KKR Vs SRH: ಕಾವ್ಯಾ ಮಾರನ್ ಮಾಲೀಕತ್ವದ ಎಸ್‌ಆರ್‌ಎಚ್ ವಿರುದ್ಧ ಕೆಕೆಆರ್ ಭರ್ಜರಿ ಗೆಲುವು: ಟ್ರಾವಿಸ್ ಹೆಡ್ ಹೋರಾಟ ವ್ಯರ್ಥ
KKR Vs SRH IPL 2026: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ (ಮೇ 3) ನಡೆದ ಐಪಿಎಲ್ ಪಂದ್ಯದಲ್ಲಿ ಅಂಗ್‌ಕ್ರಿಶ್ ರಘುವಂಶಿ ಅವರ ಅರ್ಧಶತಕದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. 19 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ಎಸ್‌ಆರ್‌ಎಚ್ 165 ರನ್‌ಗಳನ್ನಷ್ಟೇ ಪೇರಿಸಿತು. 166 ರನ್‌ಗಳ ಗುರಿ ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ 18.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಭರ್ಜರಿ ಗೆಲುವು ಕಂಡಿತು.

ಅಂಗ್‌ಕ್ರಿಶ್ ರಘುವಂಶಿ ಭರ್ಜರಿ ಅರ್ಧಶತಕ
ಅಂಗ್‌ಕ್ರಿಶ್ ರಘುವಂಶಿ ಕೇವಲ 47 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 59 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರ. ಫಿನ್ ಅಲೆನ್ ಕೂಡ 29 ರನ್‌ಗಳ ಕೊಡುಗೆ ನೀಡಿದರೆ, ನಾಯಕ ಅಜಿಂಕ್ಯ ರಹಾನೆ ಜವಾಬ್ದಾರಿಯುತ ಆಟ ಆಡಿ 36 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸ್ ಸಹಿತ 43 ರನ್ ಗಳಿಸಿದರು. ಕೊನೆಗೆ ರಿಂಕು ಸಿಂಗ್ ಅಜೇಯ 22 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ತಮ್ಮ ಓವರ್‌ನ ಮೊದಲ ಐದು ಎಸೆತಗಳಲ್ಲಿ 27 ರನ್ ಬಿಟ್ಟುಕೊಟ್ಟರು. ಆದರೂ ಕೊನೆಯ ಎಸೆತದಲ್ಲಿ ಫಿನ್ ಅಲೆನ್ (29) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಉಳಿದಂತೆ ಶಿವಾಂಗ್ ಕುಮಾರ್ ಹಾಗೂ ಸಾಕಿಬ್ ಹುಸೇನ್ ತಲಾ ಒಂದು ವಿಕೆಟ್ ಪಡೆದರು. ಇಲ್ಲಿ ದುಬಾರಿಯಾಗಿದ್ದೇ ಇಶಾನ್ ಮಾಲಿಂಗ ಹಾಗೂ ನಾಯಕ ಪ್ಯಾಟ್ ಕಮಿನ್ಸ್.
ಎಸ್‌ಆರ್‌ಎಚ್ ಪರ ಮಿಂಚಿದ ಟ್ರಾವಿಸ್ ಹೆಡ್
ಇದಕ್ಕೂ ಮೊದಲು ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ ಕೇವಲ 28 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 61 ರನ್‌ಗಳನ್ನು ಕಲೆಹಾಕಿದರು. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್‌ಗಳ ಮಾರಕ ಬೌಲಿಂಗ್ ದಾಳಿಯಿಂದ ಹೈದರಾಬಾದ್ ತಂಡವನ್ನು ಕೇವಲ 165 ರನ್‌ಗಳಿಗೆ ನಿಯಂತ್ರಿಸಿದರು.
ಉಳಿದಂತೆ ಎಸ್‌ಆರ್‌ಎಚ್ ಪರ ಇಶಾನ್ ಕಿಶನ್ 42(29), ಅಭಿಷೇಕ್ ಶರ್ಮಾ 15(10), ಹೆನ್ರಿಚ್ ಕ್ಲಾಸೆನ್ 11(8), ನಾಯಕ ಪ್ಯಾಟ್ ಕಮಿನ್ಸ್ 10(8) ರನ್ ಗಳಿಸಿದ್ದು ಬಿಟ್ಟರೆ, ಮತ್ಯಾರು ಕೂಡ ಒಂದಂಕಿ ದಾಡದೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆ ನಡೆದರು. ಅಷ್ಟರ ಮಟ್ಟಿಗೆ ಕೆಕೆಆರ್ ಬೌಲರ್‌ಗಳು ಮಾರಕ ಬೌಲಿಂಗ್ ದಾಳಿ ನಡೆಸಿದರು.
ಕೆಕೆಆರ್‌ನಿಂದ ಉತ್ತಮ ಬೌಲಿಂಗ್ ಪ್ರದರ್ಶನ
ಕೆಕೆಆರ್ ಪರ ವರುಣ್ ಚಕ್ರವರ್ತಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ 3 ವಿಕೆಟ್ ಪಡೆದರು. 16ನೇ ಓವರ್‌ನಲ್ಲಿ ಸುನಿಲ್ ನರೈನ್ ಸಲಿಲ್ ಅರೋರಾ (2) ಮತ್ತು ಇಶಾನ್ ಕಿಶನ್ (42) ವಿಕೆಟ್ ಪಡೆಯುವ ಮೂಲಕ ಐಪಿಎಲ್‌ನಲ್ಲಿ ತಮ್ಮ ವಿಕೆಟ್ ಸಂಖ್ಯೆಯನ್ನು 201ಕ್ಕೆ ಏರಿಸಿಕೊಂಡರು. ಅನುಕುಲ್ ರಾಯ್ 17ನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ (10) ವಿಕೆಟ್ ಪಡೆದರೆ, 19ನೇ ಓವರ್‌ನಲ್ಲಿ ವೈಭವ್ ಅರೋರಾ ಶಿವಂಗ್ ಕುಮಾರ್ (1) ವಿಕೆಟ್ ಉರುಳಿಸಿದರು. ಒಟ್ಟಿನಲ್ಲಿ ಹೇಳುವುದಾದರೆ, ಕೊಲ್ಕತ್ತಾ ನೈಟ್ ರೈಡರ್ಸ್ ಉತ್ತಮ ಬೌಲಿಂಗ್ ಪ್ರದರ್ಶನ ಮತ್ತು ರಘುವಂಶಿ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಸುಲಭ ಜಯ ಸಾಧಿಸಿತು.












Click it and Unblock the Notifications