''ಸಿದ್ದರಾಮಯ್ಯ ತವರು ಜಿಲ್ಲೆಯ ಆಸ್ಪತ್ರೆಯಲ್ಲಿ ನೂರಾರು ಶಿಶುಗಳ ಸಾವು: 'ಕೈ' ಆಡಳಿತಕ್ಕಿದು ಕನ್ನಡಿ''
ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಆಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿಕೊಂಡು ಬರುತ್ತಿದೆ. ರಾಜ್ಯದ ಅಭಿವೃದ್ಧಿಗೆ ಬದ್ಧವೆಂದು ಸಿದ್ದರಾಮಯ್ಯನವರು ಹೇಳುತ್ತಲೇ ಇದ್ದಾರೆ. ಹೀಗಿದ್ದರೂ ಅವರ ತವರು ಜಿಲ್ಲೆಯಲ್ಲಿ ಹೆರಿಗೆಗೆ ಸಾಕಷ್ಟು ಸಮಸ್ಯೆ ಅಗಿದೆ, ನೂರಾರು ಶಿಶುಗಳು, ತಾಯಂದಿರ ಸಾವು ಇದೀಗ ಹೆಚ್ಚು ಚರ್ಚೆ ಆಗುತ್ತಿದೆ. ಇದೇ ವಿಚಾರ ಇಟ್ಟುಕೊಂಡು ವಿಪಕ್ಷ ನಾಯಕ ಆರ್.ಅಶೋಕ್ ಅವರು "ಎಕ್ಸ್' ಮಾಡಿ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಕಾಲೆಳೆದಿದ್ದಾರೆ. ಸರ್ಕಾರದ ಆಡಳಿತವನ್ನು ಕಟುವಾಗಿ ಟೀಕಿಸಿದ್ದಾರೆ.
'ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ತವರು ಜಿಲ್ಲೆಯಲ್ಲೇ ನವಜಾತ ಶಿಶುಗಳ ಮಾರಣಹೋಮ ನಡೀತಿದ್ದರೂ ನಿಮಗೆ ಕಾಣುತ್ತಿಲ್ಲವೇ? ಮೈಸೂರಿನ ಐತಿಹಾಸಿಕ ಚೆಲುವಾಂಬ ಆಸ್ಪತ್ರೆಯಲ್ಲಿ ಕೇವಲ 15 ತಿಂಗಳಲ್ಲಿ 421 ಶಿಶುಗಳು ಮತ್ತು 12 ತಾಯಂದಿರು ಸಾವನ್ನಪ್ಪಿರುವುದು ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಂತಿದೆ ಎಂದು ದೂರಿದರು.

ಆಸ್ಪತ್ರೆ ಸ್ಮಶಾನವಾಗಿ ಮಾರ್ಪಡುತ್ತಿದೆ!
ಮೈಸೂರು ಮಹಾರಾಜರು ಕಟ್ಟಿಸಿದ ಪವಿತ್ರ ಆಸ್ಪತ್ರೆ ಇಂದು ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಬಡ ಕುಟುಂಬಗಳ ಗರ್ಭಿಣಿ ಮಹಿಳೆಯರಿಗೆ, ನವಜಾತ ಶಿಶುಗಳಿಗೆ ಸ್ಮಶಾನವಾಗಿ ಮಾರ್ಪಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮ ಸ್ವಂತ ಜಿಲ್ಲೆಯಲ್ಲೇ ನವಜಾತ ಶಿಶುಗಳು ಹೀಗೆ ಸರಣಿಯಾಗಿ ಪ್ರಾಣ ಬಿಡುತ್ತಿದ್ದರೆ ನಿಮ್ಮ ಅಂತಃಕರಣ ಎಲ್ಲಿ ಸತ್ತು ಹೋಗಿದೆ? ಈ ಸಾವಿನ ಸರಣಿಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ನೇರ ಕಾರಣ ಎಂದರು.
ಆಸ್ಪತ್ರೆ ಅವ್ಯವಸ್ಥೆಯ ಲೆಕ್ಕ ಇಲ್ಲಿದೆ
ಆಸ್ಪತ್ರೆಯಲ್ಲಿ 6 ಜನ ತಜ್ಞ ವೈದ್ಯರಿರಬೇಕಾದ ಜಾಗದಲ್ಲಿ ಕೇವಲ ಒಬ್ಬರೇ ವೈದ್ಯರಿದ್ದಾರೆ. ಹೀಗಾಗಿ ರಾಜ್ಯದ ಆರೋಗ್ಯ ವ್ಯವಸ್ಥೆ ಎಂತಹ ದುಸ್ಥಿತಿಯಲ್ಲಿದೆ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. 96 ನರ್ಸ್‌ಗಳಿರಬೇಕಾದ ಕಡೆ ಕೇವಲ 59 ಮಂದಿ ಇದ್ದಾರೆ.
ಬೆಡ್‌ಗಳ ಕೊರತೆ ಮತ್ತು ಎಸ್‌ಎನ್‌ಸಿಯು (SNCU) ಘಟಕಗಳ ಕೊರತೆಯ ಬಗ್ಗೆ ವೈದ್ಯಾಧಿಕಾರಿಗಳು ಪತ್ರ ಬರೆದರೂ ಸರ್ಕಾರ ಸ್ಪಂದಿಸಿಲ್ಲ. ಬಜೆಟ್‌ನಲ್ಲಿ ಆರೋಗ್ಯಕ್ಕಿಂತ ಭ್ರಷ್ಟಾಚಾರ ಮತ್ತು ಸುಳ್ಳು ಪ್ರಚಾರವೇ ಮುಖ್ಯವಾಗಿದೆಯೇ? ನಿಮ್ಮ ತವರು ಜಿಲ್ಲೆಯಲ್ಲೇ ಸರ್ಕಾರಿ ಆಸ್ಪತ್ರೆಗಳ ಗತಿ ಹೀಗಾದರೆ, ಇನ್ನು ರಾಜ್ಯದ ಉಳಿದ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳ ಗತಿ ಏನಾಗಿದೆ ಎನ್ನುವುದನ್ನು ಊಹಿಸಿಕೊಳ್ಳಲೂ ಭಯವಾಗುತ್ತದೆ?. ಮೈಸೂರಿನಲ್ಲಿ ತಮ್ಮ ಪ್ರತಿಮೆ ತಾವೇ ಉದ್ಘಾಟನೆ ಮಾಡುವುದಕ್ಕೆ, ರಸ್ತೆಗಳಿಗೆ ತಮ್ಮ ಹೆಸರು ಇಟ್ಟುಕೊಳ್ಳುವುದಕ್ಕೆ ಇರುವ ಉತ್ಸಾಹ, ಆಸಕ್ತಿ, ಬಡ ಕುಟುಂಬಗಳ ಮಹಿಳೆಯರು, ಶಿಶುಗಳ ಪ್ರಾಣ ಉಳಿಸುವ ಮೂಲಸೌಕರ್ಯ ಒದಗಿಸುವಲ್ಲಿ ಏಕಿಲ್ಲ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಜಾಹೀರಾತುಗಳಲ್ಲಿ ಗ್ಯಾರೆಂಟಿ ಸರ್ಕಾರ, ನುಡಿದಂತೆ ನಡೆದ ಸರ್ಕಾರ, ಬಡವರ ಪರವಾದ ಸರ್ಕಾರ ಅಂತ ಬಿಂಬಿಸಿಕೊಳ್ಳುವ ನೀವು, ವಾಸ್ತವದಲ್ಲಿ ಸಾವಿನ ಸರಣಿಯಲ್ಲಿ ಕರ್ನಾಟಕವನ್ನು ನಂಬರ್ 1 ಮಾಡುತ್ತಿದ್ದೀರಿ. ಇನ್ನಾದರೂ ಆಡಳಿತ ಯಂತ್ರವನ್ನು ಎಚ್ಚರಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಿ. ಇಲ್ಲದಿದ್ದರೆ ಮಕ್ಕಳನ್ನು ಕಳೆದುಕೊಂಡ ತಾಯಂದಿರ ಶಾಪ ನಿಮ್ಮ ಸರ್ಕಾರವನ್ನು ಸುಟ್ಟು ಭಸ್ಮ ಮಾಡುವುದು ನಿಶ್ಚಿತ ಎಂದು ಎಚ್ಚರಿಸಿದರು.












Click it and Unblock the Notifications