ಐಸಿಸಿ ಮಹಿಳಾ ಟಿ20 ವಿಶ್ವಕಪ್: ಭಾರತ ತಂಡದಲ್ಲಿ ಸ್ಥಾನ ಪಡೆದ ಕನ್ನಡತಿ, RCB ಟಗರುಪುಟ್ಟಿ ಶ್ರೇಯಾಂಕಾ ಪಾಟೀಲ್
Women T20 Wold Cup 2026: 2026ರ ಮಹಿಳಾ ಟಿ20 ವಿಶ್ವಕಪ್‌ಗೆ ಭಾರತ ಬಲಿಷ್ಠ ತಂಡವನ್ನು ಪ್ರಕಟ ಮಾಡಲಾಗಿದೆ. 15 ಆಟಗಾರ್ತಿಯರ ಪಟ್ಟಿಯಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸಹ ಸ್ಥಾನ ಪಡೆದಿದ್ದಾರೆ. ಹಾಗಾದ್ರೆ ಇನ್ನೂಯಾರೆಲ್ಲಾ ಇದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹರ್ಮನ್‌ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದು, ಕರ್ನಾಟಕದ ಭರವಸೆಯ ಆಟಗಾರ್ತಿ ಶ್ರೇಯಾಂಕ ಪಾಟೀಲ್ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ್ದಾರೆ. ಸ್ಮೃತಿ ಮಂಧಾನ ಉಪನಾಯಕಿಯಾಗಿ ಆಯ್ಕೆಯಾಗಿದ್ದು, ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ಅವರಂತಹ ಪ್ರಮುಖ ಆಟಗಾರ್ತಿಯರು ತಂಡದಲ್ಲಿದ್ದಾರೆ. ಆದರೆ ಗಾಯದ ಸಮಸ್ಯೆಯಿಂದಾಗಿ ಸ್ಟಾರ್ ಆಟಗಾರ್ತಿಯರಾದ ಅಮಂಜೋತ್ ಕೌರ್ ಮತ್ತು ಕಾಶ್ವೀ ಗೌತಮ್ ವಿಶ್ವಕಪ್‌ನಿಂದ ಹೊರಗುಳಿದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಮಹಿಳಾ ಟಿ20 ವಿಶ್ವಕಪ್ 2026 ತಂಡ ಪ್ರಕಟ
ಮುಂಬೈನಲ್ಲಿ ಅಮಿತಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಶನಿವಾರ (ಮೇ 2) ನಡೆದ ಆಯ್ಕೆ ಸಮಿತಿ ಸಭೆಯ ನಂತರ 2026ರ ಮಹಿಳಾ ಟಿ20 ವಿಶ್ವಕಪ್‌ಗಾಗಿ ಭಾರತ ತನ್ನ ತಂಡವನ್ನು ಪ್ರಕಟಿಸಿದೆ. ಈ ಸಭೆಯಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಭಾಗವಹಿಸಿದ್ದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಟೀಂ ಇಂಡಿಯಾ ನಾಯಕಿ ಮತ್ತು ಮುಖ್ಯ ಆಯ್ಕೆಗಾರ್ತಿ ಮಾತನಾಡಿದರು. ತಂಡಕ್ಕೆ ಎರಡು ದೊಡ್ಡ ಆಘಾತಗಳು ಎದುರಾಗಿದ್ದು, ಗಾಯದ ಸಮಸ್ಯೆಯಿಂದಾಗಿ ಅಮಂಜೋತ್ ಕೌರ್ ಮತ್ತು ಕಾಶ್ವೀ ಗೌತಮ್ ತಂಡದಿಂದ ಹೊರಬಿದ್ದಿದ್ದಾರೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡರು.
ಟೀಂ ಇಂಡಿಯಾ 'ವೇಗಕ್ಕೆ' ಗಾಯದ ಪೆಟ್ಟು
ಫಿಟ್‌ನೆಸ್ ಸಮಸ್ಯೆಯಿಂದಾಗಿ ಪೂಜಾ ವಸ್ತ್ರಾಕರ್ ಕೂಡ ಅಲಭ್ಯರಾಗಿದ್ದಾರೆ. ಜೊತೆಗೆ ತಂಡದಲ್ಲಿ ಒಬ್ಬೇ ಒಬ್ಬ ವೇಗದ ಬೌಲಿಂಗ್ ಆಲ್ ರೌಂಡರ್ ಇಲ್ಲದಂತಾಗಿದೆ. ಈ ಬಾರಿಯ ವಿಶ್ವಕಪ್ ಇಂಗ್ಲೆಂಡ್‌ನಲ್ಲಿ ನಡೆಯಲಿರುವುದರಿಂದ, ವೇಗಿಗಳ ಕೊರತೆಯು ತಂಡಕ್ಕೆ ದೊಡ್ಡ ಹೊಡೆತ ನೀಡಲಿದೆ. ಇದರಿಂದಾಗಿ ಪಂದ್ಯದ ಅಂತಿಮ ಆಡುವ 11ರ ಬಳಗವನ್ನು ಆಯ್ಕೆ ಮಾಡುವಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಮುಖ್ಯ ಕೋಚ್ ಅಮೋಲ್ ಮಜುಂದಾರ್ ಅವರಿಗೆ ದೊಡ್ಡ ಸವಾಲಾಗಿದೆ.
ತಂಡದಲ್ಲಿದೆ ಆಲ್ ರೌಂಡರ್‌ಗಳ ದಂಡು
ತಂಡದಲ್ಲಿ ಸ್ಪಿನ್ ಬೌಲಿಂಗ್ ಆಲ್ ರೌಂಡರ್‌ಗಳ ದಂಡೇ ಇದೆ. ತಂಡದ ಸಮತೋಲನ ಮತ್ತು ಬ್ಯಾಟಿಂಗ್ ಬಲವನ್ನು ಹೆಚ್ಚಿಸಲು ದೀಪ್ತಿ ಶರ್ಮಾ ಮತ್ತು ರಾಧಾ ಯಾದವ್ ಇಬ್ಬರನ್ನೂ ಆಡುವ 11ರ ಬಳಗದಲ್ಲಿ ಸೇರಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇಂಗ್ಲೆಂಡ್‌ನ ಪರಿಸ್ಥಿತಿಗೆ ಅನುಗುಣವಾಗಿ ಮೂವರು ವೇಗಿಗಳ ಅಗತ್ಯವಿರುವುದರಿಂದ ಕಳೆದ ವಿಶ್ವಕಪ್ ಗೆಲುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೂ ಶ್ರೀ ಚರಣಿ ಆರಂಭಿಕ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ.
ಕಳೆದ ವರ್ಷದ ಐತಿಹಾಸಿಕ ಜಯದ ಸಂದರ್ಭದಲ್ಲಿ ಒಂದು ಪಂದ್ಯವನ್ನೂ ಆಡದ ಅರುಂಧತಿ ರೆಡ್ಡಿ ಅವರಿಗೆ ಈ ಬಾರಿ ಅವಕಾಶ ಸಿಗಬಹುದು. ಚರಣಿ ಮತ್ತು ರೆಡ್ಡಿ ನಡುವಿನ ಆಯ್ಕೆಯು ಅಂದಿನ ಪಿಚ್ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಇನ್ನು ತಂಡದ ಪ್ರಮುಖ ವೇಗಿಗಳಾಗಿ ರೇಣುಕಾ ಸಿಂಗ್ ಠಾಕೂರ್ ಮತ್ತು ಕ್ರಾಂತಿ ಗೌಡ್ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಆದರೆ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಅನ್‌ಕ್ಯಾಪ್ಡ್ ವೇಗಿ ನಂದಿನಿ ಶರ್ಮಾ ತಮ್ಮ ಮೊದಲ ಅವಕಾಶಕ್ಕಾಗಿ ಸದ್ಯಕ್ಕೆ ಕಾಯಬೇಕಾಗಬಹುದು.
ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಟೀಂ ಇಂಡಿಯಾ
ಬ್ಯಾಟಿಂಗ್ ವಿಭಾಗದಲ್ಲಿ ತಂಡವು ಬಲಿಷ್ಠವಾಗಿದೆ. ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಇನಿಂಗ್ಸ್ ಆರಂಭಿಸುವುದು ಖಚಿತವಾಗಿದ್ದು, ಅವರ ನಂತರ ಜೆಮಿಮಾ ರೋಡ್ರಿಗಸ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಕಣಕ್ಕಿಳಿಯಲಿದ್ದಾರೆ. ಇನ್ನು ಫಿನಿಶರ್ ಪಾತ್ರದಲ್ಲಿ ರಿಚಾ ಘೋಷ್ ಅವರಿಗೆ ಭಾರತಿ ಫುಲ್ಮಾಲಿ ಸಾಥ್ ನೀಡಲಿದ್ದಾರೆ. ಇನ್ನೂ ತಂಡದಲ್ಲಿ ಕೇವಲ ಐವರು ಪರಿಣಿತ ಬೌಲರ್‌ಗಳು ಮಾತ್ರ ಇರಲಿದ್ದಾರೆ. ಇವರನ್ನು ಹೊರತುಪಡಿಸಿದರೆ ಶಫಾಲಿ ಮತ್ತು ಹರ್ಮನ್‌ಪ್ರೀತ್ ಅವರು ಅಗತ್ಯವಿದ್ದರೆ ಸ್ಪಿನ್ ಬೌಲಿಂಗ್ ಮಾಡಲು ಪರ್ಯಾಯ ಆಯ್ಕೆಯಾಗಿದ್ದಾರೆ.
ಭಾರತ ತಂಡವು ಜೂನ್ 14 ರಂದು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಎಡ್ಜ್‌ಬಾಸ್ಟನ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅಖಾಡಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ನಂತರ ನೆದರ್ಲ್ಯಾಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಎದುರಿಸಲಿದೆ.
ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸೆಣಸುವ ಮೊದಲು ಭಾರತ ತಂಡವು ಮೇ 28ರಿಂದ ಜೂನ್ 2 ರವರೆಗೆ ಇಂಗ್ಲೆಂಡ್ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಜೊತೆಗೆ ಕೆಲವು ಅಭ್ಯಾಸ ಪಂದ್ಯಗಳನ್ನೂ ಆಡಲಿದೆ. ತಂಡದ ಎಲ್ಲಾ ಸಂಭಾವ್ಯ ಆಟಗಾರ್ತಿಯರ ಪ್ರದರ್ಶನವನ್ನು ಪರೀಕ್ಷಿಸಲು ಇದು ಉತ್ತಮ ಅವಕಾಶ. ಆ ಪಂದ್ಯಗಳಲ್ಲಿ ಅವರ ಪ್ರದರ್ಶನ ಮತ್ತು ಫಾರ್ಮ್ ಆಧರಿಸಿ ಪಾಕಿಸ್ತಾನದ ವಿರುದ್ಧದ ಮಹತ್ವದ ಪಂದ್ಯಕ್ಕೆ ಆಡುವ 11ರ ಬಳಗವನ್ನು ಆಯ್ಕೆ ಮಾಡಲಾಗುತ್ತದೆ.
ಟಿ20 ವಿಶ್ವಕಪ್ 2026 ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್, ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್, ನಂದಿನಿ ಶರ್ಮಾ.
ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ಶ್ರೀ ಚರಣಿ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಕ್ರಾಂತಿ ಗೌಡ್.












Click it and Unblock the Notifications