ಲೇ, ರಾತ್ರಿ ಊಟಕ್ಕೆ ಏನೇ ಮಾಡಿದ್ದಿಯಾ?
ಅಂದು ಅಮವಾಸ್ಯೆ. ಗಂಡ ಹೆಂಡಿರ ನಡುವೆ ಅದೇನು ಬಂದಿತ್ತೋ ಏನೊ, ಇಬ್ಬರೂ ಭಯಂಕರ ಜಗಳವಾಡಿದ್ದರು. ಅಕ್ಕಪಕ್ಕದವರು ಇವರಿಬ್ಬರು ಜಗಳ ನಾವ್ಯಾಕೆ ಬಿಡಿಸಬೇಕೆಂದು ಗೋಡೆಗೆ ಕಿವಿ ಆನಿಸಿ ಕೂತಿದ್ದರಿಂದ ಯಾರೂ ಬಿಡಿಸಲು ಬರಲಿಲ್ಲ. ದಂಪತಿಗಳ ಜಗಳ ರಾತ್ರಿ ಮಲಗುವ ಹೊತ್ತಿನವರೆಗೆ ಮುಂದುವರಿದಿತ್ತು.
ಅನೇಕ ಜಗಳಗಳು ಉಂಡು ಮಲಗುವ ಹೊತ್ತಿಗೆ ತಣ್ಣಗಾಗಿರುತ್ತಿದ್ದವು. ಆದರೆ, ಅಂದು ಗಂಡ ವಿಪರೀತ ಕೋಪೋದ್ರಿಕ್ತನಾಗಿ ಮನೆಬಿಟ್ಟು ಹೊರಟೇಬಿಟ್ಟ. ಹೋದರೆ ಹೋಗ್ಲಿ ಬಿಡು ಅಂತ ಹೆಂಡತಿಯೂ ಟಿವಿ ಆನ್ ಮಾಡಿಕೊಂಡು ತನ್ನ ಫೆವರಿಟ್ ಸೀರಿಯಲ್ ಮನೆಯೊಂದು ಇಪ್ಪತ್ತೆರಡು ಬಾಗಿಲು ನೋಡುತ್ತ ಕುಳಿತುಬಿಟ್ಟಳು.
ಎಷ್ಟೊತ್ತಾದರೂ ಗಂಡ ಮನೆಗೆ ಬರಲಿಲ್ಲ, ಇವಳೂ ತಲೆಕೆಡಿಸಿಕೊಳ್ಳಲಿಲ್ಲ. ಆದರೆ, ಹೊರಬಿದ್ದ ಗಂಡನ ಹೊಟ್ಟೆ ಕೇಳಬೇಕಲ್ಲ. ಚುರುಗುಟ್ಟಲು ಆರಂಭಿಸಿತು. ಯಾವ್ದೋ ಪಾರ್ಕಿನ ಬೆಂಚಿನ ಮೇಲೆ ಕುಳಿತಿದ್ದ ಗಂಡ ಮೊಬೈಲನ್ನು ಕೈಗೆತ್ತಿಕೊಂಡವನೆ, "ಲೇ, ರಾತ್ರಿ ಊಟಕ್ಕೆ ಏನೇ ಮಾಡಿದ್ದಿಯಾ?" ಅಂತ ಸ್ವಲ್ಪ ದರ್ಪದಿಂದಲೇ, ಅಹಂಕಾರವನ್ನು ಬಿಟ್ಟುಕೊಡದೆ ಕೇಳಿದ.
ಹೆಂಡತಿ ಬಿಡ್ತಾಳಾ? "ಅನ್ನಕ್ಕೆ ವಿಷ ಹಾಕಿ ಕಲಿಸಿಟ್ಟಿದ್ದೀನಿ. ಬಿಸಿಯಿದ್ದಾಗ್ಲೆ ಬಂದು ಊಟ ಮಾಡಿ" ಅಂತ ನುಡಿದಳು.
"ಓ ಹಾಗಾ, ನನಗೆ ಬರಲು ಸ್ವಲ್ಪ ತಡವಾಗುತ್ತದೆ. ನೀನು ಊಟ ಮಾಡಿ ಮಲಗಿರು. ಓಕೆ ಬಾಯ್" ಅಂತ ಗಂಡ ಮೊಬೈಲ್ ಕಟ್ಟುಮಾಡಿಬಿಟ್ಟ.
***
ರುಚಿ ಹೇಗಿದೆಯೆಂದು ಫೇಸ್ ಬುಕ್ಕಲ್ಲಿ ನೋಡಿ!
ಅಮ್ಮಾ ತಾಯೇ, ಹೊಟ್ಟೆ ಹಸಿದಿದೆ ಏನಾದರೂ ಇದ್ರೆ ನೀಡ್ರಮ್ಮಾ.... ಅಂತ ಭಿಕ್ಷುಕ ಮನೆಬಾಗಿಲಿಗೆ ಬಂದು ಕೂಗಿದ್ದು, ಪಾರ್ವತಮ್ಮನಿಗೆ ಕೇಳಿತ್ತು.
ಅಂದು ಹಬ್ಬವೂ ಆಗಿದ್ದರಿಂದ ಮಾಡಿದ್ದ ಹೊಸರುಚಿಯ ಸ್ಯಾಂಪಲ್ಲನ್ನು ಭಿಕ್ಷುಕನಿಗೆ ತಂದು ಹಾಕಿದರು ಪಾರ್ವತಮ್ಮ.
ಭಿಕ್ಷುಕ, "ಇವತ್ತೇನೋ ಹೊಸದು ಮಾಡಿದ ಹಾಗಿದೆ" ಅಂತ ಹೇಳಿದ.
ಪಾರ್ವತಮ್ಮನವರು, "ನಾನು ಮಾಡಿದ್ದು ನನ್ನ ಗಂಡನಿಗೆ ಸ್ವಲ್ಪವೂ ಹಿಡಿಸಲಿಲ್ಲವಂತೆ. ತುಸು ನೀನಾದರೂ ಹೇಗಿದೆ ಹೇಳು" ಎಂದು ವೈಯಾರದಿಂದ ನುಡಿದರು.
"ಇದರ ರುಚಿ ಹೇಗಿದೆಯೆಂದು ಇವತ್ತು ಸಂಜೆ ಫೇಸ್ ಬುಕ್ಕಲ್ಲಿ ಹಾಕಿರ್ತೀನಿ ನೋಡಿರಮ್ಮ" ಅಂತ ಹೇಳಿ ಜಾಗ ಖಾಲಿ ಮಾಡಿದ. [ಗಂಡ ಹೆಂಡತಿ ಜೋಕ್ಸ್]












Click it and Unblock the Notifications