ಕೃಷ್ಣಾ ಮೇಲ್ದಂಡೆ; ಮೆಣಸಿನಕಾಯಿ ಬೆಳೆ ಉಳಿಸಲು ನೀರು ಹರಿಸಲು ತೀರ್ಮಾನ

ಬೆಂಗಳೂರು, ಜನವರಿ 07: "ಕೃಷ್ಣಾ ಮೇಲ್ದಂಡೆ ಅಚ್ಚುಕಟ್ಟು ಪ್ರದೇಶದ ಮೆಣಸಿನಕಾಯಿ ಬೆಳೆ ಉಳಿಸಲು ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಿಂದ 2.75 ಟಿಎಂಸಿ ನೀರನ್ನು ಹರಿಸಲು ತೀರ್ಮಾನಿಸಲಾಗಿದೆ" ಎಂದು ಉಪ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಖಾತೆ ಸಚಿವ ಡಿ. ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, "ತಕ್ಷಣದಿಂದಲೇ ನೀರು ಬಿಡುಗಡೆ ಮಾಡಲಾಗುವುದು. 75 ಕಿ. ಮೀ. ನೀರು ಹರಿಯಬೇಕಿದೆ. ಎರಡು ಮೂರು ದಿನದಲ್ಲಿ ನೀರು ತಲುಪಬಹುದು" ಎಂದರು.

 Water Release From Narayanapura Dam For Chilli Crop Says DK Shivakumar

"ಶನುವಾರ ರಾತ್ರಿ ಕಲಬುರಗಿ, ರಾಯಚೂರು, ಬಾಗಲಕೋಟೆ, ಯಾದಗಿರಿ ಭಾಗದ ಜಿಲ್ಲಾ ಮಂತ್ರಿಗಳು, ಎಲ್ಲ ಪಕ್ಷದ ಶಾಸಕರು, ರೈತ ಮುಖಂಡರ ಜೊತೆ ಸಭೆ ಮಾಡಲಾಯಿತು. ಈ ಸಭೆಯಲ್ಲಿ ಜನಪ್ರತಿನಿಧಿಗಳು ವಾಸ್ತವ ಪರಿಸ್ಥಿತಿ ವಿವರಿಸಿ, ನೀರು ಬಿಡಲು ಒತ್ತಾಯಿಸಿದರು" ಎಂದು ತಿಳಿಸಿದರು.

"ರಾಜ್ಯದ ಇತಿಹಾಸದಲ್ಲೇ ಈ ಬಾರಿ ಅತ್ಯಂತ ದೊಡ್ಡ ಪ್ರಮಾಣದ ಬರಗಾಲ ಎದುರಾಗಿದೆ. ಅತಿ ಹೆಚ್ಚು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಬರ ಪರಿಸ್ಥಿತಿಯಲ್ಲಿ ಬೆಳೆ ಹಾಕಬೇಡಿ ಎಂದು ಮನವಿ ಮಾಡಿದ್ದರೂ ಕೆಲವು ರೈತರು ಭತ್ತದ ಬದಲು ಮೆಣಸಿನಕಾಯಿ ಬೆಳೆ ಹಾಕಿಕೊಂಡಿದ್ದಾರೆ. ಈ ಬೆಳೆ ನಾಶವಾದರೆ 2 ಸಾವಿರ ಕೋಟಿ ರೂಪಾಯಿ ನಷ್ಟವಾಗುವ ಸಾಧ್ಯತೆ ಇದೆ" ಎಂದು ಸಚಿವರು ವಿವರಿಸಿದರು.

ರೈತರ ರಕ್ಷಣೆ ಮಾಡುತ್ತೇವೆ: ಸಚಿವ ಡಿ. ಕೆ. ಶಿವಕುಮಾರ್ ಮಾತನಾಡಿ, "ರೈತರ ರಕ್ಷಣೆ ಉದ್ದೇಶದಿಂದ ಬೆಳೆಗಳಿಗೆ ಅಂತಿಮ ಬಾರಿಗೆ 2.75 ಟಿಎಂಸಿ ನೀರು ಬಿಡಲು ಶನಿವಾರ ರಾತ್ರಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರತಿಭಟನಾ ನಿರತ ರೈತರು, ಮನವಿ ಮಾಡಿರುವ ಶಾಸಕರುಗಳೇ ಮೆಣಸಿನಕಾಯಿ ಬೆಳೆಗಳಿಗೆ ಮಾತ್ರ ಈ ನೀರನ್ನು ಬಳಕೆ ಮಾಡಿಕೊಳ್ಳಬೇಕು. ಈ ಜವಾಬ್ದಾರಿಯನ್ನು ಆ ಭಾಗದ ರೈತರಿಗೆ ವಹಿಸಿ ನೀರು ಬಿಡುತ್ತಿದ್ದೇವೆ" ಎಂದರು.

"ಈ ಹಿಂದೆ ಮಂಡ್ಯ ರೈತರ ರಕ್ಷಣೆ ಮಾಡಲಾಗಿತ್ತು. ಈ ಮಧ್ಯೆ ಭದ್ರಾ ನೀರಿನ ವಿಚಾರದಲ್ಲಿ ಸಮಸ್ಯೆ ಎದುರಿಸಿದಾಗಲೂ ನಾವು ಸಮಸ್ಯೆ ನಿವಾರಿಸಿದೆವು. ಈಗ ಕೃಷ್ಣಾ ಮೇಲ್ದಂಡೆ ವ್ಯಾಪ್ತಿಯ ರೈತರ ರಕ್ಷಣೆ ಮಾಡಲಾಗುತ್ತಿದೆ" ಎಂದು ಸಚಿವರು ಹೇಳಿದರು.

"ಇದಾದ ನಂತರ ಕೃಷಿ ಉದ್ದೇಶಕ್ಕೆ ನೀರು ಬಿಡುವುದಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರು ಹಾಗೂ ಜನಪ್ರತಿನಿಧಿಗಳು ಸರ್ಕಾರದ ಜೊತೆ ಸಹಕಾರ ನೀಡಬೇಕು" ಎಂದು ಸಚಿವರು ಮನವಿ ಮಾಡಿದರು.

ಡ್ಯಾಂಗಳಲ್ಲಿನ ನೀರಿನ ಸಂಗ್ರಹದ ಮಾಹಿತಿ ನೀಡಿದ ಸಚಿವರು, "ಆಲಮಟ್ಟಿ ಮತ್ತು ನಾರಾಯಣಪುರ ಅಣೆಕಟ್ಟು ಸೇರಿ 47 ಟಿಎಂಸಿ ನೀರು ಲಭ್ಯ ಇದೆ. ಕುಡಿಯುವ ನೀರಿಗೆ 37 ಟಿಎಂಸಿ ನೀರು, ಇತರೆ ಉದ್ದೇಶಕ್ಕೆ 3 ಟಿಎಂಸಿ ನೀರು ಬೇಕು. ನೀರು ಹರಿಸುವ ವೇಳೆ 1.5 ಟಿಎಂಸಿ ನೀರು ನಷ್ಟವಾಗುತ್ತದೆ. ಈ ಭಾಗದವರ ಒತ್ತಡಕ್ಕೆ ಈಗ 2.75 ಟಿಎಂಸಿ ನೀರು ಬಿಡುಗಡೆ ಮಾಡಲು ತೀರ್ಮಾನಿಸಿದ್ದೇವೆ. ಇನ್ನೂ ಆರು ತಿಂಗಳು ನೀರು ನಿರ್ವಹಣೆ ಮಾಡಬೇಕಿದೆ. ಹೀಗಾಗಿ ಈ ಬಾರಿ ಕೊನೆಯದಾಗಿ ನಾವು ರೈತರ ಜಮೀನಿಗೆ ನೀರು ಹರಿಸುತ್ತಿದ್ದೇವೆ" ಎಂದರು.

ನೀರು ಬಳಕೆ ಮೇಲ್ವಿಚಾರಣೆ ಬಗ್ಗೆ ಮಾತನಾಡಿ, "ಇದರ ಮೇಲ್ವಿಚಾರಣೆಗೆ ಪೊಲೀಸರನ್ನು ಬಳಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಈ ಜವಾಬ್ದಾರಿಯನ್ನು ಜನಪ್ರತಿನಿಧಿ ಹಾಗೂ ರೈತ ಸಂಘಟನೆಗಳಿಗೆ ನೀಡುತ್ತೇನೆ. ನೀವು ಪೋಲೀಸರಾಗಿ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮ ಅಧಿಕಾರಿಗಳಿಗೂ ನಾವು ಸೂಚನೆ ನೀಡಿದ್ದೇವೆ. ಆದರೆ ಅಧಿಕಾರಿಗಳು ರೈತರ ಜೊತೆ ಜಗಳ ಮಾಡಲು ಆಗುವುದಿಲ್ಲ. ಆ ರೀತಿ ಆದರೆ ಮಾಧ್ಯಮಗಳು ಅದನ್ನು ದೊಡ್ಡ ವಿಷಯ ಮಾಡುತ್ತವೆ. ಮಾಧ್ಯಮಗಳು ಕೂಡ ರೈತರ ಜವಾಬ್ದಾರಿ ಬಗ್ಗೆ ಆದ್ಯತೆ ನೀಡಬೇಕು" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+