ಲೋಕಸಭೆಯಲ್ಲಿ ಬಿಎಸ್‌ವೈ ಕನ್ನಡ ಮಾತು, ರಾಜ್ಯ ಸರ್ಕಾರದ ವಿರುದ್ಧ ಗರಂ
ನವದೆಹಲಿ, ಆಗಸ್ಟ್ 11 : ಕರ್ನಾಟಕದಲ್ಲಿ ನಡೆಯುತ್ತಿರುವ ರೈತ ಆತ್ಮಹತ್ಯೆ ಬಗ್ಗೆ ಕೆಲವು ದಿನಗಳ ಹಿಂದೆ ಲೋಕಸಭೆಯಲ್ಲಿ ಯಡಿಯೂರಪ್ಪ ವಿಷಯ ಪ್ರಸ್ತಾಪಿಸಿದ್ದರು. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧ ಕನ್ನಡದಲ್ಲಿಯೇ ಲೋಕಸಭೆಯಲ್ಲಿ ಅವರು ವಾಗ್ದಾಳಿ ನಡೆಸಿದರು.
ಮಂಗಳವಾರದ ಕಲಾಪದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಗದ್ದಲದ ನಡುವೆಯೇ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿನ ಬರಗಾಲ ಪರಿಸ್ಥಿತಿ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದರು. ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. [ರೈತ ಆತ್ಮಹತ್ಯೆ, ಲೋಕಸಭೆಯಲ್ಲಿ ಯಡಿಯೂರಪ್ಪ ಘರ್ಜನೆ]

'ಕರ್ನಾಟಕ ಸರ್ಕಾರ ರೈತರ ಆತ್ಮಹತ್ಯೆಯನ್ನು ತಡೆಯಲು ವಿಫಲವಾಗಿದೆ. ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಅನಾವಶ್ಯಕವಾಗಿ ಕಾಲಹರಣ ಮಾಡುತ್ತಿದ್ದಾರೆ. ಚರ್ಚೆ ನಡೆಸಲು ಬಿಡುತ್ತಿಲ್ಲ ಎಂದು ಯಡಿಯೂರಪ್ಪ ಕನ್ನಡದಲ್ಲಿ ಮಾತನಾಡಿದರು. [ಕಬ್ಬು ಬೆಳೆಗಾರರ ಆತ್ಮಹತ್ಯೆ ಸರಣಿಗೆ ಕೊನೆಯಿಲ್ಲ]
'ಕರ್ನಾಟಕದ ಹಲವು ಜಿಲ್ಲೆಗಳು ಬರಗಾಲಕ್ಕೆ ತುತ್ತಾಗಿದ್ದು ಎಲ್ಲಾ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ರಾಜ್ಯದಲ್ಲಿ ಬಿತ್ತನೆ ಪ್ರಮಾಣ ಇಳಿಮುಖವಾಗಿದೆ. ಇದರಿಂದಾಗಿ ರಾಜ್ಯದ ಶೇ.80 ರೈತರು ಕಂಗಾಲಾಗಿದ್ದಾರೆ' ಎಂದು ಯಡಿಯೂರಪ್ಪ ವಿವರಿಸಿದರು. [ವಿಶ್ವಸಂಸ್ಥೆಯಲ್ಲಿ ಕನ್ನಡ ಕಂಪು ಹರಿಸಿದ ಅನಂತ್ ಕುಮಾರ್]
'ರಾಜ್ಯದಲ್ಲಿ ಬರಗಾಲವಿದೆ ಆದ್ದರಿಂದ ರೈತರ ಕೃಷಿ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇದೇ ರೀತಿ ಮಾಡಿದ್ದೆ. ಕರ್ನಾಟಕ ಸರ್ಕಾರ ಮೊದಲು ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಿ. ನಂತರ ಕೇಂದ್ರದಿಂದ ವಿಶೇಷ ಪ್ಯಾಕೇಜ್ ಪಡೆಯಲು ಮನವಿ ಸಲ್ಲಿಸಲಿ ಎಂದು ಹೇಳಿದರು.
'ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಪ್ಯಾಕೇಜ್‍ಗೆ ಶೇ. 75 ರಷ್ಟು ಹಣವನ್ನು ನಾವು ನೀಡುತ್ತೇವೆ. ಶೇ.25 ನೆರವನ್ನು ನೀವು ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಹೇಳಿದ್ದರೂ ರಾಜ್ಯ ಸರ್ಕಾರ ಇದಕ್ಕಾಗಿ ಬೇಡಿಕೆ ಇಟ್ಟಿಲ್ಲ, ಇದು ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ಮಾಡಿದ ದ್ರೋಹ' ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.












Click it and Unblock the Notifications