suicide rate: ಬೆಂಗಳೂರಿನಲ್ಲೇ ಅತಿ ಹೆಚ್ಚು ಆತ್ಮಹತ್ಯೆ: ಎನ್‌ಸಿಆರ್‌ಬಿ ವರದಿಯಲ್ಲಿ ಬಯಲಾಯ್ತು ಆತಂಕಕಾರಿ ಸತ್ಯ
ಬೆಂಗಳೂರು: ಭಾರತದ ಐಟಿ ಹಬ್ ಎಂದೇ ಖ್ಯಾತಿಯಾಗಿರುವ ಬೆಂಗಳೂರು, ಈಗ ಆತ್ಮಹತ್ಯೆಗಳ ಪ್ರಮಾಣದಲ್ಲಿ ದೇಶದ ಇತರ ಮಹಾನಗರಗಳಿಗಿಂತ ಮುಂದಿರುವುದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳಿಂದ ತಿಳಿದುಬಂದಿದೆ. ಭಾರತದಲ್ಲಿನ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳು (ADSI) ವರದಿಯ ಪ್ರಕಾರ, ನಗರದ ಆತ್ಮಹತ್ಯೆ ದರವು ಕಳೆದ ಮೂರು ವರ್ಷಗಳಿಂದ ಆತಂಕಕಾರಿಯಾಗಿ ಏರುತ್ತಿದೆ.
ವರದಿಯ ಪ್ರಕಾರ, 2022ರಿಂದ 2024 ರವರೆಗೆ ಬೆಂಗಳೂರಿನಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಸರಾಸರಿ 20 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ದೇಶದ ಪ್ರಮುಖ ಮೆಗಾ ಸಿಟಿಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ಪ್ರಮಾಣವಾಗಿದೆ. 2024ರಲ್ಲಿ ಬೆಂಗಳೂರಿನಲ್ಲಿ ಒಟ್ಟು 2,403 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ 2,905 ಪ್ರಕರಣಗಳು ದಾಖಲಾಗಿದ್ದರೂ, ಅಲ್ಲಿನ ಬೃಹತ್ ಜನಸಂಖ್ಯೆಯ ಕಾರಣದಿಂದ ಆತ್ಮಹತ್ಯೆ ದರವು ಪ್ರತಿ ಲಕ್ಷಕ್ಕೆ 9.8ರಷ್ಟಿದೆ. ಅಂದರೆ, ಜನಸಂಖ್ಯೆಗೆ ಅನುಗುಣವಾಗಿ ಬೆಂಗಳೂರಿನಲ್ಲೇ ಆತ್ಮಹತ್ಯೆಯ ತೀವ್ರತೆ ಹೆಚ್ಚಿದೆ. 2022ರಲ್ಲಿ 2,313 ಪ್ರಕರಣಗಳಿದ್ದರೆ, 2023ರಲ್ಲಿ ಇದು 2,370ಕ್ಕೆ ಏರಿಕೆಯಾಗಿತ್ತು.

ಆತ್ಮಹತ್ಯೆಗೆ ಪ್ರಮುಖ ಕಾರಣಗಳೇನು?
ಎನ್‌ಸಿಆರ್‌ಬಿ ಅಂಕಿಅಂಶಗಳು ಆತ್ಮಹತ್ಯೆಯ ಹಿಂದಿನ ಕೆಲವು ಪ್ರಮುಖ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳನ್ನು ಪಟ್ಟಿ ಮಾಡಿದೆ.
ಕುಟುಂಬದ ಸಮಸ್ಯೆಗಳು ಮತ್ತು ಅನಾರೋಗ್ಯ: ದೇಶಾದ್ಯಂತ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಅರ್ಧದಷ್ಟು ಸಾವುಗಳಿಗೆ ಕೌಟುಂಬಿಕ ಕಲಹಗಳು ಮತ್ತು ಮಾನಸಿಕ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳೇ ಪ್ರಮುಖ ಕಾರಣವಾಗಿವೆ.
ಆರ್ಥಿಕ ಸಂಕಷ್ಟ: 2023ರ ದತ್ತಾಂಶದಂತೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ.66ರಷ್ಟು ಮಂದಿ ವಾರ್ಷಿಕ 1 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿದ್ದವರಾಗಿದ್ದಾರೆ.
ನಗರೀಕರಣದ ಒತ್ತಡ: ಮೆಟ್ರೋ ನಗರಗಳಲ್ಲಿ ವಲಸೆ ಬಂದವರು ಎದುರಿಸುವ ಒತ್ತಡ, ಕೆಲಸದ ಒತ್ತಡ, ಒಂಟಿತನ, ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಸಾಮಾಜಿಕ ಬೆಂಬಲದ ಕೊರತೆಯು ವ್ಯಕ್ತಿಗಳನ್ನು ಈ ತೀವ್ರ ನಿರ್ಧಾರಕ್ಕೆ ತಳ್ಳುತ್ತಿದೆ ಎಂದು ಸಾರ್ವಜನಿಕ ಆರೋಗ್ಯ ಅಧ್ಯಯನಗಳು ತಿಳಿಸಿವೆ.
ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರತಿವರ್ಷ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಪ್ರಮುಖ ನಗರಗಳ ಅಪರಾಧ ಹಾಗೂ ಆತ್ಮಹತ್ಯೆಗಳ ಅಧಿಕೃತ ದತ್ತಾಂಶವನ್ನು ಸಂಗ್ರಹಿಸಿ ಪ್ರಕಟಿಸುತ್ತದೆ. ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ವೃತ್ತಿಜೀವನದ ಪೈಪೋಟಿ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಜನರು ಮಾನಸಿಕವಾಗಿ ಕುಸಿಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ಸೌಲಭ್ಯಗಳು ಮಾತ್ರವಲ್ಲದೆ, ಸಮುದಾಯದ ಮಟ್ಟದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಸಹಾಯವಾಣಿಗಳ ಸಬಲೀಕರಣ ಅತ್ಯಗತ್ಯವಾಗಿದೆ.













Click it and Unblock the Notifications