Bengaluru: ನಮ್ಮ ಮೆಟ್ರೋ 73 ಕಿ.ಮೀ ಹೊಸ ಮಾರ್ಗಕ್ಕೆ ಸಿದ್ಧತೆ: ಸರ್ಜಾಪುರ, ಆನೇಕಲ್ ಸ್ಟೇಡಿಯಂಗೆ ಮೆಟ್ರೋ ಸಂಪರ್ಕ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಡಲಾಗಿದೆ. ಬೆಂಗಳೂರಿನ ಅತಿ ಉದ್ದದ ಸಿಂಗಲ್ ಮೆಟ್ರೋ ಕಾರಿಡಾರ್ ನಿರ್ಮಾಣಕ್ಕಾಗಿ ಬಿಎಂಆರ್‌ಸಿಎಲ್ (BMRCL) ಕಾರ್ಯಸಾಧ್ಯತಾ ವರದಿಯನ್ನು ಪೂರ್ಣಗೊಳಿಸಿದೆ. ದಕ್ಷಿಣದ ಕಾಳೇನ ಅಗ್ರಹಾರದಿಂದ, ವೇಗವಾಗಿ ಬೆಳೆಯುತ್ತಿರುವ ಐಟಿ ಕಾರಿಡಾರ್ ಸರ್ಜಾಪುರ ಮಾರ್ಗವಾಗಿ, ಪೂರ್ವದ ಕಾಡುಗೋಡಿ ಟ್ರೀ ಪಾರ್ಕ್ ವರೆಗೆ ಸಂಪರ್ಕ ಕಲ್ಪಿಸುವ 68 ಕಿಲೋಮೀಟರ್ ಉದ್ದದ ಮೆಟ್ರೋ ಮಾರ್ಗ ಇದಾಗಿದೆ. ಇದರೊಂದಿಗೆ ಆನೇಕಲ್ ತಾಲೂಕಿನಲ್ಲಿ ಪ್ರಸ್ತಾಪಿತ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸುವ 5 ಕಿಲೋಮೀಟರ್ ಉದ್ದದ ಹೆಚ್ಚುವರಿ ಮಾರ್ಗವೂ ಸೇರಿದ್ದು, ಒಟ್ಟು ಈ ನಮ್ಮ ಮೆಟ್ರೋ ಹೊಸ ಮಾರ್ಗದ ಉದ್ದ 73 ಕಿಲೋಮೀಟರ್ ಆಗಿರಲಿದೆ.
ಈ ಹೊಸ ಮೆಟ್ರೋ ಮಾರ್ಗದ ಕಾರ್ಯಸಾಧ್ಯತಾ ವರದಿಯನ್ನು ಇಂಟ್ರೋಸಾಫ್ಟ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಿದ್ಧಪಡಿಸಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕ್ರಮಕ್ಕಾಗಿ ಇದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರಂಭದಲ್ಲಿ ಈ ಮಾರ್ಗವು ಬನ್ನೇರುಘಟ್ಟ, ಜಿಗಣಿ, ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರ ವೃತ್ತ ಮತ್ತು ವರ್ತೂರು ಕೋಡಿ ಮೂಲಕ ಹಾದುಹೋಗಲು ಪ್ರಸ್ತಾಪಿಸಲಾಗಿತ್ತು. ಆದರೆ, ಜಿಗಣಿಯ ನಂತರ ಕ್ರೀಡಾಂಗಣಕ್ಕೆ ಮೆಟ್ರೋ ಶಾಖೆಯನ್ನು ಸೇರಿಸುವಂತೆ ರಾಜ್ಯ ಸರ್ಕಾರವು ಮೆಟ್ರೋ ನಿಗಮಕ್ಕೆ ಸೂಚಿಸಿತ್ತು.

"ನೇರ ಸಂಪರ್ಕವನ್ನು ಒದಗಿಸಲು ಕ್ರೀಡಾಂಗಣದ ಪಕ್ಕದಲ್ಲಿಯೇ ಒಂದು ಮೆಟ್ರೋ ನಿಲ್ದಾಣ ಬರಲಿದೆ. ನೆರೆಯ ಹಳ್ಳಿಗಳ ಜನರ ಅನುಕೂಲಕ್ಕಾಗಿ ಇಂಡ್ಲವಾಡಿಯಲ್ಲಿ ಮತ್ತೊಂದು ನಿಲ್ದಾಣವನ್ನು ನಾವು ಪ್ರಸ್ತಾಪಿಸಿದ್ದೇವೆ. ಈ ಕಾರಿಡಾರ್ ಸಂಪೂರ್ಣವಾಗಿ ಎಲಿವೇಟೆಡ್ ಆಗಿರಲಿದೆ" ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಉದ್ಯಮಿ ಕಿರಣ್ ಮಜುಂದಾರ್-ಶಾ ಅವರು, 80,000 ಆಸನಗಳ ಸಾಮರ್ಥ್ಯದ ಪ್ರಸ್ತಾಪಿತ ಕ್ರಿಕೆಟ್ ಕ್ರೀಡಾಂಗಣಕ್ಕೆ ಸರಿಯಾದ ರಸ್ತೆ ಮತ್ತು ಮೆಟ್ರೋ ಸಂಪರ್ಕವಿಲ್ಲದಿದ್ದರೆ ಅದು 'ಬಿಳಿ ಆನೆ'ಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಕಳೆದ ತಿಂಗಳು, ಕರ್ನಾಟಕ ಗೃಹ ಮಂಡಳಿಯು 943 ಕೋಟಿ ರೂ. ವೆಚ್ಚದಲ್ಲಿ 1.21 ಲಕ್ಷ ಚದರ ಮೀಟರ್ ವಿಸ್ತೀರ್ಣದ ಕ್ರೀಡಾಂಗಣದ ಮೊದಲ ಹಂತದ ಕಾಮಗಾರಿಗೆ ಟೆಂಡರ್ ಕರೆದಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಮೆಟ್ರೋ ಸಂಪರ್ಕ ಕಲ್ಪಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯ ಸರ್ಕಾರವು ಕಾರ್ಯಸಾಧ್ಯತಾ ವರದಿಯನ್ನು ಪರಿಶೀಲಿಸಿದ ನಂತರ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಡಿಪಿಆರ್ ಪ್ರಕ್ರಿಯೆಯು ಸಾಮಾನ್ಯವಾಗಿ ಒಂದು ವರ್ಷ ತೆಗೆದುಕೊಳ್ಳುತ್ತದೆ ಮತ್ತು ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಎರಡರಿಂದಲೂ ಅನುಮೋದನೆಗಳು ಬೇಕಾಗುತ್ತವೆ. ಎಲ್ಲ ಅನುಮೋದನೆಗಳು ಸಕಾಲದಲ್ಲಿ ದೊರೆತರೆ 2029 ರ ವೇಳೆಗೆ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.
ತುಮಕೂರು, ಬಿಡದಿ ಮತ್ತು ಹೊಸಕೋಟೆಯಂತಹ ನೆರೆಯ ಪಟ್ಟಣಗಳಿಗೆ ಪ್ರಸ್ತಾಪಿಸಲಾದ ಕೆಲವು ವಿಸ್ತರಣೆಗಳಿಗಿಂತ ಭಿನ್ನವಾಗಿ, ಈ ಮೆಟ್ರೋ ಕಾರಿಡಾರ್ ವೇಗವಾಗಿ ಬೆಳೆಯುತ್ತಿರುವ ಐಟಿ ಉಪನಗರಗಳನ್ನು ಸಂಪರ್ಕಿಸುವುದರಿಂದ ಇದು ಅತ್ಯಂತ ಭರವಸೆಯ ಮತ್ತು ಲಾಭದಾಯಕ ಮಾರ್ಗವಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications