೆ ಸಾಡೆಸಾತಿ ಶನಿಯ ಪ್ರಾರಂಭ. ಈಗಾಗಲೇ ಅದರ ಮುನ್ಸೂಚನೆ ಪಡೆಯುತ್ತಿರುತ್ತೀರಿ. ಯಾವ ಕೆಲಸಗಳಲ್ಲೂ ಪ್ರಗತಿ ಇಲ್ಲ. ಎಲ್ಲವೂ ನಿಧಾನ. ನಿಮಗೇ ಅರಿವಿಲ್ಲದಂತೆ ಅಡಚಣೆ ಅಡೆತಡೆಗಳು ಬರುತ್ತದೆ. ವೃತ್ತಿಯಲ್ಲಿ ಅಸಮಾಧಾನ ಇರುತ್ತದೆ. ನಿಮಗೆ ಬೇಡದ ಜಾಗಕ್ಕೆ ವರ್ಗಾವಣೆ ಸಾಧ್ಯತೆ ಇದೆ. ಮನೆಯಿಂದ ದೂರ ಇರಬೇಕಾಗಬಹುದು. ಕುಟುಂಬ ಸೌಖ್ಯಕ್ಕೆ ಧಕ್ಕೆ ಬರಬಹುದು. ಚರ್ಮದ ಅಲರ್ಜಿ ಕಾಣಿಸಬಹುದು. ಆರೋಗ್ಯದಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ಅದು ಈಗ ಮತ್ತೆ ಮೇಲೆದ್ದು ನಿಲ್ಲಬಹುದು.
ನೀವು ಈಗ ತಾಳ್ಮೆಯನ್ನೆ ಆಶ್ರಯಿಸಬೇಕು. ನೀವು ಎಷ್ಟು ಸಮಾಧಾನದಿಂದ ಇರುತ್ತೀರೋ ಅಷ್ಟು ಒಳ್ಳೆಯದು. ನಿಮ್ಮ ಸಹನೆ ಪರೀಕ್ಷೆಯಾಗುವ ಸಮಯ. ಹಣಕಾಸಿನ ಮುಗ್ಗಟ್ಟು ಕೂಟ ಕಾಡಲಿದೆ. ಸಾಲ ಆಗುವ ಸಂಭವ ಇದೆ. ಮೂರರ ಕುಜ ಈಗ ನಿಮಗೆ ಸಧ್ಯಕ್ಕೆ ಆಸರೆ. ಹತ್ತರ ಶುಕ್ರ ಹಾಗೂ ಬುಧ ನಿಮಗೆ ರಕ್ಷಣೆ ತಕ್ಕಮಟ್ಟಿಗೆ ಕೊಡುತ್ತಾರೆ. ಸೂರ್ಯ ಮಕರ ರಾಶಿಗೆ ಪ್ರವೇಶವಾದಾಗ ನಿಮಗೆ ಸ್ವಲ್ಪ ಲಾಭ ಕಾಣುತ್ತದೆ.
ಏಪ್ರಿಲ್ ನಂತರ ಗುರುಬಲ ಬರುವುದರಿಂದ ಆ ನಂತರದ ದಿನಗಳು ಕೊಂಚ ಉತ್ತಮವಾಗಿ ಇರುತ್ತದೆ. ಎಂಟರ ಕೇತು ಗಾಯಗಳನ್ನು ಮಾಡಿಸುತ್ತಾನೆ. ಚೂಪಾದ ವಸ್ತುಗಳು, ಆಯುಧಗಳು ಇವುಗಳಿಂದ ದೂರವಿರಿ. ನಿಮಗೇ ಗೊತ್ತಿಲ್ಲದೆ ಹಣಕಾಸಿನ ಖರ್ಚು ಧುತ್ತನೆ ಎದ್ದು ನಿಲ್ಲುತ್ತದೆ. ವಿದ್ಯಾರ್ಥಿಗಳಿಗೆ ಕೊಂಚ ಸೋಮಾರಿತನ ಆವರಿಸುತ್ತದೆ. ಮರೆವು ಕೂಡಾ ಕಾಣಿಸಬಹುದು. ಓದಿದ್ದು ನೆನಪಿನಲ್ಲಿ ಒಳಿಯದೆ ಗೊಂದಲವಾಗುತ್ತದೆ. ನೀವು ಹನುಮಾನ್ ಚಾಲೀಸಾ ತಪ್ಪದೆ ಪ್ರತಿದಿನ ಪಠಿಸಬೇಕು. ದುರ್ಗಾಸ್ತೋತ್ರ ಹೇಳಿಕೊಳ್ಳಬೇಕು. ಹನುಮಾನ್ ಗುಡಿಗೆ ಆಗಾಗ ಭೇಟಿ ಮಾಡಿ. ಕಪ್ಪು ಹಸುವಿಗೆ ಗೋಗ್ರಾಸ ಕೊಡಿ.












Click it and Unblock the Notifications