ರಾಜೀನಾಮೆ ನೀಡಲು ಮುಂದಾಗಿದ್ದ ಸಚಿವ ಸುರೇಶ್ ಕುಮಾರ್
ಚಾಮರಾಜನಗರ, ಮೇ 06; ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಕೊರೊನಾ ಸೋಂಕಿತರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ರಾಜೀನಾಮೆ ನೀಡಲು ಮುಂದಾಗಿದ್ದ ವಿಷಯ ತಡವಾಗಿ ಬಹಿರಂಗವಾಗಿದೆ.
ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ದುರಂತದಲ್ಲಿ 24 ಜನರು ಮೃತಪಟ್ಟ ಕುರಿತು ತುಂಬಾ ಮನನೊಂದಿದ್ದರು. ವಿಧಾನಸೌಧದಲ್ಲಿ ಬುಧವಾರ ನಡೆದ ವಿಶೇಷ ಸಂಪುಟ ಸಭೆಗೆ ರಾಜೀನಾಮೆ ಪತ್ರ ಹಿಡಿದುಕೊಂಡು ಬಂದಿದ್ದರು ಎಂದು ತಿಳಿದುಬಂದಿದೆ.
ದುರಂತ ನಡೆಯಲು ಉಸ್ತುವಾರಿ ಮಂತ್ರಿಗಳ ನಿರ್ಲಕ್ಷ್ಯವೂ ಕಾರಣ ಎಂಬ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಅವರು ತುಂಬಾ ಬೇಸರಗೊಂಡಿದ್ದರು. ಇದರಿಂದಾಗಿ ತಮ್ಮ ವಿರುದ್ದ ಕೇಳಿ ಬಂದಿರುವ ಟೀಕೆಗಳಿಂದ ಹೊರಬರಲು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಮುಂದಾಗಿದ್ದರು.

ಆದರೆ ಈ ವಿಷಯ ತಿಳಿದುಕೊಂಡ ಸಣ್ಣ ನೀರಾವರಿ ಸಚಿವ ಜೆ. ಸಿ. ಮಾಧುಸ್ವಾಮಿ ರಾಜೀನಾಮೆ ಪತ್ರವನ್ನು ಓದಲು ಪಡೆದುಕೊಂಡು ಹರಿದು ಹಾಕಿದರು ಎಂದು ತಿಳಿದು ಬಂದಿದೆ. ಚಾಮರಾಜನಗರ ಜಿಲ್ಲೆಗೆ ಉಸ್ತುವಾರಿಯಾದ ನಂತರ 62 ಬಾರಿ ಹೋಗಿದ್ದೇನೆ. ಅಲ್ಲಿ ಸಭೆಗಳನ್ನು ನಡೆಸಿದ್ದೇನೆ. ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಹೆಚ್ಚಿನ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿತ್ತು.
ಘಟನೆ ಬಳಿಕ ಕೇಳಿ ಬಂದ ಆರೋಪಗಳು ತುಂಬಾ ಬೇಸರ ತಂದಿದೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದರು. ಸುರೇಶ್ ಕುಮಾರ್ ನಿರ್ಧಾರವನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೂಡ ತಿರಸ್ಕರಿಸಿದ್ದು, ಇಂತಹ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದು ಮನವೊಲಿಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಸಚಿವ ಮಾಧುಸ್ವಾಮಿ ಅವರ ಮನವೊಲಿಸಿ ಸುರೇಶ್ ಕುಮಾರ್ ಸಮಾಧಾನಪಡಿಸಿದರು.












Click it and Unblock the Notifications