AI: ಡಿಕೆ ಶಿವಕುಮಾರ್ ಸಿಎಂ ಸಿದ್ದರಾಮಯ್ಯರನ್ನ ಚೇರ್‌ನಿಂದ ಕೆಡವಿದಂತೆ ವಿಡಿಯೋ ಕ್ರಿಯೆಟ್: ದೂರು ದಾಖಲು
Artificial Intelligence: ಇದೀಗ ಯಾವ ಕ್ಷೇತ್ರದಲ್ಲಿ ನೋಡಿದರೂ ಎಐನದ್ದೇ ಸದ್ದು ಜೋರಾಗಿದೆ. ಇದು ಎಷ್ಟು ಉಪಯುಕ್ತ ಇದೆಯೋ ಅಷ್ಟೇ ದುರ್ಬಳಕೆ ಮಾಡಿಕೊಳ್ಳುವವರಿದ್ದಾರೆ. ಈಗಾಗಲೇ ಎಐ ಬಳಕೆ ಮಾಡಿಕೊಂಡು ಮಾನಹಾನಿ ವಿಡಿಯೋಗಳನ್ನು ಕ್ರಿಯೆಟ್ ಮಾಡಿರುವ ಉದಾಹರಣೆಗಳಿವೆ. ಇದೀಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಚೇರಿನಿಂದ ಕೆಳಗೆ ದೂಡುವಂತಹ ವಿಡಿಯೋವೊಂದು ವೈರಲ್ ಆಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
ಈಗಾಗಲೇ ಎಐ ಬಳಕೆ ಮಾಡಿಕೊಂಡು ಹಲವು ನಟ, ನಟಿಯರು, ರಾಜಕಾರಣಿಗಳ ಮಾನಹಾನಿ ಮಾಡುವಂತಹ ವಿಡಿಯೋಗಳನ್ನು ಕ್ರಿಯೆಟ್ ಮಾಡಿರುವ ಉದಾರಣೆಗಳಿಗೆ. ಮಾನಹಾನಿ ವಿಡಿಯೋ ಕ್ರಿಯೆಟ್ ಮಾಡುವಂತಹವರ ವಿರುದ್ಧ ಪೊಲೀಸರು ಸಮರ ಸಾರುತ್ತಲಿರುತ್ತಾರೆ. ಆದರೂ ಕೆಲವರು ತಾವು ಆಡಿದ್ದೇ ಆಟ ಎನ್ನುವಂತೆ ಇದೇ ಹಾದಿಯನ್ನು ಮುಂದುವರೆಸಿದ್ದಾರೆ.

ಹಾಗೆಯೇ ಇದೀಗ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಚೇರ್‌ನಿಂದ ಕೆಡವಿದಂತೆ ವಿಡಿಯೋ ಕ್ರಿಯೆಟ್ ಮಾಡಲಾಗಿದೆ. ಈ ಎಐ ವಿಡಿಯೋ ಇದೀಗ ಎಲ್ಲಡೆ ಭಾರೀ ವೈರಲ್ ಆಗಿದ್ದು, ಡಿಕೆ ಶಿವಕುಮಾರ್ ಅವರ ವಿರುದ್ಧ ಆಕ್ರೋಶಗಳು ಭುಗಿಲೆದ್ದವು. ಆದರೆ, ಇದು ಎಐನಿಂದ ಮಾಡಿದ ವಿಡಿಯೋ ಎಂದು ಗೊತ್ತಾದ ಕೂಡಲೇ ಕಿಡಿಗೇಡಿಗಳ ವಿರುದ್ಧ ನೆಟ್ಟಿಗರು ಕೆಂಡಕಾರಿದ್ದಾರೆ. ಅಷ್ಟೇ ಸಾಲದೆಂಬಂತೆ ಈ ಕುರಿತು ಪ್ರಕರಣ ಕೂಡ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಚೇರ್‌ನಿಂದ ಕೆಳಗೆ ಕೆಡವುತ್ತಿರುವಂತೆ ತೋರಿಸುವ ಎಐ ನಿರ್ಮಿತ ವಿಡಿಯೋ ಪೋಸ್ಟ್ ಸಂಬಂಧ "ಕನ್ನಡ ಚಿತ್ರರಂಗ" ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯ ಬಳಕೆದಾರರ ವಿರುದ್ಧ ಪ್ರಕರಣ ದಾಖಲಾಗಿದೆ. ಗಲಭೆ ಪ್ರಚೋದನೆ, ನಕಲಿ ದಾಖಲೆ ಸೃಷ್ಟಿ ಮತ್ತು ಸಾರ್ವಜನಿಕ ಅಶಾಂತಿ ಉಂಟುಮಾಡಿದ ಆರೋಪ ಹಿನ್ನಲೆ ವಕೀಲ ದೀಪು ಸಿ.ಆರ್ ಎಂಬುವವರು ನೀಡಿದ ದೂರಿನ ಮೇರೆಗೆ ಸದಾಶಿವನಗರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಸಭೆಯೊಂದರಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕುಳಿತುಕೊಂಡಿದ್ದಾರೆ. ಈ ವೇಳೆ ಡಿಸಿಎಂ ಡಿಕೆಶಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ದೂಡುತ್ತಾರೆ. ಆಗ ಸಿದ್ದರಾಮಯ್ಯ ಅವರು ಕುರ್ಚಿಯಿಂದ ಕೆಳಗಡೆ ಬೀಳುತ್ತಿರುವಂತಹ ದೃಶ್ಯವನ್ನು ಈ ಎಐ ವಿಡಿಯೋದಲ್ಲಿ ತೋರಿಸಲಾಗಿದೆ. ಬಳಿಕ ಡಿ.ಕೆ.ಶಿವಕುಮಾರ್ ಅವರು ಇಂತಹ ಕೆಲಸ ಮಾಡಬಾರದಾಗಿತ್ತು ಎಂಬ ಶೀರ್ಷಿಕೆಯನ್ನೂ ವಿಡಿಯೋದಲ್ಲಿ ಹಾಕಲಾಗಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.
ಇನ್ನೂ ಕಿಡಿಗೇಡಿಗಳು ಈ ವಿಡಿಯೋ ಮೂಲಕ ಡಿಕೆಶಿ ಅವರ ವ್ಯಕ್ತಿತ್ವವನ್ನು ಹಾನಿಗೊಳಿಸುವ ಉದ್ದೇಶವನ್ನು ಹೊಂದಿದ್ದಾರೆ ಎಂಬುದು ತಿಳಿದುಬಂದಿದೆ. ಸಮಾಜದಲ್ಲಿ ಇಂತಹ ಸುಳ್ಳು ಮಾಹಿತಿ ಹರಡುವ ಮೂಲಕ ಸಿಎಂ ಮತ್ತು ಡಿಸಿಎಂ ಅವರ ಗೌರವವನ್ನು ಕುಗ್ಗಿಸಲಾಗಿದೆ.
ಅಲ್ಲದೆ, ಸರ್ಕಾರವನ್ನು ಅವಮಾನಗೊಳಿಸಲೆಂದೇ ಈ ವಿಡಿಯೋವನ್ನು ಕ್ರಿಯೆಟ್ ಮಾಡಲಾಗಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ ಇದೆ ಎಂದು ದೂರುದಾರು ಆರೋಪ ಮಾಡಿದ್ದಾರೆ. ಈ ಹಿನ್ನಲೆ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 192, 336(4) ಮತ್ತು 353(2) ಅಡಿಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ ಇನ್‌ಸ್ಟಾಗ್ರಾಮ್ ಖಾತೆಯ ಬಳಕೆದಾರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ. ಸದ್ಯ ಇದೀಗ ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಈ ವೇಳೆಯೇ ಇಂತಹ ಕಿಡಿಗೇಡಿಗಳು ಕ್ರಿಯೆಟ್ ಮಾಡಿದ ಎಐ ನಿರ್ಮಿತ ಮಾನಹಾನಿಕರ ವಿಡಿಯೋ ಭಾರೀ ವಿವಾದ ಹುಟ್ಟುಹಾಕಿದೆ. ಮತ್ತೊಂದೆಡೆ ಈ ವಿಡಿಯೋ ಕ್ರಿಯೆಟ್ ಮಾಡಿರುವವರ ಹುಡುಕಾಟದಲ್ಲಿ ಪೊಲೀಸರು ಕಾರ್ಯನಿರತರಾಗಿದ್ದಾರೆ ಎನ್ನಲಾಗಿದೆ.












Click it and Unblock the Notifications